ಶನೈಶ್ಚರ ಸ್ತುತಿ

ರಾಗ : ಮೋಹನ 
ತಾಳ : ಆದಿ (ಮಿಶ್ರ ನಡೆ)

ಭಕ್ತವಂದ್ಯನೆ ಶನೈಶ್ಚರನೆ
ನಿನ್ನ ಸ್ಮರಿಸುತ ನಮಿಸುವೆ
ಛಾಯಾ ಸೂರ್ಯನ ಪುತ್ರನೆ
ಎನ್ನ ಕಾಯೋ ದೇವನೆ || ೧ ||

ಸತ್ಯಧರ್ಮವ ನಿರತ ಪಾಲಿಸಿ
ನೀತಿ ನಿಯಮ ಆದರಿಸಿದೆ
ಕಷ್ಟಸುಖದ ಅರಿವು ಮೂಡಿಸಿ
ನಾಸ್ತಿಕರ ಮದವ ಮಣಿಸಿದೆ || ೨ ||

ದ್ವಾದಶಾದಿ ರಾಶಿಯೊಳಗೆ
ಬಿಡದೆ ನೀ ಸಂಚರಿಸುವೆ
ನಿನ್ನ ಪ್ರವೇಶದ ರಾಶಿಯವರು
ಭಕ್ತಿಯಿಂದ ನೆನೆವರು || ೩ ||

ದೇವಾದಿ ದೇವತೆಗಳಿಗೂ
ನಿನ್ನ ಸ್ವಭಾವ ತೋರಿದೆ
ನಕ್ಷತ್ರಗ್ರಹ ತಾರಾಧಿಗಳಿಗೂ
ನಿನ್ನ ಪ್ರಭಾವ ಬೀರಿದೆ || ೪ ||

ಯಮನೆ ಅಗ್ರಜ ತೀಕ್ಷ್ಣ ನೇತ್ರಜ
ನಿನ್ನ ನಂಬಿದ ಮನುಜ
ನಂಬಿ ಬಂದಿಹ ಮನುಜರನ್ನು
ಬಿಡದೆ ಕಾಯುವ ದೇವನೇ || ೫ ||

ಅಜ್ಞಾನಿಗೆ ಜ್ಞಾನ ನೀಡಿ
ಸುಜ್ಞಾನವಂತನ ಮಾಡುವೆ
ಭವ್ಯ ಗುಣಗಳ ದಿವ್ಯ ಪ್ರಭೆಗಳ
ಮೆರಗುಗಳನು ನೀಡುವೆ || ೬ ||

ನಿನ್ನ ವಾಹನವಾದ ಕಾಗೆಯು
ಪಿತೃಮುಕ್ತಿಗೆ ದಾರಿಯು
ಸರ್ವಜನರು ನಿನ್ನ ಸ್ಮರಿಸಿ
ಪಡೆವರು ಮಹಾ ಪುಣ್ಯವು || ೭ ||

ಭಕ್ತಿಗೊಲಿವನೆ ಭಕ್ತಪಾಲನೆ
ಸರ್ವಕಷ್ಟ ಪರಿಹಾರನೆ
ಜಯವು ಜಯವು ಛಾಯಾಪುತ್ರನೆ
ಶುಭವು ಶುಭವು ಶನೈಶ್ಚರನೇ || ೮ ||