ಶ್ರೀ ವಿಷ್ಣು ಅವತಾರಗಳು

ರಾಗ : ಹಂಸಧ್ವನಿ 
ತಾಳ : ಆದಿತಾಳ

ನಮಿಸುವೇ ಹರಿ ಸ್ತುತಿಸುವೇ
ನಾರಾಯಣನೆಂಬೋ ನಾಮಾಮೃತವನು
ನಮಿಸುವೇ ಹರಿ ಸ್ತುತಿಸುವೇ || ಪ ||

ಹೇ ಭಗವಂತ ನಿನ್ನ ಚರಣ ಕಮಲಗಳನ್ನು
ನಮಿಸಿ ನಾ ಸ್ತುತಿಸುವೆ ನಿನ್ನಯ ಮಹಿಮೆಗಳ
ಜಗದೋದ್ಧಾರಕ್ಕೆ ದಶಾವತಾರವ
ತಾಳಿದೆ ನೀನೇ ಶ್ರೀಮನ್ಮಹಾವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ಅ.ಪ ||

ಮತ್ಸ್ಯಾವತಾರ

ಬ್ರಹ್ಮದೇವನಿಗೊಂದು ಹಗಲು ಮುಗಿದ ಮೇಲೆ
ಗಾಢ ನಿದ್ರೆಯಲ್ಲಿ ರಾತ್ರಿ ಮಲಗಿದನು ಬ್ರಹ್ಮದೇವ
ಬ್ರಹ್ಮನ ಉಸಿರಿನಿಂದ ಹೊರಬಂದ ವೇದಗಳ
ಹಯಗ್ರೀವನೆಂಬ ಕಪಟ ರಾಕ್ಷಸ ಕದ್ದನು
ನಮಿಸುವೇ ಹರಿ ಸ್ತುತಿಸುವೇ || ೧ ||

ಕದ್ದ ವೇದಗಳನ್ನು ಸಮುದ್ರದ ತಳಕೆ ಒಯ್ದು
ಯಾರಿಗೂ ಸಿಗದ ಹಾಗೆ ಅಡಗಿಸಿಟ್ಟ ರಾಕ್ಷಸ
ಇದನು ತಿಳಿದ ಶ್ರೀಹರಿ ವೇದಗಳ ರಕ್ಷಿಸಲು
ಮತ್ಸ್ಯಾವತಾರವ ತಾಳಲು ನಿರ್ಧರಿಸಿದ
ನಮಿಸುವೇ ಹರಿ ಸ್ತುತಿಸುವೇ || ೨ ||

ಸತ್ಯವ್ರತನೆಂಬ ರಾಜ ರಾಜ್ಯವನ್ನು ಪರಿತ್ಯಜಿಸಿ
ಶ್ರೀಹರಿಯನ್ನು ಕುರಿತು ತಪವನ್ನಾಚರಿಸಿದ
ತರ್ಪಣವ ಕೊಡುವಾಗ ಬೊಗಸೆಯ ನೀರಿನಲ್ಲಿ
ಸಣ್ಣದೊಂದು ಮತ್ಸ್ಯವು ಆ ಕ್ಷಣ ಪ್ರತ್ಯಕ್ಷವಾಯ್ತು
ನಮಿಸುವೇ ಹರಿ ಸ್ತುತಿಸುವೇ || ೩ ||

ರಾಜಋಷಿ ಮತ್ಸ್ಯವನ್ನು ನೀರಿನಲ್ಲಿ ಎಸೆದನು
ರಕ್ಷಿಸೆಂದು ಮತ್ಸ್ಯವು ಆತನಲ್ಲಿ ಬೇಡಿತು
ಮತ್ಸ್ಯವನ್ನು ಕಲಶದಲ್ಲಿ ಆಶ್ರಮಕೆ ತಂದನು
ಮರುದಿನವೇ ಮತ್ಸ್ಯವು ದೊಡ್ಡದಾಗಿ ಬೆಳೆಯಿತು
ನಮಿಸುವೇ ಹರಿ ಸ್ತುತಿಸುವೇ || ೪ ||

ಬೆಳೆದ ಮತ್ಸ್ಯವ ನೋಡಿ ರಾಜಋಷಿ ಆಶ್ಚರ್ಯದಿ
ಕಲಶದಿಂದ ತೆಗೆದು ಬಾವಿಯೊಳಗೆ ಇಟ್ಟನು
ಅಲ್ಲಿಯೂ ಬೆಳೆಯುತ್ತಿರುವ ಮತ್ಸ್ಯವ ಹಿಡಿದು ಹೊರಟು
ನದಿಯೂ ಸಾಲದೆನುತ ಯೋಚಿಸಿ ಸಮುದ್ರಕೆ ಬಿಟ್ಟ
ನಮಿಸುವೇ ಹರಿ ಸ್ತುತಿಸುವೇ || ೫ ||

ಬೃಹದಾಕಾರದಿ ಬೆಳೆಯಿತು ಸಮುದ್ರದಲ್ಲಿ
ನೋಡಿ ಅತ್ಯಾಶ್ಚರ್ಯದಿ ಹೇಳಿದ ರಾಜಋಷಿ
ಹೇ ಮತ್ಸ್ಯ ರೂಪನೆ ಏನಿದು ಪವಾಡವು
ಸೃಷ್ಠಿ ಸ್ಥಿತಿ ಲಯ ಕರ್ತ ಹರಿಯು ನೀನೇ ಎಂದ
ನಮಿಸುವೇ ಹರಿ ಸ್ತುತಿಸುವೇ || ೬ ||

ಹರಿಯೆಂದು ಸ್ತುತಿಸುತ್ತ ಮತ್ಸ್ಯಕ್ಕೆ ನಮಸ್ಕರಿಸಿ
ನನ್ನನ್ನು ಉದ್ಧರಿಸೆಂದು ಭಕ್ತಿಯಿಂದ ಪ್ರಾರ್ಥಿಸಿದ
ಮತ್ಸ್ಯನಾಗಿಹ ಹರಿಯು ಅಭಯವನು ನೀಡುತ್ತ
ಪ್ರಳಯದ ವಿಷಯವನು ಹೇಳಿದನು ಭಕ್ತನಿಗೆ
ನಮಿಸುವೇ ಹರಿ ಸ್ತುತಿಸುವೇ || ೭ ||

ಭಕ್ತ್ತಾ ನಿನ್ನ ಬಳಿ ನಾನು ಕಳುಹುವ ಹಡಗಿನಲ್ಲಿ
ಬೀಜ ರೂಪವಾದ ಜೀವರಾಶಿಯ ತುಂಬು
ಪ್ರಳಯದ ಕಾಲದಲ್ಲಿ ಬಿರುಗಾಳಿಗೆ ಹಡಗು
ಮಗುಚದಂತೆ ತಡೆಯಲು ಆದಿಶೇಷನಿರುವನು
ನಮಿಸುವೇ ಹರಿ ಸ್ತುತಿಸುವೇ || ೮ ||

ಆದಿಶೇಷನನ್ನು ನೀನು ಮೊದಲು ಹಡಗಿಗೆ ಸುತ್ತಿ
ಕೊನೆಗೆ ಅವನ ಬಾಲವನು ನನ್ನ ಕೊಂಬಿಗೆ ಕಟ್ಟು
ಸಪ್ತರ್ಷಿಗಳ ಜೊತೆಯಲ್ಲಿ ನೀನೂ ಕುಳಿತುಕೊಂಡು
ಪ್ರಯಾಣವ ಮಾಡೆಂದ ಜಗದೋದ್ಧಾರಕ ವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೯ ||

ಪ್ರಳಯವು ಶುರುವಾಗಿ ಭಗವಂತನನುಜ್ಞೆಯ
ನಿಷ್ಠೆಯಿಂದ ಪಾಲಿಸಿದ ರಾಜಋಷಿ ಸತ್ಯವ್ರತ
ಹಡಗಲ್ಲಿ ಭಕ್ತಿಯಿಂದ ಶ್ರೀಹರಿಯ ಸ್ತುತಿಸಿದ
ಭಕ್ತಿಗೆ ಮೆಚ್ಚಿದ ಹರಿಯು ಆತ್ಮ ತತ್ವ ನೀಡಿದ
ನಮಿಸುವೇ ಹರಿ ಸ್ತುತಿಸುವೇ || ೧೦ ||

ಬ್ರಹ್ಮದೇವ ನಿದ್ದೆಯಿಂದ ಎದ್ದೇಳುವವರೆಗೂ
ಸಮುದ್ರದಲ್ಲಿ ಹಡಗನ್ನು ಸುತ್ತಾಡಿಸಿದ ಹರಿಯು
ಬ್ರಹ್ಮದೇವ ಎದ್ದೊಡನೆ ಹಯಗ್ರೀವನ ಕೊಂದು
ವೇದಗಳನ್ನು ತಂದು ಕೊಟ್ಟನು ಬ್ರಹ್ಮದೇವನಿಗೆ
ನಮಿಸುವೇ ಹರಿ ಸ್ತುತಿಸುವೇ || ೧೧ ||

ಮತ್ಸ್ಯ ಶರೀರಧಾರಿ ಶ್ರೀ ಹರಿಯ ಅನುಗ್ರಹದಿ
ವೈವಸ್ವತ ಮನ್ವಂತರದ ಮನುವಾದ ಸತ್ಯವ್ರತನು
ಭಗವಂತ ನೀಡಿದ ತತ್ವೋಪದೇಶವು
ಮತ್ಸ್ಯ ಪುರಾಣವಾಗಿ ಜ್ಞಾನದ ನಿಧಿಯಾಯ್ತು
ನಮಿಸುವೇ ಹರಿ ಸ್ತುತಿಸುವೇ || ೧೨ ||

ಕೂರ್ಮಾವತಾರ

ಒಮ್ಮೆ ದೇವೇಂದ್ರನು ಐರಾವತವನ್ನೇರಿ
ರಾಜ ಬೀದಿಯಲ್ಲಿ ಹೋಗುತಲಿರುವಾಗ
ಎದುರಿಗೆ ಬರುತಲಿರುವ ದೂರ್ವಾಸ ಮುನಿಯು
ತನ್ನ ಕೊರಳ ಹಾರವನ್ನು ಆಶೀರ್ವದಿಸಿ ಕೊಟ್ಟ
ನಮಿಸುವೇ ಹರಿ ಸ್ತುತಿಸುವೇ || ೧೩ ||

ಗರ್ವದಿ ದೇವೇಂದ್ರ ಋಷಿ ಕೊಟ್ಟ ಹಾರವನು
ಆನೆಯ ತಲೆ ಮೇಲೆ ಎಸೆದು ತಿರಸ್ಕರಿಸಿದ
ಆನೆಯು ಹಾರವನ್ನು ಸೊಂಡಿಲಿನಿಂದ ತೆಗೆದು
ಕಾಲಲ್ಲಿ ತುಳಿದಾಗ ನೋಡಿದ ದೂರ್ವಾಸ
ನಮಿಸುವೇ ಹರಿ ಸ್ತುತಿಸುವೇ || ೧೪ ||

ಅಲ್ಲೆ ದೇವೇಂದ್ರನಿಗೆ ಶಾಪವಿತ್ತ ದೂರ್ವಾಸ
ಅಧಿಕಾರ ಸಕಲೈಶ್ವರ್ಯ ನಶಿಸಿ ಹೋಗಲೆಂದು
ದೂರ್ವಾಸ ಮುನಿಯ ಶಾಪಕ್ಕೆ ಗುರಿಯಾಗಿ
ಗರ್ವಿತ ದೇವೇಂದ್ರ ಎಲ್ಲವನು ಕಳೆದುಕೊಂಡ
ನಮಿಸುವೇ ಹರಿ ಸ್ತುತಿಸುವೇ || ೧೫ ||

ದಿಕ್ಕಿಲ್ಲದ ದೇವೇಂದ್ರ ದೇವತೆಗಳ ಜೊತೆಗೆ
ಬ್ರಹ್ಮನ ಬಳಿಗೆ ಬಂದು ಕಷ್ಟವ ಹೇಳಿಕೊಂಡ
ಬ್ರಹ್ಮನ ಸಲಹೆಯಂತೆ ವೈಕುಂಠಕ್ಕೆ ಹೋಗಿ
ಮಹಾವಿಷ್ಣುವಿನಲ್ಲಿ ರಕ್ಷಿಸೆಂದು ಮೊರೆಯಿಟ್ಟನು
ನಮಿಸುವೇ ಹರಿ ಸ್ತುತಿಸುವೇ || ೧೬ ||

ಕರುಣಾಮಯಿ ವಿಷ್ಣು ಪರಿಹಾರ ಸೂಚಿಸುತ
ದಾನವರ ಜೊತೆಯಲ್ಲಿ ಸ್ನೇಹ ಬೆಳೆಸಿರೆಂದ
ನೀವೆಲ್ಲರೂ ಒಟ್ಟಾಗಿ ಸಮುದ್ರವನ್ನು ಕಡೆದರೆ
ಹುಟ್ಟುವ ಅಮೃತದಿಂದ ಮುಪ್ಪು ಸಾವು ಇಲ್ಲವೆಂದ
ನಮಿಸುವೇ ಹರಿ ಸ್ತುತಿಸುವೇ || ೧೭ ||

ವಿಷ್ಣು ಹೇಳಿದಂತೆ ಒಪ್ಪಿ ದೇವೇಂದ್ರನು
ಬಲಿಯ ಸ್ನೇಹವ ಪಡೆದು ಕಾರ್ಯತತ್ಪರನಾದ
ದೇವತೆಗಳು ಮತ್ತು ದಾನವರು ಉತ್ಸಾಹದಿ
ಮಂದರಪರ್ವತ ಕಿತ್ತು ಹೊತ್ತುಕೊಂಡು ಹೊರಟರು
ನಮಿಸುವೇ ಹರಿ ಸ್ತುತಿಸುವೇ || ೧೮ ||

ಪರ್ವತ ಹೊತ್ತು ನಡೆವಾಗ ಕುಂದಿತು ಎಲ್ಲರ ಶಕ್ತಿ
ಮಾರ್ಗಮಧ್ಯೆ ಪರ್ವತವಿಟ್ಟು ಕುಸಿದು ಕುಳಿತರು ಎಲ್ಲ
ಗರುಡಾರೂಢ ವಿಷ್ಣು ಪರ್ವತವ ಎತ್ತಿಕೊಂಡು
ಕ್ಷೀರಸಮುದ್ರಕ್ಕೆ ತಂದು ಇಳಿಸಿದನು ಮಧ್ಯದಲ್ಲಿ
ನಮಿಸುವೇ ಹರಿ ಸ್ತುತಿಸುವೇ || ೧೯ ||

ಕಡೆಗೋಲು ಪರ್ವತಕ್ಕೆ ಸುತ್ತುವ ಹಗ್ಗವಾಗೆಂದು
ಒಪ್ಪಿಸಿದರು ವಾಸುಕಿಯ ಅಮೃತವ ಕೊಡುವೆವೆಂದು
ಸಕಲ ಗಿಡಮೂಲಿಕೆಯ ಕ್ಷೀರಸಮುದ್ರಕ್ಕೆ ಹಾಕಿ
ಎಲ್ಲರು ಉತ್ಸಾಹದಿಂದ ಕಡೆಯಲು ತೊಡಗಿದರು
ನಮಿಸುವೇ ಹರಿ ಸ್ತುತಿಸುವೇ || ೨೦ ||

ಕಡೆಯುತ್ತಲಿರುವಾಗ ಮುಳುಗಿತು ಪರ್ವತವು
ಕೂರ್ಮಾವತಾರವ ತಾಳಿದ ಮಹಾವಿಷ್ಣು
ಮುಳುಗಿದ ಪರ್ವತ ಎತ್ತಿ ಬೆನ್ನಿನ ಮೇಲೆ ಧರಿಸಿ
ಸಮುದ್ರಮಥನ ಕಾರ್ಯಕ್ಕೆ ನೆರವಾದ ಮಹಾವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೨೧ ||

ಗಿರಿಯು ಅಲ್ಲಾಡದಂತೆ ಅಜಿತ ರೂಪದಿ ವಿಷ್ಣು
ಸಹಸ್ರ ಬಾಹು ಬಳಸಿ ಸುಲಲಿತಗೊಳಿಸಿದನು
ಸಮುದ್ರದ ಮಥನದಿಂದ ಮಹಾ ವಿಷವು ಹುಟ್ಟಿ
ಜಗತ್ತಿಗೆಲ್ಲ ವ್ಯಾಪಿಸಿ ಸಮಸ್ತರು ಕಂಗೆಟ್ಟರು
ನಮಿಸುವೇ ಹರಿ ಸ್ತುತಿಸುವೇ || ೨೨ ||

ವಿಷದ ಭಾದೆಗೆ ಬಳಲಿ ಓಡಿದರು ಕೈಲಾಸಕ್ಕೆ
ಹೇ ದೇವ ರಕ್ಷಿಸೆಂದು ಶಿವನಲ್ಲಿ ಮೊರೆಯಿಟ್ಟರು
ಹೇ ಜಗದೀಶ್ವರನೆ ಕರುಣಾಸಾಗರನೆ
ನಿನ್ನನ್ನೆ ನಂಬಿರುವೆವು ಎಂದು ಪ್ರಾರ್ಥಿಸಿದರು
ನಮಿಸುವೇ ಹರಿ ಸ್ತುತಿಸುವೇ || ೨೩ ||

ಶಿವನು ಕನಿಕರದಿಂದ ಭಕ್ತರ ಸಂಕಟವನ್ನು
ನೀಗಿಸಲು ನಿರ್ಧರಿಸಿ ಸಮುದ್ರದೆಡೆಗೆ ಬಂದ
ಜಗತ್ತಿಗೆಲ್ಲಾ ಹಬ್ಬಿರುವ ಹಾಲಾಹಲ ವಿಷವನ್ನು
ಅಂಗೈಯಲ್ಲಿಟ್ಟು ಕುಡಿದು ನೀಲಕಂಠನಾದನು
ನಮಿಸುವೇ ಹರಿ ಸ್ತುತಿಸುವೇ || ೨೪ ||

ಪುನಃ ಸಮುದ್ರಮಥನವ ಆರಂಭಿಸಿದಾಗ
ಹುಟ್ಟಿದ ಕಾಮಧೇನುವ ಪಡೆದರು ಋಷಿವರ್ಯರು
ಉಚ್ಛೈಶ್ರವಸ್ಸೆಂಬ ಕುದುರೆಯು ಹುಟ್ಟಿದೊಡನೆ
ಐರಾವತವೆಂಬ ಆನೆಯು ಹುಟ್ಟಿ ಬಂತು
ನಮಿಸುವೇ ಹರಿ ಸ್ತುತಿಸುವೇ || ೨೫ ||

ಕೌಸ್ತುಭರತ್ನವು ಹುಟ್ಟಿ ಧರಿಸಿದ ವಿಷ್ಣು ಎದೆಯಲ್ಲಿ
ಹುಟ್ಟಿದವು ಕಲ್ಪವೃಕ್ಷ ಮತ್ತು ಪಾರಿಜಾತಗಳು
ಸುಂದರ ಅಪ್ಸರೆಯರು ಹುಟ್ಟಿ ಬಂದ ಮೇಲೆ
ದಶದಿಕ್ಕು ಬೆಳಗುತ್ತ ಹುಟ್ಟಿಬಂದಳು ಲಕ್ಷ್ಮಿ
ನಮಿಸುವೇ ಹರಿ ಸ್ತುತಿಸುವೇ || ೨೬ ||

ಮಹಾವಿಷ್ಣು ಕೊರಳಿಗೆ ಕಮಲದ ಹಾರವ ಹಾಕಿ
ನೆಲೆನಿಂತಳು ಲಕ್ಷ್ಮಿ ವಿಷ್ಣುವಿನ ಹೃದಯದಲ್ಲಿ
ಆಗ ಹೂಮಳೆಯಾಗಿ ಗಂಧರ್ವ ಗಾನದಲ್ಲಿ
ಅಪ್ಸರೆಯರು ನರ್ತಿಸಿದರು ಲೋಕವೆಲ್ಲ ನಲಿಯಿತು
ನಮಿಸುವೇ ಹರಿ ಸ್ತುತಿಸುವೇ || ೨೭ ||

ಪುನಃ ಕಡೆಯುವಾಗ ಲೋಕಮೋಹಕಳಾಗಿ
ಹುಟ್ಟಿ ಬಂದ ಸುರೆಯನ್ನು ಕೊಟ್ಟರು ದಾನವರಿಗೆ
ಧನ್ವಂತರಿಯೆಂಬ ಆಯುರ್ವೇದಾಚಾರ್ಯ
ಅಮೃತ ಕಲಶವ ಹಿಡಿದು ಭೂಮಿಯ ಮೇಲೆ ಬಂದ
ನಮಿಸುವೇ ಹರಿ ಸ್ತುತಿಸುವೇ || ೨೮ ||

ಅಮೃತದ ಕಲಶವನ್ನು ಕಂಡು ದಾನವರೆಲ್ಲ
ತಮಗೇ ಬೇಕೆಂದು ಕಸಿದುಕೊಂಡೋಡಿದರು
ದೇವತೆಗಳೆಲ್ಲರೂ ವಿಷ್ಣುವಿಗೆ ಮೊರೆಯಿಟ್ಟರು
ಭಕ್ತರ ರಕ್ಷಕ ವಿಷ್ಣು ಅಭಯವನ್ನು ನೀಡಿದ
ನಮಿಸುವೇ ಹರಿ ಸ್ತುತಿಸುವೇ || ೨೯ ||

ದಾನವರು ಅಮೃತವ ಕುಡಿಯಲು ಹವಣಿಸುತ್ತ
ನಾನೇ ಮೊದಲು ಎನ್ನುತ್ತ ಕಿತ್ತಾಡುತ್ತಿದ್ದರು ಎಲ್ಲ
ಮೋಹಿನಿಯ ರೂಪವ ತಾಳಿದ ಮಹಾವಿಷ್ಣು
ದಾನವರೆದುರಿನಲ್ಲಿ ಬಂದ ವಯ್ಯಾರದಲಿ
ನಮಿಸುವೇ ಹರಿ ಸ್ತುತಿಸುವೇ || ೩೦ ||

ಮೋಹಿನಿ ಸೌಂದರ್ಯಕ್ಕೆ ಮರುಳಾದ ದಾನವರು
ನಮ್ಮೆಲ್ಲರ ಮನ ಮೆಚ್ಚಿದ ಸುಂದರಿ ನೀನೆಂದರು
ಎಲ್ಲರಿಗೂ ಸಮನಾಗಿ ಅಮೃತವ ಕೊಡು ಎಂದು
ಅಮೃತದ ಕಲಶವನ್ನು ಕೊಟ್ಟರು ಮೋಹಿನಿಗೆ
ನಮಿಸುವೇ ಹರಿ ಸ್ತುತಿಸುವೇ || ೩೧ ||

ಮೋಹಿನಿ ಬಿನ್ನಾಣದಿ ಹೇಳಿದಳು ಎಲ್ಲರಿಗೂ
ಮೌನದಿ ಸಾಲಾಗಿ ಕುಳಿತು ಕೊಳ್ಳಿರಿ ಎಂದು
ದೇವತೆಗಳೊಂದೆಡೆ ದಾನವರು ಮತ್ತೊಂದೆಡೆ
ಸಾಲಾಗಿ ಕುಳಿತರು ಅಮೃತವ ಕುಡಿಯಲು
ನಮಿಸುವೇ ಹರಿ ಸ್ತುತಿಸುವೇ || ೩೨ ||

ದೇವತೆಗಳ ಸಾಲಲ್ಲಿ ಕಪಟ ರಕ್ಕಸ ಕುಳಿತ
ಮೊದಲು ದೇವತೆಗಳಿಗೆ ಅಮೃತ ಕೊಟ್ಟ ಮೋಹಿನಿ
ರಕ್ಕಸನು ಮೋಸದಿಂದ ಅಮೃತವ ಕುಡಿದನೆಂದು
ತಿಳಿಯಿತು ಮೋಹಿನಿಗೆ ಸೂರ್ಯಚಂದ್ರರಿಂದ
ನಮಿಸುವೇ ಹರಿ ಸ್ತುತಿಸುವೇ || ೩೩ ||

ಮೋಹಿನಿ ಮಾಯವಾಗಿ ಪ್ರತ್ಯಕ್ಷನಾದ ವಿಷ್ಣು
ತನ್ನ ಕೈಯ್ಯ ಚಕ್ರದಿಂದ ರಕ್ಕಸನ ತಲೆ ಕಡಿದ
ಅಮೃತ ಕುಡಿದ ರಕ್ಕಸನ ತಲೆ ಮತ್ತು ದೇಹವ
ಎರಡು ಗ್ರಹಗಳನ್ನಾಗಿ ಮಾಡಿದನು ಬ್ರಹ್ಮದೇವ
ನಮಿಸುವೇ ಹರಿ ಸ್ತುತಿಸುವೇ || ೩೪ ||

