ಭಗವತ್ಪಾದ ಶ್ರೀ ಶಂಕರಾಚಾರ್ಯರು

ರಾಗ : ಶಿವರಂಜಿನಿ
ತಾಳ : ಏಕ

ಅವತರಿಸಿದ ಗುರು ಶಿವಸ್ವರೂಪಿಯು
ಅಪಾರಮಹಿಮಗುರು ಸರ್ವರಪರಮಗುರು || ಪ ||

ಶ್ರೀಗುರುವರ್ಯರ ದಿವ್ಯಚರಿತೆಯು
ಪಠಣವು ಪುಣ್ಯವು ಶ್ರವಣವು ಪುಣ್ಯವು || ಅ.ಪ ||

ಕರ್ಮಭೂಮಿಯಾದ ಭರತಖಂಡದಲಿ
ವೈದಿಕ ಧರ್ಮವು ಶಿಥಿಲವಾದಾಗ
ಇಂದ್ರಾದಿದೇವತೆಗಳು ಋಷಿಮುನಿಗಳು
ಕೈಲಾಸಕ್ಕೆ ಬಂದು ನಮಿಸಿ ಪ್ರಾರ್ಥಿಸಿದರು ಶಿವನನ್ನು || ೧ ||

ಶಿವನೆ ಭೂಲೋಕವು ಶಾಸ್ತ್ರ ಸನ್ಮಾರ್ಗವ
ದೂಷಿಸುತಿರುವ ನಾಸ್ತಿಕಾಧಮರಾದ
ಪಾಖಂಡಿಗಳಿಂದ ತುಂಬಿಹೋಗಿದೆ
ಆತಂಕವಾಗಿದೆ ಶಿವನೇ ಕಾಪಾಡೋ ಜಗದ್ರಕ್ಷಕನೇ || ೨ ||

ಶ್ರೇಯಸ್ಕರವಾದ ವೈದಿಕ ಸನಾತನ
ವರ್ಣಾಶ್ರಮಧರ್ಮವ ದ್ವೇಷಿಸುತಿರುವರು
ನಾಸ್ತಿಕರ ದುಷ್ಟತನ ನಾಶವ ಮಾಡಿ
ವೇದವಿಹಿತವಾಗಿರುವ ಸನ್ಮಾರ್ಗ ಸ್ಥಾಪಿಸು ದೇವಾ || ೩ ||

ನಿಮ್ಮ ಅಭಿಲಾಷೆಯ ಈಡೇರಿಸುವೆನು
ಭೂಲೋಕದಲ್ಲಿ ನಾನೇ ಜನಿಸುವೆ
ಶಂಕರನೆಂಬ ಯತೀಂದ್ರನಾಗಿ
ಚತುರರಾದ ಶಿಷ್ಯರೊಡನೆ ಬರುವೆನೆಂದನು ಶಿವನು || ೪ ||

ದ್ವೈತಾಂಧಕಾರವ ತೊಲಗಿಸಿ ಜಗತ್ತನು
ಸಂರಕ್ಷಣೆ ಮಾಡುವೆ ಯಾರು ಚಿಂತಿಸದಿರಿ
ಭೂಲೋಕದಲ್ಲಿ ನೀವೆಲ್ಲ ಜನಿಸಿ
ನನ್ನ ನಿರೀಕ್ಷೆಯಲ್ಲಿ ಇರಿ ಎಂದನು ಜಗದೀಶ್ವರನು || ೫ ||

ಮಗನೆ ಕುಮಾರ ಭೂಲೋಕದಿ ಜನಿಸಿ
ಜೈಮಿನಿ ಮಹರ್ಷಿಯ ಪೂರ್ವಮೀಮಾಂಸದ
ಶಾಸ್ತ್ರಕೆ ಬೆಳಕಾಗು ನಿನಗಾಗಿ ಬ್ರಹ್ಮ ಇಂದ್ರ
ಜನಿಸಿ ಸಹಾಯಕರಾಗುವರು ಎಂದನು ಪರಮೇಶ್ವರನು || ೬ ||

ಕೇರಳರಾಜ್ಯದ ಕಾಲಟಿಗ್ರಾಮದ
ನಂಬೂದಿರಿ ಬ್ರಾಹ್ಮಣ ಕುಟುಂಬದವರು
ಶ್ರೀಮಂತರಾದರೂ ಸರಳಸಜ್ಜನರು
ಶಿವಗುರು ಆರ್ಯಾಂಬೆ ಪರಮೇಶ್ವರನ ಭಕ್ತರು || ೭ ||

ಈ ದಂಪತಿಗಳು ಮಕ್ಕಳ ಪಡೆಯಲು
ನಿತ್ಯವು ಶಿವನಲ್ಲಿ ಬೇಡುತಲಿದ್ದರು
ಹರಕೆಯ ಹೊತ್ತರು ಮಕ್ಕಳಾಗಲಿಲ್ಲ
ವೃಷಭಾಚಲೇಶ್ವರನ ಪವಿತ್ರ ಕ್ಷೇತ್ರಕ್ಕೆ ಹೋದರು || ೮ ||

ಶಿವಗುರು ಆರ್ಯಾಂಬೆ ಭಕ್ತಿ ಶ್ರದ್ಧೆಯಿಂದ
ವೃಷಭಾಚಲೇಶನ ಸೇವೆ ಮಾಡಿದರು
ಭಕ್ತಿಗೆ ಮೆಚ್ಚಿದ ಶಿವನು ಕನಸಲಿ
ದಯವನು ತೋರಿದನು ಇಷ್ಟಾರ್ಥ ಕೇಳಿದನು || ೯ ||

ದಂಪತಿ ಕೋರಿಕೆ ಕೇಳಿದ ಶಿವನು
ದೀರ್ಘಾಯುಷ್ಯದ ದಡ್ಡಮಕ್ಕಳೋ
ಅಲ್ಪಾಯುಷ್ಯದ ಒಬ್ಬ ಸರ್ವಜ್ಞನೋ
ಹೇಳಿ ಎಂದ ಶಿವನಲ್ಲಿ ಸರ್ವಜ್ಞನೇ ಬೇಕೆಂದರು || ೧೦ ||

ಶಿವನ ಕೃಪೆಯಲಿ ವಿಭವ ಸಂವತ್ಸರದ
ವೈಶಾಖ ಶುಕ್ಲದ ಪಂಚಮಿಯಂದು
ಆರ್ಯಾಂಬೆ ಗರ್ಭದಿ ಜನಿಸಿತು ಮಗುವು
ಶಿವಗುರು ಆರ್ಯಾಂಬೆ ಸಂತಸ ಹೊಂದಿದರು || ೧೧ ||

ಜಗದೀಶ್ವರನ ಕೃಪೆಯ ಶಿಶುವಿಗೆ
ಶಂಕರನೆಂಬೋ ಶ್ರೇಷ್ಠನಾಮವ
ಪುರೋಹಿತರಿಂದ ನಾಮಕರಣವ
ಶಾಸ್ತ್ರಾಧಾರದ ನಿಯಮದಲಿ ಸಂಭ್ರಮದಿಂದ ಮಾಡಿದರು || ೧೨ ||

ಹರನ ದಿವ್ಯಾಂಶದ ಪ್ರಭೆಯ ಮಗುವು
ಬುದ್ಧಿಶಕ್ತಿಯಲ್ಲಿ ತುಂಬಾ ತೀಕ್ಷ್ಣವು
ಭಕ್ತಿಸ್ತೋತ್ರಗಳು ಮಗುವಿಗೆ ಪ್ರಿಯವು
ಬೆಳೆದು ಬಾಲಕನಾಗುತಲಿ ಚತುರ್ವೇದದಲಿ ಒಲವು || ೧೩ ||

ತಂದೆ ಶಿವಗುರು ವಿಧಿವಶರಾದರು
ಬಾಲಶಂಕರಗೆ ತಾಯೆ ಆಧಾರವು
ಐದನೆ ವಯಸ್ಸಿಗೆ ಬ್ರಹ್ಮೋಪದೇಶವು
ಪೂರ್ಣಾನದಿದಡದ ಗುರುಕುಲದಲ್ಲಿ ವಾಸವು || ೧೪ ||

ಬಾಲ್ಯದಲ್ಲಿಯೇ ಮಲೆಯಾಳ ಸಂಸ್ಕೃತ
ಪ್ರಾಕೃತಮಾಗಧಿ ಪುರಾಣಕಾವ್ಯ
ವೇದಾಂಗಗಳ ಎಲ್ಲ ಶಾಸ್ತ್ರಗಳ
ಕಠಿಣವಾದ ಅಧ್ಯಯನವ ಮಾಡಿದರು ಶಂಕರರು || ೧೫ ||

ಗುರುಕುಲವಾಸದ ನಿಯಮದಂತೆ
ಬಾಲವಟು ಶಂಕರ ಭಿಕ್ಷಾಟನೆಗೆ
ಬಡ ಸ್ತ್ರೀಯ ಮನೆಗೆ ಬಂದು ಬಾಗಿಲಲ್ಲಿ
ಭವತಿ ಭಿಕ್ಷಾಂದೇಹಿ ಎಂದರು ಒಳಗಿಂದ ಯಾರೂ ಬರಲಿಲ್ಲ || ೧೬ ||

ಭವತಿ ಭಿಕ್ಷಾಂದೇಹಿಯೆಂದು
ಮತ್ತೆ ಕೂಗಿದಾಗ ಬಡ ಸ್ತ್ರೀಯು ಬಂದು
ದೈನ್ಯದಿಂದ ನೋಡಿ ನಾವು ಬಡವರೆಂದು
ನೀಡಲು ನಮ್ಮ ಮನೆಯಲ್ಲಿ ಏನೇನೂ ಇಲ್ಲ ಎಂದಳು || ೧೭ ||

ತಾಯೆ ಏನಾದರು ನನಗೆ ನೀಡಿದರೆ
ಅದೇ ನನಗೆ ತೃಪ್ತಿ ಅದರಿಂದ ನಿಮ್ಮನೆ
ಅಕ್ಷಯವಾಗಲಿ ಎಂದ ಬಾಲವಟು
ಬಡಸ್ತ್ರೀಗೆ ಆಗ ನೆನಪಾಯಿತು ಹಿತ್ತಲಲ್ಲಿರುವ ನೆಲ್ಲಿಕಾಯಿ || ೧೮ ||

ನೆಲ್ಲಿಕಾಯಿ ತಂದು ನೀಡಿದಳು ಬಡ ಸ್ತ್ರೀ
ಕನಕಧಾರ ಸ್ತೋತ್ರವ ಬಾಲವಟು ಸ್ತುತಿಸಿದ
ಭಕ್ತಿಗೆ ಮೆಚ್ಚಿ ಲಕ್ಷ್ಮಿ ಚಿನ್ನದ ನೆಲ್ಲಿಕಾಯಿಯ
ಮಳೆ ಸುರಿಸಿದಳು ಮನೆಯಲ್ಲಿ ಬಡತನ ನಿರ್ಮೂಲವಾಯಿತು || ೧೯ ||

ಈ ಪವಾಡವ ನೋಡಿದ ಜನರು
ದೇವಾಂಶ ದಿವ್ಯಸಂಭೂತರೆಂದರು
ಕೇರಳದ ದೊರೆ ರಾಜಶೇಖರನು
ಧನಕನಕ ಕಾಣಿಕೆಯಿಟ್ಟು ಕಳುಹಿದ ಆಹ್ವಾನವ || ೨೦ ||

ನಿರಾಕರಿಸಿದ ವಟುಶಂಕರರು
ಕಷ್ಟದಲ್ಲಿರುವವರಿಗೆ ನೀಡಿರೆಂದರು
ಕೊನೆಗೆ ರಾಜನೆ ಕಾಲಟಿಗೆ ಬಂದು
ಬಾಲವಟು ಶಂಕರರ ದರ್ಶನ ಮಾಡಿದನು || ೨೧ ||

ಅಶಕ್ತ ತಾಯಿಗಾಗಿ ಪೂರ್ಣಾನದಿ ದೇವಿಯ
ಭಕ್ತಿಯಲಿ ಪ್ರಾರ್ಥಿಸಲು ಮೆಚ್ಚಿದ ನದಿದೇವಿ
ಮೈದುಂಬಿ ಹರಿದಳು ಮನೆಯ ಎದುರಲಿ
ನೋಡಿದ ಜನರು ಸಂತಸದಿ ಬಾಲಶಂಕರರ ಹರಸಿದರು || ೨೨ ||

ಪರಮೇಶ್ವರನ ಅವತಾರ ಅರಿತು
ಕಾಲಟಿಗೆ ಬಂದರು ಅಗಸ್ತ್ಯಾದಿಗಳು
ಆರ್ಯಾಂಬೆ ಅವರಿಗೆ ನಮಿಸಿ ಸತ್ಕರಿಸಿ
ತನ್ನ ಮಗನ ಭವಿಷ್ಯವನು ತಿಳಿಸಿರೆಂದು ಬೇಡಿದಳು || ೨೩ ||

ಶಿವನಂಶ ಸಂಭೂತ ಅಲ್ಪಾಯುಷಿ ಇವನು
ಆಶ್ರಮ ಬದಲಾವಣೆ ಅನುಷ್ಠಾನ ಬಲದಿ
ಎಂಟು ವರ್ಷ ಹೆಚ್ಚಾಗಿ ಹದಿನಾರು ವರ್ಷವು
ಇದ್ದು ಲೋಕದ ಹಿತಕಾರ್ಯದಿ ಕೀರ್ತಿವಂತನು ಆಗುವನು || ೨೪ ||

