ಶಿವಮಾನಸ ಪೂಜಾ ಸ್ತುತಿ

ಹೇ ಭಗವಾನ್ ಶಂಭೋ ಶಂಕರನೆ
ದಯಾನಿಧಿಯೆ ಪಶುಪತಿ ಪರಮೇಶ್ವರನೆ
ಮನಸಂಕಲ್ಪದಿ ಪೂಜಿಪೆ ದೇವನೆ
ಕೃಪೆ ತೋರಿ ಸ್ವೀಕರಿಸು ಮಹೇಶ್ವರನೆ || ೧ ||

ರತ್ನಗಳಿಂದ ನಿರ್ಮಿಸಿದ ಆಸನವು
ಹಿಮದಂತಹ ತಂಪು ನೀರಿನ ಸ್ನಾನ
ಕಸ್ತೂರಿ ಸುಗಂಧದಿ ಬೆರೆತ ಚಂದನ
ನವರತ್ನ ವಿಭೂಷಿತ ದಿವ್ಯ ವಸ್ತ್ರಗಳು || ೨ ||

ಜಾಜಿ ಸಂಪಿಗೆ ಮತ್ತು ಬಿಲ್ವಪತ್ರೆಗಳ
ಸೇರಿಸಿ ಮಾಡಿದ ಪುಷ್ಪಾಂಜಲಿಯು
ಧೂಪ ದೀಪದ ಮನನಿರ್ಮಿತ ಪೂಜೆಯ
ಕೃಪೆ ತೋರಿ ಸ್ವೀಕರಿಸು ಮಹೇಶ್ವರನೆ || ೩ ||

ನವರತ್ನ ಖಂಡ ರಚಿತ ಸ್ವರ್ಣ ಪಾತ್ರೆಯಲಿ
ತುಪ್ಪ ಬೆರೆಸಿ ಪಾಯಸ ಪಂಚ ಭಕ್ಷಗಳು
ಹಾಲು ಮೊಸರು ಮತ್ತು ಹಲವು ಫಲಗಳು
ರಂಭಾಫಲಗಳ ಜೊತೆಗೆ ಪಾನಕವು || ೪ ||

ಪಚ್ಚ ಕರ್ಪೂರದಿ ಸುಗಂಧಗೊಳಿಸಿರುವ
ರುಚಿಕರ ನೀರು ಮತ್ತು ತಾಂಬೂಲವು
ಭಕ್ತಿಪೂರ್ವಕ ಮನನಿರ್ಮಿತ ಪೂಜೆಯ
ಕೃಪೆ ತೋರಿ ಸ್ವೀಕರಿಸು ಮಹೇಶ್ವರನೆ || ೫ ||

ಛತ್ರ ಚಾಮರಗಳು ಮತ್ತು ಬೀಸಣಿಕೆ
ನಿರ್ಮಲವಾಗಿರುವಂಥ ದರ್ಪಣವು
ಇಂಪಾಗಿರುವ ವೀಣಾವಾದನ
ಭೇರಿ ಮೃದಂಗ ಕಹಳೆ ವಾದ್ಯಗಳು || ೬ ||

ಗಾಯನದ ಜೊತೆ ವಿವಿಧ ನೃತ್ಯಗಳು
ಭಕ್ತಿಯಿಂದ ಸಾಷ್ಟಾಂಗ ಪ್ರಣಾಮಗಳು
ಹಲವು ಸ್ತುತಿಗಳ ಮನ ನಿರ್ಮಿತ ಪೂಜೆಯ
ಕೃಪೆ ತೋರಿ ಸ್ವೀಕರಿಸು ಮಹೇಶ್ವರನೆ || ೭ ||

ಹೇ ಶಂಭೋ ನನ್ನ ಆತ್ಮವೆ ನೀನು
ಬುದ್ಧಿಯು ಪಾರ್ವತಿ ಪ್ರಾಣ ನಿನ್ನ ಗಣಗಳು
ನನ್ನ ಶರೀರವೇ ನಿನ್ನ ಮಂದಿರವು
ವಿಷಯ ಭೋಗಗಳ ರಚನೆ ನಿನ್ನ ಪೂಜೆ || ೮ ||

ನಿದ್ದೆ ಸಮಾಧಿಸ್ಥಿತಿ ಸಂಚಾರ ಪ್ರದಕ್ಷಿಣೆ
ನಾನಾಡುವ ನುಡಿಯೇ ನಿನ್ನಯ ಸ್ತುತಿಯು
ಈ ವಿಧವಾಗಿ ನಾ ಮಾಡುವ ಕರ್ಮವು
ನಿನ್ನಾರಾಧನೆಯೇ ಆಗಿದೆ ಶಿವನೆ || ೯ ||

ಕೈ ಕಾಲು ಕಣ್ಣು ಕಿವಿ ಶರೀರ ಕ್ರಿಯೆ
ಮನಸ್ಸಿನ ಮಾತಿನ ಅಪರಾಧಗಳು
ಯೋಗ್ಯವೊ ಅಯೋಗ್ಯವೊ ಕರುಣದಿ ಕ್ಷಮಿಸೋ
ಜಯ ಜಯ ಶ್ರೀ ಮಹಾದೇವ ಶಂಭೋ || ೧೦ ||