ಶ್ರೀ ಶಂಕರರು (ಕಿರು ನಾಟಕ)
ದೃಶ್ಯ ೧ : ಕೈಲಾಸ
(ಕರ್ಮಭೂಮಿಯಾಗಿರುವ ಭರತ ಖಂಡದಲ್ಲಿ ವೈದಿಕ ಧರ್ಮವು ಶಿಥಿಲವಾಗಿದ್ದ ಒಂದು ಸಮಯದಲ್ಲಿ ಇಂದ್ರಾದಿ ದೇವತೆಗಳು ಋಷಿ ಮುನಿಗಳು ಕೈಲಾಸಕ್ಕೆ ಬಂದು ಶಿವನಿಗೆ ನಮಸ್ಕರಿಸಿ ಪ್ರಾರ್ಥಿಸುತ್ತಾರೆ) ಕೈಲಾಸದಲ್ಲಿ ಶಿವ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ, ಭೃಂಗಿ ಮತ್ತು ಗಣಗಳು ಇರುತ್ತಾರೆ.
ಇಂದ್ರಾದಿ ದೇವತೆಗಳೆಲ್ಲರು :
ಹೇ ಶಿವ ಶಂಕರ ಓಂಕಾರೇಶ್ವರ
ಶಂಭೋ ಶಂಕರ ಪಾಹಿಮಾಂ
ಹರ ಹರ ಶಂಕರ ಶ್ರೀ ಗೌರೀವರ
ಹೇ ಜಗದೀಶ್ವರಾ ರಕ್ಷಮಾಂ
ಹೇ ಶಿವನೇ ಸರ್ವಜ್ಞನೇ ಸರ್ವ ಶಕ್ತಾ ಸರ್ವ ಹಿತಕಾರಿಯೇ ಸದಾಕಾಲ ನಮ್ಮನ್ನು ಕಾಪಾಡುತ್ತಿರುವ ಭಗವಂತನೇ ನಿನಗೆ ನಮ್ಮ ಶಿರಸಾಷ್ಟಾಂಗ ನಮಸ್ಕಾರಗಳು.
(ಎಂದು ಎಲ್ಲರೂ ಶಿವ ಪಾರ್ವತಿಗೆ ನಮಸ್ಕರಿಸುತ್ತಾರೆ)
ಶಿವ : ನಿಮಗೆಲ್ಲಾ ಶುಭವಾಗಲಿ, ಇಂದ್ರಾದಿ ದೇವತೆಗಳೇ, ಋಷಿ ಮುನಿಗಳೇ, ನೀವೆಲ್ಲರೂ ಆಂತಕದಲ್ಲಿರುವಿರಲ್ಲಾ ನಿಮ್ಮ ಈ ಆತಂಕಕ್ಕೆ ಕಾರಣವೇನು ಹೇಳಿ ?
ಎಲ್ಲರೂ : ಹೇ ಜಗದೀಶ್ವರಾ, ಈಗ ಭೂಲೋಕವು ಶಾಸ್ತ್ರೀಯ ಸನ್ಮಾರ್ಗವನ್ನು ದೂಷಿಸುತ್ತಿರುವ ನಾಸ್ತಿಕಾಧಮರಾದ ಪಾಖಂಡಿಗಳಿಂದ ತುಂಬಿ ಹೋಗಿದೆ. ಬ್ರಹ್ಮ ದ್ವೇಷಿಗಳಾದ ಹಲವರು ಶ್ರೇಯಸ್ಕರವಾದ ವೈದಿಕ ಸನಾತನ ವರ್ಣಾಶ್ರಮ ಧರ್ಮವನ್ನು ದೂಷಿಸಿ ದ್ವೇಷಿಸುತ್ತಿರುವರು. ಹಲವರು ದುರ್ಬೋಧನೆಗೆ ಒಳಗಾಗಿ ದೈವಭಕ್ತಿಯನ್ನು ತೊರೆದು ವೇದ ವಿಹಿತ ಕಾರ್ಯಗಳಿಗೆ ಅಪಮಾನ ಮಾಡಿ ಅನ್ಯಾಯ ಅನಾಚಾರಗಳಲ್ಲಿ ತೊಡಗಿರುವರು. ಹೇ ದೇವಾ, ಲೋಕ ರಕ್ಷಣೆಗಾಗಿ ನಾಸ್ತಿಕರಾದ ಎಲ್ಲರ ದುಷ್ಟತನವನ್ನು ನಾಶ ಮಾಡಿ ಜಗತ್ತು ಸುಖವನ್ನು ಹೊಂದುವಂತಹ ಶ್ರೌತ ಸನ್ಮಾರ್ಗವನ್ನು ಸ್ಥಾಪಿಸು ದೇವಾ.
ಶಿವ : ನಿಮ್ಮೆಲ್ಲರ ಅಭಿಲಾಷೆಯನ್ನು ಪೂರೈಸುತ್ತೇನೆ. ಚಿಂತಿಸಬೇಡಿ, ಭೂಲೋಕದಲ್ಲಿ ನಾನೇ ಜನಿಸಿ ಶಂಕರನೆಂಬ ಹೆಸರಿನಿಂದ ಯತೀಂದ್ರನಾಗಿ ನಾಲ್ಕು ಜನ ಚತುರರಾದ ಶಿಷ್ಯರ ಸಹಿತನಾಗಿ ಬರುವೆನು. ದ್ವೈತಾಂಧಕಾರವನ್ನು ತೊಲಗಿಸಿ ಜಗತ್ತನ್ನು ಕಾಪಾಡುವೆನು. ನೀವೆಲ್ಲರೂ ಮಾನವ ರೂಪದಲ್ಲಿ ಜನಿಸಿ ನನ್ನ ನಿರೀಕ್ಷೆಯಲ್ಲಿರಿ.
ಎಲ್ಲರೂ : ಹೇ ಸದಾಶಿವಾ, ಧನ್ಯರಾದೆವು ದೇವಾ
ಶಿವ : ಮಗನೇ ಕುಮಾರ, ನೀನು ಭೂಲೋಕದಲ್ಲಿ ಜನಿಸಿ ಜೈಮಿನಿ ಮಹರ್ಷಿಯಿಂದ ಪ್ರಚಾರಿತವಾಗಿರುವ ಪೂರ್ವ ಮೀಮಾಂಸಾಶಾಸ್ತ್ರವೆಂಬ ಸಮುದ್ರಕ್ಕೆ ಶರತ್ಕಾಲದ ಪೂರ್ಣಿಮ ಚಂದ್ರನಾಗು. ವೈದಿಕ ಕರ್ಮಕಾಂಡದ ಉದ್ಧಾರ ಕಾರ್ಯದಲ್ಲಿ ನಿನಗೆ ಸಹಾಯಕರಾಗಿ ಬ್ರಹ್ಮದೇವನು ಮಂಡನನೆಂಬ ಬ್ರಾಹ್ಮಣೋತ್ತಮನಾಗಿಯೂ, ಮಹೇಂದ್ರನು ಸುಧನ್ವನೆಂಬ ರಾಜನಾಗಿಯೂ ಭೂಲೋಕದಲ್ಲಿ ಅವತರಿಸುವರು.
ದೃಶ್ಯ ೨ : ಶಿವ ಪೂಜೆ
ಹಿನ್ನೆಲೆ
(ಕೇರಳ ರಾಜ್ಯದ ಪೂರ್ಣಾನದಿ ತೀರದಲ್ಲಿ ಕಾಲಟಿ ಎಂಬ ಅಗ್ರಹಾರ, ಅಲ್ಲಿ ಶಿವಗುರು, ಆರ್ಯಾಂಬೆ ಎಂಬ ದಂಪತಿಗಳು ಶಿವನ ಆರಾಧನೆ ಮಾಡುತ್ತಾ ವಾಸವಾಗಿದ್ದರು. ಅವರಿಗೆ ಮಕ್ಕಳಾಗಿರಲಿಲ್ಲ. ಅವರು ಮಕ್ಕಳನ್ನು ಪಡೆಯಲು ವೃಷಾದ್ರಿಯಲ್ಲಿರುವ ಚಂದ್ರಮೌಳೇಶ್ವರನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಿದ್ದರು. ಪರಶಿವನು ವೈದಿಕ ಧರ್ಮದ ರಕ್ಷಣೆಗಾಗಿ ಆ ದಂಪತಿಗಳ ಪುತ್ರನಾಗಿ ಜನಿಸಲು ಇಚ್ಛಿಸಿದನು.
(ಶಿವಾಲಯದಲ್ಲಿ ಶಿವಗುರು, ಆರ್ಯಾಂಬೆ ಶಿವನನ್ನು ಪೂಜಿಸಿ ಪ್ರಾರ್ಥಿಸುತ್ತಿದ್ದಾರೆ)
ಶಿವ ಶಿವ ಶಂಕರನೇ ಪರಶಿವ ಹರ ಪರಮೇಶ್ವರನೇ
ನಿರತವು ಭಕ್ತರ ಪೊರೆಯುತಲಿರುವ
ಕರುಣಾ ಸಾಗರನೇ
ಪ್ರತಿದಿನವೂ ನಾವು ನಿನ್ನಯ ಪೂಜೆಯನು
ಶ್ರದ್ಧಾ ಭಕ್ತಿಯಲಿ ಮಾಡುತಲಿರುವೆವು
ಸಂತಾನ ಭಾಗ್ಯವನು ಬೇಡುತಲಿರುವೆವು
ವೃಷಾಚಲೇಶ್ವರನೇ ಕರುಣಿಸು ನೀ ನಮಗೆ
ದಂಪತಿಗಳು : ಹೇ ಜಗದ್ರಕ್ಷಕ, ನಿನ್ನನ್ನೇ ನಂಬಿರುವ ನಮಗೆ ದಯೆ ತೋರಿ ಸಂತಾನ ಭಾಗ್ಯ ಕರುಣಿಸು (ಎಂದು ಪ್ರಾರ್ಥಿಸಿ ಅಲ್ಲೇ ಮಲಗುವರು)
ದೃಶ್ಯ ೩ : ಶಿವಗುರು ಕನಸಲ್ಲಿ ಶಿವನು
(ಶಿವಗುರು ಕನಸಲ್ಲಿ ಶಿವನು ಕಾಣಿಸಿಕೊಳ್ಳುವನು)
ಶಿವ : ಭಕ್ತನೇ ನಿಮ್ಮಿಬ್ಬರ ನಿಷ್ಠೆಯನ್ನು ಮೆಚ್ಚಿದ್ದೇನೆ. ನಿಮ್ಮ ಆಕಾಂಕ್ಷೆಯನ್ನು ನೆರವೇರಿಸುತ್ತೇನೆ.
ಶಿವಗುರು : ಧನ್ಯನಾದೆ ದೇವಾ.
ಶಿವ : ಆದರೆ ಒಂದು ಪ್ರಶ್ನೆ. ದೀರ್ಘಾಯುಷ್ಯವುಳ್ಳ ದಡ್ಡ ಮಕ್ಕಳು ಬೇಕೋ ಅಥವಾ ಅಲ್ಪಾಯುಷ್ಯದ ಲೋಕ ಗುರುವೆನಿಸುವ ಸರ್ವಜ್ಞನಾದ ಒಬ್ಬ ಮಗ ಸಾಕೋ ?
ಶಿವಗುರು : ಭಗವಂತಾ, ಅಲ್ಪಾಯುಷಿಯಾದರೂ ಸರ್ವಜ್ಞನೂ ವಿಶ್ವ ವಿಖ್ಯಾತನೂ ಆಗುವ ಮಗನನ್ನು ನಮಗೆ ಕರುಣಿಸು.
ಶಿವ : ತಥಾಸ್ತು, ನಿಮ್ಮ ಕುಮಾರನು ಶಿವಾಂಶ ಸಂಭೂತನಾಗಿ ಲೋಕ ಗುರುವಾಗುತ್ತಾನೆ.
ಶಿವಗುರು : ಹೇ ಮಹಾದೇವಾ, ದಯಾಮಯನೇ ನಮಗೆ ಕರುಣೆ ತೋರಿದ ನಿನಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ. (ನಮಸ್ಕರಿಸುವನು)
(ಶಿವಗುರುವಿಗೆ ಎಚ್ಚರವಾಗಿ ಪತ್ನಿಯನ್ನು ಎಬ್ಬಿಸಿ ಕನಸಿನ ವಿಷಯ ತಿಳಿಸುತ್ತಾನೆ.)
ಶಿವಗುರು : ಆರ್ಯಾಂಬೆ, ಏಳು ಏಳು ಆರ್ಯಾಂಬೆ
ಆರ್ಯಾಂಬೆ : (ಏಳುತ್ತಾ) ಸ್ವಾಮಿ ಏನು ಹೇಳಿ, ಬೆಳಗಾಯಿತೇ ? ಸ್ನಾನ ಮಾಡಿ ಶಿವ ಪೂಜೆ ಮಾಡಲು ತಡವಾಯಿತೇ?
ಶಿವಗುರು : ಆರ್ಯಾಂಬೇ, ವೃಷಾಚಲೇಶ್ವರನು ನಮ್ಮ ಪೂಜೆಯನ್ನು ಮೆಚ್ಚಿ ಇಂದು ನನ್ನ ಕನಸಿನಲ್ಲಿ ಕಾಣಿಸಿಕೊಂಡು ನಮ್ಮ ಇಷ್ಟಾರ್ಥವನ್ನು ದಯಪಾಲಿಸಿದ್ದಾನೆ.
ಆರ್ಯಾಂಬೆ : ಸ್ವಾಮೀ, ಶಿವನನ್ನು ಕನಸಿನಲ್ಲಿ ಕಂಡಿರುವ ನೀವೇ ಪುಣ್ಯವಂತರು. ದಯಾಮಯ ಜಗದೀಶ್ವರನ ಕೃಪೆಯನ್ನು ಪಡೆದ ನಿಮಗೆ ನಾನು ನಮಸ್ಕರಿಸಿ ಧನ್ಯಳಾಗುತ್ತೇನೆ. (ಎಂದು ನಮಸ್ಕರಿಸುವಳು)
ಹಿನ್ನೆಲೆ
(ಕೆಲವು ದಿನಗಳ ನಂತರ ಆರ್ಯಾಂಬೆ ಗರ್ಭಿಣಿಯಾಗಿ ನವ ಮಾಸಗಳು ತುಂಬಿ ಶಿವ ತೇಜಸ್ಸು ಹೊಂದಿದ್ದ ಮಗುವಿಗೆ ಜನ್ಮವಿತ್ತಳು. ದಂಪತಿಗಳು ಸಂತಸದಿಂದ ಹನ್ನೊಂದನೆಯ ದಿನ ಪುರೋಹಿತರಿಂದ ಹೋಮ, ಹವನ, ಈಶ್ವರನ ಆರಾಧನೆ, ಅನ್ನ ಸಂತರ್ಪಣೆ ಮಾಡಿಸಿ ಮಗುವಿಗೆ ಶಂಕರ ಎಂದು ಹೆಸರಿಟ್ಟರು. ಮಗು ತನ್ನ ಬಾಲಲೀಲೆಗಳಿಂದ ತಂದೆ ತಾಯಿಗಳನ್ನು ಸಂತಸ ಪಡಿಸುತ್ತಾ ಬೆಳೆಯತೊಡಗಿತು. ಹರನ ದಿವ್ಯಾಂಶದ ಪ್ರಭೆಯ ಮಗು ಶಂಕರ ಬುದ್ಧಿ ಶಕ್ತಿಯಲ್ಲಿ ತುಂಬಾ ತೀಕ್ಷ್ಣ. ಮೂರು ವರ್ಷ ಕಳೆಯುವುದರೊಳಗೆ ಲಿಪಿಗಳನ್ನರಿತು ಓದುವುದು, ತಂದೆ ಹೇಳುವ ಕಾವ್ಯ ಪುರಾಣಗಳನ್ನು ತಿಳಿದುಕೊಂಡು ಎಲ್ಲಾ ವಿಷಯಗಳನ್ನು ಗ್ರಹಿಸುತ್ತಿದ್ದ. ತಂದೆ ಶಿವಗುರು ಮಗುವಿಗೆ ಮೂರನೆಯ ವಯಸ್ಸಿನಲ್ಲಿ ಚೂಡಾಕರ್ಮವನ್ನು ನೆರವೇರಿಸಿದರು. ಮಗು ಶಂಕರನಿಗೆ ಮೂರನೆಯ ವರ್ಷ ಕಳೆದಾಗ ತಂದೆ ಶಿವಗುರು ಸ್ವರ್ಗಸ್ಥರಾದರು. ತಾಯಿ ಆರ್ಯಾಂಬೆ ಮಗುವನ್ನು ಪ್ರೀತಿಯಿಂದ ಸಾಕಿ ಸಲಹಿ ಮಗನಿಗೆ ಐದನೆಯ ವರ್ಷದಲ್ಲಿಯೇ ಬಂಧುಗಳಿಂದ ಉಪನಯನ ಮಾಡಿಸಿದಳು. ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಗುರುಕುಲಕ್ಕೆ ಕರೆದುಕೊಂಡು ಹೋಗುತ್ತಾಳೆ.)
ದೃಶ್ಯ ೪ : ಗುರುಕುಲ
(ಗುರುಕುಲದಲ್ಲಿ ಗುರುಗಳಾದ ದಿವಸ್ಪತಾಚಾರ್ಯರು ಶಿಷ್ಯರಿಂದ ಪಾಠವನ್ನು ಹೇಳಿಸುತ್ತಿದ್ದಾರೆ.)
ಶಿಷ್ಯರು : (ಗಣಪತಿ ಉಪನಿಷತ್ ಮಂತ್ರವನ್ನು ಹೇಳುವರು.)
(ಗುರುಕುಲದಲ್ಲಿ ಪಾಠ ನಡೆಯುತ್ತಿರುವಾಗ ಆರ್ಯಾಂಬೆಯು ಬಾಲಕ ಶಂಕರನನ್ನು ಕರೆದುಕೊಂಡು ಬರುತ್ತಾಳೆ. ತಾಯಿ ಮಗ ಇಬ್ಬರೂ ದೂರದಿಂದಲೇ ಗುರುಗಳಿಗೆ ನಮಸ್ಕರಿಸಿ ನಿಲ್ಲುತ್ತಾರೆ. ಪಾಠವು ಮುಗಿದಾಗ ಗುರುಗಳ ಹತ್ತಿರ ಬಂದು ಇಬ್ಬರೂ ಪುನಃ ನಮಸ್ಕರಿಸಿ)
ಆರ್ಯಾಂಬೆ : ಸ್ವಾಮಿ, ಇವನು ನನ್ನ ಮಗ ಶಂಕರ. ತಾವು ದಯ ಮಾಡಿ ಇವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ.
ಗುರುಗಳು : ಬಾಲಕಾ ಇಲ್ಲಿ ಬಾ.
(ಸ್ವಲ್ಪ ದೂರದಲ್ಲಿ ನಿಂತಿದ್ದ ಶಂಕರ ಹತ್ತಿರ ಬಂದು)
ಗುರುಃ ಬ್ರಹ್ಮಾ ಗುರುಃ ವಿಷ್ಣುಃ
ಗುರುಃ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ
(ಎಂದು ಬಾಲಕ ಶಂಕರನು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುವನು. ಆರ್ಯಾಂಬೆ ಅಲ್ಲಿಂದ ಹೊರಡುವಳು. ಗುರುಗಳು ಪಾಠ ಶುರು ಮಾಡುತ್ತಾರೆ.)
ಗುರುಗಳು : (ದೇವಿ ಸೂಕ್ತವನ್ನು ಹೇಳಿಕೊಡುತ್ತಾರೆ.)
(ಶಿಷ್ಯರ ಜೊತೆ ಬಾಲಕ ಶಂಕರರು ಹೇಳುತ್ತಾರೆ.)
ದೃಶ್ಯ ೫ : ಗುರುಕುಲದಲ್ಲಿ ಸತತ ಅಭ್ಯಾಸ
(ಗುರುಗಳು ಸೂಕ್ತಗಳ ಪಾಠ ಹೇಳಿಕೊಟ್ಟು ಹಿಂದೆ ಮಾಡಿದ ರುದ್ರ ಪಾಠವನ್ನು ಹೇಳಿಸುವರು)
ಶಿಷ್ಯರು : (ರುದ್ರ ಪಾಠ ಹೇಳುತ್ತಾರೆ.)
ಹಿನ್ನೆಲೆ
(ಬಾಲಕ ಶಂಕರರು ಗುರುಕುಲಕ್ಕೆ ಸೇರಿದ ಮೂರು ವರ್ಷಗಳಲ್ಲಿ ಷಡಂಗ ಸಹಿತಗಳಾದ ನಾಲ್ಕು ವೇದಗಳನ್ನೂ ಅರ್ಥ ಸಹಿತವಾಗಿ ಅಧ್ಯಯನ ಮಾಡಿದರು. ಸಕಲ ವಿದ್ಯಾ ಪಾರಂಗತರಾಗಿ ಗುರುಕುಲಕ್ಕೆ ಶೋಭೆಯನ್ನು ತಂದ ಮಹಾಬುದ್ಧಿಶಾಲಿ ಬಾಲಕನನ್ನು ಕಂಡು ಎಲ್ಲರೂ ಪರಮಾಶ್ಚರ್ಯಗೊಂಡರು. ಗುರುಕುಲದ ನಿಯಮದಂತೆ ಸಹಪಾಠಿಗಳ ಜೊತೆಗೆ ಭಿಕ್ಷಾಟನೆಗೆ ಹೋದಾಗ ಒಂದು ಮನೆಯ ಮುಂದೆ ನಿಂತು)
ದೃಶ್ಯ ೬ : ಬಡವಿಗೆ ಭಾಗ್ಯ
ಶಂಕರ : ಭವತಿ ಭಿಕ್ಷಾಂದೇಹಿ, ಭವತಿ ಭಿಕ್ಷಾಂದೇಹಿ
ಗೃಹಿಣಿ : (ತುಂಬ ದುಃಖದಿಂದ) ಅಯ್ಯಾ ಬ್ರಹ್ಮಚಾರಿ ಶ್ರೇಷ್ಠನೇ ! ನಾನು ಬಡವಿ. ನಿನಗೆ ಭಿಕ್ಷೆ ನೀಡಲು ಮನೆಯಲ್ಲಿ ಏನೂ ಇಲ್ಲ. ನೀಡುವ ಮನಸ್ಸಿದ್ದರೂ ನೀಡಲು ಏನೂ ಇಲ್ಲದೆ ವ್ಯಥೆಯಾಗುತ್ತಿದೆ.
ಶಂಕರ : ತಾಯೇ, ಒಳಗೆ ಹೋಗಿ ಹುಡುಕಿ ಏನಾದರೂ ಸಿಗಬಹುದು, ಸಿಕ್ಕಿದ್ದನ್ನೇ ಕೊಡಿ.
(ಗೃಹಿಣಿಯು ಮನೆಯ ಹಿತ್ತಲಲ್ಲಿರುವ ನೆಲ್ಲಿ ಮರದಲ್ಲಿ ಸಿಕ್ಕಿದ ಒಂದು ಒಣ ನೆಲ್ಲಿ ಕಾಯಿ ತಂದು)
ಗೃಹಿಣಿ : ಬ್ರಹ್ಮಚಾರಿ ಹಿತ್ತಲಲ್ಲಿರುವ ನೆಲ್ಲಿ ಮರದಲ್ಲಿ ಒಂದು ಒಣ ನೆಲ್ಲಿಕಾಯಿ ಸಿಕ್ಕಿದೆ. ನಿನ್ನಿಚ್ಛೆಯಂತೆ ಸಿಕ್ಕಿದ್ದನ್ನೇ ನೀಡುತ್ತಿರುವೆ. ಇದೇ ಈ ಮನೆಯ ಭಿಕ್ಷೆ ತೆಗೆದುಕೋ ಮಗು (ಎಂದು ನೀಡುವಳು)
(ಬಾಲಕ ಶಂಕರರು ನೆಲ್ಲಿಕಾಯಿ ತೆಗೆದುಕೊಂಡು ಆ ಗೃಹಿಣಿಯ ಬಡತನವನ್ನು ನೋಡಿ ವಿಚಲಿತರಾಗಿ ಮಹಾಲಕ್ಷ್ಮಿಯನ್ನು ಧ್ಯಾನಿಸಿ ಸ್ತುತಿಸುತ್ತಾರೆ)
ಕನಕ ಧಾರಾ ಸ್ತ್ರೋತ್ರ
ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ
ಕಮಲೇ ಕಮಲಾಕ್ಷ ವಲ್ಲಭೇ ತ್ವಂ
ಕರುಣಾಪೂರ ತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||
(ಬಾಲಕ ಶಂಕರನ ಭಕ್ತಿಯ ಸ್ತುತಿಗೆ ಮಹಾಲಕ್ಷ್ಮಿ ಪ್ರತ್ಯಕ್ಷಳಾಗಿ)
ಲಕ್ಷ್ಮಿ : ಮಗೂ ಶಂಕರಾ, ರಮಣೀಯವಾದ ಪದಾವಳಿಗಳಿಂದ ನನ್ನನ್ನು ಸ್ತುತಿಸಿರುವೆ. ನಾನು ಪ್ರಸನ್ನಳಾಗಿದ್ದೇನೆ.
(ಬಾಲಕ ಶಂಕರನು ಲಕ್ಷ್ಮಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಾ)
ಶಂಕರ : ಅಮ್ಮಾ, ನಿನಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದೇನೆ. ಈ ಮನೆಯ ಗೃಹಿಣಿಯ ಸ್ಥಿತಿಯನ್ನು ನೋಡಮ್ಮಾ, ನೀನು ದಯೆ ತೋರಿ ಈಕೆಯ ಕಷ್ಟವನ್ನು ನಿವಾರಿಸು ತಾಯೆ.
ಲಕ್ಷ್ಮಿ : ವತ್ಸಾ, ನನಗೆ ಎಲ್ಲರೂ ಸಮಾನರು ಅವರು ಮಾಡಿದ ಪುಣ್ಯ ಪಾಪಗಳಿಗೆ ತಕ್ಕ ಫಲ ಕೊಡುವೆ ಈ ಗೃಹಿಣಿಯು ಹಿಂದಿನ ಜನ್ಮದ ಪಾಪದ ಫಲ ಅನುಭವಿಸುತ್ತಿದ್ದಾಳೆ. ನಾನೇನು ಮಾಡಲು ಸಾಧ್ಯ.
ಶಂಕರ : ಅಮ್ಮಾ ಭಗವತಿ, ಬಾಲಕನಾದ ನನ್ನ ಮೇಲೆ ನೀನು ಅಕ್ಕರೆ ತೋರಿ ದರ್ಶನ ಕೊಟ್ಟಿರುವೆ. ನಿನ್ನ ಕೃಪಾದೃಷ್ಟಿಗೆ ನಾನು ಪಾತ್ರನಾದರೆ ಈ ತಾಯಿ ನೀಡಿದ ಈ ದಾನದ ಫಲವನ್ನು ಈಗಲೇ ನೀಡಿ ಅನುಗ್ರಹಿಸು. ತಾಯೇ ಇದು ನನ್ನ ವಿನಮ್ರ ಪ್ರಾರ್ಥನೆ.
ಲಕ್ಷ್ಮಿ : ಶಂಕರಾ, ಕರುಣಾರ್ದ ಹೃದಯ ನಿನ್ನದು. ಈ ಚಿಕ್ಕ ವಯಸ್ಸಿಗೆ ಅದೆಂತಹಾ ವೈರಾಗ್ಯ. ನಾನೇ ಪ್ರತ್ಯಕ್ಷವಾಗಿದ್ದರೂ ನಿನಗಾಗಿ ಏನನ್ನೂ ಕೇಳಲಿಲ್ಲ. ಭಲೇ ವತ್ಸಾ, ನೀನು ಕೇಳಿಕೊಂಡಂತೆ ಆಗಲಿ. ತಥಾಸ್ತು.
(ಲಕ್ಷ್ಮಿಯು ಬಡ ಗೃಹಿಣಿಯ ಮನೆ ತುಂಬ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿ ಮಾಯವಾದಳು. ಜೊತೆಗೆ ಬಂದ ಸಹಪಾಠಿಗಳು ಈ ದೃಶ್ಯ ನೋಡಿ ಆಶ್ಚರ್ಯಗೊಂಡರು. ಇದನ್ನು ನೋಡಿದ ಕೆಲವು ಜನರು ಬ್ರಹ್ಮಚಾರಿ ಶಂಕರನಿಗೆ ಪಾದ ಮುಟ್ಟಿ ನಮಸ್ಕರಿಸಿ ಈ ವಟು ಮಹಿಮಾನ್ವಿತ ವ್ಯಕ್ತಿ ಎಂದು ಉದ್ಗರಿಸಿದರು. ಶಂಕರರು ಮಾತ್ರ ಏನೂ ನಡೆದೇ ಇಲ್ಲವೇನೋ ಎಂಬಂತೆ ನಿರ್ವಿಕಾರರಾಗಿ ಸಹಪಾಠಿಗಳ ಜೊತೆ ಗುರುಕುಲಕ್ಕೆ ತೆರಳಿದರು. ಈ ಪವಾಡವನ್ನು ಕೇಳಿ ತಿಳಿದ ಕೇರಳದ ರಾಜನು ಧನ-ಕನಕ ಕಾಣಿಕೆ ಕಳುಹಿಸಿ ಬಾಲಕ ಶಂಕರರನ್ನು ಆಹ್ವಾನಿಸಿದನು, ಶಂಕರರು ಆಕರ್ಷಿತರಾಗದೆ ತಾವು ಅದನ್ನು ಸ್ವೀಕರಿಸಲು ನಿರಾಕರಿಸಿ ಕಷ್ಟದಲ್ಲಿರುವವರಿಗೆ ಆ ಧನವನ್ನು ನೀಡಲು ಹೇಳಿದರು.)
ದೃಶ್ಯ ೭ : ಗುರುಕುಲದಿಂದ ನಿರ್ಗಮನ
(ಗುರು ದಿವಸ್ಪತಾಚಾರ್ಯರು ಹಿಂದೆ ಮಾಡಿದ ಪಾಠವನ್ನು ಹೇಳಿಸುತ್ತಿದ್ದಾರೆ)
ಶಿಷ್ಯರು : (ಪುರುಷ ಸೂಕ್ತ ಮಂತ್ರ)
(ಶಂಕರರ ಮಂತ್ರೋಚ್ಛಾರಣೆ ಪಾಂಡಿತ್ಯ ನೋಡಿ ಗುರುಗಳು ಶಂಕರರ ಮೈದಡವಿ ಹೇಳಿದರು.)
ಗುರು : ಶಂಕರಾ ನಿನ್ನ ಅಭೂತಪೂರ್ವ ಶಕ್ತಿಗೆ ಬೆರಗಾದೆ. ಮಹಾಮಹಿಮನಾದ ನೀನು ಪರಿಪೂರ್ಣ ವಿದ್ಯಾವಂತನಾಗಿರುವೆ. ಇಂದಿಗೆ ನಿನ್ನ ಗುರುಕುಲವಾಸ ಮುಗಿಯಿತು. ನೀನಿನ್ನು ಹೊರಡಬಹುದು.
(ಶಂಕರರು ಗುರುಗಳಿಗೆ ನಮಸ್ಕರಿಸಿ ಮನೆಗೆ ಹೋಗುವರು)
(ಗುರುಗಳು ಉಳಿದ ಶಿಷ್ಯರಿಗೆ ಶ್ರೀ ಸೂಕ್ತ ಹೇಳಿಕೊಡುತ್ತಿದ್ದಾರೆ – ಶ್ರೀ ಸೂಕ್ತ)
(ಬಾಲಕ ಶಂಕರರು ಮನೆಯಿಂದ ಗುರುದಕ್ಷಿಣೆ ತೆಗೆದುಕೊಂಡು ಬಂದು ಸಮರ್ಪಿಸುತ್ತಾ)
ಶಂಕರ : ಗುರುಗಳೇ, ನಾನು ತಂದಿರುವ ಗುರುದಕ್ಷಿಣೆಯನ್ನು ಸ್ವೀಕರಿಸಿ ನನ್ನನ್ನು ಆಶೀರ್ವದಿಸಿ. ಸಾಷ್ಟಾಂಗ ಪ್ರಣಾಮಗಳು.
ಗುರು : ಶಂಕರಾ, ಲೋಕಕ್ಕೆ ಮಾರ್ಗದರ್ಶಕನಾಗಿ ಕೀರ್ತಿವಂತನಾಗು.
ದೃಶ್ಯ ೮ : ಮಾತೃಭಕ್ತಿ
(ಆಶೀರ್ವಾದ ಪಡೆದ ಶಂಕರರು ಮನೆಗೆ ಬಂದು ತಾಯಿ ಸೇವೆಯಲ್ಲಿ ನಿರತರಾಗಿ ವೇದಪಠಣ ಮಾಡುತಲಿರುವರು)
ಶಂಕರರು : (ಮೇಧಾ ಸೂಕ್ತ ಪಠಣ)
ಆರ್ಯಾಂಬೆ : ಮಗೂ ಶಂಕರಾ, ನಾನೀಗ ಪೂರ್ಣಾ ನದಿಗೆ ಹೋಗಿ ಸ್ನಾನ ಮಾಡಿ ಬರುವೆ.
ಶಂಕರ : ಅಮ್ಮಾ, ಹೋಗಿ ಬಾರಮ್ಮಾ, ನಾನು ವೇದ ಪಠಣವನ್ನು ಮಾಡುತ್ತಿರುತ್ತೇನೆ.
(ಆರ್ಯಾಂಬೆ ಪೂರ್ಣಾ ನದಿಗೆ ಹೋಗಿ ಸ್ನಾನ ಮಾಡಿ ಹಿಂತಿರುಗಿ ಬರುವಾಗ ಬಿಸಿಲಿನ ಬೇಗೆಯಿಂದ ತಲೆಸುತ್ತಿ ಮಾರ್ಗ ಮಧ್ಯದಲ್ಲಿ ಕುಸಿದು ಬೀಳುವಳು. ಮನೆಯಲ್ಲಿ ವೇದ ಪಠಣ ಮಾಡುತ್ತಿರುವ ಶಂಕರರು ತಾಯಿ ಎಷ್ಟೊತ್ತಾದರೂ ಬರದಿರುವುದನ್ನು ನೋಡಿ ತಾವೇ ಪೂರ್ಣಾ ನದಿಯ ಕಡೆಗೆ ಹೊರಟರು. ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ತಾಯಿಯನ್ನು ನೋಡಿ ಗಾಬರಿಯಿಂದ ಹಿಡಿದು, ಏಳಿಸುತ್ತ)
ಶಂಕರ : ಅಮ್ಮಾ, ಏನಾಯ್ತಮ್ಮಾ, ಏಳಮ್ಮಾ ಅಮ್ಮಾ
ಆರ್ಯಾಂಬೆ : (ಕಣ್ಣು ಬಿಡುತ್ತಾ) ಮಗೂ, ಗಾಬರಿಯಾಗಬೇಡ. ನನಗೆ ಅಶಕ್ತತೆ ಇರುವುದರಿಂದ ಬಿಸಿಲಿನ ಬೇಗೆಯನ್ನು ತಡೆಯಲಾರದೆ ತಲೆ ಸುತ್ತಿದಂತಾಗಿ ಕುಸಿದುಬಿಟ್ಟೆ.
ಶಂಕರ : ಅಮ್ಮಾ, ನೀನು ಸ್ನಾನಕ್ಕೆಂದು ಹೋಗಿ ಎಷ್ಟೋತ್ತಾದರೂ ಬರದಿದ್ದನ್ನು ನೋಡಿ ನಾನೇ ಹುಡುಕುತ್ತಾ ಬಂದೆ. ನೀನು ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿ ತುಂಬಾ ಗಾಬರಿಯಾದೆ.
ಆರ್ಯಾಂಬೆ : ಮಗೂ, ನಾನೀಗ ವೃದ್ಧೆಯಾಗಿರುವೆ. ಇನ್ನು ಮುಂದೆ ಬೆಳಗ್ಗೆ ಸೂರ್ಯ ಉದಯವಾಗುವಷ್ಟರಲ್ಲಿ ಸ್ನಾನ ಮುಗಿಸಿ ಮನೆ ಸೇರಿಕೊಳ್ಳುವೆ.
ಶಂಕರ : ಅಮ್ಮಾ ನೀನು ಇನ್ನು ಮುಂದೆ ಸ್ನಾನಕ್ಕಾಗಿ ನದಿಗೆ ಹೋಗುವುದು ಬೇಡ. ಮನೆಯಲ್ಲೇ ಸ್ನಾನ ಮಾಡು.
ಆರ್ಯಾಂಬೆ : ಮಗೂ ಪವಿತ್ರವಾದ ನದಿಯಲ್ಲಿ ಸ್ನಾನ ಮಾಡಿದರೆ ಮಾತ್ರ ನನ್ನ ಮನಸ್ಸಿಗೆ ಸಂತೃಪ್ತಿಯಾಗುವುದು.
ಶಂಕರ : ಅಮ್ಮಾ ನಿನ್ನ ಸ್ನಾನಕ್ಕೆ ವ್ಯವಸ್ಥೆ ಮಾಡುವೆನು. ಬಾರಮ್ಮಾ ಈಗ ಮನೆಗೆ ಹೋಗೋಣ. ನೀನು ವಿಶ್ರಾಂತಿ ಪಡೆಯಬೇಕು.