ಎಂದ ಅಗಸ್ತ್ಯಾದಿಗಳು ಹರಸಿ ಹೊರಟರು
ಬಾಲಕ ಶಂಕರರು ಆಗ ಯೋಚಿಸಿದರು
ಅಲ್ಪಾಯುಷ್ಯದಲ್ಲೇ ತಮ್ಮ ಉದ್ದೇಶವ
ಸಾಧಿಸಿಕೊಳ್ಳಲು ಅಗತ್ಯವು ಸಂನ್ಯಾಸದ ದೀಕ್ಷೆಯು || ೨೫ ||

ಸಂನ್ಯಾಸ ಪಡೆಯಲು ದೃಢನಿರ್ಧಾರದಿ
ತಾಯಿಯ ಅನುಮತಿ ದೊರಕಿಸಿಕೊಳ್ಳಲು
ತಾಯಿಯ ಕೇಳಿದರು ಪರಿಪರಿಯಾಗಿ
ಬೇಡವೆಂದ ಆರ್ಯಾಂಬೆ ದುಃಖದಿ ನೀನೇ ದಿಕ್ಕು ಎಂದಳು || ೨೬ ||

ಒಂದಿನ ನದಿಯಲ್ಲಿ ಸ್ನಾನ ಮಾಡುವಾಗ
ವಿಧಿಯಾಟವೆಂಬಂತೆ ಮೊಸಳೆಯು ಕಾಲನು
ಹಿಡಿದು ಎಳೆವಾಗ ಅಮ್ಮಾ ಎಂದು ಕೂಗಲು
ಓಡಿ ಬಂದ ತಾಯಿಯು ನೋಡಿ ಅಳುತ್ತ ನಿಂತಳು || ೨೭ ||

ಅಮ್ಮ ನನಗೆ ಸಾವು ಸಮೀಪಿಸಿದೆ
ಸಂನ್ಯಾಸಿಯಾಗಲು ಅಪ್ಪಣೆ ಕೊಟ್ಟರೆ
ಬದುಕಲು ಅವಕಾಶ ಸಿಗಬಹುದೆನ್ನಲು
ಮಗನು ಬದುಕಿದರೆ ಸಾಕೆಂದು ಶಿವನಿಚ್ಛೆಯಂತೆ ಆಗಲೆಂದಳು || ೨೮ ||

ಒಬ್ಬನೇ ಮಗನಾದರು ಪರಶಿವನ ವರವು
ಭಗವಂತನ ಮತ್ತು ಲೋಕದ ಸೇವೆಗೆ
ಹುಟ್ಟಿದವನೆಂದು ಮನಗಂಡ ತಾಯಿ
ಮನದುಂಬಿ ಹರಸಿದಳು ಕೀರ್ತಿಶಾಲಿಯಾಗು ಎಂದಳು || ೨೯ ||

ಕುಟುಂಬದವರ ಆರಾಧ್ಯದೇವರು
ಕೃಷ್ಣನು ಕನಸಲಿ ಬಾಲಶಂಕರಗೆ
ಕಾಣಿಸಿಕೊಂಡು ತನ್ನ ದೇಗುಲವ
ಸ್ಥಳಾಂತರ ಮಾಡುವುದು ಅಗತ್ಯವೆಂದು ಸೂಚಿಸಿದ || ೩೦ ||

ಆರಾಧ್ಯದೇವರ ಸೂಚನೆಯಂತೆ
ತಡವನು ಮಾಡದೆ ಮಾರನೆ ದಿನವೇ
ಶ್ರೀಕೃಷ್ಣದೇವರ ದೇವಾಲಯವ
ಸ್ಥಳಾಂತರವನು ಮಾಡಿ ಕರ್ತವ್ಯ ಮುಗಿಸಿದರು || ೩೧ ||

ಕುಟುಂಬದ ಆಸ್ತಿ ತಾಯಿ ಯೋಗಕ್ಷೇಮ
ದಾಯಾದಿಗಳಿಗೆ ವಹಿಸುವಾಗ
ಆರ್ಯಾಂಬೆ ದುಃಖದಿ ಮಗನೇ ಶಂಕರಾ
ನಾನು ಸಾಯುವ ಮುನ್ನ ನಿನ್ನನ್ನೊಮ್ಮೆ ನೋಡುವೆನೇನೋ || ೩೨ ||

ತಾಯಿಯ ಸಂತೈಸಿ ನಮಸ್ಕರಿಸಿದರು
ತಾಯೆ ನಿನ್ನ ಕೊನೆಯ ಸೇವೆ ಭಾಗ್ಯ ಸಿಗಲಿ
ಎಂದು ಭಗವಂತನ ಬೇಡುವೆನೆಂದು
ಕಾಷಾಯ ವಸ್ತ್ರ ಉಟ್ಟು ದಂಡವ ಪಿಡಿದು ಹೊರಟರು || ೩೩ ||

ಬ್ರಹ್ಮ ಸಾಕ್ಷಾತ್ಕಾರವ ಪಡೆದಾ
ಗುರುವನರಸುತ ಉತ್ತರಾಭಿಮುಖದಿ
ನರ್ಮದಾ ತೀರ ಸೇರಿ ಯೋಗಿನಿವಾಸದಿ
ಕಂಡರು ಗುರುವರ್ಯರ ಗೋವಿಂದ ಭಗವತ್ಪಾದರ || ೩೪ ||

ಅಂಜಲೀಬದ್ಧನು ತೇಜಃಪೂರ್ಣನು
ನಮಿಸಿ ವಿನಂತಿಸಿ ನಿಂತ ವಟುವನು
ಕಂಡು ಹರುಷದಿ ಗುರುಗೋವಿಂದರು
ಶಿಷ್ಯನನ್ನಾಗಿ ಸ್ವೀಕರಿಸಿ ಸಂನ್ಯಾಸ ದೀಕ್ಷೆ ನೀಡಿದರು || ೩೫ ||

ಅದ್ವೈತ ತತ್ತ್ವವು ಆಧ್ಯಾತ್ಮ ಯೋಗವು
ಅದ್ಭುತ ಯಶಸ್ವಿ ಶಾಂತಿಯ ಸ್ಥಿತಿಯು
ಗುರು ಅನುಗ್ರಹವು ಬ್ರಹ್ಮಮಯವಾಗಿ
ಪರಿಪುಷ್ಪವಾಯಿತು ಪರಮಾನಂದವಾಯಿತು || ೩೬ ||

ಗುರುಗೋವಿಂದರು ಧ್ಯಾನದಲ್ಲಿರಲು
ನರ್ಮದಾ ನದಿಯು ಮಳೆಯಿಂದ ಉಕ್ಕಿ
ಆಶ್ರಮದ ಬಳಿಗೆ ಪ್ರವಾಹ ಬರುತಿರಲು
ಗುರುವಿಗೆ ತೊಂದರೆಯಾಗದಂತೆ ತಡೆಯಲು ಹೊರಟ ಶಂಕರರು || ೩೭ ||

ಕಮಂಡಲುವನ್ನು ಅಭಿಮಂತ್ರಿಸಿ
ಪ್ರವಾಹದೆದುರಿಟ್ಟು ನರ್ಮದಾಷ್ಟಕವ
ಭಕ್ತಿಯಲಿ ಸ್ತುತಿಸಲು ಪ್ರವಾಹದ ನೀರು
ಕಮಂಡಲುವ ಪ್ರವೇಶಿಸಿ ಆಗುವ ಅನಾಹುತ ತಪ್ಪಿತು || ೩೮ ||

ಧ್ಯಾನಾಸಕ್ತರಾಗಿದ್ದ ಗುರುಗೋವಿಂದರು
ಎದ್ದು ನೋಡಿದಾಗ ವಿಷಯವು ತಿಳಿದು
ಸಾಮಾನ್ಯನಲ್ಲ್ಲ ಮಹಾಯೋಗಸಿದ್ದನು
ಎಂದು ಗುರುಗೋವಿಂದರು ಶಂಕರರನ್ನು ತಿಳಿದರು || ೩೯ ||

ಗುರುಗೋವಿಂದರು ಸಂತಸದಿ ಹರಸಿ
ಇಚ್ಛಿಸಿದ ಸಂಕಲ್ಪ ನೆರವೇರಲೆಂದರು
ಅದ್ವೈತ ಸಿದ್ಧಾಂತ ಪ್ರತಿಷ್ಠಾಪಿಸೆಂದು
ಕಾಶಿಗೆ ಹೋಗೆಂದರು ಶಂಕರರನ್ನು ಬೀಳ್ಕೊಟ್ಟರು || ೪೦ ||

ಕಾಶಿಗೆ ಬಂದರು ಗಂಗಾತೀರಕೆ
ಗಂಗಾಷ್ಟಕ ಸ್ತುತಿಸಿ ಸ್ನಾನ ಮಾಡಿದರು
ವಿಶ್ವನಾಥನ ಸ್ತುತಿಸಿ ನಮಸ್ಕರಿಸಿದರು
ಕಾಶೀಪಂಚಕ ರಚಿಸಿ ಕಾಶೀಕ್ಷೇತ್ರವ ಸ್ತುತಿಸಿದರು || ೪೧ ||

ವೇದಾಧ್ಯಯನದಿ ಸಂಪನ್ನನಾದ
ವಿಪ್ರಕುಮಾರನು ಶಂಕರರ ಬಳಿಗೆ
ಬಂದು ವಿನಯದಿ ನಮಸ್ಕರಿಸಿದನು
ಆಚಾರ್ಯ ಶಂಕರರು ನೀನಾರೆಂದು ಕೇಳಿದರು || ೪೨ ||

ಗುರುವೇ ನಿಮ್ಮಯ ಮಹಿಮೆಯ ತಿಳಿದೆ
ನಿಮ್ಮ ಶಿಷ್ಯನಾಗುವೆ ನನ್ನ ಸ್ವೀಕರಿಸಿ
ಗುರುವೆ ಅನುಗ್ರಹಿಸಿ ಎಂದ ಸನಂದನನ
ಶಿಷ್ಯನನ್ನಾಗಿ ಸ್ವೀಕರಿಸಿ ಸಂನ್ಯಾಸ ದೀಕ್ಷೆಯ ಕೊಟ್ಟರು || ೪೩ ||

ವೈರಾಗ್ಯ ಸಂಪನ್ನರಾಗಿರುವರೆಲ್ಲ
ಶಂಕರಾಚಾರ್ಯರ ಶಿಷ್ಯರು ಆದರು
ಅಧ್ಯಯನ ಮಾಡುತ ಸೇವೆ ಮಾಡುವರು
ಶಿಷ್ಯರೆಲ್ಲರಿಗೂ ಆಚಾರ್ಯರು ವೇದಾಂತ ಬೋಧಿಸುತಿದ್ದರು || ೪೪ ||

ಒಂದಿನ ಕಾಶಿಯಲ್ಲಿ ಶಂಕರರು ಸ್ನಾನಕೆ
ಗಂಗಾನದಿಗೆಂದು ಹೊರಟ ದಾರಿಯಲಿ
ನಾಲ್ಕು ನಾಯಿಗಳ ಜೊತೆ ಅಂತ್ಯಜನು
ದಾರಿಗಡ್ಡ ನಿಂತಿರಲು ದೂರ ಸರಿಯೆಂದರು ಶಂಕರರು || ೪೫ ||

ದೇಹಕ್ಕೋ ಆತ್ಮಕ್ಕೋ ಯಾರಿಗೆಂದ ಅಂತ್ಯಜ
ನಮ್ಮಿಬ್ಬರ ದೇಹ ಅನ್ನಪೋಷಿತ
ಅಸ್ಥಿ ಮಾಂಸ ರಕ್ತ ನಮ್ಮಿಬ್ಬರಲ್ಲೂ ಇದೆ
ಆತ್ಮವನ್ನು ಉದ್ದೇಶಿಸಿ ನುಡಿದರೂ ಸರಿಯಲ್ಲವೆಂದ || ೪೬ ||

ದೇವನದಿಯಾದ ಗಂಗಾನದಿಯಲಿ
ಚಾಂಡಾಲರಿರುವ ಸ್ಥಳದ ಬಾವಿಗಳಲಿ
ಸೂರ್ಯನ ಬಿಂಬದಲಿ ಯಾವ ಬೇಧವಿದೆ
ಎಲ್ಲರನ್ನು ಸಮಾನವಾಗಿ ಕಾಣಬೇಕಲ್ಲವೆ ಜ್ಞಾನಿಗಳು || ೪೭ ||

ಶೃತಿ ಸ್ಮೃತಿ ಪುರಾಣ ಆತ್ಮವಸ್ತುವೆಂದು
ಸರ್ವರು ಒಂದೇ ಅದು ಸರ್ವವ್ಯಾಪಿ
ಸರ್ವಾಂತರ್ಯಾಮಿ ಅವಿಕಾರಿ ಎಂದಿದೆ
ವೇದಾಂತಿಗಳಾದ ನೀವೇ ಹೀಗೆ ಹೇಳುವಿರಲ್ಲ ಎಂದನು || ೪೮ ||

ಅದ್ವೈತ ತತ್ತ್ವದ ಅನುಭೂತಿಯಿರುವ
ಅಂತ್ಯಜನ ಮಾತಿಗೆ ಆಶ್ಚರ್ಯಗೊಳ್ಳುತ
ಅಂತ್ಯಜನಾಗಿ ಕಣ್ಣು ತೆರೆಯಿಸಿದ
ಗುರುವಿಗೆ ನಮಸ್ಕರಿಸುವೆನೆಂದು ಉದ್ಗರಿಸಿದರು ಶಂಕರರು || ೪೯ ||

