ನವಗ್ರಹ ಸ್ತುತಿ
ಸೂರ್ಯ
ಗ್ರಹಣಾಮಾದಿರಾದಿತ್ಯ ಅರುಣನ ಸಾರಥ್ಯ
ರಥದಲ್ಲಿ ಕಟ್ಟಿರುವೆ ಸಪ್ತ ಅಶ್ವಗಳ
ಜ್ಞಾನವನು ಸೌಖ್ಯವನು ಪಾಲಿಸುವ ದೇವನೆ
ಅದಿತಿಸುತ ಸೂರ್ಯನೆ ನೀ ಕೃಪೆಯ ತೋರೋ || ೧ ||
ಗುಂಗುರು ಕೇಶದ ಆಕರ್ಷಕ ರೂಪನೆ
ಗಂಭೀರ ನಿಲುವಿನ ಬುದ್ಧಿಚಾತುರ್ಯನೆ
ಚೆಲುವಿನ ಕಣ್ಣುಗಳ ಕೆಂಪುಡುಗೆ ಸುಂದರನೆ
ಆದ್ಯಗ್ರಹ ಕಿರಣನೆ ನೀ ಕೃಪೆಯ ತೋರೋ || ೨ ||
ಅತ್ಯಂತ ತೇಜಸ್ವಿ ದಿವಾಕರನೆ ನಿನ್ನ
ಭಕ್ತಿಯಲಿ ಸ್ಮರಿಸಿದರೆ ಕ್ಲೇಶ ನಿವಾರಿಸುವೆ
ಜಗಕೆಲ್ಲ ನೀನೇ ಬೆಳಕನ್ನು ನೀಡುವೆ
ಹೇ ಸೂರ್ಯನಾರಾಯಣನೆ ನೀ ಕೃಪೆಯ ತೋರೋ || ೩ ||
ಚಂದ್ರ
ಅತ್ರಿನೇತ್ರ ಸಮುದ್ಭವ ಸೌಮ್ಯಸುಂದರರೂಪಿ
ಮಧುರತೆಯ ಮಾತಿನ ಸಾತ್ವಿಕ ಸ್ನೇಹಭಾವಿ
ಶ್ವೇತವಸ್ತ್ರಧಾರಿ ತಂಪನ್ನೀಯುವವನೆ
ನಕ್ಷತ್ರಗಳ ಪತಿ ಚಂದ್ರನೆ ನೀ ಕೃಪೆಯ ತೋರೋ || ೪ ||
ಸಮುದ್ರಮಥನದಲಿ ಉದ್ಭವಿಸಿದ ನಿನ್ನ
ಶಿವ ತನ್ನ ಜಟೆಲಿರಿಸಿ ಚಂದ್ರಶೇಖರನಾದ
ಅಮೃತಪಾನ ಸಮಯದಲಿ ರಾಹುವನು ವಿಷ್ಣುವಿಗೆ
ತೋರಿದ ಸೋಮನೇ ನೀ ಕೃಪೆಯ ತೋರೋ || ೫ ||
ಶಶಿ ನಿನ್ನ ಕೈಗಳಲಿ ಗದೆಯು ಅಭಯಮುದ್ರೆಯು
ಹದಿನಾರು ಕಲೆಗಳ ವನಸ್ಪತಿಯ ರಕ್ಷಕನೆ
ಜಗದೀಶ ಪರಶಿವನು ನಿನ್ನ ಆರಾಧ್ಯ ದೈವ
ಶೋಭಾಯಮಾನನೆ ನೀ ಕೃಪೆಯ ತೋರೋ || ೬ ||
ಮಂಗಳ
ಭೂದೇವಿ ಗರ್ಭದಲಿ ಜನಿಸಿದ ಮಂಗಳನೆ
ಮಿಂಚಿನಂತೆ ಹೊಳೆವ ಚಿನ್ನದಂತಿರುವ
ಪಿಂಗಳ ಕಣ್ಣುಗಳ ಕಾಂತಿಯುಕ್ತ ವದನನೆ