ದೇವತೆಗಳೆಲ್ಲರಿಗೂ ಅಮೃತವು ದೊರೆಯಿತು
ದುಷ್ಟ ದಾನವರಿಗೆ ಸಿಗಲಿಲ್ಲ ಅಮೃತವು
ಕೂರ್ಮಾವತಾರಿ ಹರಿಯ ಸ್ತುತಿಸಿ ದೇವತೆಗಳು
ನಿತ್ಯತ್ವ ನೀಡಿದೆಯೆಂದು ಭಕ್ತಿಯಿಂದ ನಮಿಸಿದರು
ನಮಿಸುವೇ ಹರಿ ಸ್ತುತಿಸುವೇ || ೩೫ ||

ವರಹಾವತಾರ

ಪ್ರಳಯದ ಜಲದೊಳಗೆ ಮುಳುಗಿದ ಭೂಮಿಯನ್ನು
ಮೇಲೆತ್ತಬೇಕೆಂದು ಮನುವೆಂದ ಬ್ರಹ್ಮನಲ್ಲಿ
ಶ್ರೀಮನ್ನಾರಾಯಣನೇ ಭೂಮಿಯನು ಮೇಲಕ್ಕೆ
ತರಲು ಸಾಧ್ಯವೆಂದು ಹರಿಯ ಧ್ಯಾನಿಸಿದ ಬ್ರಹ್ಮ
ನಮಿಸುವೇ ಹರಿ ಸ್ತುತಿಸುವೇ || ೩೬ ||

ಧ್ಯಾನದ ಸಮಯದಲ್ಲಿ ಬ್ರಹ್ಮನ ಮೂಗಿನಿಂದ
ಅಂಗುಷ್ಠ ಗಾತ್ರದಲ್ಲಿ ಹೊರಬಂದ ವರಾಹ
ಬೃಹದಾಕಾರವಾಗಿ ಬೆಳೆದ ವರಾಹ ನೋಡಿ
ಭಗವಂತನ ಲೀಲೆ ಎನ್ನುತ ನಮಿಸಿದ ಬ್ರಹ್ಮ
ನಮಿಸುವೇ ಹರಿ ಸ್ತುತಿಸುವೇ || ೩೭ ||

ಪಾತಾಳಕ್ಕೆ ಬಂದ ವರಾಹ ರೂಪಿಯನ್ನು
ಕಂಡು ಭೂದೇವಿಯು ದುಃಖಿಸುತ ಮೊರೆಯಿಟ್ಟಳು
ಅನೇಕ ವಿಧವಾಗಿ ಸ್ತುತಿಸಿದಳು ಭೂದೇವಿ
ವರಾಹಾವತಾರಿ ವಿಷ್ಣು ಸಂತುಷ್ಟನಾದ
ನಮಿಸುವೇ ಹರಿ ಸ್ತುತಿಸುವೇ || ೩೮ ||

ಭೂದೇವಿಯನ್ನು ತನ್ನ ಕೋರೆದಾಡೆಗಳಿಂದ
ಎತ್ತಿಕೊಂಡ ವರಾಹಿ ಮೇಲಕ್ಕೆದ್ದು ಹೊರಟನು
ಅಲ್ಲಿ ಅಡ್ಡಗಟ್ಟಿ ನಿಂತ ದೈತ್ಯ ಹಿರಣ್ಯಾಕ್ಷನ
ವರಾಹ ದೇವ ತನ್ನ ಕೋರೆಯಿಂದ ಕೊಂದ
ನಮಿಸುವೇ ಹರಿ ಸ್ತುತಿಸುವೇ || ೩೯ ||

ಭಗವಂತ ಭೂಮಿಯನ್ನು ಎತ್ತಿ ಮೇಲಕ್ಕೆ ತಂದು
ಜಲರಾಶಿಯ ಮೇಲೆ ಮಧ್ಯದಲ್ಲಿ ಸ್ಥಾಪಿಸಿದ
ಸಕಲ ದೇವತೆಗಳು ಸಮಸ್ತ ಯೋಗಿಗಳು
ಪರಮ ಪುರುಷನೆಂದು ಭಕ್ತಿಯಿಂದ ನಮಿಸಿದರು
ನಮಿಸುವೇ ಹರಿ ಸ್ತುತಿಸುವೇ || ೪೦ ||

ಜಗದೋದ್ಧಾರಕ ಶ್ರೀಮನ್ನಾರಾಯಣನು
ಭೂಮಿಯ ಮೇಲ್ಮೈಯನ್ನು ಸಮವಾಗಿ ಮಾಡಿದ
ಪರ್ವತವ ವಿಂಗಡಿಸಿ ಸಪ್ತ ದ್ವೀಪಗಳನ್ನಾಗಿ
ನಿರ್ಮಿಸಿದ ಭಗವಂತ ವರಾಹಾವತಾರಿ
ನಮಿಸುವೇ ಹರಿ ಸ್ತುತಿಸುವೇ || ೪೧ ||

ವರಾಹಾವತಾರಿಯನ್ನು ವಿಧವಿಧವಾಗಿ ಸ್ತುತಿಸಿ
ಯಜ್ಞಮಯ ದೇವನೆಂದು ಕೊಂಡಾಡಿದರೆಲ್ಲರು
ವರಾಹ ಪಾದಗಳನ್ನು ಚತುರ್ವೇದಗಳೆನ್ನುತ್ತ
ಕೋರೆದಾಡೆಯೂಪವು ಹಲ್ಲುಗಳೆ ಯಜ್ಞವೆಂದರು
ನಮಿಸುವೇ ಹರಿ ಸ್ತುತಿಸುವೇ || ೪೨ ||

ಮುಖವೇ ಹೋಮಕುಂಡ ನಾಲಿಗೆಯೇ ಅಗ್ನಿಯು
ರೋಮವೇ ದರ್ಭೆಗಳೆನುತ ಯಜ್ಞಪುರುಷನೆಂದರು
ಜಗದ್ರಕ್ಷಕನಾದ ಶ್ರೀಮನ್ನಾರಾಯಣನ
ಭೂವರಾಹ ರೂಪಿಯನ್ನು ಸ್ತುತಿಸಿ ನಮಸ್ಕರಿಸಿದರು
ನಮಿಸುವೇ ಹರಿ ಸ್ತುತಿಸುವೇ || ೪೩ ||

ನರಸಿಂಹ ಅವತಾರ

ವರಾಹಾವತಾರದಿಂದ ಸತ್ತಿರುವ ಹಿರಣ್ಯಾಕ್ಷನ
ಅಗ್ರಜನಾಗಿರುವ ದೈತ್ಯನು ಹಿರಣ್ಯಕಶಿಪು
ಮಂದರಗಿರಿಯಲ್ಲಿ ಬ್ರಹ್ಮದೇವನ ಕುರಿತು
ಉಗ್ರವಾದ ತಪಸ್ಸನ್ನು ಪ್ರಾರಂಭಿಸಿದನು
ನಮಿಸುವೇ ಹರಿ ಸ್ತುತಿಸುವೇ || ೪೪ ||

ತಪವನ್ನಾಚರಿಸುತ್ತ ಹಲವು ವರ್ಷವು ಕಳೆದು
ತಪಸ್ಸಿನ ಬೇಗೆಯು ಮೂರ್ಲೋಕ ವ್ಯಾಪಿಸಿತು
ಬೇಗೆ ಸಹಿಸಲಾಗದೆ ದೇವತಾದಿಗಳೆಲ್ಲ್ಲಾ
ಸತ್ಯ ಲೋಕಕ್ಕೆ ಹೋಗಿ ಬ್ರಹ್ಮನಲ್ಲಿ ಮೊರೆಯಿಟ್ಟರು
ನಮಿಸುವೇ ಹರಿ ಸ್ತುತಿಸುವೇ || ೪೫ ||

ದೇವತಾದಿಗಳ ಮೊರೆಯನು ಕೇಳಿ ಬ್ರಹ್ಮ
ಹಿರಣ್ಯಕಶಿಪು ಬಳಿಗೆ ಬಂದು ಪ್ರತ್ಯಕ್ಷನಾದ
ಅಯ್ಯಾ ಹಿರಣ್ಯಕಶಿಪು ನಿನಗೆ ಶುಭವಾಗಲಿ
ನೀ ಕೇಳಿದ ವರವ ಕೊಡುವೆನೆಂದನು ಬ್ರಹ್ಮ
ನಮಿಸುವೇ ಹರಿ ಸ್ತುತಿಸುವೇ || ೪೬ ||

ಬ್ರಹ್ಮದೇವನ ಕಂಡು ನಮಿಸಿ ಹಿರಣ್ಯಕಶಿಪು
ಹೇ ಬ್ರಹ್ಮ ದೇವನೇ ಸರ್ವ ಶಕ್ತನು ನೀನೇ
ನಾ ಬೇಡುವ ವರವ ನೀಡುವುದಾದರೆ
ನನ್ನ ಕೋರಿಕೆಯನ್ನು ಆಲಿಸು ಹೇ ದೇವಾ
ನಮಿಸುವೇ ಹರಿ ಸ್ತುತಿಸುವೇ || ೪೭ ||

ನಿನ್ನ ಸೃಷ್ಠಿಯ ಪ್ರಾಣಿ ಮತ್ತು ಮನುಜರಿಂದ
ದೇವದಾನವರಿಂದ ಮನೆಯ ಒಳಗು ಹೊರಗೂ
ಭೂಮಿ ಆಕಾಶದಲ್ಲು ರಾತ್ರಿ ಮತ್ತು ಹಗಲಲ್ಲು
ಯಾವುದೇ ಆಯುಧದಲ್ಲ್ಲು ಮರಣ ಬರಬಾರದು
ನಮಿಸುವೇ ಹರಿ ಸ್ತುತಿಸುವೇ || ೪೮ ||

ಹಿರಣ್ಯಕಶಿಪುವಿನ ಕೋರಿಕೆ ಆಲಿಸಿದ ಬ್ರಹ್ಮ
ಎಂದಿಗೂ ಇಂಥ ವರವ ಕೊಟ್ಟರೆ ಸರಿಯಲ್ಲವೆಂದ
ಆದರೂ ನಾನು ಕೊಟ್ಟ ವಚನದಂತೆ ನಡೆವೆನು
ಎಂದ ಬ್ರಹ್ಮದೇವನು ವರವನ್ನಿತ್ತು ಹೊರಟನು
ನಮಿಸುವೇ ಹರಿ ಸ್ತುತಿಸುವೇ || ೪೯ ||

ಬ್ರಹ್ಮನಿಂದ ವರಪಡೆದ ದೈತ್ಯ ಹಿರಣ್ಯಕಶಿಪು
ಮೂರು ಲೋಕವ ಜಯಿಸಿ ವಶಪಡಿಸಿಕೊಂಡನು
ತಮ್ಮನನ್ನು ಕೊಂದ ಹರಿಯ ರೋಷದಿ ನಿಂದಿಸುತ್ತ
ಸುರ ನರರ ಹಿಂಸಿಸಿ ಮದದಿಂದ ಮೆರೆದನು
ನಮಿಸುವೇ ಹರಿ ಸ್ತುತಿಸುವೇ || ೫೦ ||

ಹಿರಣ್ಯಕಶಿಪುವಿನ ಹಿಂಸೆ ತಡೆಯಲಾರದೆ
ಸುರನರ ಮುನಿವರರು ಹರಿಯಲ್ಲಿ ಮೊರೆಯಿಟ್ಟರು
ಕರುಣಾಮಯಿ ಹರಿಯು ಕಾಪಾಡುವೆನೆಂದು
ಅಶರೀರ ವಾಣಿಯ ಮೂಲಕ ಅಭಯವಿತ್ತ
ನಮಿಸುವೇ ಹರಿ ಸ್ತುತಿಸುವೇ || ೫೧ ||

ಅಶರೀರವಾಣಿಯ ಕೇಳಿಸಿಕೊಂಡವರೆಲ್ಲ
ಧ್ವನಿ ಬಂದ ದಿಕ್ಕಿಗೆ ನಮಿಸಿದರು ಭಕ್ತಿಯಿಂದ
ಹೇ ದೇವ ಭಗವಂತ ಭಕ್ತರ ರಕ್ಷಕ ನೀನೇ
ಎನ್ನುತ ಶ್ರೀ ಹರಿಯ ನಾಮವ ಭಜಿಸಿದರು
ನಮಿಸುವೇ ಹರಿ ಸ್ತುತಿಸುವೇ || ೫೨ ||

ದುಷ್ಟ ದಾನವನಾದ ಹಿರಣ್ಯಕಶಿಪುವಿನ
ಪ್ರಿಯಪುತ್ರ ಪ್ರಹ್ಲಾದ ಹರಿಯ ಪರಮಭಕ್ತ
ಪುತ್ರ ಪ್ರಹ್ಲಾದನನ್ನು ಗುರುಕುಲಕ್ಕೆ ಸೇರಿಸಿ
ಕೆಲಕಾಲ ನಂತರ ಅರಮನೆಗೆ ಕರೆಸಿದ
ನಮಿಸುವೇ ಹರಿ ಸ್ತುತಿಸುವೇ || ೫೩ ||

ಹಿರಣ್ಯ ಕಶಿಪು ತನ್ನ ಪುತ್ರನನ್ನು ಮುದ್ದಾಡಿ
ಮಮತೆಯಿಂದ ಕೇಳಿದ ಏನೇನು ಕಲಿತೆಯೆಂದು
ಹರಿಭಕ್ತ ಪ್ರಹ್ಲಾದ ಶ್ರದ್ಧಾ ಭಕ್ತಿಯಿಂದ
ಶ್ರೀ ಹರಿಯ ನಾಮವ ಸ್ಮರಣೆಯ ಮಾಡಿದನು
ನಮಿಸುವೇ ಹರಿ ಸ್ತುತಿಸುವೇ || ೫೪ ||

ಹರಿನಾಮ ಸ್ತುತಿಯನ್ನು ಕೇಳಿದ ಹಿರಣ್ಯಕಶಿಪು
ಕೋಪದಿ ಪ್ರಹ್ಲಾದನನ್ನು ರಭಸದಿಂದ ತಳ್ಳಿದ
ಸೇವಕರನ್ನು ಕರೆದು ಮಗನ ಕೊಲ್ಲಿರಿ ಎಂದ
ಸೇವಕರು ಶೂಲದಿಂದ ತಿವಿದರು ಪ್ರಹ್ಲಾದನನ್ನು
ನಮಿಸುವೇ ಹರಿ ಸ್ತುತಿಸುವೇ || ೫೫ ||

ತಿವಿದರೂ ಏನಾಗದೆ ಹರಿಯ ಸ್ತುತಿಸುವ ಮಗನ
ಆನೆಯಿಂದ ತುಳಿಸಿದ ಉಗ್ರ ಹಿರಣ್ಯಕಶಿಪು
ಸಮುದ್ರದಲ್ಲಿ ಬೀಳಿಸಿ ಹಾವಿನಿಂದ ಕಚ್ಚಿಸಿ
ಕಾರ್ಕೋಟ ವಿಷ ಕುಡಿಸಿ ಬೆಂಕಿಯಲ್ಲಿ ಬೀಳಿಸಿದ
ನಮಿಸುವೇ ಹರಿ ಸ್ತುತಿಸುವೇ || ೫೬ ||

ಹರಿಯ ಸ್ಮರಣೆಯಿಂದ ಬದುಕಿದನು ಪ್ರಹ್ಲಾದ
ಹಿರಣ್ಯಕಶಿಪುವಿನ ಕೊಲ್ಲುವ ಯತ್ನ ವ್ಯರ್ಥವಾಯ್ತು
ಮಗನನ್ನು ಹಿಡಿದೆಳೆಯುತ್ತ ರೋಷದಿಂದ ಕೇಳಿದ
ನನ್ನಪ್ಪಣೆ ಮೀರುವಂತ ಧೈರ್ಯ ಹೇಗೆ ಬಂತೆಂದು
ನಮಿಸುವೇ ಹರಿ ಸ್ತುತಿಸುವೇ || ೫೭ ||

ಹರಿಯಭಕ್ತ ಪ್ರಹ್ಲಾದ ವಿನಯದಿಂದ ಪಿತನಿಗೆ
ನನ್ನ ಧೈರ್ಯ ಸ್ಥೈರ್ಯಕ್ಕೆಲ್ಲ ಮೂಲ ಶ್ರೀಹರಿಯೆಂದ
ಪುನಃ ಹರಿಸ್ಮರಣೆ ಕೇಳಿ ಕೆರಳಿದ ಹಿರಣ್ಯಕಶಿಪು
ಅವನೇ ನನ್ನಯ ಶತ್ರು ಎಂದು ಆರ್ಭಟಿಸಿದ
ನಮಿಸುವೇ ಹರಿ ಸ್ತುತಿಸುವೇ || ೫೮ ||

ಶಾಂತ ಸ್ವರೂಪದಿ ಹೇಳಿದನು ಪ್ರಹ್ಲಾದ
ಶ್ರೀಹರಿಯು ಶತ್ರುವಲ್ಲ ನಿನ್ನ ಮನವೇ ನಿನ್ನ ಶತ್ರು
ಅಖಂಡ ಬ್ರಹ್ಮಾಂಡದ ಭಗವಂತನು ಅವನು
ಭಕ್ತಿಯಿಂದ ಅವನಲ್ಲಿ ನಿನ್ನ ಮನವ ನೆಲೆಸೆಂದ
ನಮಿಸುವೇ ಹರಿ ಸ್ತುತಿಸುವೇ || ೫೯ ||

ಮಗನ ಮಾತನ್ನು ಕೇಳಿ ಮತ್ತೆ ಉಗ್ರನಾದ ಪಿತನು
ನಿನ್ನ ತಲೆ ಕತ್ತರಿಸುವೆನು ಹರಿಯು ಉಳಿಸುವನೇನೋ
ಎಂದು ಕೇಳಿದ ಪಿತನಿಗೆ ಆ ಕ್ಷಣವೇ ಉತ್ತರಿಸಿದ
ಎಲ್ಲೆಲ್ಲೂ ಇರುವ ಹರಿಯು ರಕ್ಷಣೆ ಮಾಡುವನೆಂದ
ನಮಿಸುವೇ ಹರಿ ಸ್ತುತಿಸುವೇ || ೬೦ ||

ನಿನ್ನ ಹರಿಯು ಎಲ್ಲೆಲ್ಲೂ ಇರುವನೆಂದಾದರೆ
ಕಂಬದಲ್ಲಿ ತೋರಿಸೆಂದು ಕತ್ತಿಯನ್ನು ಎತ್ತಿದ
ಭಯಂಕರ ಶಬ್ದವಾಗಿ ಕಂಬ ಇಬ್ಭಾಗವಾಯ್ತು
ನರಸಿಂಹಾವತಾರಿ ಹರಿಯು ಅಲ್ಲಿ ಗೋಚರಿಸಿದ
ನಮಿಸುವೇ ಹರಿ ಸ್ತುತಿಸುವೇ || ೬೧ ||

ಉಗ್ರನಾಗಿ ನರಸಿಂಹನು ಹೂಂಕರಿಸಿದನಾಗ
ದುಷ್ಟ ಹಿರಣ್ಯಕಶಿಪು ಗದೆ ಹಿಡಿದು ಎರಗಿದ
ಭರದಿಂದ ನರಸಿಂಹನು ಹಿರಣ್ಯಕಶಿಪುವನ್ನು
ಹಿಡಿದೆತ್ತಿಕೊಂಡು ಬಂದು ಹೊಸ್ತಿಲ ಮೇಲೆ ಕುಳಿತ
ನಮಿಸುವೇ ಹರಿ ಸ್ತುತಿಸುವೇ || ೬೨ ||

ಹಿರಣ್ಯಕಶಿಪುವನ್ನು ತೊಡೆಯ ಮೇಲಿಟ್ಟುಕೊಂಡು
ಉಗುರಿಂದ ಹೊಟ್ಟೆ ಬಗೆದು ಕರುಳನ್ನು ಹೊರತೆಗೆದ
ಕರುಳನ್ನು ಮಾಲೆಯಾಗಿ ಕೊರಳಲ್ಲಿ ಧರಿಸಿದನು
ಪ್ರಹ್ಲಾದ ಭಕ್ತಿಯಿಂದ ನರಸಿಂಹನ ಸ್ತುತಿಸಿದ
ನಮಿಸುವೇ ಹರಿ ಸ್ತುತಿಸುವೇ || ೬೩ ||

ಹರಿಭಕ್ತ ಪ್ರಹ್ಲಾದ ಪರಿಪರಿಯಲಿ ಸ್ತುತಿಸಿ
ಉಗ್ರನರಸಿಂಹನನ್ನು ಶಾಂತಗೊಳಿಸಿದನು
ಭಕ್ತಿಗೆ ಮೆಚ್ಚಿ ಶ್ರೀಹರಿ ವರ ಕೇಳು ಎಂದಾಗ
ನಿನ್ನ ಸ್ಮರಣೆಯೆ ನನ್ನಲ್ಲಿ ನಿರತವಾಗಿರಲೆಂದ
ನಮಿಸುವೇ ಹರಿ ಸ್ತುತಿಸುವೇ || ೬೪ ||

ಹರಿಯೆಂದ ಸದ್ಭಕ್ತನೆ ನಾನು ಸಂತುಷ್ಟನಾದೆ
ದೈತ್ಯ ದಾನವರಿಗೆ ನೀನು ರಾಜನಾಗಿ ಬಾಳೆಂದ
ನಿನ್ನ ಕೊನೆಗಾಲದಲ್ಲಿ ನನ್ನ ಸೇರುವೆ ನೀನು
ಎಂದು ಶ್ರೀಹರಿಯು ಅಂತರ್ಧಾನನಾದನು
ನಮಿಸುವೇ ಹರಿ ಸ್ತುತಿಸುವೇ || ೬೫ ||

ಹಿರಣ್ಯಕಶಿಪುವ ಕೊಂದ ಭಗವಂತ ಶ್ರೀಹರಿಯ
ದೇವತಾದಿಗಳೆಲ್ಲ ಭಕ್ತಿಯಿಂದ ಭಜಿಸಿದರು
ನರಸಿಂಹಾವತಾರದಿ ಜಗತ್ತನ್ನು ಸಂರಕ್ಷಿಸಿದೆ
ಹೇ ದೇವ ದಯಾಮಯ ಎಂದು ಸ್ತುತಿಸಿದರೆಲ್ಲ
ನಮಿಸುವೇ ಹರಿ ಸ್ತುತಿಸುವೇ || ೬೬ ||

ವಾಮನ ಅವತಾರ

ದೇವತೆಗಳು ಮಾತ್ರ ಅಮೃತವ ಪಡೆದರೆಂದು
ಬಲೀಂದ್ರನು ಕ್ರೋಧದಿ ಸೈನ್ಯದೊಂದಿಗೆ ಹೊರಟ
ದೇವತೆಗಳ ಮೇಲೆ ಯುದ್ಧವನ್ನು ಮಾಡಿದನು
ದೇವತೆಗಳು ಯುದ್ಧದಲ್ಲಿ ಕೊಂದರು ಅವರನ್ನೆಲ್ಲ
ನಮಿಸುವೇ ಹರಿ ಸ್ತುತಿಸುವೇ || ೬೭ ||

ಗುರು ಶುಕ್ರಾಚಾರ್ಯರು ಸಂಜೀವಿನಿ ವಿದ್ಯೆಯ
ಉಪಯೋಗಿಸಿಕೊಂಡು ಬದುಕಿಸಿದರೆಲ್ಲರನು
ಬದುಕಿದ ಬಲೀಂದ್ರನು ಭಕ್ತಿಯಿಂದ ಗುರುವಿಗೆ
ನಮಿಸಿ ದಕ್ಷಿಣೆಯಿತ್ತು ಸಂತೃಪ್ತಿಪಡಿಸಿದನು
ನಮಿಸುವೇ ಹರಿ ಸ್ತುತಿಸುವೇ || ೬೮ ||

ಸ್ವರ್ಗದ ಅಧಿಪತ್ಯವನು ಪಡೆಯಲೇಬೇಕೆಂಬ
ಬಲೀಂದ್ರನ ಆಸೆಗೆ ಒಪ್ಪಿದ ಶುಕ್ರಾಚಾರ್ಯರು
ವಿಶ್ವಜಿತ್ ಯಾಗವನ್ನು ಅವನಿಂದ ಮಾಡಿಸಿ
ಅಜೇಯನನ್ನಾಗಿ ಮಾಡಿದರು ಅವನನ್ನು
ನಮಿಸುವೇ ಹರಿ ಸ್ತುತಿಸುವೇ || ೬೯ ||

