ಸೌಂದರ್ಯಲಹರಿ ಗೀತೆ

ಹೇ ದೇವಿ ಜಗಜ್ಜನನಿ ಜಗನ್ನಿರ್ಮಾಣಶಕ್ತಿ ಭಗವತಿ
ದೇವನಾದ ಶಿವನು ನಿನ್ನೊಡಗೂಡಿದರೆ ಶಕ್ತಿಸ್ವರೂಪಿ
ಪರಮಪೂಜ್ಯಳೇ ನಿನ್ನ ಹರಿಹರಾದಿಬ್ರಹ್ಮ ಸ್ತುತಿಪರು
ಜನ್ಮಾಂತರದ ಪುಣ್ಯವನು ಪಡೆದಿರುವ ಭಕ್ತರು ಪೂಜಿಸುವರು || ೧ ||

ಹೇ ಭಗವತಿಯೆ ನಿನ್ನ ಮಹಿಮೆಯೇನೆಂದು ಹೇಳಲಿ
ಶಿವೇ ಜಗನ್ಮಾತೆ ನಿನ್ನ ಪಾದಪದ್ಮಗಳಲ್ಲಿ ಇರುವಂಥಹ
ಧೂಳಿಕಣವಶೇಖರಿಸಿ ರಾಶಿಯನು ಮಾಡುತ್ತ ಬ್ರಹ್ಮನು
ಈ ಪ್ರಪಂಚವೆಂಬ ಬ್ರಹ್ಮಾಂಡವ ಸೃಷ್ಠಿ ಮಾಡಿರುವನು

ಹೇ ಶಿವೆ ಭಗವತಿಯೇ ಪ್ರಪಂಚಾಕಾರದ ಧೂಳಿಕಣವ
ಶೇಷರೂಪದಲಿ ವಿಷ್ಣು ಸಹಸ್ರಾರು ಹೆಡೆಯಲಿ ಹೊತ್ತಿರುವನು
ಹೊತ್ತಿರುವ ಪ್ರಪಂಚವೆಂಬ ಈ ಧೂಳಿಕಣವ ಹರನು
ಪುಡಿಮಾಡಿ ತನ್ನ ಮೈಗೆ ಭಸ್ಮವನ್ನಾಗಿ ಹಚ್ಚಿಕೊಳುವನು || ೨ ||

ಹೇ ಶಿವೆ ನಿನ್ನ ಪಾದದ ಧೂಳಿಮಹಿಮೆ ಹೇಗೆ ವರ್ಣಿಸಲಿ
ದೇವಿಜಗನ್ಮಾತೆ ನಿನ್ನ ಪಾದಧೂಳಿಕಣವು ಅಜ್ಞಾನಿಗಳ
ಅಂತರಂಗದಲಿರುವ ಅಜ್ಞಾನವೆಂಬ ಕಗ್ಗತ್ತಲ
ಸಮುದ್ರದ ಮಧ್ಯದಲ್ಲಿ ತೋರುವ ಬೆಳಕಿನ ದ್ವೀಪದಂತಿದೆ

ಹೇ ಶಿವೆ ಮತಿಮಂದರರಿಗೆ ಕುಸುಮದಿಸುರಿವ ಮಕರಂದ
ಧೂಳಿಕಣವು ದರಿದ್ರರಿಗೆ ಚಿಂತಾಮಣಿಗಳ ರಾಶಿಯಂತೆ
ಜನನ ಮರಣದ ಸಂಸಾರ ಸಾಗರದಲಿ ಮುಳುಗಿ ಇರುವರ
ಮೇಲೆತ್ತುವ ವರಾಹರೂಪಿ ವಿಷ್ಣುವಿನ ಕೋರೆಯ ದಾಡೆಯಂತಿದೆ || ೩ ||

ಹೇ ದೇವಿ ಇಂದ್ರಾದಿ ದೇವತೆಗಳೆಲ್ಲರ ಸಮೂಹವು
ಹಸ್ತದಲಿ ಅಭಯಮುದ್ರೆಯ ವರದಮುದ್ರೆಯನು ತೋರುವರು
ಜನನ ಮರಣದ ಭಯವ ನಿನ್ನ ಪಾದಪದ್ಮಗಳು ನಿವಾರಿಸಿ
ಸದ್ಭಕ್ತರ ಅಪೇಕ್ಷೆಗಿಂತ ಹೆಚ್ಚಾಗಿ ಫಲಗಳ ನೀಡುವುದು || ೪ ||

ಹೇ ಸಕಲ ಸೌಭಾಗ್ಯದಾಯೆ ನೀತಿನಿಪುಣಳೆ ನಿನ್ನನು
ಹಿಂದೊಮ್ಮೆ ಮಹಾವಿಷ್ಣು ಪೂಜಿಸಿ ಆರಾಧಿಸಿ ನಿನ್ನನೊಲಿಸಿ
ಸೌಂದರ್ಯ ಪಡೆದುಕೊಂಡು ಸ್ತ್ರೀಯ ರೂಪವನು ಧರಿಸಿ
ಸ್ಮರಾಂತಕ ಪರಶಿವನ ಮನವನು ವಿಕಾರಗೊಳಿಸಿದನು

ಹೇ ದೇವಿ ಜಗನ್ಮಾತೇ ವರಪ್ರದಾಯಿನಿಯೆ ಮನ್ಮಥನು
ನಿನ್ನ ಸ್ತುತಿಸಿ ಚೆಲುವ ಪಡೆದು ರತಿಯನ್ನು ತಣಿಸಿದ
ನಿನ್ನಿಂದ ಪಡೆದಿರುವಂತ ಚೆಲುವಿನಿಂದಲೇ ಮನ್ಮಥನು
ಮುನಿವರರ ಮಹಾತ್ಮರ ಮನವಿಕಾರ ಮಾಡಲು ಶಕ್ತನಾದನು || ೫ ||

ಹೇ ಭಗವತಿ ಶೈಲಪುತ್ರಿ ಮನ್ಮಥನಲ್ಲಿ ಹೂವಿನ ಧನುಸ್ಸು
ದುಂಬಿಗಳ ದಂಡೇ ಹೆದೆ ಬೀಸುವ ತಂಗಾಳಿ ಯುದ್ಧ ರಥವು
ನಿನ್ನ ಅನುಗ್ರಹದಿಂದಲೆ ಇಡೀ ಜಗತ್ತನ್ನೇ ಗೆಲ್ಲುವನು
ಜಗನ್ಮಾತೆ ಇದೆಲ್ಲವೂ ನಿನ್ನ ಕೃಪೆಯ ಮಹಾ ಮಹಿಮೆಯು || ೬ ||

ಹೇ ಶಿವೆ ಭಗವತಿಯೆ ತ್ರಿಪುರಸುಂದರಿಯೆ ನಿನ್ನ ಮೊಗವು
ಶರತ್ಕಾಲದ ಪೂರ್ಣಚಂದ್ರನ ನಾಚಿಸುವಂಥ ನಿನ್ನ ಚೆಲುವು
ಸುಂದರವಾಗಿರುವ ನಿನ್ನ ಬಳುಕುವ ನಡುವಿಗೆ ಮೆಲುದನಿಯ
ನಾದವ ಮಾಡುತಿರುವ ಕಿರುಗೆಜ್ಜೆ ಒಡ್ಯಾಣ ಬಿಗಿದಿರುವೆ

ಹೇ ತ್ರಿಪುರಸುಂದರಿ ನಿನ್ನ ಒಂದೊಂದು ಕೈಯ್ಯಲಿ ಬಿಲ್ಲುಬಾಣ
ಮತ್ತೊಂದು ಕೈಯ್ಯಲಿ ಪಾಶ ನಾಲ್ಕನೆ ಕೈಯ್ಯಲಿ ಅಂಕುಶವು
ತ್ರಿಪುರಾಂತಕ ಪರಶಿವನ ಶಕ್ತಿಸ್ವರೂಪಿಣಿ ಶ್ರೀದೇವಿ
ತ್ರಿಪುರಸುಂದರಿ ನಮ್ಮ ಕಣ್ಣಿಗೆ ಗೋಚರಿಸಲೆಂದು ಬೇಡುವೆ || ೭ ||

ಹೇ ದೇವಿ ಭಗವತಿಯೆ ನಿನ್ನ ವಾಸಸ್ಥಾನವು ಅದ್ಭುತ
ಹಾಲ್ಗಡಲ ಮಧ್ಯ ಸುತ್ತಲೂ ಕಲ್ಪವೃಕ್ಷಗಳ ತೋಪುಗಳು
ಕದಂಬ ವೃಕ್ಷ ತೋಪಿನ ಮಧ್ಯ ನವರತ್ನ ಖಚಿತ ದ್ವೀಪವು
ಚಿಂತಾಮಣಿಗಳಿಂದ ಕಟ್ಟಿದ ಭವ್ಯಾಕಾರ ಭವನವು

ಹೇ ದೇವಿ ಭವ್ಯ ಭವನದ ಮಧ್ಯದಿ ಶಿವಾಕಾರ ಮಂಚವು
ಪರಶಿವನೆಂಬ ಸುಪ್ಪತ್ತಿಗೆಯ ಮಂಚದ ಮೇಲೆ ಹಾಸಲಾಗಿದೆ
ದೇದೀಪ್ಯಮಾನಳೆ ನೀನು ಆ ಸುಪ್ಪತ್ತಿಗೆ ಮೇಲೆ ವಿರಾಜಿಸಿ
ಶೋಭಿಸುವ ನಿನ್ನನು ದಿನವು ಭಜಿಸುವವರು ಮಾತ್ರ ಧನ್ಯರು || ೮ ||

ಹೇ ಶಿವೆ ಮೂಲಾಧಾರ ಚಕ್ರದಲಿ ಇರುವ ಭೂತತ್ತ್ವ
ಹೇ ದೇವಿ ಮಣಿಪೂರ ಚಕ್ರದಲಿ ಇರುವ ಜಲತತ್ತ್ವವ
ಹೇ ಶಿವೆ ಸ್ವಾಧಿಷ್ಠಾನ ಚಕ್ರದಲಿ ಇರುವ ಅಗ್ನಿತತ್ತ್ವ
ಹೇ ಭಗವತಿ ಅನಾಹತ ಚಕ್ರದಲಿ ಇರುವ ವಾಯುತತ್ತ್ವವ

ಹೇ ಶಿವೆ ವಿಶುದ್ಧಿ ಚಕ್ರದಲಿ ಇರುವ ಆಕಾಶ ತತ್ತ್ವವ
ಹೇ ಶಿವೆ ಭ್ರೂಮಧ್ಯ ಆಜ್ಞಾ ಚಕ್ರದಲಿರುವ ಮನಸ್ತತ್ತ್ವವ
ಸುಷುಮ್ನಾ ಮಾರ್ಗ ದಾಟಿ ಸಹಸ್ರದಳ ಕಮಲದ ಮೇಲೆ
ನೀನು ಪತಿ ಸದಾಶಿವನ ಜೊತೆ ಏಕಾಂತದಲಿ ವಿಹರಿಸುವೆ || ೯ ||

