ಸೂರ್ಯ ಸ್ತುತಿ

ರಾಗ : ಸೌರಾಷ್ಟ್ರ 
ತಾಳ : ಏಕ

ಹೇ ಸೂರ್ಯದೇವನೆ ಜೀವಸಂಕುಲನೆ
ಬೆಳಕ ನೀಡುವವನೇ ನಿನಗೆ ವಂದನೆ
ಉದಯದ ದರ್ಶನವು ಸದಾ ಸದ್ಭಾವನೆಯು
ಸಂಧ್ಯಾದರ್ಶನವು ಮೈಮನವು ಪಾವನವು || ೧ ||

ಅದಿತಿಸುತನೆ ನಿನ್ನ ಕಣಕಣದಲಿರುವ
ಸುವರ್ಣವರ್ಣ ಸಹಸ್ರಕಿರಣ
ಹೇ ಪದ್ಮಪ್ರಭನೇ ಅಶ್ವವಾಹನನೆ
ಬೀರುವೆ ಕ್ಷಣಕ್ಷಣ ದಿನವು ಹೊಂಗಿರಣ || ೨ ||

ಋತುಕರ್ತನೇ ನಿನ್ನ ದಿನದ ಆಗಮನವು
ತ್ರಿಮೂರ್ತಿಗಳ ಆಜ್ಞೆಪಾಲನೆಯು
ಉದಯನೇ ದೇವಾದಿ ದೇವತೆಗಳಿಗೆಲ್ಲ
ಸುರಗಣರಿಗೆಲ್ಲಾ ನಿನ್ನಿಂದ ನೆಮ್ಮದಿಯು || ೩ ||

ಭಾಸ್ಕರನೇ ನಕ್ಷತ್ರ ಗ್ರಹತಾರಾಧಿಗಳ
ಅಧಿಪತಿಯು ನೀನೇ ಫಲಪ್ರದನೆ
ತೇಜಸ್ವಿಯೇ ನಿನಗೆ ಮುನಿವರ್ಯರು
ಮನುಜರು ದಿನವೂ ಅರ್ಘ್ಯವನು ಕೊಡುವರು || ೪ ||

ವರ್ಚಸ್ವಿಯೇ ನಿನ್ನ ಅಪಾರ ಮಹಿಮೆಯ
ಸರ್ವರೂ ಸ್ಮರಿಸುತ್ತ ನಮಿಸುವರು
ಭಾನುವೇ ಪ್ರಾಣಿಪಕ್ಷಿ ಕ್ರಿಮಿಕೀಟಗಳಿಗೆ
ಧಾನ್ಯ ಫಲಪುಷ್ಪಕೆ ನಿನ್ನ ಕರುಣೆ ಕಿರಣವು || ೫ ||

ರವಿಯೇ ಕಂದರ ಗಿರಿಪರ್ವತಗಳ
ವನಸಿರಿಗಳನು ನೀ ಸ್ಪರ್ಶಿಸುವೆ
ಕಿರಣನೇ ಸಮುದ್ರದಲಿ ನದಿಯಲಿ
ರಮಣೀಯ ದೃಶ್ಯವ ನಿತ್ಯವು ತೋರುವೆ || ೬ ||

ಪ್ರಭಾಕರನೇ ಕಷ್ಟಕಾರ್ಪಣ್ಯವು
ನಿನ್ನ ದಯದಿಂದ ಎಲ್ಲಾ ಮಾಯವು
ರವಿತೇಜನೇ ಜೀವರಕ್ಷಕನೆ
ಸರ್ವರೋಗಗಳ ಪರಿಹಾರನೆ || ೭ ||

ವಿಶ್ವಾತ್ಮನೇ ಶತ್ರು ವಿನಾಶಕನೇ
ದಾರಿದ್ರ್ಯದೋಷ ನಿವಾರಕನೇ
ಸವಿತಾಸೂರ್ಯನೆ ಸರ್ವಶಕ್ತನೇ
ಸಹಸ್ರಾಕ್ಷನೇ ಸಂರಕ್ಷಕನೇ || ೮ ||

ಆದಿದೇವನೇ ಧರ್ಮಧ್ವಜಾಯನೇ
ಸಮಯ ನೀನೇ ನಿನಗೆ ಪ್ರಾರ್ಥನೆ
ಚರಾಚರಾತ್ಮನೆ ಅರವಿಂದಾಕ್ಷನೇ
ದೀಪ್ತಾಂಶನೇ ನಿನಗೆ ಪ್ರಾರ್ಥನೆ || ೯ ||

ಕಾಲಚಕ್ರನೇ ಸೂರ್ಯನಾರಾಯಣನೆ
ಸಂವತ್ಸರನೇ ನಮಸ್ಕಾರವು
ಮಹಾಶಕ್ತನೇ ಅಜಾಯನೇ
ಮೋಕ್ಷದ್ವಾರನೆ ನಮಸ್ಕಾರವು || ೧೦ ||

ಆದಿತ್ಯಹೃದಯದ ಪಾರಾಯಣವು
ಪಾಪನಾಶಕವು ಪುಣ್ಯಕರವು
ರಶ್ಮಿಮಂತನೇ ಶುಭ ಮಂಗಲವು
ಸಮುದ್ಯಂತನೇ ಜಯ ಮಂಗಲವು || ೧೧ ||