ಗುರುಚರಿತ್ರೆ
ರಾಗ : ಮೋಹನ
ತಾಳ : ಆದಿತಾಳ (ತ್ರಿಶ್ರ ಗತಿ)
ತಾಳ : ಆದಿತಾಳ (ತ್ರಿಶ್ರ ಗತಿ)
ಗುರುದೇವ ಗುರುದೇವ ನಿನ್ನಯ ಚರಿತೆಯನು
ಪಾರಾಯಣ ಮಾಡಿದರೆ ಜನ್ಮಾಂತರದ ಪಾಪಗಳೆಲ್ಲಾ
ನಶಿಸಿ ಹೋಗುವುದು
ಗುರುದೇವ ಗುರುದೇವ || ಪ ||
ಶ್ರದ್ಧಾ ಭಕ್ತಿಯಲಿ ನಿನ್ನ ಆರಾಧಿಸುವರಿಗೆ
ತೋರುವೆ ನೀ ದಯವ ಕರುಣಾ ಸಾಗರನೆ
ಗುರುವೇ ನಿನ್ನ ಸ್ಮರಣೆ ನಿರತವು ಮನದಲ್ಲಿ
ನೆನವ ಭಕ್ತರು ಪಡೆವರು ಜೀವನ ಸಾರ್ಥಕವ
ಗುರುದೇವ ಗುರುದೇವ || ೧ ||
ಭಗವಂತನು ತನ್ನನು ನಂಬಿದ ಭಕ್ತರನು
ಕಾಪಾಡಲು ಅವತರಿಸುವ ಪರಮ ದಯಾಮಯನು
ಅಜ್ಞಾನದ ಕತ್ತಲನು ಓಡಿಸಿ ಜಗದಲ್ಲಿ
ಸುಜ್ಞಾನದ ಬೆಳಕನ್ನು ತೋರಲು ಬಂದಿಹನು
ಗುರುದೇವ ಗುರುದೇವ || ೨ ||
ಸಪ್ತರ್ಷಿಗಳಲ್ಲೊಬ್ಬರು ಅತ್ರಿ ಮಹರ್ಷಿಗಳು
ಪತ್ನಿ ಅನುಸೂಯಾ ದೇವಿ ಮಹಾ ಪತಿವ್ರತೆಯು
ಆಕೆಯ ಪಾತಿವ್ರತ್ಯಕೆ ದೇವತೆಗಳು ಹೆದರಿ
ತ್ರಿಮೂರ್ತಿಗಳ ಬಳಿಯಲ್ಲಿ ಭಯವನು ಹೇಳಿದರು
ಗುರುದೇವ ಗುರುದೇವ || ೩ ||
ಅನುಸೂಯಾ ದೇವಿಯ ಪಾತಿವ್ರತ್ಯವನು
ಪರೀಕ್ಷಿಸಲು ಬ್ರಹ್ಮ ವಿಷ್ಣು ಮಹೇಶ್ವರರು
ಬ್ರಾಹ್ಮಣ ವೇಷದಲಿ ಅತ್ರಿಮುನಿ ಆಶ್ರಮಕೆ
ಬಂದು ಭಿಕ್ಷಾಂದೇಹಿ ಎಂದರು ತ್ರಿಮೂರ್ತಿಗಳು
ಗುರುದೇವ ಗುರುದೇವ || ೪ ||
ಆಗ ನದಿ ತೀರಕೆ ಅತ್ರಿಮುನಿ ತೆರಳಿರಲು
ಅನುಸೂಯಾ ದೇವಿ ಬಂದ ಅತಿಥಿಗಳನ್ನು
ಆದರದಿ ಸ್ವಾಗತಿಸಿದಾಗ ಬಂದ ತ್ರಿಮೂರ್ತಿಗಳು
ಹಸಿವೆಯಾಗಿದೆ ಎನ್ನುತ ನೀಡೆಂದರು ಭೋಜನವ
ಗುರುದೇವ ಗುರುದೇವ || ೫ ||
ವಿವಸ್ತ್ರದಿ ಭೋಜನವ ನೀಡೆಂದ ತ್ರಿಮೂರ್ತಿಗಳು
ಅನುಸೂಯೆಗರಿವಾಯ್ತು ತನ್ನ ಪರೀಕ್ಷೆಯೆಂದು
ತ್ರಿಮೂರ್ತಿಗಳಿವರೆಂದು ತಿಳಿದು ಸಂತಸದಿ
ಅವರಿಚ್ಛೆಗೆ ಒಪ್ಪಿದಳು ಪತಿವ್ರತೆ ಅನುಸೂಯೆ
ಗುರುದೇವ ಗುರುದೇವ || ೬ ||
ಪಾತಿವ್ರತ್ಯದ ಬಲದಿ ತ್ರಿಮೂರ್ತಿಗಳ ಶಿಶು ಮಾಡಿ
ಅವರಿಚ್ಛೆಯಂತೆ ಭೋಜನವ ನೀಡಿದಳನುಸೂಯೆ
ಪುತ್ರ ವಾತ್ಸಲ್ಯ ಮೂಡಿ ಮೂರೂ ಶಿಶುಗಳನು
ಅಪ್ಪಿ ಮುದ್ದಾಡಿದಳು ಎದೆ ಹಾಲುಣಿಸಿದಳು
ಗುರುದೇವ ಗುರುದೇವ || ೭ ||
ಆ ಸಮಯಕೆ ಅಲ್ಲಿಗೆ ಬಂದರು ಅತ್ರಿ ಮಹರ್ಷಿ
ಈ ಅದ್ಭುತವನು ಕಂಡು ನಿಂತರು ಆಶ್ಚರ್ಯದಿ
ತಮ್ಮ ಯೋಗ ದೃಷ್ಟಿಯಲಿ ತ್ರಿಮೂರ್ತಿಗಳೆಂದರಿತು
ಆ ಕ್ಷಣ ನಮಸ್ಕರಿಸಿದರು ಶಿಶುಗಳಿಗೆ ಮಹರ್ಷಿಗಳು
ಗುರುದೇವ ಗುರುದೇವ || ೮ ||
ಆಗ ಆ ಶಿಶುಗಳು ನಿಜ ರೂಪವ ತೋರಿ
ಮುನಿಗಳೆ ನಿಮ್ಮ ಪತ್ನಿಯು ಮಹಾ ಪತಿವ್ರತೆಯೆನುತ
ಅನುಸೂಯಾ ದೇವಿಯ ಸತ್ಕಾರದಿಂದ ನಾವು
ತೃಪ್ತರಾದೆವು ಎಂದು ಹರಸಿದ ತ್ರಿಮೂರ್ತಿಗಳು
ಗುರುದೇವ ಗುರುದೇವ || ೯ ||
ಅತ್ರಿಮುನಿ ದಂಪತಿಗೆ ಬೇಕಾದ ವರವನ್ನು
ಈಗಲೇ ಬೇಡಿಕೊಳ್ಳಿರಿ ಎಂದ ತ್ರಿಮೂರ್ತಿಗಳು
ಆಗ ಅನುಸೂಯೆ ನೀವೇ ನಮ್ಮ ಮಕ್ಕಳಾಗಿ
ನಮ್ಮಲಿ ಜನಿಸಿರಿ ಎಂದು ವರವನ್ನು ಬೇಡಿದಳು
ಗುರುದೇವ ಗುರುದೇವ || ೧೦ ||
ತ್ರಿಮೂರ್ತಿಗಳು ಒಪ್ಪಿ ಬ್ರಹ್ಮನು ಚಂದ್ರನಾಗಿ
ಮಹಾವಿಷ್ಣು ದತ್ತನಾಗಿ ಶಿವ ದೂರ್ವಾಸನಾಗಿ
ದಂಪತಿಗೆ ಮಕ್ಕಳಾಗಿ ಬಾಲಲೀಲೆಗಳನ್ನು
ತೋರುತ ಕೆಲ ಕಾಲ ಸಂತಸಪಡಿಸಿದರು
ಗುರುದೇವ ಗುರುದೇವ || ೧೧ ||
ಬಾಲಕನಾದ ಚಂದ್ರ ಚಂದ್ರಲೋಕಕೆ ಹೊರಟ
ತಪಸ್ಸನ್ನಾಚರಿಸಲು ಹೊರಟನು ದೂರ್ವಾಸ
ತಂದೆ ತಾಯಿ ಸೇವೆಯ ಮಾಡುತ ದತ್ತಾತ್ರೇಯ
ತತ್ವೋಪದೇಶವನ್ನು ಸಕಾಲಕೆ ಮಾಡಿದನು
ಗುರುದೇವ ಗುರುದೇವ || ೧೨ ||
ಈ ಪರಮಾತ್ಮನೆ ದತ್ತ ಪರಂಪರೆಯ
ಮೊದಲನೆ ಅವತಾರಿ ಗುರುದತ್ತಾತ್ರೇಯ
ಆದಿಪುರುಷನಿವನು ಮತ್ತೆ ಅವತರಿಸುವನು
ಈ ಕಲಿಯುಗದಲ್ಲಿ ಧರ್ಮವ ರಕ್ಷಿಸಲು
ಗುರುದೇವ ಗುರುದೇವ || ೧೩ ||
ಒಮ್ಮೆ ದತ್ತಾತ್ರೇಯ ಭಿಕ್ಷಾಟನೆ ಮಾಡುತ್ತ
ಪತಿವ್ರತೆ ಸುಮತಿಯ ಮನೆ ಬಳಿ ಬಂದಾಗ
ಮನೆಯಲಿ ಶ್ರಾದ್ಧವಿದ್ದರೂ ಬಂದ ಅತಿಥಿಗೆ ಸುಮತಿ
ಅತಿಥಿ ದೇವೋ ಭವ ಎಂದು ಭಿಕ್ಷೆಯ ನೀಡಿದಳು
ಗುರುದೇವ ಗುರುದೇವ || ೧೪ ||
ಸುಮತಿಯ ಭಕ್ತಿಗೆ ಮೆಚ್ಚಿ ಗುರುದತ್ತ ಪರಮಾತ್ಮ
ನಿನಗೆ ಬೇಕಾಗಿರುವ ವರವನು ಬೇಡೆಂದ
ಸ್ವಾಮಿಯೆನುತ ಸುಮತಿ ನನ್ನ ಮಕ್ಕಳು ಸಾಯುತಿವೆ
ಅಂಗವಿಕಲರು ಮಾತ್ರ ಬದುಕಿ ಇರುವರು ಎಂದಳು
ಗುರುದೇವ ಗುರುದೇವ || ೧೫ ||
ಸುಮತಿಯು ಬೇಡಿದಳು ದತ್ತ ಪರಮಾತ್ಮನಲಿ
ನಿನ್ನಂತಹ ತೇಜಸ್ವಿ ತನಗೆ ಪುತ್ರನಾಗಲೆಂದು
ವರ ಬೇಡಿದ ಸುಮತಿಗೆ ಆಗಲಿ ಎಂದ ದತ್ತ
ತಾನೇ ಅವತರಿಸಲು ನಿರ್ಧರಿಸಿ ಅದೃಶ್ಯನಾದ
ಗುರುದೇವ ಗುರುದೇವ || ೧೬ ||
ಸುಮತಿ ಈ ಸಂಗತಿಯ ತಿಳಿಸಿದಳು ತನ್ನ ಪತಿಗೆ
ಪತಿಯು ಕೊಂಡಾಡಿದನು ಸುಮತಿಯ ಭಾಗ್ಯವನು
ಕೆಲವು ದಿನಗಳು ಕಳೆದು ಗರ್ಭ ಧರಿಸಿದ ಸುಮತಿ
ಭಾದ್ರಪದ ಚೌತಿ ದಿನ ಪಡೆದಳು ಸುಪುತ್ರನನ್ನು
ಗುರುದೇವ ಗುರುದೇವ || ೧೭ ||
ತೇಜಸ್ವಿ ಮಗು ನೋಡಿ ಜ್ಯೋತಿಷಿಗಳು ನುಡಿದರು
ಮಹಾತಪಸ್ವಿ ಇವನು ಜಗದ್ಗುರು ಆಗುವನು
ದಂಪತಿಗಳು ಸಂತಸದಿ ಪುರೋಹಿತರ ಕರೆಸಿ
ಮಗುವಿಗೆ ಶ್ರೀಪಾದ ಎಂಬ ನಾಮವನಿಟ್ಟರು
ಗುರುದೇವ ಗುರುದೇವ || ೧೮ ||
ಬಾಲ ಶ್ರೀಪಾದನು ಎಳೆಯ ವಯಸಿನಲ್ಲೆ
ಪಾರಂಗತನಾದನು ವೇದವೇದಾಂಗದಲಿ
ತಂದೆ ತಾಯಿ ಅರಿತು ಐದನೆಯ ವಯಸಿನಲ್ಲೆ
ಬ್ರಹ್ಮೋಪದೇಶವನು ಮಾಡಿದರು ಶ್ರೀಪಾದಗೆ
ಗುರುದೇವ ಗುರುದೇವ || ೧೯ ||
ಪ್ರಾಪ್ತ ವಯಸ್ಕನಾದ ಮಗ ಶ್ರೀಪಾದನಿಗೆ
ವಿವಾಹ ಮಾಡಲೆಂದು ಕೇಳಿದ ತಂದೆ ತಾಯಿ
ಶ್ರೀಪಾದನು ತನಗೆ ವಿವಾಹ ಬೇಡವೆಂದು
ಬ್ರಹ್ಮಚಾರಿಯಾಗಿರುವೆ ಎಂದನು ದೃಢವಾಗಿ
ಗುರುದೇವ ಗುರುದೇವ || ೨೦ ||
ದುಃಖದಿ ತಂದೆ ತಾಯಿ ಮಗನಲಿ ಕೇಳಿದರು
ನಿನ್ನ ಅಣ್ಣಂದಿರಿಗೆ ನಮಗೆ ಯಾರು ಗತಿ
ಕೃಪೆಯಿಂದ ಶ್ರೀಪಾದ ಅಣ್ಣಂದಿರ ನೋಡಿದನು
ಅಂಗವೈಕಲ್ಯವಿಲ್ಲದೆ ಆದರು ದೃಢಕಾಯರು
ಗುರುದೇವ ಗುರುದೇವ || ೨೧ ||
ತಾಯಿಗೆ ಶ್ರೀಪಾದ ಅಮ್ಮ ನಿನ್ನ ಚಿಂತೆಗಳು
ಕಳೆಯಿತಲ್ಲವೆ ಇನ್ನು ತಪಸ್ಸಿಗೆ ಹೋಗುವೆನು
ನನಗೆ ಅಪ್ಪಣೆ ನೀಡಿ ಆಶೀರ್ವದಿಸಮ್ಮಾ
ಅಣ್ಣಂದಿರು ನಿಮ್ಮನ್ನು ರಕ್ಷಿಸುವರು ಎಂದನು
ಗುರುದೇವ ಗುರುದೇವ || ೨೨ ||
ಹೊರಟರು ಶ್ರೀಪಾದರು ಕಾಶಿಕ್ಷೇತ್ರದ ಕಡೆಗೆ
ಕ್ಷೇತ್ರವ ಸಂದರ್ಶಿಸಿ ಬಂದರು ಗೋಕರ್ಣಕೆ
ತ್ರೇತಾಯುಗದಲ್ಲಿ ರಾವಣ ತಾಯಿಗಾಗಿ
ಆತ್ಮಲಿಂಗ ತರುವಾಗ ಆಗಿರುವಂತ ಕ್ಷೇತ್ರ
ಗುರುದೇವ ಗುರುದೇವ || ೨೩ ||
ರಾವಣ ತಪಸ್ಸು ಮಾಡಿ ಆತ್ಮಲಿಂಗವ ಪಡೆದ
ಲೋಕಕಲ್ಯಾಣಕ್ಕಾಗಿ ಶಿವಪುತ್ರ ಗಣೇಶ ತಡೆದ
ಆತ್ಮಲಿಂಗ ಭೂಸ್ಪರ್ಶದಿ ಗೋಕರ್ಣ ಕ್ಷೇತ್ರವಾಯ್ತು
ಮಹಾಮಹಿಮೆಯ ಗೋಕರ್ಣ ಮುಕ್ತಿಯ ಕ್ಷೇತ್ರವಾಯ್ತು
ಗುರುದೇವ ಗುರುದೇವ || ೨೪ ||
ಗೋಕರ್ಣ ಕ್ಷೇತ್ರಕ್ಕೆ ಬಂದರು ಶ್ರೀಪಾದರು
ಮಹಾಬಲೇಶ್ವರನ ದರ್ಶನ ಮಾಡಿದರು
ಕೆಲವು ಕಾಲ ಅಲ್ಲುಳಿದು ಅನೇಕ ಭಕ್ತರಿಗೆ
ಮಾರ್ಗದರ್ಶನ ಮಾಡಿ ಹೊರಟರು ಕುರುವಪುರಕೆ
ಗುರುದೇವ ಗುರುದೇವ || ೨೫ ||
ಕುರುವ ಪುರದ ಊರಿನ ಬ್ರಾಹ್ಮಣ ದಂಪತಿಯು
ದಡ್ಡನು ಮೂರ್ಖನು ಆದ ಮಗನ ಚಿಂತೆಯಲ್ಲಿದ್ದರು
ಚಿಂತೆಯಲಿ ಬ್ರಾಹ್ಮಣನು ಮರಣ ಹೊಂದಿದನು
ಪತ್ನಿ ಅಂಬಿಕೆ ದುಃಖದಲಿ ಇದ್ದಳು ಬಹಳ ಕಷ್ಟದಲಿ
ಗುರುದೇವ ಗುರುದೇವ || ೨೬ ||
ಕುರುವಪುರದ ನದಿ ಬಳಿ ಶ್ರೀಪಾದರು
ಆತ್ಮಹತ್ಯೆಗೆತ್ನಿಸಿದ ಅಂಬಿಕೆಯನು ಕಂಡು
ಆಕೆಗೆ ಶ್ರೀಪಾದರು ಆತ್ಮಹತ್ಯೆ ಮಹಾಪಾಪ
ಪ್ರದೋಷ ಕಾಲದಲ್ಲಿ ಶಿವಪೂಜೆ ಮಾಡೆಂದರು
ಗುರುದೇವ ಗುರುದೇವ || ೨೭ ||
ಅಂಬಿಕೆ ದುಃಖಿಸುತ ನಿಂತಳು ಮಗನ ಜೊತೆ
ತಿಳಿದ ಶ್ರೀಪಾದರು ದಡ್ಡ ಮಗನ ತಲೆ ಮೇಲೆ
ಅಭಯ ಹಸ್ತವನಿಟ್ಟು ಜ್ಞಾನಿಯು ದೈವಭಕ್ತನು
ಆಗಿ ಬಾಳುವನೆಂದು ಆಶೀರ್ವದಿಸಿದರು
ಗುರುದೇವ ಗುರುದೇವ || ೨೮ ||
ಅಂಬಿಕೆ ಬೇಡಿದಳು ತನ್ನ ಮುಂದಿನ ಜನ್ಮಕ್ಕೆ
ನಿಮ್ಮಂತಹ ತೇಜಸ್ವಿ ಮಗ ತನಗೆ ಬೇಕೆಂದು
ಆಕೆಯ ಬೇಡಿಕೆ ಒಪ್ಪಿ ಶ್ರೀಪಾದ ವಲ್ಲಭರು
ಶನಿಪ್ರದೋಷ ವ್ರತವನ್ನು ಮಾಡಲು ಹೇಳಿದರು
ಗುರುದೇವ ಗುರುದೇವ || ೨೯ ||
ಗುರುವರ ಶ್ರೀಪಾದರ ಪರಮಾನುಗ್ರಹದಿಂದ