(ತಾಯಿಯನ್ನು ಮೆಲ್ಲಗೆ ಎಬ್ಬಿಸಿ ಮನೆಗೆ ಕರೆದೊಯ್ದು ಮಲಗಿಸುವರು. ನಂತರ ತಾಯಿಯ ಸ್ನಾನದ ಬಗ್ಗೆ ಯೋಚಿಸಿ ಪೂರ್ಣಾನದಿ ದೇವಿಯನ್ನು ಪ್ರಾರ್ಥಿಸಿ ಸ್ತುತಿಸುತ್ತಾರೆ.)
(ಶಂಕರರ ಪ್ರಾರ್ಥನೆಗೆ ಋತು ಧರ್ಮದ ಸಂಯೋಗವೋ ಎಂಬಂತೆ ರಾತ್ರಿಯಿಡೀ ಮಳೆ ಸುರಿದು ಪೂರ್ಣಾನದಿಯು ತುಂಬಿ ಮನೆಯ ಹತ್ತಿರವೇ ಹರಿಯ ತೊಡಗಿತು. ಕಾಲಟಿಯ ಜನರಲ್ಲಾ ಬಂದು ನೋಡಿ ಶಂಕರರನ್ನು ಹರಸಿದರು.)
ದೃಶ್ಯ ೯ : ಶಂಕರರ ದರ್ಶನಕ್ಕೆ ಕೇರಳದ ರಾಜ
(ಬಾಲ ಶಂಕರರು ತಮ್ಮ ಮನೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾರೆ. ಹಿರಿಯ ವಯಸ್ಸಿನ ವಿದ್ಯಾರ್ಥಿಗಳೂ ಇರುವರು. ಶಂಕರರು ದುರ್ಗಾ ಸೂಕ್ತವನ್ನು ಹೇಳಿಕೊಡುತ್ತಿದ್ದಾರೆ. – ದುರ್ಗಾ ಸೂಕ್ತ)
(ಜನರು ಶಂಕರರ ಬಗ್ಗೆ ಆಡುತ್ತಿರುವ ಮಾತುಗಳು ಕೇರಳದ ರಾಜನಿಗೆ ತಿಳಿದು ರಾಜನು ಪರಿವಾರ ಸಮೇತ ಧನ ಕನಕ ಕಾಣಿಕೆಗಳೊಂದಿಗೆ ಶಂಕರರ ದರ್ಶನಕ್ಕಾಗಿ ಬಂದಾಗ ಪಾಠ ನಡೆಯುವ ಸಮಯವಾದ್ದರಿಂದ ಸ್ವಲ್ಪ ದೂರದಿಂದಲೇ ನಮಸ್ಕರಿಸಿ ನಿಲ್ಲುತ್ತಾನೆ. ಪಾಠ ಮುಗಿದ ನಂತರ)
ಶಂಕರರು : ರಾಜಶೇಖರರೇ ಬನ್ನಿ, ಆಸೀನರಾಗಿ.
ರಾಜಶೇಖರ : ಮಹಾ ಮಹಿಮರೇ, ತಮ್ಮ ದರ್ಶನದಿಂದ ನನ್ನ ಜನ್ಮ ಪಾವನವಾಯಿತು. ತಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು. (ಎಂದು ನಮಸ್ಕರಿಸುವನು)
ಶಂಕರರು : ಒಳ್ಳೆಯದಾಗಲಿ, ತಾವು ಬಂದ ಕಾರಣವೇನು ?
ರಾಜಶೇಖರ : ಯತಿವರ್ಯರೇ, ತಾವು ಗುರುಕುಲದಿಂದ ಭಿಕ್ಷೆಗೆ ಹೋದಾಗ ಬಡ ಗೃಹಿಣಿಗಾಗಿ ಲಕ್ಷ್ಮಿಯನ್ನು ಒಲಿಸಿ ಭಾಗ್ಯವನ್ನು ತಂದುಕೊಟ್ಟಿದ್ದೀರಿ. ಆ ಸಮಯದಲ್ಲಿ ನಾನು ಧನಕನಕ ಕಾಣಿಕೆಗಳನ್ನು ತಮಗೆ ಕಳುಹಿಸಿ ಆಹ್ವಾನವಿತ್ತೆ. ತಾವು ನಿರಾಕರಿಸಿದ್ದೀರಿ. ತಾವು ತಮ್ಮ ತಾಯಿಗಾಗಿ ಪೂರ್ಣಾನದಿಯನ್ನು ಒಲಿಸಿ ತಮ್ಮ ಮನೆಯ ಮುಂದೆ ಹರಿಯುವಂತೆ ಮಾಡಿರುವಿರಿ. ನಾನು ತಮಗೆ ಶರಣಾಗಿದ್ದೇನೆ. ಧನ ಕನಕ ಕಾಣಿಕೆಯನ್ನು ಸಮರ್ಪಿಸುತ್ತಿದ್ದೇನೆ.
ಶಂಕರರು : ರಾಜಾ ನನಗೆ ಧನ ಕನಕ ಕಾಣಿಕೆಗಳಲ್ಲಿ ಆಸಕ್ತಿಯಿಲ್ಲ. ಇದನ್ನೆಲ್ಲಾ ಈ ಊರಿನ ಬಡವರಿಗೆ ದಾನ ಮಾಡಿ.
ರಾಜಶೇಖರ : ತಮ್ಮಿಚ್ಛೆಯಂತೆ ಬಡವರಿಗೆ ದಾನ ಮಾಡುತ್ತೇನೆ. ಯತಿವರ್ಯರೇ ನಾನು ಮೂರು ನಾಟಕಗಳನ್ನು ಬರೆದಿದ್ದೇನೆ. ಅದನ್ನು ತಮಗೆ ಸಮರ್ಪಿಸುತ್ತಿದ್ದೇನೆ.
ಶಂಕರರು : ರಾಜಾ ವಿದ್ಯಾಪ್ರಿಯರಾದ ತಮ್ಮನ್ನು ನೋಡಿ ಸಂತೋಷವಾಯಿತು. ತಮಗೆ ವೇದ ಸಮ್ಮತವಾದ ಪರಮಾತ್ಮನ ಪೂಜಾ ವಿಧಾನವನ್ನು ತಿಳಿಸಿಕೊಡುವೆ. ಅದರಂತೆ ನಡೆದುಕೊಳ್ಳಿ. ಭಗವಂತನು ಶ್ರೇಯಸ್ಸನ್ನು ನೀಡುತ್ತಾನೆ.
ರಾಜಶೇಖರ : ಯತಿವರ್ಯರೇ, ತಮ್ಮಿಂದ ಪರಮಾತ್ಮನ ಆರಾಧನೆಯ ಮಾರ್ಗವು ನನಗೆ ದೊರೆಯುವುದು ನನ್ನ ಪುಣ್ಯ.
(ಶ್ರೀ ಶಂಕರರು ರಾಜನಿಗೆ ವೇದ ಸಮ್ಮತವಾದ ಪರಮಾತ್ಮನ ಪೂಜಾ ವಿಧಾನವನ್ನು ತಿಳಿಸಿ)
ಶಂಕರರು : ರಾಜಾ ಎಲ್ಲರೂ ತಮ್ಮ ತಮ್ಮ ವೃತ್ತಿಯನ್ನು ತಪ್ಪದೇ ಮಾಡಬೇಕು. ಧರ್ಮ ಮಾರ್ಗದಲ್ಲಿಯೇ ಇರಬೇಕು. ಕರ್ತವ್ಯಗಳನ್ನು ಬಿಡದೆ ನಡೆಸಿಕೊಂಡು ಬರಬೇಕು. ಇದರಿಂದಲೇ ಎಲ್ಲರ ಅಭ್ಯುದಯ ಎಂದು ಪ್ರಜೆಗಳಿಗೆ ತಿಳಿಸಿ ಇದನ್ನು ಕಾರ್ಯರೂಪಕ್ಕೆ ತರುವುದು ತಮ್ಮ ಆದ್ಯ ಕರ್ತವ್ಯ.
ರಾಜಶೇಖರ : ಯತಿವರ್ಯರೇ, ಅಪೂರ್ವ ಜ್ಞಾನ ನಿಧಿಯಾಗಿರುವ ತಾವು ನನ್ನ ರಾಜ್ಯದಲ್ಲಿರುವುದು ನನ್ನ ಅನೇಕ ಜನ್ಮಗಳ ಪುಣ್ಯವು. ತಾವು ಹೇಳಿದಂತೆ ನಡೆದುಕೊಳ್ಳುತ್ತೇನೆ. ನಾನು ಇನ್ನು ಹೊರಡುತ್ತೇನೆ.
(ಎಂದು ಮತ್ತೊಮ್ಮೆ ನಮಸ್ಕರಿಸಿ ಹೊರಡುವನು)
ಹಿನ್ನೆಲೆ
(ಶ್ರೀ ಶಂಕರರಲ್ಲಿ ವೇದ ಪರಿಣಿತರು ಶಾಸ್ತ್ರ ಬಲ್ಲ ಅನೇಕರು ಬಂದು ಹೊಸ ಹೊಸ ವಿಷಯಗಳನ್ನು ಕಲಿತರು. ಚಿಂತನ – ಮಂಥನ ನಡೆಸಿದರು. ವಿದ್ಯಾವಂತರ ದೊಡ್ಡ ಸಮೂಹವೇ ಅಲ್ಲಿ ಸೇರುತ್ತಿತ್ತು. ಶಂಕರರು ತಾಯಿಯ ಸೇವೆ ಮಾಡುತ್ತಾ ಅಧ್ಯಯನ ಮಾಡುತ್ತಾ ದಿನ ಕಳೆಯುತ್ತಿರಲು ಹುಟ್ಟಿನಿಂದಲೇ ಬಂದ ವೈರಾಗ್ಯವು ತೀವ್ರವಾಗಿ ಬೆಳೆಯತೊಡಗಿತು. ತಾಯಿಯ ರಕ್ಷಣೆಯ ಬಗ್ಗೆಯೂ ಚಿಂತೆಯಾಗುತ್ತಿತ್ತು. ಇದಕ್ಕೆ ಪರಿಹಾರವೇನೆಂದು ಯೋಚಿಸುತ್ತಿದ್ದರು.)
ದೃಶ್ಯ ೧೦ : ಅಗಸ್ತ್ಯಾದಿಗಳ ಆಗಮನ
(ಶಂಕರರು ಶಿವನನ್ನು ಪೂಜಿಸುತ್ತಿರುವರು)
ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಂ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ ||
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಂ |
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್-ಪ್ರಣಮಾಮಿ ಸದಾಶಿವ ಲಿಂಗಂ ||
ಆರ್ಯಾಂಬೆ : ಮಗೂ, ಶಂಕರಾ ಪೂಜೆ ಆಯಿತಾ ?
ಶಂಕರರು : ಆಯಿತಮ್ಮಾ, ನಿನಗೆ ನಮಸ್ಕರಿಸುತ್ತೇನೆ. ಮಾತೃ ದೇವೋ ಭವ (ಎಂದು ನಮಸ್ಕರಿಸುತ್ತಾರೆ)
(ಶಂಕರರ ಅವತಾರವನ್ನು ಅರಿತಿದ್ದ ಅಗಸ್ತ್ಯಾದಿಗಳು ಅವರ ಸಂದರ್ಶನಕ್ಕಾಗಿ ಅಲ್ಲಿಗೆ ಬರುವರು)
ಆರ್ಯಾಂಬೆ : ಪೂಜ್ಯರೇ, ಸಾಷ್ಟಾಂಗ ಪ್ರಣಾಮಗಳು. ಬನ್ನಿ, ಆಸೀನರಾಗಿ.
(ಅಗಸ್ತ್ಯಾದಿಗಳು ಆಸೀನರಾಗುತ್ತಾರೆ)
(ಆರ್ಯಾಂಬೆ ಮತ್ತು ಶಂಕರರು ಅಗಸ್ತ್ಯಾದಿಗಳಿಗೆ ನಮಸ್ಕರಿಸುತ್ತಾರೆ)
ಆರ್ಯಾಂಬೆ : ತಾವು ನಮ್ಮ ಮನೆಗೆ ಬಂದಿರುವುದು ನಮ್ಮ ಭಾಗ್ಯ.
ಅಗಸ್ತ್ಯಾದಿಗಳು : ಶುಭವಾಗಲಿ.
(ಆರ್ಯಾಂಬೆ ಒಳಗೆ ಹೋಗಿ ಹಾಲನ್ನು ತಂದು ಕೊಡುವಳು. ಅಗಸ್ತ್ಯಾದಿಗಳು ಹಾಲನ್ನು ಸ್ವೀಕರಿಸುತ್ತಾರೆ)
ಆರ್ಯಾಂಬೆ : ಮಹರ್ಷಿಗಳೇ, ನನ್ನ ಮಗನ ಮುಂದಿನ ಭವಿಷ್ಯವನ್ನು ತಿಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ಅಗಸ್ತ್ಯಾದಿಗಳು : ನೀವು ಪರಶಿವನ ಅನುಗ್ರಹದಿಂದ ಪಡೆದ ಈ ಬಾಲಕ ಈಶ್ವರಾಂಶ ಸಂಭೂತನು. ಆದರೆ ಈತನ ಆಯಸ್ಸು ಮಾತ್ರ ಎಂಟೇ ವರ್ಷ. ಅನುಷ್ಠಾನ ಬಲ, ಆಶ್ರಮ ಬದಲಾವಣೆಗಳಿಂದ ಇನ್ನೂ ಎಂಟು ವರ್ಷ ಹೆಚ್ಚಾಗಿ ಹದಿನಾರು ವರ್ಷಗಳಿದ್ದು ಲೋಕದ ಹಿತ ಕಾರ್ಯ ಸಾಧಿಸಿ ಕೀರ್ತಿವಂತನಾಗುತ್ತಾನೆ.
(ಎಂದು ಆಶೀರ್ವದಿಸಿ ಅಗಸ್ತ್ಯಾದಿಗಳು ಹೊರಟರು. ಮಗನ ಆಯುಷ್ಯ ತಿಳಿದ ಆರ್ಯಾಂಬೆ ದುಃಖಿಸುತ್ತಿರಲು ಶಂಕರರು ತಾಯಿಯನ್ನು ಸಮಾಧಾನ ಪಡಿಸುತ್ತಾ)
ಶಂಕರರು : ಅಮ್ಮಾ, ದುಃಖಿಸಬೇಡಮ್ಮಾ. ಈ ದೇಹವನ್ನು ಸ್ಥಿರವೆಂದು ತಿಳಿಯುವುದು ಮೂಢತನವಲ್ಲವೇ, ಜೀವನವು ಕ್ಷಣಿಕ. ಇರುವಷ್ಟು ದಿನ ಸಮಯವನ್ನೆಲ್ಲಾ ಸಂಪೂರ್ಣವಾಗಿ ಭಗವಂತನ ಸೇವೆಗೆ ಉಪಯೋಗಿಸಿದರೆ ಅದೇ ಪರಮ ಭಾಗ್ಯವಲ್ಲವೇ. ಸಂಸಾರದ ಸ್ಥಿತಿ ತಿಳಿದಿರುವ ನಿಮಗೆ ಶೋಕವೇಕೆ?
ಆರ್ಯಾಂಬೆ : ಮಗೂ, ಏನು ಹೇಳುತ್ತಿರುವೆ. ನಿನ್ನ ಮಾತಿನ ಅರ್ಥವೇನು ? ಏನನ್ನು ಹೇಳಬೇಕೆಂದಿರುವೆಯೋ ಅದನ್ನು ಸ್ಪಷ್ಟವಾಗಿ ಹೇಳು.
ಶಂಕರರು : ಅಮ್ಮಾ, ಜನನ ಮರಣದ ಪರಂಪರಾ ಪ್ರಾಪ್ತಿ ರೂಪವಾಗಿರುವ ಈ ಸಂಸಾರ ಮಹಾ ಮಾರ್ಗದಲ್ಲಿ ಸುಖದ ಭ್ರಾಂತಿಯಿಂದ ಮನುಜರು ಅಲೆದಾಡುವರು. ದುರಂತ ಸಂಸಾರ ಬಂಧದಿಂದ ನಾನು ವಿಮುಕ್ತನಾಗಲು ಬಯಸುತ್ತೇನೆ. ಅದಕ್ಕೆ ಆತ್ಮ ಜ್ಞಾನ ಬೇಕು. ಆತ್ಮಜ್ಞಾನಕ್ಕೆ ಸಂನ್ಯಾಸ ಅಗತ್ಯ. ಆದ್ದರಿಂದ ಅಮ್ಮಾ ನಾನು ಸಂನ್ಯಾಸಿಯಾಗುತ್ತೇನೆ.
ಆರ್ಯಾಂಬೆ : ಮಗೂ, ಶಂಕರಾ ಈ ಚಿಕ್ಕ ವಯಸ್ಸಿನಲ್ಲಿ ಸಂನ್ಯಾಸವೇ ನೀನಿನ್ನೂ ಎಂಟು ವರ್ಷದ ಬ್ರಹ್ಮಚಾರಿ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಈ ನಾಲ್ಕರಲ್ಲಿ ಸಂನ್ಯಾಸವು ಕೊನೆಯದು. ಗೃಹಸ್ಥನಾಗಿ ಪಿತೃ ಋಣವನ್ನು ತೀರಿಸಬೇಕು. ಗೃಹಸ್ಥನಿಗೆ ಹೇಳಿದ ಶ್ರೌತಕರ್ಮಗಳನ್ನು ಆಚರಿಸಬೇಕು. ಕೊನೆಯ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಬೇಕು. ಇದು ಹಿಂದಿನಿಂದ ನಡೆದುಕೊಂಡು ಬಂದ ಸಜ್ಜನರ ಪದ್ಧತಿ.
ಶಂಕರರು : ಅಮ್ಮಾ, ಈಗ ನೀನು ಹೇಳುತ್ತಿರುವುದು ಕ್ರಮ ಸಂನ್ಯಾಸಕ್ಕೆ ಸಂಬಂಧಪಟ್ಟಿದ್ದು. ಆದರೆ ಬಾಲ್ಯದಲ್ಲೇ ವೈರಾಗ್ಯ, ಇಂದ್ರಿಯ ನಿಗ್ರಹ, ಸಂಸಾರ ಬಂಧನವನ್ನು ಕಳಚಿಕೊಳ್ಳುವ ತೀವ್ರ ಅಭಿಲಾಷೆ, ಪರಮಾತ್ಮನ ಜ್ಞಾನದತ್ತ ಒಲವು ಇದ್ದರೆ ಬ್ರಹ್ಮಚರ್ಯದಿಂದಲೇ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದು. ಇದೂ ಸಹ ಹಿಂದಿನವರು ಅನುಸರಿಸಿದ ದಾರಿಯಲ್ಲವೇ?
ಆರ್ಯಾಂಬೆ : ಶಂಕರಾ ನನಗೆ ನೀನೊಬ್ಬನೇ ಮಗ. ನೀನು ಸಂನ್ಯಾಸಿಯಾಗಿ ಹೊರಟು ಹೋದರೆ ನಾನು ಯಾರಿಗಾಗಿ ಜೀವಿಸಲಿ. ನಾನು ವೃದ್ಧೆಯಾಗಿರುವೆ, ಹೇಗೆ ಬದುಕಲಿ. ನನ್ನನ್ನು ಬಿಟ್ಟು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂದಿತು? ನನ್ನ ಮೇಲೆ ಮರುಕವಿಲ್ಲವೇ ?
(ಎಂದ ತಾಯಿಯು ಹೃದಯ ಬೇಗುದಿ ತೋಡಿಕೊಂಡಳು. ಶಂಕರರು ಸುಮ್ಮನಿದ್ದು ಯೋಚಿಸತೊಡಗಿದರು. ತಾಯಿಯ ಅನುಮತಿ ಪಡೆಯಲು ಕಾಲ ಕೂಡಿ ಬರುವುದು ಎಂದುಕೊಂಡರು.)
ದೃಶ್ಯ ೧೧ : ಶಂಕರರ ಸಂನ್ಯಾಸ ಸಂಕಲ್ಪ
(ನಾಲ್ಕಾರು ದಿನ ಕಳೆದವು. ಎಂದಿನಂತೆ ಶಂಕರರು ಪೂರ್ಣಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಮೊಸಳೆಯೊಂದು ಶಂಕರರ ಕಾಲನ್ನು ಹಿಡಿಯಿತು.)
ಶಂಕರರು : ಅಮ್ಮಾ ಮೊಸಳೆಯೊಂದು ನನ್ನ ಕಾಲನ್ನು ಹಿಡಿದೆಳೆಯುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಅಮ್ಮಾ ಬಾರಮ್ಮಾ. ಈ ಮೊಸಳೆಯಿಂದ ನನ್ನನ್ನು ಕಾಪಾಡಮ್ಮಾ.
(ದೊಡ್ಡ ಸ್ವರದಲ್ಲಿ ಶಂಕರರು ಕೂಗಿದಾಗ ಒಳಗಿರುವ ತಾಯಿ ಓಡೋಡಿ ಬಂದು ತನ್ನ ಮಗನ ಸ್ಥಿತಿಯನ್ನು ನೋಡಿ ಗಾಬರಿಗೊಂಡು ಅಳುತ್ತಾ)
ಆರ್ಯಾಂಬೆ : ಅಯ್ಯೋ ವಿಧಿಯೇ, ನನ್ನ ಪತಿಯನ್ನು ಕಿತ್ತು ಕೊಂಡು ಹೋದೆ. ಈಗ ಇದ್ದೊಬ್ಬ ಮಗನನ್ನೂ ಕಿತ್ತುಕೊಳ್ಳಲು ಹವಣಿಸುತ್ತಿರುವೆಯಾ, ಹತಭಾಗ್ಯಳಾದ ನನಗಾದರೂ ಮರಣ ಬಂದು ನನ್ನ ಮಗು ಉಳಿಯಬಾರದೇ ಶಿವನೇ ಕಾಪಾಡು.
ಶಂಕರರು : ಅಮ್ಮಾ ನಾನು ಸಂನ್ಯಾಸವನ್ನು ತೆಗೆದುಕೊಂಡರೆ ಈ ಮೊಸಳೆ ನನ್ನನ್ನು ಬಿಡಬಹುದೆಂಬ ನಂಬಿಕೆ ನನಗಿದೆ. ನೀವೀಗ ಸಂನ್ಯಾಸಕ್ಕೆ ಅನುಮತಿಯಿತ್ತರೆ ನಿಮ್ಮ ಆಜ್ಞೆಯಂತೆ ಸಂನ್ಯಾಸ ದೀಕ್ಷೆಗೆ ಕೂಡಲೇ ಸಂಕಲ್ಪವನ್ನು ಮಾಡುತ್ತೇನೆ. ತಡ ಮಾಡಬೇಡಮ್ಮಾ. ಮೊಸಳೆಯು ನನ್ನನ್ನು ಇನ್ನೂ ಆಳದ ಕಡೆಗೆ ಎಳೆಯುತ್ತಿದೆ. ಬೇಗ ಅನುಮತಿ ನೀಡಮ್ಮಾ.
ಆರ್ಯಾಂಬೆ : ಮಗನೇ ನೀನು ಬದುಕಬೇಕು. ಸಂನ್ಯಾಸಿಯಾಗಿಯಾದರೂ ಬದುಕಿದರೆ ಕಣ್ತುಂಬ ನೋಡಬಹುದು. ಶಿವನಿಚ್ಛೆಯಂತೆ ಆಗಲಿ. ನೀನು ಸಂನ್ಯಾಸಿಯಾಗಲು ಒಪ್ಪಿದ್ದೇನೆ. ಶಿವನೇ ನನ್ನ ಮಗನನ್ನು ಕಾಪಾಡು.
(ತಾಯಿಯಿಂದ ಒಪ್ಪಿಗೆ ದೊರೆತ ಕೂಡಲೇ ಶಂಕರರು ಮನಸ್ಸಿನಲ್ಲಿಯೇ ನಾನು ಸಂನ್ಯಸ್ತನಾದೆನು ಎಂದು ಸಂಕಲ್ಪಿಸಿದರು. ಕೂಡಲೇ ಮೊಸಳೆಯು ಕಾಲನ್ನು ಬಿಟ್ಟು ಹೋಯಿತು. ಶಂಕರರು ದಡಕ್ಕೆ ಬಂದರು. ತಾಯಿಯು ಮಗನ ಮೈದಡವಿದರು.)
ಶಂಕರರು : ಅಮ್ಮಾ, ನಾನು ಈಗ ಸಂನ್ಯಾಸಿ. ನೀವು ಯಾವ ಸಮಯದಲ್ಲಿ ನನ್ನನ್ನು ನೆನೆಸಿಕೊಂಡರೂ ನಿಮ್ಮ ಸಮೀಪ ಬರುವೆನು. ಇನ್ನು ಮೇಲೆ ನಮ್ಮ ದಾಯಾದಿಗಳು ನಿಮ್ಮನ್ನು ನೋಡಿಕೊಳ್ಳುತ್ತಾರೆ. ನಮ್ಮ ಆಸ್ತಿಯೆಲ್ಲಾ ಅವರಿಗೇ ಸೇರಲಿ.
ಆರ್ಯಾಂಬೆ : ನೀನು ಸಂನ್ಯಾಸ ಸಂಕಲ್ಪ ಮಾಡಿದ್ದರಿಂದ ಮೊಸಳೆಯು ನಿನ್ನನ್ನು ಬಿಟ್ಟಿತಲ್ಲ ಅಷ್ಟೇ ಸಾಕು. ಸಂನ್ಯಾಸ ಧರ್ಮದಂತೆ ನೀನು ಮನೆ ಬಿಟ್ಟು ಹೊರಡಬಹುದು. ಆದರೆ ನನ್ನದೊಂದು ಕೋರಿಕೆ. ನಾನು ಬಯಸಿದಾಗ ನೀನು ಬರಬೇಕು. ಅಂತ್ಯ ಕಾಲದಲ್ಲಿ ಬಂದು ನಾನು ಮರಣ ಹೊಂದಿದಾಗ ನನ್ನ ಅಂತ್ಯಕ್ರಿಯೆಯನ್ನು ನೀನೇ ಮಾಡಬೇಕು.
ಶಂಕರರು : ನೀವು ಹೇಳಿದಂತೆಯೇ ಮಾಡುವೆನಮ್ಮಾ. ಆದರೆ ನೀವು ವೃದ್ಧೆಯಾದ ನನ್ನನ್ನು ಅನಾಥಳಂತೆ ಬಿಟ್ಟು ಇದ್ದೊಬ್ಬ ಮಗನೂ ಸಂನ್ಯಾಸಿಯಾಗಿ ಹೋದನಲ್ಲಾ ಎಂದು ಕೊರಗಬೇಡಿ. ನಿಮ್ಮ ಅಂತ್ಯಕಾಲದ ಸೇವೆ ಭಾಗ್ಯ ನನಗೆ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಮನಃಪೂರ್ವಕವಾಗಿ ಆಶೀರ್ವಾದ ಮಾಡಮ್ಮಾ (ಎಂದು ನಮಸ್ಕರಿಸುವರು)
ಆರ್ಯಾಂಬೆ : ಮಗನೇ ನಮಗೆ ದೇವರು ಕೊಟ್ಟ ವರ ನೀನು. ಭಗವಂತನ ಮತ್ತು ಲೋಕದ ಸೇವೆಗಾಗಿಯೇ ಹುಟ್ಟಿದವನು ನೀನು ಎಂದುಕೊಳ್ಳುವೆ. ಕೀರ್ತಿಶಾಲಿಯಾಗಿ ಬಾಳು. (ಎಂದು ಆಶೀರ್ವದಿಸುವಳು)
(ಶಂಕರರು ತಾಯಿಯಿಂದ ಆಶೀರ್ವಾದ ಪಡೆದು ದಾಯಾದಿಗಳ ಬಳಿ ಬಂದು)
ಶಂಕರರು : ಕುಲಬಾಂಧವರೇ, ನಾನು ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಲು ಸಂಕಲ್ಪ ಮಾಡಿದ್ದೇನೆ. ಅದಕ್ಕಾಗಿ ಈ ಊರನ್ನು ತೊರೆದು ಹೋಗಬೇಕಾಗಿದೆ. ಇಲ್ಲಿಂದ ನಾಳೆಯೇ ಹೊರಡುತ್ತೇನೆ. ನನ್ನ ತಾಯಿ ಒಬ್ಬಂಟಿಯಾಗುವರು. ಅವರ ರಕ್ಷಣೆಯ ಜವಾಬ್ದಾರಿಯನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ತಲತಲಾಂತರದಿಂದ ಬಂದ ಆಸ್ತಿಯನ್ನೆಲ್ಲಾ ನಿಮಗೇ ಒಪ್ಪಿಸುತ್ತಿದ್ದೇನೆ. ದಯಮಾಡಿ ಸಹಕರಿಸಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ.
(ಮರುದಿನ ಹೊರಡಲು ನಿರ್ಧರಿಸಿ ಶಂಕರರು ಮಲಗುತ್ತಾರೆ. ರಾತ್ರಿ ಕನಸಿನಲ್ಲಿ ಅವರ ಕುಟುಂಬದ ಆರಾಧ್ಯ ದೇವರು ಶ್ರೀ ಕೃಷ್ಣನು ಕಾಣಿಸಿಕೊಂಡು, ಶಂಕರಾ ನೀನು ಪೂರ್ಣಾ ನದಿಯನ್ನು ಬದಲಿಸಿದ್ದರಿಂದ ನದಿಯ ಅಲೆಗಳ ಹೊಡೆತದಿಂದ ನನ್ನ ದೇವಾಲಯಕ್ಕೆ ಹಾನಿಯಾಗುತ್ತಿದೆ. ನೀನೇ ಸ್ಥಳಾಂತರಿಸಬೇಕು ಎಂದಂತಾಯಿತು. ಶಂಕರರು ಹೊರಡುವ ದಿನವೇ ಸ್ಥಳಾಂತರದ ವ್ಯವಸ್ಥೆ ಮಾಡಿದರು. ತಾಯಿಗೆ ನಮಸ್ಕರಿಸಿ ಕಾಲಟಿಯಿಂದ ಹೊರಟರು.)
ಹಿನ್ನೆಲೆ
(ಶಂಕರರು ಗುರುವಿನ ಅನ್ವೇಷಣೆಗಾಗಿ ಆರಾಧ್ಯ ದೇವರಾದ ಶ್ರೀ ಕೃಷ್ಣನನ್ನೇ ಧ್ಯಾನಿಸುತ್ತಾ ಕಾಲಟಿಯಿಂದ ಹೊರಟು ಉತ್ತರಾಭಿಮುಖವಾಗಿ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಅನೇಕ ನದಿ, ವನ, ಗ್ರಾಮ ಇವೆಲ್ಲವನ್ನೂ ದಾಟಿ ನರ್ಮದಾ ತೀರದಲ್ಲಿದ್ದ ಶ್ರೀ ಗೋವಿಂದ ಭಗವತ್ಪಾದರ ಆಶ್ರಮವನ್ನು ತಲುಪಿದರು. ಒಳಗೆ ಧ್ಯಾನಾಸಕ್ತರಾಗಿದ್ದ ಗೋವಿಂದ ಭಗವತ್ಪಾದರನ್ನು ಕಂಡು ಶಂಕರರು ಸಾಷ್ಟಾಂಗ ಪ್ರಣಾಮ ಮಾಡಿ ಪ್ರಾರ್ಥಿಸಿದರು.)
ದೃಶ್ಯ ೧೨ : ಗುರುವಿನ ಅನುಗ್ರಹ
ಶಂಕರರು : ಮಹಾಮಹಿಮರಾದ ಪರಮಪೂಜ್ಯರೇ ಆದಿಶೇಷನ ಅವತಾರವೂ ಪೂರ್ಣಚೈತನ್ಯಸ್ವರೂಪರೂ ಆದ ತಮ್ಮನ್ನು ಭಜಿಸುತ್ತೇನೆ.
(ಎಚ್ಚೆತ್ತ ಗೋವಿಂದ ಭಗವತ್ಪಾದರು ತಮ್ಮೆದುರು ನಿಂತ ಅಂಜಲೀಬದ್ಧ ತೇಜಃ ಪೂರ್ಣ ಬಾಲಕನ ಪ್ರಾರ್ಥನೆಯನ್ನು ಆಲಿಸತೊಡಗಿದರು.)
ವೇದಾಂತಗಳ ಪರಮಾರ್ಥ ತತ್ವ ಪಡೆದಿರುವ ಶ್ರೀಗೌಡಪಾದರ ಶಿಷ್ಯರೂ, ಸರ್ವ ಗುಣ ಸಂಪನ್ನರೂ ಆದ ತಮ್ಮಿಂದ ಬ್ರಹ್ಮ ತತ್ವವನ್ನು ಹೊಂದುವ ಇಚ್ಛೆಯಿಂದ ಬಹುದೂರದಿಂದ ಬಂದು ತಮ್ಮನ್ನೇ ನಿಶ್ಚಿತ ಬುದ್ಧಿಯಿಂದ ಆಶ್ರಯಿಸುತ್ತಿದ್ದೇನೆ. ದಯೆ ತೋರಿ ತಮ್ಮ ಶಿಷ್ಯನನ್ನಾಗಿ ಪರಿಗ್ರಹಿಸಿರೆಂದು ಪ್ರಾರ್ಥಿಸುತ್ತೇನೆ.
ಗೋವಿಂದರು : ನೀನು ಯಾರು ?
ಶಂಕರರು : ಚಿದಾನಂದ ಸ್ವರೂಪನಾದ ಪರಮಾತ್ಮನಾಗಿದ್ದೇನೆ.
(ಗೋವಿಂದರು ಸಂತೋಷಗೊಂಡು)
ಗೋವಿಂದರು : ಅದ್ವೈತ ದರ್ಶನದ ಸಾರವನ್ನು ಒಂದೇ ವಾಕ್ಯದಲ್ಲಿ ನೀನು ಉತ್ತರಿಸಿರುವೆ. ನಿನ್ನನ್ನು ನನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ. ನಿನ್ನಿಚ್ಛೆಯಂತೆ ಬ್ರಹ್ಮ ತತ್ವವನ್ನು ಉಪದೇಶಿಸುತ್ತೇನೆ.
ಹಿನ್ನೆಲೆ
(ಶ್ರೀ ಗೋವಿಂದ ಭಗವತ್ಪಾದರು ಶಂಕರರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಸಂನ್ಯಾಸ ದೀಕ್ಷೆಯನ್ನು ನೀಡಿ ಬ್ರಹ್ಮ ತತ್ವವನ್ನು ಉಪದೇಶಿಸಿದರು. ಶಂಕರರು ಗುರು ಸೇವೆಯಲ್ಲಿ ನಿರತರಾದರು. ಶಂಕರರ ಅಚಲ ಶ್ರದ್ಧೆಯನ್ನು ನೋಡಿ ಸಂತುಷ್ಟರಾದ ಗೋವಿಂದ ಭಗವತ್ಪಾದರು – ‘ಪ್ರಜ್ಞಾನಂ ಬ್ರಹ್ಮ, ‘ಅಹಂ ಬ್ರಹ್ಮಾಸ್ಮಿ, ‘ತತ್ತ್ವಮಸಿ, ಅಯಮಾತ್ಮ ಬ್ರಹ್ಮ ಎಂಬ ನಾಲ್ಕು ಮಹಾ ವಾಕ್ಯಗಳಿಂದ ಪರಬ್ರಹ್ಮೋಪದೇಶವನ್ನು ಮಾಡಿ ವ್ಯಾಸರಿಂದ ರಚಿತವಾದ ಬ್ರಹ್ಮಸೂತ್ರಗಳ ರಹಸ್ಯಾರ್ಥವನ್ನು ತಿಳಿಸಿಕೊಟ್ಟರು.
(ಶಂಕರರು ಜಿತೇಂದ್ರಿಯರಾದ್ದರಿಂದ ಆತ್ಮನಲ್ಲಿ ತಮ್ಮ ಚಿತ್ತವನ್ನು ನೆಲೆ ನಿಲ್ಲಿಸಿ ಎಲ್ಲ ಇಂದ್ರಿಯಗಳನ್ನು ಬಿಗಿ ಹಿಡಿದು ಆಗಾಗ ಸಮಾಧಿ ಸ್ಥಿತಿಯಲ್ಲಿಯೂ ಇರುತ್ತಿದ್ದರು. ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದ ಶಂಕರರಿಗೆ ಗೋವಿಂದ ಭಗವತ್ಪಾದರು ಎಲ್ಲಾ ವಿದ್ಯೆಯನ್ನೂ ಕಲಿಸಿಕೊಟ್ಟರು. ಮಳೆಗಾಲದಲ್ಲಿ ಒಂದು ದಿನ ಗೋವಿಂದ ಭಗವತ್ಪಾದರು ಧ್ಯಾನಾಸಕ್ತರಾಗಿದ್ದಾಗ ಜೋರಾಗಿ ಮಳೆ ಬಂದು ನರ್ಮದಾ ನದಿಯು ಉಕ್ಕಿ ಆಶ್ರಮದೆಡೆಗೆ ಬರುವುದನ್ನು ಕಂಡ ಶಂಕರರು ತಮ್ಮ ಕಮಂಡಲವನ್ನು ಅಭಿಮಂತ್ರಿಸಿ ಪ್ರವಾಹದ ಎದುರಿಗಿಟ್ಟು ನರ್ಮದಾ ನದಿ ದೇವಿಯನ್ನು ಸ್ತುತಿಸುತ್ತಾರೆ.)