ಸೈನ್ಯ ಸಮೇತ ಸ್ವರ್ಗಕ್ಕೆ ನುಗ್ಗಿ ಬಂದ ಬಲೀಂದ್ರ
ಭಯದಿ ದೇವೇಂದ್ರ ಕುಲಗುರು ಬಳಿ ಬಂದ
ಗುರುವೇ ಬಲಿಯ ಕೊಂದಿದ್ದೆ ಹೇಗೆ ಬಂದನು ಅವನು
ಇಷ್ಟು ಪ್ರಬಲ ಹೇಗಾದ ನಾನರಿಯೆನು ಎಂದ
ನಮಿಸುವೇ ಹರಿ ಸ್ತುತಿಸುವೇ || ೭೦ ||

ಹೇಳಿದರು ಬೃಹಸ್ಪತಿ ಅಯ್ಯಾ ದೇವೇಂದ್ರ
ಶುಕ್ರಾಚಾರ್ಯರಿಂದ ಬದುಕಿ ಪ್ರಬಲನಾದ
ಇದಕ್ಕೆಲ್ಲ ಪರಿಹಾರ ಶ್ರೀಹರಿಯಿಂದ ಸಾಧ್ಯ
ಕೆಲವು ಕಾಲ ನೀನು ಮರೆಯಾಗಿರು ಎಂದರು
ನಮಿಸುವೇ ಹರಿ ಸ್ತುತಿಸುವೇ || ೭೧ ||

ಗುರುಗಳನುಜ್ಞೆಯಂತೆ ಮರೆಯಾಗಿರುವುದಕ್ಕೆ
ತನ್ನವರ ಜೊತೆಗೂಡಿ ಹೊರಟನು ದೇವೇಂದ್ರ
ಸ್ವರ್ಗಾಧಿಪತಿಯಾಗಿ ಆಳುತ್ತ ಬಲೀಂದ್ರನು
ಮೂರ್ಲೋಕವ ಜಯಿಸಿ ವಶಪಡಿಸಿಕೊಂಡನು
ನಮಿಸುವೇ ಹರಿ ಸ್ತುತಿಸುವೇ || ೭೨ ||

ದೇವತೆಗಳ ತಾಯಿ ಮಕ್ಕಳ ಸ್ಥಿತಿಗೆ ಮರುಗಿ
ಅಳುತ ಪತಿ ಕಶ್ಯಪರಲ್ಲಿ ಮಕ್ಕಳ ರಕ್ಷಿಸಿರೆಂದಳು
ಕಶ್ಯಪರು ಸಂತೈಸುತ್ತ ಹರಿಯನ್ನು ಪ್ರಾರ್ಥಿಸೆನುತ
ಶ್ರದ್ಧೆಯಲಿ ಪಯೋವ್ರತವ ಮಾಡೆಂದು ಹೇಳಿದರು
ನಮಿಸುವೇ ಹರಿ ಸ್ತುತಿಸುವೇ || ೭೩ ||

ಅದಿತಿಯು ಭಕ್ತಿಯಿಂದ ವ್ರತ ಮಾಡಿ ಬೇಡಿದಳು
ಭಕ್ತಿ ಮೆಚ್ಚಿ ಭಗವಂತ ಪ್ರತ್ಯಕ್ಷನಾಗಿ ಹೇಳಿದ
ನಿನ್ನ ಪತಿಯ ತಪಸ್ಸಿನಲ್ಲಿ ನೆಲೆಸಿ ನಿನ್ನಲಿ ಜನಿಸುವೆ
ಮಗನಾಗಿ ನಾ ನಿನ್ನ ಮಕ್ಕಳ ರಕ್ಷಿಸುವೆನೆಂದ
ನಮಿಸುವೇ ಹರಿ ಸ್ತುತಿಸುವೇ || ೭೪ ||

ಅದಿತಿಯ ಮಗನಾಗಿ ಶ್ರೀಹರಿಯು ಜನಿಸಿದ
ಅದಿತಿಯು ಕಶ್ಯಪರು ಸಂತೋಷಗೊಂಡರು
ಆ ಕ್ಷಣ ಮಗು ಬೆಳೆದು ಪುಟ್ಟ ಬಾಲಕನಾದ
ಜಾತಕದ ಶಾಸ್ತ್ರವ ಮಾಡಿದರು ಕಶ್ಯಪರು
ನಮಿಸುವೇ ಹರಿ ಸ್ತುತಿಸುವೇ || ೭೫ ||

ಬಾಲಕಗೆ ವಾಮನ ಎಂಬ ಹೆಸರನ್ನಿಟ್ಟರು
ಕೂಡಲೇ ಉಪನಯನ ಮಾಡಲು ನಿಶ್ಚಯಿಸಿದರು
ಸೂರ್ಯನೆ ಕೆಳಗಿಳಿದು ವಾಮನನ ಬಳಿ ಬಂದು
ಉಪದೇಶ ಮಾಡಿದ ಗಾಯತ್ರಿ ಮಂತ್ರವನು
ನಮಿಸುವೇ ಹರಿ ಸ್ತುತಿಸುವೇ || ೭೬ ||

ಬೃಹಸ್ಪತಿ ಜನಿವಾರ ಭೂದೇವಿ ಕೃಷ್ಣಾಜಿನ
ಚಂದ್ರನಿಂದ ದಂಡ ಬ್ರಹ್ಮನಿತ್ತ ಕಮಂಡಲ
ಕುಬೇರ ತಂದುಕೊಟ್ಟ ಸ್ವರ್ಣ ಭಿಕ್ಷಾಪಾತ್ರೆಯ
ಸಾಕ್ಷಾತ್ ಅನ್ನಪೂರ್ಣೆ ನೀಡಿದಳು ಭಿಕ್ಷೆಯನು
ನಮಿಸುವೇ ಹರಿ ಸ್ತುತಿಸುವೇ || ೭೭ ||

ಕಮಂಡಲ ಕೊಡೆ ಹಿಡಿದು ಬಿಳಿ ವಸ್ತ್ರ ಧರಿಸಿದ
ಬಾಲಕ ಬ್ರಹ್ಮಚಾರಿ ಕಾಂತಿಯುಕ್ತನಾದ
ಬ್ರಹ್ಮ ತೇಜಸ್ವಿಯಾದ ವಾಮನಾವತಾರಿ
ಕೆಲಕಾಲದ ಮೇಲೆ ಬಲಿಯ ಬಳಿಗೆ ಹೊರಟ
ನಮಿಸುವೇ ಹರಿ ಸ್ತುತಿಸುವೇ || ೭೮ ||

ಯಾಗವನು ಮಾಡುತ್ತ ಇರುವ ಬಲೀಂದ್ರನು
ವಾಮನನನ್ನು ನೋಡಿ ಬರಮಾಡಿಕೊಂಡನು
ಭಕ್ತಿಯಲಿ ನಮಸ್ಕರಿಸಿ ಮಣೆ ಮೇಲೆ ಕುಳ್ಳಿರಿಸಿ
ಪಾದ ತೊಳೆದು ತೀರ್ಥವ ತಲೆ ಮೇಲೆ ಧರಿಸಿದ
ನಮಿಸುವೇ ಹರಿ ಸ್ತುತಿಸುವೇ || ೭೯ ||

ವಾಮನನನ್ನು ಕುರಿತು ಸ್ವಾಮೀ ಧನ್ಯನಾದೆ
ಯಾಗವು ಸಫಲವಾಯ್ತು ವಂಶ ಪವಿತ್ರವಾಯ್ತು
ನೀವು ಬಂದ ಕಾರಣ ತಿಳಿಸಿರಿ ಪಾಲಿಸುವೆ
ನಿಮ್ಮಿಚ್ಛೆ ಏನೆಂದು ಕೇಳಿದ ಬಲೀಂದ್ರ
ನಮಿಸುವೇ ಹರಿ ಸ್ತುತಿಸುವೇ || ೮೦ ||

ಬಲೀಂದ್ರನ ಮಾತಿಗೆ ಸಂತಸದಿ ವಾಮನ
ಮೂರು ಹೆಜ್ಜೆ ಭೂಮಿಯ ಕೊಡು ಎಂದು ಕೇಳಿದ
ಅಯ್ಯಾ ಬ್ರಾಹ್ಮಣನೇ ಸಣ್ಣ ಬೇಡಿಕೆಯೇಕೆ
ಫಲವತ್ತಾಗಿರುವಂತ ದೊಡ್ಡ ಜಾಗ ಕೊಡುವೆನೆಂದ
ನಮಿಸುವೇ ಹರಿ ಸ್ತುತಿಸುವೇ || ೮೧ ||

ನನ್ನಿಚ್ಛೆಯೇ ನನಗೆ ತೃಪ್ತಿ ಎಂದ ವಾಮನನಿಗೆ
ದಾನ ಧಾರೆಯೆರೆಯಲು ಸಿದ್ಧನಾದ ಬಲೀಂದ್ರ
ಶುಕ್ರಾಚಾರ್ಯರು ತಡೆದು ಹರಿಯೇ ವಾಮನನೆನ್ನಲು
ಕೊಟ್ಟ ಮಾತು ತಪ್ಪುವುದಿಲ್ಲ ಎಂದು ಧಾರೆಯೆರೆದ
ನಮಿಸುವೇ ಹರಿ ಸ್ತುತಿಸುವೇ || ೮೨ ||

ಬೆಳೆದನು ವಾಮನನು ಬೃಹದಾಕಾರವಾಗಿ
ಒಂದು ಹೆಜ್ಜೆಯನ್ನಿಟ್ಟು ಅಳೆದ ಭೂಮಂಡಲವ
ಮತ್ತೊಂದು ಹೆಜ್ಜೆಯನ್ನು ನಭೋಮಂಡಲದಲ್ಲಿಟ್ಟು
ಇನ್ನೊಂದೆಜ್ಜೆ ಜಾಗವ ಕೇಳಿದ ಎಲ್ಲಿದೆಯೆಂದು
ನಮಿಸುವೇ ಹರಿ ಸ್ತುತಿಸುವೇ || ೮೩ ||

ಬಲೀಂದ್ರನಿಚ್ಛೆಯಂತೆ ಆತನ ಶಿರದ ಮೇಲೆ
ಮೂರನೆ ಹೆಜ್ಜೆಯನಿಟ್ಟು ಹೇಳಿದ ವಾಮನ
ಅಯ್ಯಾ ಬಲೀಂದ್ರನೆ ನನ್ನ ಪರಮಭಕ್ತನಾದೆ
ಸುತಲ ಲೋಕಕ್ಕೆ ಹೋಗಿ ಪ್ರಭುವಾಗಿರು ಎಂದ
ನಮಿಸುವೇ ಹರಿ ಸ್ತುತಿಸುವೇ || ೮೪ ||

ವಾಮನಾವತಾರನಿಗೆ ನಮಿಸಿದ ಬಲೀಂದ್ರನು
ಸುತಲ ಲೋಕದೆಡೆಗೆ ಆ ಕ್ಷಣವೆ ಹೊರಟನು
ದೇವತಾದಿಗಳೆಲ್ಲ ಹರಿಯನ್ನು ಸ್ತುತಿಸಿದರು
ಮರಳಿ ದೇವೇಂದ್ರ ಸ್ವರ್ಗಾಧಿಪತಿಯಾದ
ನಮಿಸುವೇ ಹರಿ ಸ್ತುತಿಸುವೇ || ೮೫ ||

ಪರಶುರಾಮಾವತಾರ

ಜಮದಗ್ನಿ ಮಹರ್ಷಿಯು ತಪಸ್ಸನ್ನು ಆಚರಿಸಿ
ಕಾಮಧೇನು ಎಂಬ ಹಸುವನ್ನು ವರ ಪಡೆದ
ಕಾಮಧೇನುವಿನಿಂದ ಸಕಲ ಅಷ್ಟ್ಯೆಶ್ವರ್ಯ ಹೊಂದಿ
ರೇಣುಕಾದೇವಿಯ ಲಗ್ನವಾದ ಜಮದಗ್ನಿ
ನಮಿಸುವೇ ಹರಿ ಸ್ತುತಿಸುವೇ || ೮೬ ||

ನಿತ್ಯವು ಆಶ್ರಮದಲ್ಲಿ ಹರಿಯನ್ನಾರಾಧಿಸುತ
ಸುಖ ಸಂತಸದಿಂದ ಇದ್ದರು ದಂಪತಿಗಳು
ಕಾಲವು ಕಳೆದಂತೆ ಪಡೆದರು ಪುತ್ರರನ್ನು
ಕೊನೆಗೆ ಜನಿಸಿದ ಪುತ್ರ ಶ್ರೀಹರಿ ಅವತಾರಿ
ನಮಿಸುವೇ ಹರಿ ಸ್ತುತಿಸುವೇ || ೮೭ ||

ಪುತ್ರರಿಗೆ ಶಾಸ್ತ್ರೋಕ್ತ ನಾಮಕರಣವ ಮಾಡಿ
ಕಿರಿಯ ಮಗನಿಗಿಟ್ಟರು ಪರಶುರಾಮನೆಂದು
ಬೆಳೆದು ಬಾಲಕರಾಗಿ ಉಪನಯನ ಸಂಸ್ಕಾರ
ಪಡೆದು ಆಶ್ರಮದಲ್ಲಿ ಸಕಲ ಶಾಸ್ತ್ರ ಕಲಿತರು
ನಮಿಸುವೇ ಹರಿ ಸ್ತುತಿಸುವೇ || ೮೮ ||

ಶಾಸ್ತ್ರ ಮತ್ತು ಶಸ್ತ್ರ ವಿದ್ಯೆ ಕಲಿತ ಪರಶುರಾಮ
ದಟ್ಟ ಕಾಡಿಗೆ ಹೋಗಿ ತಪವನ್ನಾಚರಿಸಿದ
ಭಕ್ತಿ ಮೆಚ್ಚಿ ಭಗವಂತ ವಿಶೇಷ ಶಕ್ತಿಯ ನೀಡಿ
ಧನುಸ್ಸು ದಿವ್ಯಾಸ್ತ್ರ ಮತ್ತು ಕೊಡಲಿಯನ್ನು ನೀಡಿದ
ನಮಿಸುವೇ ಹರಿ ಸ್ತುತಿಸುವೇ || ೮೯ ||

ತಪಸ್ಸಿನ ಫಲ ಪಡೆದು ಬಂದ ಪರಶುರಾಮನ
ಕಂಡು ತಂದೆ ತಾಯಿ ಸಂತೋಷಗೊಂಡರು
ಕೆಲ ಕಾಲ ಕಳೆಯಲು ಪುತ್ರ ಪರಶುರಾಮನು
ತಂದೆ ತಾಯಿಗೆ ನಮಿಸಿ ಕಾರ್ಯಾರ್ಥ ಹೊರಟನು
ನಮಿಸುವೇ ಹರಿ ಸ್ತುತಿಸುವೇ || ೯೦ ||

ಕಾರ್ತವೀರ್ಯಾರ್ಜುನ ತನ್ನ ಪರಿವಾರ ಸಹಿತ
ಜಮದಗ್ನಿಯ ಆಶ್ರಮಕ್ಕೆ ಒಂದಿನ ಬಂದುಳಿದ
ಮಹರ್ಷಿ ಜಮದಗ್ನಿಯು ಬಂದ ಅತಿಥಿಗಳಿಗೆ
ದಿವ್ಯ ಔತಣ ನೀಡಿ ಗೌರವದಿ ಸತ್ಕರಿಸಿದ
ನಮಿಸುವೇ ಹರಿ ಸ್ತುತಿಸುವೇ || ೯೧ ||

ಸತ್ಕಾರ ಸ್ವೀಕರಿಸಿದ ಕಾರ್ತವೀರ್ಯಾರ್ಜುನ
ಜಮದಗ್ನಿಯ ವೈಭವವ ನೋಡಿ ಮತ್ಸರಗೊಂಡ
ವೈಭವಕೆ ಕಾಮದೇನು ಕಾರಣವೆಂದು ತಿಳಿದು
ಕಾಮಧೇನುವ ಎಳೆದು ಬಲವಂತವಾಗಿ ಒಯ್ದ
ನಮಿಸುವೇ ಹರಿ ಸ್ತುತಿಸುವೇ || ೯೨ ||

ಕಾರ್ಯಾರ್ಥವ ಮುಗಿಸಿ ಬಂದ ಪರಶುರಾಮ
ನಡೆದ ಸಂಗತಿಯನ್ನು ತಿಳಿದು ಕುಪಿತನಾದ
ಕೈಯಲ್ಲಿ ಕೊಡಲಿ ಹಿಡಿದು ಹೊರಟನು ರೋಷದಿಂದ
ಕಾರ್ತವೀರ್ಯಾರ್ಜುನನ ಅರಮನೆಗೆ ಧಾವಿಸಿದ
ನಮಿಸುವೇ ಹರಿ ಸ್ತುತಿಸುವೇ || ೯೩ ||

ಕಾರ್ತವೀರ್ಯಾರ್ಜುನ ಪರಶುರಾಮನ ನೋಡಿ
ಹೇಳಿದ ಸೈನಿಕರಿಗೆ ಅವನ ಕೊಲ್ಲಿರಿ ಎಂದು
ಪರಶುರಾಮನು ತನ್ನ ಕೊಲ್ಲಲು ಬಂದವರನ್ನು
ರೋಷದಿ ಆರ್ಭಟಿಸುತ್ತ ಕೊಂದನು ಕೊಡಲಿಯಿಂದ
ನಮಿಸುವೇ ಹರಿ ಸ್ತುತಿಸುವೇ || ೯೪ ||

ಕಾರ್ತವೀರ್ಯಾರ್ಜುನನು ತಾನೇ ಯುದ್ಧಕ್ಕೆ ಬಂದ
ಪರಶುರಾಮನು ಅವನ ತಲೆಯನ್ನು ಕತ್ತರಿಸಿದ
ಕಾರ್ತವೀರ್ಯಾರ್ಜುನನ ಮಕ್ಕಳೆಲ್ಲ ಭಯದಿಂದ
ಕಾಮಧೇನುವ ತಂದು ಆ ಕ್ಷಣವೆ ಒಪ್ಪಿಸಿದರು
ನಮಿಸುವೇ ಹರಿ ಸ್ತುತಿಸುವೇ || ೯೫ ||

ಮರಳಿ ಕಾಮಧೇನುವ ತಂದ ಪರಶುರಾಮನು
ಪಿತನಿಗೊಪ್ಪಿಸಿ ಹೇಳಿದ ನಡೆದ ಸಂಗತಿಯನ್ನು
ಆಲಿಸಿದ ಜಮದಗ್ನಿ ಮಗನೇ ತಪ್ಪು ಮಾಡಿದೆ
ಶಾಂತಿಯೇ ಸರ್ವಸ್ವವು ಅದೇ ತೇಜಸ್ಸು ಎಂದ
ನಮಿಸುವೇ ಹರಿ ಸ್ತುತಿಸುವೇ || ೯೬ ||

ಪಟ್ಟಾಭಿಷಿಕ್ತನಾದ ರಾಜನ ಕೊಂದು ನೀನು
ಬ್ರಹ್ಮಹತ್ಯೆಗಿಂತ ದೊಡ್ಡ ಪಾಪ ಮಾಡಿದೆಯೆಂದ
ಪಿತನ ಅನುಜ್ಞೆಯಂತೆ ತೀರ್ಥಯಾತ್ರೆಯ ಮಾಡಿ
ಪಾಪ ವಿಮುಕ್ತನಾಗಿ ಬಂದ ಪರಶುರಾಮ
ನಮಿಸುವೇ ಹರಿ ಸ್ತುತಿಸುವೇ || ೯೭ ||

ಕೆಲವು ದಿನ ಕಳೆಯಲು ಪರಶುರಾಮನ ತಾಯಿ
ಎಂದಿನಂತೆ ನದಿಗೆ ಹೋದಳು ನೀರಿಗಾಗಿ
ನದಿಯಲ್ಲಿ ಗಂಧರ್ವರು ಅಪ್ಸರೆಯರೊಡಗೂಡಿ
ನೀರಾಟವಾಡುವುದ ನೋಡಿ ಅಲ್ಲೆ ನಿಂತಳು
ನಮಿಸುವೇ ಹರಿ ಸ್ತುತಿಸುವೇ || ೯೮ ||

ನೀರಾಟ ನೋಡುತ್ತ ಕಾಲವ ಕಳೆಯುತ್ತಿರಲು
ಒಮ್ಮೆಗೆ ಎಚ್ಚೆತ್ತುಕೊಂಡು ಬಂದಳು ಆಶ್ರಮಕೆ
ಸರಿಯಾದ ಸಮಯಕ್ಕೆ ಪತ್ನಿ ಬರದ ಕಾರಣವ
ಜ್ಞಾನದೃಷ್ಟಿಯಲ್ಲಿ ತಿಳಿದು ಕೋಪದಲಿದ್ದ ಜಮದಗ್ನಿ
ನಮಿಸುವೇ ಹರಿ ಸ್ತುತಿಸುವೇ || ೯೦ ||

ರೇಣುಕಾ ದೇವಿಯು ಭಯಭಕ್ತಿಯಿಂದ ಬಂದು
ಪತಿಯ ಎದುರು ನೀರಿಟ್ಟು ಕೈಮುಗಿದು ನಿಂತಳು
ಕೋಪದಿಂದ ಜಮದಗ್ನಿ ಮಕ್ಕಳೆಲ್ಲರನ್ನು ಕರೆದು
ನಿಮ್ಮ ತಾಯಿಯ ಕತ್ತನ್ನು ಕತ್ತರಿಸಿ ಹಾಕಿರೆಂದ
ನಮಿಸುವೇ ಹರಿ ಸ್ತುತಿಸುವೇ || ೧೦೦ ||

ಪರಶುರಾಮನ ಬಿಟ್ಟು ಉಳಿದಿರುವ ಮಕ್ಕಳೆಲ್ಲ
ನಮ್ಮಿಂದ ಸಾಧ್ಯವಿಲ್ಲ ಎಂದರೆಲ್ಲ ಪಿತನಿಗೆ
ಪಿತನ ತಪಶ್ಶಕ್ತಿಯನ್ನು ಅರಿತ ಪರಶುರಾಮ
ಪಿತೃವಾಕ್ಯ ಪಾಲಿಸಲು ಆ ಕ್ಷಣವೆ ಒಪ್ಪಿಕೊಂಡ
ನಮಿಸುವೇ ಹರಿ ಸ್ತುತಿಸುವೇ || ೧೦೧ ||

ಸುತ ಪರಶುರಾಮನಿಗೆ ಹೇಳಿದನು ಜಮದಗ್ನಿ
ತಾಯಿ ಜೊತೆ ಅಣ್ಣಂದಿರ ಕತ್ತರಿಸಿ ಹಾಕೆಂದು
ಪಿತನ ಆಜ್ಞೆಯಂತೆ ತನ್ನ ಕೊಡಲಿಯಿಂದ
ತಾಯಿ ಮತ್ತು ಅಣ್ಣಂದಿರ ಆಕ್ಷಣ ಕತ್ತರಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೦೨ ||

ಜಮದಗ್ನಿ ಮಹರ್ಷಿಯು ಸಂತಸದಿ ಸುತನಿಗೆ
ಬೇಕಾದ ವರ ಕೇಳು ಕೊಡುವೆ ನೀಗಲೆ ಎಂದ
ಆಕ್ಷಣ ಪರಶುರಾಮ ತಾಯಿ ಮತ್ತು ಅಣ್ಣಂದಿರ
ಈಗಲೇ ಬದುಕಿಸೆಂದು ಕೇಳಿದನು ವರವನ್ನು
ನಮಿಸುವೇ ಹರಿ ಸ್ತುತಿಸುವೇ || ೧೦೩ ||

ಇವರನ್ನೆಲ್ಲ ನಾನೇ ಕೊಂದಿರುವ ಜ್ಞಾಪಕವು
ಇವರಿಗಿರಬಾರದು ಎಂದು ವಿನಂತಿಸಿದ
ಸುತನ ಮನದಿಚ್ಛೆಯಂತೆ ಜಮದಗ್ನಿ ಮಹರ್ಷಿಯು
ತಥಾಸ್ತು ಎಂದಾಗ ಸತ್ತವರೆಲ್ಲ ಬದುಕಿದರು
ನಮಿಸುವೇ ಹರಿ ಸ್ತುತಿಸುವೇ || ೧೦೪ ||

ಕಾರ್ತವೀರ್ಯಾರ್ಜುನನ ಮಕ್ಕಳೆಲ್ಲ ತಂದೆಯ
ಮರಣವನ್ನು ಮರೆಯದೆ ಕಾಲಕಳೆಯುತಲಿದ್ದರು
ತಂದೆಯ ಕೊಂದಿರುವ ಪರಶುರಾಮನ ಮೇಲೆ
ದ್ವೇಷ ತೀರಿಸಿಕೊಳ್ಳಲು ಸಮಯ ಕಾಯುತಲಿದ್ದರು
ನಮಿಸುವೇ ಹರಿ ಸ್ತುತಿಸುವೇ || ೧೦೫ ||