ದಡ್ಡನಾಗಿಹ ಮಗನು ವೇದವೇದಾಂಗದಲಿ
ಪಾರಂಗತನಾದನು ಆಯಿತು ವಿವಾಹವು
ಗುರುಸ್ಮರಣೆ ಮಡುತ್ತ ನೆಮ್ಮದಿಯಲಿ ಬಾಳಿದರು
ಗುರುದೇವ ಗುರುದೇವ || ೩೦ ||
ಅರುಣೋದಯದಲ್ಲಿ ನಿತ್ಯವು ಶ್ರೀಪಾದರು
ಕೃಷ್ಣಾನದಿಗೆ ತೆರಳಿ ಶುಚಿರ್ಭೂತರಾಗುವರು
ಆ ನದಿಯ ದಡದಲ್ಲೇ ಜಪತಪ ಅನುಷ್ಠಾನದಿ
ಮಗ್ನರಾಗಿ ಧ್ಯಾನದಲಿ ಇರುವರು ಗುರುವರರು
ಗುರುದೇವ ಗುರುದೇವ || ೩೧ ||
ಅಲ್ಲಿಯ ಅಗಸನೊಬ್ಬ ಶ್ರೀಪಾದರ ಕಂಡು
ಭಕ್ತಿಯಿಂದ ದಿನವೂ ಶಿರಬಾಗಿ ನಮಿಸುವನು
ಕೆಲ ಕಾಲ ಕಳೆದಾಗ ಅಗಸನ ಭಕ್ತಿ ಮೆಚ್ಚಿ
ನೀ ರಾಜನಾಗೆಂದು ಹರಸಿದ ಶ್ರೀಪಾದರು
ಗುರುದೇವ ಗುರುದೇವ || ೩೨ ||
ನಂತರ ವೈರಾಗ್ಯದಿ ಅಗಸ ಮಠಕೆ ಬಂದು
ದಿನವು ಅಂಗಳ ತೊಳೆದು ಕೆಲಸಕೆ ತೆರಳುವನು
ಒಂದು ದಿನ ನದಿಯಲ್ಲಿ ರಾಣಿಯರೊಡನೆ ರಾಜ
ಜಲಕ್ರೀಡೆಯಾಡುವುದ ನೋಡಿ ಚಂಚಲನಾದ
ಗುರುದೇವ ಗುರುದೇವ || ೩೩ ||
ತಪ್ಪಿನರಿವಾಗಿ ಅಗಸ ಗುರುಗಳಿಗೆ ತಿಳಿಸುತ್ತ
ತಮ್ಮ ದರ್ಶನ ಭಾಗ್ಯ ತನಗೆಂದಿಗೂ ಇರಲೆಂದ
ರಾಜನಾಗಿ ಜನಿಸಿ ರಾಜಭೋಗವ ಪಡೆದು
ಸುಖವಾಗಿರು ನೀನು ಎಂದರು ಶ್ರೀಪಾದರು
ಗುರುದೇವ ಗುರುದೇವ || ೩೪ ||
ಶ್ರೀಪಾದರ ಖ್ಯಾತಿಯು ಕುರುವಪುರದ ಸುತ್ತ
ಎಲ್ಲೆಡೆಯು ಹಬ್ಬಿರಲು ಭಕ್ತರಾದರು ಹಲವರು
ನಂಬಿ ಬಂದಿರುವಂತ ಭಕ್ತರಿಗನುಗ್ರಹಿಸುತ್ತ
ಅದ್ಭುತ ಪವಾಡಗಳ ತೋರಿದರು ಶ್ರೀಪಾದರು
ಗುರುದೇವ ಗುರುದೇವ || ೩೫ ||
ಶ್ರೀಪಾದರವತಾರ ಮೂವತ್ತು ವರ್ಷವಾಗಿ
ಪುನಃ ಅವತರಿಸಲು ಆಶ್ವಯುಜ ಶುಕ್ಲ ಪಕ್ಷದ
ದ್ವಾದಶಿಯ ದಿನದಂದು ಕುರುವಪುರದ ಮಠದಲಿ
ಅದೃಶ್ಯರಾದ ಮಹಾತ್ಮರು ಗುರುವರ ಶ್ರೀಪಾದರು
ಗುರುದೇವ ಗುರುದೇವ || ೩೬ ||
ಗುರುಭಕ್ತ ವಲ್ಲಭೇಶ ಕುರುವಪುರದ ಮಠಕೆ
ಮಾಡಿರುವ ಹರಕೆಯನು ತೀರಿಸಲು ಹೊರಟ
ದಾರಿಲಿ ಕಳ್ಳರು ಅವನ ತಲೆಕಡಿದು ಹಣವನ್ನು
ದೋಚುತ್ತಿರುವಾಗ ಅಲ್ಲೇ ಪ್ರತ್ಯಕ್ಷರಾದರು ಗುರುವರರು
ಗುರುದೇವ ಗುರುದೇವ || ೩೭ ||
ಗುರುಗಳು ತ್ರಿಶೂಲದಿ ಘಾತಿಸಿದರು ಕಳ್ಳರನು
ಒಬ್ಬ ನಮಿಸಿ ಶರಣಾಗಿ ನಾ ಕಳ್ಳನಲ್ಲ್ಲ್ಲಾ ಎಂದನು
ಶರಣಾದವನ ಕೈಗೆ ಗುರುಗಳು ಭಸ್ಮವನ್ನಿತ್ತು
ವಲ್ಲಭೇಶನ ತಲೆಯನ್ನು ಜೋಡಿಸಿ ಹಚ್ಚೆಂದರು
ಗುರುದೇವ ಗುರುದೇವ || ೩೮ ||
ದೇಹಕೆ ತಲೆ ಜೋಡಿಸಿ ಭಸ್ಮವ ಲೇಪಿಸಿದ
ಅಮೃತ ದೃಷ್ಟಿಯ ಹರಿಸಿ ಅದೃಶ್ಯರಾದ ಗುರುವರರು
ಎದ್ದ ವಲ್ಲಭೇಶನಿಗೆ ಭಸ್ಮ ಹಚ್ಚಿದವ ಆಶ್ಚರ್ಯದಿ
ನಡೆದ ಸಂಗತಿ ತಿಳಿಸಿ ಗುರುಗಳ ಪವಾಡವು ಎಂದ
ಗುರುದೇವ ಗುರುದೇವ || ೩೯ ||
ನಾನಾ ರೂಪದಿ ಬಂದು ಕಾಪಾಡುವರು ಎಂದು
ಅರಿತನು ವಲ್ಲಭೇಶ ಗುರು ಶ್ರೀಪಾದರೆಂದು
ಗುರುಸ್ಮರಣೆಯ ಮಾಡುತ್ತ ಕುರುವಪುರಕೆ ಹೋಗಿ
ಹರಕೆಯನ್ನು ಪೂರೈಸಿ ಮರಳಿದನು ಸಂತಸದಿ
ಗುರುದೇವ ಗುರುದೇವ || ೪೦ ||
ದೇವರು ಮುನಿದರೆ ಗುರು ಕಾಪಾಡುವರು
ಗುರು ಮುನಿದರೆ ನಮ್ಮನ್ನು ಕಾಪಾಡುವರೇ ಇಲ್ಲ
ಗುರು ಭಕ್ತಿಯು ಎಂದಿಗೂ ನಮಗೆ ಸಂಜೀವಿನಿಯು
ಜೀವನ ಸಾರ್ಥಕವು ಮುಕ್ತಿಯ ಮಹಾಸಾಧಕವು
ಗುರುದೇವ ಗುರುದೇವ || ೪೧ ||
ಗುರು ಆದೇಶದಂತೆ ಶನಿಪ್ರದೋಷ ವ್ರತವನ್ನು
ಆಚರಿಸಿ ಅಂಬಿಕೆಯು ಕಳೆದ ಜನ್ಮದಿ ಪುಣ್ಯ ಪಡೆದು
ಕಾರಂಜಾ ತೀರದ ಗ್ರಾಮದ ಬ್ರಾಹ್ಮಣನ
ಪುತ್ರಿಯಾಗಿ ಜನಿಸಿದಳು ಅಂಬಭವಾನಿ ಎಂದು
ಗುರುದೇವ ಗುರುದೇವ || ೪೨ ||
ಪ್ರಾಪ್ತ ವಯಸ್ಕಳಾದ ಅಂಬಭವಾನಿಯನು
ಶಿವಭಕ್ತ ಮಾಧವಗೆ ಕೊಟ್ಟು ಲಗ್ನವ ಮಾಡಿದರು
ಈ ದಂಪತಿ ದಿನವೂ ಪೂಜಿಸುತ್ತಿದ್ದರು ಶಿವನನ್ನು
ಸ್ವಲ್ಪ ಕಾಲಾನಂತರ ಆಕೆ ಗರ್ಭಿಣಿಯಾದಳು
ಗುರುದೇವ ಗುರುದೇವ || ೪೩ ||
ನವಮಾಸವು ತುಂಬಿ ಪುಷ್ಯ ಮಾಸದ ಶುದ್ಧ
ಬಿದಿಗೆ ದಿನ ಪುತ್ರ ರತ್ನಕೆ ಜನ್ಮವ ನೀಡಿದಳು
ನವಜಾತ ಶಿಶು ಆಗ ಉಚ್ಚರಿಸಿತು ಓಂಕಾರ
ತಂದೆತಾಯಿಗಾಯಿತು ಆಶ್ಚರ್ಯವು ಸಂತಸವು
ಗುರುದೇವ ಗುರುದೇವ || ೪೪ ||
ಅತ್ಯಾಶ್ಚರ್ಯಗೊಂಡರು ಬಂಧುಬಾಂಧವರೆಲ್ಲ್ಲ
ಜ್ಯೋತಿಷಿಗಳು ಮಗುವಿನ ಭವಿಷ್ಯವ ಹೇಳಿದರು
ಮಗು ಮಹಾತಪಸ್ವಿಯು ಜಗದ್ಗುರು ಆಗುವನು
ಅಷ್ಟಸಿದ್ಧಿಗಳ ಗಳಿಸಿ ಖ್ಯಾತಿ ಪಡೆವನು ಎಂದರು
ಗುರುದೇವ ಗುರುದೇವ || ೪೫ ||
ಗ್ರಾಮಸ್ಥರೆಲ್ಲ ಬಂದು ಈ ಭವ್ಯ ಶಿಶುವಿನ
ದಿವ್ಯ ರೂಪವ ನೋಡಿ ತಾವೇ ಧನ್ಯರು ಎಂದರು
ಕುಲಪುರೋಹಿತರನ್ನು ಕರೆಸಿ ತಂದೆ ತಾಯಿ
ನರಹರಿ ಎಂಬ ಹೆಸರನ್ನಿಟ್ಟರು ಸಂಭ್ರಮದಿ
ಗುರುದೇವ ಗುರುದೇವ || ೪೬ ||
ಶಿವಭಕ್ತರಾಗಿರುವ ದಂಪತಿ ತಮ್ಮ ಮಗನ
ಪವಾಡವ ನೋಡುತ ಇದ್ದರು ಸಂತೋಷದಿ
ಬೆಳೆಯುತ ಬಾಲಕನು ಏನೂ ಮಾತನ್ನಾಡದೆ
ಸದಾ ಉಚ್ಚರಿಸುತ್ತಿದ್ದ ಓಂಕಾರವ ಮಾತ್ರ
ಗುರುದೇವ ಗುರುದೇವ || ೪೭ ||
ಕಳೆಯಿತೇಳು ವರ್ಷವು ಒಂದಿನ ತಾಯಿ ದುಃಖದಲಿ
ಮಗನೇ ನಿನ್ನ ನುಡಿಯ ಕೇಳಬೇಕು ಎಂದಳು
ತಾಯಿಗೆ ನರಹರಿಯು ಸನ್ನೆಯ ಮಾಡಿದನು
ಜನಿವಾರ ಹಾಕಿದರೆ ಮಾತನ್ನಾಡುವೆನೆಂದು
ಗುರುದೇವ ಗುರುದೇವ || ೪೮ ||
ಮಾತಾಪಿತರು ಕೂಡಲೆ ಕುಲಪುರೋಹಿತರದಿಂದ
ಶುಭಮುಹೂರ್ತ ನಿಶ್ಚಯಿಸಿ ಉಪನಯನ ಮಾಡಿದರು
ಗಾಯತ್ರೀ ಮಂತ್ರವನು ತಂದೆ ಉಪದೇಶಿಸಿದ
ಮಾತೃ ಭಿಕ್ಷೆಯ ಸಮಯ ಭಿಕ್ಷೆ ನೀಡಿದಳು ತಾಯಿ
ಗುರುದೇವ ಗುರುದೇವ || ೪೯ ||
ನರಹರಿ ತಾಯಿಗೆ ನಮಿಸಿ ಚತುರ್ವೇದ ಉಚ್ಚರಿಸಿದ
ಹೇಳಿದಳಾಗ ತಾಯಿ ಋತ್ವಿಜರು ಹೇಳಿಸಿದಂತೆ
ಭಿಕ್ಷೆಯ ಬೇಡಿ ನೀನು ವೇದಾಭ್ಯಾಸವ ಮಾಡು
ಧರ್ಮವ ರಕ್ಷಿಸು ಎಂದು ಆಶೀರ್ವದಿಸಿದಳು
ಗುರುದೇವ ಗುರುದೇವ || ೫೦ ||
ನರಹರಿಯೆಂದ ಅಮ್ಮಾ ನಿನ್ನ ಈ ಮಾತಿನಂತೆ
ಭಿಕ್ಷಾ ವೃತ್ತಿಯಿಂದಲೆ ಜೀವನ ನಡೆಸುವೆನು
ದೇಶವ ಸಂಚರಿಸುತ ಧರ್ಮ ಉಳಿಸುವೆನೆಂದ
ಮಗನ ಮಾತನು ಕೇಳಿ ಕಣ್ಣೀರು ಹಾಕಿದಳು
ಗುರುದೇವ ಗುರುದೇವ || ೫೧ ||
ಮಗನೆ ನರಹರಿ ನೀನು ನುಡಿಯುವೆ ಹೀಗೇಕೆ
ಇಳಿ ವಯಸ್ಸಲಿ ನಮ್ಮನು ರಕ್ಷಿಸುವೆ ಎಂಬಾಸೆ
ಅಮ್ಮಾ ಪೂರ್ವಜನ್ಮದಲ್ಲಿ ಶಿವನ ಭಕ್ತಳು ನೀನು
ನಾಲ್ಕು ಮಕ್ಕಳು ಜನಿಸಿ ನಿಮ್ಮನು ರಕ್ಷಿಸುವರೆಂದ
ಗುರುದೇವ ಗುರುದೇವ || ೫೨ ||
ತಾಯಿ ಶಿರದ ಮೇಲೆ ನರಹರಿ ಹಸ್ತವನಿಟ್ಟ
ತಾಯಿಗೆ ಪೂರ್ವಜನ್ಮದ ಸ್ಮರಣೆ ಉಂಟಾಯಿತು
ಗುರುವೆಂದು ಪಾದಕ್ಕೆ ನಮಸ್ಕರಿಸಿದಳಾದರೂ
ಮಗನೇ ಬಿಡಲಾರೆನು ಎಂದಳು ಮಮತೆಯಲಿ
ಗುರುದೇವ ಗುರುದೇವ || ೫೩ ||
ತಾಯಿಗೆ ನರಹರಿಯು ತಿಳಿಸುತ ತತ್ವಗಳ
ಅಮ್ಮಾ ದೇಹ ಸ್ಥಿರವಲ್ಲ ಸತ್ಕಾರ್ಯ ಮಾಡಬೇಕು
ಶಕ್ತವಾಗಿರುವಾಗ ವ್ಯರ್ಥವ ಮಾಡಬಾರದು
ಯಾವುದು ಶಾಶ್ವತವಲ್ಲ ಎಂದು ಉಪದೇಶಿಸಿದ
ಗುರುದೇವ ಗುರುದೇವ || ೫೪ ||
ವರ್ಷ ಕಳೆದು ದಂಪತಿಗೆ ಜನಿಸಿದರು ಅವಳಿಗಳು
ಸಂಚಾರಕೆ ಹೊರಡುವೆ ಎಂದನು ನರಹರಿಯು
ಹೊರಡುವಾಗ ತಾಯಿಗೆ ನಿನಗೆ ಇನ್ನಿಬ್ಬರು ಪುತ್ರರು
ಒಬ್ಬ ಪುತ್ರಿಯು ಜನಿಸಲಿ ಎನ್ನುತ ಅನುಗ್ರಹಿಸಿದನು
ಗುರುದೇವ ಗುರುದೇವ || ೫೫ ||
ಪುತ್ರ ವಿರಹಕೆ ಬಳಲಿದ ತಾಯಿಗೆ ನರಹರಿಯು
ಅಮ್ಮಾ ನೀ ನೆನೆದಾಗ ಬರುವೆನು ಚಿಂತೆ ಬಿಡು
ಇಪ್ಪತ್ತೊಂದು ವರ್ಷ ಕಳೆದು ಮತ್ತೆ ಬರುವೆನೆಂದು
ಮೂಲರೂಪವ ತೋರಿಸಿ ಹೊರಟನು ನರಹರಿಯು
ಗುರುದೇವ ಗುರುದೇವ || ೫೬ ||
ಹೊರಟಿರುವ ನರಹರಿಯು ಕಾಶಿ ಕ್ಷೇತ್ರವ ತಲುಪಿ
ಅಲ್ಲಿನ ದತ್ತ ಘಾಟಿನಲಿ ತಪಸ್ಸಲಿ ನಿರತನಾದ
ಈ ಬಾಲಯೋಗಿಯ ತೇಜಸ್ಸು ನೋಡಿದವರು
ಭಕ್ತಿಯಿಂದ ತಲೆಬಾಗಿ ನಮಸ್ಕರಿಸಿ ಹೋಗುವರು
ಗುರುದೇವ ಗುರುದೇವ || ೫೭ ||
ಜ್ಞಾನಿಯು ವೃದ್ಧ ಯತಿಯು ಕೃಷ್ಣ ಸರಸ್ವತಿಯವರು
ಹೇಳಿದರು ಶಿಷ್ಯರಿಗೆಲ್ಲ ಇವನು ಸಾಮಾನ್ಯನಲ್ಲ
ಶ್ರೀಮನ್ನಾರಾಯಣನೇ ಈ ದತ್ತನ ಅವತಾರಿ
ಲೋಕಕಲ್ಯಾಣಕ್ಕಾಗಿ ಸಂನ್ಯಾಸ ದೀಕ್ಷೆಯ ಕೊಡುವೆ
ಗುರುದೇವ ಗುರುದೇವ || ೫೮ ||
ಕೃಷ್ಣ ಸರಸ್ವತಿಯವರು ಬಾಲಕ ನರಹರಿಗೆ
ಸಂನ್ಯಾಸ ದೀಕ್ಷೆ ನೀಡಿ ಮಂತ್ರವ ಉಪದೇಶಿಸಿ
ಶ್ರೀ ನರಸಿಂಹ ಸರಸ್ವತಿ ಎಂಬ ನಾಮವನು
ಆಶ್ರಮದ ರೀತಿಯಲಿ ನಾಮಕರಣ ಮಾಡಿದರು
ಗುರುದೇವ ಗುರುದೇವ || ೫೯ ||
ಸಂನ್ಯಾಸವ ಸ್ವೀಕರಿಸಿ ಗುರು ಸನ್ನಿಧಿಯಲ್ಲಿ
ವಿದ್ಯಾಭ್ಯಾಸವ ಮಾಡಿ ಅಧ್ಯಯನ ಮಾಡಿದರು