ಹೇ ಶಿವೆ ನಿನ್ನ ಪಾದಾರ ವಿಂದಗಳಲಿ ಹರಿದು ಬರುವ
ಅಮೃತಧಾರೆಯಲಿ ಭಕ್ತನ ದೇಹನಾಡಿಗಳ ತೋಯಿಸುವೆ
ಅಮೃತಕಿರಣ ಚಂದ್ರನಿಂದ ನಿನ್ನ ಸ್ಥಾನ ಆಧಾರ ಚಕ್ರ ಸೇರಿ
ಸುತ್ತಿ ಮಲಗಿಹ ಸರ್ಪದಂತೆ ಸ್ವರೂಪವ ತಾಳಿ ನಿದ್ರಿಸುವೆ || ೧೦ ||

ಹೇ ಶಿವೆ ನಿನ್ನಯ ವಾಸ ಸ್ಥಾನವಾಗಿರುವ ಶ್ರೀಚಕ್ರವು
ನಾಲ್ಕು ಶಿವಚಕ್ರಗಳಿಂದ ಮತ್ತು ಅವುಗಳಿಂದ ಬೇರೆಯಾದ
ಐದು ಶಕ್ತಿ ಚಕ್ರಗಳಿಂದ ಒಂಬತ್ತು ಮೂಲಪ್ರಕೃತಿಗಳಿಂದ
ನಂತರ ಎಂಟು ದಳದ ಮತ್ತು ಹದಿನಾರು ದಳದ ಎರಡು

ಹೇ ಶಿವೆ ಕಮಲಗಳಿಂದ ವರ್ತುಲಾಕಾರದ ಮೂರು
ಮೇಖಲೆಗಳಿಂದಲೂ ದ್ವಾರಾಕಾರದ ಈ ಮೂರು
ಭೂಪುರಗಳಿಂದ ಕೂಡಿದ್ದು ಒಟ್ಟಿಗೇ ಎಲ್ಲವು
ಸೇರಿ ನಲವತ್ನಾಲ್ಕು ಕೋನಗಳಿಂದ ವಿರಾಜಿಸುವುದು || ೧೧ ||

ಹೇ ಹಿಮಗಿರಿತನಯೇ ಬ್ರಹ್ಮನು ಮೊದಲಾದ ಕವಿಗಳು
ನಿನ್ನ ಸೌಂದರ್ಯವ ಪರಿಶ್ರಮದಿಂದ ವರ್ಣಿಸಿದರು
ನಿನ್ನ ನೋಡಬೇಕೆಂದು ಅಪ್ಸರೆಯರು ಬಯಸಿ ಆಗದೆ
ಶಿವನ ಮೂಲಕ ನೋಡಲು ಶಿವನನ್ನೆ ಧ್ಯಾನಿಸುತ ಅಲ್ಲೆ ಇರುವರು || ೧೨ ||

ಹೇ ದೇವಿ ನಿನ್ನ ಕರುಣೆಯ ಕಟಾಕ್ಷಕೆ ಪಾತ್ರನಾದ ಭಕ್ತನು
ವೃದ್ಧನು ಕುರೂಪನು ಆದರು ರತಿವಿಚಾರ ತಿಳಿಯದ ದಡ್ಡನಾದರು
ಆಕರ್ಷಕನಾಗಿ ತೋರಿ ತರುಣಿಯರು ಒಲಿದು ಅವನತ್ತ
ಬರುವಾಗ ವಸ್ತ್ರ ಸರಿದರು ಅದರ ಪರಿವೆಯಿಲ್ಲದೆ ಹಿಂಬಾಲಿಸುವರು || ೧೩ ||

ಹೇ ಶಿವೆ ತತ್ತ್ವವಾಗಿರುವ ಷಟ್‌ಚಕ್ರದಲಿರುವ ಕಿರಣವು
ಎಲ್ಲಾ ಒಟ್ಟು ಮುನ್ನೂರ ಅರವತ್ತು ಕಿರಣವು ಅಲ್ಲಿರುವುದು
ಈ ಎಲ್ಲ ಕಿರಣದ ಮೇಲೆ ಸುಧಾಸಿಂಧುವೆಂಬ ಹೆಸರಿನ
ಸಹಸ್ರದಳ ಕಮಲದಲಿ ನಿನ್ನ ಪಾದಪದ್ಮಗಳು ಬೆಳಗುತಿದೆ || ೧೪ ||

ಹೇ ದೇವಿ ಶರತ್ಕಾಲದ ಬೆಳದಿಂಗಳಂತೆ ಶುಭ್ರಳು
ಚಂದ್ರಕಲಾ ಸಹಿತವಾದ ಜಟೆಯ ಕಿರೀಟವಾಗಿಸಿಹೆ
ಅಭಯವರದ ಮುದ್ರೆಯ ಸ್ಪಟಿಕಮಾಲೆಪುಸ್ತಕ ಧರಿಸಿಹ
ಒಮ್ಮೆ ನಿನ್ನ ನಮಿಸದ ಕವಿಗೆ ವಾಗ್ವೈಖರಿ ಹೇಗೆ ಸಿದ್ಧಿಸುವುದು || ೧೫ ||

ಹೇ ಶಿವೆ ನಿನ್ನ ಮೈಕಾಂತಿಯಲಿ ಕವಿ ಮನದ ಕಮಲ ಅರಳಿ
ನಿನ್ನ ಸ್ತುತಿಪ ಕವಿವರ್ಯರು ವಿರಿಂಚಿಪ್ರಿಯೆ ಶಾರದೆ ಅನುಗ್ರಹದಿ
ಶೃಂಗಾರರಸದಲೆಗಳ ಪರಿಪುಷ್ಪವಾಗ್ವಿಲಾಸಗಳಿಂದ
ಸಹೃದಯರ ಲೋಕವ ರಂಜಿಸಿ ಸಂತಸವ ಪಡಿಸುವರು || ೧೬ ||

ಹೇ ಶಿವೆ ವಾಕ್ಕಿನ ತವರು ಚಂದ್ರಕಾಂತಶಿಲಾ ಖಂಡದಂತೆ
ಶುಭ್ರವಾಗಿರುವ ವಶಿನಿ ಅಷ್ಟಶಕ್ತಿಗಳೊಡನೆ ಇರುವ ನಿನ್ನನು
ಆರಾಧಿಸುವ ಸಾಧಕರು ನಿನ್ನ ಮುಖಾರವಿಂದದ ಮಾಧುರ್ಯದಿ
ಮಹಾಕವಿವರೇಣ್ಯರಾಗಿ ಕಾವ್ಯಗಳ ರಾಶಿಯ ರಚಿಸುವರು || ೧೭ ||

ಹೇ ಭಗವತಿಯೇ ನಿನ್ನ ದೇಹದ ಕಾಂತಿಯು ಬಾಲರವಿಯ
ಕಿರಣಗಳ ಶೋಭೆಯಿಂದ ಆಕಾಶ ಮತ್ತು ಭೂಮಿ ವ್ಯಾಪಿಸಿದೆ
ನಿರಂತರ ನಿನ್ನ ಧ್ಯಾನಿಸುವ ಸಾಧಕ ಭಕ್ತನ ಮನದ ಇಚ್ಛೆಯಂತೆ
ಚೆಲುವಾದ ತರುಣಿಯರು ತಾವಾಗಿಯೆ ಒಲಿದು ಬರುವರು || ೧೮ ||

ಹೇ ಶಿವೆ ಅಪೇಕ್ಷಿತಳಾದ ವನಿತೆಯನು ಪಡೆವ ಸಾಧಕನು
ವನಿತೆಮುಖವ ಭಾವಿಸಿ ದೇಹದ ಅಂಗಾಂಗ ಕಲ್ಪಿಸಿಕೊಂಡು
ನಿನ್ನ ಕಾಮರಾಜಬೀಜವ ಧ್ಯಾನಿಸಿ ವನಿತೆಯ ಪಡೆವನು
ಸೂರ್ಯಚಂದ್ರರೆ ಸ್ತನವಾದ ತ್ರಿಲೋಕವ ಮೋಹಗೊಳಿಸಬಲ್ಲನು || ೧೯ ||

ಹೇ ಶಿವೆ ನಿನ್ನ ದೇಹದಿ ಹೊಮ್ಮುವ ಕಿರಣದಿ ಅಮೃತವ
ಸುರಿಸಿ ಚಂದ್ರಕಾಂತ ಶಿಲೆಯ ಪುತ್ಥಳಿಯಂತೆ ಬೆಳಗುವೆ
ನಿನ್ನಧ್ಯಾನಿಸುವ ಭಕ್ತನು ದುಷ್ಟಸರ್ಪಗಳ ಸೊಕ್ಕ ಅಡಗಿಸಿ
ಅಮೃತಸಿಂಚನ ದೃಷ್ಟಿಯಲಿ ಜ್ವರಪೀಡಿತರ ಬೇಗೆ ನಿವಾರಿಸುವನು || ೨೦ ||

ಹೇ ದೇವಿ ಭಗವತಿಯೇ ವಿದ್ಯುದ್ರೇಖೆಯಂತೆ ಅತಿಯಾದ
ದೀರ್ಘವು ಸೂಕ್ಷ್ಮವು ಆದ ಸೂರ್ಯಚಂದ್ರಾಗ್ನಿ ರೂಪವಾದ
ಆರು ಕಮಲಗಳಿಗಿಂತ ಮೇಲೆ ಸಹಸ್ರದಳದ ಕಮಲದಿ
ನೆಲೆಯಾಗಿರುವಳೆ ನಿನ್ನ ಸಾದವೆಂಬ ಕಲೆಯ ಸಾಧಕರೆಲ್ಲಾ

ಹೇ ಶಿವೆ ಜಗನ್ಮಾತೆ ಕಾಮಕ್ರೋಧ ಲೋಭ ಮೋಹಗಳ
ಮದಮಾತ್ಸರ್ಯಗಳೆಂಬ ಅರಿಷಡ್ ವರ್ಗ ಗೆದ್ದು ಸಾಧಕರು
ಅಹಂಕಾರ ರಹಿತರಾಗಿ ಭಕ್ತಿ ಶ್ರದ್ಧೆಯಿಂದ ಧ್ಯಾನವ
ಮಾಡುತ ಮಹಾತ್ಮರು ಪರಮಾನಂದ ಸುಧೆಯ ಸವಿಯುವರು || ೨೧ ||

ಹೇ ಭವಾನಿ ನಿನ್ನ ಭಕ್ತನು ಕರುಣೆ ತೋರೆಂದು ಭಕ್ತಿಯಲಿ
ಓ ಭವಾನೀ ಎಂದರೆ ನಿನ್ನ ಪಾದಗಳಲ್ಲಿ ಐಕ್ಯ ಅನುಗ್ರಹಿಸುವೆ
ನಿನ್ನ ಪಾದಕಲಮಗಳಿಗೆ ವಿಷ್ಣುಬ್ರಹ್ಮ ಇಂದ್ರರು ತಲೆಬಾಗಿ
ನಮಿಸಿ ಕಿರೀಟ ಕಾಂತಿಯ ನೀರಾಜನವ ಮಾಡುವರು || ೨೨ ||