ಆಗ ಅಂತ್ಯಜನ ಸ್ಥಳದಲಿ ಸಾಕ್ಷಾತ್
ಚಂದ್ರಮೌಳಿಯಾದ ಪರಶಿವನ ಕಂಡು
ಹರುಷದಿ ಶಂಕರರು ಮನೀಷಾಪಂಚಕ
ಶ್ಲೋಕವ ರಚಿಸಿ ಭಕ್ತಿಯಲಿ ಬಗೆಬಗೆಯಾಗಿ ಸ್ತುತಿಸಿದರು || ೫೦ ||

ಶಿವನೆಂದ ವತ್ಸ ನಿನ್ನ ಜ್ಞಾನ ನಿಷ್ಠೆ ಮೆಚ್ಚಿದೆ
ಬಾದರಾಯಣನ ಬ್ರಹ್ಮಸೂತ್ರಗಳಿಗೆ
ಕಲಿದೋಷದಿ ಜನ ಪರತತ್ತ್ವ ಅರಿಯದೆ
ವ್ಯಾಖ್ಯಾನದಿ ಸಿದ್ಧಾಂತವ ಕಲುಷಿತಗೊಳಿಸುತಿರುವರು || ೫೧ ||

ನೀನದನು ಖಂಡಿಸಿ ಶೃತಿಸಮ್ಮತದಿ
ಸೂತ್ರಗಳಿಗೆ ಭಾಷ್ಯವನ್ನು ರಚಿಸಿ
ಸತ್ಯವಾದ ಸಿದ್ಧಾಂತವ ಸ್ಥಾಪಿಸಿ
ಅದ್ವೈತ ಸಿದ್ಧಾಂತವ ಪ್ರಚಾರವನ್ನು ಮಾಡು || ೫೨ ||

ನಿನ್ನ ಶಿಷ್ಯರನ್ನು ಅಲ್ಲಲ್ಲಿ ನಿಯೋಜಿಸು
ಕರ್ತವ್ಯ ಮುಗಿಸು ನನ್ನ ಸೇರಿಕೊಳ್ಳುವೆ
ಎಂದು ಹರಸಿ ಶಿವ ಅದೃಶ್ಯನಾದನು
ಶಿವನಿಚ್ಛೆಯಂತೆ ಸೂತ್ರಭಾಷ್ಯವ ರಚಿಸಲು ಸಂಕಲ್ಪಿಸಿದರು || ೫೩ ||

ಶಿಷ್ಯರೊಂದಿಗೆ ತೀರ್ಥಕ್ಷೇತ್ರಗಳ
ದರ್ಶನ ಮಾಡುತ ಹರಿದ್ವಾರದಲಿ
ಉಳಿದುಕೊಂಡಾಗ ಅಲ್ಲಿ ವಿದ್ವಾಂಸರು
ಶಂಕರರ ಅಪೂರ್ವ ವಿದ್ವತ್ತನ್ನು ಕಂಡು ಅಚ್ಚರಿಗೊಂಡರು || ೫೪ ||

ಕಾಲ್ನಡಿಗೆಯಲ್ಲೆ ಬೆಟ್ಟಗುಡ್ಡಗಳ
ನಿರ್ಜನ ಪ್ರದೇಶದಿ ಕಷ್ಟ ಯೋಚಿಸದೆ
ಆತ್ಮಸ್ಥೈರ್ಯದಿ ಮುಂದೆ ಪ್ರಯಾಣಿಸಿ
ದಿವ್ಯ ಪ್ರಶಾಂತವಾಗಿರುವ ಬದರೀ ಕ್ಷೇತ್ರವ ತಲುಪಿದರು || ೫೫ ||

ಬದರೀ ದೇಗುಲ ದರ್ಶನ ಮಾಡಲು
ನಾರಾಯಣನ ವಿಗ್ರಹ ಕಾಣದೆ
ಸ್ವತಃ ಶೋಧಿಸಿ ಪ್ರತಿಷ್ಠಾಪಿಸಿ
ಪೂಜೆಗೆ ನಂಬೂದಿರಿ ಬ್ರಾಹ್ಮಣನ ನೇಮಕ ಮಾಡಿದ ಶಂಕರರು || ೫೬ ||

ಹನ್ನೆರಡು ವರ್ಷದ ಶಂಕರಾಚಾರ್ಯರು
ಬದರೀ ಕ್ಷೇತ್ರದ ಬ್ರಹ್ಮರ್ಷಿಗಳಲಿ
ಉಪನಿಷತ್ತುಗಳ ತಾತ್ಪರ್ಯವೇನು
ಎಂಬುದ ಬಹುವಿಧವಾಗಿ ಸಮಾಲೋಚನೆ ಮಾಡಿದರು || ೫೭ ||

ಈಶಾದಿ ದಶೋಪನಿಷತ್ತುಗಳಿಗು
ನೃಸಿಂಹ ತಾಪನೀಯ ಉಪನಿಷತ್ತಿಗು
ಭಗವದ್ಗೀತೆಗು ಸನತ್ಸುಜಾತೀಯಕ್ಕು
ಭಾಷ್ಯಗಳನ್ನು ರಚಿಸಿದರು ಬಾಲಕರಾದ ಶಂಕರರು || ೫೮ ||

ಉಪದೇಶಸಾಹಸ್ರಿ ವಿವೇಕಚೂಡಾಮಣಿ
ಮೊದಲಾದ ಅನೇಕ ಗ್ರಂಥ ರಚಿಸಿದರು
ಮರಳಿ ಶಿಷ್ಯರೊಡನೆ ಕಾಶಿಗೆ ಬಂದರು
ತಮ್ಮ ಗ್ರಂಥವ ಶಿಷ್ಯರಿಗೆ ಬೋಧಿಸತೊಡಗಿದರು || ೫೯ ||

ಶಿಷ್ಯರೊಂದಿಗೆ ಗಂಗಾದಡದಲಿ
ಇರುವಾಗ ಒಂದಿನ ಕಾರ್ಯ ನಿಮಿತ್ತದಿ
ಶಿಷ್ಯ ಸನಂದನ ಆಚೆಯ ದಡಕೆ
ಹೋಗಿರಲು ಅವನ ನೋಡಿ ಕೂಗಿ ಕರೆದರು ಶಂಕರರು || ೬೦ ||

ಗುರು ಕರೆ ಕೇಳಿ ಬರಲು ದೋಣಿಯಿಲ್ಲದೆ
ಆತುರದಿ ಸನಂದನ ಗಂಗೆಗೆ ಧುಮುಕಿದ
ಗುರುಭಕ್ತಿ ಮೆಚ್ಚಿ ಗಂಗಾನದಿ ದೇವಿ
ಸುಗಮವಾಗಿ ನಡೆದು ಬರಲು ಕಮಲವಿಟ್ಟು ದಾರಿಯ ಮಾಡಿದಳು || ೬೧ ||

ಈ ವಿಸ್ಮಯವ ಕಂಡು ಶಂಕರರು
ಶಿಷ್ಯಸನಂದನನ ಭಕ್ತಿ ಮೆಚ್ಚಿದರು
ವಾತ್ಸಲ್ಯದಿಂದ ಪದ್ಮಪಾದ ಎಂದು
ಆ ಸಮಯವೇ ಸನಂದನಗೆ ಹೆಸರಿಟ್ಟು ಆಶೀರ್ವದಿಸಿದರು || ೬೨ ||

ಒಂದಿನ ಶಂಕರರು ಶಿಷ್ಯರ ಜೊತೆಯಲಿ
ಗಂಗಾತೀರದಲಿ ಬರುತಿರುವಾಗ
ಅಲ್ಲಿ ಒಬ್ಬ ವೃದ್ಧನು ಡುಕೃಙ್ಕಕರಣೆ ಎನ್ನುತ
ವ್ಯಾಕರಣ ಅಭ್ಯಾಸದಲಿ ತೊಡಗಿರುವುದನ್ನು ನೋಡಿದರು || ೬೩ ||

ವೃದ್ಧನಿಗೆ ಹೇಳಿದ ಶ್ರೀಶಂಕರರು
ಡುಕೃಙ್ಕಕರಣೆಯ ವ್ಯಾಕರಣವು
ನಿಮ್ಮ ರಕ್ಷಿಸದು ಗೋವಿಂದನ ಭಜಿಸಿ
ಭಜಗೋವಿಂದ ಎನ್ನುತ ಗೀತೆಯನ್ನು ಸಾರಿದರು || ೬೪ ||

ಒಮ್ಮೆ ಶಂಕರರು ಬ್ರಹ್ಮಸೂತ್ರ ಭಾಷ್ಯದ
ಪಾಠ ಮುಗಿಸತಿರಲು ವೃದ್ಧ ಬ್ರಾಹ್ಮಣನೊಬ್ಬ
ಬಂದು ಬ್ರಹ್ಮಸೂತ್ರದ ಮೂರನೆ ಅಧ್ಯಾಯದ
ಮೊದಲ ವಿಷಯಕೆ ಶಂಕರರಲ್ಲಿ ಭಾರಿ ವಾಗ್ವಾದ ಮಾಡಿದನು || ೬೫ ||

ಆಗ ಪದ್ಮಪಾದರು ಶ್ರೀಶಂಕರರಿಗೆ
ವ್ಯಾಸಮಹರ್ಷಿಗಳೆಂದು ಸೂಚಿಸಲು
ಶಂಕರರು ವ್ಯಾಸರಲ್ಲಿ ಕ್ಷಮೆಯ ಯಾಚಿಸಿ
ತಮ್ಮ ಭಾಷ್ಯ ಗ್ರಂಥವನ್ನು ವ್ಯಾಸರ ಕೈಮೇಲಿಟ್ಟರು || ೬೬ ||

ನೋಡಿ ವ್ಯಾಸರು ಪರಮಸಂತಸದಿ
ಭಗವತ್ಪಾದ ಗೋವಿಂದರ ಶಿಷ್ಯನೆ
ನಮ್ಮ ಬ್ರಹ್ಮಸೂತ್ರಕೆ ಸರಿಯಾದ ಭಾಷ್ಯವ
ಬರೆದ ವಿದ್ವಾಂಸನು ನೀನು ಸಂತೋಷವಾಯಿತು ಎಂದರು || ೬೭ ||

ಪರಮಪೂಜ್ಯರೆ ನಾನು ಧನ್ಯನಾದೆ
ಆಯುಷ್ಯ ಕರ್ತವ್ಯ ಎಲ್ಲವು ಮುಗಿದಿದೆ
ನಿಮ್ಮ ಸಾನ್ನಿಧ್ಯವನ್ನು ಅನುಗ್ರಹಿಸಿರಿ
ನಾನು ಈ ದೇಹವನ್ನು ತ್ಯಜಿಸುವೆನೆಂದರು ಶಂಕರರು || ೬೮ ||

ವ್ಯಾಸ ಮುನೀಂದ್ರರು ಆಗ ಯೋಚಿಸಿ
ನೀನು ಮಾಡುವ ಕಾರ್ಯವಿನ್ನೂ ಇದೆ
ಅದ್ವೈತ ಸಿದ್ಧಾಂತ ಪ್ರತಿಷ್ಠೆ ಮಾಡು
ಜನರು ಬ್ರಹ್ಮತತ್ವವನ್ನರಿತು ಶ್ರೇಯೋಭಾಜನರಾಗಲಿ || ೬೯ ||

ನಿನಗೆ ಪ್ರಾಪ್ತವಾದ ಎಂಟು ವರ್ಷವು
ಸಂನ್ಯಾಸದಿಂದ ದ್ವಿಗುಣಗೊಂಡಿತು
ಪರಮೇಶ್ವರನ ಆಜ್ಞೆಯಂತೆಯೆ
ಹದಿನಾರು ವರ್ಷಗಳ ಆಯುಷ್ಯವು ನಿನಗೆ ಬರಲಿ || ೭೦ ||

ಸೂರ್ಯಚಂದ್ರರು ಇರುವವರೆಗೂ
ಭಾಷ್ಯ ಶ್ರೇಷ್ಠತೆ ವಿರಾಜಿಸಲಿ
ಎಂದು ವರ ನೀಡಿ ನಿರ್ಗಮಿಸಿದರು
ಮಹರ್ಷಿ ವ್ಯಾಸರ ಆಜ್ಞೆಯಂತೆ ಕರ್ತವ್ಯಕ್ಕೆ ಸಿದ್ಧರಾದ ಶಂಕರರು || ೭೧ ||

ಸೂತ್ರ ಭಾಷ್ಯಕೆ ವಾರ್ತಿಕ ಬರೆಸಲು
ತುಷಾಗ್ನಿಲಿರುವ ಕುಮಾರಿಲಭಟ್ಟರ
ಕಂಡು ಶಂಕರರು ಉದ್ದೇಶ ತಿಳಿಸಲು
ಮಂಡನ ಮಿಶ್ರರ ಬಳಿಗೆ ಕಳುಹಿದರು ಕುಮಾರಿಲರು || ೭೨ ||

ಪ್ರಕಾಂಡ ಪಂಡಿತ ಮಂಡನಮಿಶ್ರರ
ಭೇಟಿಯಾಗಿ ತಮ್ಮ ಆಕಾಂಕ್ಷೆ ತಿಳಿಸಲು
ವಾದದ ಷರತ್ತನು ವಿಧಿಸಿ ಮಂಡನರು
ವಾದದಲ್ಲಿ ನಾನು ಸೋತರೆ ಸಂನ್ಯಾಸಿ ಆಗುವೆನೆಂದರು || ೭೩ ||