ವೇದ ಶಾಸ್ತ್ರಗಳಲ್ಲಿ ಪಾರಂಗತರಾಗಿ
ಸಾರವನು ಶಿಷ್ಯರಿಗೆ ಉಪದೇಶ ಮಾಡಿದರು
ಗುರುದೇವ ಗುರುದೇವ || ೬೦ ||
ಶಿಷ್ಯರೊಂದಿಗೆ ಹೊರಟು ತೀರ್ಥಯಾತ್ರೆ ಮಾಡುತ್ತ
ಪುಣ್ಯ ಕ್ಷೇತ್ರ ದರ್ಶಿಸುತ ಬಂದರು ಪ್ರಯಾಗಕೆ
ಮಾಧವನೆಂಬ ವಿಪ್ರಗೆ ಸನ್ಯಾಸ ದೀಕ್ಷೆ ನೀಡಿ
ಮಾಧವ ಸರಸ್ವತಿಯೆಂಬ ಹೆಸರಿಟ್ಟರು ನರಸಿಂಹರು
ಗುರುದೇವ ಗುರುದೇವ || ೬೧ ||
ನರಸಿಂಹ ಸರಸ್ವತಿಗಳ ಕೀರ್ತಿ ಹೆಚ್ಚಾಗಿ ಅಲ್ಲಿ
ಅವರಲಿ ಶಿಷ್ಯತ್ವ ಪಡೆದು ಧನ್ಯರಾದರು ಹಲವರು
ಏಳು ಆಪ್ತ ಶಿಷ್ಯರಿಗೆ ಸಂನ್ಯಾಸ ದೀಕ್ಷೆ ನೀಡಿ
ವಿಶೇಷ ಅನುಗ್ರಹವ ಮಾಡಿದರು ಗುರುವರರು
ಗುರುದೇವ ಗುರುದೇವ || ೬೨ ||
ನರಸಿಂಹರು ತಾಯಿಗೆ ನೀಡಿದ ವಚನದಂತೆ
ಸಮಯಕೆ ಸರಿಯಾಗಿ ಬಂದರು ಜನ್ಮ ಸ್ಥಳಕೆ
ಬಂಧುಗಳ ಮನೆಗಳಲಿ ಏಕಕಾಲ ಕಾಣಿಸಲು
ಯತಿ ವೇಷಧಾರಿ ಶ್ರೀ ಹರಿಯೆ ಎಂದರೆಲ್ಲ
ಗುರುದೇವ ಗುರುದೇವ || ೬೩ ||
ತಂದೆ ತಾಯಿಗವರು ಗುರು ಶ್ರೀಪಾದರಂತೆ
ದರ್ಶನ ನೀಡಿದಾಗ ಪಿತ ಕೇಳಿದ ಸಂನ್ಯಾಸ
ಮಾತಾಪಿತರಿಗವರು ಕಾಶಿಯಲಿ ಅಂತ್ಯಕಾಲ
ಕಳೆದರೆ ಪಿತೃಗಳೆಲ್ಲಾ ಮುಕ್ತಿ ಹೊಂದುವರೆಂದರು
ಗುರುದೇವ ಗುರುದೇವ || ೬೪ ||
ಸಹೋದರಿ ತಪಸ್ಸಿಗೆ ಅನುಮತಿ ಕೇಳಿದಾಗ
ನೀ ಕಳೆದ ಜನ್ಮದಲಿ ಗೋವನು ಹಿಂಸಿಸಿದೆ
ದಂಪತಿಗೊಡಕುತಂದೆ ಪತಿ ಸಂನ್ಯಾಸಿಯಾಗುವನು
ಕುಷ್ಟ ರೋಗಿಯಾಗುವೆ ನೀನು ಎಂದರು ನರಸಿಂಹರು
ಗುರುದೇವ ಗುರುದೇವ || ೬೫ ||
ಗುರುಪಾದಕೆ ನಮಿಸಿ ತನ್ನ ರಕ್ಷಿಸೆಂದಾಗ
ಪತಿ ಸೇವೆ ಮಾಡುತಿರು ಸಂನ್ಯಾಸಿ ಆಗುವ ತನಕ
ಆಮೇಲೆ ರೋಗವನು ಅನುಭವಿಸಲೇಬೇಕು
ನಂತರ ನಿನ್ನ ಕ್ಲೇಶವನು ಪರಿಹರಿಸುವೆ ಎಂದರು
ಗುರುದೇವ ಗುರುದೇವ || ೬೬ ||
ತ್ರ್ಯಂಬಕೇಶ್ವರದಲ್ಲಿ ಮಾಧವಾರಣ್ಯ ಯತಿಗೆ
ನರಸಿಂಹ ದರ್ಶನಕೆ ಅನುಗ್ರಹ ಮಾಡಿದರು
ಬ್ರಹ್ಮಕೇಶ್ವರದಲ್ಲೊಬ್ಬ ಬ್ರಾಹ್ಮಣ ಹೊಟ್ಟೆ ನೋವಲಿ
ಬಳಲಿ ಸಾಯಲೆತ್ನಿಸಲು ತಪ್ಪಿಸಿದರು ಗುರುವರರು
ಗುರುದೇವ ಗುರುದೇವ || ೬೭ ||
ಗ್ರಾಮಾಧಿಕಾರಿಯಾದ ಸಾಯಂದೇವ ನಮಿಸಿ
ಗುರುವೆ ನಾ ಬ್ರಾಹ್ಮಣನು ಯವನ ರಾಜನಲ್ಲಿರುವೆ
ಅವನಿಗೆ ಗುರುವರರು ಭೋಜನ ಸಿದ್ದಪಡಿಸೆಂದು
ಹೊಟ್ಟೆ ನೋವಿನ ಬ್ರಾಹ್ಮಣಗೆ ಉಣಬಡಿಸಲು ಹೇಳಿದರು
ಗುರುದೇವ ಗುರುದೇವ || ೬೮ ||
ಗುರುಗಳ ಆಹ್ವಾನಿಸಿ ಪೂಜಿಸಿ ಸಾಯಂದೇವ
ಭಿಕ್ಷೆ ನೀಡಿ ನಂತರ ಬ್ರಾಹ್ಮಣಗೆ ಬಡಿಸಿದನು
ಗುರುಗಳ ಕೃಪೆಯಿಂದ ಗುಣವಾಯ್ತು ಬ್ರಾಹ್ಮಣಗೆ
ಸಾಯಂದೇವನಿಗೆ ಗುರುಗಳು ಹರಸಿದರು
ಗುರುದೇವ ಗುರುದೇವ || ೬೯ ||
ವಿನಯದಿ ಸಾಯಂದೇವ ಗುರುವೇ ತಮ್ಮ ಮೇಲೆ
ಸದಾ ಭಕ್ತಿ ಇರುವಂತೆ ನನ್ನ ವಂಶಕೆ ಹರಸಿರಿ
ಭಕ್ತಿ ಮೆಚ್ಚಿದ ನರಸಿಂಹರು ವಂಶಪಾರಂಪರ್‍ಯವು
ನಮ್ಮ ಭಕ್ತರಾಗಿರೆಂದು ಆಶೀರ್ವದಿಸಿದರು
ಗುರುದೇವ ಗುರುದೇವ || ೭೦ ||
ಗುರುವೇ ನನ್ನದೊಂದು ಕೋರಿಕೆ ಈಡೇರಿಸಿ
ಈ ಪ್ರಾಂತ್ಯದ ದೊರೆಯು ಕ್ರೂರಿಯು ಆಗಿರುವನು
ಗೋಬ್ರಾಹ್ಮಣ ಹಂತಕನು ಇಂದು ನನ್ನ ಕೊಲ್ಲುವನು
ಇನ್ನುಳಿದವರನ್ನಾದರು ನೀವೇ ರಕ್ಷಿಸಿರೆಂದನು
ಗುರುದೇವ ಗುರುದೇವ || ೭೧ ||
ಆತನ ಶಿರದ ಮೇಲೆ ಹಸ್ತವನಿಟ್ಟು ನರಸಿಂಹರು
ಧೈರ್ಯವಾಗಿ ಹೋಗೆಂದು ಹರಸಿ ಅವನ ಬೀಳ್ಕೊಟ್ಟರು
ಸಾಯಂದೇವನ ಕಂಡು ಯವನ ದೊರೆಗೆ ಮೈಯೆಲ್ಲಾ
ಉರಿಯುಂಟಾಗಿ ತಕ್ಷಣ ಹೋದನು ಅರಮನೆಯೊಳಗೆ
ಗುರುದೇವ ಗುರುದೇವ || ೭೨ ||
ಕನಸಲಿ ದೊರೆಗೆ ತನ್ನ ಕತ್ತರಿಸಿದಂತಾಗಿ
ಸಾಯಂದೇವನೆಂದು ಅರಿತು ಮರುದಿನ ಕರೆಸಿದ
ದೊರೆಯು ಅವನ ಕಾಲಿಗೆ ಬಿದ್ದು ಕ್ಷಮೆ ಬೇಡಿದಾಗ
ಗುರುಭಕ್ತನಿಂದ ಆದ ಮೈ ಉರಿಯು ಮಾಯವಾಯ್ತು
ಗುರುದೇವ ಗುರುದೇವ || ೭೩ ||
ಸಾಯಂದೇವ ಗುರುವಿಗೆ ವಿಷಯ ತಿಳಿಸಿ ಹೇಳಿದ
ಗುರುವೆ ನಿಮ್ಮ ಬಿಟ್ಟಿರಲಾರೆ ನಿಮ್ಮ ಬಳಿ ಇರುವೆನೆಂದ
ಹದಿನೈದು ವರ್ಷದ ಮೇಲೆ ನೀನು ಇರಬಹುದೆಂದು
ನರಸಿಂಹರು ಅಲ್ಲಿಂದ ವೈಜನಾಥಕೆ ಹೊರಟರು
ಗುರುದೇವ ಗುರುದೇವ || ೭೪ ||
ಶ್ರೀಗುರುಗಳ ಮಹಿಮೆ ಎಲ್ಲೆಡೆ ಹರಡುತಿರಲು
ತಿಳಿದು ಹಲವರು ಬಂದು ಪಡೆದರು ಶಿಷ್ಯತ್ವವನು
ನರಸಿಂಹರು ಶಿಷ್ಯರಿಗೆ ತೀರ್ಥಯಾತ್ರೆಗೆ ಹೊರಡಿರಿ
ನಂತರ ನಾವು ಬಂದು ಸೇರಿಕೊಳ್ಳುವೆವು ಎಂದರು
ಗುರುದೇವ ಗುರುದೇವ || ೭೫ ||
ಯಾತ್ರೆಗೆ ಶಿಷ್ಯರ ಕಳುಹಿ ವೈಜನಾಥ ಕ್ಷೇತ್ರದಲಿ
ಸಿದ್ಧಯೋಗಿಯೊಡನೆ ಒಂದು ವರ್ಷ ನೆಲೆಸಿದರು
ತಪಸ್ವಿಯಂತಿರುವನೊಬ್ಬ ಗುರುಗಳ ಬಳಿ ಬಂದು
ಗುರುವೇ ತಮ್ಮ ದರ್ಶನದಿ ಪುನೀತನಾದೆನು ಎಂದನು
ಗುರುದೇವ ಗುರುದೇವ || ೭೬ ||
ನನ್ನ ಗುರು ಯಾವಾಗಲು ನನ್ನ ನಿಂದಿಸುತಿದ್ದರು
ಕೋಪದಿಂದ ನಾನು ಗುರು ಬಿಟ್ಟು ಹೊರ ಬಂದೆ
ಹಲವಾರು ವರ್ಷಗಳು ತಪಸ್ಸನು ಮಾಡಿದೆನು
ಜ್ಞಾನೋದಯವಾಗಿಲ್ಲ ಎಂದನು ಗುರುಗಳಲಿ
ಗುರುದೇವ ಗುರುದೇವ || ೭೭ ||
ಶ್ರೀಗಳು ಹೇಳಿದರು ಗುರುದ್ರೋಹಿಯು ನೀನು
ನಿನಗೆ ಮೋಕ್ಷವು ಇಲ್ಲ ನಿನ್ನ ಗುರುಸೇವೆ ಮಾಡು
ತಪಸ್ವಿ ಪಶ್ಚಾತ್ತಾಪದಿ ಪ್ರಾಣ ಬಿಡುವೆನೆಂದ
ಪಾಪ ಹರಿಯಿತೆಂದು ಹರಸಿದ ಗುರುವರರು
ಗುರುದೇವ ಗುರುದೇವ || ೭೮ ||
ಶ್ರೀಗಳು ಬಿಲ್ಲವಾಡಿಯ ಕೃಷ್ಣಾ ನದಿ ತೀರದಲಿ
ಔದುಂಬರ ವೃಕ್ಷ ಬಳಿ ಚಾತುರ್ಮಾಸ್ಯದಲಿದ್ದರು
ಮಹಾವಿದ್ವಾಂಸರು ತಮ್ಮ ಮಂದಮತಿ ಪುತ್ರನನ್ನು
ಕರೆತಂದು ತೋರಿಸಿ ಹೇಳಿಕೊಂಡರು ದುಃಖದಲಿ
ಗುರುದೇವ ಗುರುದೇವ || ೭೯ ||
ಪೆದ್ದನಾಗಿರುವೆನೆಂದು ಉಪವಾಸದಿ ಮೂರು ದಿನ
ದೇವಿಯ ಆರಾಧಿಸಿ ದೇವಿಯು ಒಲಿಯದಿರಲು
ತನ್ನ ನಾಲಿಗೆ ಕತ್ತರಿಸಿ ಅರ್ಪಿಸಿದ ದರ್ಶನವಿಲ್ಲ
ಮರುದಿನ ದರ್ಶನ ಬಯಸಿ ಶಿರ ಕೊಡಲು ನಿರ್ಧರಿಸಿದ
ಗುರುದೇವ ಗುರುದೇವ || ೮೦ ||
ಅಂದೆ ರಾತ್ರಿ ಕನಸಲ್ಲಿ ದೇವಿ ಪ್ರತ್ಯಕ್ಷಳಾಗಿ
ಕೃಷ್ಣಾ ತೀರಕೆ ಹೋಗು ಔದುಂಬರ ಬಳಿಗೆ
ಅಲ್ಲಿಯ ಗುರುಗಳಿಂದ ಇಚ್ಛೆ ಫಲಿಸುವುದೆಂದಳು
ತಮ್ಮ ಬಳಿ ಬಂದೆವೆಂದು ನಮಸ್ಕರಿಸಿ ಬೇಡಿದರು
ಗುರುದೇವ ಗುರುದೇವ || ೮೧||
ಮಂದಮತಿ ತಲೆ ಮೇಲೆ ಗುರುಗಳು ಹಸ್ತವನಿಟ್ಟು
ಹರಸಿದಾಗ ಗುರುಸ್ಪರ್ಶದಿ ಸಕಲ ವಿದ್ಯೆಯು ಫಲಿಸಿತು
ದಯಾಮಯ ವರಪ್ರದರು ಎಂದು ನರಸಿಂಹರನು
ಭಕ್ತಿಯಲಿ ಸ್ತುತಿಸಿದಾಗ ಅಶೀರ್ವದಿಸಿದರು
ಗುರುದೇವ ಗುರುದೇವ || ೮೨ ||
ಗುರುಗಳಿರುವ ಊರಲ್ಲಿ ಸಾತ್ವಿಕ ಬ್ರಾಹ್ಮಣನೊಬ್ಬ
ಭಿಕ್ಷಾ ವೃತ್ತಿಯಿಂದ ಜೀವನ ನಡೆಸುತಲಿದ್ದ
ಭಿಕ್ಷೆಯು ಸಿಗದಿರುವಾಗ ಅಂಗಳದ ಅವರೆಯ
ಪಲ್ಯವ ತಿಂದು ದಂಪತಿ ಇದ್ದರು ನೆಮ್ಮದಿಯಿಂದ
ಗುರುದೇವ ಗುರುದೇವ || ೮೩ ||
ಅವನ ಮನೆಗೊಂದು ದಿನ ಭಿಕ್ಷೆಗೆ ಬಂದರು ಶ್ರೀಗಳು
ದಂಪತಿಗಳು ಸತ್ಕರಿಸಿ ಅವರೆ ಪಲ್ಯವ ನೀಡಿದರು
ಶ್ರೀಗಳು ದಂಪತಿಗೆ ಶುಭವಾಗಲೆಂದು ಹರಸಿ
ಹೋಗುವಾಗ ಅಲ್ಲಿರುವ ಅವರೆ ಬಳ್ಳಿಯ ಕಿತ್ತೆಸೆದರು
ಗುರುದೇವ ಗುರುದೇವ || ೮೪ ||
ಅತ್ತಳು ಬ್ರಾಹ್ಮಣನ ಪತ್ನಿ ಸಂತೈಸುತ ಬ್ರಾಹ್ಮಣನು
ಬಡತನವ ತೊಲಗಿಸಿ ಉದ್ಧಾರ ಮಾಡುವರೆಂದ
ಅವರೆ ಬೇರು ಅಗೆದರು ನಿಧಿ ಸಿಕ್ಕಿತು ದಂಪತಿಗೆ
ನಮಿಸಿ ಗುರುವಿಗೆ ತಿಳಿಸಿ ಪಡೆದರಾಶೀರ್ವಾದವ
ಗುರುದೇವ ಗುರುದೇವ || ೮೫ ||
ಶ್ರೀಗಳು ಭಿಕ್ಷೆಗೆಂದು ಎಲ್ಲೂ ಹೋಗದ ದಿನ
ನದಿಯು ಇಬ್ಭಾಗವಾಗಿ ಮಾಡಿ ಕೊಟ್ಟ ದಾರಿಯಲಿ
ಸನ್ನಿಧಿಗೆ ಅರವತ್ನಾಲ್ಕು ಯೋಗಿನಿಯರು ಬಂದು
ಭಿಕ್ಷೆ ನೀಡುವುದ ನೋಡಿ ಅಚ್ಚರಿಗೊಂಡರು ಭಕ್ತರು
ಗುರುದೇವ ಗುರುದೇವ || ೮೬ ||
ನದಿಯ ಪಕ್ಕದ ಹೊಲದ ಅಂಬಿಗನು ಗುರುಭಕ್ತನು
ಹೊಲಕೆ ಹೋಗುವಾಗ ಗುರುದರ್ಶನ ಮಾಡುವನು
ಸೇವಕನಾಗುವೆನೆಂದು ವಿನಯದಿ ನಮಿಸುವನು
ಆಗಲಿ ನಿನ್ನಿಚ್ಛೆಯೆಂದು ಹರಸಿದ ನರಸಿಂಹರು
ಗುರುದೇವ ಗುರುದೇವ || ೮೭ ||
ಕಾಶೀ ಪ್ರಯಾಗದಲಿ ಮಾಘ ಸ್ನಾನ ಇಚ್ಛೆಯೆಂದ
ಶ್ರೀಗಳು ತಾವು ಕುಳಿತ ವ್ಯಾಘ್ರಾಸನ ಕೈಹಿಡಿಸಿ
ಗಂಗಾ ಪ್ರಯಾಗ ಸ್ನಾನ ವಿಶ್ವನಾಥನ ದರ್ಶನವ
ಯೋಗ ಶಕ್ತಿಯಿಂದ ಮಾಡಿಸಿದ ಗುರುವರರು
ಗುರುದೇವ ಗುರುದೇವ || ೮೮ ||
ಯೋಗಿನಿಯರಿಗಾಗಿ ಅನ್ನಪೂರ್ಣೆ ಅನುಗ್ರಹಿಸಿ
ಭಕ್ತಿಯಲಿ ಪಾದುಕೆಗಳ ನಿತ್ಯ ಪೂಜಿಸಿರೆಂದರು