ದೃಶ್ಯ ೧೩ : ನರ್ಮದಾ ನದಿದೇವಿಗೆ ಸ್ತುತಿ
ಸಬಿಂದು ಸಿಂದು ಸುಸ್ಖಲತ್ತರಂಗ ಭಂಗ ರಂಜಿತಂ
ದ್ವಿಷತ್ಸು ಪಾಪಜಾತ ಜಾತಕಾದಿ ವಾರಿ ಸಂಯುತಮ್
ಕೃತಾಂತ ದೂತ ಕಾಲಭೂತ ಭೀತಿಹಾರಿ ವರ್ಮದೇ
ತ್ವದೀಯ ಪಾದ ಪಂಕಜಂ ನಮಾಮಿ ದೇವಿ ನರ್ಮದೇ
ತ್ವದಂಬು ಲೀನ ದೀನ ಮೀನ ದಿವ್ಯ ಸಂಪ್ರದಾಯಕಂ
ಕಲೌಮಲೌಘ ಭಾರಹಾರಿ ಸರ್ವತೀರ್ಥ ನಾಯಕಮ್
ಸುಮಚ್ಚ ಕಚ್ಚ ನಕ್ರ ಚಕ್ರ ವಾಕ ಚಕ್ರ ಶರ್ಮದೇ
ತ್ವದೀಯ ಪಾದ ಪಂಕಜಂ ನಮಾಮಿ ದೇವಿ ನರ್ಮದೇ
ಹಿನ್ನೆಲೆ
(ಶಂಕರರು ನರ್ಮದೆಯನ್ನು ಸ್ತುತಿಸಿ ಪ್ರಾರ್ಥಿಸಿದಾಗ ರೌದ್ರಾವತಾರ ತಾಳಿದ್ದ ಪ್ರವಾಹವು ಕಮಂಡಲದೊಳಗೆ ಸೇರಿ ಶಾಂತವಾಯಿತು. ಆಶ್ರಮವಾಸಿಗಳೆಲ್ಲರೂ ಹರ್ಷ ವಿಸ್ಮಯಗಳಿಂದ ಶಂಕರರನ್ನು ಹಾಡಿ ಹೊಗಳಿದರು. ಧ್ಯಾನದಿಂದ ಎಚ್ಚೆತ್ತ ಗೋವಿಂದ ಭಗವತ್ಪಾದರಿಗೆ ವಿಷಯ ತಿಳಿದು ಈ ಬಾಲ ಸಂನ್ಯಾಸಿ ಯೋಗ ಸಿದ್ಧನೆಂದು ತುಂಬಾ ಸಂತೋಷವಾಯಿತು.)
ಗೋವಿಂದರು : ಶಂಕರಾ ನೀನು ಅದ್ವೈತ ವಿದ್ಯೆಯಲ್ಲಿ ವೈದುಷ್ಯವನ್ನು ಯೋಗದಲ್ಲಿ ಸಿದ್ಧಿಯನ್ನು ಬಹಳ ಬೇಗ ಪಡೆದಿರುವೆ. ಸಕಲ ವೇದ ಸಾರವನ್ನೂ ಅರಿತಿರುವೆ. ನಿನ್ನನ್ನು ನೋಡಿ ಸಂತೋಷವಾಗುತ್ತಿದೆ.
ಶಂಕರರು : ಗುರುಗಳೇ ತಾವು ನನ್ನ ಮೇಲೆ ಕೃಪಾ ದೃಷ್ಟಿ ಬೀರಿ ವಿದ್ಯೆಯನ್ನು ಕಲಿಸಿದ್ದೀರಿ. ನಾನು ಧನ್ಯನಾದೆ.
ಗೋವಿಂದರು : ಶಂಕರಾ ನೀನು ಎಲ್ಲಾ ಶಾಸ್ತ್ರಗಳನ್ನೂ ಬಲ್ಲವನಾಗಿರುವೆ. ಇನ್ನು ನಾನು ತಿಳಿಸಿಕೊಡಬೇಕಾಗಿರುವುದು ಏನೂ ಉಳಿದಿಲ್ಲ. ಸನಾತನ ಧರ್ಮಕ್ಕೆ ಬಂದ ದುರ್ದಶೆ ನೋಡಿ ಸಂಕಟವಾಗುತ್ತಿದೆ. ಅದ್ವೈತ ತತ್ತ್ವವನ್ನು ಸರಿಯಾಗಿ ತಿಳಿಸುವವರು ವಿರಳರಾಗಿದ್ದಾರೆ. ನೀನು ಕಾಶಿಗೆ ಹೋಗಿ ಪ್ರಸ್ಥಾನತ್ರಯವೆಂದು ಪ್ರಸಿದ್ಧವಾಗಿರುವ ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳಿಗೆ ಪರಿಶುದ್ಧವಾದ ಭಾಷ್ಯವನ್ನು ರಚಿಸು. ಅದ್ವೈತ ಸಿದ್ಧಾಂತವನ್ನು ಪ್ರತಿಷ್ಠಾಪಿಸು. ನೀನು ಗಳಿಸಿದ ಯೋಗ ಸಾಧನೆಗಳಿಂದ ನೀನು ಇಚ್ಛಿಸಿದ ಸಂಕಲ್ಪ ನೆರವೇರುತ್ತದೆ. ನಿನಗೆ ಶುಭವಾಗಲೆಂದು ಹಾರೈಸುತ್ತೇನೆ.
(ಎಂದು ಆಶೀರ್ವದಿಸಿದರು. ಶಂಕರರು ಗೋವಿಂದ ಭಗವತ್ಪಾದರಿಗೆ ನಮಸ್ಕರಿಸಿ ಗುರುಗಳ ಆದೇಶವನ್ನು ಶಿರಸಾ ಸ್ವೀಕರಿಸಿ ಶ್ರೀ ಕಾಶೀ ಕ್ಷೇತ್ರಕ್ಕೆ ಬಂದು ಪವಿತ್ರ ಗಂಗಾ ನದಿಗೆ ಭಕ್ತಿಯಿಂದ ಕೈ ಮುಗಿದು ಸ್ತುತಿಸಿದರು.
ದೃಶ್ಯ ೧೪ : ಗಂಗಾದೇವಿಗೆ ಸ್ತುತಿ
ದೇವಿ ಸುರೇಶ್ವರಿ ಭಗವತಿ ಗಂಗೇ
ತ್ರಿಭುವನ ತಾರಿಣಿ ತರಲ ತರಂಗೇ
ಶಂಕರ ಮೌಲಿ ವಿಹಾರಿಣಿ ವಿಮಲೇ
ಮಮ ಮತಿರಾಸ್ತಾಂ ತವ ಪದ ಕಮಲೇ
ಭಾಗೀರಥಿ ಸುಖದಾಯಿನಿ ಮಾತಃ
ತವ ಜಲ ಮಹಿಮಾ ನಿಗಮೇ ಖ್ಯಾತಃ
ನಾಹಂ ಜಾನೇ ತವ ಮಹಿಮಾನಂ
ಪಾಹಿ ಕೃಪಾಮಯಿ ಮಾಮ ಜ್ಞಾನಮ್
ಹರಿಪದ ಪಾದ್ಯ ತರಂಗಿಣಿ ಗಂಗೇ
ಹಿಮವಿದು ಮುಕ್ತಾ ಧವಲ ತರಂಗೇ
ದೂರೀಕುರು ಮಮ ದುಷ್ಕೃತಿ ಭಾರಂ
ಕುರು ಕೃಪಯಾ ಭವ ಸಾಗರ ಪಾರಮ್
(ಶಂಕರರು ಸ್ತುತಿಸುತ್ತಾ ಗಂಗಾನದಿಯಲ್ಲಿ ಸ್ನಾನ ಮಾಡಿದರು. ನಂತರ ವಿಶ್ವನಾಥನ ಸನ್ನಿಧಿಗೆ ಬಂದು ಸ್ತುತಿಸಿದರು.)
ದೃಶ್ಯ ೧೫ : ಕಾಶಿ ವಿಶ್ವನಾಥನಿಗೆ ಸ್ತುತಿ
ಗಂಗಾ ತರಂಗ ರಮಣೀಯ ಜಟಾಕಲಾಪಂ
ಗೌರೀ ನಿರಂತರ ವಿಭೂಷಿತ ವಾಮಭಾಗಂ
ನಾರಾಯಣಪ್ರಿಯ ಮನಂಗ ಮದಾಪಹಾರಂ
ವಾರಾಣಸೀ ಪುರಪತಿಂ ಭಜವಿಶ್ವನಾಥಮ್
ವಾಚಾಮಗೋಚರ ಮನೇಕ ಗುಣ ಸ್ವರೂಪಂ
ವಾಗೀಶ ವಿಷ್ಣು ಸುರಸೇವಿತ ಪಾದ ಪೀಠಂ
ವಾಮೇನ ವಿಗ್ರಹ ವರೇಣ ಕಲತ್ರವಂತಂ
ವಾರಾಣಸೀ ಪುರಪತಿಂ ಭಜ ವಿಶ್ವನಾಥಮ್
(ಸ್ತುತಿಸಿ ವಿಶ್ವನಾಥನಿಗೆ ನಮಸ್ಕರಿಸಿದರು)
(ಶಂಕರರು ಕಾಶಿಯಲ್ಲಿ ನೆಲೆಸಿದರು. ಕೆಲವು ದಿನಗಳ ನಂತರ ಒಂದು ದಿನ ಒಬ್ಬ ಬ್ರಾಹ್ಮಣ ವಟು ಬಂದು ಸಾಷ್ಟಾಂಗ ಪ್ರಣಾಮ ಮಾಡುವನು)
ಶಂಕರರು : ನೀನು ಯಾರು ?
ವಟು : ಪೂಜ್ಯರೇ ನಾನು ಚೋಳ ದೇಶದವನು. ಮಹಾತ್ಮರಾದ ಗುರುಗಳನ್ನು ಹುಡುಕುತ್ತಾ ನಾನಾ ಸ್ಥಳಗಳಲ್ಲಿ ಅಲೆದಾಡಿದೆ. ಸಂಸಾರ ಸಾಗರದಲ್ಲಿ ಮುಳುಗಲು ಸರ್ವಥಾ ಇಷ್ಟವಿಲ್ಲ. ತಮ್ಮ ಕೃಪಾಕಟಾಕ್ಷದಿಂದ ನನ್ನನ್ನು ನೋಡಿ ಸ್ವೀಕರಿಸಿ ಉದ್ಧರಿಸಿ.
ಶಂಕರರು : ನಿನ್ನ ತೀವ್ರ ವೈರಾಗ್ಯ ನೋಡಿದರೆ ಸಂನ್ಯಾಸಿಯಾಗಲು ನೀನು ಸಮರ್ಥನಾಗಿರುವೆ. ನಿನಗೆ ಸಂನ್ಯಾಸ ದೀಕ್ಷೆಯನ್ನು ನೀಡುತ್ತೇನೆ. ನೀನೇ ನನ್ನ ಪ್ರಥಮ ಶಿಷ್ಯ.
ವಟು : ಧನ್ಯನಾದೆ ಗುರುವೇ. ತಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು.
(ಶಂಕರರು ವಿಧಿವತ್ತಾಗಿ ವಟು ಸನಂದನನಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿದರು)
(ಪರಶಿವನ ಆಜ್ಞೆಯಂತೆ ದೇವತಾಂಶದವರೆಲ್ಲರೂ ಈ ಭೂಮಿಯಲ್ಲಿ ಜನಿಸಿ ವಿರಕ್ತ್ಯಾದಿ ಗುಣ ಸಂಪನ್ನರಾಗಿ ಲೋಕ ರೀತಿಯನ್ನು ಅನುಸರಿಸಿ ಶ್ರೀ ಶಂಕರ ಭಗವತ್ಪಾದರ ಅವತಾರ ಕಾರ್ಯದ ಸಹಾಯಕ್ಕಾಗಿ ಬಂದು ಶಿಷ್ಯರಾಗಿ ಸೇರಿದರು.
(ಒಂದು ದಿನ ಗಂಗಾ ನದಿಗೆ ಶಂಕರ ಭಗವತ್ಪಾದರು ಶಿಷ್ಯರೊಂದಿಗೆ ಸ್ನಾನಕ್ಕೆ ಹೊರಟರು. ದಾರಿಯಲ್ಲಿ ಎದುರಾಗಿ ನಾಲ್ಕು ನಾಯಿಗಳೊಂದಿಗೆ ಬರುತ್ತಿರುವ ಚಾಂಡಾಲನನ್ನು ಕಂಡು)
ದೃಶ್ಯ ೧೬ : ಚಾಂಡಾಲ ಮತ್ತು ಶಂಕರರು
ಶಂಕರರು : ದಾರಿ ಬಿಡು, ದೂರ ಹೋಗು.
ಚಾಂಡಾಲ : ಸ್ವಾಮೀ, ತಾವೇ ಹೇಳಿ ದೇಹವನ್ನು ದೂರ ಸರಿಸಬೇಕೋ ಅಥವಾ ಆತ್ಮನನ್ನೋ ? ಅನ್ನಮಯವಾದ ದೇಹ ಎಲ್ಲರಿಗೂ ಒಂದೇ. ನನ್ನಲ್ಲಿ ಮತ್ತು ತಮ್ಮಲ್ಲಿರುವ ಆತ್ಮನು ಒಂದೇ ಅಲ್ಲವೇ ದೇವನದಿ ಗಂಗೆಯಲ್ಲಿಯೂ ಚಾಂಡಾಲರ ಬಾವಿಯಲ್ಲೂ ಇರುವ ಸೂರ್ಯನ ಪ್ರತಿಬಿಂಬದಲ್ಲಿ ಯಾವ ಬೇಧವಿದೆ. ಜ್ಞಾನಿಗಳು ಎಲ್ಲರನ್ನೂ ಸಮಾನವಾಗಿ ಕಾಣಬೇಕಲ್ಲವೇ?
ಶಂಕರರು : ಪುರುಷೋತ್ತಮ ನೀನು ಆತ್ಮಜ್ಞಾನಿಯೇ ಆಗಿರುವೆ. ಯಾವ ಜ್ಞಾನಿಗೆ ಜಗತ್ತೆಲ್ಲವೂ ಯಾವಾಗಲೂ ಆತ್ಮ ಸ್ವರೂಪವಾಗಿ ತೋರುವುದೋ ಅವನು ನಮಸ್ಕಾರಕ್ಕೆ ಯೋಗ್ಯನು. ಶಿವ ವಿಷ್ಣುವಿನಿಂದ ಆರಂಭಿಸಿ ಪಶು ಪಕ್ಷಿ ಕೀಟಗಳವರೆಗೂ ಸ್ಫುರಿಸುವ ಚೈತನ್ಯ ಒಂದೇ. ಆ ಚೈತನ್ಯವೇ ನಾನೆಂಬ ದೃಢತೆಯಿರುವ ನಿಮ್ಮನ್ನು ನನ್ನ ಕಣ್ಣು ತೆರೆಯಿಸಿದ ಗುರುವೆಂದೇ ತಿಳಿಯುತ್ತೇನೆ.
(ಎಂದು ಹೇಳಿ ಕೂಡಲೇ ಶಂಕರರು ಆತನಿಗೆ ನಮಸ್ಕರಿಸಿದರು. ಅಷ್ಟರಲ್ಲಿ ಚಾಂಡಾಲನ ಸ್ಥಾನದಲ್ಲಿ ನಾಲ್ಕು ವೇದಗಳಿಂದ ಕೂಡಿದ ಸಾಕ್ಷಾತ್ ಪರಮೇಶ್ವರನೇ ನಿಂತಿದ್ದನು. ಶಂಕರರು ಆಶ್ಚರ್ಯದಿಂದ ಹರ್ಷಿತರಾಗಿ ಭಯ ಭಕ್ತಿಗಳಿಂದ ಶಿವನನ್ನು ಸ್ತುತಿಸಿದರು.
ಶಂಕರರು :
ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿ – ಪಿಪೀಲಿಕಾಂತ – ತನುಷು ಪ್ರೋತಾಜಗತ್ಸಾಕ್ಷಿಣೇ |
ಸೈವಾಹಂ ನಚ ದೃಶ್ಯ ವಸ್ತ್ವಿತಿ ದೃಢ ಪ್ರಜ್ಞಾಪಿಯಸ್ಯಾಸ್ತಿಚೇತ್
ಚಾಂಡಾಲೋಸ್ತು ಸತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||೧||
ಬ್ರಹ್ಮೈವಾಹಮಿದಂ ಜಗಚ್ಚಸಕಲಂ ಚಿನ್ಮಾತ್ರ ವಿಸ್ತಾರಿತಂ
ಸರ್ವಂ ಚೈತದ ವಿದ್ಯಯಾ ತ್ರಿಗುಣಯಾ ಶೇಷಂ ಮಯಾಕಲ್ಪಿತಮ್ |
ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಾಂಡಾಲೋಸ್ತು ಸತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||೨||
ದೃಷ್ಟಿತ್ರಯ ಸಂಪನ್ನನಾಗಿರುವ ಹೇ ಸರ್ವಾತ್ಮ ಪರಮಾತ್ಮನೇ, ದೇಹದ ದೃಷ್ಟಿಯಿಂದ ನಾನು ನಿನ್ನ ದಾಸನಾಗಿದ್ದೇನೆ. ನಿನ್ನ ಅಂಶದಿಂದ ಜನಿಸಿರುವ ನಾನು ಆ ದೃಷ್ಟಿಯಿಂದ ಜೀವನಾಗಿದ್ದೇನೆ. ಈ ಉಪಾಧಿಗಳನ್ನೆಲ್ಲಾ ನಿರಾಕರಿಸಿ ಪಾರಮಾರ್ಥಿಕ ಸ್ವರೂಪದಿಂದ ನಾನು ನೀನೇ ಆಗಿರುತ್ತೇನೆ. ಇದೇ ಸರ್ವ ಶಾಸ್ತ್ರಗಳ ಪಾರಮಾರ್ಥಿಕ ಸಿದ್ಧಾಂತ ತತ್ತ್ವಾರ್ಥವು ಎಂದು ನಾನು ನಿಶ್ಚಯವುಳ್ಳವನಾಗಿದ್ದೇನೆ. ಮಹಾದೇವಾ ನಿನಗೆ ನಮಸ್ಕರಿಸುತ್ತಿದ್ದೇನೆ.
ಶಿವ : ವತ್ಸಾ, ನಿನ್ನ ಜ್ಞಾನ ನಿಷ್ಠೆಯನ್ನು ಪರೀಕ್ಷಿಸಿದೆ. ಬಾದರಾಯಣನ ಬ್ರಹ್ಮಸೂತ್ರಗಳಿಗೆ ಕಲಿದೋಷದಿಂದ ಜನರು ತಮಗೆ ತೋರಿದಂತೆ ವ್ಯಾಖ್ಯಾನ ಮಾಡಿ ಪರತತ್ವವನ್ನು ಅರಿಯಲಾರದೆ ಆತನ ಸಿದ್ಧಾಂತವನ್ನು ಕಲುಷಿತಗೊಳಿಸುತ್ತಿದ್ದಾರೆ. ನೀನು ಅಂತಹ ಕುವ್ಯಾಖ್ಯಾನಗಳನ್ನು ಖಂಡಿಸಿ ಶ್ರುತಿ ಸಮ್ಮತ ಯುಕ್ತಿಗಳಿಂದ ಆ ಸೂತ್ರಗಳಿಗೆ ಭಾಷ್ಯವನ್ನು ರಚಿಸು. ಸತ್ಯವಾದ ಸಿದ್ಧಾಂತವನ್ನು ಸ್ಥಾಪಿಸು. ಬಾದರಾಯಣ ಸಮ್ಮತವಾದ ಅದ್ವೈತ ಸಿದ್ಧಾಂತವನ್ನು ಪ್ರಚಾರ ಮಾಡು. ಅಜ್ಞಾನವೆಂಬ ಕತ್ತಲೆಗೆ ಸೂರ್ಯ ಸದೃಶರಾದ ನಿನ್ನ ಶಿಷ್ಯರನ್ನು ಅಲ್ಲಲ್ಲಿ ನಿಯಮಿಸು. ಈ ಜಗತ್ತಿನಲ್ಲಿ ನಿನ್ನ ಕರ್ತವ್ಯ ಮುಗಿದ ನಂತರ ನನ್ನಲ್ಲಿ ಸೇರಿಕೊಳ್ಳುವೆ.
(ಎಂದು ಪರಶಿವನು ಅದೃಶ್ಯನಾದನು.)
ಹಿನ್ನೆಲೆ
(ಪರಶಿವನ ಆದೇಶದಂತೆ ಭಗವತ್ಪಾದ ಶಂಕರರು ಬದರೀ ಕ್ಷೇತ್ರಕ್ಕೆ ಬಂದರು. ಬದರಿಯ ಪ್ರಧಾನ ದೇವಾಲಯದಲ್ಲಿ ನಾರಾಯಣನ ವಿಗ್ರಹ ಕಾಣದೆ, ತಾವೇ ಸ್ವತಃ ಪತ್ತೆ ಮಾಡಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ವ್ಯವಸ್ಥೆ ಮಾಡಿದರು. ನಂತರ ಬದರಿಕಾಶ್ರಮಕ್ಕೆ ಹೋದರು. ಅಲ್ಲಿರುವ ಬ್ರಹ್ಮರ್ಷಿಗಳೊಡನೆ ಉಪನಿಷತ್ತುಗಳ ತಾತ್ಪರ್ಯವೇನೆಂಬುದನ್ನು ಬಹು ವಿಧವಾಗಿ ಸಮಾಲೋಚಿಸಿ ಅದ್ವಯಾತ್ಮ ತತ್ತ್ವವನ್ನು ಹಸ್ತಗತವಾಗಿ ಮಾಡುವಂಥ ಶ್ರೀ ಬ್ರಹ್ಮಸೂತ್ರ, ಉಪನಿಷತ್, ಶ್ರೀಮದ್ಭಗವದ್ಗೀತೆ, ವಿಷ್ಣು ಸಹಸ್ರನಾಮ ಸ್ತೋತ್ರ, ನೃಸಿಂಹತಾಪನೀಯವೆಂಬ ಉಪನಿಷತ್ತು, ಸನತ್ಸು ಜಾತೀಯ ಮುಂತಾದ ನಿಬಂಧಗಳಿಗೂ ಮತ್ತು ಈಶಾದಿ ದಶೋಪನಿಷತ್ತುಗಳಿಗೂ ಯಥಾರ್ಥ ತತ್ತ್ವ ಬೋಧಕಗಳಾದ ಸದ್ಭಾಷ್ಯಗಳನ್ನು ರಚಿಸಿದರು. ಬದರಿಕಾಶ್ರಮದ ಬ್ರಹ್ಮರ್ಷಿಗಳು ಭಗವತ್ಪಾದ ಶಂಕರರು ರಚಿಸಿದ ಸದ್ಭಾಷ್ಯಗಳನ್ನು ಓದಿ ಮುಕ್ತಕಂಠದಿಂದ ಪ್ರಶಂಸಿಸಿ ಅವರನ್ನು ಬೀಳ್ಕೊಟ್ಟರು. ಬದರಿಯಿಂದ ಹೊರಟ ಭಗವತ್ಪಾದ ಶಂಕರರು ಕಾಶಿಗೆ ಬಂದ ನಂತರ ಕಾಶಿಯ ವಿದ್ವಜ್ಜನರು ದೂರ ಪ್ರದೇಶಗಳ ವಿರಕ್ತರು ಜಿಜ್ಞಾಸುಗಳು ಬಂದು ಶಿಷ್ಯರಾದರು. ತಾವು ಬರೆದ ಭಾಷ್ಯವನ್ನು ಶಿಷ್ಯರೆಲ್ಲರಿಗೂ ಗಂಗಾ ನದಿ ತೀರದಲ್ಲಿ ಪಾಠ ಮಾಡುತ್ತಿದ್ದರು. ಅಪಾರ ಗುರು ಭಕ್ತಿ ಹೊಂದಿದ್ದ ಸನಂದನನು ಒಮ್ಮೆ ಗಂಗಾನದಿಯ ಆಚೆ ದಡದಲ್ಲಿದ್ದಾಗ ಶಂಕರರು ಕರೆದ ಧ್ವನಿಯನ್ನು ಕೇಳಿದ ಕೂಡಲೇ ಗಂಗೆಯ ನೀರಿನ ಮೇಲೆ ನಡೆದೇ ಹೊರಟಾಗ ಅವನ ಗುರುಭಕ್ತಿಯನ್ನು ಮೆಚ್ಚಿದ ಗಂಗಾದೇವಿ ಅವನು ಹೆಜ್ಜೆ ಇಡುವಾಗ ಆಸರೆಯಾಗಿ ಕಮಲವನ್ನು ನಿರ್ಮಿಸಿದಳು. ಕಮಲದ ಮೇಲೆ ನಡೆದು ಬಂದ ಸನಂದನನನ್ನು ಕಂಡು ಭಗವತ್ಪಾದ ಶಂಕರರು ಪ್ರೀತಿಯಿಂದ ಪದ್ಮಪಾದನೆಂದು ಹೆಸರಿಟ್ಟು ಆಶೀರ್ವದಿಸಿದರು.)
ದೃಶ್ಯ ೧೭ : ಭಜಗೋವಿಂದಂ
(ಭಗವತ್ಪಾದ ಶಂಕರರು ಶಿಷ್ಯರೊಂದಿಗೆ ಗಂಗಾ ನದಿ ತೀರದಲ್ಲಿ ಸಂಚಾರದಲ್ಲಿದ್ದಾಗ ಒಬ್ಬ ವೃದ್ಧನು ಡುಕೃಙ್ಕರಣೆ ಎಂದು ವ್ಯಾಕರಣ ಅಭ್ಯಾಸ ಮಾಡುತ್ತಿದ್ದ)
ವೃದ್ಧ : ಡುಕೃಙ್ಕರಣೆ ಡುಕೃಙ್ಕರಣೆ ಡುಕೃಙ್ಕರಣೆ
ಶಂಕರರು : ಹಿರಿಯರೇ, ಈ ವಯಸ್ಸಿನಲ್ಲಿ ವ್ಯಾಕರಣ ಅಭ್ಯಾಸ ಮಾಡುವಿರಲ್ಲಾ, ನಿಮಗೇಕೆ ಈ ಮೂಢತನ. ನಿಮಗೆ ಈಗ ವಿದ್ಯಾಭ್ಯಾಸ ಮಾಡುವ ಕಾಲವಲ್ಲ. ಈ ಕೊನೆಗಾಲದಲ್ಲಿ ಡುಕೃಙ್ಕರಣೆ ನಿಮ್ಮನ್ನು ರಕ್ಷಿಸುವುದಿಲ್ಲ. ಗೋವಿಂದನನ್ನು ಭಜಿಸಿ.
ಭಜ ಗೋವಿಂದಮ್ ಭಜ ಗೋವಿಂದಮ್
ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕೃಙ್ಕರಣೆ ||
ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ |
ಯಲ್ಲಭಸೇ ನಿಜ ಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ ||
ಅಂಗಂ ಗಲಿತಂ ಪಲಿತಂ ಮುಂಡಂ
ದಶನ ವಿಹೀನಂ ಜಾತಂ ತುಂಡಮ್ |
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಮ್ ||
ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯ ವಿವೇಕ ವಿಚಾರಮ್ |
ಜಾಪ್ಯಸಮೇತ ಸಮಾಧಿ ವಿಧಾನಂ
ಕುರ್ವವಧಾನಂ ಮಹದವಧಾನಂ ||
ಗುರುಚರಣಾಂಭುಜ ನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ |
ಸೇಂದ್ರಿಯ ಮಾನಸ ನಿಯಮಾದೇವಂ
ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಂ ||
ದೃಶ್ಯ ೧೮ : ಶ್ರೀ ವೇದವ್ಯಾಸರ ದರ್ಶನ
(ಶಂಕರರು ಒಮ್ಮೆ ಗಂಗಾ ತೀರದಲ್ಲಿ ಬ್ರಹ್ಮಸೂತ್ರ ಭಾಷ್ಯದ ಪಾಠ ಮುಗಿಸಿ ಏಳುವಷ್ಟರಲ್ಲಿ ವೃದ್ಧ ಬ್ರಾಹ್ಮಣನೊಬ್ಬ ಬಂದು)
ವೃದ್ಧ ಬ್ರಾಹ್ಮಣ : ನೀನು ಯಾರು ಇಲ್ಲಿ ಯಾವ ಪಾಠ ನಡೆಯುತ್ತಿದೆ ?
ಪದ್ಮಪಾದರು : ಹಿರಿಯರೇ ಇವರು ನಮ್ಮ ಗುರುಗಳು ಆಚಾರ್ಯ ಭಗವತ್ಪಾದ ಶಂಕರರು. ಸಮಸ್ತ ಉಪನಿಷತ್ತುಗಳ ಅರ್ಥವನ್ನು ಸಂಪ್ರದಾಯ ಬದ್ಧವಾಗಿ ಬಲ್ಲವರು ಶಾರೀರಕ ಸೂತ್ರಗಳೆಂದು ಪ್ರಸಿದ್ಧವಾಗಿರುವ ವ್ಯಾಸರು ಬರೆದ ಬ್ರಹ್ಮ ಸೂತ್ರಗಳಿಗೆ ಭಾಷ್ಯವನ್ನು ರಚಿಸಿದ್ದಾರೆ. ಇದು ವಿದ್ವತ್ ಜನ ಮಾನ್ಯವಾಗಿದೆ. ಅಂತಹ ಬ್ರಹ್ಮ ಸೂತ್ರ ಭಾಷ್ಯದ ಪಾಠವು ನಡೆಯುತ್ತಿದೆ.
(ವೃದ್ಧ ಬ್ರಾಹ್ಮಣನು ಭಗವತ್ಪಾದ ಶಂಕರರನ್ನು ಉದ್ದೇಶಿಸಿ)
ವೃದ್ಧ ಬ್ರಾಹ್ಮಣ : ನೀನು ಬ್ರಹ್ಮಸೂತ್ರಗಳ ಅರ್ಥವನ್ನು ಸರಿಯಾಗಿ ತಿಳಿದಿರುವೆಯಾ ? ಹಾಗಾದರೆ ವ್ಯಾಖ್ಯಾನ ಮಾಡಿ ಹೇಳು ನೋಡೋಣ.
ಶಂಕರರು : ಸೂತ್ರಾರ್ಥ ತಿಳಿದಿರುವ ಗುರುಗಳಿಗೆಲ್ಲಾ ನನ್ನ ಪ್ರಣಾಮಗಳು. ಸ್ವಾಮೀ ಬ್ರಹ್ಮಸೂತ್ರಗಳ ಅರ್ಥವನ್ನು ಬರೆದಿರುವೆನೆಂಬ ಅಹಂಕಾರವು ನನಗಿಲ್ಲ. ಯಾವ ಸೂತ್ರದ ಅರ್ಥವನ್ನು ತಿಳಿಯಬೇಕೆಂದು ನೀವು ಬಯಸಿದರೆ ಅದನ್ನು ತಿಳಿದ ಮಟ್ಟಿಗೆ ವಿವರಿಸುತ್ತೇನೆ.
(ಎಂದು ವಿನಯದಿಂದ ಉತ್ತರಿಸಿದರು)
ವೃದ್ಧ ಬ್ರಾಹ್ಮಣ : ಬ್ರಹ್ಮಸೂತ್ರದ ಮೂರನೆಯ ಅಧ್ಯಾಯದ ಆರಂಭದಲ್ಲಿ ಬರುವ ತದಂತರ ಪ್ರತಿಪತ್ತೌರಂಹತಿ ಸಂಪರಿಷ್ವಕ್ತಃ ಪ್ರಶ್ನ ನಿರೂಪಣಾಭ್ಯಾಮ್ ಎಂಬ ಸೂತ್ರದ ಅರ್ಥವನ್ನು ಸ್ವಲ್ಪ ವಿವರಿಸಿ ಹೇಳು.
ಶಂಕರರು : ಜೀವನು ಇನ್ನೊಂದು ದೇಹವನ್ನು ಪ್ರಾಣ, ಸೂಕ್ಷ್ಮೇಂದ್ರಿಯಗಳು, ಮನಸ್ಸು, ಅವಿದ್ಯೆ ಧರ್ಮಾ ಧರ್ಮ ಜನ್ಮಾಂತರದ ಸಂಸ್ಕಾರ – ಇವುಗಳೊಡನೆ ಹೊರಟು ಸೇರುತ್ತಾನೆಂದು ಬೃಹದಾರಣ್ಯ ಕೋಪನಿಷತ್ತು ತಿಳಿಸಿಕೊಡುತ್ತದೆ. ಆದರೆ ಸೂಕ್ಷ್ಮ ಭೂತಗಳೊಡನೆ ಹೋಗುವುದರ ಬಗ್ಗೆ ಅಲ್ಲಿ ವಿವರಣೆ ಕಂಡು ಬರುವುದಿಲ್ಲ. ಆದ ಕಾರಣ ದೇಹವು ಹುಟ್ಟುವ ಸ್ಥಳದಲ್ಲಿ ಪಂಚಭೂತಗಳು ಇದ್ದೇ ಇರುವುದರಿಂದ ಜೀವನು ಅವುಗಳೊಡನೆ ಹೋಗುವ ಅಗತ್ಯವಿಲ್ಲ ಎನ್ನುವ ತಪ್ಪು ತೀರ್ಮಾನಕ್ಕೆ ಅವಕಾಶವಿದೆ. ಇದನ್ನು ನಿರಾಕರಿಸುವುದಕ್ಕಾಗಿ ತಾವು ಕೇಳುತ್ತಿರುವ ತದಂತರ ಪ್ರತಿಪತ್ತೌರಂಹತಿ ಸೂತ್ರವು ಹೊರಟಿದೆ. ತದಂತರ ಪ್ರತಿಪತ್ತೌ ಇನ್ನೊಂದು ದೇಹವನ್ನು ಪ್ರವೇಶಿಸುವಾಗ ಸಂಪರಿಷ್ವಕ್ತಃ ದೇಹಕ್ಕೆ ಮೂಲಕಾರಣವಾದ ಸೂಕ್ಷ್ಮ ಪಂಚಭೂತಗಳೊಡನೆ ರಂಹತಿ ಹೋಗುತ್ತಾನೆ. ಪ್ರಶ್ನ ನಿರೂಪಣಾಭ್ಯಾಮ್ ಇದು ಛಾಂದೋಗ್ಯೋಪನಿಷತ್ತಿನಲ್ಲಿ ಬರುವ ಪ್ರಶ್ನೋತ್ತರಗಳಿಂದ ತಿಳಿದು ಬರುತ್ತದೆ.
(ಭಗವತ್ಪಾದ ಶಂಕರರ ಮತ್ತು ವೃದ್ಧ ಬ್ರಾಹ್ಮಣನ ನಡುವೆ ಭಾರೀ ವಾಗ್ವಾದ ನಡೆಯುತ್ತಿತ್ತು. ಇವರೀರ್ವರ ಮಾತಿನ ವೈಖರಿಯನ್ನು ಗಮನಿಸುತ್ತಿದ್ದ ಪದ್ಮಪಾದರು ಇಬ್ಬರಿಗೂ ನಮಸ್ಕರಿಸಿ)
ಪದ್ಮಪಾದರು : ಒಬ್ಬರು ಸಾಕ್ಷಾತ್ ಸದಾಶಿವನೇ ಆಗಿ ಇನ್ನೊಬ್ಬರು ನಾರಾಯಣನ ಅವತಾರವಾದ ವ್ಯಾಸ ಮಹರ್ಷಿಗಳೇ ಆಗಿದ್ದೀರಿ. ಹೀಗಿರುವಾಗ ನಮ್ಮಂತಹ ಶಿಷ್ಯರ ಪಾಡೇನು ?
(ಭಗವತ್ಪಾದ ಶಂಕರರು ಎಲ್ಲ ಪ್ರಶ್ನೆಗಳಿಗೂ ಸಮಂಜಸವಾಗಿ ಉತ್ತರಿಸಿ ತಕ್ಷಣ ವಾದವನ್ನು ನಿಲ್ಲಿಸಿ ವೃದ್ಧ ಬ್ರಾಹ್ಮಣರಿಗೆ ನಮಸ್ಕರಿಸುತ್ತ)
ಶಂಕರರು : ಪೂಜ್ಯರೇ, ತಮಗೆ ಸಾಷ್ಟಾಂಗ ಪ್ರಣಾಮಗಳು. ನನ್ನನ್ನು ಕ್ಷಮಿಸಿ. ದಯಮಾಡಿ ತಮ್ಮ ನಿಜರೂಪವನ್ನು ತೋರಿಸಿ ನನ್ನನ್ನು ಅನುಗ್ರಹಿಸಿರಿ.