ಒಂದಿನ ಪರಶುರಾಮ ಸಹೋದರರೊಂದಿಗೆ
ಆಶ್ರಮದಿಂದ ಹೊರಗೆ ಕಾರ್ಯನಿಮಿತ್ತ ಹೊರಟ
ಕಾರ್ತವೀರ್ಯಾರ್ಜುನನ ಮಕ್ಕಳು ಆಶ್ರಮಕೆ ನುಗ್ಗಿ
ಧ್ಯಾನಾಸಕ್ತ ಜಮದಗ್ನಿಯ ಕತ್ತು ಕಡಿದು ಒಯ್ದರು
ನಮಿಸುವೇ ಹರಿ ಸ್ತುತಿಸುವೇ || ೧೦೬ ||

ಈ ಘೋರ ದೃಶ್ಯ ನೋಡಿ ರೇಣುಕಾದೇವಿಯು
ಅಳುತ ಕೂಗಿಕೊಂಡಳು ಪರಶುರಾಮಾ ಎಂದು
ಆಶ್ರಮಕ್ಕೆ ಬರುತ್ತಲಿದ್ದ ಪರಶುರಾಮನ ಕಿವಿಗೆ
ತಾಯಿಯ ಕೂಗು ಕೇಳಿ ಓಡಿ ಬಂದು ನೋಡಿದ
ನಮಿಸುವೇ ಹರಿ ಸ್ತುತಿಸುವೇ || ೧೦೭ ||

ಅನಾಥರಾದೆವೆಂದು ಅಳುತ ಪರಶುರಾಮ
ಪಿತನೆ ನಿನಗೆ ಇಂಥಹ ಘೋರ ಮರಣವೆ ಎಂದ
ಪರಶುರಾಮನು ತನ್ನ ಅಣ್ಣಂದಿರಿಗೆ ಹೇಳಿದ
ತಂದೆಯ ದೇಹವನ್ನು ನೋಡಿಕೊಳ್ಳಿರಿ ಎಂದು
ನಮಿಸುವೇ ಹರಿ ಸ್ತುತಿಸುವೇ || ೧೦೮ ||

ಕೋಪದಿ ಕೊಡಲಿ ಹಿಡಿದು ಹೊರಟನು ಪರಶುರಾಮ
ಕಾರ್ತವೀರ್ಯಾರ್ಜುನನ ಮಕ್ಕಳೆಲ್ಲರನ್ನು ಕೊಂದ
ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆಯ ಮಾಡಿ
ದುಷ್ಟ ಕ್ಷತ್ರಿಯರನ್ನೆಲ್ಲ ವಧಿಸಿ ನಾಶಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೧೦೯ ||

ಪಿತನ ತಲೆಯ ತಂದು ದೇಹಕ್ಕೆ ಜೋಡಿಸಿ
ಉತ್ತರಕ್ರಿಯಾದಿಗಳ ಮಾಡಿದನು ಶ್ರದ್ಧೆಯಿಂದ
ಸದ್ಗತಿ ಪಡೆದ ಜಮದಗ್ನಿ ಸಪ್ತ ಋಷಿಮಂಡಲದಲ್ಲಿ
ಒಬ್ಬನಾಗಿ ಇಂದಿಗೂ ಬೆಳಗುತ್ತಲೆ ಇರುವನು
ನಮಿಸುವೇ ಹರಿ ಸ್ತುತಿಸುವೇ || ೧೧೦ ||

ಹರಿಯ ಅವತಾರಿಯಾಗಿ ಇರುವ ಪರಶುರಾಮನು
ಸಕಲ ಯಜ್ಞವ ಮಾಡಿ ಭೂದಾನ ಮಾಡಿದ
ದುಷ್ಟರನ್ನು ನಾಶ ಮಾಡಿ ಭೂಮಿ ಭಾರವ ಇಳಿಸಿ
ಧರ್ಮದಿಂದ ಪೃಥ್ವಿಯನ್ನು ಪಾಲನೆಯ ಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೧೧೧ ||

ರಾಮಾವತಾರ

ದಶರಥರಾಜ ತನಗೆ ಪುತ್ರರು ಜನಿಸಲೆಂದು
ಶ್ರದ್ಧೆಯಲಿ ಭಕ್ತಿಯಿಂದ ಯಾಗವನ್ನು ಮಾಡಿದನು
ಹವಿಸ್ಸನ್ನು ಸ್ವೀಕರಿಸುವ ಆಹ್ವಾನಿತರಾಗಿ
ಆಯಾ ದೇವತೆಗಳು ಅಲ್ಲಿ ಬಂದು ಸೇರಿದರು
ನಮಿಸುವೇ ಹರಿ ಸ್ತುತಿಸುವೇ || ೧೧೨ ||

ಯಾಗಕ್ಕೆ ಬಂದಿರುವ ಬ್ರಹ್ಮದೇವನಿಗೆ ನಮಿಸಿ
ದೇವತಾದಿಗಳೆಲ್ಲ ಕಷ್ಟ ಹೇಳಿಕೊಂಡರು
ಮದದಿಂದ ಮೆರೆಯುತ್ತ ಲೋಕ ಕಂಟಕನಾದ
ರಾವಣನ ಅಂತ್ಯವು ಆಗಲೇ ಬೇಕೆಂದರು
ನಮಿಸುವೇ ಹರಿ ಸ್ತುತಿಸುವೇ || ೧೧೩ ||

ಹೇಳಿದ ಬ್ರಹ್ಮದೇವ ಮನುಜನಿಂದ ಮೃತ್ಯುವು
ಬಾರದಿರಲಿ ಎಂದು ರಾವಣನು ಕೇಳಿಲ್ಲ
ಮನುಜನೇ ರಾವಣನ ಅಂತ್ಯವ ಮಾಡುವನು
ಎಲ್ಲರೂ ಶ್ರೀಹರಿಯನ್ನು ಪ್ರಾರ್ಥಿಸಿರಿ ಎಂದನು
ನಮಿಸುವೇ ಹರಿ ಸ್ತುತಿಸುವೇ || ೧೧೪ ||

ದೇವತಾದಿಗಳೆಲ್ಲ ಯಾಗಮಂಟಪದಲ್ಲಿ
ಶ್ರೀಹರಿಗೆ ಮೊರೆಯಿಟ್ಟು ಭಕ್ತಿಯಿಂದ ಬೇಡಿದರು
ವೇದ ಸ್ವರೂಪನಾದ ಭಗವಂತ ಶ್ರೀಹರಿಯು
ಎಲ್ಲರ ಮೊರೆಯ ಕೇಳಿ ಆ ಕ್ಷಣ ಪ್ರತ್ಯಕ್ಷನಾದ
ನಮಿಸುವೇ ಹರಿ ಸ್ತುತಿಸುವೇ || ೧೧೫ ||

ಶ್ರೀಹರಿಗೆ ನಮಿಸುತ್ತ ದೇವತಾದಿಗಳೆಲ್ಲ
ರಾವಣನ ಕ್ರೌರ್ಯದ ಸಂಕಷ್ಟ ಹೇಳಿದರು
ಹೇ ದೇವ ನೀನೇ ದಶರಥನ ಸುತನಾಗಿ
ರಾವಣನ ಅಂತ್ಯವ ಮಾಡೆಂದು ಹೇಳಿದರು
ನಮಿಸುವೇ ಹರಿ ಸ್ತುತಿಸುವೇ || ೧೧೬ ||

ದೇವತಾದಿಗಳಿಗೆ ಅಭಯವಿತ್ತ ಶ್ರೀಹರಿ
ನಿಮ್ಮ ಅಭೀಷ್ಟದಂತೆ ದಶರಥನ ಸುತನಾಗುವೆ
ದುಷ್ಟ ರಾವಣನ ವಧಿಸಿ ಶಿಷ್ಟರ ಸಂರಕ್ಷಿಸುವೆ
ನಿಶ್ಚಿಂತರಾಗಿರೆಂದು ಅಂತರ್ಧಾನನಾದನು
ನಮಿಸುವೇ ಹರಿ ಸ್ತುತಿಸುವೇ || ೧೧೭ ||

ಅವತರಿಸುವ ಹರಿಯ ಕಾರ್ಯಕ್ಕೆ ನೆರವಾಗಲು
ಸಮಸ್ತ ದೇವತೆಗಳಿಗು ಆದೇಶವಿತ್ತ ಬ್ರಹ್ಮ
ಮಾನವ ರೂಪದಲ್ಲಿ ಜನಿಸುವ ಶ್ರೀಹರಿಗೆ
ಪ್ರಾಣಿ ಪಕ್ಷಿಗಳಾಗಿ ಸಹಾಯ ಮಾಡಿರೆಂದ
ನಮಿಸುವೇ ಹರಿ ಸ್ತುತಿಸುವೇ || ೧೧೮ ||

ಭಗವಂತ ಶ್ರೀಹರಿಯು ತನ್ನ ಅಂಶಗಳಿಂದ
ನಾಲ್ವರು ಮಕ್ಕಳಾಗಿ ದಶರಥಗೆ ಜನಿಸಿದ
ಶ್ರೀರಾಮ ಲಕ್ಷ್ಮಣ ಭರತ ಶತ್ರುಘ್ನರೆಂಬ
ಹೆಸರನ್ನಿಟ್ಟು ದಶರಥ ಸಂತಸವ ಹೊಂದಿದ
ನಮಿಸುವೇ ಹರಿ ಸ್ತುತಿಸುವೇ || ೧೧೯ ||

ಶ್ರೀ ರಾಮ ಲಕ್ಷ್ಮಣ ಭರತ ಶತ್ರುಘ್ನರೆಲ್ಲ
ಬೆಳೆದು ಬಾಲಕರಾಗಿ ಸಕಲ ವಿದ್ಯೆ ಕಲಿತರು
ದಶರಥನ ಅರಮನೆಗೆ ವಿಶ್ವಾಮಿತ್ರನು ಬಂದು
ಶ್ರೀರಾಮಲಕ್ಷ್ಮಣರನ್ನು ಆಶ್ರಮಕ್ಕೆ ಕರೆದೊಯ್ದ
ನಮಿಸುವೇ ಹರಿ ಸ್ತುತಿಸುವೇ || ೧೨೦ ||

ಆಶ್ರಮದ ಯಜ್ಞಗಳಿಗೆ ವಿಘ್ನಗಳು ಬರದಂತೆ
ಶ್ರೀರಾಮ ಲಕ್ಷ್ಮಣರು ಕಾವಲಾಗಿ ನಿಂತರು
ಯಜ್ಞವ ಮಾಡುವಾಗ ತೊಂದರೆಯ ಕೊಡುತ್ತಲಿರುವ
ಸುಬಾಹು ಮಾರೀಚರನ್ನು ರಕ್ಕಸರನ್ನೂ ಕೊಂದರು
ನಮಿಸುವೇ ಹರಿ ಸ್ತುತಿಸುವೇ || ೧೨೧ ||

ಅಲ್ಲಿಂದ ಶ್ರೀರಾಮ ಹೊರಟು ಮಿಥಿಲೆಗೆ ಬಂದು
ಶಿವಧನುಸ್ಸನ್ನು ಮುರಿದು ಸೀತೆ ಪಿತನ ಮೆಚ್ಚಿಸಿದ
ಸೀತೆ ಪಿತ ಜನಕನು ವಿವಾಹಕ್ಕೆ ಸಿದ್ಧತೆ ಮಾಡಿ
ದಶರಥನ ಬಳಗವ ಆಮಂತ್ರಿಸಿ ಕರೆಸಿದ
ನಮಿಸುವೇ ಹರಿ ಸ್ತುತಿಸುವೇ || ೧೨೨ ||

ದಶರಥನ ಮಕ್ಕಳಿಗೆ ಜನಕ ಮತ್ತು ಕುಶಧ್ವಜನ
ಮಕ್ಕಳನ್ನು ಧಾರೆಯೆರೆದು ವಿವಾಹ ಮಾಡಿದರು
ರಾಮನಿಗೆ ಸೀತೆಯ ಲಕ್ಷ್ಮಣಗೆ ಊರ್ಮಿಳೆಯು
ಭರತಗೆ ಮಾಂಡವಿ ಶತ್ರುಘ್ನಗೆ ಶ್ರುತಕೀರ್ತಿ
ನಮಿಸುವೇ ಹರಿ ಸ್ತುತಿಸುವೇ || ೧೨೩ ||

ವಧುವರರ ಜೊತೆಗೂಡಿ ದಶರಥನ ಪರಿವಾರ
ಅಯೋಧ್ಯೆಗೆ ಹೊರಟಾಗ ಕಂಡನು ಪರಶುರಾಮ
ಗರ್ವದಿ ಪರಶುರಾಮ ಎದುರಿಸಿದ ರಾಮನ
ಕ್ಷಣದಲ್ಲಿ ಗೆದ್ದ ರಾಮ ಅವನ ಗರ್ವ ಅಡಗಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೨೪ ||

ಸಂತಸ ಸಂಭ್ರಮದಿಂದ ದಶರಥನ ಪರಿವಾರ
ಅಯೋಧ್ಯೆ ಪ್ರವೇಶಿಸಿ ಇದ್ದರು ನೆಮ್ಮದಿಯಿಂದ
ದಶರಥ ಮಹಾರಾಜ ಹಿರಿಯ ಪುತ್ರ ರಾಮನಿಗೆ
ಪಟ್ಟಾಭಿಷೇಕವನ್ನು ಮಾಡಲು ನಿಶ್ಚಯಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೨೫ ||

ದಶರಥನ ಕಿರಿಯ ಪತ್ನಿ ಕೈಕೇಯಿ ಒಪ್ಪಿಗೆ ಕೊಡದೆ
ತನ್ನ ಮಗ ಭರತನಿಗೆ ಪಟ ಕಟ್ಟಲು ಹೇಳಿದಳು
ಹಿಂದೆ ನನಗೆ ನೀವು ಕೊಟ್ಟಿರುವ ಎರಡು ವರವು
ಈಗಲೇ ಬೇಕೆಂದು ಪತಿಯಲ್ಲಿ ಬೇಡಿದಳು
ನಮಿಸುವೇ ಹರಿ ಸ್ತುತಿಸುವೇ || ೧೨೬ ||

ಭರತಗೆ ಪಟ್ಟಾಭಿಷೇಕ ರಾಮನಿಗೆ ವನವಾಸ
ಈ ಎರಡು ವರವನ್ನು ಈಡೇರಿಸಿ ಎಂದಳು
ಕೈಕೇಯಿ ಬೇಡಿಕೆಯ ಆಲಿಸಿದ ದಶರಥನು
ಹಿಂದೆ ಕೊಟ್ಟ ವಚನಕ್ಕೆ ನೊಂದು ಸಂಕಟಪಟ್ಟ
ನಮಿಸುವೇ ಹರಿ ಸ್ತುತಿಸುವೇ || ೧೨೭ ||

ಪಿತನ ಸಂಕಟ ತಿಳಿದು ಕಾಡಿಗೆ ಹೊರಟ ರಾಮ
ಜೊತೆಯಲ್ಲಿ ಸೀತೆ ಮತ್ತು ಲಕ್ಷ್ಮಣನ ಕರೆದುಕೊಂಡು
ರಾಮ ಸೀತೆ ಲಕ್ಷ್ಮಣರು ಕಾಡಲ್ಲಿ ಕಷ್ಟವಪಡುತ
ದಂಡಕಾರಣ್ಯದಲ್ಲಿ ಬಂದು ವಾಸಿಸಿದರು
ನಮಿಸುವೇ ಹರಿ ಸ್ತುತಿಸುವೇ || ೧೨೮ ||

ದುಷ್ಟ ರಾವಣನ ತಂಗಿ ಶೂರ್ಪನಖಿಯು ನೋಡಿ
ಸುಂದರ ರೂಪ ತಾಳಿ ರಾಮನ ಮೋಹಿಸಿದಳು
ಸಹಿಸಲಾರದೆ ರಾಮ ಲಕ್ಷ್ಮಣಗೆ ಸನ್ನೆಯ ಮಾಡಿದ
ಅರಿತ ಲಕ್ಷ್ಮಣನು ಅವಳ ಮೂಗು ಮತ್ತು ಕಿವಿಯ ಕೊಯ್ದ
ನಮಿಸುವೇ ಹರಿ ಸ್ತುತಿಸುವೇ || ೧೨೯ ||

ಶೂರ್ಪನಖಿ ರೋಧಿಸುತ್ತ ಕರೆದಳು ಬಂಧುಗಳ
ಸಹಸ್ರ ರಕ್ಕಸರ ಜೊತೆಗೆ ಬಂದ ಖರದೂಷಣರು
ರಾಮನನ್ನು ಸುತ್ತುವರೆದು ಕೊಲ್ಲಲು ಯತ್ನಿಸಿದಾಗ
ಖರದೂಷಣರ ಕೊಂದು ರಕ್ಕಸರನ್ನು ಕೊಂದನು ರಾಮ
ನಮಿಸುವೇ ಹರಿ ಸ್ತುತಿಸುವೇ || ೧೩೦ ||

ಅಳುತ ಶೂರ್ಪನಖಿಯು ರಾವಣನ ಬಳಿ ಬಂದು
ನನಗೆ ಈ ಸ್ಥಿತಿ ತಂದವರನ್ನು ನಾಶ ಮಾಡೆಂದಳು
ಸೀತೆಯ ಸೌಂದರ್ಯವ ವರ್ಣಿಸಿದಳು ಶೂರ್ಪನಖಿ
ವ್ಯಾಮೋಹದಿ ರಾವಣನು ಸೀತೆಯ ತರಲು ನಿಶ್ಚಯಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೩೧ ||

ಸೀತೆಯ ಅಪಹರಿಸಲು ಮಾರೀಚನನ್ನು ಕರೆದು
ಮಾರ್ಗವ ರೂಪಿಸೆಂದು ಹೇಳಿದನು ರಾವಣ
ಒಪ್ಪಿದ ಮಾರೀಚನು ಮಾಯಾಜಿಂಕೆಯಾಗಿ
ಸೀತಾಮಾತೆಯನ್ನು ಮರುಳನು ಮಾಡಿದನು
ನಮಿಸುವೇ ಹರಿ ಸ್ತುತಿಸುವೇ || ೧೩೨ ||

ಸ್ವರ್ಣದಂತೆ ಹೊಳೆಯುವ ಸುಂದರ ಜಿಂಕೆಯ ನೋಡಿ
ತನಗೆ ಬೇಕೆಂದು ಸೀತೆಯು ರಾಮನಲ್ಲಿ ಬೇಡಿದಳು
ಸೀತೆಯ ಇಚ್ಛೆಯಂತೆ ರಾಮನು ಜಿಂಕೆಯನ್ನು
ಹಿಡಿಯಲು ಹೊರಟಾಗ ದೂರ ಓಡಿತು ಜಿಂಕೆ
ನಮಿಸುವೇ ಹರಿ ಸ್ತುತಿಸುವೇ || ೧೩೩ ||

ಜಿಂಕೆಯ ಬೆನ್ನಟ್ಟಿ ರಾಮ ಹಿಡಿಯಲೆತ್ನಿಸಿದಾಗ
ಜಿಂಕೆಯು ಮಾಯವಾಗಿ ದೂರದಲ್ಲಿ ಕಾಣಿಸಿತು
ರಾಕ್ಷಸನ ಮಾಯೆಯನ್ನು ತಿಳಿದ ಶ್ರೀರಾಮನು
ಜಿಂಕೆಯ ಕೊಲ್ಲಲೆಂದು ಬಾಣ ಬಿಟ್ಟನಾ ಕ್ಷಣ
ನಮಿಸುವೇ ಹರಿ ಸ್ತುತಿಸುವೇ || ೧೩೪ ||

ಜಿಂಕೆಯು ಸಾಯುವಾಗ ರಾಮನ ಧ್ವನಿಯಲ್ಲಿ
ಹಾ ಸೀತೇ ಲಕ್ಷ್ಮಣಾ ಎಂದು ಹೇಳಿ ಕೂಗಿತು
ಅಣ್ಣ ಕೂಗಿದನೆಂದು ಲಕ್ಷ್ಮಣನು ಹೊರಡುವಾಗ
ಕುಟೀರದ ಅಂಗಳಕ್ಕೆ ಮೂರು ರೇಖೆಯ ಬರೆದ
ನಮಿಸುವೇ ಹರಿ ಸ್ತುತಿಸುವೇ || ೧೩೫ ||

ಹೇಳಿದನು ಅತ್ತಿಗೆಗೆ ನಾನು ಬರುವವರೆಗು
ರೇಖೆಯ ದಾಟಬೇಡ ಎಂದು ಲಕ್ಷ್ಮಣನು ಹೊರಟ
ಸೀತೆ ಒಬ್ಬಳೇ ಇರುವ ಸಮಯ ನೋಡಿ ರಾವಣ
ಸಂನ್ಯಾಸಿ ವೇಷದಲ್ಲಿ ಬಂದು ಭಿಕ್ಷೆಯ ಬೇಡಿದ
ನಮಿಸುವೇ ಹರಿ ಸ್ತುತಿಸುವೇ || ೧೩೬ ||

ಸೀತೆಯು ಭಿಕ್ಷೆಯ ತಂದು ರೇಖೆಯೊಳಗೆ ನಿಂತಳು
ತಿರಸ್ಕರಿಸಿ ರಾವಣ ಶಾಪವ ಕೊಡುವೆನೆಂದ
ಶಾಪಕ್ಕೆ ಹೆದರಿ ಸೀತೆಯು ರೇಖೆ ದಾಟಿ ಬಂದಳು
ರಾವಣನು ಸೀತೆಯನ್ನು ಹೊತ್ತುಕೊಂಡು ಹೋದನು
ನಮಿಸುವೇ ಹರಿ ಸ್ತುತಿಸುವೇ || ೧೩೭ ||

ರಾಮ ಲಕ್ಷ್ಮಣರು ಬಂದು ಕುಟೀರ ನೋಡಿದಾಗ
ಸೀತೆಯನ್ನು ಕಾಣದೆ ಕಳವಳದಿ ಹುಡುಕಿದರು
ಸೀತೆ ಸಿಗದೆ ದುಃಖಿಸುತ ಕಾಡಲ್ಲಿ ಹುಡುಕುವಾಗ
ಸಾವಿನಂಚಿನಲ್ಲಿರುವ ಜಟಾಯು ಕಾಣಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೩೮ ||

ದುಷ್ಟ ರಾವಣನಿಂದ ಸೀತೆಯನ್ನು ಬಿಡಿಸಲು
ಹೋರಾಡಿದೆನೆಂದು ಪ್ರಾಣಬಿಟ್ಟ ಜಟಾಯು
ರಕ್ಷಿಸಲು ಜೀವತೆತ್ತ ಜಟಾಯುಗೆ ಶ್ರೀರಾಮನು
ಉತ್ತರಕ್ರಿಯೆಯ ಮಾಡಿ ಸದ್ಗತಿಯ ನೀಡಿದನು
ನಮಿಸುವೇ ಹರಿ ಸ್ತುತಿಸುವೇ || ೧೩೯ ||

ರಾಕ್ಷಸ ಕಬಂಧನ ಕೊಂದು ರಾಮ ಲಕ್ಷ್ಮಣರು
ಋಷ್ಯಮೂಕ ಪರ್ವತಕ್ಕೆ ಹೋಗಿ ಅಲ್ಲೆ ಉಳಿದರು
ಕಪಿರಾಜ ಸುಗ್ರೀವ ಸ್ನೇಹದಿಂದ ಉಪಚರಿಸಿ
ಅಣ್ಣ ವಾಲಿಯು ಕೊಡುತಿರುವ ಕಷ್ಟವ ಪರಿಹರಿಸೆಂದ
ನಮಿಸುವೇ ಹರಿ ಸ್ತುತಿಸುವೇ || ೧೪೦ ||

ದುಷ್ಟ ವಾಲಿಯ ಕೊಂದು ಸುಗ್ರೀವನಿಗೆ ಪಟ್ಟ ಕಟ್ಟಿ
ಕಷ್ಟವನ್ನು ಪರಿಹರಿಸಿದ ಶಿಷ್ಟರ ರಕ್ಷಕ ರಾಮ
ಸುಗ್ರೀವನು ತನ್ನ ಮಿತ್ರ ಆಂಜನೇಯನಿಂದ
ಸೀತಾಮಾತೆಯು ಇರುವ ಸ್ಥಳವನ್ನು ಹುಡುಕಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೪೧ ||

ಶ್ರೀರಾಮ ಲಕ್ಷ್ಮಣರು ಸುಗ್ರೀವನ ಸೈನ್ಯದೊಡನೆ
ಲಂಕೆಗೆಂದು ಹೊರಟು ಬಂದರು ಸಮುದ್ರದೆಡೆಗೆ
ನಮಿಸಿದ ಸಮುದ್ರರಾಜ ರಾಮನ ಇಚ್ಛೆಯಂತೆ
ಸಮುದ್ರಕ್ಕೆ ಸೇತುವೆಯ ನಿರ್ಮಿಸಿಕೊಳ್ಳಿರಿ ಎಂದ
ನಮಿಸುವೇ ಹರಿ ಸ್ತುತಿಸುವೇ || ೧೪೨ ||

