ಆಂಜನೇಯ ಸ್ತುತಿ

ಹೇ ಹನುಮ ಹೇ ಹನುಮ ಪವನ ನಂದನಅಂಜನಾಕುವರ ಆಂಜನೇಯ ನಮನ || ಪ ||
ಅನುದಿನ ನಿನ್ನನು ಭಜಿಸುವ ಮನವನುದಯದಿಂದೆನಗೆ ಪಾಲಿಸು ದೇವ || ಅ.ಪ ||
ಶ್ರೀ ಸದ್ಗುರುಗಳ ದಿವ್ಯ ಚರಣಕಮಲಗಳ ಧೂಳಿನಿಂದಲೆ ಎನ್ನ
ಮನೋರೂಪಿ ಕನ್ನಡಿಯ ಶ್ರದ್ಧೆಯಿಂದಲಿ ನಿರ್ಮಲಗೊಳಿಸಿ ನಾ
ಧರ್ಮ ಅರ್ಥ ಕಾಮ ಮೋಕ್ಷವು ಎಂಬ
ಚತುರ್ವಿಧ ಪುರುಷಾರ್ಥರೂಪಿ ಫಲಗಳ
ದಯಪಾಲಿಸುವಂತಹ ರಘುವರನ
ಮಹಿಮೆಯ ವರ್ಣಿಸಿ ಹಾಡುವೆನು|| ೧ ||
ಪರಶಿವನೆ ಅವತರಿಸಿದ ವಾಯುಸುತನಾಗಿ ರಾಮಚಂದ್ರನಿಗಾಗಿ
ಶಿವನವತಾರಿ ತೇಜಸ್ಸಿಗೆ ಪ್ರತಾಪಕೆ ಜಗತ್ತೆ ನಮಿಸುವುದು ತಲೆಬಾಗಿ
ನೀನೇ ಸಾಕ್ಷಾತ್ ಪರಮೇಶ್ವರ
ಸದ್ಗುಣ ಸಂಪನ್ನ ಅತ್ಯಂತ ಚತುರ
ಅಂಜನಾದೇವಿಯ ಪ್ರೀತಿಯ ಕುವರ
ಹನುಮಂತನೆಂದು ಪಡೆದೆ ಹೆಸರ|| ೨ ||
ಸ್ವರ್ಣದಂತ ಕಾಂತಿಯ ಸುಂದರ ರೂಪ ಶೋಭಾಯಮಾನವು
ಚಂದದ ಕರ್ಣಕುಂಡಲ ಅಂದದ ಗುಂಗುರು ದಟ್ಟ ಕೇಶರಾಶಿಯು
ವಜ್ರದಂಥ ಗದೆಯು ಧ್ವಜವು ಕೈಯ್ಯಲಿ
ಪವಿತ್ರ ಯಜ್ಞೋಪವೀತ ಹೆಗಲಲಿ
ವಿಶೇಷ ಕಾಂತಿಯು ಅಲಂಕಾರದಲಿ
ಕಾರ್ಯದಿ ನಿರತ ನೀ ಉತ್ಸಾಹದಲಿ|| ೩ ||
ಮಾರುತಾತ್ಮಜ ನೀನು ಮಹಾವೀರನು ಅತುಲ ಪರಾಕ್ರಮಿಯು
ದಿವ್ಯ ತೇಜಸ್ವಿಯೇ ನಿನ್ನ ದೇಹ ವಜ್ರದಂತೆ ಅಗಾಧ ಬಲಯುತವು
ನೀನು ಎಲ್ಲರ ದುರ್ಬುದ್ಧಿಯನು
ತ್ವರಿತದಲ್ಲಿ ನಾಶವ ಮಾಡುವೆ
ಸದ್ಬುದ್ಧಿ ಇರುವರ ಸಂಗ ದೊರಕಿಸುವೆ
ನಿನ್ನ ಅನುಗ್ರಹವೇ ರಕ್ಷಾಕವಚವು|| ೪ ||
ಹೇ ಹನುಮಂತ ನೀನು ಸುಜ್ಞಾನವಂತ ಸುಗುಣಗಳ ಸಾಗರ