ಹೇ ಶಿವೆ ನಸುಗೆಂಪಾಗಿ ನೀನು ತ್ರಿಲೋಚನೆಯೆ ಆಗಿರುವೆ
ವಕ್ರವಾಗಿರುವ ಚಂದ್ರನನ್ನೆ ಮಸ್ತಕಾಭರಣವಾಗಿ ಧರಿಸಿರುವೆ
ಪರಶಿವನ ಎಡಭಾಗದ ಅರ್ಧ ಶರೀರವನ್ನು ಆಕ್ರಮಿಸಿ
ಪೂರ್ಣ ಆಕ್ರಮಿಸಿದಂತೆ ಶಿವಮಯವಾಗಿ ನೀ ಕಾಣುವೆ || ೨೩ ||

ಹೇ ದೇವಿ ಜಗನ್ಮಾತೇ ಬ್ರಹ್ಮವಿಷ್ಣು ರುದ್ರ ಈಶ್ವರ
ಸದಾಶಿವ ಇವರೆಲ್ಲ ನಿನ್ನ ಅಧೀನದಲ್ಲಿಯೇ ಇರುವರು
ಚತುರ್ಮುಖನಾದ ಬ್ರಹ್ಮನು ಪ್ರಪಂಚ ಸೃಷ್ಟಿ ಮಾಡುವನು
ವಿಷ್ಣು ರಕ್ಷಣೆ ಮಾಡುವನು ರುದ್ರನು ಸಂಹರಿಸುವನು

ಹೇ ಶಿವೆ ಈಶ್ವರ ತನ್ನಲಿ ಲಯಗೊಳಿಸಿ ತಾನೂ ಅದೃಶ್ಯನಾಗುವನು
ಪ್ರಳಯದ ನಂತರ ಸದಾಶಿವನು ನಿನ್ನ ಅನುಮತಿಯ ಪಡೆದು
ಬ್ರಹ್ಮವಿಷ್ಣುರುದ್ರ ಈಶ್ವರ ಈ ನಾಲ್ಕು ತತ್ತ್ವಗಳ
ನಿರ್ಮಿಸಿ ಪುನಃ ಅವರವರ ಕೆಲಸದಲಿ ಅವರನ್ನು ತೊಡಗಿಸುವನು || ೨೪ ||

ಹೇ ಶರ್ವಾಣಿ ನಿನ್ನ ರಜಃಸತ್ವ ತಮೋ ಗುಣದಿ
ಜನಿಸಿದ ತ್ರಿಮೂರ್ತಿಗಳಾದ ಬ್ರಹ್ಮವಿಷ್ಣು ಈಶ್ವರ ಇವರೆಲ್ಲಾ
ನಿನ್ನ ಪಾದ ಪೀಠ ಸನಿಹ ತಲೆಬಾಗಿ ಕೈಮುಗಿದು ನಿಂತಿಹರು
ನಿನ್ನ ಪಾದಗಳಿಗೆ ಸಲ್ಲುವ ಪೂಜೆಯು ಅವರಿಗೂ ಸಲ್ಲುವುದು || ೨೫ ||

ಹೇ ಜಗನ್ಮಾತೆ ಬ್ರಹ್ಮವಿಷ್ಣು ಇಂದ್ರ ಕುಬೇರಯಮ ಇವರೆಲ್ಲ
ಮಹಾಪ್ರಳಯ ಕಾಲದಲಿ ನಿಧನರಾಗಿ ಸೃಷ್ಟಿ ನಾಶವಾಯಿತು
ನಿನ್ನ ಪತಿ ಸದಾಶಿವನು ಪ್ರಳಯಕ್ಕೆ ಸಿಗದೇ ನಿನ್ನೊಂದಿಗೆ
ಸಹಸ್ರದಳ ಪದ್ಮದಲಿ ಪರಮಾನಂದದಲಿ ವಿಹರಿಸುವನು || ೨೬ ||

ಹೇ ಶಿವೆ ನಾವಾಡುವ ಮಾತು ನಿನ್ನದೇ ಜಪವು ಆಗಲಿ
ಹಸ್ತವಿನ್ಯಾಸ ಮುದ್ರೆಗಳಾಗಿ ಪ್ರದಕ್ಷಿಣೆ ಆಗಲಿ ಸಂಚಾರ
ಆಹಾರವೇ ಹವಿಸ್ಸಾಗಿ ಮಲಗಲು ನಮಸ್ಕಾರ ಆಗಲಿ
ಶಬ್ದಸ್ಪರ್ಶಾದಿ ಸುಖಗಳು ನಿನಗೆ ಮಾಡುವ ಪೂಜೆಯಾಗಲಿ || ೨೭ ||

ಹೇ ಶಿವೆ ಬ್ರಹ್ಮ ಇಂದ್ರಾದಿ ದೇವತೆಗಳೆಲ್ಲರು ತಮಗೆಲ್ಲ
ಮುಪ್ಪುಸಾವು ಬರದಿರಲೆಂದು ಅಮೃತ ಪಾನ ಮಾಡಿದರು
ಆದರೂ ಸಾವನ್ನಪ್ಪಿರಲು ಕಾಲಕೂಟವಿಷ ಕುಡಿದಿರುವ
ಶಿವನಿಗೆ ಸಾವು ಬರದಿರಲು ಕಾರಣ ನಿನ್ನ ಓಲೆ ಮಹಿಮೆಯು || ೨೮ ||

ಹೇ ಶಿವೆ ಬ್ರಹ್ಮ ವಿಷ್ಣು ಇಂದ್ರ ನಿನಗೆ ನಮಿಸುತಲಿರುವಾಗ
ಸದಾಶಿವ ಬರುವುದತಿಳಿದು ಸ್ವಾಗತಕೆ ಹೊರಟ ನಿನ್ನಲ್ಲಿ
ಬ್ರಹ್ಮವಿಷ್ಣು ಇಂದ್ರಾದಿಗಳ ಕಿರೀಟವೆಲ್ಲ ನಿನ್ನ ಪಾದಕೆ
ತಾಗೀತು ನಿಧಾನವೆಂದು ನಿನ್ನ ಪರಿಜನರೆಲ್ಲ ಹೇಳುವರು || ೨೯ ||

ಹೇ ಭಗವತಿಯೆ ನಿನ್ನ ದೇಹದಿಂದ ಹೊರಗೆ ಹೊಮ್ಮುವ
ಕಿರಣದ ಸ್ವರೂಪ ಅಣಿಮಾ ಅಷ್ಟೈಶ್ವರ್ಯ ಸೇವಿತೆ ನಿನ್ನನು
ನಾನೆಂಬ ಐಕ್ಯ ಭಾವದಿ ಮುಕ್ಕಣ್ಣ ಕೊಡುವ ಸಂಪತ್ತ
ತಿರಸ್ಕರಿಸಿದರೆ ಪ್ರಳಯದ ಕಾಲಾಗ್ನಿ ಆರತಿ ಬೆಳಗುವುದು || ೩೦ ||

ಹೇ ದೇವಿ ಶಿವನು ಜಗತ್ತನು ಆಯಾಸಿದ್ಧಿಗಳ ಉತ್ಪತ್ತಿಯ
ಪ್ರತಿಪಾದಿಸುವ ಅರವತ್ನಾಲ್ಕು ವಿದ್ಯೆಲಿ ಪರಿಶೀಲಿಸಿ ಸುಮ್ಮನಾದನು
ನಿನ್ನ ಅನುಗ್ರಹದಿ ಸಕಲವು ಈಡೇರುವಂಥ ಸ್ವತಂತ್ರದ
ತಂತ್ರಶಾಸ್ತ್ರವ ಪರಶಿವನೆ ಲೋಕದಲಿ ಪ್ರಚುರ ಪಡಿಸಿರುವನು || ೩೧ ||

ಹೇ ದೇವಿ ನಿನ್ನ ನಾಮವು ಕ.ಏ.ಈ.ಲ.ಹ. ಸ.ಕ.ಹ.ಲ.
ಸ.ಈ.ಲ. ಎಂಬ ಹನ್ನೆರಡು ಅಕ್ಷರಗಳಿಂದ ಕೂಡಿರುವುದು
ಅಕ್ಷರವ ಮೂರು ಗುಂಪಾಗಿ ವಿಂಗಡಿಸಿ ಗುಂಪಿನ ಕೊನೆಯಲಿ
ಹ್ರೀಂಕಾರ ಸೇರಿಸಲು ನಿನ್ನ ಹೆಸರ ಅವಯವ ರೂಪ ಪಡೆಯುವುದು || ೩೨ ||

ಹೇ ನಿತ್ಯೆ ನಿನ್ನ ಮಂತ್ರದ ಮೊದಲು ಕಾಮರಾಜ ಬೀಜವ
ಭುವನೇಶ್ವರಿ ಬೀಜವ ಲಕ್ಷ್ಮಿಬೀಜವ ಸೇರಿಸಿ ಯೋಗೀಶ್ವರರು
ಜಪಮಾಲಿಕೆಯಲಿ ಮಂತ್ರ ಪಠಿಸಿ ನಿನ್ನನು ತ್ರಿಕೋಣದಿ
ಕಾಮಧೇನುವಿನ ಆಜ್ಯದಿ ಹೋಮವನು ಮಾಡಿ ಆರಾಧಿಸುವರು || ೩೩ ||

ಹೇ ಶಿವೆ ಜಗನ್ಮಾತೆ ನೀನು ಸೂರ್ಯಚಂದ್ರರನು ಸ್ತನವಾಗಿಸಿ
ಶಿವನಿಗೆ ಶರೀರವಾಗಿ ನೀವಿಬ್ಬರು ಶೇಷಶೇಷೀ ರೂಪವಾದ
ಸಂಬಂಧ ಆನಂದಭೈರವ ಆನಂದಭೈರವಿಯ ಸ್ವರೂಪದ
ನೀವಿಬ್ಬರು ಸಾಮರಸ್ಯದಿ ಒಟ್ಟಿಗೇ ಸಮಾನರಾಗಿರುವಿರಿ || ೩೪ ||

ಹೇ ಭಗವತಿ ಷಟ್‌ಚಕ್ರದ ಎಲ್ಲ ತತ್ವವು ನೀನೆ ಆಗಿರುವೆ
ಜಗತ್ತಾಗಿ ತೋರಿದರು ಜಗದಾಕಾರದಿ ವಿವರ್ತ ರೂಪದಲಿ
ತೋರಿಸಿಕೊಳ್ಳಲು ಶಿವನ ಪತ್ನಿಯ ರೂಪದಲಿ ಇದ್ದು ನೀನು
ಚಿದಾನಂದ ಸ್ವರೂಪ ಸದಾಶಿವನನ್ನು ಆಶ್ರಯಿಸುವೇ || ೩೫ ||

ಹೇ ಶಿವೆ ಆಜ್ಞಾಚಕ್ರದಲಿ ಕೋಟಿ ಸೂರ್ಯಚಂದ್ರರ ಕಾಂತಿಯಲಿ
ಪರಚೈತನ್ಯದಿ ಬೆಳಗುವ ಸರ್ವೋತ್ತಮ ಶಿವನ ವಂದಿಸುವೆ
ಪರಶಿವನನ್ನು ಭಕ್ತಿಯಲಿ ಧ್ಯಾನಿಸುವ ಭಕ್ತನು ಏಕಾಂತದಿ
ಅಪರಿಮಿತ ಪ್ರಕಾಶದಲಿ ಆನಂದಲೋಕದಲಿ ವಾಸಿಸುವನು || ೩೬ ||