ಸುಗ್ರೀವನ ಆಜ್ಞೆಯಂತೆ ಧರ್ಮಕಾರ್ಯವು ಎಂದು
ಉತ್ಸಾಹದಿ ವಾನರರು ನಿರ್ಮಿಸಿದರು ಸೇತುವೆಯ
ರಾಮ ಲಕ್ಷ್ಮಣ ಸುಗ್ರೀವ ಅಂಗದ ಹನುಮಂತ
ವಾನರ ಸೈನ್ಯ ಸಹಿತ ಮುತ್ತಿದರು ಲಂಕೆಯನ್ನು
ನಮಿಸುವೇ ಹರಿ ಸ್ತುತಿಸುವೇ || ೧೪೩ ||

ವಾನರರು ಲಂಕೆಯಲಿ ಧ್ವಂಸವನ್ನು ಮಾಡುತ್ತ
ರಾಕ್ಷಸರ ಮೇಲೆರಗಿ ಹಿಂಸೆಯ ಮಾಡಿದರು
ಶ್ರೀರಾಮ ಲಕ್ಷ್ಮಣರು ಎದುರಿಸಿ ಯುದ್ಧ ಮಾಡಿ
ರಾವಣನ ಸೈನ್ಯವನ್ನು ನಾಶವ ಮಾಡಿದರು
ನಮಿಸುವೇ ಹರಿ ಸ್ತುತಿಸುವೇ || ೧೪೪ ||

ದುಷ್ಟತನದ ರಾವಣ ಯುದ್ಧ ಭೂಮಿಗೆ ಬಂದ
ರಾಮನಿಗು ರಾವಣಗು ಘೋರಯುದ್ಧ ನಡೆಯಿತು
ಧರ್ಮಪಾಲಕ ರಾಮ ಅಮೋಘ ಬಾಣದಿಂದ
ದುಷ್ಟ ರಾವಣನನ್ನು ಸಂಹಾರ ಮಾಡಿದನು
ನಮಿಸುವೇ ಹರಿ ಸ್ತುತಿಸುವೇ || ೧೪೫ ||

ರಾವಣನ ತಮ್ಮನಾದ ವಿಭೀಷಣಗೆ ಪಟ್ಟಕಟ್ಟಿ
ಸೀತೆಯನೊಡಗೊಂಡು ಅಯೋಧ್ಯೆಗೆ ಹೊರಟನು ರಾಮ
ರಾಮ ಲಕ್ಷ್ಮಣ ಸೀತೆ ಜೊತೆಗೆ ಆಂಜನೇಯ
ಮತ್ತು ಕಪಿವೀರರೆಲ್ಲ ಸಂಭ್ರಮದಿ ಹೊರಟರು
ನಮಿಸುವೇ ಹರಿ ಸ್ತುತಿಸುವೇ || ೧೪೬ ||

ಅಣ್ಣನನ್ನೇ ನಿರೀಕ್ಷಿಸುತ್ತ ನಂದಿ ಗ್ರಾಮದಲ್ಲಿದ್ದ
ಭರತನ ಬಳಿ ಬಂದು ತಬ್ಬಿಕೊಂಡನು ರಾಮ
ರಾಮ ಲಕ್ಷ್ಮಣ ಸೀತೆ ಮತ್ತು ಬಂದವರೆಲ್ಲರ
ಜೊತೆಗೂಡಿ ಅಯೋಧ್ಯೆಗೆ ಹೊರಟು ಬಂದನು ರಾಮ
ನಮಿಸುವೇ ಹರಿ ಸ್ತುತಿಸುವೇ || ೧೪೭ ||

ಅಯೋಧ್ಯಾ ನಗರಿಯಲ್ಲಿ ಸಂತಸದಿ ಎದುರ್ಗೊಂಡು
ಎಲ್ಲರೂ ಆರತಿಯೆತ್ತಿ ಬರಮಾಡಿಕೊಂಡರು
ಪಟ್ಟಾಭಿಷಿಕ್ತನಾಗಿ ರಾಜನಾದ ರಾಮನು
ಧರ್ಮದಿಂದ ಹಲವು ವರ್ಷ ರಾಜ್ಯಭಾರ ಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೧೪೮ ||

ಲೋಕಕಲ್ಯಾಣಕ್ಕಾಗಿ ಯಜ್ಞ ಯಾಗ ಮಾಡಿಸಿದ
ರಾಮರಾಜ್ಯದ ಜನರು ಸರ್ವ ಸುಖದಿ ಬಾಳಿದರು
ಹರಿಯ ಅವತಾರಿಯಾದ ಶ್ರೀರಾಮಚಂದ್ರನು
ಆದರ್ಶ ಪ್ರಭುವಾಗಿ ಸ್ವಸ್ಥಾನವ ಸೇರಿದ
ನಮಿಸುವೇ ಹರಿ ಸ್ತುತಿಸುವೇ || ೧೪೯ ||

ಕೃಷ್ಣಾವತಾರ

ದುಷ್ಟ ರಾಕ್ಷಸರೆಲ್ಲ ಕ್ಷತ್ರಿಯ ಕುಲದಲ್ಲಿ ಜನಿಸಿ
ಲೋಕಕಂಟಕರಾಗಿ ಭಾರವಾದರು ಭುವಿಗೆ
ಪಾಪಿಗಳ ಭಾರವನ್ನು ಹೊರಲಾರದೆ ಭುವಿಯು
ಬ್ರಹ್ಮನ ಬಳಿಗೆ ಬಂದು ತನ್ನ ಕಷ್ಟವ ಹೇಳಿದಳು
ನಮಿಸುವೇ ಹರಿ ಸ್ತುತಿಸುವೇ || ೧೫೦ ||

ಭುವಿಗಾಗಿ ಹೊರಟ ಬ್ರಹ್ಮ ಶಿವನನ್ನು ಕರೆದುಕೊಂಡು
ಇಂದ್ರಾದಿದೇವತೆಗಳ ಜೊತೆಗೆ ವೈಕುಂಠಕ್ಕೆ ಬಂದನು
ವಿಷ್ಣುವಿಗೆ ನಮಸ್ಕರಿಸಿ ಎಲ್ಲರು ಪ್ರಾರ್ಥಿಸಿದಾಗ
ಭೂಭಾರ ಇಳಿಸುವೆ ಎಂದನು ಮಹಾವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೧೫೧ ||

ಮಧುರೆಯಲ್ಲಿ ಯಾದವರ ರಾಜ ಉಗ್ರಸೇನನ
ಮಕ್ಕಳಾಗಿ ಹುಟ್ಟಿರುವ ಕಂಸ ಮತ್ತು ದೇವಕಿ
ಉಗ್ರಸೇನ ಮಗಳನ್ನು ಶೂರನ ಮಗನಾದ
ವಸುದೇವನಿಗೆ ಕೊಟ್ಟು ವಿವಾಹವ ಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೧೫೨ ||

ಪ್ರಿಯ ತಂಗಿ ದೇವಕಿಯ ಪತಿಯ ಗೃಹಕೆ ಕಳುಹಲು
ದಿವ್ಯಾಲಂಕೃತ ರಥಕೆ ಸಾರಥಿಯಾದ ಕಂಸ
ನೂತನ ವಧುವರರು ರಥದ ಮೇಲೆ ಕುಳಿತರು
ಸಂತಸದಿಂದ ಕಂಸ ಮೆರವಣಿಗೆಯಲಿ ಹೊರಟ
ನಮಿಸುವೇ ಹರಿ ಸ್ತುತಿಸುವೇ || ೧೫೩ ||

ಕಂಸನ ಉತ್ಸಾಹವು ಒಮ್ಮೆಗೆ ಕಮರುವಂತೆ
ಆಕಾಶವಾಣಿಯು ಕೇಳಿಸಿತು ಕಂಸನಿಗೆ
ಹೇ ಕಂಸ ದೇವಕಿಯ ಎಂಟನೆ ಮಗು ನಿನ್ನ ಮೃತ್ಯು
ಎಂಬ ವಾಣಿಯ ಕೇಳಿ ಕೋಪಗೊಂಡನು ಕಂಸ
ನಮಿಸುವೇ ಹರಿ ಸ್ತುತಿಸುವೇ || ೧೫೪ ||

ಆ ಕ್ಷಣ ಖಡ್ಗದಿ ಕಂಸ ತಂಗಿಯ ಕೊಲ್ಲಲೆತ್ನಿಸಿದ
ಕಂಸನ ಕೈಯ್ಯ ಹಿಡಿದು ಹೇಳಿದ ವಸುದೇವ
ನಿನ್ನ ತಂಗಿಗೆ ಜನಿಸುವ ಮಕ್ಕಳ ನಿನಗೇ ಕೊಡುವೆ
ಎಂದು ಸಮಾಧಾನಿಸಿ ಪತ್ನಿಯ ಜೀವ ಉಳಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೫೫ ||

ವಸುದೇವ ದೇವಕಿ ತೆರಳಿದರು ತಮ್ಮ ಗೃಹಕೆ
ಸಾಗುತ ಜೀವನವು ಕಾಲಚಕ್ರ ಉರುಳಿತು
ದೇವಕಿ ಗರ್ಭಿಣಿಯಾಗಿ ಗಂಡು ಮಗು ಜನಿಸಿತು
ಮಗುವನ್ನು ವಸುದೇವ ಕಂಸನಿಗೆ ತಂದು ಕೊಟ್ಟ
ನಮಿಸುವೇ ಹರಿ ಸ್ತುತಿಸುವೇ || ೧೫೬ ||

ಬಾವನ ನಿಷ್ಠೆಗೆ ಮೆಚ್ಚಿ ಮಗುವನ್ನು ಕೊಲ್ಲದೆ ಕಂಸ
ಎಂಟನೆ ಮಗು ನನ್ನ ಮೃತ್ಯು ಈ ಮಗು ಬೇಡವೆಂದ
ವಸುದೇವ ಮಗು ತಂದು ದೇವಕಿಗೆ ಒಪ್ಪಿಸಿದ
ಮಗುವಿಗೆ ನಾಮಕರಣ ಮಾಡಿದರು ಸಂತಸದಿ
ನಮಿಸುವೇ ಹರಿ ಸ್ತುತಿಸುವೇ || ೧೫೭ ||

ಕೆಲವು ದಿನದ ಮೇಲೆ ತ್ರಿಲೋಕ ಸಂಚಾರಿ
ನಾರದಮುನಿ ಬಂದು ಹೇಳಿದ ಕಂಸನಿಗೆ
ಎಂಟನೆ ಮಗು ಎಂದು ತಿಳಿದು ನಿರ್ಲಕ್ಷ್ಯ ಬೇಡ
ಯಾವ ಮಗುವಾದರೂ ಮೃತ್ಯುವಾಗಬಹುದೆಂದ
ನಮಿಸುವೇ ಹರಿ ಸ್ತುತಿಸುವೇ || ೧೫೮ ||

ಕಂಸನಿಗೆ ಭಯಪಡಿಸಿ ಹೊರಟ ನಾರದ ಮುನಿಯು
ವಸುದೇವ ದೇವಕಿಯ ಕರೆಸಿದನು ಕಂಸನು
ಸಂಕೋಲೆಯ ತೊಡಿಸಿ ಇಬ್ಬರನ್ನು ಸೆರೆಯಲ್ಲಿಟ್ಟು
ಕೋಪದಿ ಅವರ ಮಗುವ ಕೊಂದನು ಆಕ್ಷಣದಲ್ಲಿ
ನಮಿಸುವೇ ಹರಿ ಸ್ತುತಿಸುವೇ || ೧೫೯ ||

ವರ್ಷಗಳು ಕಳೆದಂತೆ ದೇವಕಿಗೆ ಜನಿಸಿದ
ಆರು ಮಕ್ಕಳನ್ನು ಕೊಂದ ದುಷ್ಟನಾಗಿರುವ ಕಂಸ
ಏಳನೇ ಗರ್ಭ ಬೆಳೆದು ದೇವಕಿಯ ಸಂಕಟವ
ಪರಿಹರಿಸಲು ವಿಷ್ಣು ಮಾಯೆಯ ಕರೆದು ಹೇಳಿದ
ನಮಿಸುವೇ ಹರಿ ಸ್ತುತಿಸುವೇ || ೧೬೦ ||

ದೇವಕಿಯ ಗರ್ಭದಲಿರುವ ಮಗು ಆದಿಶೇಷನನ್ನು
ವಸುದೇವನ ಹಿರಿಯ ಪತ್ನಿ ರೋಹಿಣಿಯ ಗರ್ಭದಲ್ಲಿರಿಸು
ಕೆಲ ದಿನ ಕಳೆದು ನೀನು ನಂದನ ಮಡದಿಯಾದ
ಯಶೋದೆಯ ಗರ್ಭವನ್ನು ಪ್ರವೇಶಿಸು ಎಂದ ವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೧೬೧ ||

ನಾನು ಆ ಸಮಯಕ್ಕೆ ದೇವಕಿ ಗರ್ಭವ ಸೇರುವೆ
ಇಬ್ಬರೂ ಒಂದೇ ವೇಳೆ ಜನಿಸಬೇಕು ಎಂದ
ಲೋಕ ಪಾಲಕ ವಿಷ್ಣು ಹೇಳಿದ ಕಾರ್ಯವನ್ನು
ಕಾಲಕ್ಕೆ ಸರಿಯಾಗಿ ಮಾಡಿದಳು ಮಾಯೆಯು
ನಮಿಸುವೇ ಹರಿ ಸ್ತುತಿಸುವೇ || ೧೬೨ ||

ದೇವಕಿಗೆ ಗರ್ಭ ಇಳಿದು ಕೆಲವು ದಿನಗಳ ಮೇಲೆ
ರೋಹಿಣಿಯ ಗರ್ಭದಿಂದ ಗಂಡು ಮಗು ಜನಿಸಿತು
ಇನ್ನೂ ಕೆಲ ದಿನ ಕಳೆದು ಅವತರಿಸಲು ವಿಷ್ಣು
ದೇವಕಿಯ ಎಂಟನೆಯ ಗರ್ಭವ ಪ್ರವೇಶಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೬೩ ||

ದೇವಕಿಯ ಗರ್ಭದಲ್ಲಿ ನವಮಾಸಗಳು ತುಂಬಿ
ನಡುರಾತ್ರಿ ಜನಿಸಿದ ಶ್ರೀಮನ್ಮಹಾವಿಷ್ಣು
ವಸುದೇವ ದೇವಕಿ ಸಾಕ್ಷಾತ್ ವಿಷ್ಣು ನೋಡಿ
ಕೈಯ್ಯ ಜೋಡಿಸಿ ನಿಂತು ಭಕ್ತಿಯಿಂದ ಸ್ತುತಿಸಿದರು
ನಮಿಸುವೇ ಹರಿ ಸ್ತುತಿಸುವೇ || ೧೬೪ ||

ದೇವ ನಿನಗೆ ಕಂಸನು ಕೇಡನ್ನು ಮಾಡುವನು
ಎಂದ ತಂದೆ ತಾಯಿಗೆ ಉಪಾಯ ಹೇಳಿದ ವಿಷ್ಣು
ಶಿಶುವು ಆಗುವ ನನ್ನನ್ನು ನಂದಗೋಕುಲಕ್ಕೆ ಒಯ್ದು
ಯಶೋದೆಯ ಪಕ್ಕದಲ್ಲಿಟ್ಟು ಆಕೆಯ ಮಗುವ ತನ್ನಿರೆಂದ
ನಮಿಸುವೇ ಹರಿ ಸ್ತುತಿಸುವೇ || ೧೬೫ ||

ಭಯವ ಪಡಬೇಡಿ ನೀವು ಸುಲಲಿತವಾಗುವುದು
ಎಂದ ಶ್ರೀ ಮಹಾವಿಷ್ಣು ಆ ಕ್ಷಣವೆ ಶಿಶುವಾದ
ವಸುದೇವ ಶಿಶುವನ್ನೆತ್ತಿ ಹೊರಟಾಗ ಸೆರೆಮನೆಯ
ಬಾಗಿಲು ತೆರೆದುಕೊಂಡು ದಾರಿಯು ಸುಗಮವಾಯ್ತು
ನಮಿಸುವೇ ಹರಿ ಸ್ತುತಿಸುವೇ || ೧೬೬ ||

ಗೋಕುಲಕೆ ಹೊರಟಾಗ ಜೋರಾಗಿ ಮಳೆ ಸುರಿದು
ಆದಿಶೇಷ ಹೆಡೆ ಬಿಚ್ಚಿ ಕೊಡೆಯಾಗಿಸಿ ಬಂದ
ತುಂಬಿದ ನದಿ ಯಮುನೆ ಇಬ್ಭಾಗವಾಗಿ ಸರಿದು
ದಾರಿ ಮಾಡಿಕೊಟ್ಟಾಗ ಬಂದನು ನಂದನ ಮನೆಗೆ
ನಮಿಸುವೇ ಹರಿ ಸ್ತುತಿಸುವೇ || ೧೬೭ ||

ಗಾಢ ನಿದ್ರೆಯಲ್ಲಿರುವ ಯಶೋದೆ ಮತ್ತು ಮಗುವನ್ನು
ನೋಡಿ ವಸುದೇವನು ಮಗುವ ಬದಲಿಸಿಕೊಂಡ
ಸೆರೆಮನೆಗೆ ಹಿಂದಿರುಗಿ ಮಗು ಕೊಟ್ಟ ದೇವಕಿಗೆ
ಸೆರೆಮನೆಯ ಬಾಗಿಲು ಆ ಕ್ಷಣ ಮುಚ್ಚಿಕೊಂಡವು
ನಮಿಸುವೇ ಹರಿ ಸ್ತುತಿಸುವೇ || ೧೬೮ ||

ಮಗುವಿನ ಅಳು ಕೇಳಿ ಎದ್ದ ಕಾವಲಿನವರು
ಕಂಸನ ಬಳಿ ಹೋಗಿ ಮಗು ಜನಿಸಿತೆಂದರು
ಕಂಸನು ಕತ್ತಿ ಹಿಡಿದು ಬಂದ ಆರ್ಭಟಿಸುತ್ತ
ದೇವಕಿಯು ನಡುಗುತ್ತ ಕೈಮುಗಿದು ಬೇಡಿದಳು
ನಮಿಸುವೇ ಹರಿ ಸ್ತುತಿಸುವೇ || ೧೬೯ ||

ಅಣ್ಣಾ ಈ ಮಗು ಹೆಣ್ಣು ಇವಳು ನಿನಗೆ ಮೃತ್ಯುವಲ್ಲ
ದಯೆತೋರಿ ಪ್ರಾಣ ಉಳಿಸು ಕೊಲ್ಲಬೇಡ ಎಂದಳು
ಕಠೋರ ತನದಿ ಕಂಸ ಮಗುವನ್ನು ಕಸಿದುಕೊಂಡು
ಬಂಡೆಗಪ್ಪಳಿಸುವಾಗ ಮಗುವು ಜಿಗಿಯಿತು ಮೇಲೆ
ನಮಿಸುವೇ ಹರಿ ಸ್ತುತಿಸುವೇ || ೧೭೦ ||

ತಲೆ ಎತ್ತಿದ ಕಂಸನಿಗೆ ಕಂಡ ಮಹಾದೇವಿಯು
ನಿನ್ನ ಮೃತ್ಯು ಬೇರೆಡೆಗೆ ಬೆಳೆಯುತ್ತಿರುವನೆಂದಳು
ಮಹಾದೇವಿಯ ನುಡಿಯು ಕಂಸನ ಕಣ್ಣು ತೆರೆಸಿ
ವಸುದೇವ ದೇವಕಿಯ ಬಿಟ್ಟ ಸೆರೆಮನೆಯಿಂದ
ನಮಿಸುವೇ ಹರಿ ಸ್ತುತಿಸುವೇ || ೧೭೧ ||

ಮಂತ್ರಿಗಳಿಗೆ ಕಂಸನು ಹೇಳಿದ ದೇವಿಯ ನುಡಿಯ
ಆಲಿಸಿದ ಮಂತ್ರಿಗಳು ಹೇಳಿದರು ಕಂಸನಿಗೆ
ನಿಮ್ಮ ಮೃತ್ಯು ಬಾಲಕನ ಹುಡುಕಿ ಕೊಲ್ಲುವೆವೆಂದರು
ಸ್ವಬುದ್ಧಿಯಿಲ್ಲದ ಕಂಸ ಅನುಮತಿಯಿತ್ತನಾಕ್ಷಣ
ನಮಿಸುವೇ ಹರಿ ಸ್ತುತಿಸುವೇ || ೧೭೨ ||

ಮಕ್ಕಳನ್ನು ಕೊಲ್ಲಲೆಂದು ರಾಜ್ಯದ ಊರೂರಿಗೆ
ಪೂತನಿಯೆಂಬ ರಕ್ಕಸಿಯ ಕಳುಹಿದರು ಮಂತ್ರಿಗಳು
ಹೊರಟಳು ಪೂತನಿಯು ಸುಂದರ ರೂಪ ತಾಳಿ
ಸಿಕ್ಕಿದ ಮಕ್ಕಳಿಗೆಲ್ಲಾ ವಿಷದ ಹಾಲನ್ನುಣಿಸುತ್ತ
ನಮಿಸುವೇ ಹರಿ ಸ್ತುತಿಸುವೇ || ೧೭೩ ||

ಯಶೋದೆಯ ಮನೆಯೊಳಗೆ ಬಂದಳು ಪೂತನಿಯು
ಮಲಗಿದ ಮಗುವನ್ನೆತ್ತಿ ವಿಷದ ಹಾಲುಣಿಸಿದಳು
ಹಾಲು ಕುಡಿದ ಮಗುವು ಹೀರತೊಡಗಿತು ರಕ್ತವ
ಅಯ್ಯೋ ನನ್ನ ಬಿಡು ಎಂದು ಕೂಗಿದಳು ಪೂತನಿಯು
ನಮಿಸುವೇ ಹರಿ ಸ್ತುತಿಸುವೇ || ೧೭೪ ||

ರಕ್ತ ಹೋಗಿ ಹೆಣವಾಗಿ ಸುಂದರ ರೂಪ ಅಳಿದು
ಭಯಂಕರಾಕಾರವ ತಳೆಯಿತು ಪೂತನಿ ದೇಹ
ಸತ್ತ ದೇಹದ ಮೇಲೆ ನಗುತಿರುವ ಮಗು ನೋಡಿ
ಯಶೋದೆಯು ಭಯಬಿಟ್ಟು ಮಗುವನ್ನೆತ್ತಿಕೊಂಡಳು
ನಮಿಸುವೇ ಹರಿ ಸ್ತುತಿಸುವೇ || ೧೭೫ ||

ಕಂಟಕ ಕಳೆಯಿತೆಂದು ನಿಟ್ಟುಸಿರಿಟ್ಟ ದಂಪತಿ
ಗೋಪಾಲಕರೆಲ್ಲರು ಸೇರಿ ಹೆಣವನು ಒಯ್ದು ಸುಟ್ಟರು
ದಿನಗಳು ಕಳೆದಂತೆ ಮಗು ಬೆಳೆದು ಹೆಜ್ಜೆಯಿಡುತ
ಮುದ್ದು ಮಾತನ್ನಾಡುತ್ತ ಸೆಳೆಯಿತು ಎಲ್ಲರ ಮನವ
ನಮಿಸುವೇ ಹರಿ ಸ್ತುತಿಸುವೇ || ೧೭೬ ||

ಮಕ್ಕಳ ನಾಮಕರಣಕ್ಕೆ ವಸುದೇವ ಗೌಪ್ಯದಿ
ಪುರೋಹಿತರಾಗಿರುವ ಗರ್ಗರರನ್ನು ಪ್ರಾರ್ಥಿಸಿದ
ಒಪ್ಪಿಕೊಂಡ ಗರ್ಗರರು ನಂದನ ಬಳಿಗೆ ಹೋಗಿ
ವಿಷಯವ ಹೇಳಿದಾಗ ಸಂತಸದಿ ಒಪ್ಪಿದ ನಂದ
ನಮಿಸುವೇ ಹರಿ ಸ್ತುತಿಸುವೇ || ೧೭೭ ||

ನಾಮಕರಣ ಶಾಸ್ತ್ರವ ಗೌಪ್ಯವಾಗಿ ಮಾಡಲು
ಗರ್ಗರರು ನಂದನನನ್ನು ಒಪ್ಪಿಸಿ ಮಾಡಿಸಿದರು
ರೋಹಿಣಿಯ ಮಗನಿಗೆ ಬಲರಾಮನೆಂಬ ನಾಮ
ಯಶೋದೆಯ ಮಗನಿಗೆ ಇಟ್ಟರು ಕೃಷ್ಣನೆಂಬ ನಾಮವ
ನಮಿಸುವೇ ಹರಿ ಸ್ತುತಿಸುವೇ || ೧೭೮ ||