ನಿನ್ನ ತೇಜಸ್ಸಿನ ಪ್ರಕಾಶ ಮೂರ್ಲೋಕದಲ್ಲು ಶೋಭಾಯಮಾನಕರ
ಬಾನಲಿ ಕಂಡ ಹೊಂಬಣ್ಣದ ರವಿಯ
ಮಧುರ ಹಣ್ಣೆಂದು ತಿಳಿದು ಆಕಾಶಕೆ
ಸಹಸ್ರ ಯೋಜನ ಲೀಲಾಜಾಲದಿ
ಹಾರಿದ ಮಹಾಧೀರ ಹನುಮನೆ|| ೫ ||
ವಾನರ ಶ್ರೇಷ್ಠನೇ ನಿನ್ನ ಯಮ ಮತ್ತು ಕುಬೇರ ದೇವದೇವತೆಗಳೆಲ್ಲರು
ಘನವಿದ್ವಾಂಸರೆಲ್ಲರು ಮಹಾನ್ ಕವಿಗಳು ನಿನ್ನ ಗುಣ ಮೆಚ್ಚಿ ವರ್ಣಿಸುವರು
ನಾರದ ಸನಕಾದಿ ಮುನಿಗಳು
ಆದಿಶೇಷ ಬ್ರಹ್ಮ ಶಾರದೆ ಸಹಿತ
ಮೂರು ಲೋಕವು ನಿನ್ನ ಗುಣಗಳ
ಹಾಡಿ ಹೊಗಳುವರು ಕೀರ್ತಿವಂತನೆ|| ೬ ||
ಅರಣ್ಯ ವಾಸದಲ್ಲಿರುವ ರಾಮಲಕ್ಷ್ಮಣರ ಕಂಡು ನೀ ಹರುಷದಲಿ
ಶ್ರೀರಾಮ ಚಂದ್ರನ ಜೊತೆಯಲ್ಲೆ ಉಳಿದೆ ಸೇವೆ ಮಾಡುತ ಭಕ್ತಿಯಲಿ
ರಾಜ್ಯ ಕಳೆದುಕೊಂಡ ಸುಗ್ರೀವನಿಗೆ
ಶ್ರೀರಾಮನೊಡನೆ ಸ್ನೇಹವ ಬೆಳೆಸಿ
ದುಷ್ಟ ವಾಲಿಯ ಯುಕ್ತಿಯಿಂದ ವಧಿಸಿ
ಮರಳಿ ಸುಗ್ರೀವಗೆ ರಾಜ್ಯವ ಕೊಡಿಸಿದೆ|| ೭ ||
ರಾಮನಿತ್ತ ಮುದ್ರಿಕೆಯನ್ನು ಬಾಯಲ್ಲಿಟ್ಟುಕೊಂಡು ಸಮುದ್ರವ ನೀ ದಾಟಿದೆ
ಲಂಕಾಪಟ್ಟಣ ತಲುಪಿ ಸೀತಾಮಾತೆಯು ಇರುವಂಥ ಸ್ಥಳ ಹುಡುಕಿದೆ
ಅಶೋಕ ವನದಲಿ ಸೀತಾಮಾತೆಗೆ
ರಾಮನ ಮುದ್ರಿಕೆ ತೋರಿಸಿ ನಮಿಸಿದೆ
ಲಂಕೆಲಿ ಬಾಲಕೆ ಹಚ್ಚಿದ ಬೆಂಕಿಲಿ
ಲಂಕೆಯ ಸುಟ್ಟೆ ರಾಮದೂತನೆ|| ೮ ||
ರಾವಣನೆದುರು ಯುದ್ಧಕ್ಕೆ ಲಂಕೆಗೆ ಹೋಗಲು ವಾನರ ಸೈನ್ಯ ಕಟ್ಟಿದೆ
ವಾನರರಿಂದ ಸಮುದ್ರಕ್ಕೆ ಸೇತುವೆ ನಿರ್ಮಿಸಿ ಶ್ರೀರಾಮಗೆ ನೆರವಾದೆ
ಯುದ್ಧದಿ ಬೃಹದಾಕಾರವ ಧರಿಸಿದೆ
ರಾಕ್ಷಸ ಸೈನ್ಯವ ಕಂಡು ಗರ್ಜಿಸಿದೆ
ದುಷ್ಟ ಅಸುರರ ಭರದಲಿ ವಧಿಸಿದೆ
