ಸುಬ್ರಹ್ಮಣ್ಯ ಸ್ತುತಿ

ಸದಾ ಬಾಲಕನಂತೆ ತೋರುವ ವಿಘ್ನವಿನಾಶಕನೆ
ಗಜಮುಖ ಗಣಪನೆ ಶಿವನಿಂದ ಮಾನ್ಯನೆ
ಬ್ರಹ್ಮಾದಿ ವಂದಿತನೆ ಗಣೇಶನೆ
ದಿವ್ಯ ಸುಂದರ ಮೂರ್ತಿಯೇ ನಮಗೆಲ್ಲ ಸಂಪತ್ಪ್ರದವಾಗಲಿ || ೧ ||

ಗದ್ಯಪದ್ಯ ರಚನೆಯ ಶೈಲಿಯು ನನಗೇನೂ ತಿಳಿಯದು
ವ್ಯಾಕರಣ ಪಾಂಡಿತ್ಯ ನನಗಿಲ್ಲವಾದರೂ
ಎನ್ನಯ ಹೃದಯದಲಿ ಷಣ್ಮುಖನು
ಚಿನ್ಮಯ ಶಕ್ತಿ ತುಂಬಿ ನನ್ನ ಮುಖದಿ ಮಾತನ್ನಾಡಿಸುವುದಚ್ಚರಿಯು || ೨ ||

ಮಯೂರ ವಾಹನನೆ ಸುಂದರನೆ ವೇದವೇದ್ಯನೆ
ಸಜ್ಜನರಲ್ಲಿರುವ ಬ್ರಾಹ್ಮಣ ಪ್ರಿಯನೆ
ಲೋಕದ ರಕ್ಷಕನೆ ಸದ್ಗುಣನೆ
ವೇದರೂಪಿ ದೇವನೆ ಶಿವಪುತ್ರ ಸುಬ್ರಹ್ಮಣ್ಯನೆ ವಂದಿಸುವೆ || ೩ ||

ತನ್ನಯ ಸನ್ನಿಧಿಗೆ ನಂಬಿ ಬಂದಿಹ ಭಕ್ತರಿಗೆ
ಸಂಸಾರಸಾಗರ ದಾಟುವರೆಂದು
ಸಮುದ್ರ ತೀರದಲಿ ಸೂಚಿಸುತ
ನೆಲೆಸಿದ ಕುಮಾರನೆ ಗೌರಿಸುತ ನಿನಗೆ ನಮಸ್ಕರಿಸುವೆ || ೪ ||

ಸಾಗರದಲ್ಲೇಳುವ ಅಲೆಗಳು ಶಾಂತವಾಗುವಂತೆ
ಸನ್ನಿಧಿಗೆ ಬಂದಾಗ ಭಕ್ತರ ದುಃಖಗಳು
ನಶಿಸಿ ಹೋಗುವುದೆಂದ ಕುಮಾರನ
ಹೃದಯಕಮಲದಲಿ ನಿರತವು ಭಕ್ತಿಯಿಂದ ಧ್ಯಾನಿಸುವೆ || ೫ ||

ತನ್ನಯ ಬೆಟ್ಟವನು ಹತ್ತಿದ ಭಕ್ತಜನರೆಲ್ಲರೂ
ಕೈಲಾಸದೊಳಗೆ ಹೋಗುವರೆನ್ನುತ
ಗಂಧಮಾದನದ ಗಿರಿಯಲಿ
ಇರುವ ಷಣ್ಮುಖನು ನಮಗೆಲ್ಲ ಸಂತಸವನು ನೀಡಲಿ || ೬ ||

ಕಡಲ ತೀರದಲಿ ನೆಲೆಸಿ ಪಾಪನಾಶಕನಾಗಿಹೆ
ಯೋಗಿಗಳಿಂದ ಕೂಡಿರುವಂಥಹ
ಗಿರಿಯ ಗುಹೆಯಲ್ಲಿ ವಾಸಿಸುವ
ದುಃಖ ಪರಿಹಾರಕ ಸುಬ್ರಹ್ಮಣ್ಯನ ಆಸರೆಯ ನಾ ಬೇಡುವೆ || ೭ ||