ಇಷ್ಟಾರ್ಥ ಸಿದ್ಧಿಸುವುದು ಎಂದು ಅಭಯವ ನೀಡಿ
ಗಾಣಿಗಾಪುರದ ಕಡೆಗೆ ಹೊರಟರು ನರಸಿಂಹರು
ಗುರುದೇವ ಗುರುದೇವ || ೮೯ ||
ಶಿರೋಳ ದಂಪತಿಯ ಮಕ್ಕಳೆಲ್ಲ ಸಾಯುತಿರಲು
ಜ್ಯೋತಿಷ್ಯರು ಹೇಳಿದರು ಕಳೆದ ಜನ್ಮದ ಸಾಲವ
ಕೊಟ್ಟವಗೆ ನೀವು ಕೊಡದೆ ಸತ್ತವನು ಪ್ರೇತನಾದ
ಗುರುಪಾದಕೆ ಪೂಜಿಸಿ ಯೋಗ್ಯರಿಗೆ ಹಣ ಕೊಡಿರೆಂದರು
ಗುರುದೇವ ಗುರುದೇವ || ೯೦ ||
ಕೃಷ್ಣಾ ಸಂಗಮ ತೀರದ ಔದುಂಬರ ಬಳಿಯಿರುವ
ನರಸಿಂಹರ ಪಾದುಕೆಯ ಪೂಜಿಸಿದರು ಭಕ್ತಿಯಲಿ
ಕನಸಲಿ ಪ್ರೇತವು ಬಂದು ಹಣ ಕೊಡೆಂದು ಬೆದರಿಸಿ
ಕೊಡದಿದ್ದರೆ ವಂಶವನೆ ಹಾಳು ಮಾಡುವೆನೆಂದಿತು
ಗುರುದೇವ ಗುರುದೇವ || ೯೧ ||
ಗುರುಗಳ ಮೊರೆ ಹೋದಾಗ ಗುರು ಹೇಳ್ದರು ಪ್ರೇತಕ್ಕೆ
ಕೊಟ್ಟಷ್ಟು ಹಣ ತೆಗೆದುಕೋ ಪ್ರೇತ ಜನ್ಮ ನಾ ಕಳೆಯುವೆ
ದಂಪತಿಯಿಂದ ಶ್ರೀಗಳು ಮಾಡಿಸಿ ಸಂಸ್ಕಾರವ
ಪೂರ್ಣಾಯುಷಿ ಪುತ್ರರು ಜನಿಸಲೆಂದು ಹರಸಿದರು
ಗುರುದೇವ ಗುರುದೇವ || ೯೨ ||
ಗುರು ಕೃಪೆಯಲಿ ಪುತ್ರರು ಜನಿಸಿ ದೊಡ್ಡವರಾಗಿ
ದೊಡ್ಡವಗೆ ಉಪನಯನ ಚಿಕ್ಕವಗೆ ಚೌಲವಾಯ್ತು
ಚಿಕ್ಕವನು ಸಾವನ್ನಪ್ಪಿದ ಅಳತೊಡಗಿದ ತಾಯಿ
ಮಗನೊಂದಿಗೆ ತಾನೂ ಚಿತೆಗೆ ಏರುವೆನೆಂದಳು
ಗುರುದೇವ ಗುರುದೇವ || ೯೩ ||
ದುಃಖಿಸುತಿಹ ತಾಯಿ ಬಳಿ ಬ್ರಹ್ಮಚಾರಿ ರೂಪದಲಿ
ಗುರು ನರಸಿಂಹರು ಬಂದು ಸಾಂತ್ವನ ಹೇಳಿದರು
ತಾಯೀ ದುಃಖಿಸಬೇಡ ಬದುಕು ಶಾಶ್ವತವಲ್ಲ
ಈ ಜಗತ್ತಲಿ ಸಾಯದೆ ಉಳಿದವರ್‍ಯಾರು ಇಲ್ಲ
ಗುರುದೇವ ಗುರುದೇವ || ೯೪ ||
ಕರ್ಮದ ಒಳ್ಳೆಯ ಕೆಟ್ಟ ಫಲ ಅನುಭವಿಸಲೇಬೇಕು
ಗರ್ಭದಿ ಹೊರ ಬರುವಾಗ ನಮ್ಮ ಸಾವು ನಿಶ್ಚಿತವು
ದೇಹ ನಾಶವಾದರೂ ಆತ್ಮ ನಿತ್ಯ ಇದನ್ನರಿತು
ಅಂತ್ಯ ಸಂಸ್ಕಾರಕ್ಕೆ ಬಿಡು ಎಂದು ಉಪದೇಶಿಸಿದರು
ಗುರುದೇವ ಗುರುದೇವ || ೯೫ ||
ಆಗ ತಾಯಿ ಹೇಳಿದಳು ಬ್ರಹ್ಮಚಾರಿಗಳೆ ನೀವು
ಮಾಡಿದ ಉಪದೇಶವು ಸತ್ಯವಾಗಿದೆ ಆದರೆ
ನರಸಿಂಹರ ವರದಿಂದ ಜನಿಸಿರುವ ಮಗನಿಗೆ
ಎಳೆವಯಸ್ಸಲ್ಲಿ ಸಾವೇ ವರವು ಸುಳ್ಳಾಗುವುದೇ
ಗುರುದೇವ ಗುರುದೇವ || ೯೬ ||
ಗುರುಗಳಿಗೀಗಲೆ ತನ್ನ ಪ್ರಾಣ ಅರ್ಪಿಸುವೆನೆನಲು
ಬ್ರಹ್ಮಚಾರಿಯು ನಸುನಕ್ಕು ವರ ಪಡೆದಲ್ಲಿ ಹೋಗೆನುತ
ಅಲ್ಲೇ ಶವ ಮಲಗಿಸೆಂದು ಆ ಕ್ಷಣವೆ ಮಾಯವಾದ
ದುಃಖಿಸುತ ಶವ ಒಯ್ದಳು ಗುರುಪಾದುಕೆ ಬಳಿಯಲ್ಲಿ
ಗುರುದೇವ ಗುರುದೇವ || ೯೭ ||
ಶ್ರೀಗಳು ದರ್ಶನ ನೀಡಿ ಶವಕೆ ಹಚ್ಚೆಂದು ಭಸ್ಮವಿತ್ತು
ಬಾಯೊಳಗು ಹಾಕೆನಲು ಪಾಲಿಸಿದಳು ಗುರುವಾಕ್ಯ
ಮಗನೆದ್ದು ಅಮ್ಮಾ ಎನಲು ಸಂತಸದಿ ದಂಪತಿಯು
ಗುರುಗಳ ಪಾದುಕೆಯ ಪೂಜಿಸಿದರು ಭಕ್ತಿಯಲಿ
ಗುರುದೇವ ಗುರುದೇವ || ೯೮ ||
ಗಾಣಿಗಾಪುರದಲ್ಲಿ ನರಸಿಂಹರು ನೆಲೆಸಿದರು
ಒಂದಿನ ವಿಪ್ರನ ಮನೆಗೆ ಭಿಕ್ಷೆಗಾಗಿ ಹೋದರು
ವಿಪ್ರನ ಪತ್ನಿ ಗುರುಗಳಲಿ ಪತಿಯು ಭಿಕ್ಷೆಯ ತರುವರು
ಕುಳಿತಿರಿ ನೀಡುವೆ ಎನಲು ಹಾಲನ್ನಾದರು ನೀಡೆಂದರು
ಗುರುದೇವ ಗುರುದೇವ || ೯೯ ||
ಗುರುವೇ ನಮ್ಮನೆಯಲ್ಲಿ ಬರಡೆಮ್ಮೆ ಎಂದಾಗ
ಈಗ ಹೋಗಿ ನೋಡೆಂದು ಶ್ರೀಗಳು ಹೇಳಿದರು
ನೋಡಿ ಕೆಚ್ಚಲಲಿ ಹಾಲ ಹಿಂಡಿಕೊಟ್ಟಳು ಶ್ರೀಗಳಿಗೆ
ಸದಾ ನಿಮ್ಮನೆಯಲ್ಲಿ ಲಕ್ಷ್ಮಿ ಇರಲೆಂದು ಹರಸಿದರು
ಗುರುದೇವ ಗುರುದೇವ || ೧೦೦ ||
ಶ್ರೀಗುರು ಕೃಪೆಯಿಂದ ಬರಡೆಮ್ಮೆ ಹಾಲುಕೊಟ್ಟ
ವಿಷಯ ಗ್ರಾಮಕೆ ತಿಳಿದು ಬಂದರಲ್ಲಿ ಅನೇಕರು
ಗ್ರಾಮಾಧಿಕಾರಿ ಜೊತೆ ಗುರುಗಳ ದರ್ಶನ ಮಾಡಿ
ಭಕ್ತಿಯಿಂದ ಕೊಂಡಾಡಿ ಎಲ್ಲರು ನಮಸ್ಕರಿಸಿದರು
ಗುರುದೇವ ಗುರುದೇವ || ೧೦೧ ||
ಭಕ್ತರೆಲ್ಲ ಗುರುಗಳಲಿ ಮಠಕೆ ಮನೆ ಕೊಡುವೆವು
ನೀವಿಲ್ಲೇ ನೆಲೆಸಿ ನಮ್ಮನ್ನುದ್ಧರಿಸಿರಿ ಎಂದರು
ನರಸಿಂಹರು ಒಪ್ಪಿ ಅಶ್ವತ್ಥ ವೃಕ್ಷದ ಎದುರಿನ
ದೊಡ್ಡ ಮನೆಯೊಂದ ನೋಡಿ ಬಂದರು ವಾಸ್ತವ್ಯಕ್ಕೆ
ಗುರುದೇವ ಗುರುದೇವ || ೧೦೨ ||
ಅಶ್ವತ್ಥ ವೃಕ್ಷದಿಂದ ಬ್ರಹ್ಮ ರಾಕ್ಷಸ ಬಂದು
ಕೈ ಮುಗಿದು ಪ್ರಾರ್ಥಿಸುತ ಗುರುಗಳಿಗೆಂದ ಸ್ವಾಮಿ
ತಮ್ಮ ದರ್ಶನ ಭಾಗ್ಯದಿ ನನ್ನ ಪಾಪ ನಾಶವಾಯ್ತು
ಈ ಜನ್ಮ ನಿವಾರಿಸಿ ನನ್ನನುದ್ಧರಿಸಿರಿ ಎಂದನು
ಗುರುದೇವ ಗುರುದೇವ || ೧೦೩ ||
ಅವನ ತಲೆಯ ಮೇಲೆ ಗುರುಗಳು ಹಸ್ತವನಿಟ್ಟು
ಕೃಷ್ಣಾ ಸಂಗಮದಲ್ಲಿ ಸ್ನಾನವ ಮಾಡೆಂದರು
ಗುರುವಿನಾಜ್ಞೆಯಂತೆ ಬ್ರಹ್ಮರಾಕ್ಷಸ ಮಾಡಿದ
ಜನ್ಮ ನಿವಾರಣೆಯಾಗಿ ಮುಕ್ತಿ ದೊರಕಿತು ಅವನಿಗೆ
ಗುರುದೇವ ಗುರುದೇವ || ೧೦೪ ||
ಅಲ್ಲಿಯ ಪಂಡಿತ ತ್ರಿವಿಕ್ರಮ ನರಸಿಂಹರ ಭಕ್ತರಲಿ
ನಿಮ್ಮನ್ನು ಮೋಡಿ ಮಾಡುವ ಮೋಸದ ಗುರುಗಳೆಂದ
ಭಕ್ತರ್‍ಯಾರು ನಂಬಲಿಲ್ಲ ಜ್ಞಾನದೃಷ್ಟಿಯಲಿ ಶ್ರೀಗಳು
ತಿಳಿದು ಸುಮ್ಮನಿರುವಾಗ ಭಕ್ತರು ತಮ್ಮಿಚ್ಛೆಯ ತಿಳಿಸಿದರು
ಗುರುದೇವ ಗುರುದೇವ || ೧೦೫ ||
ಭಕ್ತರಿಚ್ಛೆಯಂತೆ ಒಪ್ಪಿ ಗರ್ವಿತ ತ್ರಿವಿಕ್ರಮನನ್ನು
ಒಮ್ಮೆ ಕಾಣಲು ಹೋದರು ಶ್ರೀ ಗುರು ನರಸಿಂಹರು
ನರಸಿಂಹ ಉಪಾಸಕ ತ್ರಿವಿಕ್ರಮಗೆ ದಿನದಂತೆ
ಅಂದು ನರಸಿಂಹ ದೇವರ ದರ್ಶನವೆ ಆಗಲಿಲ್ಲ
ಗುರುದೇವ ಗುರುದೇವ || ೧೦೬ ||
ತ್ರಿವಿಕ್ರಮನು ದೇವರಲಿ ತಪಸ್ಸು ವ್ಯರ್ಥವೆ ಎನ್ನಲು
ಆಗ ಗುರು ನರಸಿಂಹರು ಅಲ್ಲಿ ಹೋಗಿ ನಿಂತರು
ತ್ರಿವಿಕ್ರಮಗೆ ಕಂಡರು ಆರಾಧ್ಯ ದೇವರಂತೆ
ನನ್ನನ್ನುದ್ಧರಿಸಿರೆಂದು ಬೇಡುತ ನಮಸ್ಕರಿಸಿದನು
ಗುರುದೇವ ಗುರುದೇವ || ೧೦೭ ||
ಗುರುಗಳು ನಸುನಗುತ ನಮ್ಮನು ಡಾಂಭಿಕರೆಂದೆ
ವಂಚಕರೆಂದು ಹೇಳಿ ಈಗೇಕೆ ಗೌರವವು
ಗರ್ವದಿ ನಿಂದಿಸಿದೆ ಸ್ವಾಮಿ ನನ್ನ ತಪ್ಪು ಕ್ಷಮಿಸಿರೆಂದು
ಪಶ್ಚಾತ್ತಾಪ ಪಟ್ಟಾಗ ಕ್ಷಮಿಸಿ ಹರಸಿದ ಶ್ರೀಗಳು
ಗುರುದೇವ ಗುರುದೇವ || ೧೦೮ ||
ಬೀದರಿನ ರಾಜನು ಹಲವು ವಿದ್ವಾಂಸರನು
ಕರೆಸಿ ವೇದ ಘೋಷವ ಆಗಾಗ ಮಾಡಿಸುವನು
ಘನ ಪಂಡಿತರಿಬ್ಬರು ಪಠಿಸಿ ಬಿರುದನು ಪಡೆದು
ಇತರ ಪಂಡಿತರಿಂದ ಪಡೆದರು ಜಯಪತ್ರವನು
ಗುರುದೇವ ಗುರುದೇವ || ೧೦೯ ||
ತ್ರಿವಿಕ್ರಮ ಪಂಡಿತನ ಬಳಿ ಬಂದು ಪಂಡಿತರು
ತಮ್ಮೊಡನೆ ವಾದವನು ಮಾಡೆಂದು ಹೇಳಿದರು
ವಿನಯದಿ ತ್ರಿವಿಕ್ರಮನು ಆಸಕ್ತಿಯಿಲ್ಲ ಎಂದ
ಪಂಡಿತರಿಬ್ಬರು ಗರ್ವದಿ ಜಯಪತ್ರ ಕೊಡು ಎಂದರು
ಗುರುದೇವ ಗುರುದೇವ || ೧೧೦ ||
ಆಗ ತ್ರಿವಿಕ್ರಮನೆಂದ ಗಾಣಿಗಾಪುರದಲ್ಲಿ
ನನ್ನ ಗುರು ಸನ್ನಿಧಿಯಲ್ಲಿ ವಾದ ಮಾಡುವೆನೆಂದು
ಪಂಡಿತರಿಬ್ಬರು ಒಪ್ಪಿ ಹೊರಟರು ಪಲ್ಲಕ್ಕಿಯಲಿ
ನಡೆದು ಬಂದ ತ್ರಿವಿಕ್ರಮ ಗುರು ನರಸಿಂಹರ ಬಳಿಗೆ
ಗುರುದೇವ ಗುರುದೇವ || ೧೧೧ ||
ಗುರುಗಳಿಗೆ ನಮಸ್ಕರಿಸಿ ವಿಷಯವ ಅರುಹಿದನು
ಪಂಡಿತರು ವಾದಕ್ಕೆ ಅವಸರ ಪಡಿಸಿದರು
ಪಂಡಿತರ ಗರ್ವವನು ತಿಳಿದರು ನರಸಿಂಹರು
ವಿವೇಕ ಶೂನ್ಯರೆಂದು ಕರ್ಮಭ್ರಷ್ಟರು ಇವರೆಂದು
ಗುರುದೇವ ಗುರುದೇವ || ೧೧೨ ||
ಅವರ ಗರ್ವ ಮುರಿಯಲು ಗುರುಗಳು ನಿರ್ಧರಿಸಿ
ದಾರಿಯಲ್ಲಿ ಹೋಗುತ್ತಿರುವ ಅಂತ್ಯಜನ ಕರೆಸಿದರು
ತಮ್ಮ ಶಿಷ್ಯರಿಂದ ಏಳು ಗೆರೆಯನು ಹಾಕಿಸಿ
ಅಂತ್ಯಜಗೆ ಒಂದೊಂದೇ ಗೆರೆಯ ದಾಟಲು ಹೇಳಿದರು
ಗುರುದೇವ ಗುರುದೇವ || ೧೧೩ ||
ಗೆರೆಯ ದಾಟುತ್ತಾ ಅವನು ಒಂದೊಂದೆ ಜನ್ಮ ನೆನೆದು
ಹೇಳುತ ಕೊನೆಗೆ ತಾನು ವೇದ ಕಲಿತ ವಿಪ್ರನೆಂದ
ಅವನಿಗೆ ಭಸ್ಮವ ಕೊಟ್ಟು ಗುರುಗಳು ಹೇಳಿದರು
ಈ ಪಂಡಿತರೊಡನೆ ವಾಕ್ಯಾರ್ಥ ನಡೆಸೆಂದು
ಗುರುದೇವ ಗುರುದೇವ || ೧೧೪ ||
ಅವನ ಬಾಯಿಯಿಂದ ವೇದಸೂಕ್ತ ಸುಸ್ವರದಿ
ನಿರರ್ಗಳವಾಗಿ ಬರಲು ದಿಗ್ಮೂಢರಾದ ಪಂಡಿತರು
ಗುರುಗಳೇ ಕ್ಷಮಿಸಿರೆಂದು ವಿನಮ್ರದಿ ಬೇಡಿದಾಗ
ರಾಕ್ಷಸ ಜನ್ಮವ ಅನುಭವಿಸಿ ಎಂದರು ನರಸಿಂಹರು
ಗುರುದೇವ ಗುರುದೇವ || ೧೧೫ ||
ದುಃಖಿಸುತ ಪಂಡಿತರು ಪಶ್ಚಾತ್ತಾಪ ಪಡುತ
ಶಾಪಕೆ ಪರಿಹಾರವ ಕೇಳಿದರು ಗುರುಗಳಲಿ
ಹನ್ನೆರಡು ವರ್ಷ ನೀವು ರಾಕ್ಷಸ ಜನ್ಮವ ಅನುಭವಿಸಿ
ನಂತರ ಜ್ಞಾನಿಯಿಂದ ಮೋಕ್ಷ ಸಿಗುವುದು ಎಂದರು
ಗುರುದೇವ ಗುರುದೇವ || ೧೧೬ ||
ಗುರುಕೃಪೆಯ ಅಂತ್ಯಜನು ತನ್ನ ಜನ್ಮದ ಕಾರಣವ
ತಿಳಿಸಲು ಕೇಳುತಿರಲು ಶ್ರೀಗಳು ಹೇಳಿದರು
