ದೇವ್ಯಾಪರಾಧ ಕ್ಷಮಾಪನ ಸ್ತೋತ್ರ

ದೇವೀ ನಾ ನಿನ್ನ ಮಂತ್ರಯಂತ್ರದ ಸ್ತುತಿಯನು
ಆವಾಹನ ಧ್ಯಾನ ಮುದ್ರೆ ವಿಲಾಪಗಳ ಅರಿಯೆನು
ಎಲ್ಲಾ ಕ್ಲೇಶಗಳನ್ನು ಪರಿಹರಿಸುವ ನಿನ್ನನು
ಮೊರೆ ಹೋಗುವುದು ಮಾತ್ರ ನಾ ಬಲ್ಲೆನು || ೧ ||

ಜಗದೋದ್ಧಾರಿಣಿ ಕಲ್ಯಾಣಿ ನಿನ್ನ ಪೂಜಾ ವಿಧಿಯನರಿಯೆ
ಧನದ ಅಭಾವದ ಜೊತೆಗೆ ಆವರಿಸಿದೆ ಆಲಸ್ಯದ ಮಾಯೆ
ನಿನ್ನ ಚರಣ ಸೇವೆಯ ಕೊರತೆಯ ಕ್ಷಮಿಸಿ ನೀ ಕಾಯೇ
ದುರ್ಗುಣ ಮಗ ಜನಿಸಬಹುದು ತಾಯಿ ಎಂದಿಗೂ ಸದ್ಗುಣಿಯೇ || ೨ ||

ಮಾತೇ ಭೂಮಂಡಲದಲ್ಲಿ ನಿನ್ನಯ ಪುತ್ರರು ಹಲವರು
ಅವರೆಲ್ಲಾ ಪುಣ್ಯ ಪುರುಷರು ಸರಳ ಸದೃಢವಂತರು
ನಾನೊಬ್ಬ ಚಂಚಲನಾದೆ ಶಿವೇ ನೀ ನನ್ನ ತ್ಯಜಿಸದಿರು
ದುರ್ಬುದ್ಧಿ ಮಗ ಜನಿಸಬಹುದು ತಾಯಿಯು ಸದ್ಬುದ್ಧಿಯ ಕಲ್ಪತರು || ೩ ||

ಹೇ ಜಗನ್ಮಾತೆ ನಿನ್ನ ಚರಣ ಸೇವೆಯನು ಮಾಡಿಲ್ಲ
ಮಹಾತಾಯೆ ನಿನಗಾಗಿ ಧನವನ್ನು ಕೂಡ ಅರ್ಪಿಸಿಲ್ಲ
ನಿನ್ನ ಕರುಣೆ ಕಿರಣವ ನಾನೆಂದು ಮರೆಯುವುದಿಲ್ಲ
ದುಷ್ಟ ಮಗ ಜನಿಸಬಹುದು ಶಿಷ್ಟ ತಾಯಿಯೇ ಜಗತ್ತಲ್ಲೆಲ್ಲ || ೪ ||

ಹೇ ಗಣೇಶನ ಜನನಿಯೇ ಪೂಜಾ ವಿಧಿಗಳ ನಿಯಮವನು
ತಿಳಿಯದೆ ಅರ್ಚಿಸಲಿಲ್ಲ ವಿವಿಧ ದೇವತೆಗಳನು
ನನ್ನ ಈ ಜೀವನದಲ್ಲಿ ಕಳೆದ ಹಲವು ವರ್ಷಗಳನು
ನೀ ಕೃಪೆ ತೋರದಿದ್ದರೆ ಯಾರಲ್ಲಿ ಮೊರೆಯಿಡಲಿ ನಾನು || ೫ ||

