ಶ್ರೀದೇವಿಯ ಪೂಜೆ

ರಾಗ – ಸಿಂಹೇಂದ್ರ ಮಧ್ಯಮ
ತಾಳ – ಆದಿತಾಳ

ನೋಡ್ವೆನೇ ತಾಯೇ ಪಾಡ್ವೆನೇ
ಸಿಗಂದೂರೇಶ್ವರಿ ದೇವಿ ನಿನ್ನ ಪೂಜೆಯ
ನೋಡ್ವೆನೇ ತಾಯೇ ಪಾಡ್ವೆನೇ ||ಪ||

ತುಂಬಿಟ್ಟ ಹೂವಿನ ಬುಟ್ಟಿಯು ಸ್ಥಳದಲ್ಲಿದ್ದು |
ಚಂದದಿ ಪೋಣಿಸಿದ ಮಾಲೆಯಿದ್ದೂ ||
ವೇದ ಮಂತ್ರಗಳನ್ನು ಪಠಣವ ಮಾಡುತ್ತ |
ಪಂಚಾಮೃತದಿಂದ ಮಾಡ್ವ ಅಭಿಷೇಕಾ ||೧||

ಹೊಳೆಯುವ ರೇಷ್ಮೆಯ ಜರತಾರಿ ಸೀರೆಯಿದ್ದು |
ವಜ್ರ ವೈಡೂರ್ಯದ ಸುವರ್ಣಾಭರಣವಿದ್ದು ||
ಪೂಜಿಪ ಅರ್ಚಕರು ಮಾಡಿದ ಅಲಂಕಾರವ
ಕಣ್ತುಂಬಿಕೊಳ್ಳುವ ಭಕ್ತರ ಕೂಟಾ ||೨||

ಬಗೆ ಬಗೆಯಾ ಖಾದ್ಯ ತಂದು ಇಡುವವರ
ಸಂತಸ ಸಂಭ್ರಮ ಹೇಳತೀರದ್ದು
ನಿನ್ನ ಪೂಜೆಯು ಆಗಿ ನೈವೇದ್ಯವು ಆದ
ಸುಯೋಗದ ಪ್ರಸಾದಕ್ಕೆ ಮನವನ್ನಿತ್ತು ||೩||

ಬಹು ಆನಂದಾ ನಿನ್ನ ಪ್ರಸಾದದಿಂದಾ
ಮನದೊಳಗೇ ಶ್ರೀ ದೇವೀಯೆನುತಾ
ದೃಢ ಭಕ್ತಿಯಲಿ ಕೂಡಿ ನಿನ್ನ ಧ್ಯಾನವಾ ಮಾಡಿ
ಎಂದಿಗೂ ಶ್ರೀದೇವಿಯೇ ಗತಿ ಎಂದು ಪೇಳ್ವೇ ||೪||