ಹೇ ಶಿವೆ ವಿಶುದ್ಧಿ ಚಕ್ರದಲಿ ಶಿವನು ಸ್ಪಟಿಕದಂತೆ ನಿರ್ಮಲನು
ಆಕಾಶತತ್ತ್ವಜನಕ ಶಿವನನ್ನು ನಿನ್ನನ್ನು ವಂದಿಸುವೆ
ನಿಮ್ಮಿಂದ ಹೊರಹೊಮ್ಮವ ಬೆಳಕಿನ ಕಾಂತಿಯಲಿ ಲೋಕವು
ಅಂಧಕಾರ ನೀಗಿಕೊಂಡು ಚಕೋರ ಪಕ್ಷಿಯಂತೆ ನಲಿಯುವುದು || ೩೭ ||

ಹೇ ಶಿವೆ ಅನಾಹತ ಚಕ್ರದಲಿ ಜ್ಞಾನ ಕಮಲದ ಮಕರಂದ
ಹೀರುವ ಯೋಗೀಶ್ವರರ ಮಾನಸ ಸರೋವರ ಸಂಚರಿಸುತ
ಇಂಚರದಲಿ ಹದಿನೆಂಟು ರೀತಿ ವಿದ್ಯೆಗಳ ಉತ್ಪಾದಿಸುವ
ದೋಷನಿವಾರಣೆಗುಣದ ಹಂಸಜೋಡಿಯನು ಭಜಿಸುವೆನು || ೩೮ ||

ಹೇ ಶಿವೆ ಸ್ವಾಧಿಷ್ಠಾನ ಚಕ್ರದ ಅಗ್ನಿತತ್ತ್ವ ಆಶ್ರಯಿಸಿ ಇರುವ
ಸಂವರ್ತ ಹೆಸರಿನ ಶಿವನ ಮಹತ್ ಶಬ್ದದ ನಿನ್ನ ಸ್ತುತಿಸುವೆ
ಹರನ ಕೋಪದ ನೋಟ ಭೀಕರದಿ ಲೋಕವ ಸುಡುತಿರಲು
ಸುಯಾಂಬೆಯಾದ ನೀನು ಕರುಣಾದೃಷ್ಟಿಯಲಿ ತಂಪಾಗಿಸಿದೆ || ೩೯ ||

ಹೇ ಶಿವೆ ನಿನ್ನ ಮಣಿಪೂರ ಚಕ್ರವೆ ಮನೆಯಾಗಿ ಕಗ್ಗತ್ತಲ
ನಿವಾರಿಸುವ ಶಕ್ತಿಯ ಮಿಂಚಿಂದ ರತ್ನಾಭರಣದ
ಕಾಮನಬಿಲ್ಲನು ತಳೆದು ಹರನೆಂಬ ಸೂರ್ಯ ಕಾದಿರುವ
ಮೂರು ಲೋಕಕು ಮಳೆಗರೆವ ವಿಶಿಷ್ಠ ಮೋಡವ ಭಜಿಸುವೆನು || ೪೦ ||

ಹೇ ಶಿವೆ ಮೂಲಾಧಾರ ಚಕ್ರದಲಿ ಲಾಸ್ಯಾಸಕ್ತೆ ಸಮಯೆ ಎಂಬುವ
ಆನಂದಭೈರವಿಯೊಂದಿಗೆ ಶೃಂಗಾರನವರಸ ಭರಿತವಾದ
ತಾಂಡವನರ್ತನ ಮಾಡುತ್ತ ಜಗತ್ತಿನ ಸೃಷ್ಟಿಗಾಗಿ ಕೂಡಿರುವ
ಆನಂದಭೈರವ ಭೈರವಿಯರೆ ಜಗತ್ತಿನ ತಂದೆತಾಯಿಯರು || ೪೧ ||

ಹೇ ಶಿವೆ ದ್ವಾದಿಶಾದಿತ್ಯರು ಕಿರೀಟದಲಿರುವ ರತ್ನಗಳು
ನಿನ್ನ ಚಿನ್ನದ ಕಿರೀಟವ ವರ್ಣಿಸುತಲಿರುವ ಕವಿವರ್ಯರು
ರತ್ನಕಾಂತಿಯಂತಿರುವ ಚಂದ್ರಖಂಡವನು ನೋಡಿ
ಕಾಮನಬಿಲ್ಲೆಂದು ತಿಳಿದು ಇದನ್ನು ವರ್ಣಿಸದೆ ಇರುವರೇನು || ೪೨ ||

ಹೇ ಶಿವೆ ನಿನ್ನ ಕೇಶಪಾಶ ಅರಳಿದ ಕನ್ನೈದಿಲೆಯ ಹೂಗೊಂಚಲು
ನಿನ್ನ ಕೋಮಲ ಕೇಶಪಾಶದ ಸುಗಂಧ ಪಡೆಯಲು ದೇವೇಂದ್ರನ
ಉದ್ಯಾವನದ ಕಲ್ಪವೃಕ್ಷದ ಹೂವೆಲ್ಲ ನಿನ್ನ ಮುಡಿ ಸೇರಿದೆ
ನಿನ್ನ ಕೇಶಪಾಶವು ನಮ್ಮ ಅಜ್ಞಾನವೆಂಬ ಕತ್ತಲ ದೂರಮಾಡಲಿ || ೪೩ ||

ಹೇ ಶಿವೆ ನಿನ್ನ ಬೈತಲೆಯು ಸೌಂದರ್ಯದ ಹೊನಲಿನ ದಾರಿಯು
ದಟ್ಟ ಕೇಶಪಾಶದಲಿ ಬಾಲರವಿಯ ಕಿರಣ ಎಂಬಂತಿದೆ
ಸಿಂಧೂರದ ಅಲಂಕಾರದಿ ಸದಾ ಹೊಂಬಣ್ಣದಿ ಶೋಭಿಸುವ
ಇಂತಹ ನಿನ್ನ ಬೈತಲೆಯು ನಮಗೆ ಕ್ಷೇಮವನು ಉಂಟು ಮಾಡಲಿ || ೪೪ ||

ಹೇ ಶಿವೆ ಮರಿದುಂಬಿಯಂತೆ ಕಪ್ಪು ಮುಂಗುರುಳಿನ ನಿನ್ನ ಚೆಲುವು
ನಿನ್ನ ಸೌಂದರ್ಯದ ಮುಂದೆ ಕಮಲದ ಚೆಲುವು ಸಪ್ಪೆಯಾಗಿದೆ
ನಿನ್ನ ಮುಗುಳ್ನಗೆ ಕಾಂತಿಯ ಪರಿಮಳದ ಮುಖದ ಕಮಲದಲಿ
ಸ್ಮರಾಂತಕ ಸದಾಶಿವನ ಕಣ್ಣೆಂಬ ದುಂಬಿಗಳು ಆನಂದಿಸುತಲಿವೆ || ೪೫ ||

ಹೇ ಶಿವೆ ನಿನ್ನ ಹಣೆ ಅತ್ಯಂತ ಶುಭ್ರದಿ ಸೌಂದರ್ಯದಿ ಕಂಗೊಳಿಸಿದೆ
ಕಿರೀಟದ ಚಂದ್ರಖಂಡದ ಒಂದು ಭಾಗವನು ಕೆಳಮುಖವು
ಹಣೆಯೆಂಬ ಚಂದ್ರಖಂಡದ ಇನ್ನೊಂದು ಭಾಗವ ಮೇಲ್ಮುಖವು
ಇಟ್ಟರೆ ಅಮೃತ ಸುರಿಸುವ ಪೂರ್ಣಚಂದ್ರನಂತೆ ಕಾಣುವುದು || ೪೬ ||

ಹೇ ಶಿವೆ ಭಯ ನಿವಾರಿಸುವ ನಿನ್ನ ಹುಬ್ಬು ಮನ್ಮಥನ ಧನುಸ್ಸಂತೆ
ದುಂಬಿಗಳಂತಿರುವ ನಿನ್ನ ಕಣ್ಣುಗಳೆ ಧನುಸ್ಸಿನ ಹೆದೆಯಾಗಿದೆ
ಮನ್ಮಥ ಧನುಸ್ಸನು ಹಿಡಿದು ಮಣಿಬಂಧಮುಷ್ಠಿ ಮುಚ್ಚಿರಲು
ನಿನ್ನ ಹುಬ್ಬೆಂಬ ಧನುಸ್ಸಿನ ಮಧ್ಯ ಕಾಣಿಸದೆಂದು ತಿಳಿಯುವೆ || ೪೭ ||

ಹೇ ಶಿವೆ ನಿನ್ನ ಬಲಗಣ್ಣು ಸೂರ್ಯನಾಗಿ ಹಗಲು ಮಾಡಿ
ನಿನ್ನ ಎಡಭಾಗದ ಕಣ್ಣು ಚಂದ್ರನಾಗಿ ರಾತ್ರಿ ಮಾಡುವುದು
ಅರೆಬಿರಿದ ಕಮಲದಂತೆ ಶೋಭಿಸುವ ನಿನ್ನ ಮೂರನೆ ಕಣ್ಣು
ಹಗಲುರಾತ್ರಿಗಳ ಮಧ್ಯದ ಸಂಧ್ಯಾಕಾಲವನು ಮಾಡುವುದು || ೪೮ ||

ಹೇ ಶಿವೆ ನಿನ್ನ ಕಣ್ಣು ವಿಶಾಲ ಮಂಗಳಕರವಾಗಿ ಕಲ್ಯಾಣಿ
ಪೂರ್ಣಕಾಂತಿ ಸ್ಫುಟರುಚಿ ಕನ್ನೈದಿಲೆ ಜಯಿಸದೆ ಅಯೋಧ್ಯಾ
ಕರುಣಾಧಾರ ಅವ್ಯಕ್ತ ಮಧುರಾ ದೀರ್ಘ ಭೋಗವತಿ ರಕ್ಷೆ ಅವಂತಿ
ನಿನ್ನ ಹೆಸರ ತಳೆದಿರುವ ಎಲ್ಲಾ ಪಟ್ಟಣಗಳು ಶೋಭಿಸುತಿದೆ || ೪೯ ||

ಹೇ ಶಿವೆ ಕವಿಕಾವ್ಯ ಕುಸುಮ ಗುಚ್ಛದಿ ಶೃಂಗಾರಾದಿ ನವರಸದ
ಮಕರಂದ ಸವಿಯುವ ನಿನ್ನ ಕಿವಿಗಳನು ಕಡೆಗಣ್ಣಿನ
ದುಂಬಿಗಳು ನೋಡುತಿರಲು ಅದನು ನೋಡಿದ ಹಣೆಗಣ್ಣು || ೫೦ ||
ಅಸೂಯೆಯಿಂದ ಮುನಿದು ನಸುಗೆಂಪಾಗಿದೆ ಎಂದೆನಿಸಿದೆ