ಪ್ರತಿಭಾಪೂರ್ಣ ಕುಜನೆ ನೀ ಕೃಪೆಯ ತೋರೋ || ೭ ||
ಕೆಂಪು ಬಣ್ಣದ ಮೈಯ್ಯ ಷೋಡಶ ಪ್ರಾಯನೆ
ಕೆಂಪು ವಸ್ತ್ರವನು ಮಾಲೆಯನು ಧರಿಸಿರುವೆ
ಚತುರ್ಭುಜ ಭೌಮನೆ ಖಡ್ಗಶೂಲಧಾರಿ
ಶೌರ್ಯನೆ ಅಂಗಾರಕನೆ ನೀ ಕೃಪೆಯ ತೋರೋ || ೮ ||
ಕ್ಷಿಪ್ರ ಜ್ಞಾನವಂತನೆ ಸಾಹಸ ಪ್ರಿಯನೆ
ಚಂಚಲ ಬುದ್ಧಿಯ ತಾಮಸಗುಣನೆ
ಶಕ್ತ್ಯಾಯುಧಧಾರಿ ಮಹಾಸಾಮರ್ಥ್ಯನೆ
ಮಂಗಲರೂಪಿ ಗ್ರಹನೆ ನೀ ಕೃಪೆಯ ತೋರೋ || ೯ ||
ಬುಧ
ತಾರೆ ಚಂದ್ರರ ಕುವರ ಸೌಮ್ಯ ಗುಣ ಸ್ವಭಾವಿ
ಗರಿಕೆಯ ದಳದಂತೆ ಹಸಿರಿನ ಮೈ ಬಣ್ಣ
ವಿಶಾಲ ಕಣ್ಣುಗಳ ಮಧ್ಯಮ ರೂಪನೆ
ಆನಂದ ಪ್ರದ ಸೌಮ್ಯನೆ ನೀ ಕೃಪೆಯ ತೋರೋ || ೧೦ ||
ಅಸಾಧಾರಣ ಜ್ಞಾನಿ ಸ್ವಚ್ಛಮಾತಿನ ನಿಪುಣ
ಖಡ್ಗ ಗುರಾಣಿಯನು ಗದೆಯನ್ನು ಹಿಡಿದಿರುವೆ
ವರದ ಮುದ್ರೆಯನು ಧರಿಸಿರುವ ಗ್ರಹನೆ
ಸಿಂಹವಾಹನ ಬುಧನೆ ನೀ ಕೃಪೆಯ ತೋರೋ || ೧೧ ||
ಮಹಾಬುದ್ಧಿಶಾಲಿಯೆ ಸದಾಸಂತೋಷನೆ
ಸಂಸಾರಸಾಗರದ ದುಃಖದುಮ್ಮಾನಗಳ
ಪರಿಹರಿಸುವವನೆ ಶಶಿ ಮಿತ್ರಗ್ರಹನೆ
ಸ್ಮರಿಸುವರ ಫಲಪ್ರದನೆ ನೀ ಕೃಪೆಯ ತೋರೋ || ೧೨ ||
ಗುರು
ಆಂಗೀರಸ ಋಷಿಯ ಪುತ್ರ ವಿನಯಶೀಲನೆ
ಬಂಗಾರದಂತೆ ಹೊಳೆವ ಮೈಬಣ್ಣ
ಪೀತವಸ್ತ್ರಧಾರಿ ಧಾರ್ಮಿಕ ತತ್ಪರನೆ
ವೇದವಿದ್ಯಾ ಪ್ರವೀಣನೆ ನೀ ಕೃಪೆಯ ತೋರೋ || ೧೩ ||
ದೇವತೆಗಳ ಋಷಿಗಳ ಗುರುವು ಆಗಿರುವೆ
ಜಪಮಾಲೆ ವರಮುದ್ರೆ ದಂಡ ಕಮಂಡಲವ
ಧರಿಸಿರುವ ವರಪ್ರದನೆ ತ್ರಿಲೋಕವಂದ್ಯನೆ
