ಶ್ರೀ ಲಕ್ಷ್ಮೀನೃಸಿಂಹ ಸ್ತುತಿ

ಹೇ ಭಗವಂತ ಹಾಲ್ಗಡಲೊಡೆಯ
ದೇವಾ ಸುದರ್ಶನ ಚಕ್ರಧಾರಿ ||ಪ||

ಆದಿಶೇಷನು ತನ್ನ
ಹೆಡೆಯಲ್ಲಿರುವ ಮಣಿಯ
ಜ್ಯೋತಿಯಿಂದಲೇ ಬೆಳಗುತಲಿಹನು
ನಿನ್ನಯ ಪುಣ್ಯಶರೀರವನು
ಶರಣರಾಶ್ರಿತ ಯೋಗೀಶ
ಅಂತ್ಯವಿಲ್ಲದ ಶಾಶ್ವತನೇ
ಭವಸಾಗರವ ದಾಟಿಸುವ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೧ ||

ಬ್ರಹ್ಮರುದ್ರ ಇಂದ್ರಾದಿಗಳು
ನಿನ್ನ ಪಾದಕೆ ನಮಿಸುವರು
ಅವರ ಮುಕುಟದ ಕಾಂತಿಯ ಮೀರಿ
ಬೆಳಗುವ ಉಜ್ಜ್ವಲ ತೇಜಸ್ವಿಯೇ
ಶ್ರೀಮನ್ನಾರಾಯಣನೇ
ಲಕ್ಷ್ಮಿಯ ಎದೆದಾವರೆಯಲ್ಲಿ
ನಲಿದಾಡುವ ರಾಜಹಂಸ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೨ ||

ಭವವೆಂಬ ಘೋರಾರಣ್ಯದಲಿ
ದಿಙ್ಮೂಢನಾಗಿ ನಡೆಯುತಲಿರುವೆ
ಬೆನ್ನೇರಿದ ಭೀಕರ ಆಸೆಯೆಂಬ
ಮಾಯಾಮೃಗವು ಕಾಡುತಿದೆ
ಮಾತ್ಸರ್ಯವೆಂಬ ಸುಡುಬಿಸಿಲು
ಕಡು ಬೇಗೆಯಲೆನ್ನ ಬಳಲಿಸಿದೆ
ಕರುಣಾಸಾಗರ ಮುರಾರಿಯೇ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೩ ||

ಸಂಸಾರದ ಘೋರ ಕೂಪದಲಿ
ಬಿದ್ದು ನಾ ಒದ್ದಾಡುತಲಿರುವೆ
ಶತದುಃಖಗಳ ಸರ್ಪಗಳಿಂದ
ಕಚ್ಚಿಸಿಕೊಂಡು ನೋವಲ್ಲಿರುವೆ
ಭಕ್ತರ ಕಾಪಾಡುವ ದೇವಾ
ದೀನನಾಗಿ ನಿನ್ನ ಬಳಿ ಬಂದೆ
ದಯಾಸಾಗರನೇ ಕೃಪೆ ತೋರೋ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೪ ||

ಸಂಸಾರ ಸಾಗರದಲ್ಲಿ
ಮುಳುಗಿರುವ ನನ್ನ ದೇಹವನು
ಕರಾಳ ಕಾಲವೆಂಬ ಮೊಸಳೆ
ನಿರ್ದಯವಾಗಿ ನುಂಗಿದೆ
ಕ್ಷಣಿಕ ಸುಖ ಕೆನ್ನಾಲಿಗೆಯ
ಹೊಡೆತದಿ ಪೀಡಿತನಾಗಿ
ದಿಗ್ಭ್ರಮೆಗೊಂಡಿರುವೆ ನಾನು
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೫ ||

ಸಂಸಾರವೇ ವಿಷದ ವೃಕ್ಷ
ಪಾಪವೇ ಮೂಲಬೀಜ
ಕರ್ಮವೇ ರೆಂಬೆ ಎಲೆಯು ಇಂದ್ರಿಯ
ಹೂವುಗಳೇ ಕಾಮ ಪ್ರವೃತ್ತಿಯು
ದುಃಖವೇ ಹಣ್ಣುಗಳಾಗಿರುವ
ಮರವನ್ನೇರುತ ಬೀಳುತ್ತಿರುವೆ
ದಯದಿಂದೆನ್ನನು ಕಾಪಾಡೋ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೬ ||

ಸಂಸಾರವು ಭೀತಿಯ ಘಟಸರ್ಪ
ವಿಷದುಂಬಿದ ಕರಾಳ ಹಲ್ಲುಗಳು
ಕ್ರೂರ ಸರ್ಪವು ಫೂತ್ಕರಿಸುತ್ತ
ವಿನಾಶಗೈದಿವೆ ಎನ್ನ ದೇಹವನು
ಸರ್ಪಭಯವ ಹೊಡೆದೋಡಿಸುವ
ಗರುಡ ನಿನ್ನ ವಾಹನನಲ್ಲವೇ
ಸುಧಾಬ್ದಿ ನಿವಾಸ ಶೂರನೇ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೭ ||