ಹೇ ಶಿವೆ ನಿನ್ನ ದೃಷ್ಟಿಯು ಪತಿ ಸದಾಶಿವನಲಿ ಶೃಂಗಾರ
ಇತರರಲಿ ಬೀಭತ್ಸ ಗಂಗೆಯಲಿ ರೌದ್ರ ತ್ರಿಪುರದ
ಶಿವಚರಿತ್ರೆಯಲಿ ಅದ್ಭುತ ಹರನ ಹಾವಿಂದ ಭಯಾನಕ
ತಾವರೆ ವೀರ ಸಖಿ ಹಾಸ್ಯ ಭಕ್ತರಲಿ ಕರುಣಾ ರಸಪೂರ್ಣವು || ೫೧ ||

ಹೇ ಶಿವೆ ಹಿಮವಂತನ ಕುಲಕೆ ನೀನು ಶಿರೋಭೂಷಣದ ಹೂಮೊಗ್ಗೆ
ಕಣ್ಣರೆಪ್ಪೆಯನು ಬಾಣದ ಹಿಂಬದಿಗರಿಯಂತೆ ಧರಿಸಿರುವ
ತ್ರಿಪುರಾಂತಕ ಶಿವನ ಮನಃಶಾಂತಿ ಕದಡಿ ತಪಸ್ಸನು
ಕೆಡಿಸಲುಕಿವಿವರೆಗೆಳೆದ ಮನ್ಮಥನ ಬಾಣದ ಲೀಲೆ ಪಡೆದಿದೆ || ೫೨ ||

ಹೇ ಈಶನರಸಿ ನೀನು ಕಣ್ಣಿಗೆ ಕಾಡಿಗೆಯ ಹಚ್ಚಿರುವೆ
ಕೆಂಪು ಬಿಳಿ ಕಪ್ಪು ಬಣ್ಣಗಳ ಧರಿಸಿರುವ ನಿನ್ನ ಕಣ್ಣುಗಳು
ಪ್ರಳಯಕಾಲದಲಿ ನಿನ್ನಲಿ ಲೀನರಾದ ಬ್ರಹ್ಮ ವಿಷ್ಣು ಈಶ್ವರರ
ಪುನಃ ಸೃಷ್ಟಿಸಲು ನಿನ್ನಕಣ್ಣಲಿ ಮೂರೂ ಗುಣಗಳ ಧರಿಸಿದಂತಿದೆ || ೫೩ ||

ಹೇ ಶಿವೆ ಶಿವನಲಿ ಮನವ ಮುಡುಪಾಗಿಟ್ಟಿರುವ ದಯಾಭರಿತೆ
ಕೆಂಪುಬಿಳಿ ಕಪ್ಪು ಬಣ್ಣದ ಮೂರು ಕಣ್ಣುಗಳಿಂದ ಕ್ರಮವಾಗಿ
ಶೋಣಾನದಿ ಗಂಗಾನದಿ ಕಾಳಿಂದಿ ನದಿಹರಿಸಿ ನಮ್ಮನು
ಪವಿತ್ರರ ಮಾಡಲು ನದಿಯ ಸಂಗಮ ಸ್ಥಾನವಾಗಿ ನಿರ್ಮಿಸಿದೆ || ೫೪ ||

ಹೇ ಶಿವೆ ಹಿಮಗಿರಿಸುತೆ ನೀನು ಕಣ್ಣು ಮುಚ್ಚಿದರೆ ಪ್ರಳಯ
ಕಣ್ಣು ತೆರೆದರೆ ಸೃಷ್ಟಿಯು ಎಂದು ಜ್ಞಾನಿಗಳು ಹೇಳುವರು
ನೀನು ಕಣ್ ತೆರೆದು ಸೃಷ್ಟಿಸಿದ ನಿನ್ನ ಜಗತ್ತನ್ನು ರಕ್ಷಿಸಲು
ಯಾವಾಗಲೂ ಕಣ್ಣನು ತೆರೆದಿರುವೆಯೆಂದು ಊಹಿಸುವೆ || ೫೫ ||

ಹೇ ಅಪರ್ಣೆ ಕಿವಿವರೆಗು ಇರುವ ಕಣ್ಣನು ನೋಡಿ ಮೀನುಗಳು
ತಮ್ಮ ಬಗ್ಗೆಯೆ ಚಾಡಿಯೆಂದು ಹೆದರಿರೆಪ್ಪೆಮುಚ್ಚದೆ ನೀರಲ್ಲಡಗಿವೆ
ನಿನ್ನ ಕಣ್ಣುಗಳ ಶೋಭೆಯು ದಳದಬಾಗಿಲು ಮುಚ್ಚುವ ಕನ್ನೈದಿಲೆಯ
ಪ್ರಾತಃಕಾಲ ತೊರೆದು ರಾತ್ರಿ ದಳದಬಾಗಿಲು ತೆರೆದು ಪ್ರವೇಶಿಸುವುದು || ೫೬ ||

ಹೇ ಸರ್ವಮಂಗಳೆ ನಿನ್ನ ಕಣ್ಣುಗಳು ಅರೆಬಿರಿದ ಕನ್ನೈದಿಲೆ
ಕರುಣಾಕಟಾಕ್ಷವ ನೀ ತೋರಿದರೆ ಕೃತಾರ್ಥನಾಗುವನು
ನಿನ್ನ ಕರುಣೆಯಿಂದ ತನ್ನ ಕಿರಣದಿ ಚಂದ್ರನು ತಂಪೆರೆದು
ಕಾಡಿಗು ಮತ್ತು ನಾಡಿಗು ಸಮಾನ ಬೆಳಕು ನೀಡುವನು || ೫೭ ||

ಹೇ ಗಿರಿಸುತೆ ಬಾಗಿರುವ ನಿನ್ನ ಸುಂದರ ಕಿವಿಯ ಆಭರಣ
ಮನ್ಮಥನಲ್ಲಿರುವ ಬಿಲ್ಲಿನ ಸೊಬಗಿನ ನೆನಪು ಬರುವುದು
ಕಿವಿಯಂಚಲಿ ಅಡ್ಡವಾಗಿ ಹರಡಿ ಶೋಭಿಸುವ ಕಡೆಗಣ್ನೋಟ
ಕಿವಿಯ ಗಡಿದಾಟಿ ಹೋಗಲು ಬಿಲ್ಲಿಗೆ ಹೂಡಿದ ಬಾಣದಂತಿದೆ || ೫೮ ||

ಹೇ ಶಿವೆ ನಿನ್ನ ಮುಖದಲಿ ಕೆನ್ನೆ ಸದಾಶುಭ್ರದಿ ಹೊಳೆವುದು
ಚಕ್ರಾಕಾರ ಕಿವಿಯೋಲೆ ಮನ್ಮಥನ ರಥವ ಹೋಲುವುದು
ಸೂರ್ಯಚಂದ್ರ ಚಕ್ರವಾಗಿ ಭೂಮಿಯ ರಥವೇರಿ ಬರುವ ಶಿವನ
ಮನ್ಮಥ ನಿನ್ನ ಮುಖ ರಥವೇರಿ ಶಿವನ ಮನವನು ನೋಯಿಸುವನು || ೫೯ ||

ಹೇ ಶರ್ವಾಣಿ ನಿನ್ನ ಮಧುರ ಸವಿನುಡಿಯ ಹೊನಲನು
ವಾಗ್ದೇವಿ ಪಾನಮಾಡುತ ಶ್ಲಾಘನೆಯಿಂದ ತಲೆದೂಗಲು
ಕರ್ಣಾಭರಣದ ಕಿರುಗೆಜ್ಜೆ ಅಲ್ಲಾಡಿ ಝಣಝಣ ಶಬ್ದವು
ನಿನ್ನ ಸವಿನುಡಿ ಅನುಮೋದಿಸಿ ಮೆಚ್ಚುಗೆಯ ಮಾತು ಆಡುವಂತಿದೆ || ೬೦ ||

ಹೇ ಶಿವೆ ಹಿಮವಂತನ ಪುತ್ರಿಯಾಗಿ ಕೀರ್ತಿ ಪತಾಕೆಯಾದೆ ಕುಲಕೆ
ನಿನ್ನ ಸುಂದರ ನಾಸಿಕ ನಮಗೆ ಯೋಗ್ಯ ಇಷ್ಟಾರ್ಥ ಅನುಗ್ರಹಿಸಲಿ
ಮುತ್ತುಗಳ ರಾಶಿ ತುಂಬಿ ನಾಸಾವಂಶ ಸಮೃದ್ಧವಾಗಿ
ನೀನು ಉಸಿರಾಡಿದಾಗ ಬಂದ ಮುತ್ತುಮೂಗುತಿಯಾಗಿ ರಂಜಿಸಿದೆ || ೬೧ ||

ಹೇ ಶಿವೆ ಹರಳಂತ ಹಲ್ಲುಳ್ಳ ನಿನ್ನ ತುಟಿಯಲಿ ಕೆಂಪು ಕಾಂತಿಯಿದೆ
ಹವಳದ ಬಳ್ಳಿಯಲ್ಲಾದರು ಹಣ್ಣಾದರೆ ಹೋಲಿಕೆ ಆಗಬಹುದು
ತೊಂಡೆಹಣ್ಣಿಗೆ ನಿನ್ನ ತುಟಿಯ ಪ್ರತಿಬಿಂಬದಿ ಶೋಭೆ ಬಂದಿರಲು
ನಿನ್ನ ಸುಂದರ ತುಟಿಕಾಂತಿಗೆ ಹೋಲಿಕೆಯು ಜಗತ್ತಲ್ಲಿ ಎಲ್ಲಿಯೂ ಇಲ್ಲ || ೬೨ ||

ಹೇ ಶಿವೆ ಚಂದ್ರಕಿರಣವ ಪಾನಮಾಡುವ ಚಕೋರ ಪಕ್ಷಿಗಳು
ನಲಿವ ನಿನ್ನ ಮುಗುಳ್ನಗೆಯ ಚಂದ್ರಕಿರಣವೆಂದು ಪಾನಮಾಡಿದವು
ಅತಿಯಾದ ಸಿಹಿಯಿಂದ ನಾಲಿಗೆಯು ಜಡ್ಡಾಗಿ ಸರಿಮಾಡಲು
ಹುಳಿಗಂಜಿಯೆಂದು ತಿಳಿದು ರಾತ್ರಿಬೆಳದಿಂಗಳನ್ನೆ ಕುಡಿಯುತ್ತಿವೆ || ೬೩ ||

ಹೇ ಶಿವೆ ಸದಾಶಿವನ ಗುಣವ ನಿರಂತರ ಜಪಿಸುವ
ನಿನ್ನ ನಾಲಿಗೆಯ ಕಾಂತಿ ಕೆಂಪುದಾಸವಾಳದ ಹೂವಂತಿದೆ
ನಾಲಿಗೆ ತುದಿಯಲಿರುವ ಸ್ಫಟಿಕದಂತೆ ಬಿಳುಪು ಆಗಿರುವ
ಶಾರದೆ ಕೂಡ ಕೆಂಪಾಗಿ ಮಾಣಿಕ್ಯಮೂರ್ತಿಯಂತೆ ತೋರುವಳು || ೬೪ ||

