ಬೇಡುವೆ ಪ್ರಸಾದ ನೀಡೇ
ರಾಗ – ಮೋಹನ
ತಾಳ – ಏಕತಾಳ
ಸಿಗಂದೂರ ತಾಯೇ | ಎಲ್ಲೆಲ್ಲೂ ನಿನ್ನ ಛಾಯೆ ||
ಕರುಣಾಳು ಜಯ ವಿಜಯೇ | ಸದಾ ನೆನೆವೆ ತಾಯೇ ||
ದಯಾಭರಿತೆ ಜಗದೀಶ್ವರೀ ಜಗದಾ ಮಾತಾ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||ಪ||
ಹಣ್ಣು ಕಾಯಿ ಹೂವಾ ಅರಿಶಿನಾ ಕುಂಕುಮವ
ತಂದಿರಿಸಿ ನಮಿಸಿರುವ ಭಕ್ತರಾ ಸಮೂಹಾ
ಅರ್ಪಿಸಿ ತನುಮನವ ಕಾಣುವರು ನಿನ್ನ ಮೊಗವ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೧||
ಮಾತೆ ನೀ ಸಾಕಾರ ನೀಡೆನಗೆ ಮನಸಾರ
ನೆನೆಯುವೆ ಸಿಗಂದೂರ ಬೇಡ್ವೆ ಮಮಕಾರ
ನಿನ್ನ ಕರುಣ ಸಾಗರ ನಮಗೆ ಆಧಾರ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೨||
ತಂದಿಡುವೆ ಖಾದ್ಯಾ ಮಾಡಲು ನೈವೇದ್ಯ
ಪಾಡುವೆವು ನಿನ್ನ ಪದ್ಯ ನುಡಿಸುತ್ತ ವಾದ್ಯಾ
ಸಕಲರಿಗೂ ಆದ್ಯಾ ನಿನ್ನ ಸಾನ್ನಿಧ್ಯಾ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೩||
ಅನುದಿನ ನಿನ್ನ ಧ್ಯಾನ ಮಾಡುವೇ ನಾಮನನ
ನಂಬಿರುವ ಭಕ್ತರನು ಕಾಯ್ವೆ ನೀ ಮುನ್ನಾ
ಎಂದೆಂದು ನಿನ್ನಾ ಭಜಿಸುವೇ ಭಜನಾ
ನಿನ್ನ ನಂಬಿ ಬೇಡುವೆ ಪ್ರಸಾದ ನೀಡೇ ||೪||
ಯಾರಿಗೂ ಯಾರಿಲ್ಲ ಬದುಕಿದು ಸ್ಥಿರವಿಲ್ಲ
ಆಸೆಗೇ ಕೊನೆಯಿಲ್ಲ ಮನತೃಪ್ತಿ ಇಲ್ಲಾ
ಎಲ್ಲರಿಗೂ ಬಲ್ಲ ತಾಯೇ ನೀ ಎಲ್ಲಾ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೫||
ದಿನ ದಿನವು ನಿನ್ನ ಮಹಿಮೆ ಭಕ್ತರಿಗೆ ಹಿರಿಮೆ
ಬೀರುತಿರು ದಯೆಚಿಲುಮೆ ಜಗಕೆ ನಿನ್ನೊಲುಮೆ
ನಿನ್ನದೇ ಮಹಾತ್ಮೇ ಹೇ ಪಾವನಾತ್ಮೇ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೬||
ನಮಗೆ ನೀ ಸಕಲಾ ಧ್ಯಾನಿಸಲು ಸಫಲಾ
ಜ್ಞಾನದಾ ಬಾಗಿಲಾ ತೆರೆದರೇ ಉಜ್ವಲಾ
ಮಾಡಿದರೆ ಹಂಬಲ ಸರ್ವರಿಗೂ ಮಂಗಲ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೭||
ಜೈ ಜಗದೀಶ್ವರೀ ಶ್ರೀ ಚೌಡೇಶ್ವರೀ
ಮಹಾ ಮಹೇಶ್ವರೀ ಜಯ ಮಂಗಲೇಶ್ವರೀ
ಸಿಗಂದೂರೇಶ್ವರೀ ಕೃಪಾಸಾಗರೀ
ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೮||
ಶ್ರೀ ದೇವೀ ಮಹಾತ್ಮೆ
15 Songs