ಕರ್ಮಗಳಿಗನುಸಾರ ಶುಭ ಅಶುಭಕೆ ಫಲವು
ಹೆತ್ತವರ ನಿಂದಿಸಿರುವೆ ಅದಕೆ ನಿನಗೀ ಜನ್ಮವು
ಗುರುದೇವ ಗುರುದೇವ || ೧೧೭ ||
ಒಂದು ತಿಂಗಳು ನೀನು ಸಂಗಮ ಸ್ನಾನ ಮಾಡು
ಮುಂದಿನ ಜನ್ಮದಲಿ ವಿಪ್ರನಾಗಿ ಜನಿಸುವೆ ಎಂದರು
ಆಗ ಅಂತ್ಯಜನ ಪತ್ನಿ ಬಂದಳು ಮಕ್ಕಳ ಜೊತೆಗೆ
ನಾನು ಬ್ರಾಹ್ಮಣನು ಮುಟ್ಟಬೇಡಿ ಎಂದನು ಅಂತ್ಯಜನು
ಗುರುದೇವ ಗುರುದೇವ || ೧೧೮ ||
ಆತನ ಪತ್ನಿ ದುಃಖಿಸುತ ಗುರುಗಳ ಬೇಡಿದಳು
ನಮ್ಮನ್ನು ದೂರ ಮಾಡದಂತೆ ಉಪದೇಶಿಸಿರೆಂದಳು
ಹಠ ಹಿಡಿದ ಅಂತ್ಯಜನ ಮೈಯ ಭಸ್ಮ ತೆಗೆಸಿದರು
ಅಂತ್ಯಜನ ಸ್ಮೃತಿ ಬಂದು ಮನೆಯವರ ಜೊತೆ ಹೊರಟ
ಗುರುದೇವ ಗುರುದೇವ || ೧೧೯ ||
ಜನ್ಮ ಸ್ಮರಣೆ ವಿಷಯವ ತ್ರಿವಿಕ್ರಮ ಕೇಳಿದಾಗ
ಭಸ್ಮಧಾರಣೆಯ ಮಹತ್ವ ಎಂದರು ನರಸಿಂಹರು
ಭಸ್ಮವನ್ನು ಧರಿಸಿದರೆ ಮಹಾಪುಣ್ಯಪ್ರದವು
ಅಜ್ಞಾನಿಯು ಬ್ರಹ್ಮಜ್ಞಾನವ ಪಡೆದುಕೊಳ್ಳುವನೆಂದರು
ಗುರುದೇವ ಗುರುದೇವ || ೧೨೦ ||
ತ್ರಿಮೂರ್ತಿ ಸ್ವರೂಪರು ಸದಾ ಭಸ್ಮಧಾರಿಗಳು
ಆದ ವಾಮದೇವರು ಲೋಕಸಂಚಾರಿಗಳು
ಅರಣ್ಯದಲೊಬ್ಬ ರಾಕ್ಷಸ ಅವರ ಭಕ್ಷಿಸಲು ಬಂದ
ಧರಿಸಿದ ಭಸ್ಮವು ತಾಗಿ ಮುಕ್ತಿ ಹೊಂದಿದನೆಂದರು
ಗುರುದೇವ ಗುರುದೇವ || ೧೨೧ ||
ಮಾಹುರಿ ಗ್ರಾಮದಲ್ಲಿ ಕ್ಷಯ ಪೀಡಿತ ದತ್ತನ
ಸತಿಯು ಗುರು ಬಳಿಗೆ ದತ್ತನ ಕರೆತರುತಿರಲು
ಗಾಣಿಗಾಪುರಕೆ ಬಂದು ಗುರುದರ್ಶನ ಪಡೆವ ಮುನ್ನ
ಮರಣ ಹೊಂದಿದ ದತ್ತ ಕುಸಿದಳು ಸತಿ ದುಃಖಿಸುತ
ಗುರುದೇವ ಗುರುದೇವ || ೧೨೨ ||
ಹೇ ಗುರುದೇವ ನಿಮ್ಮನ್ನೇ ನಂಬಿ ಬಂದೆನು ನಾನು
ಅನಾಥಳಾದೆ ಗುರುವೇ ಹೇಗೆ ಬದುಕಲಿ ಇನ್ನು
ನೀವೇ ಎನಗೆ ಗತಿಯು ಗುರುಗಳೇ ರಕ್ಷಿಸಿರೆಂದು
ಗುರು ಸ್ಮರಣೆ ಮಾಡುತ್ತ ಕುಳಿತಳು ಶವದ ಬಳಿ
ಗುರುದೇವ ಗುರುದೇವ || ೧೨೩ ||
ಅಳುತಿರುವ ಸತಿ ಬಳಿಗೆ ಯೋಗಿಯೊಬ್ಬನು ಬಂದು
ತಂಗಿ ವ್ಯರ್ಥವಾಗಿ ನೀನೇಕೆ ದುಃಖಿಸುವೆ
ಸತ್ತವರು ಬರುವುದಿಲ್ಲ ಸಂಸಾರವೆ ಮಾಯೆಯು
ಸಂಬಂಧ ಕರ್ಮಫಲವು ಹುಟ್ಟಿ ಸಾಯುವರೆಂದನು
ಗುರುದೇವ ಗುರುದೇವ || ೧೨೪ ||
ಯೋಗಿ ಪಾದಕೆ ಎರಗಿ ಸತಿ ಹೇಳಿದಳು ಸ್ವಾಮಿ
ಪತಿಯೇ ದೇವರಲ್ಲವೆ ಪತಿವ್ರತೆಯಾದರೆ ಪುಣ್ಯ
ಸಹಗಮನ ಮಾಡುವೆನು ಸದ್ಗತಿಯಾಗುವಂತೆ
ಅನುಗ್ರಹಿಸಿರಿ ಎಂದು ಪ್ರಾರ್ಥಿಸಿದಳು ಸತಿಯು
ಗುರುದೇವ ಗುರುದೇವ || ೧೨೫ ||
ಯೋಗಿಯೆಂದ ಸತಿಗೆ ಗುರುಗಳ ದರ್ಶನಕಾಗಿ
ಬಂದ ನಿನಗೆ ನಾನು ಭಸ್ಮವ ರುದ್ರಾಕ್ಷಿಯ ಕೊಡುವೆ
ಶವಕೆ ಭಸ್ಮವ ಲೇಪಿಸಿ ಗುರುತೀರ್ಥ ಹಾಕೆಂದು
ಕೊಟ್ಟು ಅದೃಶ್ಯನಾದಾಗ ಹೇಳಿದಂತೆ ಮಾಡಿದಳು
ಗುರುದೇವ ಗುರುದೇವ || ೧೨೬ ||
ಸಹಗಮನಕ್ಕೆ ಸಿದ್ಧತೆ ಮಾಡಿ ಗುರುಗಳ ಬಳಿ ಬಂದು
ಆಶೀರ್ವದಿಸಿರಿ ಎಂದು ಸತಿಯು ನಮಸ್ಕರಿಸಿದಳು
ಅಷ್ಟಪುತ್ರ ಸೌಭಾಗ್ಯವತಿ ಭವ ಎಂದರು ಶ್ರೀಗಳು ಸತಿಗೆ
ಜನರು ದತ್ತನ ವಿಷಯವ ಗುರುಗಳಿಗೆ ತಿಳಿಸಿದರು
ಗುರುದೇವ ಗುರುದೇವ || ೧೨೭ ||
ಶ್ರೀಗಳೆಂದರು ಈಕೆ ಸೌಭಾಗ್ಯವತಿಯೆಂದು
ಜನರಿಗೆ ಹೇಳಿ ದತ್ತನ ಶವವನು ತರಿಸಿದರು
ಶವಕೆ ತೀರ್ಥ ಪ್ರೋಕ್ಷಿಸಿ ಬದುಕಿಸಿದರು ದತ್ತನ
ಭಕ್ತಿಯಿಂದ ಗುರುಗಳಿಗೆ ಸತಿಯು ನಮಸ್ಕರಿಸಿದಳು
ಗುರುದೇವ ಗುರುದೇವ || ೧೨೮ ||
ಆಗ ಒಬ್ಬ ಗುರುಗಳಲಿ ಇದೇನಾಶ್ಚರ್ಯವೆಂದ
ಬರುವ ಜನ್ಮದ ಆಯುಷ್ಯ ಸ್ವಲ್ಪ ನೀಡಿದೆನೆಂದರು
ಸತಿಯು ಯೋಗಿ ವಿಷಯವ ಶ್ರೀಗಳಲಿ ಕೇಳಿದಾಗ
ನಿನ್ನ ಭಕ್ತಿಗೆ ಮೆಚ್ಚಿ ಬಂದ ಯೋಗಿ ನಾನೇ ಎಂದರು
ಗುರುದೇವ ಗುರುದೇವ || ೧೨೯ ||
ರುದ್ರಾಕ್ಷಿ ಧಾರಣೆಯ ಮಹತ್ವವನು ತಿಳಿಸುತ್ತಾ
ಒಂದು ಪ್ರಸಂಗವನು ಹೇಳಿದರು ಗುರುವರರು
ಕಾಶ್ಮೀರದ ರಾಜನ ಮಗ ಮತ್ತು ಮಂತ್ರಿಯ ಮಗ
ಪೂರ್ವಜನ್ಮದ ಸಂಸ್ಕಾರದಿಂದ ಧರಿಸುತ್ತಿದ್ದರು ರುದ್ರಾಕ್ಷಿಯ
ಗುರುದೇವ ಗುರುದೇವ || ೧೩೦ ||
ರಾಜನಿಗೆ ಮಹರ್ಷಿಗಳು ಮಗ ಅಲ್ಪಾಯುಷಿಯೆಂದು
ರುದ್ರ ಪಾರಾಯಣವ ಮಾಡಿಸಲು ಹೇಳಿದರು
ಮಹರ್ಷಿಗಳಂದಂತೆ ರುದ್ರ ಪಾರಾಯಣವ
ಮಾಡಿಸಿ ಮಗನ ಆಯುಷ್ಯವ ವೃದ್ಧಿಸಿಕೊಂಡನು ಎಂದರು
ಗುರುದೇವ ಗುರುದೇವ || ೧೩೧ ||
ಸತಿಯು ಗುರುಗಳೆ ನಿಮ್ಮ ಸ್ಮರಣೆ ನನ್ನಲಿ ಸ್ಥಿರವಿರಲು
ಯಾವುದಾದರೂ ಮಂತ್ರವನ್ನು ಉಪದೇಶಿಸಿರೆಂದಳು
ಸ್ತ್ರೀಯರಿಗೆ ಅಗತ್ಯವಿಲ್ಲೆಂದು ಕಚ ದೇವಯಾನಿ ಕಥೆಯ
ಶ್ರೀಗಳು ಸತಿಗೆ ಹೇಳಿ ವ್ರತವನ್ನು ಮಾಡೆಂದರು
ಗುರುದೇವ ಗುರುದೇವ || ೧೩೨ ||
ಹದಿನಾರು ಸೋಮವಾರ ವ್ರತವನಾಚರಿಸೆಂದು
ಉಪದೇಶಿಸಿ ಗುರುಗಳು ವ್ರತ ಮಹಿಮೆ ಹೇಳಿದರು
ರಾಜಾ ಚಿತ್ರವರ್ಮನ ಪುತ್ರಿ ಸೀಮಂತಿನಿಗೆ
ಜೋತಿಷ್ಯರು ಹೇಳಿದರು ವೈಧವ್ಯವು ಇದೆಯೆಂದು
ಗುರುದೇವ ಗುರುದೇವ || ೧೩೩ ||
ಸೀಮಂತಿನಿ ದುಃಖದಿ ಮಹರ್ಷಿ ಪತ್ನಿ ಮೈತ್ರೇಯಿಯ
ಪರಿಹಾರ ಕೇಳಿದಳು ತನಗೆ ಬರುವ ವೈಧವ್ಯಕೆ
ಸೀಮಂತಿನಿಗೆ ಮೈತ್ರೇಯಿ ಹದಿನಾರು ಸೋಮವಾರ
ವ್ರತವನ್ನು ಮಾಡೆಂದು ಉಪದೇಶ ಮಾಡಿದಳು
ಗುರುದೇವ ಗುರುದೇವ || ೧೩೪ ||
ಸೋಮವಾರದ ವ್ರತವ ಭಕ್ತಿಯಲಿ ಮಾಡುತಿರಲು
ಚಿತ್ರಾಂಗದನೊಂದಿಗೆ ನಡೆಯಿತು ವಿವಾಹವು
ಕೆಲವು ದಿನ ಕಳೆಯಲು ನದಿಯಲಿ ಚಿತ್ರಾಂಗದ
ಮುಳುಗಿ ಕಾಣೆಯಾದನು ಆದರೂ ವ್ರತವ ಬಿಡಲಿಲ್ಲ
ಗುರುದೇವ ಗುರುದೇವ || ೧೩೫ ||
ಮುಳುಗಿದ ಚಿತ್ರಾಂಗದ ತಲುಪಿದ ನಾಗಲೋಕ
ಕೆಲ ಕಾಲ ಅಲ್ಲೇ ಉಳಿದು ಮತ್ತೆ ನದಿ ಮೇಲೆ ಬಂದ
ಆ ದಿನ ಸೋಮವಾರದ ವ್ರತದಲ್ಲಿದ್ದ ಸೀಮಂತಿನಿ
ಚಿತ್ರಾಂಗದನನ್ನು ಕಂಡು ಹರ್ಷಗೊಂಡಳು ಎಂದರು
ಗುರುದೇವ ಗುರುದೇವ || ೧೩೬ ||
ಗುರುಗಳ ಅನುಗ್ರಹವ ಪಡೆದ ದತ್ತ ದಂಪತಿಯು
ಶ್ರದ್ಧೆ ಭಕ್ತಿಯಲಿ ವ್ರತವ ಆಚರಣೆಯ ಮಾಡಿದರು
ವರ್ಷವೂ ಗುರು ದರ್ಶನಕೆ ಗಾಣಿಗಾಪುರಕೆ ಬಂದು
ಗುರು ಕೃಪೆಯ ಪಡೆಯುತ್ತಾ ನೆಮ್ಮದಿಯಲಿ ಬಾಳಿದರು
ಗುರುದೇವ ಗುರುದೇವ || ೧೩೭ ||
ಸದಾಚಾರನಾಗಿ ಇರುವ ಬ್ರಾಹ್ಮಣನೊಬ್ಬ
ವ್ರತವೆಂದು ಭಿಕ್ಷೆ ಬೇಡಿ ಮನೆಗೆ ತಂದು ಉಣ್ಣುವನು
ಈ ವ್ರತಕೆ ಅವನ ಪತ್ನಿ ಬಹಳ ಬೇಸರ ಪಡುವಳು
ಒಂದಿನ ಭೋಜನಕೆ ಬಂದಿತು ಆಹ್ವಾನವು
ಗುರುದೇವ ಗುರುದೇವ || ೧೩೮ ||
ಬ್ರಾಹ್ಮಣ ತನ್ನ ಪತ್ನಿಗೆ ಭೋಜನಕೆ ಹೋಗೆಂದ
ನೀವೂ ಬನ್ನಿರೆನಲು ನಾ ಬರುವುದಿಲ್ಲವೆಂದ
ಆಕೆ ಗುರು ಬಳಿ ಬಂದು ನಮಸ್ಕರಿಸಿ ಬೇಡಿದಳು
ಗುರುವಿನಾಜ್ಞೆಯಂತೆ ಹೊರಟನು ಭೋಜನಕೆ
ಗುರುದೇವ ಗುರುದೇವ || ೧೩೯ ||
ಭೋಜನಕೆ ಕುಳಿತಾಗ ಅವನ ಪತ್ನಿಗೆ ತನ್ನ ಜೊತೆ
ಹಂದಿಗಳು ನಾಯಿಗಳು ಕುಳಿತಂತೆ ಅನ್ನಿಸಿತು
ಪಕ್ವಾನ್ನ ಅಸಹ್ಯವೆನಿಸಿ ಪತಿಗೆ ತಿಳಿಸಿ ಎದ್ದಳು
ಬೇಸರದಿ ಪತ್ನಿ ಜೊತೆ ಗುರುಗಳ ಬಳಿ ಬಂದ
ಗುರುದೇವ ಗುರುದೇವ || ೧೪೦ ||
ಶ್ರೀಗಳು ವಿಷಯ ತಿಳಿದು ನಿನ್ನ ಪತ್ನಿ ಇಚ್ಛೆ ಪೂರೈಸಿದೆ
ವ್ರತಭಂಗ ದೋಷ ನಿನಗೆ ಬರುವುದಿಲ್ಲ ಎಂದರು
ನಿನ್ನ ಪತ್ನಿ ನಿನ್ನಿಚ್ಛೆಯಂತೆ ಇನ್ನು ನಡೆಯುವಳೆಂದರು
ದಂಪತಿ ಗುರುಚರಣಕೆ ನಮಸ್ಕರಿಸಿ ಪ್ರಾರ್ಥಿಸಿದರು
ಗುರುದೇವ ಗುರುದೇವ || ೧೪೧ ||
ಬ್ರಾಹ್ಮಣ್ಯದ ಧರ್ಮವನು ನರಸಿಂಹರು ಹೇಳಿದರು
ಮನೆಯಲ್ಲಿ ಕೃಷ್ಣಾಜಿನ ಸಮಿತ್ತು ದರ್ಭೆ ಇರಬೇಕು
ದಿನವು ಗೋಪೂಜೆ ಮಾಡಿ ಗೋರಕ್ಷಣೆ ಮಾಡಬೇಕು
ಗುರುವಿನ ಆದೇಶದಂತೆ ವಿಗ್ರಹವ ಪೂಜಿಸಬೇಕು
ಗುರುದೇವ ಗುರುದೇವ || ೧೪೨ ||
ಅವರವರ ಮನೆತನದ ಸಂಪ್ರದಾಯದಂತೆ
ದೇವರಿಗಿಷ್ಟವಾದ ತುಲಸಿ ಬಿಲ್ವ ಗರಿಕೆಯನು
ಸುಗಂಧಿತ ಹೂವಿನಿಂದ ಶ್ರದ್ಧೆ ಭಕ್ತಿಯಲಿ ಪೂಜಿಸಿ
ಮನೆಗೆ ಬಂದವರನ್ನು ಅತಿಥಿಯೆಂದು ಸತ್ಕರಿಸಿರಿ
ಗುರುದೇವ ಗುರುದೇವ || ೧೪೩ ||
ಬಾಳೆ ಮುತ್ತುಗ ಕಂಚಲಿ ಭೋಜನ ಮಾಡಬೇಕು
ಮೊದಲು ಸಿಹಿಯನು ತಿಂದು ನಂತರ ಊಟ ಮಾಡಿ
ಕೊನೆಗೆ ಮಜ್ಜಿಗೆ ಸೇವಿಸಿ ಬಲವರ್ಧನೆಯಾಗುವುದು
ಊಟವು ಮುಗಿದ ಮೇಲೆ ತಾಂಬೂಲವ ಸೇವಿಸಿರಿ
ಗುರುದೇವ ಗುರುದೇವ || ೧೪೪ ||
ಅಧ್ಯಯನ ಮಾಡುತ್ತ ನಿತ್ಯ ಬೋಧನೆ ಮಾಡಿರಿ
ಸದಾ ಸದ್ವಿಚಾರಿಯಾಗಿ ಧರ್ಮವನು ಪಾಲಿಸಿರಿ
ಜ್ಞಾನ ವೃದ್ಧಿಸಿ ಮೋಕ್ಷವು ಸಿಗುವುದೆಂದ ಶ್ರೀಗಳಿಗೆ