(ಎಂದು ಪ್ರಾರ್ಥಿಸಿದಾಗ ವ್ಯಾಸ ಮಹರ್ಷಿಗಳು ನಿಜರೂಪ ತೋರಿದರು. ಶಂಕರರು ಮತ್ತೊಮ್ಮೆ ನಮಸ್ಕರಿಸಿದರು)
ಶಂಕರರು : ಪೂಜ್ಯ ಮಹರ್ಷಿಗಳೇ, ತಾವು ಹದಿನೆಂಟು ಪುರಾಣಗಳನ್ನು ಬರೆದು ವೇದ ರಾಶಿಯನ್ನು ನಾಲ್ಕು ವಿಭಾಗ ಮಾಡಿ ಮತ್ತು ಮಹಾಭಾರತವನ್ನು ರಚಿಸಿದ ಲೋಕೋಪಕಾರವು ಮಹತ್ತರವಾಗಿದೆ. ತಮ್ಮ ಗ್ರಂಥಗಳಲ್ಲಿ ಭೂತ-ವರ್ತಮಾನಗಳ ಜೊತೆಗೆ ಭವಿಷ್ಯತ್ತಿಗೆ ಸಂಬಂಧಿಸಿದ ವಿಷಯಗಳನ್ನೂ ನೋಡಬಹುದು. ಬೇರೆ ಯಾರಲ್ಲೂ ಕಾಣಸಿಗದ ವ್ಯಕ್ತಿತ್ವವನ್ನು ಹೊಂದಿರುವ ತಮ್ಮ ದರ್ಶನವಾದದ್ದು ನನ್ನ ಸುಕೃತ.
(ಎಂದ ಶಂಕರರು ತಾವು ರಚಿಸಿದ ಬ್ರಹ್ಮಸೂತ್ರ ಭಾಷ್ಯವನ್ನು ವ್ಯಾಸರಿಗೆ ಒಪ್ಪಿಸಿದರು. ವ್ಯಾಸರು ಅದನ್ನು ಪರಿಶೀಲಿಸಿ ಸಂತೋಷಗೊಂಡು)
ವ್ಯಾಸರು : ವತ್ಸಾ, ಗೋವಿಂದ ಭಗವತ್ಪಾದರ ಶಿಷ್ಯನಾದ ನೀನು ಪರಮಶ್ರೇಷ್ಠ ವಿದ್ವಾಂಸನಾಗಿರುವೆ. ಪೂರ್ವ ಮೀಮಾಂಸಾ ಶಾಸ್ತ್ರದಲ್ಲಿರುವ ತಲಸ್ಪರ್ಶಿ ಜ್ಞಾನ, ವ್ಯಾಕರಣ ಶಾಸ್ತ್ರದಲ್ಲಿರುವ ಆಳವಾದ ಅರಿವು ನಿನ್ನ ಭಾಷ್ಯಾಧ್ಯಯನ ಮಾಡಿದವರಿಗೆಲ್ಲಾ ಗೊತ್ತಾಗುತ್ತದೆ. ವಿಸ್ತೃತವಾದ ಅರ್ಥವನ್ನೊಳಗೊಂಡ ಸೂತ್ರಗಳ ರಚನೆಯು ಎಷ್ಟು ಕಷ್ಟಕರವೋ ಅಷ್ಟೇ ಕಷ್ಟ ಭಾಷ್ಯ ಬರೆಯುವವರಿಗೂ ಇದೆ. ನನ್ನ ಸೂತ್ರಗಳಿಗೆ ಅನೇಕರು ವ್ಯಾಖ್ಯಾನ ಬರೆದಿದ್ದಾರೆ. ಆದರೆ ಅವುಗಳಲ್ಲಿ ನನ್ನ ಅಭಿಪ್ರಾಯ ವ್ಯಕ್ತವಾಗಿಲ್ಲ. ಪ್ರಸನ್ನ ಗಂಭೀರವಾದ ಈ ಭಾಷ್ಯದಲ್ಲಿ ಅಪವ್ಯಾಖ್ಯಾನಗಳನ್ನು ನಿರಾಕರಿಸಿ ನನ್ನ ಅಂತರಂಗವನ್ನು ನೀನು ತೆರೆದಿಟ್ಟಿರುವೆ. ಉಪನಿಷತ್ ಪ್ರತಿಪಾದ್ಯವಾದ ಅದ್ವಿತೀಯ ಬ್ರಹ್ಮದ ಬಗ್ಗೆ ನಾನು ಸೂತ್ರಗಳಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದನ್ನು ನೀನು ವಿಸ್ತಾರವಾಗಿ ಯುಕ್ತಿ ಯುಕ್ತವಾಗಿ ಸಕಲ ವಿದ್ವತ್ ಜನರೂ ತಲೆದೂಗುವಂತೆ ಬರೆದಿರುವೆ. ಈ ಭಾಷ್ಯರತ್ನವು ಸೂರ್ಯ ಚಂದ್ರ ನಕ್ಷತ್ರವಿರುವವರೆಗೂ ವಿರಾಜಿಸಲಿ. ಅಪೂರ್ವವಾದ ಈ ಗ್ರಂಥಗಳನ್ನು ನೋಡಿ ನನಗೆ ಪರಮಾನಂದವಾಗಿದೆ.
ಶಂಕರರು : ಪೂಜ್ಯ ಮಹರ್ಷಿಗಳೇ, ಧನ್ಯನಾದೆ. ನಾನು ಉಪನಿಷದ್ಭಾಷ್ಯಗಳನ್ನೂ ಮತ್ತಿತರ ಗ್ರಂಥಗಳನ್ನೂ ರಚಿಸಿದ್ದೇನೆ. ಶಿಷ್ಯರಿಗೆ ಅಧ್ಯಾಪನವನ್ನೂ ಮಾಡಿದ್ದೇನೆ. ನನ್ನ ಕರ್ತವ್ಯವು ಮುಗಿಯಿತು. ನನ್ನ ಪರಮಾಯುಷ್ಯವಾದ ಹದಿನಾರು ವರ್ಷಗಳು ಮುಗಿಯುತ್ತಾ ಬಂದಿದೆ. ನಾನು ಈ ದೇಹವನ್ನು ತ್ಯಜಿಸುವೆನು. ನನ್ನನ್ನು ಅನುಗ್ರಹಿಸಿರಿ.
(ಎಂದು ನಮಸ್ಕರಿಸುತ್ತಾರೆ. ವ್ಯಾಸರು ಸ್ವಲ್ಪ ಹೊತ್ತು ಯೋಚಿಸಿ)
ವ್ಯಾಸರು : ವತ್ಸಾ, ನೀನು ಮಾಡಬೇಕಾದ ಕಾರ್ಯವು ಇನ್ನೂ ಇದೆ. ಭೇದ ವಾದಿಗಳನ್ನು ಜಯಿಸಿ ಸಮ್ಯಗ್ದರ್ಶನ ಪರವಾದ ಗ್ರಂಥಗಳನ್ನು ರಚಿಸು. ಪರಮೋತ್ತಮವಾದ ಅದ್ವೈತ ಸಿದ್ಧಾಂತವನ್ನು ಲೋಕದಲ್ಲಿ ಪ್ರತಿಷ್ಠೆ ಮಾಡು. ಮೋಕ್ಷ ಶಾಸ್ತ್ರವನ್ನು ರಕ್ಷಿಸಿ ಲೋಕೋಪಕಾರ ಮಾಡು. ಈಗ ಪರಶಿವನ ಆಜ್ಞೆಯಂತೆ ಇನ್ನೂ ಹದಿನಾರು ವರ್ಷಗಳ ಆಯಸ್ಸು ನಿನಗೆ ಬರಲಿ. ಶುಭವಾಗಲಿ.
ಹಿನ್ನೆಲೆ
(ಎಂದು ಹಾರೈಸಿ ವ್ಯಾಸರು ಅಂತರ್ಧಾನರಾದರು. ವ್ಯಾಸರ ಆದೇಶದಂತೆ ಶಂಕರರು ಮೋಕ್ಷ ಶಾಸ್ತ್ರದ ಬಗ್ಗೆ ವಿಚಾರ ವಿನಿಮಯ ಮಾಡಲು ಮತ್ತು ತಮ್ಮ ಭಾಷ್ಯಕ್ಕೆ ವಾರ್ತಿಕವನ್ನು ಬರೆಸಲು ಕರ್ಮಕಾಂಡದಲ್ಲಿ ಧುರೀಣರಾದ ಕುಮಾರಿಲ ಭಟ್ಟರನ್ನು ಭೇಟಿಯಾಗಲು ಶಿಷ್ಯರೊಂದಿಗೆ ಪ್ರಯಾಗಕ್ಕೆ ಹೊರಟರು.)
(ಮೀಮಾಂಸಾ ಶಾಸ್ತ್ರದಲ್ಲಿ ವಿಖ್ಯಾತಿ ಗಳಿಸಿದ್ದ ಕುಮಾರಿಲ ಭಟ್ಟರು ವೇದಗಳು ಪ್ರಮಾಣವಾಗಿದ್ದರೆ ನನಗೇನೂ ಆಗದಿರಲಿ ಎಂದು ಘೋಷಿಸಿ ಪರ್ವತದ ತುದಿಯಿಂದ ಧುಮುಕಿ ಹತ್ತಿಯಂತೆ ಕ್ಷೇಮವಾಗಿ ಬಿದ್ದು ವೇದ ಪ್ರಾಮಾಣ್ಯವನ್ನು ಲೋಕಕ್ಕೆ ತೋರಿಸಿ ಕೊಟ್ಟ ಮಹಾನುಭಾವರು. ಸನಾತನ ಧರ್ಮದ ಮೇಲೆ ಕರ್ಮಕಾಂಡದ ಬಗ್ಗೆ ಬೌದ್ಧರು ಮಾಡಿದ ಆಕ್ಷೇಪಗಳಿಗೆ ಬೌದ್ಧರು ತತ್ತರಿಸುವಂತೆ ಉತ್ತರ ನೀಡಿ ವೈದಿಕ ಧರ್ಮವು ಪ್ರಜ್ವಲಿಸುವಂತೆ ಮಾಡಿದವರು. ಅಗಾಧ ಪಾಂಡಿತ್ಯವನ್ನು ಹೊಂದಿದ ಕುಮಾರಿಲರು ವೇದದ ರಕ್ಷಣೆಗಾಗಿ ಬೌದ್ಧ ವಿದ್ಯಾರ್ಥಿಯಾಗಿ ನಾಸ್ತಿಕ ಸಿದ್ಧಾಂತದ ರಹಸ್ಯಗಳನ್ನು ತಿಳಿದು ಗ್ರಂಥ ಮತ್ತು ವಾದಗಳಿಂದ ಬೌದ್ಧ ದರ್ಶನ ತಲೆ ಎತ್ತದಂತೆ ಮಾಡಿದವರು. ಧರ್ಮಶಾಸ್ತ್ರಗಳನ್ನು ಬಲ್ಲ ಪರಮ ಪ್ರಾಮಾಣಿಕರಾದ ಕುಮಾರಿಲರು ಬೌದ್ಧ ಗುರುವಿನಿಂದ ಅವರ ವಿದ್ಯೆಯನ್ನು ಅವರನ್ನೇ ಖಂಡಿಸಿದ್ದರಿಂದ ಗುರುದ್ರೋಹವಾಯ್ತೆಂದು ಪ್ರಾಯಶ್ಚಿತ್ತಕ್ಕಾಗಿ ತುಷಾಗ್ನಿಯನ್ನು ಪ್ರವೇಶಿಸಿದರು. ಇದನ್ನು ತಿಳಿದ ಶಂಕರರು ಶಿಷ್ಯರೊಂದಿಗೆ ವೇಗವಾಗಿ ಅಲ್ಲಿಗೆ ಬಂದರು. ಕುಮಾರಿಲರು ಸಂತೋಷದಿಂದ ಶಿಷ್ಯರ ಮೂಲಕ ಸತ್ಕರಿಸಿದರು.)
ದೃಶ್ಯ ೧೯ : ಕುಮಾರಿಲರ ಭೇಟಿ
ಕುಮಾರಿಲರು : ಆಚಾರ್ಯರೇ, ನನ್ನ ಪ್ರಣಾಮಗಳು.
ಶಂಕರರು : ಕುಮಾರಿಲರೇ ತಮ್ಮನ್ನು ಭೇಟಿಯಾಗಲು ನಾನು ಹೊರಟಿದ್ದೆ ತಾವು ತುಷಾಗ್ನಿ ಪ್ರವೇಶಿಸಿದ್ದೀರೆಂದು ಮಾರ್ಗ ಮಧ್ಯದಲ್ಲಿ ತಿಳಿದು ಧಾವಿಸಿ ಬಂದೆ. ನಾನು ಬರೆದ ಸೂತ್ರ ಭಾಷ್ಯಕ್ಕೆ ವಾರ್ತಿಕಗಳನ್ನು ಬರೆಸಬೇಕೆಂದುಕೊಂಡಿದ್ದೆ.
(ಎನ್ನುತ್ತಾ ಶಂಕರರು ತಾವು ಬರೆದ ಬ್ರಹ್ಮಸೂತ್ರ ಭಾಷ್ಯವನ್ನು ಕುಮಾರಿಲರಿಗೆ ತೋರಿಸಿದರು. ಕುಮಾರಿಲರು ಅದನ್ನು ಪರಿಶೀಲಿಸಿ ಆನಂದಪರವಶರಾಗಿ)
ಕುಮಾರಿಲರು : ಆಚಾರ್ಯರೇ, ತಮಗೆ ಇನ್ನೊಮ್ಮೆ ಪ್ರಣಾಮಗಳು. ಇಂತಹ ಗ್ರಂಥವನ್ನು ನಾನು ಈವರೆಗೂ ನೋಡಿಲ್ಲ. ಅಪೂರ್ವವಾದ ಶೈಲಿ. ಗಂಭೀರವಾದ ನಿರೂಪಣೆ. ಕ್ರಮವಾಗಿರುವ ಯುಕ್ತಿಗಳು. ಶ್ರುತಿಗಳ ಜೋಡಣೆ ಸೂತ್ರಗಳ ಪ್ರತಿಯೊಂದು ಪದಗಳ ವಿವರಣೆ. ನಮ್ಮ ಮೀಮಾಂಸಾ ಶಾಸ್ತ್ರವಂತೂ ಹಾಲು ಜೇನಿನಂತೆ ಬೆರೆತು ಇಡೀ ಗ್ರಂಥವನ್ನು ವ್ಯಾಪಿಸಿ ವೇದಾಂತಕ್ಕೆ ಪೂರಕವಾಗಿದೆ. ಅನುಪಮವಾದ ಈ ಗ್ರಂಥಕ್ಕೆ ವಾರ್ತಿಕಗಳನ್ನು ಬರೆಯಬೇಕೆಂಬ ಆಸೆ ತೀವ್ರವಾಗುತ್ತಿದೆ. ಆದರೆ ಬರೆದು ಧನ್ಯನಾಗುವ ಭಾಗ್ಯ ಈಗ ನನಗಿಲ್ಲ. ಪ್ರಾಯಶ್ಚಿತ್ತ ದೀಕ್ಷೆಯಲ್ಲಿದ್ದೇನೆ.
ಶಂಕರರು : ಭಟ್ಟಪಾದರೇ, ಚಿಂತಿಸಬೇಡಿ. ಅಭಿಮಂತ್ರಿತವಾದ ಕಮಂಡಲೂದಕದಿಂದ ಅಗ್ನಿಬಾಧೆಯನ್ನು ಶಮನ ಮಾಡುತ್ತೇನೆ. ತಾವು ನನ್ನ ಭಾಷ್ಯಕ್ಕೆ ವಾರ್ತಿಕವನ್ನು ಬರೆಯಿರಿ.
ಕುಮಾರಿಲರು : ಆಚಾರ್ಯರೇ, ವೈದಿಕ ಧರ್ಮದ ಸ್ಥಾಪನೆಗಾಗಿಯೇ ಸಾಹಸ ಮಾಡಿರುವ ನಾನೇ ನಿಯಮವನ್ನು ಉಲ್ಲಂಘಿಸುವುದು ಉಚಿತವಲ್ಲ. ತಮ್ಮಂತವರ ದರ್ಶನ ಈಗ ಆದದ್ದು ನನ್ನ ಪುಣ್ಯ. ತಾವು ವೈದಿಕ ತತ್ತ್ವ ಮಾರ್ಗವನ್ನು ಪ್ರಕಾಶ ಮಾಡಬೇಕೆಂದರೆ ನನ್ನ ಶಿಷ್ಯ ವಿದ್ವದಗ್ರೇಸರ ಮಂಡನ ಮಿಶ್ರನಿದ್ದಾನೆ. ಆತನಿಗೆ ಜ್ಞಾನ ಮಾರ್ಗದಲ್ಲಿ ಆದರವಿಲ್ಲ. ಕರ್ಮ ಮಾರ್ಗದಲ್ಲಿ ಅಚಲವಾದ ನಿಷ್ಠೆ. ಅವನನ್ನು ತಮ್ಮ ಮಾರ್ಗಕ್ಕೆ ಒಲಿಸಿಕೊಂಡು ಅವನಿಂದ ಈ ಕಾರ್ಯವನ್ನು ಮಾಡಿಸಿಕೊಳ್ಳಿ. ನನ್ನ ಅಂತಿಮ ಪ್ರಣಾಮಗಳು. ನನಗೆ ಅನುಮತಿ ನೀಡಿ.
(ಎಂದು ಹೇಳಿ ಅಂತ್ಯಕಾಲದಲ್ಲಿ ಭಗವತ್ಪಾದ ಶಂಕರರಿಂದ ಪರತತ್ತ್ವೋಪದೇಶವನ್ನು ಹೊಂದಿ ಕುಮಾರಿಲ ಭಟ್ಟರು ದೇಹತ್ಯಾಗ ಮಾಡಿದರು.)
ಹಿನ್ನೆಲೆ
(ಮಂಡನ ಮಿಶ್ರರು ಗೃಹಸ್ಥಾಶ್ರಮ ಧರ್ಮವೇ ವೇದೋಕ್ತವಾದ ಮುಖ್ಯ ಧರ್ಮವೆಂದು ತಿಳಿದವರು. ಸಂನ್ಯಾಸಾಶ್ರಮವು ಧರ್ಮವೇ ಅಲ್ಲವೆಂದು ನಿಶ್ಚಯ ಹೊಂದಿದ್ದವರು. ಭಗವತ್ಪಾದ ಶಂಕರರು ಮಂಡನ ಪಂಡಿತರನ್ನು ಜಯಿಸುವ ಉದ್ದೇಶದಿಂದ ಪ್ರಯಾಗ ಕ್ಷೇತ್ರದಿಂದ ಶಿಷ್ಯರೊಂದಿಗೆ ಹೊರಟು ಮಾಹಿಷ್ಮತೀ ಪಟ್ಟಣದ ಮಂಡನ ಮಿಶ್ರರ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ಮನೆ ಬಾಗಿಲು ಮುಚ್ಚಿತ್ತು. ಮಂಡನ ಮಿಶ್ರರು ಮನೆಯೊಳಗೆ ಪಿತೃ ಕಾರ್ಯದಲ್ಲಿದ್ದರು. ಭಗವತ್ಪಾದ ಶಂಕರರು ಶಿಷ್ಯರನ್ನು ಹೊರಗೆ ಇರಲು ಹೇಳಿ ಯೋಗಶಕ್ತಿಯಿಂದ ಆಕಾಶ ಮಾರ್ಗದಲ್ಲಿ ಮಂಡನರ ಮನೆಯಂಗಳಕ್ಕೆ ಬಂದಿಳಿದರು. ಸಂನ್ಯಾಸಿಯನ್ನು ಕಂಡ ಮಂಡನರು ಕೋಪಗೊಂಡು)
ದೃಶ್ಯ ೨೦ : ಮಂಡನರ ಮನೆಯಲ್ಲಿ ಶಂಕರರು
ಮಂಡನರು : ಎಲೈ ಸಂನ್ಯಾಸಿ, ಹೇಗೆ ಬಂದೆ ? ಇಲ್ಲಿಗೆ ನಿನ್ನನ್ನು ಕರೆದವರ್ಯಾರು ?
ಶಂಕರರು : ಪಂಡಿತರೇ, ತಮ್ಮ ಮನೆಗೆ ಬರುವುದು ನನಗೆ ಅಗತ್ಯವಿತ್ತು. ಮನೆ ಬಾಗಿಲು ಮುಚ್ಚಿದ್ದರಿಂದ ಆಕಾಶಮಾರ್ಗದಲ್ಲಿ ಬಂದೆ.
ಮಂಡನರು : ನೀನು ನಮ್ಮನೆಗೆ ಬಂದಿದ್ದು ನನಗೆ ಇಷ್ಟವಿಲ್ಲ. ತಕ್ಷಣವೇ ಇಲ್ಲಿಂದ ಹೊರಟು ಹೋಗು.
(ಪಿತೃಕಾರ್ಯದಲ್ಲಿ ಆಮಂತ್ರಿತರಾಗಿ ಅಲ್ಲಿಗೆ ಬಂದಿದ್ದ ಜೈಮಿನಿ ಮುನಿಗಳೂ, ವೇದವ್ಯಾಸರು ಮಂಡನರನ್ನು ಸಮಾಧಾನಿಸುತ್ತ)
ಇಬ್ಬರೂ : ಮಂಡನಮಿಶ್ರಾ ನೀನು ಪಿತೃಕಾರ್ಯದಲ್ಲಿರುವಾಗ ಅನಿರೀಕ್ಷಿತವಾಗಿ ಸಂನ್ಯಾಸಿಯು ಸಾಕ್ಷಾದ್ವಿಷ್ಣು ಸ್ವರೂಪದಲ್ಲಿ ಬಂದಿರುವುದು ನಿನ್ನ ಭಾಗ್ಯ. ಆದ್ದರಿಂದ ಇವರನ್ನು ವಿಷ್ಣು ಸ್ಥಾನದಲ್ಲಿ ಕೂರಿಸುವುದು ಯುಕ್ತವು.
(ಮಂಡನರು ಸಮಾಧಾನ ಹೊಂದಿ ಶುಚಿರ್ಭೂತರಾಗಿ ಶಂಕರರಿಗೆ ಕೈ ಮುಗಿದು ಹೇಳಿದರು)
ಮಂಡನರು : ಪೂಜ್ಯರೇ, ನನ್ನ ವರ್ತನೆಯನ್ನು ಕ್ಷಮಿಸಿರಿ. ತಾವು ಇಂದು ನಮ್ಮ ಮನೆಯಲ್ಲಿ ಭಿಕ್ಷೆಯನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿರಿ.
ಶಂಕರರು : ಪಂಡಿತೋತ್ತಮರೇ, ನಾನು ಇಲ್ಲಿಗೆ ಬಂದಿರುವುದು ವಾದ ಭಿಕ್ಷೆಗಾಗಿ. ಅನ್ನ ಭಿಕ್ಷೆಗಲ್ಲ. ತಾವು ವಾದ ಭಿಕ್ಷೆಯನ್ನು ನೀಡಬಲ್ಲಿರೆಂದು ತಿಳಿದು ಬಂದಿರುವೆ. ಸದ್ಗ್ರ್ರಹಸ್ತರಾದ ತಾವು ಯಜ್ಞ ಯಾಗಾದಿಗಳಲ್ಲಿ ತೊಡಗಿ ವೇದಾಂತ ಮಾರ್ಗವನ್ನು ಉಪೇಕ್ಷೆ ಮಾಡಿದ್ದೀರಿ ಅದು ಸರಿಯಲ್ಲ. ಈ ಉಪನಿಷನ್ಮಾರ್ಗವನ್ನು ಎಲ್ಲರಿಗೂ ತೋರಿಸಿಕೊಡುವುದು ನನ್ನ ಮೊದಲ ಕರ್ತವ್ಯ. ಸಮಸ್ತ ಪ್ರತಿವಾದಿಗಳಿಗೂ ಯುಕ್ತಿ ಯುಕ್ತವಾದ ಶ್ರುತಿ ಸಮ್ಮತವಾದ ಉತ್ತರ ನೀಡಿ ವೇದಾಂತ ಮಾರ್ಗಕ್ಕೆ ತರಲು ನಿಶ್ಚಯಿಸಿದ್ದೇನೆ. ವೇದಾಂತ ಮಾರ್ಗದಲ್ಲಿ ನಡೆಯಲು ತಾವು ಒಪ್ಪಿಕೊಳ್ಳಿ. ಇಲ್ಲವಾದರೆ ವಾದವನ್ನು ಮಾಡಲು ಸಿದ್ಧರಾಗಿ ಈ ವಾದದಲ್ಲಿ ಸೋತವರು ಗೆದ್ದವರ ಶಿಷ್ಯರಾಗಬೇಕು ಇದೇ ನನ್ನ ಉದ್ದೇಶ.
ಮಂಡನರು : ಪೂಜ್ಯರೇ, ಬಹಳ ದಿನಗಳಿಂದ ನಿರೀಕ್ಷಿಸುತ್ತಿರುವ ಸಮಯ ಈಗ ಬಂದಿದೆ. ವಾದದ ವಿಷಯವು ನನಗೆ ಬಹಳ ಸಂತೋಷ ನೀಡಿದೆ. ಶಾಸ್ತ್ರ ವ್ಯಾಸಂಗದಲ್ಲಿ ಹಾಕಿದ ಅಪಾರ ಪರಿಶ್ರಮವು ಸಫಲವಾಗುವ ಸಂದರ್ಭವಿದು. ನಿಜವಾದ ಅರಿವಿಗಾಗಿ ವಿದ್ವಾಂಸರಲ್ಲಿ ನಡೆಯುವ ವಿಚಾರ ವಿನಿಮಯವೇ ವಾದವು. ಅಂತಹ ವಾದವು ನಮ್ಮಿಬ್ಬರಿಗೂ ನಡೆಯಲಿ. ತಮ್ಮೊಡನೆ ವಾದ ಮಾಡಿ ಧನ್ಯನಾಗಲು ಬಯಸುತ್ತೇನೆ. ನಾಳೆಯೇ ವಾದವು ನಡೆಯಲಿದೆ. ಇಂದು ಪಿತೃಕಾರ್ಯವು ನೆರವೇರಲಿ. ತಾವು ಭಿಕ್ಷೆಯನ್ನು ಸ್ವೀಕರಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ.
(ಮಂಡನ ಮಿಶ್ರರ ವಿನಂತಿಯಂತೆ ಶಂಕರರು ವಿಷ್ಣು ಸ್ಥಾನದಲ್ಲಿ ಕುಳಿತು ಕಾರ್ಯ ನಿರ್ವಹಿಸಿ ಭಿಕ್ಷೆ ಸ್ವೀಕರಿಸಿ ಅಲ್ಲಿಂದ ತೆರಳುತ್ತಾರೆ. ನಂತರ ಹೊರಗಡೆ ಇರುವ ಶಿಷ್ಯರೊಂದಿಗೆ ಆ ಊರಿನ ದೇವಾಲಯದಲ್ಲಿ ಉಳಿದು ಶಿಷ್ಯರಿಗೆ ವಿಷಯ ತಿಳಿಸುವರು.
ದೃಶ್ಯ ೨೧ : ಶಂಕರರಿಗೂ ಮಂಡನರಿಗೂ ವಾದ
ಹಿನ್ನೆಲೆ
(ಮಾರನೆಯ ದಿನ ಆರಂಭವಾಗುವ ಅವರೀರ್ವರ ವಾದದಲ್ಲಿ ಅಧ್ಯಕ್ಷತೆ ವಹಿಸಬೇಕೆಂದು ಶ್ರೀ ವ್ಯಾಸರನ್ನು ಪ್ರಾರ್ಥಿಸಿದಾಗ ಕಾರ್ಯ ನಿಮಿತ್ತ ಅವರು ಸಮ್ಮತಿಸದೆ ಅವರ ಸಲಹೆಯಂತೆ ಮಂಡನರ ಸಹಧರ್ಮಿಣಿ ಸಮಸ್ತ ಶಾಸ್ತ್ರ ವಿಶಾರದೆ ಉಭಯ ಭಾರತಿ ದೇವಿಯನ್ನು ಅಧ್ಯಕ್ಷಳನ್ನಾಗಿ ನಿಯಮಿಸಿ ವಾದವು ಆರಂಭವಾಯಿತು. ವಿದ್ವದಗ್ರೇಸರರ ಈ ವಾದವನ್ನು ಕೇಳಲು ಅನೇಕ ವಿದ್ವಾಂಸರು ಬಂದು ಸೇರಿದ್ದರು. ದೇವ ಮುನಿಗಳು ಅಂತರಿಕ್ಷದಲ್ಲಿ ಬಂದು ಗಮನಿಸುತ್ತಿದ್ದರು. ವಾದದ ಆರಂಭದಲ್ಲಿ ಭಗವತ್ಪಾದ ಶಂಕರರು ತಮ್ಮ ಪ್ರತಿಜ್ಞೆಯನ್ನು ಮಂಡಿಸಿದರು.)
ಶಂಕರರು : ಪಂಡಿತೋತ್ತಮರೇ ಬ್ರಹ್ಮ ಒಂದೇ ಸತ್ಯ. ಅದೇ ಶಾಶ್ವತ. ಬ್ರಹ್ಮವು ಸ್ವಪ್ರಕಾಶದಿಂದ ಕೂಡಿದ ಆನಂದಕರ ಸ್ವರೂಪ. ಬ್ರಹ್ಮವನ್ನು ತಿಳಿದರೆ ಈ ದೇಹದ ಮೋಹವು ತಾನಾಗಿಯೇ ಬಿಡುವುದು. ಬ್ರಹ್ಮ ಸ್ವರೂಪದ ಸಾಕ್ಷಾತ್ಕಾರದಿಂದ ಸರ್ವ ದ್ವೈತ ಪ್ರಪಂಚವೂ ಬಾಧಿತವಾಗಿ ಬ್ರಹ್ಮಾತ್ಮ ವಸ್ತುವು ಸ್ವಸ್ವರೂಪದಲ್ಲಿದ್ದು ಮೋಕ್ಷವೆಂಬ ಪರಮ ಪುರುಷಾರ್ಥವು ಲಭಿಸುವುದು. ಈ ಸಿದ್ಧಾಂತಾರ್ಥದಲ್ಲಿ ವೇದಾಂತಗಳು ಪ್ರಮಾಣವಾಗಿವೆ. ನಾನು ಜಯಶೀಲನಾಗುವುದು ನಿಶ್ಚಯ. ಒಂದು ವೇಳೆ ನಾನು ಪರಾಜಯ ಹೊಂದಿದರೆ ಸಂನ್ಯಾಸತ್ವವನ್ನು ತ್ಯಜಿಸಿ ನಿಮ್ಮ ಶಿಷ್ಯನಾಗುತ್ತೇನೆ. ಜಯ ಅಪಜಯಗಳನ್ನು ಪ್ರಕಟ ಪಡಿಸಲು ಉಭಯ ಭಾರತಿ ದೇವಿ ಸಮರ್ಥಳೆಂದು ನಾನು ಒಪ್ಪುತ್ತೇನೆ.
ಮಂಡನರು : ಯತಿವರ್ಯರೇ, ಕರ್ಮವೇ ಶ್ರೇಷ್ಠ. ಪ್ರತಿಯೊಬ್ಬನ ಜೀವನಕ್ಕೂ ಕರ್ಮವು ಅಗತ್ಯವಾದ ಆಚರಣೆಯು. ಕರ್ಮದಿಂದ ಪ್ರತಿಯೊಂದು ಕಾರ್ಯವೂ ಸಿದ್ಧಿಯಾಗುವುದು. ವಿದ್ಯುಕ್ತವಾದ ಕರ್ಮಗಳೇ ಶ್ರೇಷ್ಠವಾದ ಪುರುಷಾರ್ಥ ಸಾಧನವು. ಮಾನವರಿಗೆ ಆಯಸ್ಸು ಮುಗಿಯುವವರೆಗೂ ವಿಹಿತ ಕರ್ಮವು ಇದ್ದೇ ಇರುತ್ತದೆ. ಕರ್ಮಗಳಿಂದಲೇ ಮುಕ್ತಿ ದೊರಕುವುದು . ಈ ವಿಷಯದಲ್ಲಿ ವೇದದ ಪೂರ್ವ ಭಾಗವು ಪ್ರಮಾಣವಾಗಿವೆ. ಈ ವಾದದಲ್ಲಿ ನನಗೆ ಸೋಲುಂಟಾದರೆ ನಿಮ್ಮ ಶಿಷ್ಯನಾಗುತ್ತೇನೆ. ಗೃಹಸ್ಥಾಶ್ರಮವನ್ನು ತೊರೆದು ಸಂನ್ಯಾಸಿಯಾಗುತ್ತೇನೆ.
ಉ.ಭಾ.ದೇವಿ : ಪೂಜ್ಯರೇ, ಇಬ್ಬರಿಗೂ ಅನಂತ ಪ್ರಣಾಮಗಳು. ಪ್ರತಿಜ್ಞೆಯಂತೆ ವಾದವು ಆರಂಭವಾಗಲಿ. ನನ್ನದೊಂದು ಅರಿಕೆ. ತಮ್ಮಲ್ಲಿ ಒಬ್ಬರು ಯತಿಗಳು ಇನ್ನೊಬ್ಬರು ಗೃಹಸ್ಥರು. ಯತಿಗಳಿಗೆ ಭಿಕ್ಷೆಯನ್ನು ಗೃಹಸ್ಥರಿಗೆ ಭೋಜನವನ್ನು ಅಣಿಗೊಳಿಸುವುದು ನನ್ನ ಕರ್ತವ್ಯ. ಇಲ್ಲಿ ಎರಡು ಹೂ ಮಾಲೆಗಳಿವೆ. ಒಂದನ್ನೊಂದು ಇಬ್ಬರೂ ಧರಿಸಿ ವಾದವನ್ನು ಆರಂಭಿಸಿ. ಯಾರ ಕೊರಳಿನ ಮಾಲೆ ಬಾಡುವುದೋ ಅವರು ಸೋತರೆಂದು ತಿಳಿದುಕೊಳ್ಳಿ. ನನಗೆ ಗೃಹ ಕೃತ್ಯವಿದೆ. ನಿಮ್ಮ ವಾಗ್ವಾದಗಳನ್ನು ಒಳಗಿನಿಂದಲೇ ಆಲಿಸುತ್ತೇನೆ.
(ವಾದವು ಆರಂಭವಾಯಿತು. ಪ್ರತಿ ದಿನವೂ ದೈನಂದಿನ ಕರ್ತವ್ಯ ಮುಗಿದ ಬಳಿಕ ವಾಗ್ವಾದ ನಡೆಯುತ್ತಿತ್ತು. ಹೀಗೇ ಏಳು ದಿನ ಕಳೆಯಿತು. ಭಗವತ್ಪಾದ ಶಂಕರರು ಮಂಡನ ಮಿಶ್ರರ ಪ್ರಗಲ್ಬ ಪಾಂಡಿತ್ಯವನ್ನು ನೋಡಿ ತುಂಬಾ ಸಂತೋಷಗೊಂಡರು. ಮಂಡನ ಮಿಶ್ರರ ಆಕ್ಷೇಪಗಳಿಗೆಲ್ಲಾ ಸಮರ್ಪಕ ಉತ್ತರ ನೀಡುತ್ತಿರುವ ಶಂಕರರ ವೈದುಷ್ಯ ಶಾಂತ ಚಿತ್ತತೆ ಸಭಾಸದರ ಮನಸ್ಸನ್ನು ಸೂರೆಗೊಂಡಿತು. ಮಂಡನ ಮಿಶ್ರರು ಅದ್ವೈತ ಸಿದ್ಧಾಂತದ ಮೇಲೆ ಆಕ್ಷೇಪಗಳನ್ನು ಎತ್ತಿದರು.
ಮಂಡನರು : ಯತಿವರೇಣ್ಯರೇ, ಜೀವಾತ್ಮನಿಗೂ ಪರಮಾತ್ಮನಿಗೂ ಬೇಧವಿಲ್ಲ. ಅವರಿಬ್ಬರೂ ಒಂದೇ ಆಗಿರುತ್ತಾರೆ ಎಂದು ತಾವು ಹೇಳುತ್ತಿದ್ದೀರಿ. ನಾನೇ ಪರಮಾತ್ಮನೆಂದು ಈ ಪ್ರಪಂಚದಲ್ಲಿ ಯಾರೊಬ್ಬರೂ ಹೇಳುತ್ತಿಲ್ಲ. ಇದು ಅತ್ಯಂತ ಅಸಂಗತವಾಗಿದೆ. ಜೀವಾತ್ಮ ಪರಮಾತ್ಮ ಒಂದೇ ಎಂದು ಯಾವ ಆಧಾರದ ಮೂಲಕ ಹೇಳುತ್ತಿದ್ದೀರಿ.
