ಶ್ರೀದೇವಿಯ ಸನ್ನಿಧಿ

ರಾಗ – ಸಂಕ್ರಂದನ ಪ್ರಿಯ
ತಾಳ – ಆದಿತಾಳ

ಭಕ್ತರ ಪೊರೆಯಲು ಸಿಗಂದೂರಲಿ | ನೆಲೆಸಿಹ ಭಗವತಿಯೂ ||
ನಮ್ಮೀ ದೇವತೆಯೂ | ತಾಯೇ ನಿನ್ನಯ ಮಹಾ ಮಹಿಮೆಯಾ ||
ವರ್ಣಿಸಲಸದಳವೂ | ವರ್ಣಿಸಲಸದಳವೂ ||೧||

ಮಲೆಯ ನಾಡಿನ ಗಿರಿಗಳ ನಡುವಲಿ
ಹಸಿರು ಕಾಡಿನ ಅಂದದ ಮೆರಗಲಿ
ಗುಡ್ಡಾ ಗಾಡಿನ ತಗ್ಗಿನ ತಂಪಲಿ
ಶ್ರೀ ಚೌಡೇಶ್ವರಿಯಾ ದೇವಿಯ ಆಲಯವೂ ||೧||

ನಿತ್ಯವು ಬರುವವರು ಭಕ್ತ ಜನಾ
ಪಡೆವರೆಲ್ಲರು ದೇವಿಯ ದರ್ಶನ
ಸಿಗಂದೂರಿನಾ ತಾಯಿಯ ಧ್ಯಾನಾ
ಮಾಡ್ವರು ಎಲ್ಲ ಜನಾ ಹೊರುವರು ಹರಕೆಯನಾ ||೨||

ತರುವರು ಹೂವು ಹಣ್ಣು ಕಾಯಿಯ
ಹರಕೆಯ ಒಪ್ಪಿಸಿ ಸ್ತುತಿಪರು ಮಾತೆಯ
ಬೇಡುತ ನಿಲುವರು ಮನದಾ ಇಚ್ಛೆಯ
ಮಹಾ ಮಹೇಶ್ವರಿಯಾ ಜಯ ಜಗದೀಶ್ವರಿಯಾ ||೩||

ಬರುವರು ಅಲ್ಲಿಗೆ ಎಲ್ಲಾ ಜಾತಿ
ಎಲ್ಲರ ಮೇಲೂ ತಾಯಿಯ ಪ್ರೀತಿ
ಪಡೆಯಲು ಮಾತೆಯ ಸಹಾನುಭೂತಿ
ಸೇವೆಯ ಸಲ್ಲಿಪರೂ ಅಮ್ಮನ ಭಜಿಸುವರೂ ||೪||

ಶ್ರದ್ಧಾ ಭಕ್ತಿಗೆ ಒಲಿವಳು ಮಾತಾ
ಶ್ರದ್ಧೆ ಇಲ್ಲದೆಡೆ ನೋಡಳು ಅತ್ತಾ
ಶರಣಾಗತರೊಳು ಇಡುವಳು ಚಿತ್ತಾ
ಶ್ರೀ ದೇವಿಯ ಒಲವು ಮಹದಾನಂದವೂ ||೫||

ಶ್ರೀ ಚೌಡೇಶ್ವರಿ ನಮಗೆ ಪ್ರಸನ್ನಾ
ಪ್ರಸಾದ ನೀಡಲು ಜೀವನ ಧನ್ಯಾ
ಎಂದಿಗೂ ಬದುಕೂ ಜಗಕೆ ಅನನ್ಯಾ
ತಾಯೇ ಮಂಗಲವೂ ಮಾತೆಯೆ ಮಂಗಲವೂ ||೬||