ಸಂಸಾರವೇ ಕರಾಳ ಕಾಡ್ಗಿಚ್ಚು
ಭೀಕರ ಬೆಂಕಿಯ ಜ್ವಾಲೆಗಳು
ಎನ್ನಯ ಈ ಶರೀರವನು
ದಾರುಣವಾಗಿ ಸುಟ್ಟು ಹಾಕಿದೆ
ಬೆಂದು ನೊಂದಿರುವ ನಾನು
ಸದಾ ತಂಪೆರೆಯುವ ನಿನ್ನ
ಪಾದಪದ್ಮಕೆ ಶರಣು ಬಂದೆ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೮ ||

ದೇವಾ ನನ್ನ ಇಂದ್ರಿಯಗಳು
ವಿಷಯದ ಸುಖಗಳೆಂಬ
ಆಮಿಷವನ್ನೊಳಗೊಂಡಿರುವ
ಗಾಳದಲ್ಲಿ ಸಿಲುಕಿಕೊಂಡಿವೆ
ಸಾವಿನ ಗಾಳದಲ್ಲಿ ಸಿಲುಕಿ
ನಲುಗುತ್ತಿರುವ ಮೀನಿನಂತೆ
ಭವದ ಬಲೆಯಲಿ ಒದ್ದಾಡುತಿರುವೆ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೯ ||

ಭವ ಭಯಜನಕ ಸಲಗದ
ಮಾರಣಾಂತಿಕ ಹೊಡೆತಕ್ಕೆ
ಸಿಕ್ಕಿಕೊಂಡಿಹ ಎನ್ನ ಶರೀರ
ಮರ್ಮಘಾತಕ್ಕೀಡಾಗಿದೆ
ಸಂಕಷ್ಟದಿ ಪ್ರಾಣಕೆ ಭೀತಿ
ಎನ್ನ ಕಂಗೆಡೆಸಿದೆ ದೇವಾ
ಎಲ್ಲರ ಸಂಕಟ ಕಳೆಯುವವನೇ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೧೦ ||

ಮಹಾಬಲಶಾಲಿಗಳಾದ
ಕಪಟತನದ ಇಂದ್ರಿಯಗಳು
ವಿವೇಚನೆಯೆಂಬ ಸಂಪತ್ತನ್ನು
ಎನಗರಿಯದೆ ಅಪಹರಿಸಿದವು
ವಿವೇಕ ಶೂನ್ಯನಾಗಿ ನಾನು
ವ್ಯಾಮೋಹದ ಕಾರ್ಗತ್ತಲೆಯ
ಕಂದರದಲಿ ಜಾರಿ ಬಿದ್ದಿರುವೆ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೧೧ ||

ಹೇ ಪರಮಾತ್ಮನೇ ಲಕ್ಷ್ಮೀಪತೇ
ಪದ್ಮನಾಭನೇ ದೇವೇಶ
ವಿಷ್ಣೋ ಯಜ್ಞೇಶ ಯಜ್ಞ ಸ್ವರೂಪ
ಹೇ ಭಗವಂತ ಮಧುಸೂಧನ
ಹೇ ಮಾಧವ ಜನವಂದ್ಯ
ವಿಶ್ವ ಸ್ವರೂಪ ಬ್ರಹ್ಮನಿರತ
ಭಕ್ತರಕ್ಷಕ ಜಗದೋದ್ಧಾರಕ
ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೧೨ ||

ಶ್ರೀ ಲಕ್ಷ್ಮೀನೃಸಿಂಹ ದೇವರ
ಅಡಿದಾವರೆಗಳ ಸಿಹಿಜೇನನ್ನು
ಸದಾ ಮನದುಂಬಿ ಸವಿಯುವ
ಭ್ರಮರರು ಶ್ರೀ ಜಗದ್ಗುರುವರರು
ಶ್ರೀ ಶಂಕರ ಭಗವತ್ಪಾದರು
ಸಕಲಗುಣ ಪರಿಪೂರ್ಣವಾದ
ಮಂಗಳಕರವಾಗಿರುವಂಥ
ಶ್ರೀ ಲಕ್ಷ್ಮೀನೃಸಿಂಹಕರಾವಲಂಬ ಸ್ತೋತ್ರವನ್ನು ರಚಿಸಿದರು
ಭಗವಂತನ ಈ ಸ್ತೋತ್ರವನು
ಭಕ್ತಿಯಿಂದ ನಿತ್ಯ ಪಠಿಸಿದರೆ
ಶಾಶ್ವತ ಸುಖಧಾಮವಾದ
ದೇವರ ಸಾನಿಧ್ಯ ಲಭಿಸುವುದು || ೧೩ ||