ಶಂಕರರು : ಪಂಡಿತೋತ್ತಮರೇ ಇದಕ್ಕೆ ಶೃತಿಯೇ ಆಧಾರ. ಸಾಮವೇದದ ಛಾಂದೋಗ್ಯೋಪನಿಶತ್ತಿನಲ್ಲಿ ಉದ್ದಾಲಕನು ತನ್ನ ಮಗ ಶ್ವೇತ ಕೇತುವಿಗೆ ಉಪದೇಶಿಸಿದ. ಈ ಮಾತನ್ನು ಗಮನಿಸಿ ‘ಸದೇವ ಸೌಮ್ಯೇ ದ ಮಗ್ರ ಆಸೀತ್ ತತ್ ಸತ್ಯಂ ಸ ಆತ್ಮಾ, ತತ್ತ್ವಮಸಿ ಶ್ವೇತ ಕೇತೋ ವತ್ಸ ಶ್ವೇತ ಕೇತು ವ್ಯಾಪಕವಾದ ಒಂದೇ ಒಂದು ವಸ್ತುವಿರುವುದು ಈ ವಸ್ತು ಹೇಗಿದೆಯೆಂದರೆ ಸದ್ರೂಪವಾಗಿದೆ. ಸದ್ ಎಂದರೆ ತ್ರಿಕಾಲದಲ್ಲಿಯೂ ಅಬಾಧಿತವಾಗಿ ತಾನೇ ತಾನಾಗಿ ಇರುವುದು. ಈ ಸದ್ ವಸ್ತುವನ್ನೇ ಬ್ರಹ್ಮವೆಂದು ಉಪನಿಷತ್ತುಗಳಲ್ಲಿ ವ್ಯವಹರಿಸುತ್ತಾರೆ. ಬ್ರಹ್ಮವು ತನ್ನನ್ನು ನಾನಾ ರೀತಿ ತೋರಿಸಿಕೊಳ್ಳಲು ಈ ಪ್ರಪಂಚವನ್ನು ಸೃಷ್ಟಿಸಿತು. ಜಗತ್ತಿಗೆ ಮೂಲವಾದ ಈ ಸದ್ ರೂಪ ಅದ್ವಿತೀಯ ಬ್ರಹ್ಮವೇ ಪರಮಾರ್ಥವಾದದ್ದು. ಅದೇ ಆತ್ಮಾ, ಪುತ್ರಾ, ಶ್ವೇತಕೇತು ಈ ಸದ್ರೂಪ ಆತ್ಮನೇ ನೀನಾಗಿರುವೆ ಎಂದಿರುವನು. ಮಂಡನ ಮಿಶ್ರರೇ ಹೀಗೆ ಪರಮಾತ್ಮ ಜೀವಾತ್ಮ ಒಬ್ಬರೇ ಎಂದು ತಿಳಿಸುವ ಶೃತಿ ವಾಕ್ಯಗಳು ಉಪನಿಷತ್ತಿನಲ್ಲಿ ಹೇರಳವಾಗಿವೆ. ತತ್ವಮಸಿ ಎನ್ನುವ ಒಂದು ವಾಕ್ಯ ಮಾತ್ರ ಹೇಳಿದ್ದೇನೆ.
ಮಂಡನರು : ಯತಿವರೇಣ್ಯರೇ, ಕರ್ಮವನ್ನು ವಿಧಿಸದೇ ಇರುವ ವಾಕ್ಯವು ಮುಖ್ಯವಲ್ಲವೆಂದು ಹೇಳುವೆ. ತತ್ತ್ವಮಸಿ ವಾಕ್ಯವು ಕರ್ಮವನ್ನು ವಿಧಿಸದ ಕಾರಣ ಮುಖ್ಯ ವಾಕ್ಯವಲ್ಲ. ಕರ್ಮಕ್ಕೆ ಹೊಂದುವಂತೆ ಈ ವಾಕ್ಯವನ್ನು ಅರ್ಥೈಸಬೇಕು. ತತ್ತ್ವಮಸಿ ವಾಕ್ಯವು ಕರ್ಮ ನಡೆಸುವ ಕರ್ತೃವನ್ನು ನೀನೇ ಈಶ್ವರನಾಗಿರುವೆ ಎಂದು ಹೊಗಳಿ ಕಷ್ಟವಾದ ಕರ್ಮವನ್ನು ಮಾಡಬಲ್ಲೆ ಎಂದು ತಿಳಿಸುವುದು. ಕರ್ಮದಲ್ಲಿ ತೊಡಗಲು ಪ್ರೇರಣೆ ಕೊಡುವ ವಾಕ್ಯಗಳಿಗೆ ಅರ್ಥವಾದವೆಂದು ಹೆಸರು. ಜೀವೇಶ್ವರರ ಅಭೇದವನ್ನು ಹೇಳುವುದರಲ್ಲಿ ಈ ಶೃತಿ ವಾಕ್ಯಕ್ಕೆ ತಾತ್ಪರ್ಯವಿಲ್ಲ.
ಶಂಕರರು : ಪಂಡಿತೋತ್ತಮರೇ, ಒಂದಾನೊಂದು ವಾಕ್ಯವನ್ನು ಅರ್ಥವಾದವೆಂದು ನಿರ್ಣಯಿಸುವುದು ಯಾವ ಸಂದರ್ಭದಲ್ಲಿ ಎಂದು ತಾವು ಪರಾಮರ್ಶಿಸಬೇಕು. ಆದಿತ್ಯೋಯೂಪಃ ಈ ಶೃತಿ ವಾಕ್ಯದ ಶಬ್ದಾರ್ಥ ಕಂಬವು ಸೂರ್ಯನೇ ಸರಿ ಎಂದು ಅರ್ಥೈಸಿ ಯೂಪಸ್ತಂಭದ ಪ್ರಶಂಸೆಗಾಗಿ ಈ ವಾಕ್ಯವು ಎಂದು ಹೇಳಬೇಕಾಗುತ್ತದೆ. ಕಂಬದ ಪ್ರಶಂಸೆ ಏಕೆನ್ನುವ ಸಂಶಯಕ್ಕೆ ಆಸ್ಪದವಿದೆ. ಯಜ್ಞ ಪ್ರಕರಣಗಳಲ್ಲಿ ಯಜ್ಞದ ಒಂದು ಅಂಗವಾದ ಯೂಪ ಸ್ತಂಭದ ಪ್ರಶಂಸೆ ಸರಿಯಿದೆ ಎನಿಸಿದಾಗ ಆದಿತ್ಯೋ ಯೂಪಃ ವಾಕ್ಯಾರ್ಥದ ಹೊಂದಾಣಿಕೆಯಾಗುವುದು. ಹೀಗೆ ಒಂದಾನೊಂದು ಕರ್ಮವನ್ನು ವಿಧಿಸಿ ಇಂತಹ ವಾಕ್ಯ ಹೇಳಿದರೆ ಅವುಗಳನ್ನು ಅರ್ಥವಾದ ವಾಕ್ಯವೆಂದು ಪರಿಗಣಿಸುವುದು ಶಾಸ್ತ್ರ ಸಮ್ಮತವಾದ ವಿಷಯ. ‘ತತ್ವಮಸಿ ಅಯಮಾತ್ಮ ಬ್ರಹ್ಮ ಮೊದಲಾದ ವಾಕ್ಯಗಳು ಜ್ಞಾನ ಕಾಂಡದಲ್ಲಿವೆ. ಇಲ್ಲಿ ಯಾವುದೇ ಕ್ರಿಯೆಯನ್ನು ವಿಧಿಸುವ ವಾಕ್ಯವಿಲ್ಲ. ಕರ್ತೃವಿನ ಪ್ರಶಂಸೆಗೆ ಇಲ್ಲಿ ಅವಕಾಶವಿಲ್ಲ. ಒಂದು ವಾಕ್ಯದ ಪೌರ್ವಾಪರ್ಯವನ್ನು ಪರಿಗಣಿಸದೆ ಅರ್ಥವನ್ನು ಹೇಳಿದರೆ ಅದು ಕ್ರಮವರಿತ ಶಾಸ್ತ್ರವಾಗುವುದಿಲ್ಲ. ಆದ್ದರಿಂದ ತತ್ತ್ವಮಸಿ ಎನ್ನುವುದು ಅರ್ಥವಾದವಲ್ಲ. ಜೀವ ಮತ್ತು ಪರಮಾತ್ಮನ ಅಭೇದವನ್ನು ತಿಳಿಸುವುದೇ ಅದರ ನೈಜಾರ್ಥ.
ಮಂಡನರು : ಯತಿವರೇಣ್ಯರೇ, ಉಪಾಸನೆಯು ಕರ್ಮಗಳ ಗುಂಪಿಗೆ ಸೇರುವುದು ‘ಮನೋ ಬ್ರಹ್ಮೇತ್ಯು ಪಾಸೀತ ಮನಸ್ಸನ್ನು ಬ್ರಹ್ಮವೆಂದು ಭಾವಿಸಿ ಉಪಾಸನೆ ಮಾಡಬೇಕು. ಹೀಗೆಯೇ ಸೂರ್ಯ, ವಾಯು, ಅನ್ನ ಮುಂತಾದವುಗಳಲ್ಲೂ ಬ್ರಹ್ಮ ಬುದ್ಧಿಯನ್ನು ಇಡಬೇಕು. ಅಂದರೆ ಇವುಗಳನ್ನು ಬ್ರಹ್ಮವೆಂದು ಉಪಾಸನೆ ಮಾಡಬೇಕು. ಹೀಗೆ ಉಪಾಸನೆಯನ್ನು ವಿಧಿಸುವ ಶೃತಿ ವಾಕ್ಯಗಳು ಇವೆಯಷ್ಟೇ. ಹಾಗೆಯೇ ತತ್ತ್ವಮಸಿ ವಾಕ್ಯವು ಬ್ರಹ್ಮ ಬುದ್ಧಿಯನ್ನಿಟ್ಟು ಉಪಾಸನೆ ಮಾಡಬೇಕೆಂದು ಬೋಧಿಸುತ್ತದೆ. ಹಾಗೆ ಮಾಡುವುದರಿಂದ ಕರ್ಮ ಸಮೃದ್ಧಿಯಾಗುತ್ತದೆ. ಅಂದರೆ ಹೆಚ್ಚಿನ ಫಲ ದೊರಕುತ್ತದೆ. ಜೀವನಲ್ಲಿ ಬ್ರಹ್ಮ ಬುದ್ಧಿಯನ್ನಿಡಬೇಕು ಎಂದರೆ ಜೀವ ಬೇರೆ, ಬ್ರಹ್ಮ ಬೇರೆ ಎಂದು ಗೊತ್ತಾಗುತ್ತದೆ. ಉಪಾಸನೆಯು ಒಂದು ವಿಧವಾದ ಕರ್ಮವೇ ಸರಿ. ತತ್ತ್ವಮಸಿ ವಾಕ್ಯವು ಕರ್ಮಬೋಧಕವೆಂದು ನನ್ನ ಅಭಿಪ್ರಾಯ.
ಶಂಕರರು : ಪಂಡಿತೋತ್ತಮರೇ, ತಾವು ಹೇಳಿದ ಮನೋ ಬ್ರಹ್ಮೇತ್ಯುಪಾಸೀತ ವಾಕ್ಯವನ್ನು ಗಮನಿಸಿ. ಅಲ್ಲಿ ಉಪಾಸನೆ ಮಾಡಬೇಕೆನ್ನುವ ಉಪಾಸೀತ ಪದವು ಇದೆ. ಈ ಪದವು ವಿಧಿಯನ್ನು ಬೋಧಿಸುವುದು. ಆದ್ದರಿಂದ ಉಪಾಸನಾ ಬೋಧಕ ವಾಕ್ಯವಾಗಿದೆ. ಆದರೆ ತತ್ತ್ವಮಸಿ ವಾಕ್ಯದಲ್ಲಿ ಉಪಾಸೀತ ಎನ್ನುವ ಪದವಾಗಲಿ ಅಥವಾ ಉಪಾಸನೆ ಮಾಡಬೇಕೆನ್ನುವ ಇನ್ನಾವುದೇ ಪರ್ಯಾಯ ಪದವಾಗಲಿ ಈ ವಾಕ್ಯದ ಸಂದರ್ಭದಲ್ಲಿ ಇಲ್ಲ. ಹೀಗಿದ್ದಾಗ ಆ ಬ್ರಹ್ಮ ನೀನಾಗಿದ್ದೀಯ ಎಂದಿಷ್ಟೇ ಶಬ್ದ ಮರ್ಯಾದೆಯಿಂದ ತತ್ತ್ವಮಸಿ ವಾಕ್ಯದ ಅರ್ಥವನ್ನು ಮಾಡಲು ಸಾಧ್ಯ. ಉಪಾಸನೆ ಮಾಡಬೇಕು ಎನ್ನುವ ಪದವೇ ಇಲ್ಲದೆ ಉಪಾಸನಾ ಪರವಾಗಿ ಈ ವಾಕ್ಯವನ್ನು ಅರ್ಥೈಸಿದ್ದು ನನಗೆ ಆಶ್ಚರ್ಯವಾಗಿದೆ.
ಮಂಡನರು : ಯತಿವರೇಣ್ಯರೇ, ಉಪಾಸೀತವೆಂಬ ಪದದಿಂದ ಕೂಡಿದ ಬ್ರಹ್ಮೇತ್ಯುಪಾಸೀತ ಎಂದು ವಿಧಿಯನ್ನು ನಾವು ಕಲ್ಪಿಸಿಕೊಳ್ಳಬೇಕು. ಹೀಗೆ ವಿಧಿ ವಾಕ್ಯ ಕಲ್ಪಿಸಲು ನಮ್ಮ ಪೂರ್ವ ಮೀಮಾಂಸಾಶಾಸ್ತ್ರವು ಒಪ್ಪಿಕೊಂಡಿದೆ. ಉದಾಹರಣೆಗೆ ರಾತ್ರಿ ಸತ್ರವೆಂಬ ಸೋಮಯಾಗದಿಂದ ಅಪಾರ ಕೀರ್ತಿ ಲಭಿಸುವುದೆಂದು ವೇದವಾಕ್ಯವಿದೆ. ರಾತ್ರಿ ಸತ್ರದಿಂದ ಕೀರ್ತಿ ಲಭ್ಯ ಎಂದಷ್ಟೇ ಹೇಳಿದೆ. ರಾತ್ರಿ ಸತ್ರವನ್ನು ಅನುಷ್ಠಾನ ಮಾಡಬೇಕೆಂದು ವಿಧಿಸುವ ಪದವಿಲ್ಲ. ಆದರೆ ವಿಧಿಸುವ ಪದವಿಲ್ಲವೆನ್ನುವ ಪರಿಸ್ಥಿತಿ ಎದುರಾದಾಗ ರಾತ್ರಿ ಸತ್ರವನ್ನು ಆಚರಿಸಬೇಕು ಎಂಬ ವಿಧಿ ವಾಕ್ಯವನ್ನು ಕಲ್ಪಿಸಬೇಕೆಂದು ಮೀಮಾಂಸಾ ಶಾಸ್ತ್ರದಲ್ಲಿ ನಿರ್ಣಯಿಸಿದ್ದಾರೆ. ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆಂದು ತಿಳಿಸುವ ಬ್ರಹ್ಮವೇದ ಬ್ರಹ್ಮೈವ ಭವತಿ ಎಂಬ ವಾಕ್ಯವು ಕೇವಲ ಫಲವನ್ನು ತಿಳಿಸುತ್ತದೆ. ಇಲ್ಲಿ ಬ್ರಹ್ಮವನ್ನು ಉಪಾಸಿಸತಕ್ಕದ್ದು ಎಂದು ತಿಳಿಸುವ ವಿಧಿ ವಾಕ್ಯವಿಲ್ಲ. ಈಗಷ್ಟೇ ಹೇಳಿದ ರಾತ್ರಿ ಸತ್ರ ನ್ಯಾಯದಿಂದ ಇಲ್ಲಿಯೂ ಬ್ರಹ್ಮೇತ್ಯುಪಾಸೀತ ಎಂದು ವಿಧಿ ವಾಕ್ಯ ಕಲ್ಪನೆಯನ್ನು ಮಾಡಬೇಕು. ಜೀವನನ್ನು ಬ್ರಹ್ಮವೆಂದು ಉಪಾಸನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದೆಂದು ಒಟ್ಟು ಪ್ರಕರಣದ ಅರ್ಥವಾಗುತ್ತದೆ. ನನ್ನ ವಾದವು ಸರಿಯಿದೆಯೆಂದು ಮನವರಿಕೆಯಾಯಿತೇ ?
ಶಂಕರರು : ಪಂಡಿತೋತ್ತಮರೇ, ತಮ್ಮ ವಾದವನ್ನು ನನಗೆ ಮನವರಿಕೆ ಮಾಡಲು ಹೊರಟು ನಿತ್ಯವಾದ ಮೋಕ್ಷವನ್ನು ನಶ್ವರವನ್ನಾಗಿ ಮಾಡಿದಿರಿ. ಉಪಾಸನೆಯೆಂದರೆ ಒಂದು ವಿಧವಾದ ಕರ್ಮವೆಂದು ತಾವೇ ಹೇಳಿದ್ದೀರಿ. ಹೌದು ಉಪಾಸನೆಯೆಂದರೆ ಮಾನಸಿಕ ಕ್ರಿಯೆ. ಈ ಕ್ರಿಯೆಯಿಂದ ಮೋಕ್ಷವು ಹುಟ್ಟುತ್ತದೆಯೆಂದು ತಮ್ಮ ಮಾತಿನ ಮಥಿತಾರ್ಥ. ಅಗ್ನಿಹೋತ್ರಾದಿ ಹೋಮಗಳಿಂದ ಹುಟ್ಟಿದ ಸ್ವರ್ಗವು ಕ್ರಿಯಾಜನ್ಯವಾದ್ದರಿಂದ ಅನಿತ್ಯವಾದಂತೆ ಮೋಕ್ಷವೂ ಅನಿತ್ಯವಾಗಬೇಕಾಯಿತು. ಅಲ್ಲಿಗೆ ಸಿದ್ಧಾಂತ ವಿರೋಧ ಸ್ಪಷ್ಟವಾಗಿದೆ. ನಾವು ಜ್ಞಾನದಿಂದ ಮೋಕ್ಷವೆನ್ನುತ್ತೇವೆ. ಜ್ಞಾನವು ವಸ್ತುವು ಹೇಗಿದೆಯೋ ಹಾಗೆ ಬರುತ್ತದೆ. ನದಿಯನ್ನು ನೋಡಿದಾಗ ನದಿಯ ಜ್ಞಾನ ಬರುವುದು. ಜ್ಞಾನವು ವಸ್ತುವನ್ನು ಹುಟ್ಟಿಸುವುದಿಲ್ಲ. ಜ್ಞಾನದಿಂದ ಮೋಕ್ಷವೆನ್ನುವ ನಮ್ಮ ಸಿದ್ಧಾಂತದಲ್ಲಿ ಮೋಕ್ಷವು ನಶ್ವರವಾಗುವುದಿಲ್ಲ. ನಿತ್ಯವಾದ ಬ್ರಹ್ಮವು ಅರಿವಾದಂತೆ ತಾನೇ ಆ ಬ್ರಹ್ಮವಾಗಿರುವುದರಿಂದ ತನ್ನ ಸ್ವರೂಪದಲ್ಲಿ ಬ್ರಹ್ಮ ಜ್ಞಾನಿಯು ನೆಲೆ ನಿಲ್ಲುತ್ತಾನೆ. ಹಿಂದೆ ತಾವು ಹೇಳಿದ ಬ್ರಹ್ಮ ವೇದ ಬ್ರಹ್ಮೈವ ಭವತಿ ಎನ್ನುವ ಉಪನಿಷತ್ತಿನ ವಾಕ್ಯದ ಅರ್ಥವು ಇದೇ ಆಗಿದೆ. ತತ್ತ್ವಮಸಿ ವಾಕ್ಯವು ಉಪಾಸನಾ ಬೋಧಕವೆನ್ನುವುದಾದರೆ ಮೋಕ್ಷವು ನಿತ್ಯವೆನ್ನುವ ಸರ್ವ ಶಾಸ್ತ್ರ ಸಮ್ಮತವಾದ ಸಿದ್ಧಾಂತವನ್ನು ಅಂಗೀಕರಿಸುವುದಿಲ್ಲವೆಂದು ಹೇಳಿಬಿಡಿ. ಮೋಕ್ಷವು ನಿತ್ಯವೆನ್ನುವುದು ತಮಗೂ ಅಭಿಮತವೇ ಎನ್ನುವುದಾದರೆ ಈ ವಾಕ್ಯವು ಉಪಾಸನಾ ಬೋಧಕವೆನ್ನುವ ವಾದದಿಂದಲಾದರೂ ಹಿಂದೆ ಸರಿಯಿರಿ.
ಮಂಡನರು : ಯತಿವರೇಣ್ಯರೇ, ಆಯಿತು ತತ್ತ್ವಮಸಿ ವಾಕ್ಯವು ಉಪಾಸನೆಯನ್ನು ಬೋಧಿಸುವುದಿಲ್ಲವೆಂದು ಕೊಳ್ಳೋಣ. ಆದರೂ ಇದು ಜೀವೇಶ್ವರ ಅಭೇದವನ್ನು ಹೇಳುವುದೆಂದು ನಾನು ಹೇಳಿದೆನೆಂದು ಭಾವಿಸಬೇಡಿ. ಇದು ಜೀವಾತ್ಮ ಮತ್ತು ಪರಮಾತ್ಮನಿಗೆ ಸಾಮ್ಯವನ್ನು ತಿಳಿಸುತ್ತಿದೆ. ಈತನು ಶ್ರೀರಾಮ ಎಂದು ಲೋಕದಲ್ಲಿ ಒಬ್ಬನನ್ನು ತೋರಿಸಿ ಹೇಳುತ್ತಾರೆ. ಅಂದ ಮಾತ್ರಕ್ಕೆ ಆ ವ್ಯಕ್ತಿ ಸಾಕ್ಷಾತ್ ಶ್ರೀರಾಮನೇ ಆಗುವುದಿಲ್ಲ. ಶ್ರೀರಾಮನಂತೆ ಈ ವ್ಯಕ್ತಿಯೂ ಉದಾತ್ತ ಪುರುಷನಾಗಿದ್ದಾನೆಂದು ಆ ವಾಕ್ಯದಿಂದ ತಿಳಿದು ಬರುವ ಅರ್ಥ. ಹಾಗೆಯೇ ತತ್ತ್ವಮಸಿ ವಾಕ್ಯದ ಅರ್ಥವನ್ನು ಸಹ ಜೀವಾತ್ಮನು ಪರಮಾತ್ಮನಾಗಿದ್ದಾನೆ ಎಂದು ಗ್ರಹಿಸಬೇಕಾಗುತ್ತದೆ. ಅಲ್ಲಿಗೆ ಈ ವಾಕ್ಯವು ಭೇದವನ್ನು ತಿಳಿಸುತ್ತಿದೆ.
ಶಂಕರರು : ಪಂಡಿತೋತ್ತಮರೇ, ತಾವು ಕೊಟ್ಟ ಉದಾಹರಣೆಯನ್ನು ಅನುಸರಿಸಿ ತಮ್ಮ ಮುಂದೆ ಪ್ರಶ್ನೆಯನ್ನು ಇಡುತ್ತೇನೆ. ಈತನು ಶ್ರೀರಾಮ ಎನ್ನುವುದರ ಅರ್ಥ ಶ್ರೀರಾಮನಂತೆ ಈ ವ್ಯಕ್ತಿಯು ಉದಾತ್ತ ಪುರುಷನಾಗಿದ್ದಾನೆಂದು ತಾವೇ ವಿವರಿಸಿದ್ದೀರಿ. ಇದು ಸರಿಯಾದ ವಿವರಣೆಯೇ ಆಗಿದೆ. ಶ್ರೀರಾಮನಲ್ಲಿರುವ ಔದಾರ್ಯ ಗುಣವು ಈ ವ್ಯಕ್ತಿಯಲ್ಲಿಯೂ ಇದೆ ಎನ್ನುವುದು ಈ ವಾಕ್ಯದ ತಾತ್ಪರ್ಯ. ಅಲ್ಲಿಗೆ ಶ್ರೀ ರಾಮನಿಗೂ ಈ ವ್ಯಕ್ತಿಗೂ ಸಾಮ್ಯವಿರುವುದು ಔದಾರ್ಯ ಗುಣದಿಂದಾಗಿ ಎಂದಾಯಿತು. ಹಾಗೆಯೇ ಜೀವಾತ್ಮನಿಗೂ ಪರಮಾತ್ಮನಿಗೂ ಸಾಮ್ಯವನ್ನು ಯಾವ ಗುಣವನ್ನಿಟ್ಟುಕೊಂಡು ತಾವು ಹೇಳುತ್ತಿರುವಿರಿ.
ಮಂಡನರು : ಯತಿವರೇಣ್ಯರೇ, ಪರಮಾತ್ಮ ಜೀವಾತ್ಮರಲ್ಲಿ ಕಂಡು ಬರುವ ಸಮಾನಾಂಶವೆಂದರೆ ಚೈತನ್ಯವು ಈ ಚೈತನ್ಯವನ್ನೇ ಇಟ್ಟುಕೊಂಡು ಸಾಮ್ಯವನ್ನು ಹೇಳಬಹುದಲ್ಲವೇ ?
ಶಂಕರರು : ಪಂಡಿತೋತ್ತಮರೇ, ಅಂದರೆ ‘ಜೀವನು ಪರಮಾತ್ಮನಂತೆ ಚೈತನ್ಯ ಸ್ವರೂಪನಾಗಿದ್ದಾನೆ ಎಂದು ಹೇಳಿದಂತಾಯಿತು. ಜೀವವು ಚೇತನವೆನ್ನುವುದು ಆಬಾಲ ವೃದ್ಧರಿಗೂ ತಿಳಿದ ವಿಷಯ ಇದನ್ನು ತಿಳಿಸುವುದು ವೇದದ ಕೆಲಸವಲ್ಲ. ನೀರು ತಣ್ಣಗಿದೆ. ನೀರು ಹರಿಯುತ್ತದೆ. ಬೆಂಕಿ ಬಿಸಿಯಾಗಿದೆ, ಬೆಂಕಿ ಸುಡುತ್ತದೆ ಎಂದು ಶಾಸ್ತ್ರವಾಗಲಿ, ವೇದವಾಗಲಿ, ತಿಳಿಸಿ ಕೊಡಲು ಹೊರಟಿಲ್ಲ. ಇದು ಲೋಕ ಪ್ರಸಿದ್ಧವೇ ಆಗಿದೆ. ಆದ್ದರಿಂದ ಚೈತನ್ಯಾಂಶವನ್ನು ಇಟ್ಟುಕೊಂಡು ಸಾಮ್ಯವನ್ನು ಹೇಳುವುದು ಸಮಂಜಸವಲ್ಲ. ಶಾಸ್ತ್ರಜ್ಞರಾದ ತಮಗೆ ಇದು ತಿಳಿದ ವಿಷಯವಷ್ಟೆ.
ಮಂಡನರು : ಯತಿವರೇಣ್ಯರೇ, ಸಾಮ್ಯಕ್ಕೆ ಚೈತನ್ಯಾಂಶವನ್ನು ಕೈ ಬಿಡುತ್ತೇನೆ. ಪರಮಾತ್ಮನಲ್ಲಿ ಆನಂದ, ಜ್ಞಾನ ಮೊದಲಾದ ಗುಣಗಳು ಯಾವಾಗಲೂ ನಿತ್ಯವಾಗಿ ಇರುವುವೋ ಹಾಗೆಯೇ ಜೀವನಲ್ಲಿಯೂ ನಿತ್ಯವಾಗಿವೆ. ಆದರೆ ಅವಿದ್ಯೆಯ ಆವರಣವಿರುವುದರಿಂದ ಅವು ನಿತ್ಯವಾಗಿ ತೋರುವುದಿಲ್ಲ. ಪರಮಾತ್ಮನಲ್ಲಿರುವಂತೆ ಜೀವನ ಆನಂದಾದಿಗಳು ನಿತ್ಯ ಎಂದು ಇಬ್ಬರಲ್ಲೂ ಇರುವ ನಿತ್ಯತ್ವವನ್ನು ಇಟ್ಟುಕೊಂಡು ಸಾಮ್ಯವನ್ನು ಹೇಳುತ್ತೇನೆ. ಪರಮಾತ್ಮನಂತೆ ಜೀವನು ನಿತ್ಯಾನಂದ, ನಿತ್ಯಜ್ಞಾನ ಸ್ವರೂಪಿಯಾಗಿದ್ದಾನೆ ಎಂದು ತತ್ತ್ವಮಸಿ ವಾಕ್ಯದ ಮಥಿತಾರ್ಥ. ಈ ವಿಷಯವು ಲೋಕ ಪ್ರಸಿದ್ಧವಾಗಿಲ್ಲ. ಬೇರೆ ಯಾವ ಮೂಲದಿಂದಲೂ ಯಾರಿಗೂ ತಿಳಿದಿಲ್ಲ. ಈ ಪ್ರಕಾರ ಅರ್ಥೈಸಿದಾಗ ಯಾವ ಆಕ್ಷೇಪಣೆಗೂ ಅವಕಾಶವಿಲ್ಲ. ಆದ್ದರಿಂದ ತತ್ತ್ವಮಸಿ ವಾಕ್ಯವು ಜೀವೇಶ್ವರರ ಸಾಮ್ಯವನ್ನು ಹೇಳುವುದರ ಮೂಲಕ ಭೇದವನ್ನು ತಿಳಿಸಲು ಹೊರಟಿದೆ ಹೊರತು ಅವರಿಬ್ಬರ ಅಭೇದವನ್ನಲ್ಲ.
ಶಂಕರರು : ಪಂಡಿತೋತ್ತಮರೇ, ನಮ್ಮ ಸಿದ್ಧಾಂತದತ್ತ ತಾವು ಬರುತ್ತಿರುವಿರಿ. ಜೀವನದಲ್ಲಿ ನಿತ್ಯ ಜ್ಞಾನ. ನಿತ್ಯಾನಂದಾದಿ ಗುಣಗಳನ್ನು ಒಪ್ಪಿ ಅದನ್ನು ನಿರೂಪಿಸಲು ತಾವು ಅವಿದ್ಯೆಯನ್ನು ಸ್ವೀಕರಿಸಿದ್ದೀರಿ. ಅಲ್ಲಿಗೆ ಅವಿದ್ಯೆಯಿಂದಾಗಿ ಪರಮಾತ್ಮನ ನಿತ್ಯ ಜ್ಞಾನ ನಿತ್ಯಾನಂದಾದಿ ಗುಣಗಳು ಜೀವನಲ್ಲಿ ತೋರುವುದಿಲ್ಲ. ಅವಿದ್ಯಾವರಣ ನಿವಾರಣೆಯಾದರೆ ನಿತ್ಯ ಜ್ಞಾನ ನಿತ್ಯಾನಂದಾದಿ ಗುಣಗಳು ಸ್ವಯಂಪ್ರಕಾಶಿಸುತ್ತವೆ ಎಂದು ತಾವು ಹೇಳಿದಂತಾಯಿತು. ವೇದಾಂತಿಗಳಾದ ನಾವೂ ಇದನ್ನೇ ಹೇಳುತ್ತಿದ್ದೇವೆ. ಜೀವನು ನಿತ್ಯಾನಂದದಲ್ಲಿ ನೆಲೆ ನಿಂತಿದ್ದಾನೆ. ಅಂದರೆ ತಾನೇ ಬ್ರಹ್ಮವಾಗಿದ್ದಾನೆ ಎಂದರ್ಥ. ತತ್ತ್ವಮಸಿ ವಾಕ್ಯದ ಉಪಕ್ರಮ ಉಪಸಂಹಾರವನ್ನು ತಾವು ಪರಾಮರ್ಶಿಸಬೇಕು. ಆಗ ತಾವು ಹೇಳಿದ ಅರ್ಥವು ಹೊಂದುವುದಿಲ್ಲವೆಂದು ತಮಗೇ ತಿಳಿಯುವುದು. ಈ ಭೇದ ಪ್ರಪಂಚವು ತೋರುವವರೆಗೂ ಬ್ರಹ್ಮವೇ ನೀನಾಗಿರುವೆ ಎನ್ನುವ ತಿಳುವಳಿಕೆ ಬೇರೆ ಯಾವ ಮೂಲದಿಂದಲೂ ಬರಲು ಸರ್ವಥಾ ಸಾಧ್ಯವಿಲ್ಲ. ಈ ಜ್ಞಾನವು ಬರುವುದು ‘ತತ್ತ್ವಮಸಿ ಅಹಂ ಬ್ರಹ್ಮಾಸ್ಮಿ ಮೊದಲಾದ ಶೃತಿ ವಾಕ್ಯಗಳಿಂದ ಮಾತ್ರ. ತಂದೆ ತಾಯಿಗಿಂತ ಸಾವಿರ ಪಟ್ಟು ಹಿತ ಬಯಸುವ ಶೃತಿ ಮಾತೆಯಿಂದ ಈ ಅಪೂರ್ವ ಜ್ಞಾನ ಬರಲು ಸಾಧ್ಯವಷ್ಟೆ. ಆದ್ದರಿಂದ ನಿತ್ಯ ಶುದ್ಧ ಬುದ್ಧ ಮುಕ್ತವಾದ ಬ್ರಹ್ಮ ವಸ್ತುವನ್ನು ತಿಳಿಸಿ ಕೊಡುವುದೇ ಶೃತಿಯ ಅಂತಿಮ ಗುರಿ. ಶಾಸ್ತ್ರಜ್ಞರಾದ ತಾವು ಇದನ್ನು ಒಪ್ಪುತ್ತೀರಿ ಎಂದು ಭಾವಿಸುತ್ತೇನೆ.
ಮಂಡನರು : ಯತಿವರೇಣ್ಯರೇ, ನೀವು ಎಷ್ಟು ರೀತಿಯಲ್ಲಿ ಚರ್ಚಿಸಿದರೂ ಮನುಷ್ಯನ ದೇಹ ಇರುವವರೆಗೂ ನಿರಂತರವಾಗಿ ಕರ್ಮವನ್ನು ಆಚರಿಸಲೇಬೇಕು. ಕರ್ಮವನ್ನು ಆಚರಣೆ ಮಾಡುವವನ ಬದುಕು ಸಾರ್ಥಕ. ಕರ್ಮಾಚರಣೆ ಮಾಡದವನಿಗೆ ಎಂದಿಗೂ ಮುಕ್ತಿ ಸಿಗುವುದಿಲ್ಲ.
ಶಂಕರರು : ಪಂಡಿತೋತ್ತಮರೇ, ಬ್ರಾಹ್ಮಣನಿಗೆ ಅಗ್ನಿಹೋತ್ರವು ಅವಶ್ಯಕ ನಿಜ. ಆತನು ದಿನವೂ ಸುಜ್ಞಾನವೆಂಬ ದಿವ್ಯವಾದ ಅಗ್ನಿಯಲ್ಲಿ ಅಜ್ಞಾನ, ಮೋಹ, ಕಾಮ, ಕ್ರೋಧ, ಮದ, ಮತ್ಸರಗಳನ್ನು ಹೋಮ ಮಾಡಿ ಸುಡುತಲಿರುವುದೇ ಅಗ್ನಿ ಹೋತ್ರ. ಅಗ್ನಿಯೂ ಬ್ರಹ್ಮ ಹೋತೃವೂ ಬ್ರಹ್ಮ ಅರ್ಪಣೆಯೂ ಬ್ರಹ್ಮ, ಸಕಲ ಕರ್ಮವೂ ಬ್ರಹ್ಮ, ಸಕಲ ವಸ್ತುಗಳೂ ಕಾಲವೂ ಬ್ರಹ್ಮಮಯ. ಪಂಡಿತೋತ್ತಮರೇ ನಿಮ್ಮ ಮನಸ್ಸಿನಲ್ಲಿ ಇನ್ನೂ ಏನಾದರೂ ಕೇಳುವುದಿದ್ದರೆ ಕೇಳಿ ಹೇಳುತ್ತೇನೆ.
ಹಿನ್ನೆಲೆ
(ಮಂಡನ ಮಿಶ್ರರು ಯಾವ ಮಾತನ್ನೂ ಆಡದೆ ಮೌನವಾದರು. ಅವರ ಕೊರಳಲ್ಲಿದ್ದ ಹೂಮಾಲೆ ಬಾಡತೊಡಗಿತು. ಜೈಮಿನಿ ಮಹರ್ಷಿಗಳ ಸಿದ್ಧಾಂತ ಶಿಥಿಲವಾಯ್ತೆಂದು ವ್ಯಥೆಯಾಯಿತು. ಮಂಡನರ ಬೇಗುದಿಯನ್ನರಿತು ಭಗವತ್ಪಾದ ಶಂಕರರು ಹೇಳಿದರು)
ಶಂಕರರು : ಪಂಡಿತೋತ್ತಮರೇ, ಜೈಮಿನಿ ಮಹರ್ಷಿಗಳಿಗೂ ಪರಬ್ರಹ್ಮದ ವಿಷಯವೇ ಪರಮಗುರಿ. ಲೋಕದಲ್ಲಿ ವಿರಕ್ತರು ವಿಷಯಾಸಕ್ತರು ಇಬ್ಬರೂ ಇದ್ದಾರೆ. ವಿಷಯಾಸಕ್ತರಿಗೆ ಧರ್ಮ ಮಾರ್ಗದಲ್ಲಿ ಹೋಗಲು ಅವರು ಶೃತಿ ಸಮ್ಮತವಾದ ಕರ್ಮಗಳನ್ನು ತೋರಿಸಿದರು. ಕರ್ಮದ ಮೂಲಕ ಮೋಕ್ಷದತ್ತ ಜನರನ್ನು ಒಯ್ಯಬೇಕೆನ್ನುವುದು ಜೈಮಿನಿ ಮಹರ್ಷಿಗಳ ಆಶಯ. ಫಲಾಭಿಲಾಷೆಯಿಂದ ಕರ್ಮಗಳನ್ನು ಆಚರಿಸಿದರೆ ಅದರಿಂದಾದ ಪುಣ್ಯದಿಂದ ಸ್ವರ್ಗಾದಿ ಸುಖಗಳನ್ನು ಅನುಭವಿಸಬಹುದು. ಆದರೆ ಈ ಸುಖವು ನಿರಂತರವಾಗಿರುವುದಿಲ್ಲ. ಕಾಮನೆಯಿಂದ ಆಚರಿಸುವ ಕರ್ಮಗಳಿಗೆ ಸಕಾಮ ಕರ್ಮಗಳೆಂದು ಹೆಸರು. ಕಾಮನೆಯಿಲ್ಲದೆ ಆಚರಿಸಿದರೆ ನಿಷ್ಕಾಮ ಕರ್ಮಗಳೆನ್ನುತ್ತಾರೆ. ಈ ಕರ್ಮಾನುಷ್ಠಾನಕ್ಕೆ ಚಿತ್ತ ಶುದ್ಧಿಯೇ ಫಲ. ಚಿತ್ತ ಶುದ್ಧಿಯು ಬ್ರಹ್ಮ ಜ್ಞಾನಕ್ಕೆ ರಾಜಮಾರ್ಗ. ಆದ್ದರಿಂದ ನಿಷ್ಕಾಮ ಕರ್ಮವನ್ನಾಚರಿಸಿ ಚಿತ್ತ ಶುದ್ಧಿಯನ್ನು ಹೊಂದಿ ಜ್ಞಾನವನ್ನು ಸಂಪಾದಿಸಿ ಅದರಿಂದ ಎಲ್ಲರೂ ಮೋಕ್ಷವನ್ನು ಪಡೆಯಲಿ ಎನ್ನುವುದೇ ಜೈಮಿನಿ ಮಹರ್ಷಿಗಳ ಅಂತರಾಳದ ಆಶಯ.