ಪ್ರಕಾಶಿಸುತಿರುವ ಸ್ವರ್ಣಮಯ ದೇವಾಲಯದಲ್ಲಿ
ಪುಷ್ಪಾಲಂಕೃತ ಪೀಠದಿ ನೆಲೆಸಿ
ಹಲವು ಸೂರ್ಯರ ಉದಯದ
ಕಾಂತಿಯ ದೇವೋತ್ತಮನಾಗಿರುವ ಕಾರ್ತಿಕೇಯನ ಧ್ಯಾನಿಸುವೆ || ೮ ||

ಹೇ ಸ್ಕಂದನೇ ದೇವನೇ ನಿನ್ನಯ ನಸುಗೆಂಪು ಪಾದಗಳು
ಕಿರುಗೆಜ್ಜೆನಾದದಿ ಶೋಭಾಯಮಾನದಿ
ಲಾವಣ್ಯವೆಂಬಾಮೃತವ ಸೂಸಿವೆ
ನನ್ನ ಮನವೆಂಬ ದುಂಬಿಯು ಸುಖಿಸಲಿ ನಿನ್ನ ಪಾದಕಮಲದಲಿ || ೯ ||

ಹೇ ಸ್ವಾಮಿ ನಿನ್ನ ನುಡುವಿಗೆ ಸುತ್ತಿದ ಹೊಂಬಣ್ಣದ ವಸ್ತ್ರವು
ಕಿರು ಘಂಟೆಗಳ ಚಿನ್ನದ ಡಾಬು
ಬೆಳಗುತ ಶೋಭಿಸಿದೆ ಸ್ವಾಮಿಯೆ
ಇಂತಹ ಸುಂದರವಾದ ನಿನ್ನ ಕಟಿಯ ಪ್ರದೇಶವ ಧ್ಯಾನಿಸುವೆ || ೧೦ ||

ಓ ತಾರಕ ವೈರಿಯೇ ನಿನ್ನೆದೆಯು ಶ್ರೀವಲ್ಲಿ ಆಲಿಂಗನದಿ
ಕಾಶ್ಮೀರ ಕೇಸರಿಯ ವರ್ಣವ ತಳೆದಿದೆ
ನಿನ್ನಯ ಅನುರಾಗದಿ ಭಕ್ತರ

ಸಲಹುವ ಕುಮಾರನೇ ಇಂಥ ನಿನ್ನ ವಕ್ಷಸ್ಥಳವ ಧ್ಯಾನಿಸುವೆ || ೧೧ ||
ಓ ದೇವ ನಿನ್ನ ತೋಳ್ಗಳು ಬ್ರಹ್ಮನ ಬ್ರಹ್ಮಾಂಡ ಹೊತ್ತಿರುವ
ಆನೆಯ ಸೊಂಡಿಲ ಮೀರಿಸುವಾಕಾರವು
ವೈರಿಗೆ ಯಮದಂಡಕೆ ಸಮಾನವು
ಇಂದ್ರಶತ್ರುವ ವಧಿಸಿದ ಲೋಕಪಾಲ ನಿನ್ನ ಬಾಹುಗಳ ಆಶ್ರಯಿಸುವೆ || ೧೨ ||

ಹೇ ಸ್ವಾಮಿಯೇ ನಿನ್ನ ಷಣ್ಮುಖಗಳು ಶರತ್ಕಾಲದ ಚಂದ್ರನಂತೆ
ಎಂದಿಗೂ ಸ್ಥಿರವಾಗಿ ಕಳಂಕ ರಹಿತವಾಗಿ
ಶೋಭಾಯಮಾನವಾಗಿ ನೀನಿರುವೆ
ಚಂದ್ರ ಸದಾ ಪೂರ್ಣ ಬಿಂಬ ಆದರೆ ಮುಖ ಸಾಮ್ಯ ನಿನ್ನದೆನಬಹುದು || ೧೩ ||