ಹೇ ಅಪರ್ಣೆ ನಿನ್ನಯ ಸುಮಧುರ ಮಂತ್ರಾಕ್ಷರವನು
ಕೇಳಿದ ಚಾಂಡಾಲನೂ ಮಧುರವಾಣಿಯ ನುಡಿವನು
ದರಿದ್ರನು ಧನಿಕನಾಗಿ ನಿರ್ಭಯದಿ ಸಂಚರಿಸುವನು
ಹೇಳಲಸಾಧ್ಯವು ನಿನ್ನ ಜಪ ಅನುಷ್ಠಾನದ ಫಲವನು || ೬ ||

ಚಿತಾ ಭಸ್ಮ ಲೇಪಿತನು ವಿಷವನ್ನೇ ಕುಡಿದವನು
ಜಟೆ ಕಟ್ಟಿದ ಪಶುಪತಿಯು ಸರ್ಪಹಾರ ಧರಿಸಿಹನು
ಹಸ್ತದಿ ಶಿರ ಹಿಡಿದವನು ಭೂತಗಳ ಸ್ವಾಮಿ ಶಿವನು
ನಿನ್ನ ಪಾಣಿಗ್ರಹಣ ಫಲದಿ ಆದನು ಜಗದೀಶ್ವರನು || ೭ ||

ಹೇ ಮಾತೆ ಚಂದ್ರವದನೆ ನನಗೆ ಮೋಕ್ಷದ ಆಸೆಯಿಲ್ಲ
ಜ್ಞಾನ ಸುಖ ಸಂಪತ್ತು ಸಂಸಾರ ವೈಭವದ ಇಚ್ಛೆಯಿಲ್ಲ
ಮೃಡಾನೀ ರುದ್ರಾಣೀ ಶಿವೆ ಶಿವೆ ಭವಾನೀ ನೀನೆ ಎಲ್ಲ
ನಿನ್ನ ನಾಮ ಜಪಿಸುತ ಕಳೆಯಲಿ ನನ್ನ ಜನ್ಮವೆಲ್ಲ || ೮ ||

ಹೇ ಮಾತೆ ವಿವಿಧ ತರದಿ ಉಪಚರಿಸದೆ
ನೀರಸ ಚಿಂತನದಲಿ ತತ್ಪರನಾದೆ
ಆದಷ್ಟೋ ಸಲ್ಲದ ಕರ್ಮಗಳ ಮಾಡಿದೆ
ದಿಕ್ಕಿಲ್ಲದ ನನಗೆ ತಾಯೇ ನೀ ಕೃಪೆ ತೋರಿದೆ || ೯ ||

ಅಮ್ಮಾ ದುರ್ಗೇ ನಿನ್ನನ್ನೆ ನೆನೆವೆ
ಕರುಣಾಪೂರ್ಣೆ ನಾ ಕಷ್ಟದಲ್ಲಿರುವೆ
ಬಾಯಾರಿ ಹಸಿವೆಗೆ ಹಂಬಲಿಸುತಿರುವೆ
ಅನ್ಯಥಾ ಭಾವಿಸದೆ ನೀ ಪೊರೆಯುವೆ || ೧೦ ||

ಹೇ ದೇವಿ ಜಗಜ್ಜನನಿಯೇ
ಸಂಪೂರ್ಣ ಕರುಣಾನಿಧಿಯೇ
ಮಗನ ಅಪರಾಧ ಕ್ಷಮಿಸಿ ತಾಯೇ
ಉಪೇಕ್ಷಿಸದೆ ನೀ ತೋರುವೆ ದಯೆ || ೧೧ ||

ನನ್ನಂಥ ಪಾಪಿಷ್ಠ ಇನ್ನೊಬ್ಬನಿಲ್ಲ
ನಿನ್ನಂಥ ಪಾಪ ನಾಶಕಳಾರಿಲ್ಲ
ಮಹಾದೇವಿ ನೀ ತಿಳಿದು ಎಲ್ಲವ
ಅನುಗ್ರಹಿಸು ನಿನಗನಿಸಿದ ಫಲವ || ೧೨ ||