ಹೇ ಶಿವೆ ಇಂದ್ರ ಉಪೇಂದ್ರ ದೇವತೆಗಳೆಲ್ಲರು ಯುದ್ಧಕೆ
ನಿನ್ನ ಮಗ ಷಣ್ಮುಖನನ್ನು ಮುಂದಿಟ್ಟುಕೊಂಡು ಯುದ್ಧದಲಿ
ತಾರಕಾಸುರ ಮೊದಲಾದ ದೈತ್ಯರನ್ನೆಲ್ಲಾ ಗೆದ್ದು ಬಂದು
ನಿನ್ನ ಅನುಗ್ರಹದಿ ವಿಜಯವಾಯಿತೆಂದು ಕೃತಜ್ಞತೆಯಲಿ

ಹೇ ಶಿವೆ ಇಂದ್ರ ಉಪೇಂದ್ರ ಷಣ್ಮುಖ ನಿನ್ನ ಬಳಿ ಬಂದು
ಶಿರಸ್ತ್ರಾಣವ ತೆಗೆದಿಟ್ಟು ಯುದ್ಧ ಕವಚದೊಂದಿಗೆ ನಮಸ್ಕರಿಸಿ
ಪ್ರಮಥಗಣ ಚಂಡನಿಗೆ ಸಲ್ಲುವ ಶಿವನಿರ್ಮಾಲ್ಯವ ಕೊಟ್ಟು
ನಿನ್ನ ಮುಖ ತಾಂಬೂಲ ಕವಳವ ಭಕ್ತಿಯಲಿ ಸೇವಿಸುವರು || ೬೫ ||

ಹೇ ಶಿವೆ ಶಾರದೆಯು ನಿನ್ನ ಪತಿ ಶಿವನ ದಿವ್ಯ ಚರಿತ್ರೆಯ
ತನ್ನ ಕಚ್ಛಪೀ ವೀಣೆಯಲಿ ನುಡಿಸಲು ಮೆಚ್ಚಿನೀ ಮಧುರವಾಗಿ
ಮಾತನಾಡಿದ ಮಾಧುರ್ಯ ಆಲಿಸಿದ ಶಾರದೆ ತೃಪ್ತಿಯಲಿ
ವೀಣೆನಾದ ಸಪ್ಪೆಯೆನಿಸಿ ವೀಣೆಯನು ವಸ್ತ್ರದಲಿ ಮುಚ್ಚಿಡುವಳು || ೬೬ ||

ಹೇ ಗಿರಿಸುತೆ ನಿನ್ನ ತಂದೆ ಹಿಮವಂತನು ತನ್ನ ಕೈಯ್ಯಿಂದ
ನಿನ್ನ ಚೆಲುವಾದ ಗಲ್ಲವ ಪ್ರೀತಿಯಲಿ ಆಗಾಗ ಸವರಿರುವನು
ನಿನ್ನ ಅಧರಾಮೃತಪಾನ ಆಸಕ್ತನಾದ ನಿನ್ನ ಪತಿಶಿವನು
ನಿನ್ನ ಮುಖಗನ್ನಡಿಯ ಹಿಡಿಕೈ ಗಲ್ಲವ ಕೈಯ್ಯಲಿ ಹಿಡಿದು ಎತ್ತುವನು || ೬೭ ||

ಹೇ ಶಿವೆ ಸದಾಶಿವನ ಭುಜಾಲಿಂಗನದಿ ನಿನ್ನ ಕಂಠವು
ರೋಮಾಂಚನದಿ ಕಮಲದ ದಂಟಂತೆ ಚೆಲುವು ಕಾಣುವುದು
ಕಂಠದ ಮುತ್ತಿನಹಾರ ನಿನ್ನ ಮೈಗೆಹಚ್ಚಿದ ಚಂದನದಿ
ಕೆಸರು ತಾಗಿದ ಕಮಲದ ಬಳ್ಳಿಯ ಸೊಬಗನು ಹೊಂದುವುದು || ೬೮ ||

ಹೇ ಶಿವೆ ಸಂಗೀತದ ಲಯ ಗತಿ ಸ್ವರ ಕಂಪನದ ನಿಪುಣೆ
ನಿನ್ನ ಕಂಠದಲಿ ವಿವಾಹದ ಮಂಗಲಸೂತ್ರವ ನೆನಪಿಸುವ
ಮೂರು ಭಾಗ್ಯ ರೇಖೆಗಳು ಮಧುರ ರಾಗಗಳಿಗೆ ಆಶ್ರಯದ
ಷಡ್ಜಮಧ್ಯಮ ಗಾಂಧಾರಗಳ ಗಡಿರೇಖೆಗಳಂತೆ ಶೋಭಿಸುತಿದೆ || ೬೯ ||

ಹೇ ಶಿವೆ ಭುಜಲತೆಗಳು ತಾವರೆಬಳ್ಳಿಯಂತೆ ಕೋಮಲವು
ಬ್ರಹ್ಮನು ಏಕಕಾಲದಿ ತನ್ನ ನಾಲ್ಕು ಮುಖಗಳಿಂದ ವರ್ಣಿಸುವನು
ಬ್ರಹ್ಮನ ಒಂದು ತಲೆಯನು ಶಿವನು ಚಿವುಟಿರಲು ಹೆದರಿ
ನಿನ್ನ ಅಭಯಹಸ್ತಪಡೆಯಲು ಒಟ್ಟಿಗೆ ನಾಲ್ಕು ಮುಖದಿ ವರ್ಣಿಸುವನು || ೭೦ ||

ಹೇ ಪಾರ್ವತಿ ಉಗುರುಗಳ ಕಾಂತಿಯಿಂದ ನಿನ್ನ ಕೈಗಳು
ಅರೆಬಿರಿದ ತಾವರೆಗಿಂತ ತುಂಬ ಸುಂದರವಾಗಿ ಶೋಭಿಸುವುದು
ಲಕ್ಷ್ಮಿಯ ಅಂಗಾಲುಗಳಿಗೆ ಹಚ್ಚಿದ ಲಾಕ್ಷಾರಸದಿ ಕೆಂಪಾಗಿ
ಕೆಂದಾವರೆಯಾದರೆ ನಿನ್ನ ಕೈಗಳ ಚೆಲುವಿಗೆ ಸ್ವಲ್ಪ ಹೋಲುವುದು || ೭೧ ||

ಹೇ ಶಿವೆ ನಿನ್ನ ಮಕ್ಕಳಾದ ಸ್ಕಂದ ವಿನಾಯಕಗೆ ಸ್ತನ್ಯಪಾನ
ಮಾಡಿಸುವಾಗ ವಿನಾಯಕ ತನ್ನ ಕುಂಭಸ್ಥಳವೆಂದು ಭ್ರಮಿಸಿ
ನಿನ್ನ ಸ್ತನಗಳ ನೋಡಿ ತನ್ನ ಕುಂಭಸ್ಥಳ ಮುಟ್ಟಿ ನೋಡುತ
ಮತ್ತೆ ಮತ್ತೆ ಮುಟ್ಟಿ ನೋಡುತ ಹಾಸ್ಯದ ಹೊನಲನ್ನೆ ಹರಿಸಿದನು || ೭೨ ||

ಹೇ ಪಾರ್ವತಿ ನಿನ್ನ ಸ್ತನವು ಅಮೃತರಸ ಮಾಣಿಕ್ಯ ಕಲಶವು
ನಿನ್ನ ಸ್ತನ್ಯಪಾನ ಮಾಡಿದ ಗಜಮುಖ ಷಣ್ಮುಖರು ಈವರೆಗೂ
ಸ್ತ್ರೀಸಂಗಕ್ಕೆ ಮೂಲವಾದ ಶೃಂಗಾರರಸವನ್ನೆ ತಿಳಿಯದೆ
ಈಗಲೂ ಕೂಡ ಅವರಿಬ್ಬರು ಕುಮಾರರಾಗಿಯೆ ಉಳಿದಿರುವರು || ೭೩ ||

ಹೇ ಶಿವೆ ನಿನ್ನೆದೆಯ ಮೇಲೆ ಮುತ್ತಿನ ಹಾರವು ಶೋಭಿಸಿದೆ
ಶಿವನು ಗಜಾಸುರನ ಕುಂಭಸ್ಥಳ ಬೇಧಿಸಿ ಬಂದ ಮುತ್ತುಗಳ
ಪೋಣಿಸಿದ ಹಾರವು ನಿನ್ನ ತುಟಿ ಕಾಂತಿಯಲಿ ಕೆಂಪಾಗಿ
ಮಿಶ್ರಿತ ವರ್ಣವಾಗಿ ಶಿವನ ಪ್ರತಾಪ ಮತ್ತು ಕೀರ್ತಿ ಧರಿಸಿದಂತಿದೆ || ೭೪ ||

ಹೇ ಶಿವೆ ನಿನ್ನೆದೆಯ ಹಾಲು ಹೃದಯದಲಿ ಹುಟ್ಟಿದ ಹಾಲ್ಗಡಲು
ಸರಸ್ವತಿಮಯ ಸ್ತನ್ಯವನು ಧರಿಸಿರುವ ಪರಮ ದಯಾಳು
ನಿನ್ನೆದೆ ಹಾಲು ಕೇರಳದ ಮಗು ಕುಡಿದು ಅದರ ಪ್ರಭಾವದಿ
ಕವಿಪುಂಗವರ ಮಧ್ಯದಲಿ ಪರಮಶ್ರೇಷ್ಠ ಕವಿ ಎನಿಸಲ್ಪಟ್ಟಿದೆ || ೭೫ ||

ಹೇ ಶಿವೆ ಶಿವನ ತಪಸ್ಸಿಗೆ ಮನ್ಮಥನು ಭಂಗ ಮಾಡಿರಲು
ಶಿವನು ತನ್ನ ಹಣೆಗಣ್ಣಿಂದ ಅವನ ದಹಿಸುತಿರಲು ಮನ್ಮಥನು
ರಕ್ಷಣೆಗೆ ನಿನ್ನ ನಾಭಿಯ ಸರೋವರದಿ ಮುಳುಗಿ ಬೆಂಕಿ ಆರಿ
ಬಳ್ಳಿಯಂತೆ ಹೊಗೆ ಮೇಲೆದ್ದು ರೋಮಾವಳಿಯೆಂದು ಜನ ತಿಳಿದರು || ೭೬ ||

ಹೇ ಶಿವೆ ನಿನ್ನ ನಡುವಿನಲಿ ನೀಲರೋಮಾವಳಿ ತೋರುತಿದೆ
ರೋಮಾವಳಿಯು ಯಮುನಾ ನದಿಲಿರುವ ಸಣ್ಣ ಅಲೆಯಂತಿದೆ
ನಿನ್ನ ಸ್ತನದ್ವಯ ಮಧ್ಯದಲೀ ಸಿಲುಕಿದ ಸೂಕ್ಷ್ಮದ ಆಕಾಶ
ಅಲ್ಲಿರದೆ ನಿನ್ನ ನಾಭಿಯಲಿ ಸೇರಿಕೊಳ್ಳುವಂತೆ ತೋರುವುದು || ೭೭ ||

