ಶ್ರೀ ಸಿಗಂದೂರೇಶ್ವರಿ ಮಹಿಮೆ
ರಾಗ – ದೇಶಿತೋಡಿ
ತಾಳ- ಏಕತಾಳ
ಸಿಗಂದೂರಲೀ ನೆಲೆಯಾಗಿರುವ ಜಗನ್ಮಾತೆಯ ಮುಕ್ತಿಯದಾತೆಯ
ಮಹಿಮೆಯ ನಾನು ಪಾಡುವೇ ||ಪ||
ಮಲೆಯ ನಾಡಿನ ಗುಡ್ಡಗಾಡಲಿ
ಶರಾವತಿ ನದಿಯ ದಡದ ಬುಡದಲಿ
ಹಸಿರು ಹಸಿರಿನಾ ಬನದ ಸಿರಿಯಲಿ
ತಂಪು ತಂಪಿನಾ ಬೆಟ್ಟದ ತಗ್ಗಲಿ
ಪುಣ್ಯ ಭೂಮಿಯು ಈ ಊರೂ
ತಾಯಿ ನೆಲೆಸಿದ ಸಿಗಂದೂರು ||೧|||
ಅನಾದಿಯಲಿ ನೀ ಮೂಲದಲಿ
ನಿನ್ನಯ ಭಕ್ತನ ಕನಸಿನಲಿ
ದರ್ಶನವಾಗಿ ಪೇಳುತಲಿ
ಪೂಜಿಸು ಸೀಗೇ ಕಣಿಯಲ್ಲೀ
ಅನುಜ್ಞೆಯನಿತ್ತೆ ಸುಜ್ಞಾನನಿಗೆ
ನಿಷ್ಟಾವಂತ ಭಕ್ತನಿಗೆ ||೨||
ಶ್ರದ್ಧಾ ಭಕ್ತಿಲಿ ಜ್ಞಾನವಂತನು
ನಿನ್ನಾಜ್ಞೆಯನ್ನು ಪರಿಪಾಲಿಸಿದನು
ಅಂದೇ ಧ್ಯಾನಿಸಿ ನಿನ್ನನ್ನೂ
ತಂದಿಟ್ಟ ಭಕ್ತನು ಶಿಲೆಯನ್ನೂ
ಶಿಲೆಯಲಿ ಪ್ರವೇಶ ಮಾಡಿದೆ
ಭಕ್ತರ ಪೊರೆಯಲು ಮೂಡಿದೆ ||೩||
ನೀನು ಮೆಚ್ಚಿದಾ ಭಕ್ತನಿಂದಾ
ನಿನ್ನಯ ಪೂಜೆಗೆ ಅರ್ಚಕ ಬಂದ
ತಾಯೇ ನಿನ್ನನು ಏಕಾಗ್ರತೆಯಿಂದ
ಪೂಜೆ ಮಾಡಿದಾ ಭಕ್ತಿಯಿಂದಾ
ಶ್ರದ್ಧಾ ಭಕ್ತಿಗೆ ಮೆಚ್ಚಿದೆ
ಭಕ್ತಗೆ ಪ್ರಸಾದ ನೀಡಿದೆ ||೪||
ದಿನವೂ ತಪ್ಪದೆ ಪೂಜೆ ನಡೆಯಲು
ಭಕ್ತರನೇಕರು ಏಲ್ಲೆಡೆಯಿಂದಲು
ಬಂದು ಸೇರ್ದರು ನಿನ್ನ ಕಾಣಲು
ತಾಯೇ ನಿನ್ನನು ಆರಾಧಿಸಲು
ಎಲ್ಲರ ಮನವನು ನೀ ತಿಳಿದೇ
ಅಮ್ಮಾ ನೆಮ್ಮದಿ ನೀನಾದೆ |||೫||
ಸಂವತ್ಸರದ ಧನುರ್ಮಾಸದಲಿ
ಮಕರ ಸಂಕ್ರಾಂತಿ ಸಮಯದಲಿ
ಜಾತ್ರೆಯು ನಡೆವುದು ವೈಭವದಲ್ಲಿ
ಅನ್ನ ಸಂತರ್ಪಣೆ ನಡೆವುದು ಇಲ್ಲಿ
ಅರಣ್ಯದೇವತೆ ನೀನಮ್ಮಾ
ತೃಪ್ತಿಯ ನೀಡಿದೆ ಓ ಅಮ್ಮಾ |||೬||
ನಂಬಿದವರಿಗೆ ಸುಲಭದಿ ಮಣಿದೆ
ಶ್ರದ್ಧಾಭಕ್ತರ ಮನದಲಿ ಉಳಿದೆ
ತನುಮನ ಅರ್ಪಿಸಲು ನೀ ಒಲಿದೆ
ಎಲ್ಲರ ಬೇಡಿಕೆಗಳ ಈಡೇರಿಸಿದೆ