ಶಂಕರರೆಂದರು ಮಂಡನಮಿಶ್ರರಿಗೆ
ಈ ವಾಗ್ವಾದದಿ ನಾನು ಸೋತರೆ
ಇನ್ನು ಎಂದೆಂದೂ ವೇದಾಂತದ
ಪ್ರಚಾರ ಮಾಡುವುದಿಲ್ಲ ಎಂದು ಪ್ರತಿಜ್ಞೆಯ ಮಾಡಿದರು || ೭೪ ||

ಮಂಡನರ ಪತ್ನಿ ಭಾರತಿದೇವಿಯು
ತೀರ್ಪುಗಾರಳಾಗಲು ಒಪ್ಪಿಕೊಂಡಳು
ವಾಕ್ಯಾರ್ಥ ಕೇಳಲು ಬಂದ ಪಂಡಿತರು
ಮಂಡನ ಮಿಶ್ರರು ಮೊದಲು ವಾದವ ಶುರು ಮಾಡಿದರು || ೭೫ ||

ಕರ್ಮಮಾರ್ಗದ ಮಹಿಮೆ ಹೇಳುವೆ
ಕರ್ಮಗಳೆ ಶ್ರೇಷ್ಠ ಮೋಕ್ಷಕೆ ಕಾರಣ
ಎಲ್ಲರ ಬದುಕಿನಲಿ ಕರ್ಮಾಚರಣೆಯು
ಅತ್ಯಂತ ಅಗತ್ಯವು ಆಗಿದೆ ಕರ್ಮಯೋಗವೆ ಸರಿಯೆಂದರು || ೭೬ ||

ಶಂಕರರೆಂದರು ಕಾಮಕ್ರೋಧಮೋಹ
ಅಜ್ಞಾನ ಮತ್ಸರ ಯಜ್ಞದಲಿ ಸುಡುವುದೆ
ಅಗ್ನಿಯು ಹೋತೃವು ಆಹುತಿ ಹವಿಸ್ಸು
ಸಕಲ ವಸ್ತುವು ಬ್ರಹ್ಮವು ಸಕಲ ಕರ್ಮವು ಬ್ರಹ್ಮವೆಂದರು || ೭೭ ||

ಆತ್ಮ ಬ್ರಹ್ಮ ಕರ್ಮ ಮುಂತಾದ ತತ್ವಗಳ
ಕುರಿತಾಗಿ ವಿಶಿಷ್ಠ ವಾಕ್ಯಾರ್ಥ ವಾಗ್ವಾದ
ಅವ್ಯಾಹತವಾಗಿ ಏಳು ದಿನವು ನಡೆದು
ಸೋತರು ಮಂಡನಮಿಶ್ರರು ಸಿದ್ಧಾಂತ ಪ್ರತಿಪಾದನೆಯಲ್ಲಿ || ೭೮ ||

ಸಭೆಯಲ್ಲಿರುವ ಪಂಡಿತರೆಲ್ಲರು
ಶ್ರೀಶಂಕರರ ಜಯ ಕೊಂಡಾಡಲು
ಭಾರತಿದೇವಿಯು ಶ್ರೀಶಂಕರರಲಿ
ಶಾಪದಿಂದ ಭೂಲೋಕದಲ್ಲಿ ಜನಿಸಿದೆ ನಾನು ಎಂದಳು || ೭೯ ||

ವಾಗ್ವಾದ ಶ್ರವಣ ಮಾಡಿ ನನ್ನ ಶಾಪ
ಪರಿಹಾರವಾಯಿತು ಹೊರಟೆ ಸತ್ಯಲೋಕಕೆ
ಎಂದ ಶಾರದೆಗೆ ಸ್ತೋತ್ರವ ರಚಿಸಿ
ಸ್ತುತಿಸಿದರು ಶಂಕರರು ವಾದ ಮಾಡಲು ಒಲಿಸಿದರು || ೮೦ ||

ವಾದದಿ ಶಾರದೆಯು ಕಾಮಶಾಸ್ತ್ರ ಕುರಿತು
ಕೇಳಿದ ಪ್ರಶ್ನೆಗೆ ಒಂದು ತಿಂಗಳಿನ
ಕಾಲಾವಕಾಶ ಕೇಳಿ ಶಂಕರರು
ಯೋಗಶಕ್ತಿಯಲಿ ಪರಕಾಯವ ಪ್ರವೇಶ ಮಾಡಲು ಹೊರಟರು || ೮೧ ||

ಶ್ರೀಶಂಕರರಲ್ಲಿ ಪದ್ಮಪಾದರು
ಮೃತದೇಹವನ್ನು ಪ್ರವೇಶಿಸಿದರೆ
ಯತಿಯಾದ ನಮಗೆ ವ್ರತಭಂಗವಾಗಿ
ಪಾಪವು ಬರುವುದಿಲ್ಲವೇ ತಪ್ಪಲ್ಲವೇ ಎಂದು ಕೇಳಿದರು || ೮೨ ||

ಶಂಕರರೆಂದರು ಒಳ್ಳೆ ಉದ್ದೇಶಕೆ
ಯೋಗ ಪ್ರಕ್ರಿಯೆಯಲಿ ಇನ್ನೊಂದು ದೇಹವ
ಪ್ರವೇಶಿಸುವುದು ತಪ್ಪಲ್ಲವೆನ್ನುತ
ಸ್ವಲ್ಪವು ಪಾಪವೆಂಬುದು ಬರುವುದಿಲ್ಲ ಎಂದರು || ೮೩ ||

ಶ್ರೀಶಂಕರರು ಶಿಷ್ಯರೊಂದಿಗೆ
ಆಕಾಶಮಾರ್ಗದಿ ಯೋಗಶಕ್ತಿಯಲಿ
ಪರ್ವತ ಶಿಖರದಿ ಗುಹೆ ಬಳಿ ಬಂದರು
ಗುಹೆಯಲ್ಲಿ ತಮ್ಮ ದೇಹವ ಇಡಲು ನಿರ್ಧರಿಸಿದರು || ೮೪ ||

ದೇಹದ ರಕ್ಷಣೆಗೆ ಶಿಷ್ಯರ ನಿಯಮಿಸಿ
ಶರೀರ ತ್ಯಜಿಸಿ ರಾಜ ಅಮರುಕನ
ಶವವನ್ನು ಸೇರಿ ಅರಮನೆಗೆ ತೆರಳಿ
ದಾನಧರ್ಮಗಳ ಮಾಡುತ್ತ ಪ್ರಜೆಗಳ ಸುಖವಾಗಿರಿಸಿದರು || ೮೫ ||

ರಾಜನ ಆಡಳಿತ ಮೆಚ್ಚಿದ ಮಂತ್ರಿಗಳು
ಅಣಿಮಾದಿ ಅಷ್ಟಸಿದ್ಧಿ ಪಡೆದ ಮಹಾತ್ಮನೆ
ರಾಜನ ಸೇರಿಹನು ಎಂದು ಯೋಚಿಸುತ
ಈ ಆತ್ಮನ ಉಳಿಸಬೇಕು ಹಿಂದಿನ ದೇಹ ನಶಿಸಬೇಕು || ೮೬ ||

ಎಂದು ಮಂತ್ರಿಗಳು ದೇಶದಾದ್ಯಂತ
ಮರಣ ಹೊಂದಿದ ದೇಹಸುಡುವಂತೆ
ರಾಜಭೃತ್ಯರಿಗೆ ಆಜ್ಞಾಪಿಸಿದರು
ರಾಜಭೃತ್ಯರು ದೇಹವ ಹುಡುಕಿ ಅಗ್ನಿಸ್ಪರ್ಶವನ್ನು ಮಾಡಿದರು || ೮೭ ||

ಶಾರದಾದೇವಿಯ ಪ್ರಶ್ನೆಗೆ ಬೇಕಾದ
ಉತ್ತರವ ತಿಳಿದು ಶ್ರೀಶಂಕರರು
ಯೋಗಶಕ್ತಿಯಿಂದ ರಾಜನ ದೇಹಬಿಟ್ಟು
ಗುಹೆಯ ಒಳಗೆ ಬಂದು ತಮ್ಮ ದೇಹವ ಸೇರಿದರು || ೮೮ ||

ಶ್ರೀಶಂಕರರ ದೇಹಕ್ಕೆ ಅಗ್ನಿಯು
ಸ್ಪರ್ಶ ಮಾಡಿರಲು ಶ್ರೀಶಂಕರರು
ನರಸಿಂಹಸ್ವಾಮಿಯ ಭಕ್ತಿಯಿಂದ ಸ್ತುತಿಸಿ
ಸ್ಪರ್ಶವಾಗಿರುವ ಅಗ್ನಿಯನ್ನು ಶಾಂತವಾಗುವಂತೆ ಮಾಡಿದರು || ೮೯ ||

ತಮ್ಮ ದೇಹವ ರಕ್ಷಣೆ ಮಾಡಿದ
ನರಸಿಂಹಸ್ವಾಮಿಗೆ ಶ್ರೀಶಂಕರರು
ಶ್ರೀಲಕ್ಷ್ಮೀನರಸಿಂಹ ಕರಾವಲಂಬನ
ಸ್ತೋತ್ರವನ್ನು ರಚಿಸಿ ಭಕ್ತಿಯಿಂದ ಸ್ತುತಿಸಿದರು || ೯೦ ||

ಶ್ರೀಶಂಕರರು ವಾಕ್ಯಾರ್ಥ ವಾದಕೆ
ಶಾರದೆ ದೇವಿಯ ಬಳಿಗೆ ಬಂದರು
ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರು
ಸಂನ್ಯಾಸಿಯಾಗಿ ಮಂಡನಮಿಶ್ರರು ಸುರೇಶ್ವರಾಚಾರ್ಯರಾದರು || ೯೧ ||

ಶ್ರೀಶಂಕರರು ಶಾರದಾದೇವಿಗೆ
ಧರ್ಮರಕ್ಷಿಸಲು ಸ್ಥಾಪಕ ಮಠದ
ಪೀಠದಿ ನೆಲೆಯಾಗಿ ಭಕ್ತರ ರಕ್ಷಿಸು
ಎಂದು ವಿನಂತಿಸಿದಾಗ ತಥಾಸ್ತು ಎಂದಳು ಶಾರದೆಯು || ೯೨ ||

ಶಿಷ್ಯರೊಡನೆ ಯಾತ್ರೆಗೆ ಹೊರಟ ಶಂಕರರು
ಅವೈದಿಕಮತಗಳ ಖಂಡನೆ ಮಾಡಿ
ಅದ್ವೈತ ಸಿದ್ಧಾಂತದ ಮಂಡನೆಗಾಗಿ
ಪಾದಯಾತ್ರೆಯ ಮಾಡುತ್ತ ದರ್ಶಿಸಿದರು ತೀರ್ಥಕ್ಷೇತ್ರಗಳ || ೯೩ ||

ಪ್ರಚಾರ ಮಾಡುತ ಶ್ರೀಶೈಲಕ್ಕೆ ಬಂದು
ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ
ಶಿವಾನಂದಲಹರಿ ರಚಿಸಿ ಶಂಕರರು
ಜ್ಯೋತಿರ್ಲಿಂಗವನ್ನು ದರ್ಶನ ಮಾಡಿ ಸ್ತುತಿಸಿದರು || ೯೪ ||

ಶಂಕರರೊಬ್ಬರೆ ಇರುವಾಗ ಒಬ್ಬ
ಕಾಪಾಲಿಕ ತನ್ನ ಇಷ್ಟಾರ್ಥಸಿದ್ಧಿಗೆ
ಅವರ ಶಿರಸ್ಸನ್ನು ಬೇಡಿ ಒಪ್ಪಿಸಿದ
ಹೇಳಿದ ಸಮಯಕ್ಕೆ ಬಂದು ಶಿರ ಕತ್ತರಿಸಲು ಹವಣಿಸಿದ || ೯೫ ||

ತಿಳಿದ ಪದ್ಮಪಾದರು ಕೋಪೋದ್ರಿಕ್ತರಾಗಿ
ಉಗ್ರ ನರಸಿಂಹನಾಗಿ ಬಂದರು ಗರ್ಜಿಸುತ್ತ
ಬೆದರಿ ಕಾಪಾಲಿಕ ಓಡತೊಡಗಿದ
ಕಾಪಾಲಿಕನ ಬೆನ್ನಟ್ಟಿ ಸಂಹಾರವ ಮಾಡಿದರು || ೯೬ ||

ಧ್ಯಾನಾಸಕ್ತರಾಗಿದ್ದ ಶ್ರೀಶಂಕರರು
ಗರ್ಜನೆ ಕೇಳಿ ಥಟ್ಟನೆ ನೋಡಿದರು
ಉಗ್ರನರಸಿಂಹನಾದ ಪದ್ಮಪಾದರನು
ನರಸಿಂಹಸ್ವಾಮಿಯ ಸ್ತುತಿಸಿ ಶಾಂತರಾಗುವಂತೆ ಮಾಡಿದರು || ೯೭ ||

ಗೋಕರ್ಣಕೆ ಬಂದು ಅಲ್ಲಿ ವಿದ್ವಾಂಸರಿಗೆ
ಅದ್ವೈತ ಮಹತ್ವವ ಮನವರಿಕೆ ಮಾಡಿ
ಮೂಢ ಆಚರಣೆಯ ಸರಿಪಡಿಸಿದರು
ಮುಂದೆ ಹರಿಹರ ಕ್ಷೇತ್ರವನ್ನು ದರ್ಶನ ಮಾಡಿ ಹೊರಟರು || ೯೮ ||