ಗೋಕುಲದಲ್ಲಿ ರೋಹಿಣಿ ಮತ್ತು ಯಶೋದೆ ನಂದ
ಮಕ್ಕಳ ಬಾಲಲೀಲೆಯ ನೋಡಿದರು ಸಂತಸದಿ
ಬಲರಾಮ ಕೃಷ್ಣರು ಅಂಬೆಗಾಲನ್ನಿಕ್ಕುತ್ತ
ಹೊರಗೆ ಬಂದು ಮಣ್ಣಿನಲ್ಲಿ ಆಟವನ್ನಾಡುವರು
ನಮಿಸುವೇ ಹರಿ ಸ್ತುತಿಸುವೇ || ೧೭೯ ||

ಹೀಗೆ ದಿನಗಳು ಕಳೆದು ಎಳೆಯ ಬಾಲಕರಾಗಿ
ಗೋಕುಲದ ಬಾಲಕರೆಲ್ಲ ಜೊತೆಯಲ್ಲಿ ಆಡುವರು
ಮನೆಮನೆಗೆ ಹೋಗಿ ಕೃಷ್ಣ ಬೆಣ್ಣೆಯನ್ನು ಕದ್ದು ತಿಂದು
ಜೊತೆಯಲ್ಲಿರುವ ಬಾಲಕರೆಲ್ಲರಿಗೂ ಕೊಡುವನು ಬೆಣ್ಣೆಯನು
ನಮಿಸುವೇ ಹರಿ ಸ್ತುತಿಸುವೇ || ೧೮೦ ||

ಕೃಷ್ಣನ ತುಂಟಾಟವ ತಾಳದ ಗೋಪಿಕೆಯರು
ಯಶೋದೆ ಬಳಿಗೆ ಬಂದು ಕೃಷ್ಣನನ್ನು ದೂರುವರು
ಬೆಣ್ಣೆಯ ಕದ್ದವನನ್ನೆತ್ತಿಕೊಂಡು ಬಂದ ಗೋಪಿಕೆಯರು
ಯಶೋದೆಯ ಬಳಿ ಕೃಷ್ಣನನ್ನು ಕಂಡು ಬೆರಗಾದರು
ನಮಿಸುವೇ ಹರಿ ಸ್ತುತಿಸುವೇ || ೧೮೧ ||

ಒಂದಿನ ಆಡುವಾಗ ಮಣ್ಣನ್ನು ತಿಂದನು ಕೃಷ್ಣ
ಬಲರಾಮ ಯಶೋದೆಗೆ ಕೂಗಿ ಕರೆದು ಹೇಳಿದ
ಯಶೋದೆಯು ಕೃಷ್ಣನಿಗೆ ಗದರಿ ಬಾಯಿಯ ತೆರೆಸಿದಾಗ
ಕಂಡಳು ಪುಟ್ಟ ಬಾಯಿಯಲ್ಲಿ ಅಖಂಡ ಬ್ರಹ್ಮಾಂಡವ
ನಮಿಸುವೇ ಹರಿ ಸ್ತುತಿಸುವೇ || ೧೮೨ ||

ಅತ್ಯಾಶ್ಚರ್ಯದಿಂದ ನೋಡಿದ ಯಶೋದೆಯು
ಈ ಮಗು ಭಗವಂತ ಎಂದು ಯೋಚಿಸಿದಳು
ಯಶೋದೆಯು ಕಣ್ಣು ಮುಚ್ಚಿ ಧ್ಯಾನಾಸಕ್ತಳಾದಳು
ಶ್ರೀಕೃಷ್ಣ ಮಾಯೆ ಹರಡಿ ಅಮ್ಮಾ ಎಂದೆಚ್ಚರಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೮೩ ||

ನಂದನ ಕುಟುಂಬವು ಊರಿನವರ ಜೊತೆಗೆ
ಗೋಕುಲವನ್ನು ಬಿಟ್ಟು ಬಂದರು ಬೃಂದಾವನಕೆ
ಸೊಂಪಾದ ಕಾಡು ಮತ್ತು ಗೋವರ್ಧನ ಪರ್ವತ
ಹರಿವ ಯಮುನಾ ನದಿಯು ಸುಂದರ ಬೃಂದಾವನ
ನಮಿಸುವೇ ಹರಿ ಸ್ತುತಿಸುವೇ || ೧೮೪ ||

ಬೃಂದಾವನದಲ್ಲಿ ಎಲ್ಲರೂ ಸಂತಸದಿಂದ
ಜೀವನವ ಸಾಗಿಸುತ್ತ ಇದ್ದರು ನೆಮ್ಮದಿಯಿಂದ
ಬಲರಾಮ ಕೃಷ್ಣರು ಗೆಳೆಯರ ಜೊತೆಗೂಡಿ
ಗೋವುಗಳ ಮೇಯಿಸಲು ಕಾಡಿಗೆ ಹೋಗುವರು
ನಮಿಸುವೇ ಹರಿ ಸ್ತುತಿಸುವೇ || ೧೮೫ ||

ಗೋವನ್ನು ಮೇಯಲು ಬಿಟ್ಟು ಹರುಷದಿ ಆಡುವರೆಲ್ಲ
ಕೃಷ್ಣ ಕೊಳಲನ್ನೂದುವನು ಹಾಡುತ್ತ ಕುಣಿಯುವರೆಲ್ಲ
ಕಂಸ ಕಳುಹಿದ ರಕ್ಕಸನು ಕರುವಾಗಿ ಸೇರಿದ
ಕೃಷ್ಣನು ಆ ರಕ್ಕಸನನ್ನು ಮರಕ್ಕೆ ಅಪ್ಪಳಿಸಿ ಕೊಂದ
ನಮಿಸುವೇ ಹರಿ ಸ್ತುತಿಸುವೇ || ೧೮೬ ||

ಒಂದಿನ ಯಮುನೆಯಲ್ಲಿ ಕೃಷ್ಣನು ನೀರು ಕುಡಿಯುವಾಗ
ಬಕಪಕ್ಷಿ ಬಾಯ್ತೆರೆದು ಕೃಷ್ಣನ ನುಂಗಲು ಬಂತು
ಅದರ ಕೊಕ್ಕನ್ನು ಹಿಡಿದು ಸೀಳಿ ಕೊಂದನು ಕೃಷ್ಣ
ಕೃಷ್ಣನನ್ನು ಕೊಲ್ಲಲು ಬಂದು ಸತ್ತನು ಕಂಸನ ಗೆಳೆಯ
ನಮಿಸುವೇ ಹರಿ ಸ್ತುತಿಸುವೇ || ೧೮೭ ||

ಅಘಾಸುರನೆಂಬುವನು ಕೃಷ್ಣನ ಕೊಲ್ಲಲು ಕಾಡಲ್ಲಿ
ದೊಡ್ಡ ಉದ್ದ ಹೆಬ್ಬಾವಾಗಿ ಬಾಯ್ತೆರೆದು ಕಾಯುತಲಿದ್ದ
ಕೃಷ್ಣನ ಗೆಳೆಯರು ನೋಡಿ ಗವಿಯೆಂದು ಹೊಕ್ಕರೆಲ್ಲ
ಕೃಷ್ಣನು ತಡೆಯುವಷ್ಟರಲ್ಲಿ ಎಲ್ಲರನ್ನೂ ನುಂಗಿತು ಹಾವು
ನಮಿಸುವೇ ಹರಿ ಸ್ತುತಿಸುವೇ || ೧೮೮ ||

ಗೆಳೆಯರ ರಕ್ಷಿಸಲು ಕೃಷ್ಣ ಹಾವಿನ ಬಾಯಲ್ಲಿ ಹೊಕ್ಕು
ಗಂಟಲಿನಲ್ಲೇ ನಿಂತು ತ್ರಿವಿಕ್ರಮನಂತೆ ಬೆಳೆದ
ಉಸಿರುಕಟ್ಟಿ ಹೊಟ್ಟೆಯೊಡೆದು ಪ್ರಾಣಬಿಟ್ಟಿತು ಹಾವು
ಎಲ್ಲರೂ ಹೊರಗೆ ಬಂದು ಕೃಷ್ಣನ ಬಳಿ ಸೇರಿದರು
ನಮಿಸುವೇ ಹರಿ ಸ್ತುತಿಸುವೇ || ೧೮೯ ||

ಒಮ್ಮೆ ಗೋಪ ಬಾಲಕರು ಕಾಳಿಂದಿ ಮಡುವಲ್ಲಿ
ನೀರು ಕುಡಿದಾಕ್ಷಣ ಪ್ರಜ್ಞೆತಪ್ಪಿ ಉರುಳಿದರು
ಕೃಪಾದೃಷ್ಟಿಯಿಂದ ಕೃಷ್ಣ ಎಲ್ಲರನ್ನು ಬದುಕಿಸಿದ
ಎಲ್ಲರೂ ಅಚ್ಚರಿಯಿಂದ ಕೃಷ್ಣನ ಕೃಪೆಯು ಎಂದರು
ನಮಿಸುವೇ ಹರಿ ಸ್ತುತಿಸುವೇ || ೧೯೦ ||

ವಿಷವಾದ ಮಡುವನ್ನು ಅಮೃತ ಸರೋವರವ
ಮಾಡಲು ನಿಶ್ಚಯಿಸಿ ಕೃಷ್ಣ ಮಡುವಿನೊಳಗೆ ಧುಮ್ಮಿಕ್ಕಿದ
ಮಲಗಿರುವ ಕಾಳಿಂಗ ರೋಷದಿ ಎದ್ದು ಬಂದು
ಕೃಷ್ಣನ ಸುತ್ತಿಕೊಂಡಾಗ ಅತ್ತರು ಗೋಪ ಬಾಲಕರು
ನಮಿಸುವೇ ಹರಿ ಸ್ತುತಿಸುವೇ || ೧೯೧ ||

ಕೃಷ್ಣ ಮತ್ತು ಬಾಲಕರು ಮನೆಗೆ ಬಂದಿಲ್ಲವೆಂದು
ಊರಿನವರು ಹೆದರುತ್ತ ಹುಡುಕಲು ಹೊರಟರೆಲ್ಲ
ಅಳುವ ಧ್ವನಿ ಬಂದೆಡೆಗೆ ಹೋಗಿ ನೋಡಿದರೆಲ್ಲ
ಹಾವು ಸುತ್ತಿದ ಕೃಷ್ಣನನ್ನು ನೋಡಿ ಅಳುತ ನಿಂತರು
ನಮಿಸುವೇ ಹರಿ ಸ್ತುತಿಸುವೇ || ೧೯೨ ||

ಕೃಷ್ಣನಿಲ್ಲದೆ ಬದುಕಲು ಅಸಾಧ್ಯವೆಂದು ಎಲ್ಲರು
ಸಾಯುವೆವೆಂದು ಹೇಳುತ್ತ ಗೋಳಾಡಿ ಅತ್ತರೆಲ್ಲ
ಕೇಳಿಸಿಕೊಂಡ ಕೃಷ್ಣನು ಹಾವಿನಿಂದ ಬಿಡಿಸಿಕೊಂಡು
ಹಾವಿನ ಬಾಲ ಹಿಡಿದು ಹೆಡೆ ಮೇಲೆ ಹತ್ತಿ ಕುಣಿದ
ನಮಿಸುವೇ ಹರಿ ಸ್ತುತಿಸುವೇ || ೧೯೩ ||

ಶಕ್ತಿ ಕುಂದಿ ಕಾಳಿಂಗ ಕೃಷ್ಣನಿಗೆ ಶರಣಾದ
ಕೃಷ್ಣನ ಆಜ್ಞೆಯಂತೆ ಮಡುವನ್ನು ಬಿಟ್ಟು ಹೋದ
ಬದುಕಿದ ಕೃಷ್ಣನ ಕಂಡು ಆನಂದಭಾಷ್ಪದಿ
ಎಲ್ಲರೂ ಭಕ್ತಿಯಿಂದ ನೆನೆದರು ಶ್ರೀಹರಿಯ
ನಮಿಸುವೇ ಹರಿ ಸ್ತುತಿಸುವೇ || ೧೯೪ ||

ಬೃಂದಾವನದಲ್ಲಿ ಕೃಷ್ಣನ ಕೊಳಲ ಗಾನವ
ಆನಂದದಿ ಸವಿಯುತ್ತ ತಾವೇ ಧನ್ಯರೆನುವರು
ಗೋಪ ಬಾಲೆಯರೆಲ್ಲ ಕೃಷ್ಣನಿಗೆ ಮನಸೋತು
ಕೃಷ್ಣನೆ ಪತಿಯಾಗಲೆಂದು ವ್ರತ ಮಾಡಿ ಬೇಡಿದರು
ನಮಿಸುವೇ ಹರಿ ಸ್ತುತಿಸುವೇ || ೧೯೫ ||

ವ್ರತದ ಕೊನೆಯ ದಿವಸ ಸ್ನಾನವ ಮಾಡುವಾಗ
ನದಿ ದಡದಲ್ಲಿಟ್ಟ ಬಟ್ಟೆಯ ಮಾಯ ಮಾಡಿದ ಕೃಷ್ಣ
ನದಿ ದಡದ ಮರದಲ್ಲಿ ಕೃಷ್ಣನ ನಗುವ ಕೇಳಿ
ನೋಡಿದಾಗ ಮರದಲ್ಲಿ ತಮ್ಮ ಬಟ್ಟೆಯ ಕಂಡರು
ನಮಿಸುವೇ ಹರಿ ಸ್ತುತಿಸುವೇ || ೧೯೬ ||

ಕೃಷ್ಣನಿಗಾಗಿ ವ್ರತವನ್ನು ಮಾಡಿದರೂ ನಾಚುತ್ತ
ನದಿಯಲ್ಲೆ ಕುಳಿತುಕೊಂಡು ತಮ್ಮ ಬಟ್ಟೆ ಬೇಡಿದರು
ಕೃಷ್ಣ ಹೇಳಿದನಾಗ ಕೈಮುಗಿದು ಕೇಳಿರೆಂದು
ಶ್ರೀ ಕೃಷ್ಣನಿಗೆ ಕೈಮುಗಿದು ತಮ್ಮ ಬಟ್ಟೆಯ ಪಡೆದರು
ನಮಿಸುವೇ ಹರಿ ಸ್ತುತಿಸುವೇ || ೧೯೭ ||

ಅವರಿಗೆ ಹೇಳಿದ ಕೃಷ್ಣ ನಿಮ್ಮ ವ್ರತಕೆ ಫಲವಾಗಿ
ಈ ಶರತ್ಕಾಲದಲ್ಲಿ ನಿಮ್ಮಿಚ್ಛೆ ಪೂರ್ಣವೆಂದು
ಮುಕ್ತಿ ನೀಡುವ ದೇವ ಹೇಳಿದ್ದನ್ನು ನೆನೆಯುತ್ತ
ಸಂತಸದಿ ಸಂಭ್ರಮದಿಂದ ಮನೆಗೆ ಹಿಂದಿರುಗಿದರು
ನಮಿಸುವೇ ಹರಿ ಸ್ತುತಿಸುವೇ || ೧೯೮ ||

ನಂದನು ಗೋಪಾಲಕರು ಕೃಷ್ಣನು ಹೇಳಿದಂತೆ
ಇಂದ್ರಯಾಗವನ್ನು ಬಿಟ್ಟು ಗೋವರ್ಧನನ ಪೂಜಿಸಿದರು
ಇಂದ್ರನು ಕೋಪಗೊಂಡು ಮೇಘಗಳ ಕರೆಯಿಸಿ
ಭಯಂಕರ ಮಳೆಯನ್ನು ಸತತವಾಗಿ ಸುರಿಸಿದ
ನಮಿಸುವೇ ಹರಿ ಸ್ತುತಿಸುವೇ || ೧೯೯ ||

ಬೃಂದಾವನದವರೆಲ್ಲ ಮಳೆಗೆ ಹೆದರಿ ನಡುಗುತ್ತ
ಕೃಷ್ಣ ನೀನೇ ಗತಿಯೆಂದು ಬಂದರು ಕೃಷ್ಣನ ಬಳಿಗೆ
ಗೋವರ್ಧನ ಪರ್ವತವನ್ನು ಕೈಯಿಂದ ಎತ್ತಿದ ಕೃಷ್ಣ
ಕೊಡೆಯಂತೆ ಪರ್ವತವ ಹಿಡಿದ ಬೃಂದಾವನಕೆ
ನಮಿಸುವೇ ಹರಿ ಸ್ತುತಿಸುವೇ || ೨೦೦ ||

ಏಳು ದಿನಗಳ ಕಾಲ ಬಿಡದೆ ಸುರಿಯಿತು ಮಳೆಯು
ಕದಲದೆ ನಿಂತು ಕೃಷ್ಣ ಎಲ್ಲರಿಗು ಆಶ್ರಯವಿತ್ತ
ಇಂದ್ರ ತನ್ನ ತಪ್ಪನ್ನರಿತು ಕೃಷ್ಣನ ಬಳಿಗೆ ಬಂದು
ನಮಿಸಿ ಕ್ಷಮೆ ಯಾಚಿಸಿ ಪಡೆದನು ಅನುಗ್ರಹವ
ನಮಿಸುವೇ ಹರಿ ಸ್ತುತಿಸುವೇ || ೨೦೧ ||

ಅರಿಷ್ಠನೆಂಬ ರಕ್ಕಸ ಬಹು ದೊಡ್ಡ ಗೂಳಿಯಾಗಿ
ಆರ್ಭಟಿಸಿ ನುಗ್ಗುತ್ತ ಬಂದ ಬೃಂದಾವನಕೆ
ನೋಡಿದವರೆಲ್ಲ ಹೆದರಿ ಕೃಷ್ಣಾ ಎಂದು ಕೂಗಿದರು
ಕೃಷ್ಣನನ್ನು ಕೊಲ್ಲಲು ಬಂದ ರಕ್ಕಸನ ಕೃಷ್ಣನೆ ಕೊಂದ
ನಮಿಸುವೇ ಹರಿ ಸ್ತುತಿಸುವೇ || ೨೦೨ ||

ಕಂಸನು ಕಳಿಸಿರುವ ಎಲ್ಲಾ ರಾಕ್ಷಸರನ್ನು
ಕೃಷ್ಣನೆ ಕೊಂದನೆಂದು ತಿಳಿಯಿತು ಕಂಸನಿಗೆ
ಕಂಸನು ಅಚ್ಚರಿಗೊಂಡು ಚಿಂತೆಯಲ್ಲಿ ಕುಳಿತಿರಲು
ನಾರದ ಬಂದು ಕೃಷ್ಣನ ರಹಸ್ಯವ ತಿಳಿಸಿ ಹೊರಟ
ನಮಿಸುವೇ ಹರಿ ಸ್ತುತಿಸುವೇ || ೨೦೩ ||

ವಸುದೇವ ದೇವಕಿಯನ್ನು ಕೋಪದಿ ಕರೆಸಿದ ಕಂಸ
ಸಂಕೋಲೆಯ ತೊಡಿಸಿ ಸೆರೆಮನೆಗೆ ಕಳುಹಿಸಿದ
ಕೃಷ್ಣನ ಕೊಲ್ಲಲು ಕಂಸ ಕೇಶಿಯೆಂಬ ರಕ್ಕಸನನ್ನು
ಕಳಿಸಿದಾಗ ಕೇಶಿಯನ್ನೇ ಸಂಹರಿಸಿದನು ಕೃಷ್ಣ
ನಮಿಸುವೇ ಹರಿ ಸ್ತುತಿಸುವೇ || ೨೦೪ ||

ಬಲರಾಮ ಕೃಷ್ಣರನ್ನು ಕೊಲ್ಲಲು ನಿಶ್ಚಯಿಸಿ ಕಂಸ
ಧನುರ್‍ಯಾಗವೆಂಬುವ ಮಹೋತ್ಸವ ಇಟ್ಟುಕೊಂಡ
ಅಕ್ರೂರನನ್ನು ಕರೆದು ಬಲರಾಮ ಕೃಷ್ಣರನ್ನು
ಕರೆದುಕೊಂಡು ಬರಲು ಹೇಳಿ ಕಳಿಸಿದ ಕಂಸ
ನಮಿಸುವೇ ಹರಿ ಸ್ತುತಿಸುವೇ || ೨೦೫ ||

ಅಕ್ರೂರ ಕೃಷ್ಣನ ಬಳಿಗೆ ಬಂದು ನಮಸ್ಕರಿಸಿದ
ಕ್ಷೇಮ ವಿಚಾರಿಸಿ ಕೃಷ್ಣ ಕೂರಿಸಿ ಉಪಚರಿಸಿದ
ಕಂಸನ ಆಹ್ವಾನವ ಹೇಳಿದನು ಅಕ್ರೂರ
ಕಂಸನ ಕುತಂತ್ರವ ಬೇಸರದಿ ತಿಳಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೦೬ ||

ನಸುನಗುತ ಶ್ರೀಕೃಷ್ಣ ಹೇಳಿದ ಅಕ್ರೂರನಿಗೆ
ನಾನು ಮತ್ತು ಬಲರಾಮ ಮಧುರೆಗೆ ಬರುವೆವೆಂದು
ಅಕ್ರೂರನ ಜೊತೆಯಲ್ಲಿ ಬಲರಾಮ ಕೃಷ್ಣರು
ಬಳಗವನ್ನೊಡಗೊಂಡು ಮಧುರೆಗೆ ಹೊರಟರು
ನಮಿಸುವೇ ಹರಿ ಸ್ತುತಿಸುವೇ || ೨೦೭ ||

ಬಲರಾಮ ಕೃಷ್ಣರು ಮಧುರೆಗೆ ಬಂದ ದಿನವೆ
ಹೆದೆಯೇರಿಸುವೆನೆಂದು ಧನುಸ್ಸನ್ನು ಮುರಿದ ಕೃಷ್ಣ
ಕಂಸನ ಆಹ್ವಾನದ ಕುಸ್ತಿಯ ಕಣಕೆ ಬಂದು
ಚಾಣೂರ ಮುಷ್ಠಿಕರ ಎದುರಿನಲ್ಲಿ ನಿಂತರು
ನಮಿಸುವೇ ಹರಿ ಸ್ತುತಿಸುವೇ || ೨೦೮ ||

ಕೃಷ್ಣನು ಚಾಣೂರನ ಬಲರಾಮ ಮುಷ್ಟಿಕನ
ಎದುರಿಸಿ ಕುಸ್ತಿ ಮಾಡಿ ಕೊಂದರು ಈರ್ವರನ್ನು
ಕೆಲವು ಜಟ್ಟಿಗಳು ಬಂದು ಕೃಷ್ಣನಿಂದ ಸತ್ತರೆಲ್ಲ
ಉಳಿದಿರುವ ಜಟ್ಟಿಗಳು ಪ್ರಾಣ ಭಯದಿ ಓಡಿದರು
ನಮಿಸುವೇ ಹರಿ ಸ್ತುತಿಸುವೇ || ೨೦೯ ||

ಕಂಸ ನೋಡಿ ಕೋಪದಿ ಗಟ್ಟಿಯಾಗಿ ಹೇಳಿದ
ವಸುದೇವ ದೇವಕಿಯ ಈಗಲೆ ಕೊಲ್ಲಿರಿ ಎಂದು
ಬೃಂದಾವನದವರನ್ನು ಮತ್ತು ಉಗ್ರಸೇನನನ್ನು
ಬಿಡದೆ ಕೊಲ್ಲಿರಿ ಎಂದು ಅಪ್ಪಣೆಯನ್ನು ಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೨೧೦ ||

ಕಂಸನ ಅಪ್ಪಣೆಯನ್ನು ಕೇಳಿಸಿಕೊಂಡ ಕೃಷ್ಣನು
ಒಂದೆ ನೆಗೆತಕ್ಕೆ ಹಾರಿ ಕಂಸನ ಮೇಲೆರಗಿದ
ಕಂಸನು ಖಡ್ಗವನ್ನೆತ್ತಿ ಕೃಷ್ಣನ ಕೊಲ್ಲಲೆತ್ನಿಸಿದ
ತಪ್ಪಿಸಿಕೊಂಡ ಕೃಷ್ಣನು ಕಂಸನನ್ನು ಹೊಡೆದು ಕೊಂದ
ನಮಿಸುವೇ ಹರಿ ಸ್ತುತಿಸುವೇ || ೨೧೧ ||

ಕಂಸನ ಬಳಗವನು ಕೃಷ್ಣನು ಸಂತೈಸಿದನು
ಅಂತ್ಯಸಂಸ್ಕಾರವ ಕ್ರಮವಾಗಿ ಮಾಡಿಸಿದ
ಸೆರೆಮನೆಯೊಳಗಿರುವ ಮಾತಾಪಿತರ ಬಿಡಿಸಿ
ಸಂಕೋಲೆಯ ಕಿತ್ತೆಸೆದು ಪಾದಕ್ಕೆ ನಮಸ್ಕರಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೧೨ ||