ಸುಬ್ರಹ್ಮಣ್ಯನೇ ನಿನ್ನ ಮುಗುಳ್ನಗೆಯು ಚಲಿಸುವ ಹಂಸದಂತೆ
ಕುಡಿಗಣ್ಣ ನೋಟವು ದುಂಬಿಗಳ ಗುಂಪಂತೆ
ತುಟಿಯು ಮಧುತುಂಬಿದ ಬಿಂಬ ಫಲ
ಕಮಲದಂತ ಷಣ್ಮುಖ ಧರಣೀಶ ಬಯಸುವೆ ನಿನ್ನದರ್ಶನವ || ೧೪ ||

ಹೇ ದೇವ ಕರುಣಾಳುವೇ ನಿನ್ನಯ ಹನ್ನೆರಡು ನೇತ್ರಗಳು
ವಿಶಾಲವಾಗಿ ಕಿವಿಯವರೆಗಿವೆ
ನಿರತ ದಯಾಪೂರಿತ ನೋಟವ
ಕರುಣೆಯ ಕಿರಣ ತೋರಿ ನನ್ನಲಿ ನೀನೊಮ್ಮೆ ಬೀರಬಾರದೇ || ೧೫ ||

ಜಗತ್ತನ್ನೆ ಹೊತ್ತಿರುವ ಜಗನ್ನಾಥ ನಿನ್ನಯ ಪಿತ ಶಿವನು
ನಿನ್ನ ಷಣ್ಮುಖಗಳ ಆಘ್ರಾಣಿಸುತ
ಚಿರಂಜೀವಿಯಾಗೆಂದು ಹಾರೈಸಿದ
ಹೊಳೆವ ಕಿರೀಟವನು ಧರಿಸಿಹ ನಿನ್ನ ಷಣ್ಮುಖ ವಂದಿಸುವೆ || ೧೬ ||

ತ್ರಿಪುರಾರಿ ಶಿವಪುತ್ರನು ಹೊಳೆಯುವ ಹಾರದಿ ತೋಳ್ಬಂದಿಲಿ
ಚೆಲುವಲಿ ಕೆನ್ನೆಯು ಕುಂಡಲ ಶೋಭಿತ
ಹಳದಿಯ ವಸ್ತ್ರವನು ಉಟ್ಟಿರುವ
ಕೈಯಲಿ ಶಕ್ತ್ಯಾಯುಧವ ಧರಿಸಿದ ಸುಬ್ರಹ್ಮಣ್ಯ ದರ್ಶನ ನೀಡಲಿ || ೧೭ ||

ಸ್ಕಂದನ ಪಿತ ಶಿವನು ಮಮತೆಯಲಿ ಸುತನ ಬಾ ಎಂದು
ಕೈ ಚಾಚಿ ಕರೆದಾಗ ತಾಯಿಯಿಂದ ಜಿಗಿದು
ಆಲಿಂಗಿಸಲ್ಪಡುವನು ಪಿತನಲಿ
ಶಿವಾಲಿಂಗಿತವಾದ ಬಾಲನ ಸುಬ್ರಹ್ಮಣ್ಯನ ಧ್ಯಾನಿಸುವೆ || ೧೮ ||

ಹೇ ಸ್ಕಂದಕುಮಾರ ಸ್ವಾಮೀ ಶಿವಪುತ್ರ ದೇವಸೇನಾಪತಿ
ಗುಹನೇ ಸ್ಕಂದನೇ ಶಕ್ತ್ಯಾಯುಧಧರ
ಶ್ರೀವಲ್ಲಿಯ ಕಾಂತನೆ ಪ್ರಭುವೆ
ತಾರಕಾಸುರ ವೈರಿಯೇ ಸ್ವಾಮೀ ಸದಾರಕ್ಷಿಸು ಎನ್ನನು || ೧೯ ||

ಹೇ ದೇವ ಕರುಣಾಳುವೇ ನನ್ನನು ಅಜ್ಞಾನ ಆವರಿಸಿದೆ
ವಾತಕಫಪಿತ್ತದ ಶರೀರವಾಗಿದೆ
ಅನಾಥನಾಗಿರುವ ಎನಗೆ
ಮರಣದ ಸಮಯದಲಿ ನೀಡು ನೀ ದರ್ಶನ ಭಾಗ್ಯವನು || ೨೦ ||