ಕೊಲ್ಲೂರು ಕ್ಷೇತ್ರಕ್ಕೆ ಹೊರಟ ದಾರಿಯಲಿ
ಸತ್ತಮಗನ ಬಳಿ ಅಳುತ್ತಿದ್ದ ತಾಯಿ
ಕರುಣಾಶಂಕರರು ಯೋಗಶಕ್ತಿಯಿಂದ
ಸತ್ತಬಾಲಕನನ್ನು ಬದುಕಿಸಿ ಅಲ್ಲಿಂದ ಮುಂದೆ ತೆರಳಿದರು || ೯೯ ||

ಶ್ರೀವಲಿಯೆಂಬ ಅಗ್ರಹಾರದಲ್ಲಿ
ಪಂಡಿತನ ಮಗ ಮೂಕಜಡನನು
ಯಾಕೆ ಜಡನಾದೆ ಎಂದ ಶಂಕರರಿಗೆ
ಗುರುವೆ ನಾನು ಜಡನಲ್ಲ ಎಂದು ಮೂಕನು ಮಾತನ್ನಾಡಿದ || ೧೦೦ ||

ಷಡೂರ್ಮಿ ಷಡ್‌ಭಾವ ವಿಕಾರಗಳನು
ವರ್ಜಿಸಿ ಕೇವಲ ಆನಂದಮಯದ
ಪರಬ್ರಹ್ಮನಾಗಿರುವೆ ಎಂದ ಬ್ರಹ್ಮಜ್ಞಾನಿಯ
ಶಿಷ್ಯನನ್ನಾಗಿ ಪರಿಗ್ರಹಿಸಿ ಹಸ್ತಾಮಲಕನೆಂದು ಹೆಸರಿಟ್ಟರು || ೧೦೧ ||

ಜಾಗೃತಶಕ್ತಿ ಮೂಕಾಂಬಿಕೆಯ
ಕೊಲ್ಲೂರು ಕ್ಷೇತ್ರಕ್ಕೆ ಬಂದ ಶಂಕರರು
ಶ್ರೀಚಕ್ರ ಸ್ಥಾಪಿಸಿ ಪೂಜೆಯ ಮಾಡಿ
ಸ್ತೋತ್ರವ ರಚಿಸಿ ಸ್ತುತಿಸಿ ಶ್ರೀದೇವಿಗೆ ನಮಿಸಿದರು || ೧೦೨ ||

ಯಾತ್ರೆಗೆ ಹೊರಟು ಮಾರ್ಗ ಮಧ್ಯದಿ
ಒಂದು ಗ್ರಾಮದಲಿ ಭಿಕ್ಷೆಗೆ ನಿಂತರು
ಅಲ್ಲಿಯ ವನದೇವಿ ಕ್ರೌರ್ಯವ ತಿಳಿದು
ತಾವು ನೋಡಲೇಬೇಕೆಂದು ನಿಶ್ಚಯಿಸಿದರು ಶಂಕರರು || ೧೦೩ ||

ಒಬ್ಬರೇ ವನಕೆ ಹೊರಟ ಶಂಕರರು
ಅಲ್ಲಿಯ ವನದೇವಿ ಕಾಳಿಯ ಕಂಡರು
ಶಂಕರರ ನೋಡಿ ತಿನ್ನಲು ಬಂದಳು
ಭಯವ ತೋರದೆ ನಸುನಗುತ ಅಚ್ಚರಿ ಪಡುವಂತೆ ಮಾಡಿದರು || ೧೦೪ ||

ಎಲೈ ಬಾಲಕನೇ ನನ್ನ ನೋಡಿ ಎಲ್ಲರು
ಗಡಗಡನಡುಗಿ ತತ್ತರಿಸುವರು
ಇಲ್ಲಿನ ಪ್ರಾಣಿಪಕ್ಷಿ ಮನುಷ್ಯರೆಲ್ಲ ನನಗೆ
ಆಹಾರವಾಗಲೆಬೇಕೆಂದು ಹಿಡಿದುಕೊಂಡಳು ಶಂಕರರ || ೧೦೫ ||

ಶಂಕರರೆಂದರು ತಾಯೆ ಭಯವಿಲ್ಲ
ಏಕೆಂದರೆ ನೀನು ಕಾಡಿನ ದೇವತೆ
ದೇವತೆ ಎಂದ ಮೇಲೆ ಎಲ್ಲ ಜೀವರಾಶಿಗು
ತಾಯಿ ಅಲ್ಲವೇ ನೀನೂ ಮಕ್ಕಳ ತಿನ್ನಲು ಸಾಧ್ಯವೇ || ೧೦೬ ||

ತಾಯೆ ನಿನ್ನ ಅಭಯ ಹಸ್ತದಲ್ಲಿರುವೆ
ರೌದ್ರರೂಪ ಬಿಡು ಎಂದ ಶಂಕರರು
ಮಮತಾಮಯಿಯೆ ಶಾಂತರೂಪಿಣಿಯೆ
ಎಂದು ಸ್ತೋತ್ರವ ಸ್ತುತಿಸಲು ಶಾಂತರೂಪದಿ ದರ್ಶನವಿತ್ತಳು || ೧೦೭ ||

ಪ್ರಯಾಗದಲೊಮ್ಮೆ ವಟವೃಕ್ಷ ಸನಿಹ
ಕುಷ್ಟರೋಗಿ ಕಂಡು ಜನ ಹೇಸುತಿರಲು
ನೊಂದ ಕುಷ್ಟರೋಗಿ ಸಾಯಲೆತ್ನಿಸಿದನು
ಶ್ರೀಶಂಕರರು ಅವನನ್ನು ಪ್ರೀತಿಯಿಂದ ಕಾಪಾಡಿದರು || ೧೦೮ ||

ನನಗೆ ಬೇಡವಾದ ನನ್ನ ಪ್ರಾಣವನು
ಏಕೆ ಉಳಿಸಿದಿರಿ ಎಂದು ದುಃಖಿಸಿದ
ನೀನು ಆತ್ಮಹತ್ಯೆ ಮಾಡಿಕೊಂಡರೆ
ಪಾಪರಾಶಿಗಳು ಹೆಚ್ಚಾಗಿ ಕಷ್ಟಪಡಲು ಹುಟ್ಟುವೆಯೆಂದರು || ೧೦೯ ||

ಹೇಗಿರಬೇಕೆಂದು ನನಗೇನು ತೋಚದು
ಪ್ರಾಣವನುಳಿಸಿದ ನೀವೆ ನನ್ನ ದೇವರು
ಎಂದ ಕುಷ್ಟರೋಗಿಯು ಶ್ರೀಶಂಕರರಲಿ
ಭಕ್ತಿಯಿಂದ ಪ್ರಾರ್ಥಿಸಿ ಸಾಷ್ಟಾಂಗ ಪ್ರಣಾಮ ಮಾಡಿದನು || ೧೧೦ ||

ಕರುಣಾ ಹೃದಯಿ ಶ್ರೀಶಂಕರರು
ಶುಶ್ರೂಷೆ ಮಾಡಿ ಗುಣಪಡಿಸಿದರು
ಉದಂಕನೆಂದು ಹೆಸರನ್ನು ಇಟ್ಟರು
ಅವನು ಶ್ರೀಶಂಕರರ ನಿಷ್ಟಾವಂತ ಶಿಷ್ಯನಾದ || ೧೧೧ ||

ರಮಣೀಯವಾದ ಪಶ್ಚಿಮಘಟ್ಟದ
ಮಡಿಲ ಪುಣ್ಯಭೂಮಿ ಶೃಂಗೇರಿ ಕ್ಷೇತ್ರ
ಋಷ್ಯಶೃಂಗರ ತಪೋಭೂಮಿಯು
ತುಂಗಾನದಿ ಪರಿಸರವು ನಯನ ಮನೋಹರವು || ೧೧೨ ||

ಶ್ರೀಶಂಕರರು ಶಿಷ್ಯರೊಂದಿಗೆ
ಶೃಂಗೇರಿಗೆ ಬಂದು ತುಂಗಾತೀರದಲಿ
ತುಂಗಾ ನದಿಯ ದೇವಿ ಸ್ತೋತ್ರವ
ರಚಿಸಿ ಸ್ತುತಿಸಿದರು ನದಿದೇವಿಗೆ ನಮಿಸಿದರು || ೧೧೩ ||

ಅಲ್ಲಿ ದೃಶ್ಯ ಕಂಡು ಅಚ್ಚರಿಗೊಂಡರು
ಬಿಸಿಲಿನಿಂದ ಬಳಲುತ್ತಿದ್ದ ಕಪ್ಪೆಗೆ
ಸಹಜವೈರಿಯಾದ ಸರ್ಪವು ಹೆಡೆ ಬಿಚ್ಚಿ
ಕೊಡೆಯಂತೆ ನೆರಳಾಗಿ ಬಿಸಿಲಿನಿಂದ ರಕ್ಷಣೆ ಮಾಡುತಿತ್ತು || ೧೧೪ ||

ಶೃಂಗೇರಿಯಲ್ಲಿ ತುಂಗಾನದಿಯ
ಎಡದ ದಂಡೆಯ ಬಂಡೆಯ ಮೇಲೆ
ಶ್ರೀಚಕ್ರವನ್ನು ಯಂತ್ರೋದ್ಧಾರ ಮಾಡಿ
ಶ್ರೀ ಶಾರದಾಂಬಾ ದೇವಿಯ ಪ್ರತಿಷ್ಠಾಪಿಸಿದರು ಶಂಕರರು || ೧೧೫ ||

ಶ್ರೀ ಶಂಕರರು ದಕ್ಷಿಣಾಮ್ನಾಯ
ಶೃಂಗೇರಿ ಶಾರದಾಪೀಠವ ಸ್ಥಾಪಿಸಿ
ಸುರೇಶ್ವರಾಚಾರ್ಯರ ಪೀಠಾಧಿಪತಿ ಮಾಡಿ
ಶೃಂಗೇರಿಯಲ್ಲಿದ್ದು ಶಿಷ್ಯರಿಗೆ ಗ್ರಂಥಭಾಷ್ಯ ಪಾಠ ಬೋಧಿಸಿದರು || ೧೧೬ ||

ಮಂದಮತಿಯಾದ ಗಿರಿಯೆಂಬ ಶಿಷ್ಯನು
ಭಕ್ತಿಶ್ರದ್ಧೆಯಲಿ ಗುರುಸೇವೆ ಮಾಡುತ
ವಸ್ತ್ರ ಶುಚಿಗೊಳಿಸಲು ನದಿಗೆ ತೆರಳಿದ
ಪಾಠದ ಸಮಯವಾದರೂ ನದಿಯಿಂದ ಮರಳಿ ಬರಲಿಲ್ಲ || ೧೧೭ ||

ಗಿರಿಗೆ ಕಾಯುತಿರುವ ಶ್ರೀಶಂಕರರಿಗೆ
ಉಳಿದ ಶಿಷ್ಯರೆಲ್ಲ ಪಾಠ ಮಾಡಿರೆನ್ನುತ
ಮಂದಮತಿಗೇಕೆ ಕಾಯುವಿರೆಂದಾಗ
ಗಿರಿಯ ಆಧ್ಯಾತ್ಮ ಸಾಧನೆಯ ತಿಳಿಯುವಿರೆಂದರು ಶಂಕರರು || ೧೧೮ ||

ಗಿರಿಯ ಗುರುಭಕ್ತಿಗೆ ಶ್ರೀಶಂಕರರು
ವಿದ್ಯಾಪಾರಂಗತನಾಗುವಂತೆ
ಕೃಪಾ ದೃಷ್ಟಿ ಬೀರಿ ಅನುಗ್ರಹಿಸಿದರು
ಗಿರಿಯು ನದಿತೀರದಿಂದ ಶ್ಲೋಕವ ಹೇಳುತ್ತ ಬಂದ || ೧೧೯ ||

ಬಂದ ಗಿರಿಯು ಶ್ರೀಶಂಕರರಿಗೆ
ಸಾಷ್ಟಾಂಗ ಪ್ರಣಾಮವ ಮಾಡಿದ
ಶಂಕರರು ಗಿರಿಗೆ ಆಶೀರ್ವದಿಸುತ್ತ
ನಿನ್ನಿಂದ ಆತ್ಮತತ್ತ್ವವನ್ನು ಕೇಳಬೇಕೆನಿಸಿದೆ ಹೇಳೆಂದರು || ೧೨೦ ||

ಗಿರಿಯು ಬಹಳ ವಿನಮ್ರಭಾವದಿ
ಶ್ರದ್ಧಾಭಕ್ತಿಯಿಂದ ಆಚಾರ್ಯರನ್ನು
ನಮಿಸುವ ರೂಪದಿ ಪರಮವೇದಾಂತದ
ಸಾರವನ್ನು ಜಟಿಲವೆನಿಸಿದ ತೋಟಕ ವೃತ್ತದಲಿ ನಿವೇದಿಸಿದ || ೧೨೧ ||

ಶ್ರೀಶಂಕರರು ಶಿಷ್ಯನಲ್ಲಿ ಅಡಗಿದ
ಸಾರಸ್ವತ ಚೇತನ ಪ್ರಕಟಗೊಳಿಸಿ
ಶಾಶ್ವತವಾಗಿ ನೆನಪಿರಲೆಂದು
ಶಂಕರರು ಗಿರಿಯನ್ನು ತೋಟಕಾಚಾರ್ಯ ಎಂದು ಕರೆದರು || ೧೨೨ ||