ಹಿನ್ನೆಲೆ
(ವ್ಯಾಸ ಸೂತ್ರಗಳಿಗೂ ಜೈಮಿನಿ ಸೂತ್ರಗಳಿಗೂ ಯಾವ ವಿರೋಧವೂ ಇಲ್ಲವೆನ್ನುವುದನ್ನು ತಿಳಿ ಹೇಳಿದ ಶಂಕರರ ಮಾತನ್ನು ಕೇಳಿ ಮಂಡನ ಮಿಶ್ರರ ಮನಸ್ಸು ನಿರಾಳವಾಯಿತು. ಕಲಿಯುಗದಲ್ಲಿ ಪರಶಿವನೇ ಶಂಕರರಾಗಿ ಜ್ಞಾನವನ್ನು ಉಪದೇಶಿಸುತ್ತಾರೆ ಎನ್ನುವ ವಿಷಯ ನೆನಪಾಗಿ ಕೂಡಲೇ ಪೀಠದಿಂದ ಮೇಲೆದ್ದು ಶಂಕರರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ವಿನಮ್ರ ಭಾವದಿಂದ ಹೇಳುತ್ತಾರೆ.
ಮಂಡನರು : ಪೂಜ್ಯರೇ, ಜಗತ್ತಿಗೆ ಮೂಲ ಕಾರಣನಾದ ಜ್ಞಾನ ಸ್ವರೂಪಿ ಆ ಪರಮಾತ್ಮ ತಾವಾಗಿದ್ದೀರಿ. ಅಜ್ಞಾನಿಗಳ ಮೇಲಿನ ದಯೆಯಿಂದ ಶರೀರಧಾರಿಯಾಗಿ ನಮೆಗೆ ಕಾಣಿಸಿದ್ದೀರಿ. ಅದ್ವಿತೀಯವಾದ ಬ್ರಹ್ಮ ವಸ್ತುವಿನ ನಿಜ ಸ್ವರೂಪವನ್ನು ಪಂಡಿತರಿಗೂ ಪಾಮರರಿಗೂ ಸರಿಯಾಗಿ ತಿಳಿಸಿಕೊಡುತ್ತಿದ್ದೀರಿ. ತಾವು ಹೇಳುವ ಮುಕ್ತಿಯು ಸಂಸಾರ ಸ್ಪರ್ಶದ ಲವಲೇಶವೂ ಇಲ್ಲದ ನಿರವಧಿಯಾದ ಚಿದಾನಂದ ಲಹರಿಯೇ ಆಗಿದೆ. ಗಮನ ಮತ್ತು ಆಗಮನವಿಲ್ಲದೆ ತಾನೇ ತಾನಾಗಿ ಪ್ರಕಾಶಿಸುವ ಅದ್ವಿತೀಯ ಸ್ವಸ್ವರೂಪವಾಗಿದೆ. ಉಪನಿಷತ್ತುಗಳು ಬೋಧಿಸುವ ಈ ಮೋಕ್ಷ ಸ್ವರೂಪವನ್ನು ತಿಳಿಸಿಕೊಟ್ಟ ತಮಗೆ ಸಹಸ್ರ ಪ್ರಣಾಮಗಳನ್ನು ಅರ್ಪಿಸುತ್ತೇನೆ. ನನ್ನದೆಂದು ಭಾವಿಸುವ ಮನೆಮಡದಿ ಮತ್ತು ಸರ್ವ ಸಂಪತ್ತುಗಳನ್ನು ಪರಿತ್ಯಜಿಸಿ ತಮ್ಮನ್ನು ಆಶ್ರಯಿಸುತ್ತಿದ್ದೇನೆ. ತಮ್ಮ ಪಾದಸೇವೆಗೆ ಅನುವು ಮಾಡಿಕೊಡಿ. ನಾನು ಪ್ರತಿಜ್ಞೆ ಮಾಡಿದಂತೆ ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತೇನೆ. ತಾವು ನನಗೆ ಸಂನ್ಯಾಸವನ್ನು ನೀಡಿ ಅನುಗ್ರಹಿಸಬೇಕೆಂದು ವಿನಮ್ರವಾಗಿ ಪ್ರಾರ್ಥಿಸುತ್ತಿದ್ದೇನೆ.
(ವಾದದಲ್ಲಿ ಜಯಶೀಲರಾದ ಭಗವತ್ಪಾದ ಶಂಕರರು ಅದ್ವೈತ ಸಿದ್ಧಾಂತವನ್ನು ಸ್ಥಾಪಿಸುತ್ತಿರುವಾಗ ಸಭೆಯಲ್ಲಿರುವ ಸಕಲ ಪಂಡಿತರೂ ಶ್ರೀ ಶಂಕರರ ಜಯವನ್ನು ಕೊಂಡಾಡಿದರು. ಆ ಸಮಯದಲ್ಲಿ ಮಂಡನ ಮಿಶ್ರರ ಪತ್ನಿ ಉಭಯ ಭಾರತಿ ದೇವಿ ಬಂದು ಪತಿಯ ಪರಾಜಯವನ್ನು ತಪ್ಪಿಸಲು ತಾನೇ ವಾದ ಮಾಡಲು ಅಣಿಯಾದಳು. ಇಬ್ಬರಿಗೂ ವಾಗ್ವಾದ ನಡೆದು ಉಭಯ ಭಾರತಿ ದೇವಿಯ ಎಲ್ಲಾ ಪ್ರಶ್ನೆಗಳಿಗೂ ಸರಿ ಉತ್ತರವನ್ನು ನೀಡಿದ ಶಂಕರರಿಗೆ ಕಾಮಕಲೆಗಳ ಬಗ್ಗೆ ಪ್ರಶ್ನೆ ಕೇಳಿದಾಗ, ಒಂದು ತಿಂಗಳ ಅವಧಿಯನ್ನು ಕೇಳಿ, ತಮ್ಮ ಯೋಗ ಶಕ್ತಿಯಿಂದ ರಾಜಾ ಅಮರುಕನ ಶವವನ್ನು ಪ್ರವೇಶಿಸಿ ಉತ್ತರವನ್ನು ತಿಳಿದು ಬಂದು ಸರಿಯಾದ ಉತ್ತರವನ್ನು ನೀಡುತ್ತಾರೆ.)
ದೃಶ್ಯ ೨೨ : ಉಭಯ ಭಾರತಿ ದೇವಿಯ ಅನುಗ್ರಹ
ಉ.ಭಾ.ದೇವಿ : ಯತಿವರ್ಯಾ, ಧರ್ಮದ ರಕ್ಷಣೆಗಾಗಿ ಪರಕಾಯ ಪ್ರವೇಶ ಮಾಡಿ ನನ್ನ ಪ್ರಶ್ನೆಗೆ ಸರಿಯಾದ ಉತ್ತರ ತಿಳಿದು ಬಂದು ಹೇಳಿದ ನೀನು ದೇವತೆಗಳ ಇಷ್ಟಾರ್ಥವನ್ನು ನೆರವೇರಿಸುವ ಸಲುವಾಗಿ ಅವತರಿಸಿರುವೆಯಲ್ಲವೇ ?
ಶಂಕರರು : ತಾಯೇ, ನೀನು ಹೇಳುತ್ತಿರುವುದು ನಿಜ. ದ್ವೈತಾಂಧಕಾರವನ್ನು ತೊಲಗಿಸಿ ಅದ್ವೈತ ಸಿದ್ಧಾಂತವನ್ನು ಸ್ಥಾಪಿಸುವುದೇ ನನ್ನ ಕರ್ತವ್ಯ. ಹೇ ದೇವಿ, ಜಗದ್ರಕ್ಷಣೆಗಾಗಿ ಅವತರಿಸಿ ಬಂದಿರುವ ಬ್ರಹ್ಮನ ರಾಣಿ ನೀನು. ನಿನಗೆಲ್ಲವೂ ತಿಳಿದಿದೆ.
ಉ.ಭಾ.ದೇವಿ : ಯತಿವರ್ಯಾ, ಉಪನಿಷತ್ತುಗಳ ಅರ್ಥವನ್ನು ವಿದ್ಯಾಧಿದೇವತೆಯಾದ ನಾನೇ ಎಲ್ಲರಿಗೂ ತಿಳಿಸಿಕೊಡಬೇಕಾಗಿತ್ತು. ತ್ರಿಕಾಲದಲ್ಲಿಯೂ ವಿಕಾರಿಯಾಗದೆ ವಿನಾಶಿಯಾಗದೆ ಇರುವುದೆಂದರೆ ಪರಬ್ರಹ್ಮ ಮಾತ್ರ. ಅದು ಒಂದೇ. ಜಗತ್ತೆಲ್ಲವೂ ತೋರುತ್ತಿದೆಯೇ ಹೊರತು ಅದಕ್ಕೆ ಸ್ವತಂತ್ರವಾದ ಅಸ್ತಿತ್ವವಿಲ್ಲ. ಇದೇ ಸಕಲ ವೇದಾಂತಗಳ ಸಾರ. ನಿನ್ನ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಮೂಲ ಸ್ಥಾನಕ್ಕೆ ತೆರಳುತ್ತೇನೆ.
ಶಂಕರರು : ಹೇ ತಾಯೇ, ಜಗಜ್ಜನನಿ ಭೂಲೋಕದಲ್ಲಿ ವೈದಿಕ ಸನ್ಮಾರ್ಗದ ಪ್ರಚಾರ ಕಾರ್ಯದಲ್ಲಿ ನಿನ್ನ ಸಾನ್ನಿಧ್ಯವು ಅತ್ಯಂತ ಅಗತ್ಯವಾಗಿದೆ. ತಾಯೇ ದಯಾಮಯೀ ನಿನ್ನನ್ನು ಪ್ರಾರ್ಥಿಸುತ್ತೇನೆ. ಕರುಣೆ ತೋರು.
ಉ.ಭಾ.ದೇವಿ : ಶಂಕರಾ, ನಿನ್ನ ಇಷ್ಟಾರ್ಥವೇನೆಂದು ಹೇಳು, ನೆರವೇರಿಸುವೆ.
ಶಂಕರರು : ಅಮ್ಮಾ, ಸಾಕ್ಷಾತ್ ಸರಸ್ವತಿ ದೇವಿ. ನಾನು ಸನಾತನ ಧರ್ಮಕ್ಕೆ ಭಂಗ ಬಾರದಂತೆ ಧರ್ಮ ರಕ್ಷಣೆಗಾಗಿ ದಿವ್ಯ ಕ್ಷೇತ್ರಗಳಲ್ಲಿ ಆಮ್ನಾಯ ಪೀಠಗಳನ್ನು ರಚಿಸಬೇಕೆಂದಿದ್ದೇನೆ. ನೀನು ಆಯಾಯ ಪೀಠಗಳಲ್ಲಿ ಸದಾ ಸನ್ನಿಹಿತಳಾಗಿ ಶಾರದಾಂಬಾ ಎಂಬ ಹೆಸರಿನಿಂದ ಸಮಸ್ತ ಭಕ್ತರ ಇಷ್ಟಾರ್ಥವನ್ನು ನೆರವೇರಿಸುತ್ತ ಅನುಗ್ರಹಿಸಬೇಕೆಂದು ನಿನ್ನಲ್ಲಿ ಪ್ರಾರ್ಥಿಸುತ್ತೇನೆ.
ಉ.ಭಾ. ದೇವಿ : ಶಂಕರಾ, ನಿನ್ನಿಚ್ಛೆಯಂತೆ ಆಗಲಿ. ಧರ್ಮ ರಕ್ಷಣೆಯ ಧ್ಯೇಯದಿಂದ ಅದ್ವೈತ ತತ್ತ್ವ ಸಿದ್ಧಾಂತವನ್ನು ಸ್ಥಾಪಿಸುವ ನಿನ್ನ ಕಾರ್ಯತತ್ಪರತೆ ಮಹತ್ತರವಾದದ್ದು. ನೀನು ಸ್ಥಾಪಿಸುವ ಆಮ್ನಾಯ ಪೀಠಗಳಲ್ಲಿ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವೆನು. ತಥಾಸ್ತು.
(ಉಭಯ ಭಾರತಿ ದೇವಿ ಬ್ರಹ್ಮ ಲೋಕಕ್ಕೆ ತೆರಳುವಳು)
(ಶಂಕರರು ಮಂಡನ ಮಿಶ್ರರಿಗೆ ಸಂನ್ಯಾಸ ದೀಕ್ಷೆ ನೀಡಿ ಪ್ರಣವ ಮಹಾವಾಕ್ಯಗಳನ್ನು ಉಪದೇಶಿಸಿ ಸುರೇಶ್ವರ ಎಂದು ನಾಮಕರಣ ಮಾಡಿದರು. ಭಗವತ್ಪಾದ ಶಂಕರರು ಶಿಷ್ಯರೊಂದಿಗೆ ದಕ್ಷಿಣಾಭಿಮುಖವಾಗಿ ಹೊರಟು ಶ್ರೀ ಶೈಲ ಸೇರಿದರು. ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಶಿವಾನಂದ ಲಹರಿ ರಚಿಸಿ ಜ್ಯೋತಿರ್ಲಿಂಗ ದರ್ಶನ ಮಾಡಿ ಸ್ತುತಿಸಿದರು)
ದೃಶ್ಯ ೨೩ : ಶ್ರೀ ಶೈಲದಲ್ಲಿ ಶಂಕರರು
ಶಿವಾನಂದ ಲಹರಿ
ಶಂಕರರು :
ಕಲಾಭ್ಯಾಂ ಚೂಡಾಲಂಕೃತ ಶಶಿಕಲಾಭ್ಯಾಂ ನಿಜತಪಃ
ಫಲಾಭ್ಯಾಂ ಭಕ್ತೇಷು ಪ್ರಕಟಿತ ಫಲಾಭ್ಯಾಂ ಭವತು ಮೇ
ಶಿವಾಭ್ಯಾಮಸ್ತೋಕ ತ್ರಿಭುವನ ಶಿವಾಭ್ಯಾಂ ಹೃದಿ ಪುನಃ
ಭವಾಭ್ಯಾಮಾನಂದ ಸ್ಫುರದನು ಭವಾಭ್ಯಾಂನತಿರಿಯಮ್
ಗಲಂತೀ ಶಂಭೋ ತ್ವಚ್ಚರಿತ ಸರಿತಃ ಕಿಲ್ಬಿಷರಜೋ
ದಲಂತೀ ಧೀಕುಲ್ಯಾ ಸರಣಿಷು ಪತಂತೀ ವಿಜಯತಾಮ್
ದಿಶಂತೀ ಸಂಸಾರಭ್ರಮಣ ಪರಿತಾಪೋಪ ಶಮನಂ
ವಸಂತೀ ಮಚ್ಚೇತೋಹ್ರದಭುವಿ ಶಿವಾನಂದಲಹರೀ
ಹಿನ್ನೆಲೆ
(ಅಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ತೀರದಲ್ಲಿ ಶಂಕರರು ತಾವು ರಚಿಸಿದ ಭಾಷ್ಯ ಗ್ರಂಥಗಳನ್ನು ಶಿಷ್ಯರಿಗೆ ಬೋಧಿಸುತ್ತಿದ್ದರು. ಶಂಕರರ ವಿಷಯ ತಿಳಿದ ಅಲ್ಲಿಯ ವಿದ್ವಾಂಸರಲ್ಲಿ ಕೆಲವರು ಬಂದು ವಾದಕ್ಕಿಳಿದು ಪರಾಜಿತರಾದರು. ಇನ್ನೂ ಕೆಲವರು ತಮ್ಮ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿಕೊಂಡು ಭಗವತ್ಪಾದರ ಶಿಷ್ಯರಾದರು. ಒಂದು ದಿನ ಶಂಕರರು ಪಾಠ ಮುಗಿಸಿ ಏಕಾಂತದಲ್ಲಿದ್ದರು. ಅಲ್ಲಿಗೆ ಒಬ್ಬ ದುರ್ಬುದ್ಧಿಯ ಕಾಪಾಲಿಕ ಬಂದು ಕಪಟ ವಿನಯದಿಂದ)
ದೃಶ್ಯ ೨೪ : ನಯವಂಚಕ ಕಾಪಾಲಿಕ
ಕಾಪಾಲಿಕ : ಆಚಾರ್ಯರೇ, ತಮಗೆ ನನ್ನ ಪ್ರಣಾಮಗಳು. ತಾವು ಪರೋಪಕಾರಕ್ಕಾಗಿ ದೇಹ ಧರಿಸಿದ್ದೀರಿ. ಸಜ್ಜನರ ಕಷ್ಟವನ್ನು ತಮ್ಮ ಕೃಪಾಕಟಾಕ್ಷದಿಂದಲೇ ದೂರ ಮಾಡುವಿರಿ. ಆತ್ಮಜ್ಞಾನಿಗಳಾದ ತಾವು ದೇಹಾಭಿಮಾನ ತೊರೆದವರು. ತಮ್ಮಲ್ಲಿ ನನ್ನದೊಂದು ಕೋರಿಕೆಯಿದೆ.
ಶಂಕರರು : ಅಯ್ಯಾ, ನಿನ್ನ ಕೋರಿಕೆಯೇನು ?
ಕಾಪಾಲಿಕ : ಆತ್ಮಜ್ಞಾನಿಗಳೇ, ನಾನು ಸಶರೀರನಾಗಿ ಕೈಲಾಸಕ್ಕೆ ತೆರಳಿ ಪರಶಿವನ ಗಣಗಳಲ್ಲೊಬ್ಬನಾಗಿರಲು ಸಂಕಲ್ಪ ಮಾಡಿದ್ದೇನೆ. ಅದಕ್ಕಾಗಿ ಉಗ್ರ ತಪಸ್ಸನ್ನು ಆಚರಿಸಿ ಉಗ್ರ ಭೈರವನನ್ನು ಸಂತೋಷ ಪಡಿಸಿದ್ದೇನೆ. ನನ್ನ ಸಂಕಲ್ಪ ನೆರವೇರಲು ತಮ್ಮ ಸಹಾಯದ ಅಗತ್ಯವಿದೆ.
ಶಂಕರರು : ನಿನಗೆ ನನ್ನಿಂದಾಗಬೇಕಾದ ಸಹಾಯವೇನು ?
ಕಾಪಾಲಿಕ : ನನ್ನ ಸಂಕಲ್ಪ ಈಡೇರಬೇಕಾದರೆ ರಾಜಾಧಿರಾಜನ ಶಿರಸ್ಸನ್ನಾಗಲಿ ಅಥವಾ ಸರ್ವಜ್ಞನಾದವನ ಶಿರಸ್ಸನ್ನಾಗಲಿ ಅಗ್ನಿಯಲ್ಲಿ ಹೋಮ ಮಾಡಬೇಕು. ರಾಜನ ಶಿರಸ್ಸು ಸಿಗುವುದು ಕಷ್ಟ. ಸರ್ವಜ್ಞರಾದ ತಾವು ತಮ್ಮ ಶಿರಸ್ಸನ್ನು ದಾನ ಮಾಡಿದರೆ ನನ್ನ ಕಾರ್ಯ ಸಿದ್ಧಿಯಾಗುವುದು. ದೇಹಾಭಿಮಾನ ತೊರೆದ ತಾವು ನನ್ನ ಪ್ರಾರ್ಥನೆಯನ್ನು ನೆರವೇರಿಸುತ್ತೀರೆಂದು ನಂಬಿದ್ದೇನೆ.
ಶಂಕರರು : ಅಯ್ಯಾ, ಯಾವಾಗಲಾದರೂ ಬೀಳಲೇಬೇಕಾದ ಈ ದೇಹದ ಬಗ್ಗೆ ನನಗೆ ಮಮಕಾರವಿಲ್ಲ. ಈ ದೇಹದಿಂದ ಪರೋಪಕಾರವಾಗುವುದಾದರೆ ಈಗಲೇ ನಾನು ಕೊಡಲು ಸಿದ್ಧ. ನಾನು ಸಮಾಧಿ ಸ್ಥಿತಿಯಲ್ಲಿ ಏಕಾಂತವಾಸದಲ್ಲಿರುವಾಗ ನಿನ್ನ ಬೇಡಿಕೆಯನ್ನು ಈಡೇರಿಸಿಕೋ. ನನ್ನ ಶಿಷ್ಯರಿಗೆ ಈ ವಿಷಯ ಗೊತ್ತಾಗಬಾರದು. ನಾಳೆಯೇ ಶಿಷ್ಯರ್ಯಾರು ಇಲ್ಲದ ಸಮಯದಲ್ಲಿ ಬಾ.
(ಮಾರನೆಯ ದಿನ ಶಿಷ್ಯರೆಲ್ಲಾ ಸ್ನಾನಕ್ಕೆ ತೆರಳಿದ್ದರು. ಕಾಪಾಲಿಕನಿಗೆ ಮಾತು ಕೊಟ್ಟಂತೆ ತಮ್ಮ ಸ್ಥಾನ ಸಿದ್ಧಾಸನದಲ್ಲಿ ಸಮಾಧಿ ಸ್ಥಿತಿಯಲ್ಲಿ ಕುಳಿತರು. ಕಾಪಾಲಿಕನು ಖಡ್ಗವನ್ನು ಹಿಡಿದು ಶಂಕರರ ಹತ್ತಿರ ಬಂದು ನಿಂತನು. ಕಾಪಾಲಿಕನು ಖಡ್ಗವನ್ನೆತ್ತಿ ಶಂಕರರ ಮೇಲೆರಗುವಾಗ ಪದ್ಮಪಾದರಿಗೆ ಈ ದೃಶ್ಯ ಕಾಣಿಸಿತು. ಕೂಡಲೇ ಪದ್ಮಪಾದರು ನರಸಿಂಹನ ಮಂತ್ರವನ್ನು ಜಪಿಸುತ್ತ ನರಸಿಂಹನಿಂದ ಆವಿಷ್ಟರಾಗಿ ಶಂಕರರ ಹತ್ತಿರಕ್ಕೆ ರಭಸದಿಂದ ಬಂದು ಗರ್ಜನೆ ಮಾಡುತ್ತ ಕಾಪಾಲಿಕನ ಮುಂದೆ ನಿಂತರು. ಆ ಕ್ಷಣದಲ್ಲಿ ಅವರನ್ನು ಕಂಡ ಕಾಪಾಲಿಕನಿಗೆ ಉಗ್ರ ನರಸಿಂಹನನ್ನೇ ಕಂಡಂತಾಗಿ ಬೆದರಿ ಖಡ್ಗವನ್ನು ಬಿಸುಟು ಓಡತೊಡಗಿದನು. ಆಗ ನರಸಿಂಹನು ತನ್ನ ಉಗುರುಗಳಿಂದ ಸೀಳಿ ಅವನ ಸಂಹಾರ ಮಾಡಿದನು. ಪದ್ಮಪಾದರ ಗರ್ಜನೆ ಕೇಳಿ ದೂರದಲ್ಲಿದ್ದ ಶಿಷ್ಯರು ಓಡಿ ಬಂದು ಏನೂ ತೋಚದೆ ನಿಂತರು. ಶಂಕರರು ಕಣ್ಣು ತೆರೆದು ಸಮಾಧಿ ಸ್ಥಿತಿಯಿಂದ ಬಾಹ್ಯ ಜಗತ್ತಿಗೆ ಬಂದು ಪದ್ಮಪಾದರ ಉಗ್ರ ನರಸಿಂಹಾವತಾರ ನೋಡಿ ಭಗವಂತನಾದ ನರಸಿಂಹ ಸ್ವಾಮಿಯನ್ನು ವಿವಿಧ ರೀತಿಯಲ್ಲಿ ಸ್ತುತಿಸಿದರು.)
ನರಸಿಂಹ ಸ್ವಾಮಿಯ ಸ್ತುತಿ
ಶಂಕರರು :
ಶ್ರೀ ಮತ್ಪಯೋನಿಧಿ ನಿಕೇತನ ಚಕ್ರಪಾಣೇ
ಭೋಗೀಂದ್ರ ಭೋಗಮಣಿ ರಾಜಿತ ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ
ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಮ್ ||
ಬ್ರಹ್ಮೇಂದ್ರ ರುದ್ರಮರುದರ್ಕ ಕಿರೀಟ ಕೋಟಿ
ಸಂಘಟ್ಟಿತಾಂಘ್ರಿ ಕಮಲಾಮಲ ಕಾಂತಿಕಾಂತ |
ಲಕ್ಷ್ಮೀಲಸತ್ ಕುಚಸರೋರುಹ ರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ||
(ನರಸಿಂಹ ಸ್ವಾಮಿಯ ಸ್ತುತಿ ಮುಗಿಯುತ್ತಿದ್ದಂತೆ ಪದ್ಮಪಾದರು ಮೊದಲ ಸ್ಥಿತಿಗೆ ಬಂದರು)
ಶಂಕರರು ಕೆಲವು ದಿನಗಳ ನಂತರ ಶಿಷ್ಯರೊಂದಿಗೆ ತೀರ್ಥಯಾತ್ರೆಗೆ ಹೊರಟು ಗೋಕರ್ಣ ಕ್ಷೇತ್ರ ತಲುಪಿ ಮಹಾಬಲೇಶ್ವರನನ್ನು ಅರ್ಚಿಸಿ ಸ್ತುತಿಸಿದರು.
ದೃಶ್ಯ ೨೫ : ಗೋಕರ್ಣದ ಮಹಾಬಲೇಶ್ವರನ ಸ್ತುತಿ
ಶಂಕರರು :
ಗಲದ್ದಾನ ಗಂಡಂ ಮಿಲದ್ಭೃಂಗ ಷಂಡಂ
ಚಲಚ್ಚಾರು ಶುಂಡಂ ಜಗತ್ರಾಣ ಶೌಂಡಮ್ |
ಕನದ್ದಂತ ಕಾಂಡಂ ವಿಪದ್ಭಂಗ ಚಂಡಂ
ಶಿವ ಪ್ರೇಮ ಪಿಂಡಂ ಭಜೇ ವಕ್ರತುಂಡಮ್ ||
ಅನಾದ್ಯಂತ ಮಾದ್ಯಂ ಪರಂ ತತ್ತ್ವಮರ್ಥಂ
ಚಿದಾಕಾರಮೇಕಂ ತುರೀಯಂ ತ್ವಮೇಯಮ್ |
ಹರಿಬ್ರಹ್ಮ ಮೃಗ್ಯಂ ಪರಬ್ರಹ್ಮ ರೂಪಂ
ಮನೋವಾಗತೀ ತಂ ಮಹಃಶೈವ ಮೀಡೇ ||
(ಗೋಕರ್ಣದಲ್ಲಿ ಮೂರು ದಿನ ಉಳಿದು ಅಲ್ಲಿನ ವಿದ್ವಾಂಸರಿಗೆ ಅದ್ವೈತ ದರ್ಶನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಗಾಣಪತ್ಯ ಪಂಥದ ನೆಲೆಯಾಗಿದ್ದ ಗೋಕರ್ಣದಲ್ಲಿ ಶಂಕರರ ಪ್ರಭಾವದಿಂದ ಆ ಪಂಥದಲ್ಲಿನ ಕೆಟ್ಟ ಆಚರಣೆಗಳು ದೂರವಾದವು.
(ಶಂಕರರು ಗೋಕರ್ಣದಿಂದ ಹೊರಟು ಶಂಕರನಾರಾಯಣ ಕ್ಷೇತ್ರಕ್ಕೆ ಬಂದರು. ಅಲ್ಲಿ ಹರಿಹರರನ್ನು ನೋಡಿ ಆನಂದಪರವಶರಾದರು. ಹರಿಹರರನ್ನು ಸ್ತುತಿಸಿ ಪೂಜೆ ಮಾಡಿದರು. ಅಲ್ಲಿಂದ ಕೊಲ್ಲೂರಿಗೆ ಹೊರಟರು. ಆ ದಾರಿಯಲ್ಲಿ ದಂಪತಿಗಳು ಸತ್ತ ಮಗುವನ್ನಿಟ್ಟುಕೊಂಡು ಅಳುತ್ತಿದ್ದರು. ಈ ದೃಶ್ಯ ನೋಡಿದ ಶಂಕರರ ಹೃದಯವೂ ಶೋಕತಪ್ತವಾಯಿತು. ಕರುಣಾರ್ದ್ರಚಿತ್ತರಾಗಿ ಯೋಗಶಕ್ತಿಯಿಂದ ತಮ್ಮ ಕೃಪಾ ಕಟಾಕ್ಷ ಬೀರಿ ಮಗುವನ್ನು ಬದುಕಿಸಿದರು. ಮಗು ಎದ್ದು ಅಮ್ಮಾ ಎಂದಾಗ ದಂಪತಿಗಳು ಶಂಕರರ ಪಾದಗಳಿಗೆ ನಮಸ್ಕರಿಸಿ ಆನಂದಭಾಷ್ಪಗಳನ್ನೇ ಹರಿಸಿದರು. ಶಂಕರರು ಅಲ್ಲಿಂದ ಹೊರಟು ಕೊಲ್ಲೂರಿಗೆ ಬಂದು ಮೂಕಾಂಬಿಕಾ ದೇವಿಯನ್ನು ದರ್ಶನ ಮಾಡಿ ಸ್ತುತಿಸುತ್ತಾರೆ.)
ದೃಶ್ಯ ೨೬ : ದೇವಿ ಸ್ತುತಿ
ಶಂಕರರು :
ವಿರಿಂಚ್ಯಾದಿ ಭಿಃ ಪಂಚಭಿರ್ಲೋಕ ಪಾಲೈಃ
ಸಮೂಢೇ ಮಹಾನಂದ ಪೀಠೇ ನಿಷಣ್ಣಮ್ |
ಧನುರ್ಬಾಣ ಪಾಶಾಂಕುಶ ಪ್ರೋತಹಸ್ತಂ
ಮಹಾಸ್ತ್ರೈಪುರಂ ಶಂಕರಾದ್ವೈತ ಮವ್ಯಾತ್ ||
ಯದನ್ನಾದಿ ಭಿಃ ಪಂಚಭಿಃ ಕೋಶ ಜಾಲೈಃ
ಶಿರಃ ಪಕ್ಷ ಪುಚ್ಛಾತ್ಮ ಕೈರಂತ ರಂತಃ |
ನಿಗೂಢೇ ಮಹಾಯೋಗ ಪೀಠೇ ನಿಷಣ್ಣಂ
ಪುರಾರೇ ರಥಾಂತಃ ಪುರಂ ನೌಮಿನಿತ್ಯಮ್ ||
ಶಂಕರರು : ಹೇ ತಾಯೀ, ನಿನ್ನ ಪಾದ ಕಿರಣದಿಂದ ಮೂರು ಲೋಕವೂ ಬೆಳಗುತ್ತಿದೆ. ನಿನ್ನ ಪಾದಪದ್ಮಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಹೇ ದೇವಿ, ನಿನ್ನನ್ನು ಕೆಲವರು ಬಾಹ್ಯ ಪ್ರತಿಮೆಗಳಲ್ಲಿ ಪೂಜಿಸುವರು. ಕೆಲವರು ಬಾಹ್ಯ ಮತ್ತು ಅಂತರಂಗಗಳಲ್ಲಿ ಅರ್ಚಿಸುವರು. ಕೇವಲ ಮಾನಸ ಪೂಜೆ ಮಾಡುವವರೂ ಇರುವರು, ಬೆರಳೆಣಿಕೆಯ ಜನರು ಮಾತ್ರಾ ನಿನ್ನೊಡನೆ ಐಕ್ಯವನ್ನು ಅನುಸಂಧಾನ ಮಾಡುತ್ತಿರುತ್ತಾರೆ. ಎಲ್ಲಾ ತರಹದ ಸಾಧಕರಿಗೂ ಅನುಗ್ರಹವನ್ನು ನೀಡುವ ಓ ಜಗನ್ಮಾತೆಯೇ ನನ್ನ ಧ್ಯೇಯ ಸಾಧನೆಗೆ ನೀನು ಶಕ್ತಿಯಾಗಿರಬೇಕೆಂದು ನಿನ್ನಲ್ಲಿ ಪ್ರಾರ್ಥಿಸುತ್ತೇನೆ.
(ಶಂಕರರು ಕೊಲ್ಲೂರಿನಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿ ಕೆಲವು ದಿನ ಪೂಜೆ ಮಾಡಿ ಅಲ್ಲಿಂದ ಹೊರಟು ಶ್ರೀಒಲಿ ಅಗ್ರಹಾರಕ್ಕೆ ಬಂದರು. ಅಲ್ಲಿಯ ಪಂಡಿತ ಪ್ರಭಾಕರನು ಜಡನಾಗಿರುವ ತನ್ನ ಮಗನೊಂದಿಗೆ ಶಂಕರರ ಬಳಿ ಬಂದು ನಮಸ್ಕರಿಸಿ)
ದೃಶ್ಯ ೨೭ : ಮೂಕಬಾಲಕ ಹಸ್ತಾಮಲಕನಾದ
ಪ.ಪ್ರಭಾಕರ : ಮಹಾಸ್ವಾಮಿ, ಇವನು ನನ್ನ ಮಗ. ವಯಸ್ಸು ಹದಿಮೂರು. ಉಪನಯನ ಸಂಸ್ಕಾರ ಮಾಡಿದ್ದೇನೆ. ಅಕ್ಷರ ಬರುವುದಿಲ್ಲ. ವೇದ ಪಾಠವನ್ನು ಹೇಳಿಕೊಟ್ಟರೂ ಹೇಳುವುದಿಲ್ಲ. ಊಟ ಮಾಡಿದರೂ ಮಾಡಿದ, ಬಿಟ್ಟರೂ ಬಿಟ್ಟ. ಆಟವನ್ನೂ ಆಡುವುದಿಲ್ಲ. ತನ್ನ ಪಾಡಿಗೆ ತಾನಿರುತ್ತಾನೆ. ಇವನಿಗೆ ಯಾರಾದರೂ ಹೊಡೆದರೂ ಕೋಪ ಬರುವುದಿಲ್ಲ. ಶಾಂತನಾಗಿ ಜಡನಾಗಿ ಇರುತ್ತಾನೆ. ನನಗೆ ಇವನೊಬ್ಬನೇ ಮಗ. ನನಗೆ ಇವನದೇ ಚಿಂತೆಯಾಗಿದೆ. ಸ್ವಾಮೀ, ತಮ್ಮ ಕೃಪಾಕಟಾಕ್ಷದಿಂದ ನನ್ನ ಮಗನನ್ನು ಸರಿ ಮಾಡಬೇಕೆಂದು ಪ್ರಾರ್ಥಿಸುತ್ತೇನೆ.
(ಭಗವತ್ಪಾದ ಶಂಕರರು ಬಾಲಕನ ಮೈದಡವಿ)
ಶಂಕರರು : ವತ್ಸಾ, ನೀನು ಯಾರು, ಏಕೆ ಜಡನಂತಿರುವೆ ? ನನ್ನಲ್ಲಿ ಹೇಳು.