ಹೇ ಗಿರಿಸುತೆ ನಿನ್ನ ನಾಭಿ ಸ್ಥಿರ ಗಂಗಾನದಿಯ ಸುಳಿಯಂತೆ
ಸ್ತನಗಳೆ ಮೊಗ್ಗಾಗಿರುವ ರೋಮಾವಲಿಲತೆಗೆ ಪಾತಿಯಂತೆ
ಕಾಮನಗ್ನಿಗೆ ಹೋಮಕುಂಡ ರತಿಗೆ ವಿಲಾಸದ ಗೃಹದಂತೆ
ಸದಾಶಿವನ ಕಂಗಳಿಗೆ ಸುಖವನ್ನು ನೀಡುವ ಹೆಬ್ಬಾಗಿಲಂತೆ || ೭೮ ||

ಹೇ ಶೈಲಪುತ್ರಿ ಸ್ತ್ರೀರತ್ನಳೆ ಸ್ತನಭಾರದಿಂದ ನಿನ್ನ ನಡುವು
ಸದಾ ಬಳುಕುತಾ ಇರಲು ದೇಹ ಸ್ವಲ್ಪ ಮುಂದೆ ಬಾಗುವುದು
ನದಿಯ ಪ್ರವಾಹದಿ ದಡವು ಕೊರೆದು ಅದರ ಮೇಲೆ ಬೆಳದಿಹ
ಮರದಂತೆ ಆಗದೆ ನಿನ್ನ ನಡುವು ಚಿರಕಾಲ ಶೋಭಿಸಲಿ || ೭೯ ||

ಹೇ ಶಿವೆ ನಿನ್ನ ಸ್ತನಗಳು ಬಂಗಾರದ ಕಲಶಗಳಂತೆ
ನಿನ್ನ ಬೆವರು ಎದೆಗಂಟಿ ಕುಪ್ಪಸವು ಕಂಕುಳಲಿ ಒತ್ತಿದಂತಿದೆ
ನಡುವು ಬಾಗದಿರಲೆಂದು ಮನ್ಮಥನು ಲವಲೀ ಬಳ್ಳಿಯನು
ಮೂರು ಸುತ್ತು ಕಟ್ಟಿದಂತೆ ತೋರಿ ನಿನ್ನ ತ್ರಿವಳಿ ಶೋಭಿಸುತಿದೆ || ೮೦ ||

ಹೇ ಪಾರ್ವತಿ ನಿನ್ನ ತಂದೆ ವಿವಾಹ ಕಾಲದಲಿ ನಿನಗೆ
ತನ್ನ ನಿತಂಬ ಪ್ರದೇಶದಿ ಹೊರತೆಗೆದು ಗುರುತ್ವ ವಿಶಾಲತೆಯ
ಬಳುವಳಿಯಾಗಿ ಕೊಟ್ಟಿರಲು ನಿನ್ನ ಅತಿಶಯವಾದ ನಿತಂಬ
ಸಮಸ್ತ ಭೂಮಂಡಲವ ಆವರಿಸಿ ಹಗುರವ ಮಾಡುವುದು || ೮೧ ||

ಹೇ ಶಿವೆ ಪರಮಪೂಜ್ಯಳೆ ಸಲಗದ ಸೊಂಡಿಲಿನ ಚೆಲುವನು
ಚಿನ್ನದ ಬಾಳೆಕಂಬಗಳ ಚೆಲುವನು ಮೀರಿಸಿದೆ ನಿನ್ನ ತೊಡೆಯು
ಪತಿಸದಾಶಿವನಿಗೆ ನೀನು ದಿನವು ನಮಸ್ಕರಿಸಿ ಮಂಡಿಯು
ಕಠಿಣವಾಗಿ ಐರಾವತದ ಕುಂಭಸ್ಥಳದ ಸೊಬಗ ಸೋಲಿಸಿದೆ || ೮೨ ||

ಹೇ ಶಿವೆ ಹರನ ಸೋಲಿಸಲು ನಿನ್ನ ಮೊಣಕಾಲುಗಳ ಭತ್ತಳಿಕೆ ಮಾಡಿ
ಮನ್ಮಥನು ಐದು ಬಾಣಗಳ ಇಮ್ಮಡಿಯಾಗಿಸಿ ತುಂಬಿರುವನು
ಇಂದ್ರಾದಿ ದೇವತೆಗಳ ಕಿರೀಟದಿ ಉಜ್ಜಿದ ಹರಿತವಾದ
ನಿನ್ನ ಪಾದದುಗುರೇ ಹತ್ತು ಬಾಣದಲಗಿನಂತೆ ಕಾಣುವುದು || ೮೩ ||

ಹೇ ಶಿವೆ ನಿನ್ನ ಪಾದಪುಷ್ಪವನು ಉಪನಿಷತ್ತುಗಳು ಮುಡಿದಿವೆ
ಶಿವನ ಮುಡಿಗಂಗೆ ನಿನ್ನ ಪಾದತೊಳೆಯುವ ನೀರಾದಳು
ವಿಷ್ಣುಕಿರೀಟ ಮಣಿ ನಿನ್ನ ಪಾದಕೆ ಲಾಕ್ಷಾರಸ ಹಚ್ಚುವುದು
ಇಂತಹ ನಿನ್ನ ಪಾದಗಳ ಕರುಣೆಯಿಂದ ನನ್ನ ತಲೆಯ ಮೇಲಿಡು || ೮೪ ||

ಹೇ ದೇವಿ ಅರಗಿನರಸ ಲೇಪನದಿಂದ ಕಾಂತಿಬೀರಿ
ಕಣ್ಣಿಗೆ ತಂಪೀಯುವ ನಿನ್ನ ಸುಂದರ ಪಾದಕೆ ನಮಿಸುವೆ
ನಿನ್ನ ಪಾದತಾಡನದಿ ಹೂಬಿಟ್ಟ ಅಶೋಕ ವೃಕ್ಷ ಕಂಡು
ತನಗೆ ಸಿಗಲಿಲ್ಲವೆಂದು ಸದಾಶಿವನು ಅಸೂಯೆ ಪಡುವನು || ೮೫ ||

ಹೇ ಶಿವೆ ಪ್ರಣಯಕಾಲದಲಿ ಶಿವನು ಪರಸ್ತ್ರೀಯ ಹೆಸರನು
ನಿನ್ನಲಿ ಸುಳ್ಳಾಗಿ ಹೇಳಿದ ತಪ್ಪಿನ ಕ್ಷಮೆಗೆ ನಿನ್ನ ಕಾಲಿಗೆರಗಿದ
ಪ್ರಣಯ ಕೋಪದಿ ಹಣೆಗೆ ನೀ ಪಾದ ತಾಡಿಸಲು ಮನ್ಮಥನು
ಹರನು ತನ್ನ ಸುಟ್ಟ ವ್ಯಥೆಗೆ ನಿನ್ನ ಕಾಲ್ಗೆಜ್ಜೆನಾದದ ಜೊತೆ ನಗುವನು || ೮೬ ||

ಹೇ ದೇವಿ ಜಗನ್ಮಾತೇ ಕಮಲವು ರಾತ್ರಿಯಲ್ಲಿ ಮುದುಡಿ
ಹಗಲು ಅರಳಿ ಲಕ್ಷ್ಮಿಯ ವಾಸ ಸ್ಥಾನವಾಗಿ ಪ್ರಕಾಶಿಸುವುದು
ರಾತ್ರಿ ಹಗಲು ಅರಳಿರುವ ನಿನ್ನ ಪಾದಕಮಲವು ಭಕ್ತರಿಗೆ
ಸಂಪತ್ತು ನೀಡಿ ಲೋಕದಲಿ ಕಾಣುವ ಕಮಲಗಳ ಸೋಲಿಸಿದೆ || ೮೭ ||

ಹೇ ಶಿವೆ ಯಶಸ್ಸಿನ ಸ್ಥಾನ ನಿನ್ನ ಪಾದಾಗ್ರವನು ಕವಿಗಳು
ಕಠಿಣವಾದ ಆಮೆ ಚಿಪ್ಪಿಗೆ ಸಮಾನವೆಂದು ಹೇಗೆ ವರ್ಣಿಸಿದರು
ದಯಾಮಯ ಸದಾಶಿವನು ವಿವಾಹದ ಸಮಯ ಕೈಯ್ಯಿಂದ
ನಿನ್ನ ಸುಕೋಮಲ ಪಾದವ ಕಠಿಣ ಕಲ್ಲಿನ ಮೇಲೆ ಹೇಗೆ ಇಟ್ಟನು || ೮೮ ||

ಹೇ ಚಂಡಿಕೆ ಚಿಗುರೆಂಬ ಕೈಯ್ಯ ತುದಿಯಿಂದ ಫಲವನು
ಸ್ವರ್ಗದಲ್ಲಿರುವರಿಗೆ ಮಾತ್ರ ಕೊಡುವಂತ ಕಲ್ಪವೃಕ್ಷಗಳು
ದರಿದ್ರರಿಗು ಸ್ಥಿರಸಂಪತ್ತ ನಿನ್ನ ಪಾದ ಪದ್ಮಗಳು ಕೊಡುವುದು
ಪಾದದುಗುರ ಕಾಂತಿಯಲಿ ಸ್ವರ್ಗದ ಸ್ತ್ರೀಕೈಕಮಲ ಮುದುಡಿದಂತಿದೆ || ೮೯ ||

ಹೇ ಶಿವೆ ದೀನರಾಸೆಗೆ ತಕ್ಕ ಸಂಪತ್ತನು ಕೊಡುವ ಸೊಬಗಿನ
ಮಕರಂದ ರಾಶಿಸುರಿಸುವ ಮಂದಾರಪುಷ್ಪದ ಗೊಂಚಲಂತೆ
ಚೆಲುವಾದ ನಿನ್ನ ಪಾದದಲಿ ಪಂಚೇಂದ್ರಿಯಗಳೆ ಪಾದವಾಗಿ
ಇರುವ ನನ್ನ ಜೀವನವು ಮುಳುಗುತ ದುಂಬಿಯ ಭಾವಹೊಂದಲಿ || ೯೦ ||

ಹೇ ಶಿವೆ ಸುಂದರ ನಡೆಯವಳೇ ಸಾಕಿದ ಹಂಸಗಳು ನಿನ್ನ ನೋಡಿ
ಸುಂದರ ನಡೆ ಕಲಿಯಲು ತಪ್ಪು ಹೆಜ್ಜೆ ಇಡಲು ತೊಡಗಿದವು
ನಿನ್ನ ಪಾದಪದ್ಮಗಳ ಕಿರುಗೆಜ್ಜೆಲಿ ಹೊಮ್ಮುವ ನಾದವು
ಸಾಕಿದ ಹಂಸಗಳಿಗೆ ಹೆಜ್ಜೆ ಇಡುವುದನ್ನು ಕಲಿಸುವಂತಿದೆ || ೯೧ ||

ಹೇ ಶಿವೆ ನಿನ್ನ ಸೇವಕರಾಗಿ ಬ್ರಹ್ಮವಿಷ್ಣುರುದ್ರ ಈಶ್ವರ
ನಿನ್ನ ಮಂಚ ಹೊತ್ತಿರಲು ಶಿವನು ಶುಭ್ರಕಾಂತಿಯ ವಸ್ತ್ರವಾಗಿ
ಆಸೀನಳಾದ ನಿನ್ನ ಮೈಕಾಂತಿಯಲಿ ನಸುಗೆಂಪಾಗಿ
ಶೃಂಗಾರ ರಸವೆಂಬಂತೆ ಕಣ್ನೋಟಕೆ ಆನಂದ ನೀಡುವನು || ೯೨ ||