ಶ್ರೀಶಂಕರರ ಅನುಗ್ರಹದಿಂದ
ಗಿರಿಯ ಜ್ಞಾನಾರ್ಜನೆಯ ಕಂಡು
ಎಲ್ಲ ಶಿಷ್ಯರು ಶ್ರೀಶಂಕರರಿಗೆ
ಗುರುಗಳೆ ನಮ್ಮಿಂದ ತಪ್ಪಾಯ್ತು ದಯಮಾಡಿ ಕ್ಷಮಿಸಿ ಎಂದರು || ೧೨೩ ||

ಶ್ರದ್ಧೆಯಲಿ ಅಧ್ಯಯನ ಮಾಡುವ ಶಿಷ್ಯರು
ಗುರುವಿನಿಚ್ಛೆಯಂತೆ ಬ್ರಹ್ಮಸೂತ್ರಭಾಷ್ಯವ
ಭಾಷ್ಯಕೆವಾರ್ತಿಕವ ಕೆಲವು ಗ್ರಂಥಗಳ
ಗುರುವಿನ ಅನುಗ್ರಹದಿಂದ ಬರೆದರು ಶಿಷ್ಯರು ಶ್ರದ್ಧೆಯಲಿ || ೧೨೪ ||

ಅದ್ವೈತ ತತ್ತ್ವವ ಪ್ರಚಾರ ಮಾಡಲು
ಗುರುವಿನನುಮತಿ ಪಡೆದ ಪದ್ಮಪಾದರು
ಸನ್ಯಾಸಿಗಳೊಡನೆ ಕ್ಷೇತ್ರ ದರ್ಶಿಸುತ
ತತ್ತ್ವ್ವವನ್ನು ತಿಳಿಸುತ್ತ ಪೂರ್ವಾಶ್ರಮಕೆ ಬಂದರು || ೧೨೫ ||

ಸೋದರಮಾವನ ಮನೆಗೆ ಬಂದರು
ತಾವು ರಚಿಸಿದ ಬ್ರಹ್ಮಸೂತ್ರಭಾಷ್ಯವ
ಮಾವನಿಗೆ ಕೊಟ್ಟು ಪ್ರಯಾಣ ಹೊರಟರು
ಕರ್ಮಠ ಮಾವ ಮತ್ಸರದಿ ಗ್ರಂಥವನ್ನು ಸುಟ್ಟು ಹಾಕಿದನು || ೧೨೬ ||

ರಾಮೇಶ್ವರದಿಂದ ಮರಳಿ ಪದ್ಮಪಾದರು
ಸುಟ್ಟ ಗ್ರಂಥ ನೆನೆದು ಬಹಳ ದುಃಖಿಸಿದರು
ಆದರು ಧೃತಿಗೆಡದೆ ಪ್ರತಿಭಾಶಾಲಿ ಅವರು
ಗ್ರಂಥವ ರಚಿಸಲು ತೊಡಗಿ ವಿಷದ ಮದ್ದಿಗೆ ಒಳಗಾದರು || ೧೨೭ ||

ಬುದ್ಧಿಮಂದವಾಗಿ ರಚಿಸಲು ಆಗದೆ
ಗುರುಸನ್ನಿಧಿಗೆ ಮರಳಿ ಬಂದರು
ದುಃಖದಿ ಹೇಳಿದರು ಗುರುಶಂಕರರಿಗೆ
ಕರುಣಾಹೃದಯಿ ಶಂಕರರು ಸ್ಮೃತಿಯಿಂದ ಹೇಳಿ ಬರೆಸಿದರು || ೧೨೮ ||

ಶ್ರೀಶಂಕರರಿಗೆ ತಾಯಿ ನೆನಪಾಗಿ
ಅನುಪಮ ವಾತ್ಸಲ್ಯ ಅಲೆ ಅಲೆಯಾಗಿ
ಮಾತೃಭಕ್ತಿಯು ಹೃದಯತುಂಬಿ
ತ್ಯಾಗಮಯಿ ತಾಯಿಯನ್ನು ಕಾಣಲು ಕಾತರಿಸಿದರು || ೧೨೯ ||

ಶೃಂಗೇರಿ ಕ್ಷೇತ್ರದ ಶಾರದೆ ದೇವಿಯ
ವಿಧಿವಿಧಾನದ ಪೂಜಾಕೈಂಕರ್ಯವ
ಶೃಂಗೇರಿ ಪಟ್ಟಶಿಷ್ಯ ಸುರೇಶ್ವರರಿಗೆ
ವಹಿಸಿಕೊಟ್ಟು ಹೊರಟರು ತಮ್ಮ ಜನ್ಮಭೂಮಿ ಕಾಲಟಿಗೆ || ೧೩೦ ||

ಶ್ರೀ ಶಂಕರರು ತಾಯಿ ಬಳಿ ಬಂದು
ಅಮ್ಮಾ ಎಂದಾಗ ತಾಯಿ ಹೃದಯ ಅರಳಿ
ಪಟ್ಟ ಕಷ್ಟ ನೆನಪಾಗಿ ತಾಯಿ ಕಣ್ಣೀರಿಟ್ಟರು
ತಾಯಿಯನ್ನು ಸಂತೈಸಿದರು ತಾಯಿಗೆ ನೆಮ್ಮದಿಯಾಯಿತು || ೧೩೧ ||

ಅಂತ್ಯಕಾಲವೆಂದು ಜ್ಞಾನಿಮಗನಿಂದ
ಭವಸಾಗರವ ದಾಟಲೆಂದು
ಶಿವ ಕೃಪೆಗಾಗಿ ಯೋಗ್ಯ ಉಪದೇಶವ
ತಿಳಿಯಬೇಕೆಂದು ತಾಯಿ ಮಗನಲ್ಲಿ ಇಚ್ಛೆಯ ತಿಳಿಸಿದರು || ೧೩೨ ||

ಸಗುಣಸುಂದರ ಶಿವನುಪದೇಶವ
ಕೇಳಿದ ತಾಯಿ ವಿಷ್ಣುವ ಸ್ತುತಿಸಿ
ಮಗನು ರಚಿಸಿ ಸ್ತುತಿಸಿ ವರ್ಣಿಸಿದ
ಕೃಷ್ಣಾಷ್ಟಕವನ್ನು ಆಲಿಸುತ ತೃಪ್ತಿಯಿಂದ ವೈಕುಂಠ ಸೇರಿದಳು || ೧೩೩ ||

ಅಂತ್ಯಸಂಸ್ಕಾರಕೆ ಬಂಧುಗಳು ಬಿಡದೆ
ಮನೆಯ ಹಿತ್ತಲಲ್ಲೆ ತಾಯಿ ದೇಹವಿಟ್ಟು
ಬಲಗೈಲಿ ಅಗ್ನಿಯ ಉತ್ಪಾದಿಸಿ ದಹಿಸಿ
ತಾಯಿಯ ಸಂಸ್ಕಾರವನ್ನು ಮಾಡಿ ಮುಗಿಸಿದರು ಶಂಕರರು || ೧೩೪ ||

ಸಂಸ್ಕಾರಕ್ಕೆ ಬಿಡದ ಬಂಧುಗಳಿಗೆಲ್ಲ
ವೇದಬಾಹ್ಯರಾಗಿ ಎಂದ ಶಂಕರರು
ನಿಮ್ಮ ಮನೆಯ ಹಿತ್ತಲೆ ಸ್ಮಶಾನವಾಗಲಿ
ಎಂದು ದುಃಖದಿ ಶಪಿಸಿ ಅಲ್ಲಿಂದ ಹೊರಟರು ಶಂಕರರು || ೧೩೫ ||

ಅದ್ವೈತ ಸಿದ್ಧಾಂತ ಸ್ಥಾಪಿಸಲೆಂದು
ಶಂಕರರು ಶಿಷ್ಯರು ಕಾಲ್ನಡಿಗೆಯಲಿ
ಭರತ ಖಂಡದಲಿ ದಿಗ್ವಿಜಯ ಯಾತ್ರೆಗೆ
ನಿಶ್ಚಯಿಸಿ ಹೊರಟು ಬಂದರು ರಾಮೇಶ್ವರನ ಕ್ಷೇತ್ರಕ್ಕೆ || ೧೩೬ ||

ದಿಗ್ವಿಜಯ ಯಾತ್ರೆಗೆ ಆಪತ್ತು ಬರದಂತೆ
ಸುಧನ್ವರಾಜನು ಸೈನ್ಯ ತೆಗೆದುಕೊಂಡು
ಯಾತ್ರೆಯ ಜೊತೆಯಲಿ ಹಿಂಬಾಲಿಸಿದನು
ರಾಮೇಶ್ವರನಿಗೆ ಶಂಕರರು ಅರ್ಚನೆಯನ್ನು ಮಾಡಿದರು || ೧೩೭ ||

ರಾಮೇಶ್ವರ ಶಾಕ್ತರ ವಾದದಿ ಜಯಿಸಿ
ಪಾಂಡ್ಯ ಮೊದಲಾದ ದುರ್ವಾದಿಗಳ ಗೆದ್ದು
ಕಂಚಿಯ ಕಾಮಾಕ್ಷಿ ದೇವಾಲಯ ಕಟ್ಟಿಸಿ
ದೇವಿಗೆ ವೈದಿಕ ವಿಧಿಯಂತೆ ಪೂಜೆಯ ವ್ಯವಸ್ಥೆ ಮಾಡಿದರು || ೧೩೮ ||

ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ
ಗೆದ್ದರು ವಿದರ್ಭದಲಿ ಭೈರವ ತಂತ್ರದವರ
ಕರ್ನಾಟಕದಲ್ಲಿ ಕಾಪಾಲಿಕರು
ಆಕ್ರಮಣ ಮಾಡಿ ಶಂಕರರ ಕೊಲ್ಲಲು ಬಂದನು ಕ್ರಕಚನು || ೧೩೯ ||

ಸುಧನ್ವರಾಜನು ಆಕ್ರಮಣಕಾರರ
ಸೈನ್ಯದಿಂದ ಹಿಮ್ಮೆಟ್ಟಿಸಿ ಎಲ್ಲರ ಓಡಿಸಿದ
ಕ್ರಕಚನ ಕೊಂದನು ದೇವ ಭೈರವ
ದಿಗ್ವಿಜಯದ ಯಾತ್ರೆಯು ಹೊರಟಿತು ಗೋಕರ್ಣ ಕ್ಷೇತ್ರಕ್ಕೆ || ೧೪೦ ||

ಗೋಕರ್ಣದ ಶೈವ ನೀಲಕಂಠಾಚಾರ್ಯ
ಶಂಕರರವಾದಕ್ಕೆ ಸೋತು ಶರಣಾದ
ಸೌರಾಷ್ಟ್ರದಲ್ಲಿ ತಮ್ಮ ಭಾಷ್ಯವನ್ನು
ಪ್ರಚಾರವನ್ನು ಮಾಡಿದರು ವಾದಿಗಳ ಸೋಲಿಸಿ ಗೆದ್ದರು || ೧೪೧ ||

ಯಾತ್ರೆಯ ಮಾಡುವಾಗ ಶ್ರೀ ಶಂಕರರು
ವೈದಿಕ ಧರ್ಮವು ಸ್ಥಿರವಾಗಿರಲು
ಮೂರು ದಿಕ್ಕಿನಲ್ಲೂ ಸೂಕ್ತ ಸ್ಥಳದಲಿ
ಆಮ್ನಾಯ ಪೀಠವನ್ನು ಸ್ಥಾಪನೆ ಮಾಡಿದರು || ೧೪೨ ||

ದ್ವಾರಕೆಗೆ ತೆರಳಿ ವೈಷ್ಣವಾದಿಗಳ
ವಾದದಿ ಸೋಲಿಸಿ ಶ್ರೀಶಂಕರರು
ವೈದಿಕ ಸಿದ್ಧಾಂತ ಅಲ್ಲಲ್ಲಿ ಬೋಧಿಸುತ
ಯಾತ್ರೆಯನ್ನು ಮಾಡುತ್ತ ಉಜ್ಜಯಿನಿಯನ್ನು ತಲುಪಿದರು || ೧೪೩ ||

ಪಂಡಿತೋತ್ತಮ ಭಾಸ್ಕರ ಭಟ್ಟನಲ್ಲಿ
ವಿಸ್ಮಯಕಾರಿ ವಾದ ಮಾಡಿ ಸೋಲಿಸಿ
ಜೈನರ ತಾರ್ಕಿಕರ ಎಲ್ಲರ ಜಯಿಸಿದರು
ಎಲ್ಲಾ ಪ್ರತಿವಾದಿಗಳನ್ನೂ ಸೋಲಿಸಿ ಜಯವ ಗಳಿಸಿದರು || ೧೪೪ ||

ಶಿಷ್ಯರೊಂದಿಗೆ ಭಾರತದಾದ್ಯಂತ
ದಿಗ್ವಿಜಯ ಯಾತ್ರೆಯ ಮಾಡಿ ಶಂಕರರು
ಅದ್ವೈತ ಸಿದ್ಧಾಂತ ಪ್ರತಿಷ್ಠಾಪಿಸಿದರು
ಶ್ರೀ ಶಂಕರರ ಕೀರ್ತಿಯು ಎಲ್ಲಾ ಕಡೆಯೂ ಹರಡಿತು || ೧೪೫ ||

ಗಂಗಾತೀರದಲಿ ಶಂಕರರ ಕಾಣಲು
ಬಂದ ಗೌಡಪಾದರ ಕಂಡು ಶಂಕರರು
ಶ್ರದ್ಧಾ ಭಕ್ತಿಯಿಂದ ಪರಮ ಗುರುಗಳಿಗೆ
ಸಾಷ್ಟಾಂಗ ಪ್ರಣಾಮ ಮಾಡಿ ಸ್ವಾಗತಿಸಿದರು ಶಂಕರರು || ೧೪೬ ||