ಪಾದಕೆರಗಿ ದಂಪತಿಯು ಪಡೆದರು ಆಶೀರ್ವಾದವ
ಗುರುದೇವ ಗುರುದೇವ || ೧೪೫ ||
ಗುರು ಮಠದಲ್ಲಿ ನಿತ್ಯವು ನಡೆವುದು ಸಂತರ್ಪಣೆ
ಬಡವ ಭಾಸ್ಕರ ಭಕ್ತಿಯಲಿ ಭಿಕ್ಷೆ ಮಾಡಿಸಲೆಂದು
ಬೇಕಾದ ಪದಾರ್ಥವ ಮನೆಯಲಿದ್ದಷ್ಟು ತಂದ
ಮಠದಲ್ಲಿ ಜನರ ನೋಡಿ ಸಂಕೋಚದಿ ಉಳಿದ
ಗುರುದೇವ ಗುರುದೇವ || ೧೪೬ ||
ತಾನು ತಂದ ಪದಾರ್ಥ ಸಾಕಾಗದು ಎಂದು
ಜನರು ಕಡಿಮೆ ಇರುವ ದಿನವನ್ನೇ ಕಾಯುತಿದ್ದ
ಮಠದಲ್ಲಿರುವ ಕೆಲವರು ಇವನ ವಿಷಯವ ತಿಳಿದು
ಗೇಲಿ ಮಾಡುತಲಿದ್ದರೂ ಮೌನದಿ ಸಹಿಸಿಕೊಂಡ
ಗುರುದೇವ ಗುರುದೇವ || ೧೪೭ ||
ಗುರುಗಳಿಗೆ ಈ ವಿಷಯ ತಿಳಿದು ಭಾಸ್ಕರನ ಕರೆದು
ಈ ದಿನ ನೀನೆ ನಮಗೆ ಭಿಕ್ಷೆ ನೀಡು ಎಂದರು
ಶ್ರದ್ಧೆಯಿಂದ ಭಾಸ್ಕರನು ಅಡುಗೆ ಮಾಡಲು ತೊಡಗಿದ
ಅಲ್ಲಿದ್ದವರೆಲ್ಲ ಊಟಕ್ಕೆ ಮನೆಗೆ ಹೋಗುವೆವೆಂದರು
ಗುರುದೇವ ಗುರುದೇವ || ೧೪೮ ||
ಹೊರಟವರಿಗೆ ಗುರುಗಳು ನಿಮ್ಮನು ಬಿಟ್ಟು ನಾವಿಂದು
ಊಟವ ಮಾಡುವುದಿಲ್ಲವೆನಲು ಆಗ ಎಲ್ಲರೂ ಕುಳಿತರು
ಊಟದ ಸಮಯಕ್ಕೆ ಅಲ್ಲಿ ಬಹಳ ಜನ ಸೇರಿದರು
ಭಾಸ್ಕರನು ಅಡುಗೆಯ ತಂದು ಇಟ್ಟನು ಗುರು ಸನ್ನಿಧಿಯಲ್ಲಿ
ಗುರುದೇವ ಗುರುದೇವ || ೧೪೯ ||
ಅಡುಗೆ ಪಾತ್ರೆಯ ಮೇಲೆ ಗುರುಗಳು ಶಾಲು ಹೊದಿಸಿ
ತೀರ್ಥವನ್ನು ಪ್ರೋಕ್ಷಿಸಿ ಊಟವ ನೀಡೆಂದರು
ಬಗೆ ಬಗೆ ಖಾದ್ಯ ಉಂಡು ತೃಪ್ತಿಗೊಂಡರು ಎಲ್ಲರು
ಆದರೂ ಅಡುಗೆಯು ಉಳಿದು ಜಲಚರಕೆ ಹಾಕಿದರು
ಗುರುದೇವ ಗುರುದೇವ || ೧೫೦ ||
ನರಸಿಂಹರು ಭಾಸ್ಕರಗೆ ಆಶೀರ್ವದಿಸಿದರು
ನಿನ್ನ ಬಡತನ ನೀಗಿತು ಸುಖದಲಿ ಬಾಳೆಂದರು
ಗುರುಕೃಪೆ ನೋಡಿ ಜನರು ಜಯಘೋಷ ಮಾಡಿದರು
ಭಗವಂತನ ಅವತಾರಿ ಯತಿಸ್ವರೂಪಿ ಎಂದರು
ಗುರುದೇವ ಗುರುದೇವ || ೧೫೧ ||
ಗಾಣಿಗಾಪುರದಲ್ಲಿ ಸೋಮನಾಥ ಪಂಡಿತನ
ಪತ್ನಿ ಗಂಗಾದೇವಿ ಪತಿಯ ಸೇವೆಯಲ್ಲಿರುವಳು
ಮಕ್ಕಳಿಲ್ಲದೆ ಚಿಂತಿಸುತ ಹಲವು ವರ್ಷವು ಕಳೆದವು
ಭಕ್ತಿಯಿಂದ ಪ್ರತಿದಿನವು ಬರುವಳು ಗುರುದರ್ಶನಕೆ
ಗುರುದೇವ ಗುರುದೇವ || ೧೫೨ ||
ನಮಸ್ಕರಿಸಿದ ಆಕೆಗೆ ನರಸಿಂಹರು ಹರಸುತ್ತ
ನಿನ್ನ ಮನದ ಆಸೆಯು ಈಡೇರಲಿ ಎಂದರು
ಆಗ ಗಂಗಾದೇವಿ ಸ್ವಾಮೀ ನನಗೆ ಮಕ್ಕಳಿಲ್ಲ
ಮುಂದಿನ ಜನ್ಮಕ್ಕಾದರೂ ಅನುಗ್ರಹಿಸಿರಿ ಎಂದಳು
ಗುರುದೇವ ಗುರುದೇವ || ೧೫೩ ||
ಶ್ರೀಗಳು ನಸುನಗುತ ಈ ಜನ್ಮದಲ್ಲೇ ನಿನಗೆ
ಮಕ್ಕಳು ಆಗುವುದೆಂದು ಆಶೀರ್ವದಿಸಿದರು
ಸಂಗಮ ಕ್ಷೇತ್ರದಲ್ಲಿ ಅಶ್ವತ್ಥ ವೃಕ್ಷಕೆ ದಿನವೂ
ಭಕ್ತಿಯಿಂದ ಪ್ರದಕ್ಷಿಣೆಯ ಮಾಡೆಂದು ಹರಸಿದರು
ಗುರುದೇವ ಗುರುದೇವ || ೧೫೪ ||
ಗುರುಗಳು ಹೇಳಿದಂತೆ ಶ್ರದ್ಧೆಯಿಂದ ಮಾಡಿದಳು
ಒಂದು ದಿನ ಕನಸಿನಲಿ ಬ್ರಾಹ್ಮಣ ಹೇಳಿದನು
ಸಪ್ತ ಪ್ರದಕ್ಷಿಣೆ ಮಾಡಿ ಗುರುಗಳಿಗೆ ನಮಸ್ಕರಿಸು
ಗುರುಗಳು ನೀಡಿದ ಪ್ರಸಾದವ ಭಕ್ತಿಯಿಂದ ಸ್ವೀಕರಿಸು ಎಂದ
ಗುರುದೇವ ಗುರುದೇವ || ೧೫೫ ||
ಶುಚಿಯಾಗಿ ಗುರು ಬಳಿಗೆ ಬಂದ ಗಂಗಾದೇವಿ
ಸಪ್ತ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡಿದಳು
ಗುರು ನೀಡಿದ ಪ್ರಸಾದವ ಸೇವಿಸಿದಳು ಭಕ್ತಿಯಲಿ
ಕಾಲಾನಂತರದಲ್ಲಿ ಜ್ಞಾನಿಪುತ್ರನ ಪಡೆದಳು
ಗುರುದೇವ ಗುರುದೇವ || ೧೫೬ ||
ನರಹರಿ ಎಂಬ ವಿಪ್ರ ಗುರು ಸನ್ನಿಧಿಗೆ ಬಂದು
ಭಕ್ತಿಯಿಂದ ನಮಸ್ಕರಿಸಿ ದುಃಖವ ಹೇಳಿಕೊಂಡ
ತನ್ನ ಕುಷ್ಟರೋಗವನು ಹೋಗಲಾಡಿಸಿರೆಂದ
ಕಳೆದ ಜನ್ಮದ ಪಾಪ ಎಂದರು ನರಸಿಂಹರು
ಗುರುದೇವ ಗುರುದೇವ || ೧೫೭ ||
ಗುರುಗಳು ಔದುಂಬರದ ಒಣಗಿದ ಕಾಷ್ಟ ನೀಡಿ
ಸಂಗಮದ ಪೂರ್ವದಲ್ಲಿ ನೆಡು ಎಂದರು ನರಹರಿಗೆ
ತ್ರಿಕಾಲ ಸ್ನಾನವ ಮಾಡಿ ಕಾಷ್ಟಕೆ ನೀರನ್ನು ಹಾಕು
ಚಿಗುರಿದ ದಿನ ನಿನ್ನ ರೋಗ ಗುಣವು ಆಗುವುದೆಂದರು
ಗುರುದೇವ ಗುರುದೇವ || ೧೫೮ ||
ಶ್ರದ್ಧೆಯಲಿ ಮಾಡುತ್ತಿರುವ ವಿಪ್ರಗೆ ಹೇಳಿದ ಶಿಷ್ಯರು
ಒಣ ಕಾಷ್ಟ ಚಿಗುರದು ರೋಗ ಗುಣವಾಗದೆಂದು
ಶಿಷ್ಯರ ನುಡಿ ಯೋಚಿಸದೆ ಗುರು ವಾಕ್ಯ ಪಾಲಿಸಿದ
ಗುರು ಬಳಿ ಶಿಷ್ಯರು ಬಂದು ವ್ಯರ್ಥ ಪ್ರಯತ್ನವು ಎಂದರು
ಗುರುದೇವ ಗುರುದೇವ || ೧೫೯ ||
ಯಾರು ಗುರುವಾಕ್ಯದಲ್ಲಿ ಇಡುವರೋ ನಂಬಿಕೆಯ
ಅವರ ಕ್ಲೇಶಗಳೆಲ್ಲಾ ಪರಿಹಾರವಾಗುವುದು
ಶ್ರದ್ಧೆಯಿಂದ ಮಾಡುವ ಸೇವೆಗೆ ಸಿಗುವುದು ಫಲವು
ಎಂದು ಶ್ರೀಗಳು ಕಾಷ್ಟಕೆ ಪ್ರೋಕ್ಷಿಸಿದರು ತೀರ್ಥವನು
ಗುರುದೇವ ಗುರುದೇವ || ೧೬೦ ||
ಗುರುಕೃಪೆ ತೀರ್ಥದಿಂದ ಒಣಕಾಷ್ಟ ಚಿಗುರೊಡೆದು
ನರಹರಿಯ ಕುಷ್ಟರೋಗ ಆ ಕ್ಷಣವೆ ಗುಣವಾಯ್ತು
ಶ್ರೀಗಳು ನರಹರಿಗೆ ಯೋಗೀಶ್ವರನೆಂದು
ವಿದ್ಯಾಸರಸ್ವತಿ ಮಂತ್ರವ ಉಪದೇಶಿಸಿ ಹರಸಿದರು
ಗುರುದೇವ ಗುರುದೇವ || ೧೬೧ ||
ಗುರುಭಕ್ತ ಸಾಯಂದೇವ ಗಾಣಿಗಾಪುರಕೆ ಬಂದು
ಕ್ಷೇತ್ರಕ್ಕೆ ನಮಸ್ಕರಿಸಿ ಬಂದನು ಗುರುಮಠಕೆ
ಗುರುಚರಣಕೆ ನಮಿಸಿ ಹೇ ಗುರುದೇವ ನಿಮ್ಮ
ದರ್ಶನದಿಂದ ನನ್ನ ಜನ್ಮ ಪಾವನವಾಯ್ತು ಎಂದ
ಗುರುದೇವ ಗುರುದೇವ || ೧೬೨ ||
ಶ್ರೀಗುರು ಮಹಿಮೆಯನು ಭಕ್ತಿಯಲಿ ಕೊಂಡಾಡಿ
ಸಂಸಾರ ತೊರೆದು ತಾನು ಸನ್ನಿಧಿಗೆ ಬಂದೆನೆಂದ
ಆತನ ತಲೆಯ ಮೇಲೆ ಶ್ರೀಗಳು ಹಸ್ತವನಿರಿಸಿ
ಪರಮಭಕ್ತನೆ ನಿನ್ನ ವಂಶವೇ ನನ್ನ ಭಕ್ತರು ಎಂದರು
ಗುರುದೇವ ಗುರುದೇವ || ೧೬೩ ||
ಗುರುಸೇವೆ ಕಠಿಣವು ಇರಲಸಾಧ್ಯ ಎಂದರು
ಗುರುವಿಗೆ ಶರಣಾಗಿರುವ ನನಗೆ ಭಯವಿಲ್ಲವೆಂದ
ದೃಢ ನಿಶ್ಚಯದಲಿ ಬಂದೆ ಎಂದ ಸಾಯಂದೇವಗೆ
ಮಠದಲ್ಲಿಯೇ ಇರಲು ಶ್ರೀಗಳು ಸಮ್ಮತಿಸಿದರು
ಗುರುದೇವ ಗುರುದೇವ || ೧೬೪ ||
ಕೆಲವು ತಿಂಗಳು ಕಳೆದು ಒಂದು ಸಂಜೆ ಸಂಗಮಕೆ
ಗುರುಗಳು ತಮ್ಮ ಜೊತೆಗೆ ಆತನ ಕರೆದೊಯ್ದರು
ಮಳೆಗಾಳಿ ಶುರುವಾಯ್ತು ಗುರುಗಳು ಚಳಿಯೆನುತ
ಆತನನ್ನು ಪರೀಕ್ಷಿಸಲು ಬೆಂಕಿಯ ತಾರೆಂದರು
ಗುರುದೇವ ಗುರುದೇವ || ೧೬೫ ||
ಗುರು ಆದೇಶದಂತೆ ಬೆಂಕಿ ತರಲು ಮಠಕೆ
ಕತ್ತಲಾದರೂ ಹೊರಟ ಆಗಾಗ ಮಿಂಚುತ್ತಿತ್ತು
ಮಠದಿಂದ ಮಡಿಕೆಯಲ್ಲಿ ಬೆಂಕಿ ತೆಗೆದುಕೊಂಡು
ಸಂಗಮಕೆ ಹೊರಟಾಗ ಹಿಂದೆ ನೋಡಿದ ಭಯದಿ
ಗುರುದೇವ ಗುರುದೇವ || ೧೬೬ ||
ಎರಡು ಘಟ ಸರ್ಪಗಳು ಹಿಂಬಾಲಿಸಿದ ಕಂಡು
ಭಯದಿಂದ ಓಡುತ್ತಾ ಗುರು ಸನ್ನಿಧಿ ತಲುಪಿದನು
ಗುರು ಬಳಿ ದೀಪಗಳ ತೇಜಸ್ವೀ ಪುರುಷರ
ಆಶ್ಚರ್ಯದಿ ನೋಡಿದನು ಆ ಕ್ಷಣವೆ ಮಾಯವಾಯ್ತು
ಗುರುದೇವ ಗುರುದೇವ || ೧೬೭ ||
ಭಯದಿಂದ ಓಡಿ ಬಂದ ಭಕ್ತ ಸಾಯಂದೇವಗೆ
ನಿನ್ನ ರಕ್ಷಣೆಗೆ ನಾನೇ ಸರ್ಪ ಕಳಿಸಿದೆನೆಂದರು
ಸಾಯಂದೇವನೆಂದ ಗುರುವೇ ಭಕ್ತಿಯು ಸ್ಥಿರವಿರಲು
ನೀವು ನನಗೆ ಅನುಗ್ರಹಿಸಿರಿ ಎನ್ನುತ ಪ್ರಾರ್ಥಿಸಿದನು
ಗುರುದೇವ ಗುರುದೇವ || ೧೬೮ ||
ಗುರು ನರಸಿಂಹರು ವಿಖ್ಯಾತ ವಿಶ್ವಕರ್ಮನ
ವಿಚಾರ ಹೇಳಿದರು ಸಾಯಂದೇವನಿಗೆ
ಹಿಂದೆ ಕೃತಯುಗದಲ್ಲಿ ಪ್ರಜಾಪತಿಯ ಮಗನು
ವಿದ್ಯಾಭ್ಯಾಸವ ಮಾಡಲು ಇದ್ದನು ಗುರುಕುಲದಲ್ಲಿ
ಗುರುದೇವ ಗುರುದೇವ || ೧೬೯ ||
ಒಂದು ಮಳೆಗಾಲದಲ್ಲಿ ಗುರುಗಳ ಮನೆ ಸೋರಿ
ಹೊಸ ಮನೆ ನಿರ್ಮಿಸೆಂದು ಶಿಷ್ಯನಿಗೆ ಹೇಳಿದರು
ಹೊಲಿಗೆ ಇಲ್ಲದ ರವಿಕೆ ತಮ್ಮ ಪತ್ನಿಗೆ ಬೇಕೆನುತ
ನದಿ ಮೇಲ್ನಡೆಯಲು ಪುತ್ರಗೆ ಪಾದರಕ್ಷೆಯು ಬೇಕೆಂದರು
ಗುರುದೇವ ಗುರುದೇವ || ೧೭೦ ||
ಬೇಕಾದಲ್ಲಿಗೆ ಒಯ್ಯಲು ಒಂದು ಮನೆಯು ಪುತ್ರಿಗೆ
ಈ ಎಲ್ಲವನು ನೀನೇ ನಿರ್ಮಿಸೆಂದು ಹೇಳಿದರು
ಶಿಷ್ಯ ಗುರುಗಳಿಗೆ ನಮಿಸಿ ಕರ್ತವ್ಯ ನಡೆಸಲು ಹೊರಟ
ಅವಧೂತರು ಕಂಡರು ಶಿಷ್ಯನಿಗೆ ದಾರಿಯಲಿ
ಗುರುದೇವ ಗುರುದೇವ || ೧೭೧ ||
ಅವಧೂತರ ಜೊತೆಯಲ್ಲಿ ಕಾಶಿಯ ತಲುಪಿದನು
ಶಿವನನ್ನು ಆರಾಧಿಸಿದ ಶಿವನು ಪ್ರತ್ಯಕ್ಷನಾದ
ಅವನು ಬೇಡಿದ್ದನ್ನೆಲ್ಲ್ಲಾ ಶಿವನು ಅನುಗ್ರಹಿಸಿದನು
ಗುರುವಿಗೊಪ್ಪಿಸಿ ಎಲ್ಲವನು ವಿಖ್ಯಾತ ವಿಶ್ವಕರ್ಮನಾದ
ಗುರುದೇವ ಗುರುದೇವ || ೧೭೨ ||
ಭಕ್ತ ಸಾಯಂದೇವ ಗುರುಗಳ ಆಜ್ಞೆಯಂತೆ
ಮರಳಿ ಊರಿಗೆ ಹೋಗಿ ಪತ್ನಿ ಪುತ್ರರ ಜೊತೆ ಬಂದು
ಶ್ರೀ ಗುರು ಚರಣಗಳಿಗೆ ಭಕ್ತಿಯಿಂದ ನಮಸ್ಕರಿಸಿ
ಅನಂತ ಸ್ವರೂಪಿಯೆಂದು ಶ್ರದ್ಧೆಯಿಂದ ಪೂಜಿಸಿದ