ತಾಯೆ ನಿನ್ನ ಮಹಿಮೆಯೂ
ಭಕ್ತರಿಗದುವೆ ಹಿರಿಮೆಯೂ ||೭|||
ಅಜ್ಞಾನದಲಿ ಕೆಲವು ದುಷ್ಟರು
ತಾಯೇ ನಿನ್ನನು ಮರೆತು ಮೆರೆದರು
ಭಕ್ತರನೇಕರ ಮನನೋಯಿಸಿದರು
ತಮ್ಮ ನಾಶಕೇ ಕಾರಣರಾದರು
ನೀನೇ ದುಷ್ಟರ ಶಿಕ್ಷಿಸಿದೆ
ತಾಯೇ ಶಿಷ್ಟರ ರಕ್ಷಿಸಿದೆ ||೮||
ಮಕ್ಕಳ ಭಾಗ್ಯವು ಇಲ್ಲದಿರುವವರು
ಬಂದು ನಿನ್ನ ಪೂಜೆಯಗೈದರು
ಧ್ಯಾನ ಮಾಡಿ ಹರಕೆಯ ಹೊತ್ತರು
ಮಕ್ಕಳ ಭಾಗ್ಯ ಬೇಡಿದರು
ಹರಕೆಯಂತೆ ವರವಿತ್ತೇ
ಸಂತಾನಭಾಗ್ಯ ನೀನಿತ್ತೇ ||೯||
ಏನೂ ಇಲ್ಲದ ಕಡುಬಡವಾ
ನಂಬಿ ಬಂದನು ನಿನ್ನ ಪಾದವಾ
ನಿನ್ನಲ್ಲಿರಿಸಿದ ತನ್ನಯ ಮನವಾ
ಶ್ರದ್ಧೆಯಿಂದ ಮಾಡಿದ ಧ್ಯಾನವಾ
ಬಡವಗೆ ದಯವನು ತೋರಿದೆ
ಸಕಲಾಭೀಷ್ಟವ ನೀಡಿದೆ ||೧೦||
ಹರಿದು ಬಂದು ಶರಾವತಿ ನಿಲ್ಲಲು
ನಿನ್ನಯ ಸ್ಥಾನವು ಜಲಮಯವಾಗಲು
ಆಗಲೆ ಇಲ್ಲವು ಪೂಜೆಯ ಮಾಡಲು
ಭಕ್ತರು ಚಿಂತಾಕ್ರಾಂತರಾಗಲೂ
ನಿತ್ಯ ಪೂಜೆಯೂ ತಪ್ಪಿ ಹೋಯಿತು
ಇರುವ ನೆಮ್ಮದಿ ದೂರವಾಯಿತು ||೧೧||
ಆದರು ಕೊನೆಗೂ ಯೋಚಿಸೀ
ಮೂಲ ಸ್ಥಾನದಿಂದ ನಿನ್ನ ಎಬ್ಬಿಸಿ
ಸುವ್ಯವಸ್ಥಿತದಿ ಪ್ರತಿಷ್ಠಾಪಿಸಿ
ನಿತ್ಯ ಸೇವೆಯನು ಮಾಡಲಿಚ್ಛಿಸಿ
ಭಕ್ತರು ಯತ್ನವ ಮಾಡಿದರು
ತಾಯೇ ನಿನ್ನಲ್ಲಿ ಬೇಡಿದರು ||೧೨||
ಮೂರು ದಿನಗಳು ಪೂಜೆ ನಡೆಯಿತು
ಸತತ ಪ್ರಯತ್ನವು ಸಫಲವಾಯಿತು
ಭಕ್ತ ವೃಂದವು ಸಂತಸಗೊಂಡಿತು
ಈ ಸ್ಥಳ ನಿನ್ನ ಆಲಯವಾಯಿತು
ಶ್ರೀ ಚೌಡೇಶ್ವರಿ ನೀನಾದೆ
ಸಿಗಂದೂರೇಶ್ವರಿ ನೀನಾದೆ ||೧೩||
ನಿನ್ನಯ ವದನವು ನೋಡಲು ಪುಣ್ಯವು
ನಿನ್ನ ನಾಮ ಜಪಿಸಲು ಪಾವನ ಜನ್ಮವು
ನಿನ್ನಯ ಕರುಣೆಯ ಭಾವದ ಬಂಧವು
ನಮಗೆ ಎಂದೂ ಮರೆಯದ ಸ್ಪಂದವು
ಜಯ ಮಂಗಲವೂ ಶ್ರೀದೇವಿ
ಶುಭ ಮಂಗಲವೂ ಶ್ರೀದೇವಿ ||೧೪||
ಶ್ರೀ ದೇವೀ ಮಹಾತ್ಮೆ
15 Songs