ತಾವು ಬರೆದ ಭಾಷ್ಯ ಗ್ರಂಥ ವಾರ್ತಿಕವ
ಕೃತಿಗಳ ಕೊಟ್ಟರು ಗೌಡಪಾದರಿಗೆ
ಓದಿ ಗೌಡಪಾದರು ಸಂತುಷ್ಟರಾಗಿ
ನಿನ್ನ ಬರಹ ಶ್ರೇಷ್ಠವಾಗಿದೆ ಏನಾದರೂ ವರ ಕೇಳೆಂದರು || ೧೪೭ ||

ಭಗವಾನ್ ನಿಮ್ಮ ದರ್ಶನವೇ ವರವು
ನನ್ನ ಹೃದಯ ಸದಾ ಬ್ರಹ್ಮಚಿಂತನದಲಿ
ಮಗ್ನವಾಗಲೆಂದು ನಾನು ನಿಮ್ಮ ಬೇಡುವೆ
ಎಂದ ಶಂಕರಾಚಾರ್ಯರಿಗೆ ತಥಾಸ್ತು ಎಂದ ಗೌಡಪಾದರು || ೧೪೮ ||

ಪ್ರಕೃತಿ ಸೌಂದರ್ಯ ಸಮೃದ್ಧ ಕಾಶ್ಮೀರ
ವಿದ್ಯಾ ವೈಭವಕೆ ಬಹಳ ಪ್ರಸಿದ್ಧ
ಘನವಿದ್ವಾಂಸರ ಸಂಸ್ಕೃತ ಸಾಹಿತ್ಯ
ಅಮೂಲ್ಯವಾದ ಕೃತಿಗಳ ನಾನಾ ಶಾಖೆಗಳಿರುವುದು || ೧೪೯ ||

ದೇವಿ ಭಗವತಿ ಶ್ರೀಶಾರದಾಂಬೆ
ಕಾಶ್ಮೀರದಲ್ಲಿ ಅಧಿಷ್ಠಾತ್ರಿದೇವಿ
ಶಾರದೆ ಮಂದಿರದ ನಾಲ್ಕುದಿಕ್ಕುಗಳಿಗು
ಇರುವುದು ಮಹಾದ್ವಾರವು ಒಳಗಡೆ ಸರ್ವಜ್ಞಪೀಠವು || ೧೫೦ ||

ಈ ಮಂದಿರದ ದಕ್ಷಿಣದ ಬಾಗಿಲು
ಯಾವತ್ತು ತೆರೆಯದೆ ಮುಚ್ಚಿರುವ ವಿಷಯ
ತಿಳಿದು ಶಂಕರರು ಶಿಷ್ಯರೊಡಗೊಂಡು
ಕಾಶ್ಮೀರದ ಶಾರದೆಯ ಯಾತ್ರೆಗೆ ಹೊರಟು ಬಂದರು || ೧೫೧ ||

ಸರ್ವಜ್ಞಪೀಠವ ಏರಲರ್ಹನಾದ
ದಕ್ಷಿಣಭಾರತದ ಪಂಡಿತೋತ್ತಮ
ಇಲ್ಲದೆ ಬಾಗಿಲು ಮುಚ್ಚಿಯೆ ಇತ್ತು
ದಕ್ಷಿಣಾತ್ಯರ ಕಳಂಕವನ್ನು ತೊಳೆಯಲು ಬಂದರು ಶಂಕರರು || ೧೫೨ ||

ಶಾರದಾ ಮಂದಿರಕೆ ಬಂದ ಶಂಕರರು
ದಕ್ಷಿಣ ದ್ವಾರವ ತೆರೆಯಿರಿ ಎಂದರು
ಪಂಡಿತರೆಂದರು ನಿಮ್ಮ ಸರ್ವಜ್ಞತ್ವದ
ಪರೀಕ್ಷೆಯು ಮೊದಲಾಗಲಿ ಆಮೇಲೆ ಪ್ರವೇಶದ ಸಾಹಸವು || ೧೫೩ ||

ಶ್ರೀಶಂಕರರು ಸಂತೋಷದಿಂದ
ಅವರ ನಿಬಂಧನೆ ಒಪ್ಪಿಕೊಂಡರು
ಎಲ್ಲ ಶಾಸ್ತ್ರಜ್ಞಾನದ ವಿದ್ವಾಂಸರೆಲ್ಲರು
ಪರೀಕ್ಷೆಯನ್ನು ಮಾಡಲು ಅಲ್ಲಿಗೆ ಬಂದು ಸೇರಿದರು || ೧೫೪ ||

ಗುರುಶಂಕರರಿಗೆ ಒಬ್ಬೊಬ್ಬರಾಗಿ
ಎಲ್ಲ ಶಾಸ್ತ್ರಗಳ ಪ್ರಶ್ನೆ ಕೇಳಿದರು
ವಿಚಲಿತರಾಗದೆ ಪ್ರಶ್ನೆಗುತ್ತರಿಸಿ
ಎಲ್ಲಾ ವಿದ್ವಾಂಸರನ್ನು ಸೋಲಿಸಿ ಜಯಗಳಿಸಿದರು ಆಚಾರ್ಯರು || ೧೫೫ ||

ಅದ್ವೈತ ತತ್ತ್ವದ ಸಿದ್ಧಾಂತ ಒಪ್ಪಿ
ದಕ್ಷಿಣದ್ವಾರವ ತೆರೆದು ಪಂಡಿತರು
ಗೌರವಪೂರ್ವಕ ಎದುರುಗೊಂಡು
ಹರ್ಷೋದ್ಗಾರದಿ ಪುಷ್ಪವೃಷ್ಟಿಸಿ ಸ್ವಾಗತಿಸಿದರು ಶಂಕರರ || ೧೫೬ ||

ದೇವಾಲಯವನ್ನು ಪ್ರವೇಶಿಸಿ
ಶಾರದಾದೇವಿಗೆ ನಮಿಸಿದರು
ದೇವಿಯ ಪ್ರಶ್ನೆಗೆ ಸರಿ ಉತ್ತರಿಸಿ
ಸರ್ವಜ್ಞ ಪೀಠಾರೋಹಣಕೆ ದೇವಿಯ ಅನುಮತಿ ಪಡೆದರು || ೧೫೭ ||

ಶಂಕರರನ್ನು ಪದ್ಮಪಾದಾಚಾರ್ಯರು
ಸರ್ವಜ್ಞಪೀಠದ ಬಳಿ ಕರೆದೊಯ್ದರು
ಜ್ಞಾನ ಸಿಂಹಾಸನವಾಗಿರುವ
ಸರ್ವಜ್ಞ ಪೀಠವನ್ನೇರಿ ಕಂಗೊಳಿಸಿದರು ಭಗವತ್ಪಾದರು || ೧೫೮ ||

ಭಗವತ್ಪಾದ ಶ್ರೀಶಂಕರರು
ತಮ್ಮ ಶಿಷ್ಯರೆಲ್ಲರ ಒಂದೆಡೆ ಕರೆದು
ಪ್ರಿಯಯತಿ ಶ್ರೇಷ್ಠರೆ ಭರತಖಂಡದಲಿ
ವೈದಿಕ ಧರ್ಮವು ಎಂದೆಂದು ಸ್ಥಿರವಾಗಿರಬೇಕೆಂದರು || ೧೫೯ ||

ನಾಲ್ಕು ದಿಕ್ಕು ಸ್ಥಾಪಿಸಿದ ಆಮ್ನಾಯ ಪೀಠದಲ್ಲಿ
ದಕ್ಷಿಣಾಮ್ನಾಯ ಶೃಂಗೇರಿಯಲಿ
ಶಾರದಾಪೀಠಕೆ ಅಧಿಪತಿಯನ್ನಾಗಿ
ಸುರೇಶ್ವರರನ್ನು ನೇಮಿಸಿರುವೆ ಎಂದರು ಶ್ರೀಶಂಕರರು || ೧೬೦ ||

ಪಶ್ಚಿಮಾಮ್ನಾಯ ದ್ವಾರಕೆಯಲ್ಲಿ
ದ್ವಾರಕಾಪೀಠಕೆ ಅಧಿಪತಿಯನ್ನಾಗಿ
ಪದ್ಮಪಾದರನ್ನು ನೇಮಿಸಿರುವೆ
ಎಂದರು ಆಚಾರ್ಯರು ಭಗವತ್ಪಾದ ಶಂಕರರು || ೧೬೧ ||

ಉತ್ತರಾಮ್ನಾಯ ಬದರಿಯಲ್ಲಿ
ಜ್ಯೋತಿರ್‌ಪೀಠಕೆ ಅಧಿಪತಿಯನ್ನಾಗಿ
ತೋಟಕರನ್ನು ನೇಮಿಸಿರುವೆ
ಎಂದರು ಯತಿವರರು ಗುರು ಶ್ರೀಶಂಕರರು || ೧೬೨ ||

ಪೂರ್ವಾಮ್ನಾಯ ಜಗನ್ನಾಥ ಪುರಿಯಲಿ
ಗೋವರ್ಧನಪೀಠಕೆ ಅಧಿಪತಿಯನ್ನಾಗಿ
ಹಸ್ತಾಮಲಕರ ನೇಮಿಸಿರುವೆ
ಎಂದು ಆಜ್ಞಾಪಿಸಿದರು ಆಚಾರ್ಯ ಶಂಕರರು || ೧೬೩ ||

ದಕ್ಷಿಣ ದಿಕ್ಕಿನ ಶೃಂಗೇರಿಯಲ್ಲಿ
ಶಾರದಾಪೀಠದಲ್ಲಿ ಯಜುರ್ವೇದವು
ಪಶ್ಚಿಮ ದಿಕ್ಕಿನ ದ್ವಾರಕೆಯಲ್ಲಿ
ದ್ವಾರಕಾಪೀಠದಲ್ಲಿ ಸಾಮವೇದವು ಇರಲೆಂದರು || ೧೬೪ ||

ಉತ್ತರ ದಿಕ್ಕಿನ ಬದರಿಯಲ್ಲಿ
ಜ್ಯೋತಿರ್‌ಪೀಠದಲ್ಲಿ ಅಥರ್ವಣವೇದವು
ಪೂರ್ವ ದಿಕ್ಕಿನ ಪುರಿಯಲ್ಲಿ
ಗೋವರ್ಧನಪೀಠದಲ್ಲಿ ಋಗ್ವೇದವು ಇರಲೆಂದರು || ೧೬೫ ||

ಶ್ರೀಶಂಕರರು ಪ್ರಧಾನ ಶಿಷ್ಯರಿಗೆ
ಆಮ್ನಾಯ ಪೀಠದ ನಿರ್ವಹಣೆ ವಹಿಸಿ
ಕಾರ್ಯಪ್ರವೃತ್ತರಾಗಿ ಧರ್ಮಕಾರ್ಯ ನಡೆಸಿರಿ
ಎಂದು ಉಳಿದ ಶಿಷ್ಯರಿಗೆ ಅಲ್ಲಲ್ಲಿ ಧರ್ಮವ ರಕ್ಷಿಸಿರೆಂದರು || ೧೬೬ ||

ಸೂರ್ಯಗಣಪತ್ಯಂಬಿಕಾ ಶಿವವಿಷ್ಣುಸ್ಕಂದ
ಆರಾಧಕರೆಲ್ಲಾ ತಾವೇ ಮೇಲೆಂಬ
ಜಗಳವ ನಿಲ್ಲಿಸಿ ಅರಿವನು ಮೂಡಿಸಿ
ಪಂಚಾಯತನ ಪೂಜೆಯ ವಿಧಾನವನ್ನು ತಿಳಿಸಿದರು || ೧೬೭ ||

ಆರಾಧ್ಯದೇವರ ಮಧ್ಯದಲ್ಲಿರಿಸಿ
ಉಳಿದೆಲ್ಲ ದೇವರ ಸುತ್ತಲು ಇರಿಸಿ
ಆರಾಧ್ಯ ದೇವರ ಪರಿವಾರವೆಂದು
ತಿಳಿದು ಪೂಜಿಸಿರೆಂದರು ಷಣ್ಮತ ಸ್ಥಾಪಕರಾದರು || ೧೬೮ ||

ಗಣೇಶ ಅಂಬಿಕ ಶಿವವಿಷ್ಣುಸ್ಕಂದ
ಗುರುಗಳು ನದಿದೇವಿ ಮೊದಲಾದ ದೇವರ
ಭಕ್ತಿ ಮಹಿಮೆಯ ಸ್ತೋತ್ರವ ರಚಿಸಿ
ದೇವರ ಕೃಪೆಯನ್ನು ಪಡೆಯಲು ದಾರಿಯ ತೋರಿದರು || ೧೬೯ ||

ಮನುಷ್ಯ ಜೀವನ ಪಾವನವಾಗಲು
ಜ್ಞಾನ ಭಕ್ತಿ ವೈರಾಗ್ಯ ಮೊದಲಾದ
ಸಾತ್ವಿಕ ಗುಣದಿಂದ ಶೋಭಿಸಬೇಕು
ಭಗವಂತನ ಕೃಪೆಯನ್ನೂ ಪಡೆದುಕೊಳ್ಳಿರಿ ಎಂದರು || ೧೭೦ ||