ನಿಮ್ಮ ಕಷ್ಟಕ್ಕೆ ನಾನೇ ಕಾರಣನಾದೆನೆಂದು
ತಂದೆ ತಾಯಿಯರಲ್ಲಿ ಕ್ಷಮೆಯನ್ನು ಯಾಚಿಸಿದ
ವಸುದೇವ ದೇವಕಿ ಮಕ್ಕಳ ಕಂಡು ಹರುಷದಿ
ಬಾಚಿ ಎದೆಗಪ್ಪಿಕೊಂಡು ಕಂಬನಿಯ ಸುರಿಸಿದರು
ನಮಿಸುವೇ ಹರಿ ಸ್ತುತಿಸುವೇ || ೨೧೩ ||

ತಂದೆ ತಾಯಿಯರಿಗೆ ಸಂತಸ ಪಡಿಸಿ ಕೃಷ್ಣ
ಉಗ್ರಸೇನನನ್ನು ಪುನಃ ರಾಜನನ್ನಾಗಿ ಮಾಡಿದ
ಸಾಕಿದ ತಾಯ್ತಂದೆಗೆ ಕೃತಜ್ಞತೆ ಸಲ್ಲಿಸಿ ನಮಿಸಿ
ಬಳಗಕ್ಕೆ ಉಡುಗೊರೆ ಕೊಟ್ಟು ಗೋಕುಲಕ್ಕೆ ಕಳುಹಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೧೪ ||

ಪುರೋಹಿತ ಗರ್ಗರರು ಇಟ್ಟ ಶುಭ ಮುಹೂರ್ತದಲ್ಲಿ
ವಸುದೇವ ಮಕ್ಕಳಿಗೆ ಉಪನಯನ ಮಾಡಿದ
ಬ್ರಹ್ಮಚಾರಿಗಳಾದ ಅವರನು ವಿದ್ಯಾಭ್ಯಾಸಕ್ಕೆ
ಸಂದೀಪನರೆಂಬ ಗುರು ಬಳಿಗೆ ಕಳಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೧೫ ||

ಬಲರಾಮ ಕೃಷ್ಣರು ಸಕಲ ವಿದ್ಯೆಗಳಲ್ಲೂ
ಪಾರಂಗತರಾಗಿ ಮಧುರೆಗೆ ಬಂದರು
ಕಂಸನ ಪತ್ನಿಯರ ತಂದೆ ಜರಾಸಂಧನು
ಕೃಷ್ಣನನ್ನು ಕೊಲ್ಲಲೆಂದು ಸೈನ್ಯ ಸಮೇತ ಬಂದ
ನಮಿಸುವೇ ಹರಿ ಸ್ತುತಿಸುವೇ || ೨೧೬ ||

ಕೃಷ್ಟಾ ನೀನೇ ಗತಿಯೆಂದು ಕೂಗಿದ ಯಾದವರಿಗೆ
ಧೈರ್ಯವ ನೀಡಿದ ಕೃಷ್ಣ ವಿಶ್ವಕರ್ಮನ ಕರೆಸಿದ
ಯಾದವರ ರಕ್ಷಣೆಗೆ ಸಮುದ್ರದ ದ್ವೀಪದಲ್ಲಿ
ಸುಸಜ್ಜಿತವಾಗಿರುವಂತ ದ್ವಾರಕೆಯನ್ನು ನಿರ್ಮಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೧೭ ||

ಯೋಗಶಕ್ತಿಯಿಂದ ಕೃಷ್ಣ ಮಧುರೆಯಿಂದ ಯಾದವರನ್ನು
ದ್ವಾರಕಾಪುರದೊಳಗೆ ಕರೆದೊಯ್ದು ಇರಿಸಿದ
ಭೂದೇವಿ ಇಚ್ಛೆಯಂತೆ ಭೂ ಭಾರವ ಇಳಿಸಲು
ಅವತಾರವೆಂದು ಹೊರಟ ಯುದ್ಧಕ್ಕೆ ಅಣ್ಣನೊಡಗೊಂಡು
ನಮಿಸುವೇ ಹರಿ ಸ್ತುತಿಸುವೇ || ೨೧೮ ||

ಬಲರಾಮ ಕೃಷ್ಣರು ಜರಾಸಂಧನ ಸೈನ್ಯವ
ಎದುರಿಸಿ ತರಿದಾಗ ಸೋತನು ಜರಾಸಂಧ
ಜರಾಸಂಧನನ್ನು ಕೃಷ್ಣ ಕೊಲ್ಲದೆ ಬಿಟ್ಟು ಕಳಿಸಿದ
ಕೆಲ ಕಾಲ ಕಳೆದಾಗ ಮತ್ತೆ ದಂಡೆತ್ತಿ ಬಂದ
ನಮಿಸುವೇ ಹರಿ ಸ್ತುತಿಸುವೇ || ೨೧೯ ||

ಜರಾಸಂಧನನ್ನು ಬಿಟ್ಟು ಬಂದ ಸೈನ್ಯವನ್ನೆಲ್ಲ
ಬಲರಾಮನೊಡಗೂಡಿ ನಾಶ ಮಾಡಿದ ಕೃಷ್ಣ
ಮತ್ತೆ ಮತ್ತೆ ದಂಡೆತ್ತಿ ಬಂದ ಜರಾಸಂಧನ
ಸೈನ್ಯ ನಾಶ ಮಾಡಿದ ಕೃಷ್ಣಾವತಾರಿ ವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೨೨೦ ||

ವಿದರ್ಭ ದೇಶದ ರಾಜ ಭೀಷ್ಮಕನ ಪುತ್ರಿ ರುಕ್ಮಿಣಿ
ಕೃಷ್ಣನೇ ಪತಿಯೆಂದು ವರಿಸಿದ್ದಳು ಮನದಲ್ಲಿ
ಅಣ್ಣ ರುಕ್ಮಿ ರುಕ್ಮಿಣಿಯನ್ನು ಶಿಶುಪಾಲನಿಗೆ ಕೊಟ್ಟು
ಲಗ್ನ ಮಾಡಲು ನಿಶ್ಚಯಿಸಿ ಮುಹೂರ್ತವನ್ನಿಡಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೨೧ ||

ಚಿಂತೆಗೊಂಡು ರುಕ್ಮಿಣಿ ಕೃಷ್ಣನನ್ನೇ ನೆನೆಯುತ್ತ
ಪ್ರೇಮಪತ್ರವ ಬರೆದು ಕಳುಹಿದಳು ಕೃಷ್ಣನಿಗೆ
ಮದುವೆ ದಿನ ರುಕ್ಮಿಣಿಯು ಮಂದಿರಕ್ಕೆ ಬಂದಾಗ
ಕೃಷ್ಣನು ರಥದಲ್ಲಿ ಬಂದು ರುಕ್ಮಿಣಿಯನ್ನೆತ್ತಿ ಕೊಂಡೊಯ್ದ
ನಮಿಸುವೇ ಹರಿ ಸ್ತುತಿಸುವೇ || ೨೨೨ ||

ರುಕ್ಮಿಯು ಕೃಷ್ಣನ ಬೆನ್ನಟ್ಟಿ ಗುರಿಯಿಟ್ಟು ಬಾಣ ಬಿಟ್ಟ
ಬಾಣವ ಕತ್ತರಿಸಿ ಕೃಷ್ಣ ರುಕ್ಮಿಯ ಕಟ್ಟಿಹಾಕಿದ
ರುಕ್ಮಿಯ ಸೈನ್ಯ ಬಡಿದೋಡಿಸಿ ರುಕ್ಮಿಯನ್ನು ಬಿಟ್ಟು ಕಳಿಸಿ
ದ್ವಾರಕಾಪುರ ಸೇರಿ ರುಕ್ಮಿಣಿಯ ಲಗ್ನವಾದ
ನಮಿಸುವೇ ಹರಿ ಸ್ತುತಿಸುವೇ || ೨೨೩ ||

ಸತ್ರಾರ್ಜಿತನು ಸೂರ್ಯನನ್ನು ಕುರಿತು ತಪಸ್ಸು ಮಾಡಿ
ಶ್ಯಮಂತಕ ಮಣಿಯನ್ನು ಪಡೆದು ಸುಖವಾಗಿದ್ದ
ಸತ್ರಾರ್ಜಿತಗೆ ಕೃಷ್ಣನು ಸಮೃದ್ಧಿಯ ಈ ಮಣಿಯ
ರಾಜ ಉಗ್ರಸೇನನಿಗೆ ಕೊಡುವುದು ಸೂಕ್ತವೆಂದ
ನಮಿಸುವೇ ಹರಿ ಸ್ತುತಿಸುವೇ || ೨೨೪ ||

ಒಪ್ಪದ ಸತ್ರಾರ್ಜಿತನು ತನ್ನ ಬಳಿಯೆ ಇಟ್ಟುಕೊಂಡ
ತಮ್ಮ ಪ್ರಸೇನ ಮಣಿಯನ್ನು ಧರಿಸಿ ಬೇಟೆಗೆ ಹೊರಟ
ಸಿಂಹ ಅವನನ್ನು ಕೊಂದು ಮಣಿಯನ್ನು ಕಚ್ಚಿಕೊಂಡು
ಹೊರಟಾಗ ಸಿಕ್ಕಿದ ಕರಡಿ ಕೊಂದಿತು ಸಿಂಹವನ್ನು
ನಮಿಸುವೇ ಹರಿ ಸ್ತುತಿಸುವೇ || ೨೨೫ ||

ಸಿಂಹವನ್ನು ಕೊಂದಿರುವ ಕರಡಿ ಜಾಂಬವಂತ
ಶ್ಯಮಂತಕ ಮಣಿಯನ್ನು ತೆಗೆದುಕೊಂಡು ಹೊರಟ
ತನ್ನ ಗುಹೆಯೊಳಗೆ ಹೋಗಿ ಶ್ಯಮಂತಕ ಮಣಿಯನ್ನು
ಮಗುವಿನ ತೊಟ್ಟಿಲ ಮೇಲೆ ಕಟ್ಟಿ ಶೃಂಗರಿಸಿದನು
ನಮಿಸುವೇ ಹರಿ ಸ್ತುತಿಸುವೇ || ೨೨೬ ||

ಬೇಟೆಗೆ ಹೋಗಿರುವ ಪ್ರಸೇನನು ಬಂದಿಲ್ಲವೆಂದು
ಹುಡುಕಿಸಿದರೂ ಸಿಗದೆ ಸತ್ರಾರ್ಜಿತ ಚಿಂತಿಸಿದ
ಶ್ಯಮಂತಕ ಮಣಿಗಾಗಿ ಕೃಷ್ಣನೇ ಪ್ರಸೇನನನ್ನು
ಕೊಂದನೆಂದು ಹೇಳಿದ ಗೆಳೆಯರಿಗೆ ಸತ್ರಾರ್ಜಿತ
ನಮಿಸುವೇ ಹರಿ ಸ್ತುತಿಸುವೇ || ೨೨೭ ||

ಕೃಷ್ಣನು ತನಗೆ ಬಂದ ಅಪವಾದಕ್ಕೆ ವ್ಯಥೆಪಟ್ಟು
ಪತ್ತೆಯಿಲ್ಲದ ಪ್ರಸೇನನನ್ನು ಹುಡುಕಲು ಕಾಡಿಗೆ ಹೋದ
ಪ್ರಸೇನನ ಶವವನ್ನು ನೋಡಿ ಸಿಂಹದ ಹೆಜ್ಜೆಯ ಕಂಡ
ಹೆಜ್ಜೆಯಗುರುತು ಹಿಂಬಾಲಿಸಿ ಗುಹೆಯ ಬಳಿಗೆ ಬಂದ ಕೃಷ್ಣ
ನಮಿಸುವೇ ಹರಿ ಸ್ತುತಿಸುವೇ || ೨೨೮ ||

ಗುಹೆಯೊಳಗೆ ಕಂಡ ಕೃಷ್ಣ ಶ್ಯಮಂತಕ ಮಣಿಯನ್ನು
ಜಾಂಬವಂತ ಕೃಷ್ಣನ ಕಂಡು ಯುದ್ಧವ ಮಾಡಿದ
ಸೋತ ಜಾಂಬವಂತನು ನೀನೇ ರಾಮನೆಂದು
ಮಣಿಯ ಜೊತೆಗೆ ಮಗಳನ್ನು ಒಪ್ಪಿಸಿ ನಮಸ್ಕರಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೨೯ ||

ಸತ್ರಾರ್ಜಿತಗೆ ಮಣಿ ಕೊಟ್ಟು ವಿಷಯ ತಿಳಿಸಿದ ಕೃಷ್ಣ
ಮರುಗುತ ಸತ್ರಾರ್ಜಿತನು ಬೇಡಿದನು ಕೃಷ್ಣನಲ್ಲಿ
ಪುತ್ರಿ ಸತ್ಯಭಾಮೆಯನ್ನು ಕೈಹಿಡಿದು ಉದ್ಧರಿಸೆಂದ
ಒಪ್ಪಿಕೊಂಡ ಕೃಷ್ಣನಿಗೆ ಪುತ್ರಿಯನ್ನು ಧಾರೆಯೆರೆದ
ನಮಿಸುವೇ ಹರಿ ಸ್ತುತಿಸುವೇ || ೨೩೦ ||

ರಕ್ಕಸ ಮುರಾಸುರನು ಸ್ವರ್ಗವನ್ನು ಲೂಟಿ ಮಾಡಿ
ಭೂಮಿಯಲ್ಲಿರುವ ರಾಜರ ಕುವರಿಯರನ್ನು ಹೊತ್ತೊಯ್ದ
ದೇವಲೋಕದ ಇಂದ್ರ ಹಿಂಸೆ ತಾಳಲಾರದೆ
ಕೃಷ್ಣನ ಬಳಿಗೆ ಬಂದು ರಕ್ಷಿಸೆಂದು ಮೊರೆಯಿಟ್ಟ
ನಮಿಸುವೇ ಹರಿ ಸ್ತುತಿಸುವೇ || ೨೩೧ ||

ಮುರಾಸುರನ ರಾಜ್ಯಕ್ಕೆ ಹೊರಟುಬಂದ ಕೃಷ್ಣನು
ಶಂಖವ ಊದಿದಾಗ ಎದುರು ಬಂದ ರಾಕ್ಷಸ
ಕೃಷ್ಣನ ನುಂಗುವೆನೆಂದು ಬಾಯ್ತೆರೆದ ಮುರಾಸುರ
ಕೃಷ್ಣನು ಬಾಣವ ಬಿಟ್ಟು ಕೊಂದನು ದುಷ್ಟ ರಕ್ಕಸನ
ನಮಿಸುವೇ ಹರಿ ಸ್ತುತಿಸುವೇ || ೨೩೨ ||

ಮುರಾಸುರನ ಮಕ್ಕಳು ತಂದೆಯ ಕೊಂದ ಕೃಷ್ಣನ
ಕೊಲ್ಲಲು ದಂಡೆತ್ತಿ ಬಂದು ಸೈನ್ಯ ಸಮೇತ ಸತ್ತರು
ದುಷ್ಟ ನರಕಾಸುರನು ದೊಡ್ಡ ಸೈನ್ಯದೊಡನೆ ಬಂದ
ಅವನನ್ನು ಕೊಂದ ಕೃಷ್ಣ ಸೈನ್ಯವ ನಾಶಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೨೩೩ ||

ಸೆರೆಮನೆಯೊಳಗಿರುವ ಹದಿನಾರು ಸಾವಿರ
ರಾಜ ಕುವರಿಯರನ್ನು ಬಿಡಿಸಿದನು ಶ್ರೀಕೃಷ್ಣ
ರಾಜಕುವರಿಯರೆಲ್ಲ ನೀನೇ ಪತಿಯಾಗೆಂದು
ಬೇಡಿದರು ಕೃಷ್ಣನನ್ನು ಕರುಣೆಯಿಂದ ಒಪ್ಪಿದ ಕೃಷ್ಣ
ನಮಿಸುವೇ ಹರಿ ಸ್ತುತಿಸುವೇ || ೨೩೪ ||

ರಾಜ ಕುವರಿಯರನ್ನು ದ್ವಾರಕೆಗೆ ಕರೆದೊಯ್ದು
ಹದಿನಾರು ಸಾವಿರ ಕೃಷ್ಣನಾಗಿ ಲಗ್ನವಾದ
ಬೇರೆ ಬೇರೆ ಮನೆ ಕಟ್ಟಿಸಿ ಎಲ್ಲರ ಜೊತೆಯಲ್ಲೂ ಇದ್ದ
ಪತಿಯ ಸೇವೆ ಮಾಡುತ್ತ ಧನ್ಯರಾದ ಸತಿಯರು
ನಮಿಸುವೇ ಹರಿ ಸ್ತುತಿಸುವೇ || ೨೩೫ ||

ಕೃಷ್ಣನನ್ನು ಕಾಣಲೆಂದು ಬಂದ ರಾಜದೂತನು
ಭಕ್ತಿಯಿಂದ ನಮಸ್ಕರಿಸಿ ಹೇಳಿದನು ಕೃಷ್ಣನಿಗೆ
ದೇವಾ ನಿನ್ನ ಭಕ್ತರಾದ ಸಾವಿರಾರು ರಾಜರನ್ನು
ದುಷ್ಟ ಜರಾಸಂಧನು ಸೆರೆಯಲ್ಲಿಟ್ಟಿರುವನು ಎಂದ
ನಮಿಸುವೇ ಹರಿ ಸ್ತುತಿಸುವೇ || ೨೩೬ ||

ನಿನ್ನನ್ನೇ ನಂಬಿರುವರು ನೀನೇ ಕಾಪಾಡೆಂದ
ರಾಜದೂತನಿಗೆ ಕೃಷ್ಣ ರಕ್ಷಣೆ ಮಾಡುವೆನೆಂದ
ಆಗ ನಾರದ ಬಂದು ಹೇಳಿದನು ಕೃಷ್ಣನಿಗೆ
ಪಾಂಡವರು ಮಾಡುವ ಯಾಗದ ಆಹ್ವಾನವ
ನಮಿಸುವೇ ಹರಿ ಸ್ತುತಿಸುವೇ || ೨೩೭ ||

ಕೃಷ್ಣಾ ನೀನು ಆಗಮಿಸಿ ರಾಜಸೂಯ ಯಾಗವ
ಸಾಂಗವಾಗಿ ನಡೆಸಿ ಕೃತಾರ್ಥರನ್ನಾಗಿಸೆಂದ
ಅಭಯವಿತ್ತು ಶ್ರೀಕೃಷ್ಣ ಹೊರಟ ಪರಿವಾರ ಸಹಿತ
ರಾಜಸೂಯಯಾಗಕ್ಕೆ ಇಂದ್ರಪ್ರಸ್ಥಪುರಕೆ
ನಮಿಸುವೇ ಹರಿ ಸ್ತುತಿಸುವೇ || ೨೩೮ ||

ಕೃಷ್ಣನ ಪರಿವಾರವ ಸಂತಸದಿ ಪಾಂಡವರು
ವೈಭವದಿ ಎದುರ್ಗೊಂಡು ಸತ್ಕಾರವ ಮಾಡಿದರು
ಯಾಗವನ್ನು ನಿರ್ವಿಘ್ನದಿ ನಡೆಸಲು ಸಹಾಯವ
ಕೇಳಿದನು ಕೃಷ್ಣನಿಗೆ ವಿನಯದಿ ಧರ್ಮರಾಯ
ನಮಿಸುವೇ ಹರಿ ಸ್ತುತಿಸುವೇ || ೨೩೯ ||

ಯಾಗವು ಸಾಂಗವಾಗಿ ನಡೆಯುವುದೆನುತ ಕೃಷ್ಣ
ದಿಗ್ವಿಜಯಕ್ಕಾಗಿ ಇಂದೇ ಸೇನೆಯ ಕಳುಹಿಸೆಂದ
ಶ್ರೀಕೃಷ್ಣನು ಹೇಳಿದಂತೆ ಕಳುಹಿಸಿದ ಸೈನ್ಯವನ್ನು
ನಾಲ್ವರು ತಮ್ಮಂದಿರನು ದಿಕ್ಕಿಗೊಬ್ಬರ ನೇಮಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೪೦ ||

ರಾಜರನ್ನು ಸೋಲಿಸಿ ಗೆದ್ದು ಬಂದ ತಮ್ಮಂದಿರು
ಜರಾಸಂಧನೊಬ್ಬನು ಉಳಿದಿರುವನೆಂದರು
ಆಗ ಹೇಳಿದ ಕೃಷ್ಣ ಯೋಚಿಸದಿರಿ ಎಂದು
ದುಷ್ಟ ಜರಾಸಂಧನನ್ನು ನಾನೇ ಕೊಲ್ಲಿಸುವೆನೆಂದ
ನಮಿಸುವೇ ಹರಿ ಸ್ತುತಿಸುವೇ || ೨೪೧ ||

ಭೀಮಾರ್ಜುನರೊಡನೆ ಬ್ರಾಹ್ಮಣ ವೇಷಧರಿಸಿ
ಹೊರಟು ಬಂದನು ಕೃಷ್ಣ ಜರಾಸಂಧನ ಬಳಿಗೆ
ಬಂದ ಬ್ರಾಹ್ಮಣರಿಗೆ ದಾನವ ನೀಡುವಾಗ
ಕ್ಷತ್ರಿಯರು ಎನಿಸುವವರ ಕಂಡನು ಜರಾಸಂಧ
ನಮಿಸುವೇ ಹರಿ ಸ್ತುತಿಸುವೇ || ೨೪೨ ||

ಜರಾಸಂಧನನ್ನು ಹರಸಿ ಮಂಗಳವಾಗಲೆಂದರು
ಬ್ರಾಹ್ಮಣ ವೇಷಧಾರಿ ಕೃಷ್ಣ ಭೀಮಾರ್ಜುನರು
ಕೈಮುಗಿದು ಜರಾಸಂಧ ದಾನ ನೀಡುವೆನೆಂದ
ನಾವು ಕ್ಷತ್ರಿಯರೆಂದು ಯುದ್ಧ ಭಿಕ್ಷೆ ಬೇಡಿದರು
ನಮಿಸುವೇ ಹರಿ ಸ್ತುತಿಸುವೇ || ೨೪೩ ||

ಜರಾಸಂಧನು ತನಗೆ ಸಮನಾದ ಬಲಶಾಲಿ
ಭೀಮನೊಬ್ಬನೊಡನೆ ಯುದ್ಧ ಮಾಡುವೆನೆಂದ
ಭೀಮನಿಗೆ ಗದೆ ಕೊಟ್ಟು ತಾನೂ ಗದೆ ಹಿಡಿದು
ಹೊರಗೆ ಮೈದಾನದಲ್ಲಿ ಯುದ್ಧ ಪ್ರಾರಂಭಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೪೪ ||

ಬಲಶಾಲಿಗಳಾದ ಭೀಮ ಜರಾಸಂಧರು
ಜಯದ ಉತ್ಸಾಹದಿಂದ ಘೋರ ಯುದ್ಧ ಮಾಡಿದರು
ಮುಗಿಯದ ಯುದ್ಧ ನೋಡಿ ಮುಗಿಸಲು ಯೋಚಿಸಿ ಕೃಷ್ಣ
ಭೀಮನಿಗೆ ತೋರಿಸುತ ರೆಂಬೆಯೊಂದ ಸೀಳಿದ
ನಮಿಸುವೇ ಹರಿ ಸ್ತುತಿಸುವೇ || ೨೪೫ ||

ಕೃಷ್ಣನ ಸೂಚನೆಯನ್ನು ತಿಳಿದುಕೊಂಡ ಭೀಮನು
ಜರಾಸಂಧನ ಹಿಡಿದು ನೆಲಕ್ಕೆ ಬೀಳಿಸಿಕೊಂಡ
ಒಂದು ಕಾಲನ್ನು ಮೆಟ್ಟಿ ಇನ್ನೊಂದು ಕಾಲು ಹಿಡಿದು
ಬಲವಾಗಿ ಎಳೆದು ಸೀಳಿ ಕೊಂದನು ಜರಾಸಂಧನನ್ನು
ನಮಿಸುವೇ ಹರಿ ಸ್ತುತಿಸುವೇ || ೨೪೬ ||

ಜರಾಸಂಧನ ಮಗನು ಶರಣಾಗತನಾದ
ಸೆರೆಯಲ್ಲಿದ್ದ ರಾಜರನ್ನು ಬಿಡಿಸಿದನು ಶ್ರೀಕೃಷ್ಣ
ರಾಜರೆಲ್ಲ ಕೃಷ್ಣನಿಗೆ ಭಕ್ತಿಯಿಂದ ನಮಸ್ಕರಿಸಿ
ನಿರತ ನಿನ್ನ ಧ್ಯಾನದಲ್ಲಿ ಇರಲು ಕರುಣಿಸೆಂದರು
ನಮಿಸುವೇ ಹರಿ ಸ್ತುತಿಸುವೇ || ೨೪೭ ||