ಬೃಹಸ್ಪತಾಚಾರ್ಯನೆ ನೀ ಕೃಪೆಯ ತೋರೋ || ೧೪ ||
ಮಹಾಜ್ಞಾನಿ ಗುರುವೇ ಎಲ್ಲರಲು ಶ್ರೇಷ್ಠನೆ
ಅಭೀಷ್ಟಪ್ರದನೆ ಶ್ರದ್ಧೆಯಲಿ ನಿನ್ನ
ನಿರತ ಧ್ಯಾನಿಸಿದರೆ ಮುಕ್ತಿಯನು ನೀಡುವೆ
ಪರಮ ಗುರುವರ್ಯನೆ ನೀ ಕೃಪೆಯ ತೋರೋ || ೧೫ ||
ಶುಕ್ರ
ಭೃಗು ಮಹರ್ಷಿ ಸುತನೆ ಶಾಸ್ತ್ರಾರ್ಥಕೋವಿದನೆ
ದಿವ್ಯ ಶರೀರನೆ ಮಹಾಸಾಮರ್ಥ್ಯನೆ
ಆಕರ್ಷಕ ಕಾಂತಿಯ ಸುಂದರ ವದನನೆ
ಏಕನೇತ್ರಜನೆ ಶುಕ್ರನೆ ನೀ ಕೃಪೆಯ ತೋರೋ || ೧೬ ||
ರಾಜಸ ಪ್ರಕೃತಿಯ ಶ್ವೇತವಸ್ತ್ರಧಾರಿ
ದಂಡ ಕಮಂಡಲವ ಹಿಡಿದಿರುವ ತಪಸ್ವಿ
ಜಪಮಾಲೆ ಧರಿಸಿ ವರಮುದ್ರೆ ತೋರುವ
ಸರ್ವಶಾಸ್ತ್ರ ಬಲ್ಲವನೇ ನೀ ಕೃಪೆಯ ತೋರೋ || ೧೭ ||
ದೈತ್ಯರ ರಕ್ಷಣೆಗೆ ಬದ್ಧನಾದ ಬ್ರಾಹ್ಮಣನೆ
ಸಹಸ್ರಾರು ವರ್ಷ ತಪಸ್ಸನ್ನಾಚರಿಸಿ
ಸಂಜೀವಿನಿ ವಿದ್ಯೆಯ ಪಡೆದ ಮಹಾತ್ಮನೆ
ದೈತ್ಯರ ಪರಮಗುರುವೇ ನೀ ಕೃಪೆಯ ತೋರೋ || ೧೮ ||
ಶನಿ
ಛಾಯಾಸೂರ್ಯರ ಪುತ್ರ ನೀಲಕಾಂತಿಯ ವರ್ಣ
ಹಸಿರು ತೀಕ್ಷ್ಣಕಣ್ಣಿನ ಮಹಾತೇಜಸ್ವಿ
ಕಠೋರ ಮಾತಿನ ದಿಟ್ಟತನ ಸ್ವಭಾವಿ
ಮಂದಗತಿ ಸಂಚಾರನೆ ನೀ ಕೃಪೆಯ ತೋರೋ || ೧೯ ||
ಗೃಧ್ರವಾಹನನೆ ಬಿಲ್ಲುಬಾಣಧಾರಿ
ತಾಮಸ ಪ್ರಕೃತಿಯ ಅತಿಯಾದ ಕೋಪಿ
ನಾಸ್ತಿಕರ ಮದವನ್ನು ಮಣಿಸುವ ಗ್ರಹನೆ
ಸ್ಥಿರಭಾವ ಶನೈಶ್ಚರನೆ ನೀ ಕೃಪೆಯ ತೋರೋ || ೨೦ ||
ದೇವದೇವತೆಗಳನು ರಾಕ್ಷಸವರ್ಗವನು
ನಕ್ಷತ್ರಗ್ರಹವನು ಮನುಜಕುಲವನು
