ಕನಕಧಾರಾ ಸ್ತೋತ್ರ

ರಾಗ : ಪುನ್ನಾಗವರ್ಳಿ 
ತಾಳ : ಆದಿ (ತ್ರಿಶ್ರ ನಡೆ)

ಹೇ ದೇವಿ ಮಂಗಳ ದೇವತೆಯೇ
ನಿನ್ನ ಕಡೆಗಣ್ಣ ನೋಟವೊಂದು ಲೀಲೆ
ಜಗದಲ್ಲಿರುವ ಸಕಲೈಶ್ವರ್ಯವೆಲ್ಲವು
ನಿನ್ನ ದಿವ್ಯ ದೃಷ್ಟಿಗೆ ಅಧೀನ ತಾಯೇ || ೧ ||

ಹೊಂಬಣ್ಣದ ಮೊಗ್ಗಿನ ತಮಾಲ ವೃಕ್ಷವ
ಆಶ್ರಯಿಸಿರುವ ಹೆಣ್ಣು ದುಂಬಿಯಂತೆ
ರೋಮಾಂಚನಗೊಂಡ ವಿಷ್ಣು ದೇಹವ
ಅವಲಂಬಿತಳೇ ನೀಡೆ ಮಂಗಳವ || ೨ ||

ಹೇ ದೇವಿ ಬೇಡುವೆ ಸಾಗರ ಸಂಭವೆ
ನಿನ್ನ ದೃಷ್ಟಿಮಾಲೆ ಐಶ್ವರ್ಯ ನೀಡು ತಾಯೇ
ಮುಗ್ಧವಾಗಿರುವುದು ಮುರಾರಿಯ ಮೊಗದಲ್ಲಿ
ಪ್ರೇಮದಿ ನೆಲೆಸಿ ನಾಚಿ ಹೊರಳುತಿವೆ || ೩ ||

ಮಕರಂದವನು ಹೀರಲು ಬಯಸಿದ
ಕನ್ನೈದಿಲೆಯಲ್ಲಿ ಒಮ್ಮೆ ಹಾಗೆ ಕುಳಿತ
ಮತ್ತೆ ಮತ್ತೆ ಹಾರುವ ಮತ್ತೊಮ್ಮೆ ಕೂರುವ
ಹಾಗೆ ಮಾಡುತಿರುವ ಹೆಣ್ಣು ದುಂಬಿಯಂತೆ || ೪ ||

ಹೇ ಪನ್ನಗಶಯನನ ಪಾದಸೇವಿತೆ
ನಿನ್ನ ನೇತ್ರ ನನಗೆ ಸಮೃದ್ಧಿ ನೀಡಲಿ
ಎಂದೆಂದು ರೆಪ್ಪೆಯ ಮುಚ್ಚದ ಮುಕುಂದ
ನಿನ್ನ ದೃಷ್ಟಿಯಿಂದ ಭಾವಪರವಶನಾದ || ೫ ||

ಮುಕುಂದನು ನಿಮೀಲಿತ ನೇತ್ರನಾದ
ಅರಿತೆ ನೀನು ಪತಿಯ ಆನಂದವ
ಅರೆಬಿರಿದ ಕಂಗಳ ಓರೆನೋಟವ
ಸ್ಥಿರವಾಗಿಸಿದೆ ನೀ ಮುಕುಂದನಲ್ಲೇ || ೬ ||

ಹೇ ಕಮಲವಾಸಿನಿ ತಾಯೇ ನಿನ್ನ
ಕಣ್ಣೋಟದ ಸಾಲು ಕಲ್ಯಾಣ ನೀಡಲಿ
ಹೇ ಲಕ್ಷ್ಮಿದೇವಿಯೇ ಭಗವಂತನಿಗೂ
ಬಯಸಿದ್ದನ್ನು ನೀಡುವಂಥವಲ್ಲವೇ || ೭ ||

ಶೋಭಿಸುವ ಕೌಸ್ತುಭ ಮುತ್ತು ರತ್ನಗಳ
ಇಂದ್ರ ನೀಲಮಣಿಗಳ ಹಾರಗಳಿಂದ
ಒಪ್ಪುವ ಭಗವಂತ ಮಧುಸೂದನನ
ವಕ್ಷಸ್ಥಲದಿ ನೆಲೆಸಿದೆ ನಿನ್ನ ದೃಷ್ಟಿಹಾರ || ೮ ||

ಹೇ ದೇವಿ ತಾಯೇ ಭಾರ್ಗವ ಕನ್ನಿಕೆ
ಸಮಸ್ತ ಜಗತ್ತಿನ ತಾಯಿಯಾಗಿರುವೆ
ಮಹಾ ಶ್ರೇಷ್ಠವಾದ ನಿನ್ನ ದಿವ್ಯರೂಪವು
ಮಂಗಳವ ನೀಡಲೆಂದು ನಾ ಬೇಡುವೆ || ೯ ||