ಗುರುದೇವ ಗುರುದೇವ || ೧೭೩ ||
ಅನಂತ ಪದ್ಮನಾಭನ ವ್ರತವಾಗಿತ್ತು ಆ ದಿನ
ಅನಂತ ವ್ರತ ಮಹಿಮೆಯ ನರಸಿಂಹರು ಹೇಳಿದರು
ಈ ವ್ರತ ಮಾಡುವವರು ಸಕಲೈಶ್ವರ್ಯ ಪಡೆವರು
ಎನ್ನುತ ಸಾಯಂದೇವನ ಕುಟುಂಬವ ಹರಸಿದರು
ಗುರುದೇವ ಗುರುದೇವ || ೧೭೪ ||
ನೇಕಾರನೊಬ್ಬ ದಿನವೂ ಮಠದಂಗಳ ಶುಚಿ ಮಾಡಿ
ಗುರುಗಳ ದರ್ಶನ ಪಡೆದು ಕೆಲಸಕ್ಕೆ ಹೋಗುವನು
ಶಿವರಾತ್ರಿಗೆ ಶ್ರೀಶೈಲಕೆ ಮನೆಯವರು ಕರೆದಾಗ
ಗುರುವೇ ಮಲ್ಲಿಕಾರ್ಜುನ ಮಠವೇ ಶ್ರೀಶೈಲವೆಂದ
ಗುರುದೇವ ಗುರುದೇವ || ೧೭೫ ||
ಶಿವರಾತ್ರಿ ದಿನ ಅವನ ಗುರುಗಳು ಕೇಳಿದರು
ಶ್ರೀಶೈಲ ಯಾತ್ರೆಗೆ ನೀ ಯಾಕೆ ಹೋಗಿಲ್ಲವೆಂದು
ಗುರುವೇ ನಿಮ್ಮ ಚರಣವೆ ಸಕಲ ತೀರ್ಥಯಾತ್ರೆ
ನೀವೇ ಶಿವಸ್ವರೂಪರು ಮುಕ್ತಿದಾಯಕರು ಎಂದ
ಗುರುದೇವ ಗುರುದೇವ || ೧೭೬ ||
ಭಕ್ತ ನೇಕಾರನಿಗೆ ಗುರು ನರಸಿಂಹರು ತಮ್ಮ
ಪಾದುಕೆಯನು ಹಿಡಿಸಿ ಕಣ್ಣನ್ನು ಮುಚ್ಚೆಂದರು
ಗುರು ವಾಕ್ಯ ಪಾಲಿಸಿ ನೋಡಿದ ಶ್ರೀ ಶೈಲವ
ಶಿವಲಿಂಗ ಸ್ಥಾನದಲ್ಲಿ ತನ್ನ ಗುರುಗಳನ್ನೇ ಕಂಡ
ಗುರುದೇವ ಗುರುದೇವ || ೧೭೭ ||
ಪ್ರಸಾದ ಸ್ವೀಕರಿಸಿದ ನೇಕಾರಗೆ ಹೇಳಿದರು
ಎಲ್ಲೆಲ್ಲೂ ಶಿವನಿರುವನು ಸ್ಥಳ ಮಹಿಮೆಯೂ ಮುಖ್ಯ
ಸದಾ ಗುರು ಬಳಿ ಇರಲು ಬಯಸಿದ ನೇಕಾರ
ಗುರು ಕೃಪೆ ಪಾದುಕೆಯ ಹಿಡಿದು ಮಠವನು ಸೇರಿದ
ಗುರುದೇವ ಗುರುದೇವ || ೧೭೮ ||
ಮಹಾರಾಷ್ಟ್ರದಲ್ಲಿ ತೊನ್ನು ಪೀಡಿತ ನಂದೀಶ
ತುಳಜಾ ಭವಾನಿಯ ಪರಮ ಭಕ್ತನಾಗಿದ್ದ
ಕನಸಲ್ಲೊಮ್ಮೆ ಭವಾನಿ ಬಿಂದಲ ಪರಮೇಶ್ವರಿಯ
ಆರಾಧಿಸು ಎಂದಾಗ ಪೂಜಿಸಿ ಆರಾಧಿಸಿದ
ಗುರುದೇವ ಗುರುದೇವ || ೧೭೯ ||
ಆರು ತಿಂಗಳಾಯ್ತು ದಿನವೂ ಪೂಜಿಸುತಿದ್ದ
ದೇವಿ ಸೂಚಿಸಿದಳು ಗುರುಗಳ ಪೂಜಿಸೆಂದು
ಮಾನವ ಯತಿಯ ಬಳಿಗೆ ಏಕೆ ಕಳಿಸುವೆಯೆಂದು
ದೇವಿಯನ್ನೇ ಪ್ರಾರ್ಥಿಸುತ ದೇವಿ ಸನ್ನಿಧಿಯಲ್ಲೆ ಉಳಿದ
ಗುರುದೇವ ಗುರುದೇವ || ೧೮೦ ||
ಕನಸಿನ ಸೂಚನೆಯಂತೆ ಅಲ್ಲಿಯ ಅರ್ಚಕರು
ಗಾಣಿಗಾಪುರಕೀಗ ಹೋಗೆಂದು ಕಳುಹಿದರು
ಗಾಣಿಗಾಪುರಕೆ ಬಂದು ಗುರು ದರ್ಶನ ಪಡೆದ
ಗುರುಗಳೆಂದರು ಆತನಿಗೆ ನಂಬಿಕೆ ಇದ್ದರೆ ಫಲವು
ಗುರುದೇವ ಗುರುದೇವ || ೧೮೧ ||
ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ನಂದೀಶ
ರೋಗ ಗುಣಪಡಿಸಿರೆಂದು ಆರ್ತನಾಗಿ ಪ್ರಾರ್ಥಿಸಿದ
ಸಂಗಮದಲ್ಲಿ ಸ್ನಾನವನು ವಿಧಿಪೂರ್ವಕ ಮಾಡಿಸಲು
ಶ್ರೀಗಳು ತಮ್ಮ ಶಿಷ್ಯನಿಗೆ ಹೇಳಿ ಕಳಿಸಿದರಲ್ಲಿಗೆ
ಗುರುದೇವ ಗುರುದೇವ || ೧೮೨ ||
ಸಂಗಮ ಸ್ನಾನದಿಂದ ಅಶ್ವತ್ಥ ಪ್ರದಕ್ಷಿಣೆಯಿಂದ
ಮೈಯೆಲ್ಲ ಗುಣವಾದರೂ ಕಾಲಲ್ಲಿ ಉಳಿಯಿತು ಸ್ವಲ್ಪ
ನರಸಿಂಹರು ತಮ್ಮನ್ನು ಸ್ತೋತ್ರದಿಂದ ಕವಿತೆಯನು
ರಚಿಸಿದರೆ ನೀನು ಪೂರ್ಣ ಗುಣವಾಗುವೆಯೆಂದರು
ಗುರುದೇವ ಗುರುದೇವ || ೧೮೩ ||
ಸ್ವಾಮಿ ನಾನು ಅಜ್ಞಾನಿ ಹೇಗೆ ಸ್ತುತಿಸಲಿ ಎಂದ
ಅವನ ನಾಲಿಗೆ ಮೇಲೆ ಪ್ರೋಕ್ಷಿಸಿದರು ಭಸ್ಮವನು
ಆಗವನ ಬಾಯಿಂದ ಹೊರಟಿತು ಕವಿತಾ ಶಕ್ತಿ
ಶ್ರೀ ಗುರು ನರಸಿಂಹರನು ಸ್ತುತಿಸಲು ತೊಡಗಿದನು
ಗುರುದೇವ ಗುರುದೇವ || ೧೮೪ ||
ಹೇ ಪರಬ್ರಹ್ಮ ದೇವ ನೀನೇ ಸರ್ವರೂಪ
ತ್ರಿಮೂರ್ತಿಗಳ ಏಕರೂಪಿ ಸರ್ವರಿಗೂ ಆಧಾರ
ಮಾಯಾ ಮೋಹದಿ ನಾನು ಗುರುವೇ ನಿಮ್ಮನು ಮರೆತೆ
ತಮ್ಮ ದಿವ್ಯಾನುಗ್ರಹದಿಂದ ಸೇವಾಭಾಗ್ಯವು ದೊರಕಿದೆ
ಗುರುದೇವ ಗುರುದೇವ || ೧೮೫ ||
ಶ್ರೀ ಗುರು ನರಸಿಂಹರು ನಂದೀಶನ ಸ್ತೋತ್ರವನು
ಮೆಚ್ಚಿ ಕದೀಶ್ವರನೆಂದು ನಾಮವ ಅನುಗ್ರಹಿಸಿದರು
ನಂದೀಶನ ರೋಗವು ಸಂಪೂರ್ಣ ಗುಣವಾಯ್ತು
ಗುರು ಸೇವೆಯ ಮಾಡುತ್ತ ಗುರು ಸನ್ನಿಧಿಯಲಿ ಉಳಿದ
ಗುರುದೇವ ಗುರುದೇವ || ೧೮೬ ||
ಹಿಪ್ಪರಗಿ ಗ್ರಾಮಸ್ಥರು ಗುರು ನರಸಿಂಹರನು
ಭಿಕ್ಷೆಗೆ ತಮ್ಮ ಊರಿಗೆ ಆಮಂತ್ರಿಸಿ ಕರೆಸಿದರು
ಆ ಊರ ಕಲ್ಲೇಶ್ವರನ ದೇವಾಲಯದಲ್ಲಿ
ನರಹರಿ ಎಂಬ ಕವಿಯು ಪೂಜಿಸುತ್ತಿದ್ದ ಶಿವನನ್ನು
ಗುರುದೇವ ಗುರುದೇವ || ೧೮೭ ||
ಭಕ್ತರು ಕವಿ ಬಳಿ ಬಂದು ಶ್ರೀಗಳಿಗೆ ಸ್ತೋತ್ರವನು
ರಚಿಸೆಂದರು ಒಪ್ಪಲಿಲ್ಲ ಕಲ್ಲೇಶ್ವರನ ಭಕ್ತ ಕವಿ
ಹೇಳಿದ ಗುರುಭಕ್ತರಿಗೆ ಕಲ್ಲೇಶ್ವರನ ಬಿಟ್ಟು
ಬೇರಾವ ದೇವರನ್ನು ಸ್ತುತಿಸಲಾರೆನು ಎಂದನು
ಗುರುದೇವ ಗುರುದೇವ || ೧೮೮ ||
ಶಿವನ ಪೂಜಿಸಿ ಕವಿಯು ನಿದ್ರಿಸಿದಾಗ ಕನಸಲ್ಲಿ
ಶ್ರೀಗಳು ಶಿವಲಿಂಗದಲಿ ಇದ್ದಂತೆ ದರ್ಶನವಾಯ್ತು
ಅರಿವಾಗಿ ಮರುದಿನವೆ ಗುರುಗಳ ಬಳಿ ಬಂದು
ಹೇ ಗುರುದೇವ ನನ್ನ ಅಜ್ಞಾನವ ಕ್ಷಮಿಸಿರೆಂದ
ಗುರುದೇವ ಗುರುದೇವ || ೧೮೯ ||
ಗುರುಚರಣಕೆ ನರಹರಿ ಭಕ್ತಿಯಿಂದ ನಮಸ್ಕರಿಸಿ
ಶಿವಲಿಂಗದಲಿ ನಿಮ್ಮನ್ನು ಕನಸಲ್ಲಿ ಕಂಡೆನೆಂದ
ನೀವೇ ಶಿವಸ್ವರೂಪಿ ನನ್ನ ಉದ್ಧರಿಸಿರಿ ಎಂದ
ಶಿವಪೂಜೆಯ ಮಾಡೆಂದು ಶ್ರೀಗಳು ಹರಸಿದರು
ಗುರುದೇವ ಗುರುದೇವ || ೧೯೦ ||
ಸ್ವಾಮಿ ನನಗೆ ತಾವೇ ಪ್ರತ್ಯಕ್ಷ ಶಿವ ಸ್ವರೂಪ
ನಿಮ್ಮನ್ನೆ ಪೂಜಿಸುವೆನೆಂದು ಶ್ರೀಗಳ ಕೃಪೆಯನು ಬೇಡಿದ
ಗುರುಗಳನುಮತಿಯಂತೆ ಗುರು ಸನ್ನಿಧಿಯಲಿ ಉಳಿದ
ಗುರು ಸೇವೆಯ ಮಾಡುತ್ತಾ ಗುರುಸ್ತೋತ್ರವ ರಚಿಸಿದನು
ಗುರುದೇವ ಗುರುದೇವ || ೧೯೧ ||
ಶ್ರೀ ಗುರು ನರಸಿಂಹರನು ದೀಪಾವಳಿ ಹಬ್ಬಕ್ಕೆ
ಆಹ್ವಾನಿಸಲು ಭಕ್ತರು ಬಂದರು ಊರೂರಿಂದ
ಗುರುಗಳು ನಸುನಗುತ ಭಕ್ತರೆ ನಿಮ್ಮ ಊರುಗಳು
ಒಂದೊಂದು ದಿಕ್ಕಲ್ಲಿದೆ ಹೇಗೆ ಬರಲಿ ಎಂದರು
ಗುರುದೇವ ಗುರುದೇವ || ೧೯೨ ||
ಹೇ ಪರಬ್ರಹ್ಮ ಗುರುವೇ ತಾವು ಬಾರದೆ ಇದ್ದರೆ
ಪ್ರಾಣಬಿಡಲು ಸಿದ್ದರೆಂದ ಪ್ರಿಯ ಭಕ್ತರ ತೃಪ್ತಿಗಾಗಿ
ಪ್ರತ್ಯೇಕವಾಗಿ ಕರೆದು ಯಾರಿಗೂ ಹೇಳಬೇಡಿ
ನಿಮ್ಮಲ್ಲಿಗೆ ಬರುವೆನೆಂದು ಒಬ್ಬೊಬ್ಬರಿಗೆ ಹೇಳಿದರು
ಗುರುದೇವ ಗುರುದೇವ || ೧೯೩ ||
ಗಾಣಿಗಾಪುರದ ಜನರು ಗುರುಗಳೆ ನಮ್ಮನೆಗೆ ಬನ್ನಿ
ಎಂದು ವಿನಂತಿಸಿದಾಗ ಒಪ್ಪಿಕೊಂಡರು ಶ್ರೀಗಳು
ಮಠದಲ್ಲಿರುವ ಶಿಷ್ಯರು ಗುರುವೇ ನೀವಿಲ್ಲೇ ಇರಿ
ಎನ್ನುತ ಪ್ರಾರ್ಥಿಸುತಿರಲು ಆಯಿತೆಂದರು ಶ್ರೀಗಳು
ಗುರುದೇವ ಗುರುದೇವ || ೧೯೪ ||
ಶ್ರೀ ಗುರು ನರಸಿಂಹರು ದೀಪಾವಳಿಯ ದಿನ
ಕರೆದವರ ಮನೆಗೊಂದು ರೂಪವ ತಾಳಿದರು
ಶಿಷ್ಯರ ಜೊತೆ ಮಠದಲಿದ್ದು ಎಲ್ಲರ ಮನೆಗೂ ಹೋಗಿ
ಶಿಷ್ಯರಿಗು ಭಕ್ತರೆಲ್ಲರಿಗೂ ಸಂತೋಷ ಪಡಿಸಿದರು
ಗುರುದೇವ ಗುರುದೇವ || ೧೯೫ ||
ಕಾರ್ತಿಕ ಹುಣ್ಣಿಮೆಯ ದಿನ ಮಠಕೆ ಬಂದ ಭಕ್ತರು
ಗುರುಗಳು ತಮ್ಮನೆಗೆ ಬಂದ ವಿಷಯ ಹೇಳಿಕೊಂಡರು
ಗಾಣಿಗಾಪುರದವರು ಗುರುಮಠದ ಶಿಷ್ಯರೆಲ್ಲಾ
ಶ್ರೀಗಳೆಲ್ಲೂ ಹೋಗಿಲ್ಲ ಇಲ್ಲಿಯೇ ಇದ್ದರು ಎಂದರು
ಗುರುದೇವ ಗುರುದೇವ || ೧೯೬ ||
ಭಕ್ತರು ಅಂದುಕೊಂಡರು ಗುರು ನರಸಿಂಹರನು
ಸರ್ವ ವ್ಯಾಪಿ ಸರ್ವಶಕ್ತರು ಪರಬ್ರಹ್ಮ ಸ್ವರೂಪರು
ಅಲ್ಲಿ ಸೇರಿದ ಭಕ್ತರೆಲ್ಲ ಶ್ರದ್ಧಾಭಕ್ತಿಗಳಿಂದ
ಗುರುಗಳ ಮಹಿಮೆಯನ್ನು ಸ್ತುತಿಸುತ ಕೊಂಡಾಡಿದರು
ಗುರುದೇವ ಗುರುದೇವ || ೧೯೭ ||
ರೈತನೊಬ್ಬ ಗುರುಗಳಿಗೆ ನಿತ್ಯ ನಮಿಸುತ್ತಲಿದ್ದ
ನಿನ್ನಿಚ್ಛೆಯ ಹೇಳೆಂದು ಗುರುಗಳು ಕೇಳಿದರು
ಸ್ವಾಮಿ ತಮ್ಮ ಕೃಪೆಯಿಂದ ಹೊಲದಲ್ಲಿ ಒಳ್ಳೆ ಬೆಳೆಯು
ಬರಲೆಂದು ನನ್ನ ಆಸೆಯು ಆಶೀರ್ವದಿಸಿರಿ ಎಂದ
ಗುರುದೇವ ಗುರುದೇವ || ೧೯೮ ||
ನಾವು ಹೇಳುವುದನ್ನು ಶ್ರದ್ಧೆಯಿಂದ ಮಾಡಿದರೆ
ನಿನ್ನ ಮನದ ಆಸೆಯು ನೆರವೇರುವುದೆಂದರು
ಗುರುವೇ ತಮ್ಮ ವಾಕ್ಯವ ಪಾಲಿಸುವೆನೆಂದ ರೈತ
ಇಂದೇ ಬೆಳೆಯ ಕೊಯ್ಯೆಂದು ಹೇಳಿದರು ಗುರುವರರು
ಗುರುದೇವ ಗುರುದೇವ || ೧೯೯ ||
ಜಮೀನ್ದಾರನಿಗೆ ರೈತನು ಎರಡರಷ್ಟು ಬೆಲೆಯ ಕಟ್ಟಿ
ಬೆಳೆಯ ಕೊಯ್ಯಲು ಒಪ್ಪಿಗೆ ಪಡೆದ ಮನೆಯವರೇ ಒಪ್ಪಲಿಲ್ಲ
ಗುರುಭಕ್ತಿಯಿಂದ ರೈತನು ಹೊಲದ ಬೆಳೆಯನ್ನು ಕೊಯ್ದನು
ಆಗ ಅಲ್ಲಿಗೆ ಗುರುಗಳು ಬಂದು ಬೆಳೆಯನ್ನು ಕೊಯ್ದೆಯಾ ಎಂದರು
ಗುರುದೇವ ಗುರುದೇವ || ೨೦೦ ||
ಗುರುವೇ ನಿಮ್ಮ ವಾಕ್ಯವು ನನಗೆ ವೇದವಾಕ್ಯವು ಎಂದ
ಫಲವು ಸಿಗಲೆಂದು ರೈತನಿಗೆ ಗುರುಗಳು ಹರಸಿದರು
ಒಂದು ವಾರದ ನಂತರ ಬಿರುಗಾಳಿಯು ಬೀಸಿ
