ಸಿಗಂದೂರಾಂಬೆ ಸ್ತುತಿ

ರಾಗ : ಬೆಹಾಗ್ 
ತಾಳ : ಆದಿ

ದೇವೀ ನೀ ಪಾಲಿಸಮ್ಮಾ ಪ್ರಸಾದವ
ದೇವೀ ನೀ ಪಾಲಿಸಮ್ಮಾ… || ಪ ||

ದೇವೀ ನೀ ಪಾಲಿಸು ಪರಮ ಪ್ರಸಾದವ
ದೇವೀ ನೀ ಪಾಲಿಸಮ್ಮಾ… || ಅ.ಪ ||

ಶ್ರೀಕ್ಷೇತ್ರ ಸಿಗಂದೂರಲಿ ನೆಲೆಸಿರುವೆ
ನಿನ್ನ ಭಕ್ತರ ಪೊರೆಯುತಲಿ
ದೃಢಭಕ್ತಿಯಲಿ ಬೇಡುವೆ ನಿನ್ನಾ
ಪರಮಪ್ರಸಾದವ ನೀ ನೀಡಮ್ಮಾ || ೧ ||

ಎನ್ನ ಪ್ರಾರ್ಥನೆಯಾ ಆಲಿಸಿ
ಕರುಣಿಸಮ್ಮಾ ಕಾಮನೆಯ
ನಂಬಿದೆ ನಿನ್ನಾ ಕಾಪಾಡಮ್ಮಾ
ಪರಮಪ್ರಸಾದವ ನೀ ನೀಡಮ್ಮಾ || ೨ ||

ವಿಧವಿಧ ಹೂಗಳನು ತಂದು
ನೇಯ್ದು ಮಾಲೆಗಳ ಮಾಡಿ
ಸುಂದರ ವದನೆಯೆ ಶೃಂಗರಿಸುವೆನು
ಪರಮಪ್ರಸಾದವ ನೀ ನೀಡಮ್ಮಾ || ೩ ||

ಬಗೆಬಗೆ ಭಕ್ಷಗಳು ನಿನಗೆ
ಸಕಲ ಫಲಗಳ ನೈವೇದ್ಯವು
ಆರತಿ ಬೆಳಗಿ ನಮಿಸುವೆ ತಾಯೆ
ಪರಮಪ್ರಸಾದವ ನೀ ನೀಡಮ್ಮಾ || ೪ ||

ಭಜಿಸುವ ಭಕ್ತರನು ಭರದಲಿ
ನೀನೇ ಧಾವಿಸಿ ರಕ್ಷಿಸುವೆ
ಭೂಮಂಡಲದ ಮಹಾಶಕ್ತಿಯೆ
ಪರಮಪ್ರಸಾದವ ನೀ ನೀಡಮ್ಮಾ || ೫ ||

ರಾಜಶೇಖರನ ಪ್ರಿಯೇ ಈಶ್ವರಿ
ರಾರಾಜಿಸುವ ರಾಜೇಶ್ವರಿ
ರಾಜವದನೇ ಮಾಡ್ವೆ ಭಜನೆ
ಪರಮಪ್ರಸಾದವ ನೀ ನೀಡಮ್ಮಾ || ೬ ||

ಸುಗುಣೆ ಸದ್ಗುಣೆಯ ರೂಪಿಣಿ
ಜಗದೋದ್ಧಾರಿಣಿಯೆ ಕಲ್ಯಾಣಿ
ಅಖಿಲಗುಣಮಣಿ ನವಶಕ್ತಿರೂಪಿಣಿ
ಪರಮಪ್ರಸಾದವ ನೀ ನೀಡಮ್ಮಾ || ೭ ||

ಶಿವಶಕ್ತಿ ಭಗವತಿಯೇ ಪಾರ್ವತಿ
ಸದ್ಭಕ್ತರ ಶಕ್ತಿಯೇ ಕಾಯೇ
ಜ್ಞಾನಪ್ರದೆಯೇ ಮಹಾಸುಜ್ಞಾನಿಯೆ
ಪರಮಪ್ರಸಾದವ ನೀ ನೀಡಮ್ಮಾ || ೮ ||

ಅಂಬಾಪರಮೇಶ್ವರಿ ಮಹೇಶ್ವರಿ
ಅಖಿಲಾಂಡೇಶ್ವರಿಯೇ ಗೌರಿ
ಭುವನೇಶ್ವರಿಯೆ ಚಾಮುಂಡೇಶ್ವರಿ
ಪರಮಪ್ರಸಾದವ ನೀ ನೀಡಮ್ಮಾ || ೯ ||

ದುಷ್ಟರನಾಶಿನಿಯೇ ಶಂಕರಿ
ಶಿಷ್ಠರ ಪಾಲಿನಿಯೇ ತಾಯೆ
ಬ್ರಹ್ಮಾಂಡದ ಮಹಾಮಾತೆಯೆ
ಪರಮಪ್ರಸಾದವ ನೀ ನೀಡಮ್ಮಾ || ೧೦ ||

ಕರುಣಾವಾರಿಧಿಯೇ ಅಂಬೆ
ಶ್ರೀದೇವಿಯೇ ಜಗದಾಂಬೆ
ಶ್ರೀದುರ್ಗಾಂಬೆ ಶ್ರೀವರದಾಂಬೆ
ಪರಮಪ್ರಸಾದವ ನೀ ನೀಡಮ್ಮಾ || ೧೧ ||

ಜಯ ಶುಭದಾಯಿನಿಯೇ ಜನನಿ
ಭಕ್ತರ ಪಾಲಿನಿಯೇ ಭವಾನಿ
ಮಂಗಳದಾಯಿನಿ ಮೋಕ್ಷಪ್ರದಾಯಿನಿ
ಪರಮಪ್ರಸಾದವ ನೀ ನೀಡಮ್ಮಾ || ೧೨ ||