ವಾನರ ಸೈನ್ಯಕೆ ಹುರಿದುಂಬಿಸಿದೆ|| ೯ ||
ಯುದ್ಧ ಭೂಮಿಯಲಿ ಲಕ್ಷ್ಮಣ ಮೂರ್ಛಿತನಾದ ಶ್ರೀರಾಮ ದುಃಖಿತನಾದ
ಸಂಜೀವಿನಿ ದಿವ್ಯೌಷಧವ ನೀನೇ ತಂದುಕೊಟ್ಟೆ ಲಕ್ಷ್ಮಣ ತಕ್ಷಣ ಬದುಕಿದ
ಲಕ್ಷಣನನ್ನು ಬದುಕಿಸಿದ ನಿನ್ನನು
ಸಂತಸದಿಂದ ಎದೆಗಪ್ಪಿಕೊಂಡನು
ನಿನ್ನ ಪ್ರಶಂಸಿಸಿ ಶ್ರೀರಘುವೀರನು
ಪ್ರಿಯ ಭರತನಿಗೆ ಸಮಾನ ಎಂದನು|| ೧೦ ||
ರಾವಣ ಹತನಾದಾಗ ಶಿಷ್ಟ ವಿಭೀಷಣಗೆ ರಾಮನ ಕೃಪೆ ದೊರಕಿಸಿದೆ
ರಾಮನನುಜ್ಞೆಯಂತೆ ವಿಭೀಷಣನನ್ನು ಲಂಕಾಧಿಪತಿ ಮಾಡಿದೆ
ರಾಮಭಕ್ತ ನಿನ್ನ ಅನುಗ್ರಹವಿದ್ದರೆ
ಎಲ್ಲರಿಗೂ ಶ್ರೀರಾಮಚಂದ್ರನ
ದರ್ಶನ ಭಾಗ್ಯವು ಅನುದಿನ ಸಿಗುವುದು
ಶ್ರೀರಾಮನಿಗೆ ಅತ್ಯಂತ ಪ್ರಿಯನೆ|| ೧೧ ||
ಸಾರ್ವಭೌಮ ರಾಮನ ಸಕಲ ಕಾರ್ಯಗಳ ಸಫಲಗೊಳಿಸಿದೆ ನೀನು
ಜಾನಕಿ ಮಾತೆಯ ಹಾರೈಕೆಯಿಂದ ಕೊಡುವೆ ವರಪ್ರಸಾದವನು
ರಾಮನಾಮ ರಸಾಮೃತ ಪಾನವ
ಮಾಡುವ ನಿನ್ನ ನಾಮ ಭಜಿಸಿದರೆ
ರಾಮ ದರ್ಶನದಿ ಜನ್ಮಾಂತರದ
ಪಾಪ ನಾಶವಾಗಿ ಪುನರ್ಜನ್ಮ ಬರದು|| ೧೨ ||
ನಿನ್ನಲಿ ಶರಣಾಗಿರುವ ಭಕ್ತರಿಗೆಲ್ಲರಿಗೂ ಸುಖ ಸಂಪತ್ತು ಲಭಿಸುವುದು
ರಕ್ಷಕ ನೀನಿರುವಾಗ ಜನನ ಮರಣದ ಭವರೋಗದ ಭಯವಿರದು
ನಿನ್ನ ತೇಜಸ್ಸಿಗೆ ಸಮನಾರಿಲ್ಲ
ದೃಢ ಭಕ್ತಿಯಲಿ ನಿನ್ನ ಸ್ಮರಿಸಿದರೆ
ಭೂತಪಿಶಾಚಿಗಳು ದುಷ್ಟಶಕ್ತಿಗಳು
ಸುಳಿಯಲಾರರು ಎಲ್ಲೆಲ್ಲು ಹನುಮನೇ|| ೧೩ ||
ನಿನ್ನಯ ಅನುಗ್ರಹದಿಂದ ಜಗತ್ತಿನ ಕಠಿಣದ ಕಾರ್ಯ ಸುಲಲಿತಗೊಳಿಸುವೆ
ಭಕ್ತರ ಮನದಿಚ್ಛೆ ಪೂರೈಸಿ ಪರಮಾತ್ಮ ಕೊಡುವ ಫಲವ ದಯ ಪಾಲಿಸುವೆ
ನಿರಂತರ ನಿನ್ನ ನಾಮ ಜಪಿಸಿದರೆ