ಬಿಡದೆ ಸಕಲರಿಗೂ ಕಷ್ಟ-ಸುಖ ಮಹತ್ವವ
ತೋರುವ ಮಾರ್ಗದರ್ಶಕನೆ ನೀ ಕೃಪೆಯ ತೋರೋ || ೨೧ ||
ರಾಹು
ದೇವತೆಗಳ ಜೊತೆಗೆ ನೀನು ಅಮೃತವ ಕುಡಿದೆ
ವಿಷ್ಣು ತನ್ನ ಚಕ್ರದಿ ನಿನ್ನ ಶಿರವ ತರಿದ
ಬ್ರಹ್ಮನಿಂದ ದೇಹಕ್ಕೆ ಸರ್ಪದ ಶಿರವು ಸೇರಿ
ಗ್ರಹಸ್ಥಾನ ಪಡೆದವನೆ ನೀ ಕೃಪೆಯ ತೋರೋ || ೨೨ ||
ದೀರ್ಘಶರೀರನೆ ಧೂಮ್ರವರ್ಣನೆ
ವಿಷಕಾರುವ ಮಾತಿನ ಛಾಯಾಗ್ರಹ ನೀನೇ
ಕಪ್ಪು ಬಣ್ಣದುಡುಗೆಯ ಸಿಂಹವಾಹನನೆ
ಭಯಂಕರನೆ ರಾಹುವೆ ನೀ ಕೃಪೆಯ ತೋರೋ || ೨೩ ||
ಹುಣ್ಣಿಮೆ ಅಮಾವಾಸ್ಯೆ ನೀನಿರುವ ಸ್ಥಾನಕೆ
ಚಂದ್ರನೂ ಸೂರ್ಯನೂ ಬಂದರೆ ನೀ ಬಿಡದೆ
ದೈತ್ಯಮನಸ್ಥಿತಿಯಲಿ ನುಂಗಿ ತೃಪ್ತಿ ಪಡುವೆ
ಗ್ರಹಣ ನಿರ್ಮಿಸುವವನೆ ನೀ ಕೃಪೆಯ ತೋರೋ || ೨೪ ||
ಕೇತು
ವಿಷ್ಣುಚಕ್ರದಿ ನಿನ್ನ ಶಿರವ ಛೇದಿಸಿದಾಗ
ಬೇರ್ಪಟ್ಟ ಶಿರಕೆ ಚತುರ್ಮುಖ ಬ್ರಹ್ಮನು
ಸರ್ಪದ ದೇಹವನು ತಂದು ಜೋಡಿಸಿದಾಗ
ಗ್ರಹಸ್ಥಾನ ಪಡೆದವನೆ ನೀ ಕೃಪೆಯ ತೋರೋ || ೨೫ ||
ಕೆಂಪಾದ ಕಣ್ಣುಗಳ ಚಿತ್ರವರ್ಣದವನೆ
ವಿಚಿತ್ರಾಯುಧಧಾರಿ ದೀರ್ಘಶರೀರನೆ
ಘಾತಿಸುವ ಮಾತಿನ ಕ್ರೂರ ಸ್ವಭಾವಿಯೆ
ಉರಗ ಕಾಯ ಕೇತುವೇ ನೀ ಕೃಪೆಯ ತೋರೋ || ೨೬ ||
ಈಶಾನ್ಯ ದಿಕ್ಕಿನಲಿ ನೀನು ಸಂಚರಿಸುವೆ
ತಮೋಗುಣದವನೆ ಉಗ್ರ ಸ್ವರೂಪಿಯೆ
ವೇದಾಂತ ಪ್ರಚಾರಕನೆ ಮಹಾತಪಸ್ವಿಯೆ
ಜ್ಞಾನ ಮೋಕ್ಷಕಾರಕನೆ ನೀ ಕೃಪೆಯ ತೋರೋ || ೨೭ ||
ಶ್ರೀ ದೇವೀ ಮಹಾತ್ಮೆ
15 Songs