ಸಿಗಂದೂರು ಸೇತುವೆ – ಶ್ರೀದೇವಿಯ ಕೃಪೆ

ಶ್ರೀ ಚೌಡೇಶ್ವರಿ ದೇವಿಯು ಸೀಗೇಕಣಿಯಿಂದ ಈಗಿರುವ ಸ್ಥಳಕ್ಕೆ ಪ್ರತಿಷ್ಠಾಪನೆಯಾದ ನಂತರ ಪ್ರಥಮ ಭಕ್ತನ ವಂಶದವರಿಗೂ ಪ್ರಧಾನ ಅರ್ಚಕರಿಗೂ ಶರಾವತಿ ಸಂತ್ರಸ್ತರಾದ ಭಕ್ತರಿಗೂ ಶ್ರೀದೇವಿಯನ್ನು ಆರಾಧಿಸಲು ಅನುಕೂಲವಾಗಿ ಎಲ್ಲರೂ ನೆಮ್ಮದಿ ಪಡೆದರು.

1990 ರಲ್ಲಿ ನಮ್ಮ ಕುಟುಂಬವು ಜಟಿಲವಾದ ಸಮಸ್ಯೆಗೆ ಸಿಲುಕಿತು. ಆ ಸಮಯದಲ್ಲಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಾನಕ್ಕೆ ಹೋಗಿ ಸಮಸ್ಯೆಯನ್ನು ಪರಿಹಾರ ಮಾಡಿಕೊಡು ತಾಯೀ ಎಂದು ಬೇಡಿದೆವು. ಕೆಲವು ದಿನಗಳ ನಂತರ ಶ್ರೀದೇವಿಯ ಅನುಗ್ರಹದಿಂದ ಸಮಸ್ಯೆಯು ಪರಿಹಾರವಾಯಿತು. ಅಂದಿನಿಂದ ಇಂದಿನವರೆಗೂ ಯಾವುದೇ ಸಮಸ್ಯೆಯಾಗಿದ್ದರೂ ಶ್ರೀದೇವಿಯ ಅನುಗ್ರಹದಿಂದ ಪಾರಾಗಿದ್ದೇವೆ. ನಾನು ಪ್ರತಿದಿನವೂ ಶ್ರೀದೇವಿಯನ್ನೇ ಆರಾಧಿಸುತ್ತಿದ್ದೇನೆ. ಸಿಗಂದೂರೇಶ್ವರಿಯ ಸ್ಮರಣೆಯೇ ನನ್ನ ಜೀವನದ ಸೌಭಾಗ್ಯ.

ಶರಾವತಿ ಸಂತ್ರಸ್ತರಾದ ನಮಗೆ ನದಿಯನ್ನು ದಾಟಲು ಲಾಂಚಿನ ವ್ಯವಸ್ಥೆ ಇತ್ತು. ಕೆಲವು ವರ್ಷಗಳಿಂದ ಸಿಗಂದೂರು ಶ್ರೀದೇವಿಯ ಸನ್ನಿಧಾನಕ್ಕೆ ಹೊರ ಊರುಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿ ಶರಾವತಿ ಸಂತ್ರಸ್ತ ಭಕ್ತರು ಮತ್ತು ಹೊರ ಊರುಗಳಿಂದ ಬರುವ ಭಕ್ತರು ಪ್ರತಿದಿನವೂ ಪರದಾಡುವಂತ ಸ್ಥಿತಿಯಾಗಿತ್ತು.

ಕರುಣಾಮಯಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯು ತನ್ನ ಭಕ್ತರಿಗಾಗಿ ಸೇತುವೆಯನ್ನು ವರದಾನವಾಗಿ ನೀಡಿದ್ದಾಳೆ. ಸಿಗಂದೂರು ಸೇತುವೆಯಲ್ಲಿ ಪ್ರಯಾಣಿಸುವಾಗ ಶ್ರೀದೇವಿಯನ್ನು ಸ್ಮರಿಸುತ್ತಲೇ ಇರಬೇಕೆನಿಸುತ್ತದೆ. ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯನ್ನು ಆರಾಧಿಸುವ ಭಕ್ತರು ಧನ್ಯರು.