ಶ್ರೀದೇವಿಯೆ ಜಗನ್ಮತಿ

ರಾಗ – ಕಾಮವರ್ಧಿನಿ
ತಾಳ – ಆದಿತಾಳ

ಶ್ರೀ ದೇವಿಯೆ ಜಗನ್ಮತಿ ತವಕೀರುತಿ
ನಿನ್ನಾ ಸ್ಮರಣಾ ನಮ್ಮಾ ಪ್ರಾಣಾ
ವೇದ ವಾದ್ಯಮಯಿ ಸಿಗಂದೂರೇಶ್ವರಿ
ನಿನ್ನ ಚರಣಕ್ಕೆ ನಮಿಸುವೆನು ನಾ ||ಪ||

ಭಕ್ತಿ ಸುಧಾಮಯಿ ಪೂಜ್ಯೆ ಪ್ರಧಾನಿ
ನೀನೇ ಭವ ಭಯ ಹಾರಿಣೀ
ಉಮಾ ಮಹೇಶ್ವರಿ ಕೈಲಾಸವಾಸಿನಿ
ದೇವಿ ನೀನೇ ವರ ಪ್ರದಾಯಿನಿ ||೧||

ಮಹಾದೇವಿಯೇ ವಿಶ್ವರೂಪಿಣಿ
ಪಾಲನಾಶಕ್ತಿ ಸ್ವರೂಪಿಣಿಯೇ
ಸರ್ವಶಕ್ತಿ ಸ್ವರೂಪಿ ಅಖಿಲಾತ್ಮಳೆ
ಪರಮಶ್ರೇಷ್ಠಳೆ ಪರಮೇಶ್ವರಿಯೆ ||೨||

ಕಾಮಕ್ರೋಧದ ಭಾವಗಳಡಗಿಸಿ
ಭಕ್ತಿಯ ಭಾವವ ಅಳವಡಿಸಿ
ಮನದಾನಂದವು ಸ್ಥಿರವಾಗಿರುವ
ಭಾಗ್ಯವ ಕರುಣಿಸು ಜಗದೀಶ್ವರಿಯೆ ||೩||

ವಿಶ್ವ ಸಂಕಷ್ಟ ಪರಿಹಾರಿಣಿಯೆ
ಎಲ್ಲಾ ವಿಷಯದ ಸಮಸ್ಯೆಗಳಿಗೆ
ಪರಿಹಾರ ರೂಪದ ಶಕ್ತಿಯು ನೀನೆ
ನಿನ್ನ ಅನುಗ್ರಹವೇ ರಕ್ಷೆಯು ತಾಯೆ ||೪||

ಅನೀತಿ ನಾಶಿನಿ ನೀತಿ ಪಾಲಿನಿಯೆ
ಸಾಧು ಸಂತರ ಜ್ಞಾನದಾಯಿನಿಯೆ
ಸ್ಮರಿಸುವ ಭಕ್ತರ ಶುಭತಾ ಹಿತಕರ
ನಿರತವು ಸಂತೃಪ್ತಿಯ ನೀಡುವವಳೆ ||೫||

ಸಿಗಂದೂರ ಶ್ರೀ ಚೌಡೇಶ್ವರಿಯೆ
ಕುಂದುಕೊರತೆಯ ನೀಗುವಳೇ
ಪರಮಾನಂದವು ಸ್ಮರಣಾತ್ಮರಿಗೆ
ಶ್ರೀದೇವಿ ನೀನೆ ಮೋಕ್ಷಪ್ರದಾಯಿನಿ ||೬||