ಎಲ್ಲರ ಬೆಳೆಯೂ ನಾಶವಾಗಿ ಭಕ್ತ ರೈತನ ಬೆಳೆಯು ಉಳಿಯಿತು
ಗುರುದೇವ ಗುರುದೇವ || ೨೦೧ ||
ರೈತ ದಂಪತಿಗಳು ತಮ್ಮ ಬೆಳೆಗೆ ಪೂಜೆಯ ಮಾಡಿ
ಗುರು ಮಠಕೆ ಆಗಮಿಸಿ ಗುರು ಪೂಜೆಯ ಮಾಡಿದರು
ಗುರುವೇ ನಿಮ್ಮ ಮಹಿಮೆಯಿಂದ ಭಾಗ್ಯಶಾಲಿಯಾದೆ ನಾನು
ಎಂದು ನಮಿಸಿದ ರೈತನಿಗೆ ಗುರುಗಳು ಆಶೀರ್ವದಿಸಿದರು
ಗುರುದೇವ ಗುರುದೇವ || ೨೦೨ ||
ಪೂರ್ವಾಶ್ರಮದ ತಂಗಿ ರತ್ನಾಬಾಯಿ ಗುರು ಬಳಿಗೆ
ಬಂದು ಭಕ್ತಿಯಲಿ ನಮಿಸಿ ಕರುಣೆ ತೋರಿ ಎಂದಳು
ಕುಷ್ಟ ರೋಗದಿ ಈ ಜನ್ಮ ಸಾಕಾಗಿದೆಯೆಂದು
ನಿಮ್ಮ ದರ್ಶನದಿ ನನ್ನ ಪಾಪ ಕಳೆಯುವುದಿಲ್ಲವೆ ಎಂದಳು
ಗುರುದೇವ ಗುರುದೇವ || ೨೦೩ ||
ಆಗ ಗುರು ನರಸಿಂಹರು ಹೇಳಿದರು ಪರಿಹಾರ
ಪಾಪವಿನಾಶಿನಿಯ ತೀರ್ಥದಲಿ ಸ್ನಾನವ ಮಾಡೆಂದು
ಪಾಪ ಕಳೆದು ರೋಗವು ನಾಶವಾಗುವುದೆಂದರು
ಗುರು ಆಜ್ಞೆಯಂತೆ ಮಾಡಿ ರೋಗವು ಮಾಯವಾಯ್ತು
ಗುರುದೇವ ಗುರುದೇವ || ೨೦೪ ||
ಗುರುಗಳ ಕೃಪೆಯಿಂದ ಜನ್ಮಾಂತರದ ಪಾಪದ
ರೋಗವು ನಾಶವಾಗಿ ಉಳಿದಳು ಗುರು ಮಠದಲ್ಲಿ
ಗಾಣಿಗಾಪುರ ಮಹಿಮೆಯನು ಶಿಷ್ಯರಿಗೆ ಹೇಳಿದರು
ಗಂಗಾದಿ ಸಕಲ ಕ್ಷೇತ್ರವು ಇಲ್ಲಿ ಸನ್ನಿಹಿತವೆಂದರು
ಗುರುದೇವ ಗುರುದೇವ || ೨೦೫ ||
ಶ್ರೀಪಾದರ ದಯದಿಂದ ರಜಕನು ರಾಜನಾಗಿ
ಬೀದರ್ ನಗರದಲಿ ಜನ್ಮವನು ತಾಳಿದನು
ಯವನ ರಾಜನಾದರೂ ಕಳೆದ ಜನ್ಮದ ಸಂಸ್ಕಾರದಿ
ಬ್ರಾಹ್ಮಣರಿಗೆ ಗೌರವದಿ ದಾನ ಧರ್ಮ ಮಾಡಿದನು
ಗುರುದೇವ ಗುರುದೇವ || ೨೦೬ ||
ಕೆಲವರೆಂದರು ರಾಜಗೆ ಕಲ್ಲು ಮಣ್ಣು ಮರಗಳನು
ದೇವರೆಂದು ಪೂಜಿಪರು ಅವರಿಗ್ಯಾಕೆ ಗೌರವವು
ದೇವರು ಅಣು ರೇಣು ತೃಣಕಾಷ್ಟಗಳಲ್ಲಿ
ವ್ಯಾಪಿಸಿರುವನೆಂಬ ನಂಬಿಕೆ ಸರಿಯೆಂದ
ಗುರುದೇವ ಗುರುದೇವ || ೨೦೭ ||
ಕೆಲ ದಿನಗಳ ನಂತರ ರಾಜನ ತೊಡೆ ಹುಣ್ಣಾಗಿ
ಯಾವ ವೈದ್ಯರಿಂದಲೂ ಗುಣಪಡಿಸಲಾಗಲಿಲ್ಲ
ರಾಜ ಒಬ್ಬ ಬ್ರಾಹ್ಮಣನ ಕರೆಸಿ ಕೇಳಿದಾಗ
ಪೂರ್ವಜನ್ಮದ ಪಾಪ ತೀರ್ಥ ಯಾತ್ರೆಯ ಮಾಡೆಂದ
ಗುರುದೇವ ಗುರುದೇವ || ೨೦೮ ||
ಯವನನೆಂದ ಅಲಕ್ಷಿಸದೆ ಪರಿಹಾರ ಹೇಳಿರೆನಲು
ಸದ್ಗುರುಗಳ ದಯೆಯಿಂದ ವಾಸಿಯಾಗುವುದೆಂದ
ಪಾಪವಿನಾಶಿನಿಯ ತೀರ್ಥದಲಿ ಸ್ನಾನವನು
ಶ್ರದ್ಧೆಯಿಂದ ಮಾಡಿದರೆ ಗುಣವಾಗುವುದೆಂದ
ಗುರುದೇವ ಗುರುದೇವ || ೨೦೯ ||
ಯವನ ದೊರೆಯು ಬಂದು ಪಾಪವಿನಾಶಿನಿಯ
ತೀರ್ಥದಲಿ ಸ್ನಾನವನು ಮಾಡಿದ ಶ್ರದ್ಧೆಯಿಂದ
ಅಲ್ಲಿರುವ ಸನ್ಯಾಸಿಗಳಿಗೆ ನಮಿಸಿ ಹೇಳಿದ ಕಷ್ಟವ
ಗಾಣಿಗಾಪುರಕೆ ಹೋಗಿ ಗುರುದರ್ಶನ ಮಾಡೆಂದರು
ಗುರುದೇವ ಗುರುದೇವ || ೨೧೦ ||
ಗಾಣಿಗಾಪುರಕೆ ಬಂದು ರಾಜ ಜನರನ್ನು ಕೇಳಿದಾಗ
ಗುರುಗಳು ಸಂಗಮಕೆ ಹೋಗಿರುವರು ಎಂದರು
ಗುರುದರ್ಶನ ಮಾಡಲು ರಾಜ ತಕ್ಷಣ ಹೊರಟ
ಸಂಗಮದ ದಾರಿಯಲಿ ಕಂಡರು ಗುರುವರ್ಯರು
ಗುರುದೇವ ಗುರುದೇವ || ೨೧೧ ||
ರಾಜನ ನೋಡಿದಾಕ್ಷಣ ಗುರುಗಳು ಕೇಳಿದರು
ರಜಕಾ ಚೆನ್ನಾಗಿರುವೆಯಾ ಬಹು ಕಾಲವಾಯ್ತೆಂದರು
ಕಳೆದ ಜನ್ಮ ನೆನಪಾಗಿ ಗುರುಚರಣಕೆ ನಮಸ್ಕರಿಸಿ
ಆನಂದಬಾಷ್ಪ ಸುರಿಸುತ್ತಾ ಆತ್ಮೋದ್ಧಾರಕರೆಂದ
ಗುರುದೇವ ಗುರುದೇವ || ೨೧೨ ||
ಸ್ವಾಮೀ ಗುರುವರ್ಯರೇ ಅರಮನೆಗೆ ಬನ್ನಿರೆಂದ
ರಾಜನ ಆಹ್ವಾನಕ್ಕೆ ಶ್ರೀಗಳೆಂದರು ರಾಜನಿಗೆ
ದಿನವು ಗೋಹತ್ಯೆ ನಡೆವ ನಿನ್ನ ರಾಜ್ಯಕೆ ಬರಲಾರೆ
ನೀನು ಗೋಹತ್ಯೆ ನಿಲ್ಲಿಸಿದರೆ ಬರುವೆ ಎಂದರು ಶ್ರೀಗಳು
ಗುರುದೇವ ಗುರುದೇವ || ೨೧೩ ||
ಗೋಹತ್ಯೆ ನಿಲ್ಲಿಸುವೆನು ಕೃಪೆ ತೋರಿ ಬನ್ನಿರೆನುತ
ಪಾದುಕೆ ಹೊತ್ತು ನಡೆಯುವೆ ಪಲ್ಲಕ್ಕಿಯಲಿ ಬನ್ನಿರೆಂದ
ಗುರುಗಳು ರಾಜನಿಗೆ ಯೋಗ ರೂಪದಿ ಬರುವೆ
ಮುಂದೆ ಹೋಗಿರು ಎಂದು ರಾಜನ ಕಳುಹಿದರು
ಗುರುದೇವ ಗುರುದೇವ || ೨೧೪ ||
ಪಾಪ ವಿನಾಶಿನಿಯ ತೀರ್ಥದ ತೀರದಲಿ
ಸಾಯಂದೇವನ ಮಗ ನಾಗನಾಥ ಶ್ರೀಗಳಿಗೆ
ಪಾದ ಪೂಜೆ ಭಿಕ್ಷೆಯನು ಏರ್ಪಡಿಸಿ ಕಾಯುತಿದ್ದ
ಬಹಳ ಭಕ್ತರು ಸೇರಿದರು ಶ್ರೀಗಳು ಆಗಮಿಸಿದರು
ಗುರುದೇವ ಗುರುದೇವ || ೨೧೫ ||
ಭಕ್ತಿಯಲಿ ಗುರುಪಾದ ಪೂಜಿಸಿ ಭಿಕ್ಷೆಯನ್ನು ಅರ್ಪಿಸಿ
ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ
ಗುರು ನರಸಿಂಹರಿಂದ ಆಶೀರ್ವಾದವ ಪಡೆದು
ಗುರುಗಳೇ ನನ್ನ ಜನ್ಮವು ಪಾವನವಾಯಿತು ಎಂದ
ಗುರುದೇವ ಗುರುದೇವ || ೨೧೬ ||
ರಾಜನ ಅರಮನೆಗೆ ಶ್ರೀಗಳು ಆಗಮಿಸಿದರು
ರಾಜನು ವಿನಯದಿಂದ ಬರಮಾಡಿಕೊಂಡನಾಗ
ಪತ್ನಿಪುತ್ರರ ಸಮೇತ ನಮಸ್ಕರಿಸಿ ಸತ್ಕರಿಸಿದ
ಒಳ್ಳೆಯದಾಗಲೆಂದು ಶ್ರೀಗಳು ಹರಸಿದರು
ಗುರುದೇವ ಗುರುದೇವ || ೨೧೭ ||
ರಾಜನೆಂದ ಗುರುಗಳೇ ತಮ್ಮ ಆಗಮನದಿಂದ
ಕಷ್ಟ ನಿವಾರಣೆಯಾಗಿ ಜನ್ಮ ಪಾವನವಾಯಿತು
ಶ್ರೀಗಳು ರಾಜನಿಗೆ ನೀನು ನಿನ್ನ ಮಗನಿಗೆ
ರಾಜ್ಯ ಪಟ್ಟವನು ಕಟ್ಟಿ ಶ್ರೀಶೈಲಕೆ ಬಾ ಎಂದರು
ಗುರುದೇವ ಗುರುದೇವ || ೨೧೮ ||
ನರಸಿಂಹರು ಅಲ್ಲಿಂದ ಗಾಣಿಗಾಪುರಕೆ ಹೊರಟು
ತಲುಪಿದಾಗ ಭಕ್ತರೆಲ್ಲ ಆರತಿ ಬೆಳಗಿದರು
ವಾದ್ಯ ವೈಭವದೊಡನೆ ಸಂಭ್ರಮದಿ ಸ್ವಾಗತಿಸಿ
ಜಯ ಘೋಷ ಮಾಡುತ್ತಾ ಬರಮಾಡಿಕೊಂಡರೆಲ್ಲ
ಗುರುದೇವ ಗುರುದೇವ || ೨೧೯ ||
ಗಾಣಿಗಾಪುರದಲ್ಲಿ ಶ್ರೀ ಗುರು ನರಸಿಂಹರು
ಭಕ್ತರ ಭಕ್ತಿ ಮೆಚ್ಚಿ ಅನುಗ್ರಹ ಮಾಡಿದರು
ತಮ್ಮ ಅವತಾರ ಕಾರ್ಯವು ಸಮಾಪ್ತಿಯೆಂದೆನಿಸಿ
ಎಲ್ಲಾ ಶಿಷ್ಯಂದಿರನೂ ತಮ್ಮ ಬಳಿ ಕರೆಸಿದರು
ಗುರುದೇವ ಗುರುದೇವ || ೨೨೦ ||
ಶ್ರೀಗಳೆಂದರು ಶಿಷ್ಯರೇ ಇನ್ನು ಇಲ್ಲಿಂದ ಹೊರಡುವೆ
ಶ್ರೀ ಶೈಲ ಮಹಾಕ್ಷೇತ್ರಕ್ಕೆ ಹೋಗಿ ಅಲ್ಲಿಯೆ ನೆಲೆಸುವೆ
ನಮ್ಮ ಗಾಣಿಗಾಪುರದ ಸನ್ನಿಧಿಯು ನಿರಂತರವು
ಇರುವುದೆಂದು ಹೇಳಿ ಶಿಷ್ಯರನು ಹರಸಿದರು
ಗುರುದೇವ ಗುರುದೇವ || ೨೨೧ ||
ಶ್ರೀ ಶೈಲದ ಯಾತ್ರೆಗೆ ಹೊರಡುವಾಗ ಶ್ರೀಗಳು
ಪುಷ್ಪಾಸನ ರಚಿಸಲು ಶಿಷ್ಯರಿಗೆ ಹೇಳಿದರು
ತಾವರೆ ಸಂಪಿಗೆ ಮಲ್ಲಿಗೆ ಹಲವು ಪುಷ್ಪದಿ ರಚಿಸಿ
ಶಿಷ್ಯರಿಟ್ಟರು ಪುಷ್ಪಾಸನವ ಪಾತಾಳ ಗಂಗೆಯಲಿ
ಗುರುದೇವ ಗುರುದೇವ || ೨೨೨ ||
ಶ್ರೀ ಗುರು ನರಸಿಂಹರು ಪುಷ್ಪಾಸನದ ಮೇಲೆ
ಕುಳಿತು ಶಿಷ್ಯರೆಲ್ಲರಿಗೂ ಚಿಂತಿಸದಿರಿ ಎಂದರು
ಗಾಣಿಗಾಪುರದಲ್ಲಿ ಸನ್ನಿಹಿತವಾಗಿರುವೆ
ಕದಳಿವನಕೆ ಹೋಗುವೆ ಇಲ್ಲೇ ಪೂಜಿಸಿರೆಂದರು
ಗುರುದೇವ ಗುರುದೇವ || ೨೨೩ ||
ಭಕ್ತರ ಮನೆಗಳಲ್ಲೂ ಸದಾ ಇರುವೆನೆಂದು
ಪುಷ್ಪ ಪ್ರಸಾದ ಕಳಿಸುವೆ ಎಂದು ಹೊರಟರು ಶ್ರೀಗಳು
ಶಿಷ್ಯರು ದುಃಖಿತರಾಗಿ ತಮ್ಮ ಭಾಗ್ಯದ ಗುರುಗಳ
ಅಗಲಿಕೆಯಿಂದಾಗಿ ಮಿಡಿದರು ಕಂಬನಿಯ
ಗುರುದೇವ ಗುರುದೇವ || ೨೨೪ ||
ಬಹುಧಾನ್ಯ ಸಂವತ್ಸರದ ಉತ್ತರಾಯಣದಲ್ಲಿ
ಮಾಘ ಶುಕ್ಲ ಪಾಡ್ಯದ ಶುಕ್ರವಾರ ಪುಣ್ಯ ದಿನ
ಎಲ್ಲರ ಕಲ್ಯಾಣವನ್ನೇ ಬಯಸುತ ನಿಜಾನಂದದಿ
ಮನದ ಪುಷ್ಪರಾಶಿಯಲಿ ಲೀನವಾದರು ಶ್ರೀಗಳು
ಗುರುದೇವ ಗುರುದೇವ || ೨೨೫ ||
ಗುರುಗಳು ನೀಡಿರುವ ಪುಷ್ಪ ಪ್ರಸಾದವ ತಂದು
ನಾವಿಕರು ಎಲ್ಲರಿಗೂ ಕೊಟ್ಟು ವಿಷಯವ ಹೇಳಿದರು
ಭಕ್ತಿಯಿಂದ ಪ್ರಸಾದವ ಸ್ವೀಕರಿಸಿದರು ಎಲ್ಲರು
ತ್ರಿಮೂರ್ತಿ ಸ್ವರೂಪರೆಂದು ಗುರುಗಳ ಸ್ಮರಿಸಿದರು
ಗುರುದೇವ ಗುರುದೇವ || ೨೨೬ ||
ಗುರುಚರಿತ್ರೆಯನು ಶ್ರದ್ಧಾಭಕ್ತಿಗಳಿಂದ
ನಿಯಮಪೂರ್ವಕವಾಗಿ ಪಾರಾಯಣ ಮಾಡಿದರೆ
ಜನ್ಮಾಂತರ ಪಾಪಗಳು ನಾಶವಾಗಿ ಹೋಗುವುದು
ಸಕಲ ಸೌಭಾಗ್ಯ ದೊರೆತು ನೆಮ್ಮದಿಯಲಿ ಬಾಳುವರು
ಗುರುದೇವ ಗುರುದೇವ || ೨೨೭ ||
ಶ್ರೀ ಗುರು ಚರಿತ್ರೆಯನು ಒಂದು ಅಧ್ಯಾಯದಂತೆ
ಗುರುವಾರ ಪಾರಾಯಣ ಮಾಡಿರಿ ಒಂದು ವರ್ಷ
ಪೂಜಾಸ್ಥಾನದಲಿಟ್ಟು ಪೂಜಿಸಿ ನೈವೇದ್ಯ ಮಾಡಿ
ದತ್ತಾತ್ರೇಯ ಸ್ತೋತ್ರವ ಹೇಳಿ ಆರತಿ ಬೆಳಗಿರಿ
ಗುರುದೇವ ಗುರುದೇವ || ೨೨೮ ||
ಭಕ್ತಿಯಿಂದ ನಮಸ್ಕರಿಸಿ ಪ್ರಸಾದವ ಸ್ವೀಕರಿಸಿ
ಗಾಣಿಗಾಪುರಕೆ ಹೋಗಿ ಗುರುಪಾದುಕೆ ದರ್ಶಿಸಿರಿ
ಎಲ್ಲಾ ಇಷ್ಟಾರ್ಥಗಳು ಶೀಘ್ರದಲಿ ಫಲಿಸುವುದು
ಗುರುಸ್ಮರಣೆಯಲ್ಲಿರುವವರು ಪರಮಾನಂದವ ಹೊಂದುವರು
ಗುರುದೇವ ಗುರುದೇವ || ೨೨೯ ||
ಶ್ರೀ ದೇವೀ ಮಹಾತ್ಮೆ
15 Songs