ಹೇ ಸ್ವಾಮಿ ಎನ್ನ ಬಳಿಗೆ ಯಮದೂತರು ಬಂದು ಸೀಳುವೆನೆಂದು
ದಹಿಸುವೆನೆಂದು ಹೆದರಿಸುವಾಗ
ಮಯೂರವಾಹನನೆ ಶಕ್ತಿಧರ
ಹೆದರದಿರೆಂದು ಎನಗೆ ಅಭಯ ನೀಡುತ ಕೊಡು ನೀ ದರ್ಶನವ || ೨೧ ||

ಹೇ ಕರುಣ ಸಾಗರನೇ ಪ್ರಭುವೇ ನಿನ್ನ ಪಾದಗಳಲ್ಲಿ
ಬಿದ್ದು ಹೊರಳಾಡಿ ನಮಿಸುತಿರುವೆನು
ಪ್ರಾಣವು ಹೋಗುವಾಗ ಮಾತುಬರದು
ಕೊನೆಗಾಲದಲ್ಲಿ ನನ್ನ ಅಲಕ್ಷಿಸದೆ ಕರುಣದಿ ನೀ ರಕ್ಷಿಸು || ೨೨ ||

ಬ್ರಹ್ಮಾಂಡ ನಡುಗಿಸಿದ ಅಸುರರು ಕ್ರೂರ ತಾರಕಾಸುರ
ಮೆರೆದ ಈ ದುಷ್ಟರು ನಿನ್ನಿಂದ ಹತರಾದರು
ಹೇ ಸ್ವಾಮಿ ನನ್ನ ಮನದ ವೇದನೆಯ
ನಾಶವ ನೀ ಮಾಡದೇ ಇದ್ದರೆ ಯಾರನ್ನು ಆಶ್ರಯಿಸಲಿ || ೨೩ ||

ಹೇ ಪಾರ್ವತಿ ಸುತನೇ ನಾನು ದೀನ ನೀನೇ ದೀನಬಂಧು
ನಾನೆಂದೂ ಅನ್ಯರ ಬೇಡಲಾರೆನು
ನಿನ್ನ ಸನ್ನಿಧಿ ಭಕ್ತಿಗೆ ಭಂಗ ತಂದು
ಮನವನು ಬಾಧಿಸುವ ವ್ಯಥೆಯ ಬೇಗ ನಾಶ ಮಾಡೋ || ೨೪ ||

ಹೇ ಸ್ವಾಮಿ ಸುಬ್ರಹ್ಮಣ್ಯನೇ ನಿನ್ನ ಪ್ರಸಾದ ಭಸ್ಮದಿಂದ
ಮಹಾರೋಗಗಳು ಪಿಶಾಚಿಗಳು
ಕ್ಷಣಮಾತ್ರವೂ ನಿಲ್ಲದೆ ಓಡುವುವು
ನಿನ್ನಯ ಅರ್ಚನೆಯ ಭಸ್ಮದ ಪ್ರಸಾದ ಪುಣ್ಯಪ್ರದವು || ೨೫ ||

ದೇವ ನಿನ್ನ ದಿವ್ಯಾಕಾರ ನನ್ನ ಕಣ್ಣಲಿ ಕೀರ್ತನೆ ಕಿವಿಯಲ್ಲಿ
ಪವಿತ್ರ ಮಹಿಮೆಯ ನಾಲಿಗೆ ನುಡಿಯಲಿ
ಸ್ವಾಮಿ ನಿನ್ನ ಪೂಜಿಸಲಿ ಕರಗಳು
ದೇಹವು ಸೇವೆ ಮಾಡುತ ನನ್ನ ಮನವು ನಿನ್ನಲ್ಲಿ ನೆಲೆಯಾಗಲಿ || ೨೬ ||