ಕೈಟಭ ಶತ್ರುವಾದ ಮಹಾವಿಷ್ಣುವಿನ
ಕಾಲ ಮೇಘದಂತೆ ಕಾಂತಿಯುಳ್ಳ
ಮನೋಹರವಾದ ಎದೆಯಲ್ಲಿ ಬೆಳಗುವೆ
ಕಾರ್ಮೋಡದಲ್ಲಿ ಮಿಂಚಿನ ಬಳ್ಳಿಯಂತೆ || ೧೦ ||

ಹೇ ಸಮುದ್ರಕನ್ನಿಕೆ ಅರ್ಧ ದೃಷ್ಟಿಯಾದರೂ
ಮೆಲ್ಲನೆ ನನ್ನ ಮೇಲೆ ಬೀಳಲಿ ತಾಯೇ
ದೃಷ್ಟಿಯಿಂದ ಮೊದಲ ಸ್ಥಾನ ಪಡೆದ ಮನ್ಮಥ
ಮಂಗಳಧಾಮ ಮಧುಸೂದನನಲ್ಲಿ || ೧೧ ||

ಹೇ ಇಂದಿರೆ ನಿನ್ನ ಅರೆಗಣ್ಣ ನೋಟವು
ಕ್ಷಣಕಾಲವಾದರೂ ನನ್ನ ಮೇಲಿರಲಿ
ದೇವತಾ ಶ್ರೇಷ್ಠರಿಗೆ ಪದವಿ ಐಶ್ವರ್ಯವಿತ್ತು
ಮುರಾರಿಗೆ ಅಧಿಕ ಆನಂದ ನೀಡಿದೆ || ೧೨ ||

ಹೇ ಕಮಲಾಸನೆ ದೃಷ್ಟಿಯು ಪುಷ್ಟಿ ನೀಡಲಿ
ಕಮಲ ಕೋಶದ ಕಾಂತಿಯು ನಿನ್ನ ದೃಷ್ಟಿ
ಅದರ ಪ್ರಭಾವದಿ ಒಳ್ಳೆಮನ ಉಳ್ಳವರಿಗೆ
ಸುಲಭದಿ ಸ್ವರ್ಗಸೌಖ್ಯ ಪ್ರಾಪ್ತವಾಗುವುದು || ೧೩ ||

ಹೇ ದೇವಿ ನಾರಾಯಣನ ಪ್ರಣಯಿನಿ
ದರಿದ್ರವೆಂಬ ಪಕ್ಷಿಯ ಮರಿ ನಾನು
ನಿನ್ನ ಕೃಪೆಯ ಗಾಳಿಯಲಿ ಐಶ್ವರ್ಯವೆಂಬ
ಮಳೆ ಸುರಿಸಿ ದುಷ್ಕರ್ಮದ ಧಗೆ ನೀಗಿಸು || ೧೪ ||

ಹೇ ವಾಗ್ದೇವಿ ಹೇ ಶಿವೆ ಶಾಕಂಬರಿ
ನಮಿಸುವೆ ಗರುಡಧ್ವಜ ವಿಷ್ಣುಪ್ರಿಯೆ
ಸೃಷ್ಟಿ-ಸ್ಥಿತಿ-ಪ್ರಳಯಗಳು ನಿನಗೆ ಕ್ರೀಡೆಯು
ತ್ರಿಭುವನ ಗುರು ಮಡದಿಯೇ ನಿನ್ನ ನಮಿಸುವೆ || ೧೫ ||

ಶುಭ ಕರ್ಮಫಲಕೆ ಪ್ರೇರಕ ಶೃತಿ ನೀನು
ಆನಂದವೀಯುವ ಗುಣಸಾಗರಿಯೇ
ಕಮಲಸ್ಥಿತೇ ಶಕ್ತಿಯೇ ಪುಷ್ಟಿರೂಪಿಣಿ
ಪುರುಷೋತ್ತಮನ ವಲ್ಲಭೆ ನಿನ್ನ ನಮಿಸುವೆ || ೧೬ ||

ಹೇ ದೇವಿ ತಾಯೇ ಕಮಲ ಮುಖಿಯೇ
ಕ್ಷೀರ ಸಮುದ್ರದಲ್ಲಿ ಉದ್ಭವಿಸಿದವಳೇ
ಚಂದ್ರ ಮತ್ತು ಅಮೃತದ ಜೊತೆಗೆ ಹುಟ್ಟಿದೆ
ಹೇ ನಾರಾಯಣವಲ್ಲಭೆ ನಿನ್ನ ನಮಿಸುವೆ || ೧೭ ||