ಹೇ ಶಿವೆ ಮುಂಗುರುಳಿಂದ ಕುಸುಮದಂತೆ ಮೃದು ಮನಸಿಂದ
ಕಠಿಣ ಸ್ತನತಟಗಳಿಂದ ಕೃಶನಡುವಿನಿಂದ ಸ್ತೂಲವಾದ
ಸ್ತನ ಮತ್ತು ನಿತಂಬದಿಂದ ನಸುಗೆಂಪು ಶೋಭೆಯ ಕರುಣಾಳು
ಪರಶಿವನ ಶಕ್ತಿ ನೀನು ಜಗತ್ತನ್ನು ರಕ್ಷಿಸಲು ಸದಾಶಕ್ತಳು || ೯೩ ||

ಹೇ ದೇವಿ ಜಗನ್ಮಾತೆ ಚಂದ್ರಮಂಡಲವು ನಿನ್ನದೆ
ಸೌಂದರ್ಯಸಾಧನದ ಮರಕತಮಣಿಯ ಭರಣಿಯು
ಚಂದ್ರನಲಿ ಕಾಣುವ ಕಪ್ಪು ಚಿಹ್ನೆಯು ಪರಿಮಳದ ಕಸ್ತೂರಿ
ಚಂದ್ರನ ಕಲೆಗಳೆಂಬ ಕರ್ಪೂರಕಣಗಳು ತುಂಬಿರುವುದು

ಹೇ ಶಿವೆ ಭಗವತೀ ಚಂದ್ರನಬಿಂಬವೆ ಪನ್ನೀರು
ಈ ಸೌಂದರ್ಯ ಸಾಧನವ ನೀನು ದಿನ ಬಳಸಿ ಬರಿದಾಗಲು
ಬ್ರಹ್ಮನು ನಿನ್ನ ಉಪಯೋಗಕ್ಕೆ ಸೌಂದರ್ಯಸಾಧನವ ಪುನಃಪುನಃ
ಚಂದ್ರಮಂಡಲವೆಂಬ ಭರಣಿಗೆ ತಂದು ತುಂಬುವನು || ೯೪ ||

ಹೇ ಶಿವೆ ತ್ರಿಪುರಾಂತಕಶಿವನ ಪಟ್ಟದರಸಿ ನೀನು ಆಗಿರುವೆ
ಚಂಚಲಚಿತ್ತರಿಗೆ ನಿನ್ನ ಪಾದಕ್ಕೆ ಪೂಜಿಸಲು ಸಾಧ್ಯವಾಗದು
ಇಂದ್ರಾದಿದೇವತೆಗಳು ನಿನ್ನ ಪೂಜೆಗೆ ಹೊರಟು ದ್ವಾರದಲಿ
ನಿಂತ ಅಣಿಮಾದಿಗಳಿಂದ ಸಿದ್ಧಿ ಪಡೆದೆವೆಂದು ಹೊರಟರು || ೯೫ ||

ಹೇ ಪತಿವ್ರತೆ ಬ್ರಹ್ಮನಪತ್ನಿಯ ಎಷ್ಟೋ ಕವಿಗಳು ಧ್ಯಾನಿಸಿ
ಶಾರದಾಪತಿಯೆನಿಸಿ ಧನಿಕರು ಹಣವನ್ನು ಸಂಪಾದಿಸಿ
ಲಕ್ಷ್ಮೀಪತಿ ಎಂದು ಹೆಸರ ಕರೆಸಿಕೊಳ್ಳುತಿರಲು ನೀಮಾತ್ರ
ಪತಿ ಸದಾಶಿವನ ಬಿಟ್ಟು ನಿನ್ನ ಹೆಸರು ಯಾರಿಗೂ ಸೇರುವುದಿಲ್ಲ || ೯೬ ||

ಹೇ ಸದಾಶಿವನರಸಿ ವೇದವಿದ್ಯಾ ಸಂಪನ್ನರು ನಿನ್ನನ್ನೆ
ಶಾರದೆ ಲಕ್ಷ್ಮೀ ಪಾರ್ವತಿ ಈ ಮೂರು ಹೆಸರು ಕರೆಯುವರು
ಪರಬ್ರಹ್ಮಾಂತರ್ಗತವಾದ ಮಾಯಾತತ್ವವಾಗಿ ಜಗತ್ತನು
ತೋರುವ ಮಹಿಮಾನ್ವಿತಳಾದ ತುರೀಯಳು ನೀನು ಆಗಿರುವೆ || ೯೭ ||

ಹೇ ಶಿವೆ ನಿನ್ನ ಪಾದಕ್ಕೆ ಲೇಪಿಸಿದ ಅರಗಿನ ರಸಮಿಶ್ರಿತ
ಪಾದತೀರ್ಥ ಪಾನ ಮಾಡಲು ವಿದ್ಯಾಪೇಕ್ಷಿ ನನಗೆ ಬಯಕೆಯಾಗಿದೆ
ಈ ನಿನ್ನ ತೀರ್ಥ ಮೂಕರನು ಕವೀಶ್ವರರನ್ನಾಗಿ ಮಾಡಿರಲು
ಕವಿತ್ವಶಕ್ತಿ ಸರಸ್ವತಿಯ ಮುಖಕಮಲತಾಂಬೂಲ ನೀಕರುಣಿಸು || ೯೮ ||

ಹೇ ಶಿವೆ ಜಗನ್ಮಾತೆ ನಿನ್ನ ಆರಾಧಿಸುವ ಭಕ್ತನು
ಬ್ರಹ್ಮ ಅಸೂಯೆ ಪಡುವ ರೀತಿ ವಿದ್ಯಾಶಾರದೆಯ ಒಲಿಸುವನು
ವಿಷ್ಣು ಬೇಸರಪಡುವಂತೆ ಸಂಪತ್ ಲಕ್ಷ್ಮಿಯನು ಪಡೆದು
ರತಿಮನಕದಡಿ ಸುಖವಾಗಿ ಸಂತೋಷದಿಂದ ವಿಹರಿಸುವನು

ಹೇ ಜನನಿ ಜಗದ್ರಕ್ಷಕಳೆ ನಿರಂತರವು ನಿನ್ನ ಸ್ತುತಿಸುತ
ಸಾಧಕಭಕ್ತನು ಪಾಶವೆಂಬ ಜೀವ ಮತ್ತು ಅವಿದ್ಯೆ ಸಂಬಂಧ
ಕಳೆದುಕೊಂಡವನಾಗಿ ಜೀವನ್ಮುಕ್ತನೆನಿಸಿ ಬಹುಕಾಲ
ಬದುಕುತ್ತ ಜ್ಯೋತಿರೂಪದ ಪರಮಾನಂದ ರಸವ ಸವಿಯುವನು || ೯೯ ||

ಹೇ ವಾಗ್ಜನನಿ ಸೂರ್ಯನಿಗೆ ಹಣತೆಯ ದೀಪದ ಆರತಿ
ಚಂದ್ರಕಾಂತ ಶಿಲೆಯಲ್ಲಿ ಒಸರಿದ ನೀರೆ ಅರ್ಘ್ಯ ಚಂದ್ರನಿಗೆ
ಸಮುದ್ರದ ನೀರನ್ನೆ ಎತ್ತಿ ಸಮುದ್ರಕೆ ತರ್ಪಣವ ಕೊಟ್ಟಂತೆ
ನಿನ್ನದೆ ಆದ ಶಬ್ದಗಳಿಂದ ನಿನ್ನ ಈ ಸ್ತೋತ್ರವನು ರಚಿಸಿರುವುದು || ೧೦೦ ||

ಹೇ ಶಿವೆ ಮಣಿಕನ್ನಡಿ ಶೋಭೆಯ ಸೂರ್ಯನು ತನ್ನ ಕಿರಣವು
ನಿನಗೆ ಕುಕ್ಕದೆ ಇರಲೆಂದು ತನ್ನಲಿ ಹುದುಗಿಸಿದ ಕಿರಣದಿಂದ
ಕೋಮಲರೂಪ ತಾಳಿ ಚಂದ್ರನ ಆತಂಕ ಇಲ್ಲದೆ
ತನ್ನ ಹೃದಯ ಕಮಲದಂತೆ ನಿನ್ನ ಮುಖಪ್ರತಿಬಿಂಬ ಧರಿಸಿರುವನು || ೧೦೧ ||

ಹೇ ತ್ರಿಪುರಸುಂದರಿ ದೇವಿ ನಿನ್ನ ಆರಾಧಿಸುವ ಭಕ್ತರು
ನಿರ್ಮಲ ಮನಸ್ಸಿನಿಂದ ಸದ್ಭಕ್ತರಾಗಿಯೇ ಇರುವರು
ಸ್ತೂಲವಾದ ಸ್ತನಗಳಿಂದ ತುಂಬಿದ ಎದೆಯುಳ್ಳ ಅವರು ಸದಾ
ಮಂದಹಾಸದಿ ಕಣ್ನೋಟದಿ ಸ್ಮರಭಾವ ಉಂಟು ಮಾಡುವರು

ಹೇ ತ್ರಿಪುರಸುಂದರಿ ದೇವಿ ನಿನ್ನ ಉಪಾಸಿಸುವ ಭಕ್ತರು
ನಸುಗೆಂಪಾದ ಕದಂಬ ಕಾಂತಿ ದೇಹದವರು ಆಗುವರು
ಸ್ಮರಾಂತಕ ಶಿವನು ನಿನ್ನ ಭಕ್ತರ ನೋಡಿದರೆ ನಿನ್ನಂತೆ
ಕಂಡು ನಿನ್ನಲಿ ಸಾಯುಜ್ಯ ರೂಪ ಪಡೆದಂತೆ ಕಾಣುವರು || ೧೦೨ ||

ಹೇ ದೇವಿ ಜಗದಾಧಾರಳೆ ಸದಾ ಮಂದಹಾಸ ಬೀರುವಳೆ
ಹೇ ಜನನಿ ಜಗನ್ಮಾತೆ ದೇವೀ ಅಪರಿಮಿತ ಗುಣಪೂರ್ಣಳೆ
ಹೇ ಶಿವೆ ನೀತಿ ನಿಪುಣಳೆ ತಾಯೆ ಅಖಿಲ ಜ್ಞಾನ ರೂಪಳೆ
ಹೇ ತಾಯೆ ನಿಯಮವಂತರ ಮನಮಂದಿರದಲಿ ವಾಸಿಸುವಳೆ

ಹೇ ದೇವಿ ಜಗಜ್ಜನನಿ ನಿಯಮಾತೀತಳೆ ಭಗವತಿ
ಸಕಲೋಪನಿಷತ್ತುಗಳಲಿ ಸ್ತುತಿಸಲ್ಪಟ್ಟವಳೆ ಭಯರಹಿತಳೆ
ಹೇ ಶಿವೆ ಶಾಶ್ವತಳೇ ಇಂತಹ ನೀನು ನಿನ್ನ ಸ್ತುತಿಯ
ಸಾವಧಾನದಿ ಆಲಿಸುತ ವೇದಸಮಾನವಾಗಿ ಮಾಡು ಹೇ ಶಿವೆ || ೧೦೩ ||