ಕಷ್ಟಕಾರ್ಪಣ್ಯವು ತೊಲಗಿ ಹೋಗುವುದು
ದೃಢ ಸಂಕಲ್ಪದಿ ಧ್ಯಾನಿಪ ಭಕ್ತರ
ಸಂಕಟದಿಂದ ಪಾರು ಮಾಡುವೆ|| ೧೪ ||
ನಾಲ್ಕು ಯುಗಗಳಲ್ಲಿಯೂ ನಿನ್ನ ಪ್ರತಾಪವು ಜಗಜ್ಜನಿತವಾಗಿದೆ
ನಿನ್ನ ಭಕ್ತಿಯ ತೇಜಸ್ಸು ಎಲ್ಲೆಲ್ಲು ಪ್ರಕಾಶಿಸಿ ಜಗತ್ಪ್ರಸಿದ್ಧವಾಗಿದೆ
ಸಾಧುಸಂತರ ಸತ್ಪುರುಷರ ರಕ್ಷಿಸಿ
ಅಸುರಾದಿ ದುಷ್ಟರ ನಾಶ ಮಾಡುವೆ
ನಿನ್ನ ಈ ಕಾರ್ಯಕೆ ರಾಮಚಂದ್ರನು
ಮೆಚ್ಚಿಕೊಂಡು ನಿನ್ನ ಶ್ಲಾಘಿಸುವನು|| ೧೫ ||
ಶ್ರದ್ಧಾಭಕ್ತಿಯ ನಿನ್ನ ಭಕ್ತರು ರಾಮಭಕ್ತನೆಂದು ಖ್ಯಾತಿಯ ಗಳಿಸುವರು
ತೃಪ್ತಿಯ ಜೀವನ ನಡೆಸಿ ಮರಣಾನಂತರ ಪರಮ ಪದ ಪಡೆಯುವರು
ಕೇಸರಿ ನಂದನ ನಿನ್ನ ನಂಬಿದವರು
ಅನನ್ಯ ಭಾವದಿ ಭಜಿಸುತಲಿರುವರು
ಸಂಕಟದಿಂದ ಪಾರಾಗುವರು
ಸರ್ವ ವಿಧದ ಸುಖ ಪಡೆಯುವರು|| ೧೬ ||
ಜಿತೇಂದ್ರಿಯನೇ ನೀನು ಎಲ್ಲರ ಪ್ರಾರ್ಥನೆಯ ದಯೆ ತೋರಿ ಆಲಿಸುವೆ
ಬುದ್ಧಿಹೀನರೆಲ್ಲರಿಗೂ ಕರುಣೆ ಬೀರುತ ಒಳ್ಳೆಯ ಬುದ್ಧಿ ಕರುಣಿಸುವೆ
ಬಲ ಬುದ್ಧಿ ಜ್ಞಾನ ಇತ್ಯಾದಿ ಕೊಟ್ಟು
ಅಜ್ಞಾನ ಕ್ಲೇಶ ಮತ್ತು ಭ್ರಮೆಯನ್ನು
ರಾಗದ್ವೇಷಾದಿ ಎಲ್ಲ ಬವಣೆಗಳ
ಜನನ ಮರಣದ ವಿಕಾರ ತೊಲಗಿಸುವೆ|| ೧೭ ||
ಸೀತಾರಾಮಲಕ್ಷ್ಮಣರು ನೆಲೆಯಾಗಿರುವರು ನಿನ್ನ ವಿಶಾಲ ಹೃದಯದಲಿ
ಪರಮಾತ್ಮನ ದಿವ್ಯವಾದ ಸಾನ್ನಿಧ್ಯವ ಭಕ್ತರಿಗೆ ಒದಗಿಸುವೆ ನೀ ದಯದಲಿ
ಶ್ರೀರಾಮಚಂದ್ರನ ದಿವ್ಯಚರಿತೆಯ
ದೃಢಭಕ್ತಿಯಿಂದ ಭಜಿಸುವೆ ನೀನು
ನಿನ್ನ ನಾಮವ ಸ್ಮರಣೆ ಮಾಡುವ
ಭಕ್ತರಿಗೆ ಮುಕ್ತಿಯ ನೀ ದೊರಕಿಸುವೆ|| ೧೮ ||