ಜಗತ್ತು ಜೀವಿಗಳು ಮಾಯಾಕಲ್ಪಿತ
ಅಜ್ಞಾನ ಪ್ರಭಾವದಿ ನಿಜವೆನಿಸುವುದು
ದೃಢಮನದಲ್ಲಿ ಜ್ಞಾನಮಾರ್ಗದಲಿ
ಜನ್ಮವನ್ನು ಸಾರ್ಥಕವ ಮಾಡಿಕೊಳ್ಳಿರೆಂದರು ಯತಿವರರು || ೧೭೧ ||

ಆನಂದ ಸ್ವರೂಪವಾದುದು ಬ್ರಹ್ಮವು
ಕಣ್ಣಿಗೆ ಕಾಣುವ ಅನುಭವಕೆ ಸಿಗುವ
ಪ್ರಪಂಚಮಿಥ್ಯವು ಬ್ರಹ್ಮನ ತೋರಿಕೆಯು
ನಾವೇ ಅರಿವಿನ ಕಣ್ಣಲ್ಲಿ ನೋಡಿದರೆ ತಿಳಿಯುವುದು || ೧೭೨ ||

ಮತ್ತೆ ಹುಟ್ಟುವುದು ಮತ್ತೆ ಸಾಯುವುದು
ಮತ್ತೆ ತಾಯಗರ್ಭವ ಸೇರಿ ಮಲಗುವುದು
ಸಂಸಾರದ ಸಾಗರವನ್ನು ದಾಟಲು
ಎಲ್ಲರು ಮುರಾರಿ ಕೃಪೆಯನ್ನು ಪಡೆಯಿರಿ ಎಂದರು ಶಂಕರರು || ೧೭೩ ||

ಕ್ಷಣಮಾತ್ರದಲ್ಲಿ ನಾಶವಾಗುವಂತ
ಜನಬಲಧನಬಲ ಹಾಗೂ ಯೌವನಬಲ
ಇವುಗಳಿಂದಾಗಿ ಅಹಂಕಾರ ಪಡಬೇಡಿ
ಕಾಮಕ್ರೋಧ ಮೋಹಲೋಭ ಎಂಬ ಶತ್ರುವ ಬದಿಗೊತ್ತಿ || ೧೭೪ ||

ಆತ್ಮಜ್ಞಾನವಿಲ್ಲದ ನೂರಾರು ಜನ್ಮವ
ತಾಳಿದರು ಮುಕ್ತಿಯ ಪಡೆಯುವುದಿಲ್ಲ
ಕರ್ಮಾಚರಣೆಯು ಚಿತ್ತಶುದ್ಧಿಗಾಗಿ
ಮುಕ್ತಿಯ ಲಾಭಕೆ ಅಲ್ಲ ಮೋಕ್ಷಸಾಧಕವೂ ಅಲ್ಲ || ೧೭೫ ||

ನಿಷ್ಕಾಮ ಮನದಲಿ ಕರ್ಮ ಆಚರಿಸಿ
ಪಾಪರಾಶಿಗಳ ದೂರ ತೊಲಗಿಸಿ
ಆತ್ಮಧ್ಯಾನದಲ್ಲಿ ನಿತ್ಯ ನಿರತರಾಗಿ
ತದನಂತರ ನೀವೇ ಬ್ರಹ್ಮವಾಗಿ ವಿರಾಜಿಸುವಿರಿ || ೧೭೬ ||

ಭಗವತ್ಪಾದ ಶ್ರೀ ಶಂಕರರು
ಶಿಷ್ಯರೆಲ್ಲರಿಗೂ ಆದೇಶಿಸಿದರು
ನೀತಿನಿಯಮಗಳ ಸದ್ವಿಚಾರಗಳ
ಅನುಸರಿಸಿ ಸನ್ಮಾರ್ಗದಿಂದ ನಡೆಯಲು ಹೇಳಿದರು || ೧೭೭ ||

ಅದ್ವೈತ ದರ್ಶನದ ಸಂರಕ್ಷಣೆಗೆ
ಈ ಯತಿ ಪರಂಪರೆ ಮುಂದುವರಿಯಲಿ
ಕರ್ತವ್ಯ ಮಾಡುತ ಕೀರ್ತಿವಂತರಾಗಿ
ನಿಮಗೆಲ್ಲರಿಗೂ ಭಗವಂತನು ಸದಾ ಅನುಗ್ರಹಿಸಲೆಂದರು || ೧೭೮ ||

ಗುರು ಶಂಕರರಾ ಅಗಲಲಾರದೆ
ಗುರುವಿನಾಜ್ಞೆಯ ಮೀರಲಾರದೆ
ಹೊರಟರೆಲ್ಲರು ಗುರುವಿಗೆ ನಮಿಸಿ
ಆಶೀರ್ವದಿಸಿದ ಶಂಕರರು ಬದರಿಯತ್ತ ಹೊರಟರು || ೧೭೯ ||

ಬದರಿ ಆಶ್ರಮಕೆ ಬಂದ ಶಂಕರರು
ಪಾತಂಜಲಯೋಗ ಶಾಸ್ತ್ರಾಭ್ಯಾಸದಲ್ಲಿ
ತೊಡಗಿದವರಿಗೆ ಸೂತ್ರಭಾಷ್ಯಗಳ
ಪಾಠವನ್ನು ಬೋಧಿಸಿ ಕೇದಾರಕೆ ಪ್ರಯಾಣ ಮಾಡಿದರು || ೧೮೦ ||

ಕೇದಾರದಲ್ಲಿ ಎಲ್ಲ ಮಹರ್ಷಿಗಳು
ಸಿದ್ಧರು ಸಕಲರು ದೇವತಾ ಗಣಗಳು
ಬಂದು ಎದುರ್ಗೊಂಡು ಶ್ರೀಶಂಕರರನು
ಕೈಲಾಸಕೆ ಬನ್ನಿರೆಂದು ಪ್ರಾರ್ಥನೆ ಮಾಡಿದರು || ೧೮೧ ||

ಹೇ ಮಹಾದೇವ ಸಮಸ್ತ ಪ್ರಪಂಚದ
ಸೃಷ್ಠಿ ಸ್ಥಿತಿ ಲಯಗಳ ಕಾರಣಕರ್ತನೆ
ಸರ್ವಜ್ಞನಾದ ಪರಬ್ರಹ್ಮರೂಪನೆ
ಲೋಕಕೆ ಸನ್ಮಾರ್ಗವ ತೋರಿದ ಮಹಾತ್ಮನೇ || ೧೮೨ ||

ಪರಿಹರಿಸಲಾಗದ ವಿಪತ್ತು ನಿವಾರಿಸಿ
ಸಂರಕ್ಷಿಸುವ ಸಮರ್ಥ ನೀನೇ
ಸಮಸ್ತರಿಗಾಗಿ ಅವತರಿಸಿ ಬಂದು
ಈ ಮಹತ್ಕಾರ್ಯವನ್ನು ನೆರವೇರಿಸಿ ಉದ್ಧರಿಸಿದೆ || ೧೮೩ ||

ಪರಮ ಕರುಣಾಳು ಹೇ ಜಗದ್ಗುರುವೇ
ಸನಾತನ ಧರ್ಮವ ರಕ್ಷಣೆ ಮಾಡಿದೆ
ಶಿವ ಸ್ವರೂಪಿಯಾಗಿ ಕೈಲಾಸಕ್ಕೆ
ಬರಬೇಕೆಂದು ನಾವೆಲ್ಲರೂ ಪ್ರಾರ್ಥಿಸುವೆವು ಹೇ ದೇವಾ || ೧೮೪ ||

ಎಲ್ಲರ ಪ್ರಾರ್ಥನೆಗೆ ಶ್ರೀಶಂಕರರು
ಪರಮೇಶ್ವರನ ರೂಪ ಧರಿಸಿದರು
ನಂದಿಯನೇರಿ ಪರಾಖು ಕೇಳುತ
ಪರಮಾನಂದಮಯವಾದ ಸ್ವಸ್ಥಾನ ಕೈಲಾಸ ಸೇರಿದರು || ೧೮೫ ||

ದಿವ್ಯಾಂಶ ಸಂಭೂತ ಶ್ರೀಶಂಕರರು
ಸುಜ್ಞಾನವಂತರು ಸುಬೋಧಕರು
ಜ್ಞಾನದ ಅರಿವು ಮೂಡಿಸಿದವರು
ಲೋಕೋದ್ಧಾರಕ ಯತಿವರರು ಪರಬ್ರಹ್ಮ ಸ್ವರೂಪರು || ೧೮೬ ||

ಎಂಟನೇ ವಯಸ್ಸಲಿ ಚತುರ್ವೇದ ತಿಳಿದರು
ಹನ್ನೆರಡರ ವಯಸ್ಸಲಿ ಸರ್ವಶಾಸ್ತ್ರಬಲ್ಲರು
ಹದಿನಾರನೆ ವಯಸ್ಸಲಿ ಭಾಷ್ಯವ ಬರೆದರು
ಮೂವತ್ತೆರಡನೆ ವಯಸ್ಸಲಿ ಬ್ರಹ್ಮೈಕ್ಯರಾದರು ಶಂಕರರು || ೧೮೭ ||

ದೇಶದಲ್ಲಿ ಧಾರ್ಮಿಕ ಕ್ಷೆಭೆಯಾಗಲು
ಸನಾತನ ಧರ್ಮ ರಾಷ್ಟ್ರದ ಏಕತೆಗೆ
ದೇಶವ ರಕ್ಷಿಸಿ ಧರ್ಮ ಸ್ಥಾಪನೆಗೆ
ಅವತರಿಸಿದ ಪರಶಿವನೇ ಭಗವತ್ಪಾದರು ಶಂಕರರು || ೧೮೮ ||

ಶ್ರೀಶಂಕರರು ತಮ್ಮ ಜೀವನವ
ಜನರ ಬದುಕನು ಸುಖಮಯ ಮಾಡಲು
ಅಪಾರ ಶ್ರಮದಿ ಸುಗುಣ ಸಂಪನ್ನರ
ಮಾಡಲು ಈ ದೇಶವನ್ನು ಕಾಲ್ನಡಿಗೆಯಲಿ ಸಂಚರಿಸಿದರು || ೧೮೯ ||

ವಿಶ್ರಾಂತಿ ಬಯಸದೆ ಶ್ರೀಶಂಕರರು
ನಾನಾವಿಧ ಪಂಥ ಬುಡಕಟ್ಟು ಜನರ
ಅಜ್ಞಾನದೊಳಗೆ ಮುಳುಗಿದವರ
ಎತ್ತಿ ಸನ್ಮಾರ್ಗಕ್ಕೆ ತರಲು ಸರ್ವಸಾಹಸ ಮಾಡಿದರು || ೧೯೦ ||

ಮತದ ಹೆಸರಲಿ ನಡೆಯುತಲಿದ್ದ
ಅನಪೇಕ್ಷಿತ ದುಷ್ಟಾಚಾರವ
ನಿರ್ಮೂಲನೆ ಮಾಡಿ ಶ್ರೀಶಂಕರರು
ಪರಸ್ಪರ ವಿರೋಧದವರ ಹೊಂದಾಣಿಕೆಯನು ಮಾಡಿದರು || ೧೯೧ ||

ನಾನಾ ರೀತಿಯಲಿ ತೊಳಲಾಟಪಡುವ
ಜನಕೆ ಆಧ್ಯಾತ್ಮದ ಅಮೃತಧಾರೆಯ
ತಂಪನ್ನೆರೆದು ಗುರಿ ಸಾಧಿಸಲು
ಏಕಾತ್ಮವಾದ ಸೂತ್ರದಿಂದ ವಿಶ್ವಬಂಧುತ್ವ ಬೆಳೆಸಿದರು || ೧೯೨ ||

ಭಾರತ ದೇಶದ ಇತಿಹಾಸದಲ್ಲಿ
ಮಹತ್ಸಾಧನೆಯಲಿ ಆದರ್ಶವಾದರು
ಧ್ರುವತಾರೆಯಂತೆ ಪ್ರಕಾಶಮಾನರು
ಧರ್ಮಪ್ರವರ್ತಕರು ಪ್ರಸಿದ್ಧರಾದ ಆಚಾರ್ಯರು || ೧೯೩ ||

ಮಹಾಮಹಿಮರು ಶ್ರೀಶಂಕರರು
ಅವರು ರಚಿಸಿದ ಸ್ತೋತ್ರಗಳೆಲ್ಲವೂ
ಲಾಲಿತ್ಯ ಕೋಮಲತೆ ರಸಭಾವಾಲಂಕಾರ
ಸಂಪನ್ನವಾಗಿ ಭಕ್ತಿಯ ಮಾರ್ಗವ ತೋರುವ ಶಕ್ತಿಯು || ೧೯೪ ||

ಉಪನಿಷತ್ತು ಬ್ರಹ್ಮಸೂತ್ರಭಾಷ್ಯ
ಸರ್ವವೇದಾಂತ ಸಿದ್ಧಾಂತ ಸಾರ
ಶಂಕರರ ಸಿದ್ಧಾಂತ ಅತ್ಯಮೂಲ್ಯವು
ನವಚೈತನ್ಯಪ್ರದವು ಜೀವಕೆ ಮೋಕ್ಷದಾಯಕವು || ೧೯೫ ||

ಜಯವು ಜಯವು ಗುರುವರ್ಯರಿಗೆ
ಜಯ ಮಂಗಳವು ಯತಿವರ್ಯರಿಗೆ
ಜಯವು ಜಯವು ಪರಮಶ್ರೇಷ್ಠರಿಗೆ
ಜಯ ಜಯ ಮಂಗಳವು ಶ್ರೀ ಶಂಕರ ಭಗವತ್ಪಾದರಿಗೆ || ೧೯೬ ||