ಬಾಲಕ : ಮನೋಬುದ್ಧಿಹಂಕಾರ – ಚಿತ್ತನಾನಲ್ಲ
ಶ್ರೋತೃ ಜಿಹ್ವೆಗಳಲ್ಲಿ – ನೇತ್ರ ನಾನಲ್ಲ
ಆಕಾಶವೀ ಭೂಮಿ – ತೇಜ ನಾನಲ್ಲ
ಸಚ್ಚಿದಾನಂದಾತ್ಮ – ಶಿವನಾನು
ಪಂಚವಾಯುಗಳಲ್ಲಿ – ಪ್ರಾಣ ನಾನಲ್ಲ
ಸಪ್ತಧಾತುಗಳಲ್ಲಿ – ಕೋಶ ನಾನಲ್ಲ
ಪುಣ್ಯ ಪಾಪಗಳಲ್ಲಿ – ಸೌಖ್ಯ ನಾನಲ್ಲ
ಸಚ್ಚಿದಾನಂದಾತ್ಮ – ಶಿವ ನಾನು
ಜ್ಞಾನಿಗಳೇ, ನನ್ನ ಸಾನ್ನಿಧ್ಯದಿಂದ ಈ ಜಡವಾದ ಶರೀರ ನಡೆದಾಡುತ್ತಿದೆ. ಹೀಗಿರುವಾಗ ನಾನು ಜಡನೇ ಕೇವಲ ಆನಂದಮಯವಾದ ಚೇತನ ಸ್ವರೂಪಿ ಪರಬ್ರಹ್ಮವಾಗಿದ್ದೇನೆ. ಎಲ್ಲಾ ಮೋಕ್ಷಾರ್ಥಿಗಳಿಗೂ ನನಗಿರುವಂತಹ ಆನಂದಾನುಭವವು ಉಂಟಾಗಲಿ.
(ಬಾಲಕನ ಮಾತುಗಳನ್ನು ಕೇಳಿ ಎಲ್ಲರೂ ನಿಬ್ಬೆರಗಾದರು)
ಶಂಕರರು : ದ್ವಿಜೋತ್ತಮ, ನಿನ್ನ ಮಗನು ಅದ್ವಿತೀಯವಾದ ಪರಮಾರ್ಥ ತತ್ತ್ವವನ್ನು ಕೈಯ್ಯಲ್ಲಿರುವ ನೆಲ್ಲಿಕಾಯಿಯಂತೆ ತಿಳಿದುಕೊಂಡಿದ್ದಾನೆ. ಈತನನ್ನು ನಾನು ಹಸ್ತಾಮಲಕನೆಂದು ಕರೆಯುತ್ತೇನೆ. ಅಯ್ಯಾ, ಬ್ರಾಹ್ಮಣ ನಿಮಗೆಲ್ಲರಿಗೂ ಜಡನಂತೆ ಕಾಣುತ್ತಿರುವ ಈ ಬಾಲಕನಿಂದ ನಿನಗೇನೂ ಪ್ರಯೋಜನವಿಲ್ಲ.
ಪ.ಪ್ರಭಾಕರ : ಸ್ವಾಮೀ, ನನ್ನ ಮಗ ಬ್ರಹ್ಮ ಜ್ಞಾನಿಯೆಂದು ತಮ್ಮಿಂದ ತಿಳಿದು ತುಂಬಾ ಸಂತೋಷವಾಯಿತು.
ಶಂಕರರು : ಬ್ರಾಹ್ಮಣಾ, ನಿನಗೆ ಪುನಃ ಪುತ್ರ ಸಂತಾನವಾಗುವುದು ನಿನ್ನ ಈ ಮಗನನ್ನು ನನ್ನ ಜೊತೆಗೆ ಕರೆದುಕೊಂಡು ಹೋಗುತ್ತೇನೆ.
(ಪ್ರಭಾಕರರು ಸಮ್ಮತಿಸಿ ಭಗವತ್ಪಾದರಿಗೆ ನಮಸ್ಕರಿಸಿ ಹೊರಟರು)
ದೃಶ್ಯ ೨೮ : ವನದೇವಿ ದರ್ಶನ
(ಅಗ್ರಹಾರದಿಂದ ಹೊರಟ ಶಂಕರರು ಮತ್ತು ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಗ್ರಾಮದ ಬಳಿ ಬರುತ್ತಿರುವಾಗ ಕತ್ತಲಾದ್ದರಿಂದ ಒಂದು ಮನೆಯ ಮುಂದೆ ನಿಂತು)
ಶಂಕರರು : ಭಿಕ್ಷಾಂದೇಹಿ ಭವತಿ ಭಿಕ್ಷಾಂದೇಹಿ.
(ಮನೆಯೊಳಗಿನಿಂದ ಒಬ್ಬ ಗೃಹಿಣಿ ಹಾಲನ್ನು ತಂದು)
ಗೃಹಿಣಿ : ಯತಿಗಳೇ, ಕ್ಷೀರವನ್ನು ತೆಗೆದುಕೊಳ್ಳಿ. ಈಗ ಕತ್ತಲಾಗಿದೆ. ನೀವೆಲ್ಲರೂ ಇಲ್ಲಿಯೇ ಉಳಿದುಕೊಳ್ಳಿ.
ಶಂಕರರು : ತಾಯೀ, ನಾವಿಲ್ಲಿ ಉಳಿಯುವುದಿಲ್ಲ ಹೊರಡುತ್ತೇವೆ.
ಗೃಹಿಣಿ : ಬೇಡ ಯತಿಗಳೇ, ಇಂದು ಅಮಾವಾಸ್ಯೆ. ರಾತ್ರಿ ಸಮಯ ಇಲ್ಲಿನ ಕಾಡಿನ ದೇವತೆ ಸಿಕ್ಕಿದ ಪ್ರಾಣಿ ಪಕ್ಷಿಗಳನ್ನು, ಮನುಷ್ಯರನ್ನು ತಿನ್ನುತ್ತಾಳೆ. ಇಂದು ಇಲ್ಲಿಯೇ ಉಳಿದು ನಾಳೆ ಬೆಳಗಾದ ಮೇಲೆ ಹೊರಡಿ.
ಶಂಕರರು : ಹೌದೇ, ಹಾಗಾದರೆ ನಾನು ಕಾಡಿನ ದೇವತೆಯನ್ನು ದರ್ಶನ ಮಾಡಬೇಕು. ನೀವು ಹೆದರಬೇಡಿ. ನಾನೊಬ್ಬನೇ ಹೋಗಿ ಬರುತ್ತೇನೆ. ಶಿಷ್ಯರೆಲ್ಲಾ ನಿಮ್ಮಲ್ಲೇ ಉಳಿಯಲಿ.
(ಶಂಕರರು ಕಾಡಿಗೆ ತೆರಳುವರು)
(ಶಂಕರರು ಕಾಡಿಗೆ ಬಂದಾಗ ಕಾಡಿನಲ್ಲಿ ಕಾಳಿಯು ತಿರುಗಾಡುತ್ತಿರುವಳು. ಶಂಕರರನ್ನು ನೋಡಿ ತಿನ್ನುವೆನೆಂದು ಹತ್ತಿರ ಬರುತ್ತಾಳೆ. ಶಂಕರರು ಭಯ ಪಡದೆ ನಗುತ್ತಿರಲು)
ಕಾಳಿ : ಎಲೈ, ಬಾಲಕಾ ನಗುತ್ತಿರುವೆಯಾ, ಭಯವಾಗಲಿಲ್ಲವೇ? ನನ್ನನ್ನು ನೋಡಿದವರೆಲ್ಲಾ ತತ್ತರಿಸಿ ಕಿರುಚುವರು. ನಾನು ಈ ಕಾಡಿನ ದೇವತೆ. ರಾತ್ರಿ ಸಿಕ್ಕಿದವರೆಲ್ಲ ನನ್ನ ಆಹಾರವಾಗುವರು. ಈಗ ನಿನ್ನನ್ನು ತಿನ್ನುತ್ತೇನೆ. (ಎನ್ನುತ್ತಾ ಶಂಕರರನ್ನು ಹಿಡಿದುಕೊಂಡು) ಈಗಲೂ ಭಯವಿಲ್ಲದೆ ನಗುತ್ತಿರುವೆಯಲ್ಲಾ ಎಂತಹಾ ಧೈರ್ಯ ನಿನಗೆ.
ಶಂಕರರು : (ನಗುತ್ತಾ) ತಾಯೇ, ನಾನೇಕೆ ಭಯ ಪಡಲಿ. ನೀನೇ ಹೇಳಿದಂತೆ ನೀನು ಕಾಡಿನ ದೇವತೆ. ದೇವತೆ ಎಂದ ಮೇಲೆ ಎಲ್ಲಾ ಜೀವರಾಶಿಗೂ ತಾಯಿಯಲ್ಲವೇ? ತಾಯೇ ನಿನ್ನ ಅಭಯ ಹಸ್ತದಲ್ಲಿ ನಾನಿರುವುದರಿಂದ ಧೈರ್ಯವಾಗಿದ್ದೇನೆ.
ಕಾಳಿ : ಬಾಲಕಾ, ನಿನ್ನ ವಾಕ್ಚಾತುರ್ಯಕ್ಕೆ ಮೆಚ್ಚಿದ್ದೇನೆ. ನಿನ್ನನ್ನು ತಿನ್ನುವುದಿಲ್ಲ. ನಿನಗೇನು ಬೇಕೋ ಕೇಳಿಕೋ.
ಶಂಕರರು : ತಾಯೇ, ನಿನ್ನ ಈ ರೌದ್ರ ರೂಪವನ್ನು ನೋಡಲಾರೆ. ಶಾಂತ ಸ್ವರೂಪಿಣಿ, ಹಸನ್ಮುಖಿ, ಮಮತಾಮಯಿಯಾಗಿರುವ ರೂಪವನ್ನು ನೋಡಲು ಅಪೇಕ್ಷಿಸುತ್ತೇನೆ.
(ಕಾಳಿಯು ಶಾಂತ ಸ್ವರೂಪಳಾಗಿ ದರ್ಶನ ನೀಡುವಳು. ಶಂಕರರು ಭಕ್ತಿಯಿಂದ ಸ್ತುತಿಸುತ್ತಾರೆ.)
ಶಂಕರರು :
ನಮಸ್ತೇ ಮಹಾದೇವಿ ನಮಸ್ತೇ ಕರುಣಾಮಯೀ
ನಮಸ್ತೇ ದುರ್ಗಾಂಬೇ ನಮಸ್ತೇ ಭಕ್ತಪಾಲಿನೀ
ನಮಸ್ತೇ ಜಯದೇವೀ ನಮಸ್ತೇ ವರದಾಯಿನಿ
ನಮಸ್ತೇ ಜಗದಂಬೇ ನಮಸ್ತೇ ಶುಭದಾಯಿನಿ
ದೇವೀ ಜಗನ್ಮಾತೇ ನೀನು ಯಾವಾಗಲೂ ಹೀಗೇ ಶಾಂತ ಸ್ವರೂಪದಲ್ಲಿದ್ದು ಎಲ್ಲರನ್ನೂ ಕಾಪಾಡು.
ದೇವಿ : ತಥಾಸ್ತು.
ದೃಶ್ಯ ೨೯ – ಶೃಂಗಗಿರಿಯಲ್ಲಿ ಶಂಕರರು
(ನಿಸರ್ಗ ರಮಣೀಯವಾದ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಶೃಂಗಗಿರಿ. ನಯನ ಮನೋಹರವಾದ ತುಂಗಾ ನದಿಯ ಪರಿಸರ ಋಷ್ಯಶೃಂಗರು ತಪಸ್ಸನ್ನಾಚರಿಸಿದ ಪುಣ್ಯಭೂಮಿ. ಇಂತಹ ಸ್ಥಳಕ್ಕೆ ಭಗವತ್ಪಾದ ಶಂಕರರು ಶಿಷ್ಯರೊಂದಿಗೆ ಬಂದು ತುಂಗಾ ನದಿ ದಡದಲ್ಲಿ ನಿಂತು ನದಿ ದೇವಿಯನ್ನು ಸ್ತುತಿಸುತ್ತಾರೆ)
ತುಂಗಾನದಿ ದೇವಿಗೆ ಸ್ತುತಿ
ಶಂಕರರು :
ನಮಿಸುವೆ ತುಂಗೇ ಪಾವನ ಗಂಗೇ
ಶುಭಪ್ರದಾಯಿನಿ ಪುಣ್ಯತರಂಗೇ
ಜಗದೋದ್ಧಾರಿಣಿ ಜಲಮಯರೂಪಿಣಿ
ಜಯವರದಾಯಿನಿ ಮಹಿಮೋತ್ತುಂಗೇ
ಮುನಿಜನ ಹೃದಯ ವಿಹಾರಿತ ಸಲಿಲೇ
ಶರ್ಕರ ಮಧುಮಯ ಮಂಜುಳ ಸೃಜಲೇ
ವರಭದ್ರಾ ಸಹ ಸಂಗಮ ಕುಶಲೇ
ನಮಿಸುವೆ ನಿನಗೇ ಮಹಿಮೋತ್ತುಂಗೇ
(ಸ್ತುತಿ ಮುಗಿಯುತ್ತಿದ್ದಂತೆ ಭಗವತ್ಪಾದ ಶಂಕರರಿಗೆ ಅಪೂರ್ವ ದೃಶ್ಯವೊಂದು ಕಾಣುತ್ತಿದೆ.)
ಶಂಕರರು : ಶಿಷ್ಯರೇ ಇಲ್ಲಿ ನೋಡಿ ಬಿಸಿಲಿನಿಂದ ಬಳಲುತ್ತಿರುವ ಕಪ್ಪೆಗೆ ಬಿಸಿಲು ತಾಗದಂತೆ ಸರ್ಪವು ಹೆಡೆಯೆತ್ತಿ ನೆರಳನ್ನು ನೀಡುತ್ತಿದೆ. ಆ ಜನ್ಮ ವೈರಿಗಳೂ ಸಹ ಪರಸ್ಪರ ಮೈತ್ರಿ ಭಾವದಿಂದ ಬಾಳುತ್ತಿರುವ ಈ ಸ್ಥಳ ಪರಮ ಪವಿತ್ರವಾಗಿದೆ.
ಶಿಷ್ಯರು : ಗುರುಗಳೇ, ಇದೊಂದು ಅಪೂರ್ವ ದೃಶ್ಯ ಇಂತಹಾ ಪುಣ್ಯಭೂಮಿಗೆ ನಾವು ಬಂದಿದ್ದೇವೆ.
ಶಂಕರರು : ಶಿಷ್ಯರೇ, ಇದು ಋಷ್ಯ ಶೃಂಗರ ತಪೋಭೂಮಿ ಮೊದಲು ಇಲ್ಲಿಯೇ ಆಮ್ನಾಯಪೀಠವನ್ನು ಸ್ಥಾಪಿಸೋಣ.
ಶಿಷ್ಯರು : ಹೌದು ಗುರುಗಳೇ, ಈ ಸ್ಥಳವು ನೀವು ಹೇಳಿದ ಹಾಗೆ ಪ್ರಶಸ್ತವಾಗಿದೆ.
(ಭಗವತ್ಪಾದ ಶಂಕರರು ತುಂಗಾ ನದಿ ತೀರದಲ್ಲಿ ಶಿಲೆಯೊಂದರ ಮೇಲೆ ಶ್ರೀ ಚಕ್ರವನ್ನು ಕೆತ್ತಿ ಅದರ ಮೇಲೆ ಭಗವತಿ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿದರು. ಶಾರದಾ ದೇವಿಯು ಶಂಕರರಿಗೆ ಮಾತು ಕೊಟ್ಟಂತೆ ಶಂಕರರು ಪ್ರತಿಷ್ಠಾಪಿಸಿದ ಪ್ರತಿಮೆಯಲ್ಲಿ ಸನ್ನಿಹಿತಳಾದಳು. ಶಂಕರರು ನಿತ್ಯವೂ ಶಾರದೆಯನ್ನು ಪೂಜಿಸಿ ನಂತರ ಶಿಷ್ಯರಿಗೆಲ್ಲಾ ಪಾಠವನ್ನು ಹೇಳುತ್ತಿದ್ದಾರೆ. ಗಿರಿ ಎಂಬಾತನು ಶಂಕರರ ಶಿಷ್ಯನಾಗಿ ಪಾಠ ಕಲಿಯುತ್ತಿದ್ದನು. ಒಂದು ದಿನ ಎಲ್ಲಾ ಶಿಷ್ಯರೂ ಪಾಠಕ್ಕೆ ಬಂದರೂ ಗಿರಿ ಮಾತ್ರ ಗುರುಗಳ ವಸ್ತ್ರ ಪ್ರಕ್ಷಾಳನೆ ಮಾಡಲು ತುಂಗಾ ನದಿಗೆ ಹೋಗಿ ಇನ್ನೂ ಬಂದಿರಲಿಲ್ಲ. ಪಾಠಕ್ಕೆ ಬಂದ ಶಿಷ್ಯರೆಲ್ಲಾ ಶಂಕರರಿಗೆ ನಮಸ್ಕರಿಸಿ.)
ದೃಶ್ಯ ೩೦ : ಮಂದಮತಿಗಿರಿ ತೋಟಕಾಚಾರ್ಯರಾದದ್ದು
ಶಿಷ್ಯರು : ಗುರುಗಳೇ, ನಾವೆಲ್ಲ ಪಾಠಕ್ಕೆ ಬಂದಿದ್ದೇವೆ.
ಶಂಕರರು : ಗಿರಿಯು ಬಂದಿಲ್ಲ, ಅವನು ಬಂದ ಮೇಲೆ ಪಾಠ ಮಾಡುವೆ.
ಶಿಷ್ಯರು : ಗುರುಗಳೇ, ಆತನಿಗಾಗಿ ಕಾಯುವುದೇಕೆ, ಆ ಮಂದಮತಿಗೇಕೆ ಸಮಯ ವ್ಯರ್ಥ ಮಾಡುವುದು.
ಶಂಕರರು : ಹಾಗೆ ಹೇಳಬೇಡಿ. ಗಿರಿಯ ಪರಿಪಕ್ವ ಮನಸ್ಸನ್ನೂ ಆಧ್ಯಾತ್ಮ ಸಾಧನೆಯನ್ನು ನೀವೆಲ್ಲ ಸದ್ಯದಲ್ಲೇ ತಿಳಿಯುವಿರಿ.
(ಎಂದು ಹೇಳಿ ಶಂಕರರು ಈ ಶಿಷ್ಯರ ಅಹಂಕಾರ ಹೋಗಲಾಡಿಸಿ ಗಿರಿಯ ಗುರುಭಕ್ತಿಗೆ ತಕ್ಕ ಅನುಗ್ರಹ ಮಾಡಬೇಕೆಂದು ಸಂಕಲ್ಪಿಸಿ)
(ವಿದ್ಯಾಪಾರಂಗತನಾಗುವಂತೆ ಗಿರಿಯ ಮೇಲೆ ಶಂಕರರು ತಮ್ಮ ಕೃಪಾದೃಷ್ಟಿಯನ್ನು ಬೀರುವರು, ತಕ್ಷಣವೇ ಗಿರಿಯು ನದೀತೀರದಿಂದ ಸಂಸ್ಕೃತದಲ್ಲಿ ತೋಟಕ ವೃತ್ತದಲ್ಲಿ ಅದ್ಭುತವಾದ ಶ್ಲೋಕಗಳನ್ನು ಹೇಳುತ್ತಾ ಶಂಕರರ ಸನ್ನಿಧಿಗೆ ಬಂದು ನಮಸ್ಕರಿಸಿದನು.)
ಗಿರಿ : ಗುರುಗಳೇ ಸಾಷ್ಟಾಂಗ ಪ್ರಣಾಮಗಳು. (ಎಂದು ನಮಸ್ಕರಿಸುವನು)
ಶಂಕರರು : ಗಿರಿ ನಿನ್ನಿಂದ ಈ ದಿನ ಆತ್ಮತತ್ತ್ವವನ್ನು ಕೇಳಬೇಕೆಂದಿದ್ದೇನೆ. ನೀನು ಬರುವುದನ್ನೇ ಕಾಯುತ್ತಿದ್ದೇನೆ.
(ಗಿರಿಯು ವಿನಮ್ರ ಭಾವದಿಂದ ಭಕ್ತಿ ಶ್ರದ್ಧೆಯಿಂದ ಗುರುಗಳನ್ನು ನಮಿಸುವ ರೀತಿಯಲ್ಲಿ ಪರಮ ವೇದಾಂತದ ಸಾರವನ್ನು ಜಟಿಲವೆನಿಸಿದ ತೋಟಕ ವೃತ್ತದಲ್ಲಿ ನಿವೇದನೆ ಮಾಡಿದನು)
ಗಿರಿ :
ವಿದಿತಾಖಿಲಶಾಸ್ತ್ರ ಸುಧಾಜಲದೇ
ಮಹಿತೋಪನಿಷತ್ಕಥಿತಾರ್ಥನಿಧೇ
ಹೃದಯೇ ಕಲಯೇ ವಿಮಲಂ ಚರಣಂ
ಭವಶಂಕರದೇಶಿಕ ಮೇ ಶರಣಮ್ ||
ಕರುಣಾವರುಣಾಲಯ ಪಾಲಯಮಾಂ
ಭವಸಾಗರ ದುಃಖವಿದೂನಹೃದಂ
ರಚಿತಾಖಿಲದರ್ಶನ ತತ್ತ್ವಮಿದಂ
ಭವಶಂಕರದೇಶಿಕ ಮೇ ಶರಣಮ್ ||
ಭವತಾ ಜನತಾ ಸುಹಿತಾ ಭವಿತಾ
ನಿಜ ಬೋಧ ವಿಚಾರಣ ಚಾರುಮತೇ
ಕಲಯೇಶ್ವರ ಜೀವ ವಿವೇಕವಿದಂ
ಭವಶಂಕರದೇಶಿಕ ಮೇ ಶರಣಮ್ ||
ಶಂಕರರು : ಗಿರೀ ಉಪನಿಷದರ್ಥವನ್ನು ಮಧುರ ಪದಗಳಿಂದ ತೋಟಕ ವೃತ್ತದಲ್ಲಿ ರಚಿತವಾದ ಶ್ಲೋಕಗಳನ್ನು ನಿನ್ನಿಂದ ಕೇಳಿ ತುಂಬಾ ಸಂತೋಷವಾಯಿತು. ಇಂದಿನಿಂದ ನೀನು ತೋಟಕ ಎಂಬ ಹೆಸರಿನಿಂದ ನನ್ನ ಪ್ರಧಾನ ಶಿಷ್ಯರಲ್ಲಿ ಒಬ್ಬನಾಗಿರು.
(ಗಿರಿಯು ಶಂಕರರಿಗೆ ಮತ್ತೆ ನಮಸ್ಕರಿಸುವನು)
ಶಿಷ್ಯರು : ಗುರುಗಳೇ ನಮ್ಮಿಂದ ತಪ್ಪಾಯ್ತು. ನಮ್ಮ ಅಹಂಕಾರವು ದೂರವಾಯಿತು. ದಯಮಾಡಿ ನಮ್ಮನ್ನು ಕ್ಷಮಿಸಿ.
(ಎಂದು ಎಲ್ಲಾ ಶಿಷ್ಯರೂ ಶಂಕರರಿಗೆ ನಮಸ್ಕರಿಸುವರು)
(ಭಗವತ್ಪಾದ ಶಂಕರರು ಪ್ರಧಾನ ಶಿಷ್ಯರಾದ ಪದ್ಮಪಾದರು, ಸುರೇಶ್ವರರು, ಹಸ್ತಾಮಲಕರು, ತೋಟಕರು ಮತ್ತು ಇತರ ಶಿಷ್ಯರೊಡನೆ ಶೃಂಗೇರಿಯಲ್ಲಿ ಶ್ರೀ ಶಾರದಾದೇವಿಯನ್ನು ಪೂಜಿಸುತ್ತಿದ್ದರು. ಶಂಕರರು ತಾವು ಬರೆದ ಗ್ರಂಥಗಳನ್ನು ಎಲ್ಲಾ ಶಿಷ್ಯರಿಗೂ ಪಾಠ ಮಾಡುತ್ತಿದ್ದರು. ಮತ್ತು ಹಲವು ಗ್ರಂಥಗಳನ್ನು ರಚಿಸಿದರು. ಪ್ರಧಾನ ಶಿಷ್ಯರಿಂದಲೂ ಅನೇಕ ಗ್ರಂಥಗಳನ್ನು ರಚನೆ ಮಾಡಿಸಿದರು. ಭಗವತ್ಪಾದ ಶಂಕರರು ಶಾರದಾ ದೇವಿಯನ್ನು ಆರಾಧಿಸುತ್ತಾ ವೇದಾಂತ ಪ್ರವಚನ ಮಾಡುತ್ತಾ ಅನೇಕ ವರ್ಷಗಳ ಕಾಲ ಶೃಂಗೇರಿಯಲ್ಲಿ ವಾಸವಾಗಿದ್ದರು. ಪದ್ಮಪಾದರು ಶಂಕರರ ಅನುಮತಿ ಪಡೆದು ತೀರ್ಥಯಾತ್ರೆಗೆ ಹೊರಟರು. ಶಂಕರರಿಗೆ ತಮ್ಮ ಮಾತೃಶ್ರೀಯವರ ಅಂತ್ಯಕಾಲವು ಸಮೀಪಿಸಿರುವುದು ದಿವ್ಯ ದೃಷ್ಟಿಗೆ ಗೋಚರಿಸಿತು. ಶಾರದಾ ದೇವಿಯ ಪೂಜಾ ವಿಧಿ ವಿಧಾನಗಳನ್ನು ಸುರೇಶ್ವರಾಚಾರ್ಯರಿಗೆ ವಹಿಸಿ ಯೋಗಶಕ್ತಿಯಿಂದ ತಾಯಿಯ ಬಳಿಗೆ ಬಂದರು. ತಾಯಿಯ ಸ್ಥಿತಿಯನ್ನು ನೋಡಿ ನೊಂದುಕೊಂಡರು.)
ದೃಶ್ಯ ೩೧ : ತಾಯಿಯ ಸಂಸ್ಕಾರ
ಶಂಕರರು : ಅಮ್ಮಾ, ಅಮ್ಮಾ, ನಾನು ಬಂದಿದ್ದೇನೆ ನೋಡಮ್ಮಾ.
(ಎನ್ನುತ್ತಾ ತಾಯಿಯನ್ನು ನಿಧಾನವಾಗಿ ಎತ್ತಿ ಕುಳ್ಳಿರಿಸಿ ನಮಸ್ಕರಿಸುತ್ತಾರೆ)
ತಾಯಿ : ಮಗನೇ ಬಂದೆಯಾ, ನಿನ್ನ ನೆನಪಲ್ಲೇ ದಿನ ಕಳೆಯುತ್ತಿದ್ದೆ. ನೀನು ಬಂದಿದ್ದು ತುಂಬಾ ಸಂತೋಷವಾಯಿತು.
(ಎಂದು ಮಗನ ತಲೆ ಸವರುತ್ತಾರೆ)
ಶಂಕರರು : ಅಮ್ಮಾ, ನಿನ್ನಂತಹ ತ್ಯಾಗಮಯಿ ತಾಯಿಯನ್ನು ಪಡೆದ ನಾನೇ ಧನ್ಯ.
ತಾಯಿ : ಶಂಕರಾ, ಪಂಡಿತೋತ್ತಮನಾದ ನಿನ್ನನ್ನು ನೋಡಿ ಹೃದಯ ತುಂಬಿ ಬಂದಿದೆ. ನಿನ್ನಂತಹ ಮಗನನ್ನು ಪಡೆದು ನನ್ನ ಜನ್ಮ ಸಾರ್ಥಕವಾಯಿತು. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ. ನನಗೆ ಪುಣ್ಯ ಲೋಕ ಪ್ರಾಪ್ತಿಯಾಗುವಂತೆ ನಿನ್ನ ಕರ್ತವ್ಯವನ್ನು ನೀನು ನಿರ್ವಹಿಸು.
(ಶಂಕರರು ಕುಲದೇವರಾದ ಕೃಷ್ಣ ಪರಮಾತ್ಮನನ್ನು ನೆನೆದು ವಿಷ್ಣುವನ್ನು ಸ್ತುತಿಸಿದರು)
ವಿಷ್ಣು ಸ್ತುತಿ
ಶಂಕರರು :
ಸ್ತೋಷ್ಯೇ ಭಕ್ತ್ಯಾ ವಿಷ್ಣುಮನಾದಿಂ ಜಗದಾದಿಂ
ಯಸ್ಮಿನ್ನೇತತ್ಸಂಸೃತಿಚಕ್ರಂ ಭ್ರಮತೀತ್ಥಮ್ |
ಯಸ್ಮಿನ್ ದೃಷ್ಟೇ ನಶ್ಯತಿ ತತ್ಸಂಸೃತಿಚಕ್ರಂ
ತಂ ಸಂಸಾರಧ್ವಾಂತ ವಿನಾಶಂ ಹರಿಮೀಡೇ ||
ಪ್ರಾಣಾನಾಯಮ್ಯೋಮಿತಿ ಚಿತ್ತಂ ಹೃದಿ ರುಧ್ವಾ
ನಾನ್ಯತ್ಸ್ಮೃತ್ವಾ ತತ್ಪುನರತ್ರೈವ ವಿಲಾಪ್ಯ |
ಕ್ಷೀಣೇ ಚಿತ್ತೇ ಭಾದೃಶಿರಸ್ಮೀತಿ ವಿದುರ್ಯಂ
ತಂ ಸಂಸಾರಧ್ವಾಂತ ವಿನಾಶಂ ಹರಿಮೀಡೇ ||
ಪಾಯಾದ್ಭಕ್ತಂ ಸ್ವಾತ್ಮನಿ ಸಂತಂ ಪುರುಷಂ ಯೋ
ಭಕ್ತ್ಯಾ ಸ್ತೌತೀತ್ಯಾಂಗಿರಸಂ ವಿಷ್ಣುರಿಮಂ ಮಾಮ್ |
ಇತ್ಯಾತ್ಮಾನಂ ಸ್ವಾತ್ಮನಿ ಸಂಹೃತ್ಯ ಸದೈಕಃ
ತಂ ಸಂಸಾರಧ್ವಾಂತ ವಿನಾಶಂ ಹರಿಮೀಡೇ ||
(ಶಂಕರರ ತಾಯಿ ವಿಷ್ಣು ಮೂರ್ತಿಯನ್ನೇ ತದೇಕ ಚಿತ್ತದಿಂದ ಧ್ಯಾನಿಸುತ್ತಾ ದೇಹವನ್ನು ತ್ಯಜಿಸಿ ವೈಕುಂಠವನ್ನು ಸೇರಿದರು. ಶಂಕರರು ತಾಯಿಗೆ ಮಾತು ಕೊಟ್ಟಂತೆ ತಾಯಿಯ ಅಂತ್ಯ ಸಂಸ್ಕಾರ ಮಾಡಲು ಅಣಿಯಾಗಿ ದಾಯಾದಿಗಳನ್ನು ಕುರಿತು)
ಶಂಕರರು : ಹಿರಿಯರೇ, ನನ್ನ ತಾಯಿಯ ಅಂತ್ಯ ಸಂಸ್ಕಾರ ಮಾಡಲು ಸಹಕರಿಸಿರಿ.
(ದಾಯಾದಿಗಳು ಮಾತಾಡದೇ ನೋಡುತ್ತಾ ನಿಂತಿರಲು)
ಶಂಕರರು : ಹಿರಿಯರೇ ದಯ ಮಾಡಿ ಬನ್ನಿ ಸಹಾಯ ಮಾಡಿ.
(ಶಂಕರರ ಮಹಿಮೆಯನ್ನು ತಿಳಿಯದ ಆ ದಾಯಾದಿಗಳು ಬರದಿದ್ದಾಗ ಶಂಕರರೇ ತಮ್ಮ ಮನೆ ಹಿತ್ತಲಲ್ಲಿ ತಾಯಿಯ ದೇಹವನ್ನಿಟ್ಟು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಗಳನ್ನು ಇಟ್ಟು, ತಮ್ಮ ಯೋಗಶಕ್ತಿಯಿಂದ ಅಗ್ನಿಯನ್ನು ಉತ್ಪಾದಿಸಿ ತಾಯಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ದಾಯಾದಿಗಳನ್ನು ಕುರಿತು ಕೋಪದಿಂದ)
ಎಂತಹಾ ಕೃತಘ್ನರು ನೀವು. ಕನಿಷ್ಠ ಪಕ್ಷ ಕರ್ತವ್ಯ ಲೇಶವೂ ತಮ್ಮ ಬುದ್ಧಿಗೆ ತೋರದೆ ಹೋಯಿತೇ? ಇಷ್ಟೊಂದು ಕರ್ತವ್ಯ ಭ್ರಷ್ಟರಾದ ನೀವು ವೇದ ಬಹಿಷ್ಕೃತರಾಗಿರಿ. ನಿಮ್ಮ ಮನೆಗಳಿಗೆ ಯಾವ ಯತಿಗಳೂ ಭಿಕ್ಷೆಗೆ ಬರದಿರಲಿ. ಇಂದಿನಿಂದ ನಿಮ್ಮ ಮನೆಯ ಹಿತ್ತಲೇ ಸ್ಮಶಾನವಾಗಲಿ.
(ಎಂದು ಹೇಳಿದ ಶಂಕರರು ಒಂದು ಕ್ಷಣವೂ ಅಲ್ಲಿ ನಿಲ್ಲದೆ ಹೊರಟರು. ಅಲ್ಲಿಂದ ಹೊರಟ ಶಂಕರರು ಮಾರ್ಗ ಮಧ್ಯದಲ್ಲಿರುವ ದೇವಾಲಯದ ಬಳಿ ಕುಳಿತರು. ಶಂಕರರನ್ನು ಅರಸುತ್ತಾ ಪ್ರಧಾನ ಶಿಷ್ಯರೆಲ್ಲಾ ಬಂದು ಶಂಕರರನ್ನು ಕಂಡು ಸಂತೋಷದಿಂದ ನಮಸ್ಕರಿಸಿದರು)
ದೃಶ್ಯ ೩೨ : ದಿಗ್ವಿಜಯ ಯಾತ್ರೆ ಸಂಕಲ್ಪ
ಶಿಷ್ಯರು : ಗುರುಗಳೇ, ತಮ್ಮನ್ನು ಹುಡುಕುತ್ತಾ ಬಂದೆವು. ತಮ್ಮ ದರ್ಶನದಿಂದ ಸಂತೋಷವಾಯಿತು.
ಶಂಕರರು : ಶಿಷ್ಯರೇ, ಎಲ್ಲರೂ ಕುಶಲವೇ ? ನೀವೆಲ್ಲಾ ಇಲ್ಲಿಗೆ ಬಂದಿದ್ದು ನನಗೆ ತುಂಬಾ ಸಂತೋಷವಾಯಿತು.
ಪದ್ಮಪಾದರು : ಗುರುಗಳೇ, ತಮ್ಮ ಅನುಮತಿ ಪಡೆದು ತೀರ್ಥಯಾತ್ರೆಗೆ ಹೊರಟ ಮಾರ್ಗದಲ್ಲಿ ಪೂರ್ವಾಶ್ರಮದ ಮಾವನ ಮನೆಗೆ ಮಾವನ ಒತ್ತಾಯದಿಂದ ಹೋದೆ. ಕಟ್ಟಾ ಕರ್ಮಿಷ್ಠ ಮತ್ತು ಭೇದವಾದಿಯಾದ ನನ್ನ ಮಾವ ಕೇಳಿದ ಪ್ರಶ್ನೆಗೆಲ್ಲಾ ತಮ್ಮ ಅನುಗ್ರಹದಿಂದ ಉತ್ತರ ಕೊಟ್ಟೆ. ತಮ್ಮ ಭಾಷ್ಯಕ್ಕೆ ನಾನು ಬರೆದ ವ್ಯಾಖ್ಯಾನ ಓದಿದೆ. ಮಾವನ ಮನೆಯಲ್ಲಿ ನನ್ನ ಪುಸ್ತಕವನ್ನಿಟ್ಟು ಹಿಂತಿರುಗಿ ಹೋಗುವಾಗ ತೆಗೆದುಕೊಂಡು ಹೋಗುವೆನೆಂದು ಹೇಳಿ ಅಲ್ಲಿಂದ ರಾಮೇಶ್ವರಕ್ಕೆ ಹೋದೆ.
ಶಂಕರರು : ಮುಂದೇನಾಯಿತು ಹೇಳು. ನೀನು ಈಗ ಮೊದಲಿನಂತಿಲ್ಲ. ಚಿಂತೆಗೊಳಗಾದವನಂತಿರುವೆ.
ಪದ್ಮಪಾದರು : ರಾಮೇಶ್ವರದಿಂದ ನಾನು ಹಿಂತಿರುಗಿ ಬಂದಾಗ ಮಾವನ ಮನೆಗೆ ಬೆಂಕಿ ಬಿದ್ದು ಪುಸ್ತಕ ಸುಟ್ಟು ಹೋಗಿತ್ತು. ಮಾವನು ವ್ಯಥೆ ಪಟ್ಟು ಉಪಚರಿಸಿದ. ನಾನು ಯೋಚಿಸದೆ ಸ್ಮೃತಿ ಶಕ್ತಿಯಿಂದ ಮತ್ತೆ ಗ್ರಂಥ ಬರೆಯಲು ಕುಳಿತೆ. ಭಿಕ್ಷೆ ಮಾಡು ನಂತರ ಬರೆದುಕೋ ಎಂದು ಭಿಕ್ಷೆ ನೀಡಿದ. ಭಿಕ್ಷೆ ಮಾಡಿದ ನಂತರ ನನ್ನ ಬುದ್ಧಿ ಮಂದವಾಯ್ತು.