ಹೇ ದೇವಿ ಸ್ವರ್ಣಕಮಲಪೀಠಸ್ಥಿತೆಯೇ
ಭೂಮಂಡಲ ನಾಯಕಿಯೇ ನಿನ್ನ ನಮಿಸುವೆ
ಸರ್ವದೇವ ಸರ್ವಜೀವ ದಯಾನಿಧಿಯೇ
ಶಾರ್ಙ್ಗ ಧನುರ್ಧರನ ಪತ್ನಿ ನಿನ್ನ ನಮಿಸುವೆ || ೧೮ ||

ಹೇ ತಾಯೇ ಮಹಾದೇವಿ ಭಾರ್ಗವಿಯೇ
ಶ್ರೀ ಮಹಾವಿಷ್ಣುವಿನ ಹೃದಯವಾಸಿನಿ
ಕಮಲವಾಸಿನಿಯಾದ ಲಕ್ಷ್ಮೀದೇವಿಯೇ
ದಾಮೋದರನ ಪತ್ನಿಯೇ ನಿನ್ನ ನಮಿಸುವೆ || ೧೯ ||

ಕಮಲದ ಕಣ್ಣಿನ ಪ್ರಕಾಶಮಾನಳೇ
ಭುವನವ ಸೃಷ್ಟಿಸಿದ ಮಹಿಮಾನ್ವಿತಳೇ
ಸರ್ವದೇವ ಸಂಪೂಜಿತೆ ಮಹಾತಾಯೇ
ನಂದ-ನಂದನನ ಪತ್ನಿ ನಿನ್ನ ನಮಿಸುವೆ || ೨೦ ||

ತಾಯೇ ಸರ್ವಮಾನ್ಯಳೇ ಕಮಲನಯನೆ ನಿನ್ನ
ನಮಿಸಿದರೆ ಸಂಪತ್ತು ಮತ್ತು ಆನಂದ
ಸಾಮ್ರಾಜ್ಯ ಪ್ರಾಪ್ತಿ ದುರಿತ ಪರಿಹಾರ
ಐಕ್ಯ ರೂಪ ನಮನದಿ ನಾ ಮಗ್ನನಾಗಲಿ || ೨೧ ||

ಹೇ ತಾಯೇ ಮುರಹರನ ಹೃದಯೇಶ್ವರಿ
ದೇವಿ ನಿನ್ನ ಕಟಾಕ್ಷದ ಉಪಾಸನೆಯು
ಸಕಲೈಶ್ವರ್ಯ ನೀಡುವುದು ಸೇವಕಗೆ
ಕಾಯಾ-ವಾಚಾ-ಮನಸಾ ನಿನ್ನ ಭಜಿಸುವೆ || ೨೨ ||

ಹೇ ಕಮಲವಾಸಿನಿ ಕಮಲಧಾರಿಣಿ
ಶುಭ್ರವಸ್ತ್ರ ಗಂಧ ಹೂಮಾಲೆ ಶೋಭಿತೆ
ಪೂಜ್ಯಳೇ ಹರಿಪ್ರಿಯಳೇ ಮನೋಜ್ಞಳೇ
ಪ್ರಸನ್ನಳಾಗು ತ್ರೈಲೋಕ್ಯ ಸಂಪತ್ಪ್ರದೆ || ೨೩ ||

ದಿಗ್ಗಜಗಳು ಚಿನ್ನದ ಕಲಶದಿ ಸುರಿದ
ಗಂಗೆಯ ದಿವ್ಯ ಜಲದಿ ತೊಯ್ದ ತಾಯಿಗೆ
ಅಮೃತ ಸಾಗರದ ಕುವರಿಗೆ ನಮಿಸುವೆ
ತ್ರಿಭುವನದೊಡೆಯನ ಪತ್ನಿಗೆ ನಮಿಸುವೆ || ೨೪ ||

ಹೇ ಕಮಲನಯನನ ವಲ್ಲಭೆಯೆ ನಿನ್ನ
ಕರುಣಾಕಟಾಕ್ಷದ ಮಹಾಪೂರದಲಿ
ಮೀಯಲು ಕಾತರಿಸುವ ನಿನ್ನ ಭಕ್ತರಲ್ಲಿ
ಮೊದಲು ನನಗೆ ದಯವನ್ನು ತೋರು ತಾಯೇ || ೨೫ ||

ಮೂರ್ಜಗದ ಜನನಿ ವೇದಮಯಿ ರಮೆಯ
ಈ ದಿವ್ಯ ಸ್ತುತಿಗಳನ್ನು ಪಠಿಸುವವರು
ಗುಣಸಂಪನ್ನರಾಗಿ ಐಶ್ವರ್ಯ ಪಡೆದು
ಭೂಲೋಕದಲ್ಲಿ ಗೌರವದಿ ಸುಖಿಸುವರು || ೨೬ ||