ಹೇ ದೇವ ಭಕ್ತಿಯಿಂದ ಸೇವಿಸುವ ಮುನಿ ಮನುಜರೆಲ್ಲರಿಗೆ
ದೇವದೇವತೆಗಳು ವರ ನೀಡುವರು
ಶ್ರದ್ಧಾಭಕ್ತಿಯಿಂದ ಭಕ್ತರು
ಬೇಡಿದ ಇಷ್ಟಾರ್ಥವ ನೀಡುವೆ ದೇವದಯಾಮಯನೇ || ೨೭ ||

ಹೇ ಕುಮಾರದೇವನೇ ನನ್ನಯ ಮನೆಯಲ್ಲಿ ಪತ್ನಿ ಪುತ್ರರು
ಬಂಧು ಬಾಂಧವರು ಅನುದಿನ ನಿನ್ನನು
ದೃಢವಾದ ಭಕ್ತಿಯಲಿ ಪೂಜಿಸಿ
ಸ್ತೋತ್ರವ ಪಠಿಸುತ್ತ ವಂದಿಸಿ ಧ್ಯಾನದಿ ನಿರತರಾಗಲಿ || ೨೮ ||

ಹೇ ದೇವ ಕ್ರೂರಮೃಗ ಪಕ್ಷಿಕೀಟ ಬಾಧಿಪ ಮಹಾವ್ಯಾಧಿ
ನಿನ್ನ ಶಕ್ತ್ಯಾಯುಧಕೆ ಸಿಲುಕಿ ನಾಶವಾಗಿ
ನನ್ನಿಂದ ದೂರವಾಗಲಿ ಸ್ವಾಮಿ
ಕ್ರೌಂಚಪರ್ವತವ ಪುಡಿ ಮಾಡಿದ ವೀರಕುಮಾರ ನೀನೇ || ೨೯ ||

ಹೇ ದೇವಸೇನಾಪತಿ ಜಗದೀಶ ಮಕ್ಕಳ ತಪ್ಪುಗಳ
ಮಾತಾಪಿತರು ಸಹಿಸದಿರುವರೇ
ನಾನೇನೂ ಅರಿಯದಿರುವ ಬಾಲಕ
ಲೋಕದ ಜನಕನಲ್ಲವೇ ನೀನು ನನ್ನೆಲ್ಲ ತಪ್ಪನು ಮನ್ನಿಸು || ೩೦ ||

ಹೇ ಸ್ವಾಮಿ ನಿನ್ನ ವಾಹನ ನವಿಲಿಗೆ ಶಕ್ತ್ಯಾಯುಧಕೆ ವಂದನೆ
ನಿನ್ನಯ ರೂಪಕೆ ನಿನ್ನ ಕುಕ್ಕುಟಕೆ
ಹೇ ಸ್ಕಂದನೇ ವಂದನೆ ನಿನಗೆ
ಸಾಗರದಡದ ನಿನ್ನ ಕ್ಷೇತ್ರಕೆ ಮತ್ತೆಮತ್ತೆ ವಂದನೆಯು || ೩೧ ||

ಹೇ ಆನಂದ ಪೂರ್ಣನೆ ತೇಜಸ್ವಿ ನೀನೇ ಕೀರ್ತಿಶಾಲಿ
ಅನಂತಮೂರ್ತಿ ಆನಂದ ಸಾಗರ
ಜಯಜಯವು ನಿನಗೆ ಸ್ವಾಮಿಯೆ
ಸಕಲರಿಗೂ ಬಂಧು ಮೋಕ್ಷಪ್ರದ ಶಿವಪುತ್ರನೆ ಜಯವಾಗಲಿ || ೩೨ ||

ಭುಜಂಗ ಸ್ತೋತ್ರವನು ಭಕ್ತಿಯಲಿ ಪಠಿಸುವವರೆಲ್ಲ
ಸಂತಾನ ಮತ್ತು ಧನ ಆರೋಗ್ಯ ಆಯುಷ್ಯ
ಸಕಲಾಭೀಷ್ಟವನು ಪಡೆಯುತ
ದೇಹಾಂತ್ಯದಲ್ಲೆಲ್ಲರೂ ಸ್ಕಂದನ ಲೋಕವ ಪಡೆಯುವರು || ೩೩ ||