ಕೃಷ್ಣನೆಂದ ರಾಜರಿಗೆ ಯಜ್ಞಯಾಗ ಮಾಡುತ್ತ
ಧರ್ಮದಿಂದ ಪ್ರಜೆಗಳನ್ನು ರಕ್ಷಿಸಿರೆಂದು ಬೀಳ್ಕೊಟ್ಟ
ಕೃಷ್ಣ ಭೀಮಾರ್ಜುನರು ಬಂದರು ಇಂದ್ರಪ್ರಸ್ಥಕ್ಕೆ
ಧರ್ಮರಾಯನಿಗೆ ಕೃಷ್ಣ ಯಾಗವನ್ನು ಮಾಡೆಂದ
ನಮಿಸುವೇ ಹರಿ ಸ್ತುತಿಸುವೇ || ೨೪೮ ||

ಸಾಂಗವಾಗಿ ಯಾಗವ ನಡೆಸುವಂತೆ ನನ್ನನ್ನು
ಅನುಗ್ರಹಿಸೆಂದು ಕೃಷ್ಣನ ಪ್ರಾರ್ಥಿಸಿದ ಧರ್ಮರಾಯ
ಕೃಷ್ಣನ ಅನುಗ್ರಹ ಪಡೆದು ಮಹರ್ಷಿಗಳೆಲ್ಲರ ಕರೆಸಿ
ಯಾಗಕಾರ್ಯವ ವಹಿಸಿ ದೀಕ್ಷೆಯ ಸ್ವೀಕರಿಸಿದ
ನಮಿಸುವೇ ಹರಿ ಸ್ತುತಿಸುವೇ || ೨೪೯ ||

ದೇವತೆಗಳು ರಾಜರು ಬಂಧು ಬಾಂಧವರು
ಯಾಗವ ನೋಡಲೆಂದು ಬಂದು ಸೇರಿದರೆಲ್ಲ
ಯಾಗವು ಸಾಂಗವಾಗಿ ನೆರವೇರಿದ ಮೇಲೆ
ಧರ್ಮರಾಯ ಕೃಷ್ಣನಿಗೆ ಅಗ್ರಪೂಜೆ ಮಾಡಿದ
ನಮಿಸುವೇ ಹರಿ ಸ್ತುತಿಸುವೇ || ೨೫೦ ||

ಆಗ ದುಷ್ಟ ಶಿಶುಪಾಲ ಕೃಷ್ಣನನ್ನು ನಿಂದಿಸಿದ
ಶಿಶುಪಾಲನ ಕೊಲ್ಲಲು ರಾಜರು ಸುತ್ತುವರಿದರು
ರಾಜರನ್ನು ತಡೆದು ಕೃಷ್ಣ ತನ್ನ ಚಕ್ರಾಯುಧದಿಂದ
ಶಿಶುಪಾಲನ ಕುತ್ತಿಗೆಯನ್ನು ಕತ್ತರಿಸಿ ಹಾಕಿದನು
ನಮಿಸುವೇ ಹರಿ ಸ್ತುತಿಸುವೇ || ೨೫೧ ||

ಯಾಗಕ್ಕೆ ಬಂದವರೆಲ್ಲ ಧರ್ಮರಾಯನ ಜೊತೆಗೆ
ಗಂಗಾನದಿಗೆ ಹೋಗಿ ಮಿಂದು ಧನ್ಯರಾದರು
ಬಂದ ಬ್ರಾಹ್ಮಣರಿಗೆಲ್ಲ ದಾನ ದಕ್ಷಿಣೆ ನೀಡಿ
ಎಲ್ಲರಿಗೂ ವಸ್ತ್ರವನ್ನಿತ್ತು ಸತ್ಕರಿಸಿದ ಧರ್ಮರಾಯ
ನಮಿಸುವೇ ಹರಿ ಸ್ತುತಿಸುವೇ || ೨೫೨ ||

ಧರ್ಮರಾಯನ ಹರಸಿ ಹೊರಟರೆಲ್ಲ ಸಂತಸದಿ
ದುರ್ಯೋಧನನು ಮಾತ್ರ ಮತ್ಸರಗೊಂಡು ಹೊರಟ
ದಾಯಾದಿ ಮತ್ಸರದಿ ಕುದಿಯುತ್ತ ದುರ್ಯೋಧನ
ಶಕುನಿಯ ಕುತಂತ್ರದಿಂದ ಪಾಂಡವರ ಕರೆಸಿದ
ನಮಿಸುವೇ ಹರಿ ಸ್ತುತಿಸುವೇ || ೨೫೩ ||

ಮೋಸದಿ ದ್ಯೂತವಾಡಿಸಿ ಸೋಲಿಸಿ ಪಾಂಡವರ
ವನವಾಸಕ್ಕೆ ಕಳುಹಿಸಿ ದುಷ್ಟತನದಿ ಮೆರೆದನು
ವನವಾಸ ಮುಗಿದರೂ ರಾಜ್ಯವನ್ನು ಕೊಡಲಿಲ್ಲ
ಯುದ್ಧ ಮಾಡಿ ಪಡೆದುಕೊಳ್ಳಿ ಎಂದು ಯುದ್ಧವ ಸಾರಿದ
ನಮಿಸುವೇ ಹರಿ ಸ್ತುತಿಸುವೇ || ೨೫೪ ||

ಯುದ್ಧಕ್ಕೆ ಶ್ರೀಕೃಷ್ಣನ ಸಹಾಯವ ಪಡೆಯಲು
ಕಪಟ ದುರ್ಯೋಧನ ಬಂದನು ದ್ವಾರಕೆಗೆ
ಮಲಗಿದ್ದ ಕೃಷ್ಣನ ಕಂಡು ಕೃಷ್ಣನ ತಲೆ ಕಡೆ ಕುಳಿತ
ಆಗ ಅರ್ಜುನ ಬಂದು ಕೃಷ್ಣನ ಕಾಲೆಡೆ ಕುಳಿತ
ನಮಿಸುವೇ ಹರಿ ಸ್ತುತಿಸುವೇ || ೨೫೫ ||

ಭಕ್ತವತ್ಸಲನಾಗಿರುವ ಕೃಷ್ಣನು ಎಚ್ಚರಗೊಂಡು
ಮೊದಲು ಕಂಡ ಅರ್ಜುನನ ಕುಶಲ ವಿಚಾರಿಸಿದ
ನಂತರ ದುರ್ಯೋಧನನ ಮಾತನಾಡಿಸಿದ ಕೃಷ್ಣ
ಇಬ್ಬರ ಉದ್ದೇಶವ ಕೇಳಿ ಹೇಳಿದನು ಇಬ್ಬರಿಗೂ
ನಮಿಸುವೇ ಹರಿ ಸ್ತುತಿಸುವೇ || ೨೫೬ ||

ಒಂದು ಕಡೆಗೆ ಸೈನ್ಯವು ಮತ್ತೊಂದು ಕಡೆಗೆ ನಾನು
ಇಬ್ಬರ ಮನದಿಚ್ಛೆಯನ್ನು ಹೇಳಿರೆಂದ ಶ್ರೀಕೃಷ್ಣ
ಕೃಷ್ಣ ನೀನೇ ಬೇಕೆಂದು ವಿನಂತಿಸಿದ ಅರ್ಜುನ
ದುರಾಸೆಯ ದುರ್ಯೋಧನನು ಸೈನ್ಯವನ್ನೇ ಕೇಳಿದ
ನಮಿಸುವೇ ಹರಿ ಸ್ತುತಿಸುವೇ || ೨೫೭ ||

ಅರ್ಜುನನ ಯುದ್ಧ ರಥಕೆ ಕೃಷ್ಣನು ಸಾರಥಿಯಾದ
ಬಳಗ ನೋಡಿ ಅರ್ಜುನ ಯುದ್ಧಕ್ಕೆ ಹಿಂಜರಿದನು
ಕರ್ತವ್ಯ ನಿರ್ವಹಿಸೆಂದು ಉಪದೇಶಿಸಿದ ಕೃಷ್ಣ
ಪಾಂಡವರು ಕೌರವರು ಘೋರ ಯುದ್ಧ ಮಾಡಿದರು
ನಮಿಸುವೇ ಹರಿ ಸ್ತುತಿಸುವೇ || ೨೫೮ ||

ಪಾಂಡವರ ಕೌರವರ ಯುದ್ಧದ ಮಹಾಸೈನ್ಯವು
ಕೌರವರ ಜೊತೆಯಲ್ಲೇ ನಾಶವಾಗಿ ಹೋಯಿತು
ಭಗವಂತ ಶ್ರೀಕೃಷ್ಣನ ದಿವ್ಯ ಅನುಗ್ರಹದಿಂದ
ಪಾಂಡವರು ಮಾತ್ರ ಯುದ್ಧ ಮಾಡಿ ಉಳಿದರು
ನಮಿಸುವೇ ಹರಿ ಸ್ತುತಿಸುವೇ || ೨೫೯ ||

ದ್ವಾರಕಾಪುರದಲ್ಲಿ ಶ್ರೀಕೃಷ್ಣನನುಗ್ರಹದಿ
ಯಾದವ ಕುಲದವರು ಇದ್ದರು ಸುಖ ಸಂತಸದಿ
ದ್ವಾರಕಾಪುರದ ಬಳಿ ಇರುವ ತೀರ್ಥಕ್ಷೇತ್ರಕ್ಕೆ
ಮಹರ್ಷಿಗಳೆಲ್ಲರೂ ಸೇರಿ ಯಾತ್ರೆಗಾಗಿ ಬಂದರು
ನಮಿಸುವೇ ಹರಿ ಸ್ತುತಿಸುವೇ || ೨೬೦ ||

ಕೆಲವು ಯಾದವರೆಲ್ಲ ತೀರ್ಥಕ್ಷೇತ್ರದ ಬಳಿಗೆ
ಬಂದು ಕುಣಿದಾಡುತ್ತ ಇದ್ದರು ವಿನೋದದಿಂದ
ಮಹರ್ಷಿಗಳ ಗೇಲಿ ಮಾಡಿ ವಂಶನಾಶವಾಗುವ
ಶಾಪಕ್ಕೆ ಗುರಿಯಾಗಿ ಭಯದಿ ಹಿಂದಿರುಗಿದರು
ನಮಿಸುವೇ ಹರಿ ಸ್ತುತಿಸುವೇ || ೨೬೧ ||

ದ್ವಾರಕಾ ಪುರದಲ್ಲಿ ಉತ್ಪಾತಗಳುಂಟಾಗಿ
ಕೃಷ್ಣನ ಸೂಚನೆಯಂತೆ ಹೊರಟರು ತೀರ್ಥಯಾತ್ರೆಗೆ
ಬಲರಾಮ ಕೃಷ್ಣರ ಜೊತೆಗೂಡಿ ಹಲವರು
ಪವಿತ್ರ ಸಂಗಮ ಕ್ಷೇತ್ರ ಪ್ರಭಾಸಕ್ಕೆ ಬಂದರು
ನಮಿಸುವೇ ಹರಿ ಸ್ತುತಿಸುವೇ || ೨೬೨ ||

ಕೃಷ್ಣನ ಅಪ್ಪಣೆಯಂತೆ ತಮ್ಮ ಶ್ರೇಯಸ್ಸಿಗಾಗಿ
ಪೂಜಾ ಕಾರ್ಯ ನಡೆಸಿ ದಾನಗಳ ಮಾಡಿದರು
ವಿನಾಶಕಾಲದಲ್ಲಿ ಬುದ್ಧಿನಾಶವೆಂಬಂತೆ
ಸಂತಸದಿ ಮದ್ಯವನ್ನು ಮಿತಿ ಮೀರಿ ಕುಡಿದರು
ನಮಿಸುವೇ ಹರಿ ಸ್ತುತಿಸುವೇ || ೨೬೩ ||

ಎಲ್ಲರು ಮದ್ಯದ ಮದಕೆ ಪರಸ್ಪರ ಜಗಳವಾಡಿ
ಒಬ್ಬರಿಗೊಬ್ಬರು ಹೊಡೆದು ಯುದ್ಧ ಮಾಡಿಕೊಂಡರು
ಬಲರಾಮ ಕೃಷ್ಣರು ಬಿಡಿಸಲು ಯತ್ನಿಸಿದಾಗ
ಅವರ ಮೇಲೆ ಎರಗುತ್ತ ದುಷ್ಟತನದಿ ಮೆರೆದರು
ನಮಿಸುವೇ ಹರಿ ಸ್ತುತಿಸುವೇ || ೨೬೪ ||

ಬಂದ ಯಾದವರೆಲ್ಲ ಹೊಡೆದಾಡಿ ಮಡಿದರು
ಮಹರ್ಷಿಗಳ ಶಾಪದಿಂದ ಎಲ್ಲರು ನಾಶವಾದರು
ಭೂದೇವಿ ಇಚ್ಛೆಯಂತೆ ಭೂಭಾರ ಇಳಿಯಿತು
ಎಂದುಕೊಂಡ ಶ್ರೀಕೃಷ್ಣ ತನ್ನ ಅಂತರಂಗದಲ್ಲಿ
ನಮಿಸುವೇ ಹರಿ ಸ್ತುತಿಸುವೇ || ೨೬೫ ||

ತನ್ನ ಹೊಣೆ ಮುಗಿಯಿತೆಂದ ಕೃಷ್ಣನ ನುಡಿಯ ಕೇಳಿ
ಸಮುದ್ರದ ತೀರದಲ್ಲಿ ಕುಳಿತನು ಬಲರಾಮ
ತನ್ನ ಯೋಗಶಕ್ತಿಯಿಂದ ಜೀವ ಚೈತನ್ಯವನ್ನು
ಅಲ್ಲೇ ಪರಮಾತ್ಮನಲ್ಲಿ ವಿಲೀನಗೊಳಿಸಿದನು
ನಮಿಸುವೇ ಹರಿ ಸ್ತುತಿಸುವೇ || ೨೬೬ ||

ಮೌನದಿ ಮರದ ಕೆಳಗೆ ಶ್ರೀಕೃಷ್ಣ ಕುಳಿತಿರಲು
ಜಿಂಕೆಗೆ ಬೇಡನು ಬಿಟ್ಟ ಬಾಣ ತಾಗಿತು ಪಾದಕ್ಕೆ
ಬೇಡನು ಕೃಷ್ಣಗೆ ನಮಿಸಿ ಕ್ಷಮಿಸೆಂದು ಪ್ರಾರ್ಥಿಸಿದ
ನನ್ನದೆ ಸಂಕಲ್ಪವೆಂದು ಸ್ವರ್ಗಕ್ಕೆ ಕಳಿಸಿದ ಕೃಷ್ಣ
ನಮಿಸುವೇ ಹರಿ ಸ್ತುತಿಸುವೇ || ೨೬೭ ||

ಕೃಷ್ಣನ ಸಾರಥಿ ಬಂದು ಕೃಷ್ಣನಿಗೆ ನಮಸ್ಕರಿಸಿ
ದೇವಾ ನಿನ್ನ ಕಾಣದೆ ಹುಡುಕುತ್ತ ಬಂದೆನೆಂದ
ಶ್ರೀಕೃಷ್ಣನು ಸಾರಥಿಗೆ ದ್ವಾರಕೆಯು ಮುಳುಗುವುದು
ಇಂದ್ರಪ್ರಸ್ಥಕ್ಕೆ ಎಲ್ಲರನ್ನೂ ಬೇಗನೆ ಕಳುಹಿಸು ಎಂದ
ನಮಿಸುವೇ ಹರಿ ಸ್ತುತಿಸುವೇ || ೨೬೮ ||

ಕೃಷ್ಣನಿಗೆ ಸಾರಥಿಯು ನಮಸ್ಕರಿಸಿ ಹೊರಟನು
ದ್ವಾರಕಾಪುರ ತಲುಪಿ ತಿಳಿಸಿದ ಕೃಷ್ಣನನುಜ್ಞೆಯ
ದ್ವಾರಕಾಪುರದವರು ಭಗವಂತನ ಸ್ಮರಿಸುತ್ತ
ಕೃಷ್ಣನ ಅನುಜ್ಞೆಯಂತೆ ಹೊರಟರು ಇಂದ್ರಪ್ರಸ್ಥಕ್ಕೆ
ನಮಿಸುವೇ ಹರಿ ಸ್ತುತಿಸುವೇ || ೨೬೯ ||

ಬ್ರಹ್ಮ ಮತ್ತು ಈಶ್ವರನು ಇಂದ್ರಾದಿ ದೇವತೆಗಳು
ಮಹರ್ಷಿಗಳೆಲ್ಲರೂ ಸೇರಿ ಕೃಷ್ಣನ ಬಳಿಗೆ ಬಂದರು
ಜಯ ಜಯ ಶ್ರೀಕೃಷ್ಣ ಪರಮಾತ್ಮಾ ಎಂದು
ಜಯವ ಘೋಷಿಸುತಿರಲು ಹೂಮಳೆ ಸುರಿಯಿತು
ನಮಿಸುವೇ ಹರಿ ಸ್ತುತಿಸುವೇ || ೨೭೦ ||

ಮೌನವಾಗಿ ಕುಳಿತಿರುವ ಶ್ರೀಕೃಷ್ಣ ಪರಮಾತ್ಮ
ಪ್ರಸನ್ನ ದೃಷ್ಟಿಯಲಿ ಒಮ್ಮೆ ನೋಡಿದನು ಎಲ್ಲರನ್ನು
ದಿವ್ಯ ಸುಂದರವಾದ ತನ್ನ ಶರೀರದೊಡನೆ
ಕೃಷ್ಣಾವತಾರಿ ವಿಷ್ಣು ತೆರಳಿದ ವೈಕುಂಠಕ್ಕೆ
ನಮಿಸುವೇ ಹರಿ ಸ್ತುತಿಸುವೇ || ೨೭೧ ||

ಬುದ್ಧಾವತಾರ

ದುಷ್ಟರ ಶಿಕ್ಷಕನಾಗಿ ಶಿಷ್ಠರ ಪಾಲಕನಾಗಿ
ಬುದ್ಧಾವತಾರಿಯಾಗಿ ಅವತರಿಸುವನು ವಿಷ್ಣು
ದುಷ್ಟ ತಾರಕಾಸುರನ ಮಕ್ಕಳು ಸುರರನ್ನೆದುರಿಸಿ
ಯುದ್ಧ ಮಾಡಿ ಸೋತು ಮಯನಲ್ಲಿ ಮೊರೆ ಹೊಕ್ಕರು
ನಮಿಸುವೇ ಹರಿ ಸ್ತುತಿಸುವೇ || ೨೭೨ ||

ಮೊರೆಯಿಟ್ಟ ಮೂವರಿಗೂ ಪ್ರತ್ಯೇಕವಾಗಿ ಮೂರು
ಸಂಚಾರಿ ಪಟ್ಟಣವನ್ನು ನಿರ್ಮಿಸಿ ಕೊಟ್ಟನು ಮಯನು
ಸಂಚಾರಿ ಪಟ್ಟಣದಲ್ಲಿ ಮೂವರು ಅಡಗಿಕೊಂಡು
ದೇವತೆಗಳ ಪೀಡಿಸಿ ದುಷ್ಟತನದಿ ಮೆರೆದರು
ನಮಿಸುವೇ ಹರಿ ಸ್ತುತಿಸುವೇ || ೨೭೩ ||

ದೇವತೆಗಳೆಲ್ಲರು ಪರಶಿವನನ್ನು ಕುರಿತು
ಭಕ್ತಿಯಿಂದ ಪ್ರಾರ್ಥಿಸಿ ರಕ್ಷಿಸೆಂದು ಬೇಡಿದರು
ಭಕ್ತಾಗ್ರೇಸರನಾದ ಶಿವನು ಬಾಣದಿಂದ
ತ್ರಿಪುರವಾಸಿಗಳಾದ ದುಷ್ಟ ಅಸುರರನ್ನು ಕೊಂದ
ನಮಿಸುವೇ ಹರಿ ಸ್ತುತಿಸುವೇ || ೨೭೪ ||

ಸತ್ತಿರುವ ಅಸುರರನ್ನು ಬದುಕಿಸಲೆಂದು ಮಯನು
ಸಿದ್ಧಾಮೃತ ರಸದ ಕೊಳವನು ನಿರ್ಮಿಸಿದನು
ಕೊಳದಲ್ಲಿ ಮುಳುಗಿಸಿ ಎತ್ತಿ ಸತ್ತವರನ್ನು ಬದುಕಿಸಿದ
ಬದುಕಿದ ಅಸುರರು ಪುನಃ ದುಷ್ಟರಾಗಿ ಮೆರೆದರು
ನಮಿಸುವೇ ಹರಿ ಸ್ತುತಿಸುವೇ || ೨೭೫ ||

ದುಷ್ಟ ಶಿಕ್ಷಕನಾದ ಶ್ರೀಮನ್ಮಹಾವಿಷ್ಣು
ಬ್ರಹ್ಮದೇವನ ಒಪ್ಪಿಸಿ ಕರುವನ್ನಾಗಿಸಿದ
ಆಕಳ ರೂಪದಿ ವಿಷ್ಣು ಕರುವಿನ ಜೊತೆಗೂಡಿ
ಸಿದ್ಧಾಮೃತ ಕೊಳದಲ್ಲಿ ಇಳಿದು ರಸವ ಹೀರಿದ
ನಮಿಸುವೇ ಹರಿ ಸ್ತುತಿಸುವೇ || ೨೭೬ ||

ಶ್ರೀಹರಿಯು ಶಿವನ ಕಂಡು ತ್ರಿಪುರಾಸುರರನ್ನು
ವಧಿಸಲು ಪ್ರೇರೇಪಿಸಿ ಬಾಣವಾಗುವೆನೆಂದ
ಒಪ್ಪಿದ ಶಿವನು ಧನುಸ್ಸನ್ನೆತ್ತಿ ನಾರಾಯಣ ಬಾಣದಿಂದ
ಸೊಕ್ಕಿದ ತ್ರಿಪುರಾಸುರರನ್ನು ಸುಟ್ಟು ಭಸ್ಮವ ಮಾಡಿದನು
ನಮಿಸುವೇ ಹರಿ ಸ್ತುತಿಸುವೇ || ೨೭೭ ||

ಶಿವನಿಂದ ಹತರಾದ ತ್ರಿಪುರಾಸುರರು ಜನಿಸಿ
ದಿವ್ಯ ತತ್ವಜ್ಞಾನವನ್ನು ವಶಪಡಿಸಿಕೊಂಡರು
ಅಸುರರ ವಶದಲ್ಲಿರುವ ತತ್ವಜ್ಞಾನ ರಕ್ಷಿಸಲು
ಬುದ್ಧಾವತಾರಿಯಾಗಿ ಜನಿಸಿದ ಮಹಾವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೨೭೮ ||

ಸರ್ವಶಾಸ್ತ್ರಮಯವಾದ ಬುದ್ಧನ ಬೋಧನೆಯನ್ನು
ತಿಳಿಯದೆ ಅಸುರರೆಲ್ಲ ಮೋಹಕ್ಕೆ ಒಳಗಾದರು
ತಾಮಸದ ಅಸುರರಿಗೆ ಅಂತರಾರ್ಥ ಅರಿಯದೆ
ದಿವ್ಯವಾದ ತತ್ವಜ್ಞಾನ ದೊರೆಯಿತು ಸಾತ್ವಿಕರಿಗೆ
ನಮಿಸುವೇ ಹರಿ ಸ್ತುತಿಸುವೇ || ೨೭೯ ||

ಕಲ್ಕ್ಯಾವತಾರ

ಕಲಿಯುಗದ ಅಂತ್ಯದಲ್ಲಿ ದುಷ್ಟರಾದವರನ್ನೆಲ್ಲ
ದಮನಗೊಳಿಸುವನು ವಿಷ್ಣು ಕಲ್ಕ್ಯಾವತಾರಿಯಾಗಿ
ಭಗವಂತನನ್ನೇ ಅತಿಯಾಗಿ ದ್ವೇಷಿಸುವ
ಕಲಿಯೇ ಈ ಯುಗದ ಪ್ರಭುವಾಗಿರುವನು
ನಮಿಸುವೇ ಹರಿ ಸ್ತುತಿಸುವೇ || ೨೮೦ ||

ಕಲಿಯುಗದಲ್ಲಿ ಹಣವೇ ಪ್ರಧಾನವಾಗುವುದು
ಕೀರ್ತಿಗೋಸ್ಕರವೇ ಧರ್ಮಾಚರಣೆಗಳು
ಎಲ್ಲೆಲ್ಲೂ ಅಧರ್ಮಗಳು ತಾಂಡವಾಡುವಾಗ
ಧರ್ಮ ಸಂರಕ್ಷಣೆಗಾಗಿ ಅವತರಿಸುವನು ವಿಷ್ಣು
ನಮಿಸುವೇ ಹರಿ ಸ್ತುತಿಸುವೇ || ೨೮೧ ||