ಆ ಊರಿನವರು ನಿನ್ನ ಗ್ರಂಥವು ಪ್ರಸಿದ್ಧಿಗೆ ಬಂದರೆ ತನ್ನ ಸಿದ್ಧಾಂತವು ಬಿದ್ದು ಹೋಗುತ್ತದೆಯೆಂಬ ಅಸೂಯೆಯಿಂದ ನಿನ್ನ ಮಾವನೇ ಮನೆಗೆ ಬೆಂಕಿ ಹಚ್ಚಿದ್ದಾನೆ. ನಿನಗೆ ಊಟದಲ್ಲಿ ಬುದ್ಧಿಮಾಂದ್ಯ ಔಷಧಿಯನ್ನು ಹಾಕಿದ್ದಾನೆ ಎನ್ನುತ್ತಿದ್ದಾರೆ. ಗ್ರಂಥ ನಾಶವಾಯಿತಲ್ಲ ಎಂದು ವ್ಯಥೆಯಾಗುತ್ತಿದೆ. ಗುರುಗಳೇ ನೀವೇ ನನ್ನನ್ನು ಕಾಪಾಡಿ.
(ಎಂದು ನಮಸ್ಕರಿಸುವರು)
ಶಂಕರರು : ಪದ್ಮಪಾದಾ, ಶೃಂಗೇರಿಯಲ್ಲಿ ನೀನು ಬರೆದ ವ್ಯಾಖ್ಯೆಯ ಒಂದಿಷ್ಟು ಭಾಗವನ್ನು ನೀನೇ ನನ್ನ ಬಳಿ ಓದಿದ್ದೆ. ಅದು ನನಗೆ ಸ್ಮೃತಿಯಲ್ಲಿದೆ. ನಾನು ಹೇಳುತ್ತೇನೆ. ನೀನೀಗ ಬರೆದುಕೋ. ನಿನ್ನ ವ್ಯಥೆ ದೂರವಾಗುವುದು.
(ಶಂಕರರು ಹೇಳುತ್ತಾರೆ. ಪದ್ಮಪಾದರು ಬರೆದುಕೊಳ್ಳುತ್ತಾರೆ)
ಪದ್ಮಪಾದರು : ಗುರುಗಳೇ, ತಮ್ಮ ಕೃಪೆಯಿಂದ ಗ್ರಂಥದ ಇಷ್ಟು ಭಾಗವಾದರೂ ಮತ್ತೆ ಉಪಲಬ್ಧವಾಯಿತು. ನನ್ನ ವ್ಯಥೆ ದೂರವಾಯ್ತು. ತಮ್ಮ ಪಾದಾರವಿಂದಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.
(ಎಂದು ನಮಸ್ಕರಿಸುತ್ತಾರೆ. ಶಂಕರರು ಆಶೀರ್ವದಿಸುತ್ತಾರೆ. ಶಂಕರರು ಹೇಳಿದ ಭಾಗವೇ ಪಂಚಪಾದಿಕೆಯೆಂಬ ಹೆಸರಿನಿಂದ ಪ್ರಸಿದ್ಧವಾಯಿತು. ಅದೇ ಸಮಯಕ್ಕೆ ಕೇರಳದ ರಾಜ ಬಂದು ನಮಸ್ಕರಿಸಿ ಆಶೀರ್ವಾದ ಪಡೆದು ಹೋಗುತ್ತಾನೆ.)
ಶಂಕರರು : ಶಿಷ್ಯರೇ, ಈ ದೇಶದ ಜನರ ಏಳಿಗೆಗಾಗಿ ಸನಾತನ ಧರ್ಮದ ಪುನರುಜ್ಜೀವನೆಗಾಗಿ ಅಖಂಡ ಭಾರತ ಯಾತ್ರೆಯನ್ನು ಮಾಡೋಣ. ದಕ್ಷಿಣ ಭಾರತದಿಂದ ದಿಗ್ವಿಜಯ ಯಾತ್ರೆಯನ್ನು ಆರಂಭಿಸೋಣ.
ಶಿಷ್ಯರು : ಗುರುಗಳೇ, ತಮ್ಮಿಚ್ಛೆಯಂತೆ ಅಖಂಡ ಭಾರತ ಯಾತ್ರೆಯನ್ನು ಮಾಡಲು ನಾವೆಲ್ಲಾ ಸಿದ್ಧರಿದ್ದೇವೆ. ತಮ್ಮ ಎಲ್ಲಾ ಶಿಷ್ಯರಿಗೂ ತಿಳಿಸಿ ಕರೆಸಿಕೊಳ್ಳುತ್ತೇವೆ. ಎಲ್ಲರೂ ಸೇರಿ ದಿಗ್ವಿಜಯ ಯಾತ್ರೆಗೆ ಹೊರಡೋಣ.
ದಿಗ್ವಿಜಯ ಯಾತ್ರೆಯ ಹಿನ್ನೆಲೆ
(ಭಗವತ್ಪಾದರ ಶಂಕರರು ದಿಗ್ವಿಜಯ ಯಾತ್ರೆಯನ್ನು ಕೈಗೊಂಡು ರಾಮೇಶ್ವರನನ್ನು ಪೂಜಿಸಿ ಪ್ರಾರ್ಥಿಸಿದರು. ಭಗವತ್ಪಾದ ಶಂಕರರಿಗೆ ಆಪತ್ತು ಬಾರದಂತೆ ಸುಧನ್ವ ರಾಜನು ಸೈನ್ಯ ಸಮೇತ ಹಿಂಬಾಲಿಸಿದನು. ಶಂಕರರು ಭಾರತದ ಒಂದೊಂದೇ ರಾಜ್ಯವನ್ನು ಸಂಚರಿಸುತ್ತಾ ವೈದಿಕ ಗ್ರಂಥಗಳಿಗೆ ಅಪವ್ಯಾಖ್ಯಾನ ಮಾಡುವವರನ್ನು, ತಾಮಸ ಪೂಜೆಯಲ್ಲಿ ನಿರತರಾದವರನ್ನು, ವಾಮಾಚಾರದಿಂದ ಜನರನ್ನು ಭಯಗೊಳಿಸುವವರನ್ನು, ತಪ್ಪು ತಪ್ಪಾದ ಅರಿವನ್ನೇ ಮಹಾಜ್ಞಾನವೆಂದು ತಿಳಿದವರನ್ನು, ಜನರನ್ನು ತಪ್ಪು ದಾರಿಗೆ ಎಳೆಯುವವರನ್ನು ಅವರವರಿಗೆ ತಕ್ಕಂತೆ ತಿಳುವಳಿಕೆ ಮೂಡಿಸಿ ಸರಿಪಡಿಸಿದರು. ಅನೇಕ ಕ್ಷೇತ್ರಗಳಲ್ಲಿ ದೇವಾಲಯಗಳನ್ನೆಲ್ಲಾ ಸಂದರ್ಶಿಸಿ ಪೂಜಿಸಿ ಸರಿಯಿಲ್ಲದ ದೇವಾಲಯಗಳನ್ನು ನವೀಕರಿಸಿ ಪೂಜಾ ವಿಧಾನಗಳು ಸರಿಯಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು. ಹಾಗೂ ಉಳಿದ ಮೂರು ದಿಕ್ಕಿನಲ್ಲೂ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ವೈದಿಕ ಸಿದ್ಧಾಂತವನ್ನು ಬೋಧಿಸುತ್ತಾ ಸಮಸ್ತ ಪ್ರತಿವಾದಿಗಳನ್ನೂ ಎದುರಿಸಿ ತಕ್ಕ ಉತ್ತರ ನೀಡಿ ಭಾರತವನ್ನು ಏಕಸೂತ್ರತೆಗೆ ಒಳಪಡಿಸಿದರು. ಸನಾತನ ಧರ್ಮದ ರಕ್ಷಣೆಗಾಗಿ ಭಗವತ್ಪಾದ ಶಂಕರರು ಸಮಗ್ರ ಭಾರತವನ್ನು ಕಾಲ್ನಡಿಗೆಯಿಂದ ಸಂಚರಿಸಿ ದಿಗ್ವಿಜಯ ಯಾತ್ರೆಯನ್ನು ಮಾಡಿದರು.
ದೃಶ್ಯ ೩೩ : ಗೌಡಪಾದರ ದರ್ಶನ
(ಭಗವತ್ಪಾದ ಶಂಕರರು ದಿಗ್ವಿಜಯ ಯಾತ್ರೆ ಮುಗಿಸಿ ಕಾಶಿಯಲ್ಲಿದ್ದರು. ಒಂದು ದಿನ ಗಂಗಾ ತೀರದಲ್ಲಿ ಕುಳಿತಿರುವಾಗ ಗೋವಿಂದ ಭಗವತ್ಪಾದರ ಗುರುಗಳಾದ ಗೌಡಪಾದರು ಆಗಮಿಸಿದರು. ಶಂಕರರು ಎದ್ದು ನಿಂತು)
ಶಂಕರರು : ಗುರುಗಳೇ, ಶಿರಸಾಷ್ಟಾಂಗ ನಮಸ್ಕಾರಗಳು.
(ಎಂದು ನಮಸ್ಕರಿಸುವರು)
ಗೌಡಪಾದರು : ವತ್ಸಾ, ನೀನು ನನ್ನ ಶಿಷ್ಯ ಗೋವಿಂದನಿಂದ ಪರಮಾರ್ಥ ವಸ್ತುವನ್ನು ಅರಿತಿದ್ದೀಯಲ್ಲವೇ ? ನೀನು ಭಾಷ್ಯವನ್ನು ಬರೆದ ವಿಷಯ ತಿಳಿದು ಸಂತೋಷವಾಯಿತು. ನಿನ್ನನ್ನು ನೋಡೋಣವೆಂದು ಬಂದೆ.
ಶಂಕರರು : ಹೌದು ಗುರುಗಳೇ, ತಮ್ಮ ಮಾಂಡೂಕ್ಯಕಾರಿಕೆಗಳ ಬಗ್ಗೆ ಭಾಷ್ಯದಲ್ಲಿ ವಿವರಿಸಿದ ವಿಷಯವಿದು ನೋಡಿ.
(ಎಂದು ಶಂಕರರು ತಾವು ರಚಿಸಿದ ಭಾಷ್ಯವನ್ನು ಗೌಡಪಾದರಿಗೆ ಕೊಡುತ್ತಾರೆ. ಅವರು ಅದನ್ನು ವೀಕ್ಷಿಸಿ ಪರಮಸಂತುಷ್ಟರಾಗುತ್ತಾರೆ)
ಗೌಡಪಾದರು : ವತ್ಸಾ, ನನ್ನ ಮಾಂಡೂಕ್ಯಕಾರಿಕೆಗಳ ಹೃದಯವನ್ನು ಈ ಭಾಷ್ಯದಲ್ಲಿ ಚೆನ್ನಾಗಿ ತೆರೆದಿಟ್ಟಿರುವೆ. ಎಷ್ಟು ಸ್ಫುಟವಾದ ವಿವೇಚನೆ, ಸೊಗಸಾದ ಶೈಲಿ, ನನಗೆ ತುಂಬಾ ಸಂತೋಷವಾಗಿದೆ. ಏನಾದರೂ ವರವನ್ನು ಕೇಳಿಕೋ.
ಶಂಕರರು : ಗುರುಗಳೇ, ನೀವು ದರ್ಶನ ನೀಡಿರುವುದೇ ನನಗೆ ಶ್ರೇಷ್ಠವಾದ ವರವಾಗಿದೆ. ಆದರೂ ನಾನು ನಿಮ್ಮಲ್ಲಿ ಬೇಡುವೆ. ನನ್ನ ಹೃದಯವು ಸದಾ ಬ್ರಹ್ಮಚಿಂತನದಲ್ಲಿ ಮಗ್ನವಾಗಿರಲಿ. ಇದು ನಾನು ಬೇಡುವ ವರ.
ಗೌಡಪಾದರು : ತಥಾಸ್ತು
(ಎಂದು ಅಂತರ್ಧಾನರಾದರು)
(ಕಾಶ್ಮೀರದ ಶಾರದಾಮಂದಿರದಲ್ಲಿ ನಾಲ್ಕು ದಿಕ್ಕಿಗೂ ಮಹಾದ್ವಾರಗಳಿವೆ. ಈ ಮಂದಿರದಲ್ಲಿ ಸರ್ವಜ್ಞ ಪೀಠವಿದೆ. ಸರ್ವಜ್ಞನಾದವನು ಮಾತ್ರವೇ ಈ ಪೀಠವನ್ನು ಏರಬಹುದು. ಉತ್ತರ, ಪೂರ್ವ, ಪಶ್ಚಿಮ ದಿಕ್ಕಿನವರು ಸರ್ವಜ್ಞತ್ತ್ವದಿಂದ ದ್ವಾರವನ್ನು ತೆಗೆಸಿ ಪೀಠಾರೋಹಣ ಮಾಡಿದ್ದಾರೆ. ದಕ್ಷಿಣ ದ್ವಾರ ಮಾತ್ರ ಮುಚ್ಚಿಯೇ ಇತ್ತು. ಭಗವತ್ಪಾದ ಶಂಕರರಿಗೆ ಈ ವಿಷಯ ತಿಳಿದು ದಕ್ಷಿಣ ದಿಕ್ಕಿನಲ್ಲಿ ಸರ್ವಜ್ಞರೇ ಇಲ್ಲ ಎಂಬ ಅಪಕೀರ್ತಿಯನ್ನು ನೀಗಿಸುವುದಕ್ಕಾಗಿ ದಕ್ಷಿಣಾತ್ಯರಾದ ತಾವು ಸರ್ವಜ್ಞತ್ತ್ವದಿಂದ ದಕ್ಷಿಣ ದ್ವಾರ ತೆಗೆಸುವ ಸಲುವಾಗಿ ಶಿಷ್ಯರೊಂದಿಗೆ ಕಾಶ್ಮೀರಕ್ಕೆ ಬಂದರು. ಈ ವಿಷಯ ತಿಳಿದು ಅಲ್ಲಿಯ ವಿದ್ವಾಂಸರೆಲ್ಲಾ ದಕ್ಷಿಣ ದ್ವಾರದ ಬಳಿಗೆ ಬಂದು ನಿಂತರು. ಭಗವತ್ಪಾದ ಶಂಕರರು ದ್ವಾರದ ಬಳಿ ಬಂದಾಗ)
ದೃಶ್ಯ ೩೪ : ಸರ್ವಜ್ಞ ಪೀಠಾರೋಹಣ
ವಿದ್ವಾಂಸರೆಲ್ಲರು : ಯತಿಗಳೇ, ಇಲ್ಲಿನ ನಿಯಮದಂತೆ ನಮ್ಮ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಯೇ ದಕ್ಷಿಣ ದ್ವಾರವನ್ನು ಪ್ರವೇಶ ಮಾಡಿ.
ಶಂಕರರು : ಆಗಲಿ, ತಾವೆಲ್ಲರೂ ಹೇಳಿದಂತೆ ಇಲ್ಲಿನ ನಿಯಮವನ್ನು ಪಾಲಿಸುವೆ.
(ಒಬ್ಬೊಬ್ಬರೂ ಕ್ರಮವಾಗಿ ಪ್ರಶ್ನೆಯನ್ನು ಕೇಳತೊಡಗಿದರು)
ನೈಯಾಯಿಕ : ಯತಿವರ್ಯರೇ, ವಿಷಯ ನಿರೂಪಣೆಯಲ್ಲಿ ಕಣಾದ ಮಹರ್ಷಿಗಳಿಗೂ, ಗೌತಮ ಮಹರ್ಷಿಗಳಿಗೂ ಇರುವ ಮುಖ್ಯ ಭೇದ ಯಾವುದು ?
ಶಂಕರರು : ಏಳು ಪದಾರ್ಥಗಳೆಂದು ಕಣಾದರು ಹೇಳಿದರೆ ಹದಿನಾರು ಪದಾರ್ಥಗಳೆಂದು ಗೌತಮರು ಹೇಳುತ್ತಾರೆ. ಪದಾರ್ಥಗಳು ಸಮಾನವಾದರೂ ವಿಭಾಗ ಕ್ರಮದಲ್ಲಿ ಮಾತ್ರ ಇಬ್ಬರೂ ಬೇರೆ ಬೇರೆ ರೀತಿಯನ್ನು ಆಶ್ರಯಿಸಿದ್ದಾರೆ.
ನೈಯಾಯಿಕ : ಕಣಾದರಿಗೂ, ಗೌತಮರಿಗೂ ಮುಕ್ತಿಯ ವಿಷಯದಲ್ಲಿರುವ ಭೇದವೇನು ?
ಶಂಕರರು : ಮೋಕ್ಷದಲ್ಲಿ ಸುಖ-ದುಃಖಗಳಿಲ್ಲ. ಇದು ಕಣಾದರ ಮತ. ಆನಂದಾನುಭವವು ಮೋಕ್ಷದಲ್ಲಿದೆ ಇದು ಗೌತಮರ ಮತ.
ನೈಯಾಯಿಕ : ಈಶ್ವರನ ಅಸ್ತಿತ್ವದ ವಿಷಯದಲ್ಲಿ ಇವರಿಬ್ಬರ ಮತವೇನು ? ಇವರಿಬ್ಬರಿಗೂ ಅಭಿಪ್ರಾಯ ಭೇದವಿದೆಯೇ?
ಶಂಕರರು : ಈಶ್ವರನಿದ್ದಾನೆ. ಅವನು ಜಗತ್ ಸೃಷ್ಟಿಗೆ ನಿಮಿತ್ತ ಕಾರಣ. ಇದು ಇಬ್ಬರಿಗೂ ಒಪ್ಪಿಗೆಯಾದ ವಿಷಯ. ಆದ್ದರಿಂದ ಈ ವಿಷಯದಲ್ಲಿ ಅಭಿಪ್ರಾಯ ಭೇದವಿಲ್ಲ.
ನೈಯಾಯಿಕ : ಆಚಾರ್ಯರೇ, ತಮ್ಮ ಮತಿ ಅತಿ ನಿಶಿತವಾದದ್ದು. ತಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ಕಾಪಿಲ : ಪೂಜ್ಯರೇ ಸಾಂಖ್ಯರ ಸಿದ್ಧಾಂತದ ಪ್ರಕಾರ ಜಗತ್ತಿಗೆ ಮೂಲ ಕಾರಣ ಯಾವುದು ?
ಶಂಕರರು : ಮೂಲ ಪ್ರಕೃತಿಯು ಜಗತ್ತಿಗೆ ಮೂಲ ಕಾರಣ.
ಕಾಪಿಲ : ಮೂಲ ಪ್ರಕೃತಿಯು ಚೈತನ್ಯವನ್ನು ಆಶ್ರಯಿಸಿದೆಯೇ ಅಥವಾ ಸ್ವತಂತ್ರವಾಗಿದೆಯೇ ?
ಶಂಕರರು : ಮೂಲ ಪ್ರಕೃತಿಯು ಚೈತನ್ಯವನ್ನು ಆಶ್ರಯಿಸಿಲ್ಲ. ಅದು ಸ್ವತಂತ್ರವಾಗಿರುವುದು. ಆದರೆ ವೇದಾಂತದಲ್ಲಿ ಪ್ರಕೃತಿಯು ಈಶ್ವರಾಧೀನವಾಗಿದೆ.
ಕಾಪಿಲ : ಮಹರ್ಷಿಗಳೇ ತಮಗೆ ನನ್ನ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ಬೌದ್ಧ : ವಿಜ್ಞಾನ ವಾದಕ್ಕೂ, ವೇದಾಂತ ಮತಕ್ಕೂ ಇರುವ ವ್ಯತ್ಯಾಸವೇನು ?
ಶಂಕರರು : ಪದಾರ್ಥಗಳೆಲ್ಲವೂ ವಿಜ್ಞಾನ ರೂಪಗಳಾಗಿದ್ದು ಅವು ಕ್ಷಣಿಕವಾಗಿವೆ ಮತ್ತು ಅನಂತವಾಗಿವೆ ಎನ್ನುತ್ತಾರೆ ವಿಜ್ಞಾನವಾದಿಗಳು. ಆದರೆ ಸ್ಥಿರವಾದ ಒಂದೇ ವಿಜ್ಞಾನವಿದೆ ಎನ್ನುವುದು ವೇದಾಂತ ಸಿದ್ಧಾಂತ.
ಬೌದ್ಧ : ಮುಂದೆ ನಾನೇನೂ ಪ್ರಶ್ನೆ ಮಾಡಲಾರೆ.
ಮೀಮಾಂಸಕ : ಜೈಮಿನಿಯ ಸಿದ್ಧಾಂತದಲ್ಲಿ ಶಬ್ದದ ಸ್ವರೂಪವೇನು ?
ಶಂಕರರು : ವರ್ಣಗಳು ನಿತ್ಯ. ಅವು ಸರ್ವ ವ್ಯಾಪಕವಾಗಿವೆ. ಇಂತಹ ವರ್ಣಗಳ ಸಮುದಾಯವೇ ಶಬ್ದ. ಈ ಶಬ್ದ ಶ್ರೋತ್ರೇಂದ್ರಿಯ ಗ್ರಾಹ್ಯ ನಿತ್ಯ ಮತ್ತು ಸರ್ವವ್ಯಾಪಕ.
ಮೀಮಾಂಸಕ : ಶಬ್ದವು ದ್ರವ್ಯವೋ ಅಥವಾ ಗುಣವೋ ?
ಶಂಕರರು : ನೈಯಾಯಿಕರ ಮತದಲ್ಲಿ ಶಬ್ದವು ಗುಣವೇ ಹೊರತು ಮೀಮಾಂಸಕರ ಮತದಲ್ಲಿ ಶಬ್ದವು ಗುಣವಲ್ಲ. ಶಬ್ದವು ದ್ರವ್ಯ ರೂಪವಾದದ್ದು.
ಮೀಮಾಂಸಕ : ಸರ್ವಜ್ಞರಾದ ತಮಗೆ ನತಮಸ್ತಕರಾಗಿ ನಾವೆಲ್ಲರೂ ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇವೆ.
(ವಿದ್ವಾಂಸರೆಲ್ಲರ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಶಂಕರರಿಗೆ ಎಲ್ಲರೂ ನಮಸ್ಕರಿಸುತ್ತಾರೆ)
ವಿದ್ವಾಂಸರೆಲ್ಲರೂ : ಯತಿ ಚಕ್ರವರ್ತಿಗಳೇ, ಈ ಭಾರತ ದೇಶದಲ್ಲಿ ವೈದುಷ್ಯದ ಮೂಲಕ ದಿಗ್ವಿಜಯ ಯಾತ್ರೆಯನ್ನು ಮಾಡಿದ ಮೊಟ್ಟ ಮೊದಲಿಗರು ತಾವು. ಸರ್ವಜ್ಞ ಪೀಠದಲ್ಲಿ ಕುಳಿತುಕೊಳ್ಳಲು ತಾವು ಅರ್ಹರಾಗಿದ್ದೀರಿ. ತಾವು ಸರ್ವಜ್ಞರು. ಈ ಸರ್ವಜ್ಞ ಪೀಠದಲ್ಲಿ ವಿರಾಜಮಾನರಾಗಿ.
(ಎಂದು ವಿದ್ವಾಂಸರೆಲ್ಲರೂ ದಕ್ಷಿಣ ದ್ವಾರವನ್ನು ತೆರೆದು ಗೌರವ ಪೂರ್ವಕವಾಗಿ ಎದುರುಗೊಂಡು ಭಗವತ್ಪಾದ ಶಂಕರರನ್ನು ದೇವಾಲಯದ ಒಳಗೆ ಸ್ವಾಗತಿಸಿದರು. ದೇವಾಲಯವನ್ನು ಪ್ರವೇಶಿಸಿದ ಶಂಕರರು ಅಲ್ಲಿ ವಿರಾಜಮಾನಳಾಗಿರುವ ಶಾರದಾದೇವಿಗೆ ನಮಸ್ಕರಿಸಿದರು. ಆಗ ಸಾಕ್ಷಾತ್ ಶಾರದೆಯು ಶಂಕರರನ್ನು ಹಲವು ಪ್ರಶ್ನೆಗಳನ್ನು ಕೇಳಿದಾಗ ಶಂಕರರು ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಸರ್ವಜ್ಞ ಪೀಠಾಧಿರೋಹಣಕ್ಕೆ ಶಾರದೆಯ ಅನುಮತಿ ಪಡೆದರು. ನಂತರ ಪದ್ಮಪಾದಾಚಾರ್ಯರು ಶ್ರೀ ಶಂಕರ ಭಗವತ್ಪಾದರ ಹಸ್ತವನ್ನು ಹಿಡಿದು ಸರ್ವಜ್ಞಪೀಠದ ಬಳಿ ಕರೆದುಕೊಂಡು ಹೋದರು. ಜ್ಞಾನ ಸಿಂಹಾಸನವಾದ ಸರ್ವಜ್ಞಪೀಠವನ್ನೇರಿ ಭಗವತ್ಪಾದ ಶಂಕರರು ಕಂಗೊಳಿಸಿದರು)
ಸಮಸ್ತರೂ : ಸರ್ವಜ್ಞ ಶ್ರೀ ಶಂಕರ ಭಗವತ್ಪಾದರಿಗೆ ಜಯವಾಗಲಿ.
(ಎಂದು ಜಯ ಘೋಷ ಮಾಡಿದರು) (ದೇವತೆಗಳು ಪುಷ್ಪ ವೃಷ್ಟಿ ಸುರಿಸಿದರು)
ದೃಶ್ಯ ೩೫ : ಆದೇಶ ಮತ್ತು ಆಶೀರ್ವಚನ
ಶಂಕರರು : ಶಿಷ್ಯರೇ ನನ್ನ ಗುರುಗಳಾದ ಗೋವಿಂದ ಭಗವತ್ಪಾದರ ಆದೇಶದಂತೆ ಪ್ರಸ್ಥಾನತ್ರಯಕ್ಕೆ ಭಾಷ್ಯವನ್ನು ರಚಿಸಿದ್ದೇನೆ. ಸನಾತನ ಧರ್ಮಕ್ಕೆ ಬಂದೆರಗಿದ್ದ ವಿಪತ್ತನ್ನು ಕಿತ್ತೆಸೆಯಲು ನಿಮ್ಮೆಲ್ಲರ ಸಹಕಾರದೊಂದಿಗೆ ಇಡೀ ಭರತ ಖಂಡವನ್ನು ಪರ್ಯಟನ ಮಾಡಿದ್ದೇನೆ. ಅಭ್ಯುದಯ ಮತ್ತು ಶ್ರೇಯಸ್ಸಿಗೆ ಕಾರಣ ಧರ್ಮ. ಧರ್ಮವನ್ನು ವೇದದಿಂದಲೇ ಅರಿಯಬೇಕು. ಆದ್ದರಿಂದ ನಮಗೆ ವೇದವೇ ಪ್ರಮಾಣ ಗ್ರಂಥವು. ವೇದದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ.
ಪರಬ್ರಹ್ಮವೊಂದೇ ಪರಮಾರ್ಥದಲ್ಲಿ ಸತ್ಯವಾದದ್ದು. ವೇದ ಬಾಹ್ಯವಾದ ತಾಮಸಪೂಜೆ ಮತ್ತು ವಾಮಾಚಾರಾದಿಗಳನ್ನು ಸರ್ವಥಾ ಒಪ್ಪಕೂಡದು. ವೇದವು ಬೋಧಿಸಿದ ಕರ್ಮ ಉಪಾಸನೆಗಳು ನಮ್ಮ ಚಿತ್ತಶುದ್ಧಿಗೆ ಅತ್ಯಾವಶ್ಯಕ. ಭಕ್ತಿಪೂರ್ವಕವಾಗಿ ಇವುಗಳ ಆಚರಣೆ ಎಲ್ಲರಿಗೂ ಅನುಕೂಲವಾಗುವಂತೆ ದೇವರಲ್ಲಿ ಭೇದ ಭಾವ ಎಣಿಸಬಾರದೆನ್ನುವ ಉದ್ದೇಶದಿಂದ ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಎಂಬ ಐವರನ್ನು ಒಟ್ಟಿಗೇ ಪೂಜಿಸತಕ್ಕ ಪಂಚಾಯತನ ಪೂಜಾ ಪದ್ಧತಿಯನ್ನು ತಿಳಿಸಿಕೊಟ್ಟಿದ್ದೇನೆ. ಸನಾತನ ವಿದ್ಯೆಯು ಈ ದೇಶದ ನಾಲ್ಕು ದಿಕ್ಕುಗಳಲ್ಲೂ ಪ್ರಖರವಾಗಿ ಬೆಳಗುವಂತೆ ಮಾಡಲು ನೀವೆಲ್ಲರೂ ನನ್ನೊಂದಿಗೆ ಸಹಕರಿಸಿದ್ದೀರಿ. ಇನ್ನು ಮುಂದೆಯೂ ಈ ದೇಶದಲ್ಲಿ ಈ ವಿದ್ಯೆಯು ಅವಿಚ್ಛಿನ್ನವಾಗಿ ಸಂಪ್ರದಾಯಕ್ಕನುಗುಣವಾಗಿ ಮುಂದುವರಿಯಬೇಕು. ಅದಕ್ಕಾಗಿಯೇ ನಾಲ್ಕು ಆಮ್ನಾಯ ಪೀಠಗಳನ್ನು ದೇಶ ಪರ್ಯಟನ ಸಮಯದಲ್ಲಿ ಸ್ಥಾಪಿಸಿರುವುದು ನಿಮಗೇ ತಿಳಿದಿದೆ. ಜಗನ್ನಾಥ ಪುರಿಯಲ್ಲಿರುವ ಪೂರ್ವಾಮ್ನಾಯ ಗೋವರ್ಧನ ಪೀಠದಲ್ಲಿ ಹಸ್ತಾಮಲಕರು, ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲಿ ಸುರೇಶ್ವರರು, ದ್ವಾರಕೆಯಲ್ಲಿರುವ ಪಶ್ಚಿಮಾಮ್ನಾಯ ಕಾಳಿಕಾ ಪೀಠದಲ್ಲಿ ಪದ್ಮಪಾದರು, ಬದರಿಯಲ್ಲಿರುವ ಉತ್ತರಾಮ್ನಾಯ ಜ್ಯೋತಿಷ್ಪೀಠದಲ್ಲಿ ತೋಟಕರು ವಿರಾಜಮಾನರಾಗಿ ಸಂಪ್ರದಾಯ ಶುದ್ಧವಾದ ಈ ವೇದಾಂತ ವಿದ್ಯೆಯ ಮಾರ್ಗದರ್ಶನ ಮಾಡಬೇಕು. ಉಳಿದವರೆಲ್ಲರೂ ಈ ಸನಾತನ ಧರ್ಮದ ರಕ್ಷಣೆಯಲ್ಲಿ ಮಗ್ನರಾಗಬೇಕು. ಸಂಪ್ರದಾಯ ಕ್ರಮದಿಂದ ಬಂದ ಅದ್ವೈತ ದರ್ಶನದ ಸಂರಕ್ಷಣೆಗಾಗಿ ಯತಿ ಪರಂಪರೆ ಮುಂದುವರಿಯಲಿ. ನೀವೆಲ್ಲರೂ ನಿಷ್ಠೆಯಿಂದ ನನಗೆ ಸಹಕಾರ ಮಾಡಿದ್ದೀರಿ. ಭಗವಂತನು ನಿಮಗೆಲ್ಲರಿಗೂ ಸದಾ ಮಂಗಳವನ್ನು ಅನುಗ್ರಹಿಸಲಿ.
ನಾನಿನ್ನು ಬದರಿಯತ್ತ ಪ್ರಯಾಣ ಮಾಡುವೆನು.
(ಎಲ್ಲಾ ಶಿಷ್ಯರೂ ಭಗವತ್ಪಾದ ಶಂಕರರಿಗೆ ಶಿರ ಸಾಷ್ಟಾಂಗ ನಮಸ್ಕಾರ ಮಾಡಿದರು. ಭಗವತ್ಪಾದರು ಆಶೀರ್ವದಿಸಿದರು. ಶಿಷ್ಯರೆಲ್ಲಾ ಗುರುಗಳನ್ನು ಅಗಲಲಾರದೆ ಕಣ್ಣೀರು ತುಂಬಿಕೊಂಡು ಗುರುಗಳ ಆಜ್ಞೆಯನ್ನು ಮೀರಲಾರದೆ ಅಲ್ಲಿಂದ ಹೊರಟರು)
(ಭಗವತ್ಪಾದ ಶಂಕರರು ಬದರಿಗೆ ತೆರಳಿದರು. ಅಲ್ಲಿರುವ ಪಾತಂಜಲ ಯೋಗ ನಿಷ್ಣಾತರನೇಕರ ಪ್ರಾರ್ಥನೆಯಂತೆ ಅವರೆಲ್ಲರಿಗೂ ಬ್ರಹ್ಮಸೂತ್ರ ಭಾಷ್ಯವನ್ನು ಬೋಧಿಸಿದರು. ಬದರಿಯ ಏಕಾಂತ ಪ್ರದೇಶದಲ್ಲಿ ಆತ್ಮನಿರತರಾಗಿ ಕೆಲವು ದಿನಗಳನ್ನು ಕಳೆದರು. ಭಗವತ್ಪಾದ ಶಂಕರರಿಗೆ ಮೂವತ್ತೆರಡು ವರ್ಷಗಳು ತುಂಬಿದವು. ಬದರಿಯಿಂದ ಹೊರಟು ಹಿಮವತ್ಕೇದಾರಕ್ಕೆ ಬಂದರು)
(ಕೇದಾರದಲ್ಲಿ ಎಲ್ಲ ಮಹರ್ಷಿಗಳೂ, ಸಿದ್ಧರೂ, ಸಕಲ ದೇವತಾದಿಗಳೂ, ಶಿವ ಗಣಗಳೂ ಶ್ರೀ ಭಗವತ್ಪಾದರನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದು ಪ್ರಾರ್ಥಿಸಿದರು.)
ದೃಶ್ಯ ೩೬ : ಸ್ವಸ್ಥಾನ ಕೈಲಾಸ ಪ್ರವೇಶ
ಎಲ್ಲರೂ : ಹೇ ಮಹಾದೇವ, ಸಮಸ್ತ ಪ್ರಪಂಚದ ಉತ್ಪತ್ತಿ ಸ್ಥಿತಿ-ಲಯಗಳಿಗೆ ಕಾರಣನಾಗಿ ನಿಷ್ಪ್ರಪಂಚಾದ್ವಿತೀಯ ಸರ್ವಜ್ಞನಾದ ಪರಬ್ರಹ್ಮ ಸ್ವರೂಪನೇ ನೀನು ಯಾರಿಂದಲೂ ಪರಿಹರಿಸಲಾಗದ ವಿಪತ್ತು ಒದಗಿದಾಗ ಮುಂದೆ ಬಂದು ಲೋಕವನ್ನು ಸಂರಕ್ಷಿಸುವ ಸಮರ್ಥನೂ ಪರಮ ಕರುಣಾಳುವೂ ನೀನೇ. ಸನಾತನ ವೈದಿಕ ವರ್ಣಾಶ್ರಮದ ಧರ್ಮ ರೂಪವಾದ ಸನ್ಮಾರ್ಗವನ್ನು ಈಗ ಲೋಕಕ್ಕೆ ತೋರಿಸಿಕೊಟ್ಟು ನಾಸ್ತಿಕ್ಯದಿಂದ ತಲ್ಲಣಿಸುತ್ತಿದ್ದ ಜಗತ್ತನ್ನು ಪಾರು ಮಾಡಿ ಉದ್ಧಾರ ಮಾಡಿರುವೆ ದೇವಾ. ಸಮಸ್ತರಿಗಾಗಿ ಅವತರಿಸಿ ಬಂದು ಈ ಮಹತ್ಕಾರ್ಯ ನೆರವೇರಿಸಿರುವ ಜಗದೀಶ್ವರಾ ಈಗ ಶಿವ ಸ್ವರೂಪಿಯಾಗಿ ಕೈಲಾಸಕ್ಕೆ ಬರಬೇಕೆಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ.
(ಬ್ರಹ್ಮ, ವಿಷ್ಣು, ಇಂದ್ರ, ಮೊದಲಾದ ದೇವೋತ್ತಮರು ದಿವ್ಯ ಕುಸುಮಗಳನ್ನು ಎರಚುತ್ತಾ ಸ್ತುತಿಸಿದರು)
ಎಲ್ಲರೂ :
ಶಿವ ಶಿವ ಶಂಭೋ ಶಂಕರ
ಪರಮೇಶ್ವರ ಜಗದೀಶ್ವರ ಉಮಾಮಹೇಶ್ವರ
ಶಿವ ಶಿವ ಶಂಭೋ ಶಂಕರ
(ಶಂಕರ ಭಗವತ್ಪಾದರು ಪರಮೇಶ್ವರನ ರೂಪದಿಂದ ಪ್ರತ್ಯಕ್ಷರಾಗಿ ಧರ್ಮ ಸ್ವರೂಪನಾದ ನಂದಿಯನ್ನೇರಿ ದೇವತೆಗಳ, ಋಷಿಗಳ, ಪರಾಖುಗಳನ್ನು ಕೇಳುತ್ತಾ ಪರಮಾನಂದಮಯವಾದ ಸ್ವಸ್ಥಾನ ಕೈಲಾಸಕ್ಕೆ ಬಂದರು)
ಶ್ರೀ ದೇವೀ ಮಹಾತ್ಮೆ
15 Songs