ಶ್ರೀ ಸಿಗಂದೂರು ಕ್ಷೇತ್ರದ ಇತಿಹಾಸ
ಸಿಗಂದೂರು ಸಾಗರ ತಾಲ್ಲೂಕಿನ ಕರೂರು ಹೋಬಳಿಯಲ್ಲಿದೆ. ಇದು ಸಾಗರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಶರಾವತಿಯ ದಡದಲ್ಲಿರುವ ಈ ಕ್ಷೇತ್ರ ಮೂರು ತಲೆಮಾರುಗಳ ಹಿಂದೆ ಕುಗ್ರಾಮವಾಗಿತ್ತು. ಅಲ್ಲಿಯ ಭಕ್ತನೊಬ್ಬನ ಕನಸಿನಲ್ಲಿ ಶ್ರೀದೇವಿ ಕಾಣಿಸಿಕೊಂಡು ಭಕ್ತನ ಮನೆಯ ಹತ್ತಿರವಿರುವ ಸೀಗೇಕಣಿ ಎಂಬ ಗುಡ್ಡದಲ್ಲಿ ತನ್ನನ್ನು ಸ್ಥಾಪಿಸಿ ಪೂಜಿಸೆಂದು ತಿಳಿಯಪಡಿಸಿದಳು. ಶ್ರೀದೇವಿಯ ಅಣತಿಯಂತೆ ಆ ಭಕ್ತನು ಸೀಗೇಕಣಿ ಗುಡ್ಡಕ್ಕೆ ಹೋಗಿ ಒಂದು ಶಿಲೆಯನ್ನು ಇರಿಸಿ ಭಕ್ತಿಯಿಂದ ಶ್ರೀದೇವಿಯನ್ನು ನೆನೆಯುತ್ತಾ ಆರಾಧಿಸಿದನು. ಆ ಶಿಲಾರೂಪಿಯಾದ ಶ್ರೀದೇವಿಯನ್ನು ಭಕ್ತಿಯಿಂದ ಅರ್ಚಿಸಿ, ಪ್ರಸಾದವನ್ನು ಬೇಡಲು ಶ್ರೀದೇವಿಯು ಪ್ರಸಾದವನ್ನು ನೀಡಿದಳು.
ಈ ವಿಚಾರವು ಸುತ್ತಮುತ್ತಲಿನ ಊರಿನವರಿಗೆ ತಿಳಿಯಿತು. ಎಲ್ಲರೂ ಬಂದು ದೇವಿಯನ್ನು ಆರಾಧಿಸ ತೊಡಗಿದರು. ಪ್ರತಿದಿನವೂ ಭಕ್ತರ ಸಂಖ್ಯೆ ಅಧಿಕವಾಯಿತು. ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆದುಕೊಂಡು ಬಂದಿತು. ಆ ಸಂದರ್ಭದಲ್ಲಿ ಆ ಭಕ್ತನು ಪೂಜೆಗಾಗಿ ಅರ್ಚಕರೊಬ್ಬರನ್ನು ನೇಮಿಸಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಅನುಕೂಲ ಮಾಡಿಕೊಡುತ್ತಿದ್ದನು. ಶ್ರೀದೇವಿಯು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾ ವರಪ್ರದಾಯಿನಿಯಾದಳು. ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತವಾಯಿತು. ಕಳ್ಳತನವಾದ ಸಂದರ್ಭದಲ್ಲಿ ಮರಳಿ ಸಿಗುವಂತೆ ಹರಕೆಯನ್ನು ಹೊತ್ತರು. ಶ್ರೀದೇವಿಯ ದಯೆಯಿಂದ ಕಳೆದು ಹೋದ ವಸ್ತುಗಳು ಪ್ರಾಪ್ತವಾಯಿತು.
ನಂತರದಲ್ಲಿ ಶ್ರೀದೇವಿಯು ಸೀಗೇಕಣಿ ಚೌಡಮ್ಮ ಎಂಬ ಹೆಸರಿನಿಂದ ಪ್ರಸಿದ್ಧಳಾದಳು. ಪ್ರತಿ ವರ್ಷದ ಮಕರ ಸಂಕ್ರಾಂತಿ ದಿನದಂದು ಜಾತ್ರೆಯನ್ನು ಅತಿ ವೈಭವದಿಂದ ನಡೆಸುತ್ತಿದ್ದರು. ಅನ್ನಸಂತರ್ಪಣೆಗಳು ನಡೆಯುತ್ತಲಿತ್ತು. ಸೀಗೇಕಣಿ ಎಂಬ ಸ್ಥಳ ಸಿಗಂದೂರು ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು. ಜಾತಿ ಮತ ಭೇದವಿಲ್ಲದೆ ಬಹು ದೂರದ ಊರುಗಳಿಂದಲೂ ಭಕ್ತರು ಬಂದು ಶ್ರೀದೇವಿಯ ಸೇವೆ ಮಾಡಿ ಪ್ರಸಾದ ಪಡೆದು ಕೃತಾರ್ಥರಾಗುತ್ತಿದ್ದರು. ಹೀಗಿರಲು ಶರಾವತಿ ನದಿಗೆ ಅಣೆಕಟ್ಟನ್ನು ಕಟ್ಟಿದ ಸಂದರ್ಭದಲ್ಲಿ ಸಿಗಂದೂರು ಎಂಬ ಹೆಸರು ಪಡೆದ ಸೀಗೇಕಣಿ ಸ್ಥಳವು ಜಲಮಯವಾಯಿತು. ಶ್ರೀದೇವಿಯ ಪೂಜೆ ನಿಂತು ಹೋಯಿತು. ಭಕ್ತರು ತಳಮಳಗೊಂಡರು. ಶ್ರೀದೇವಿಯ ದರ್ಶನಕ್ಕಾಗಿ ಚಿಂತಿಸತೊಡಗಿದರು. ಬೇಸಿಗೆಯಲ್ಲಿ ನೀರು ಇಳಿಮುಖವಾಗಿ ಶ್ರೀದೇವಿಯ ಸಾನಿಧ್ಯ ಸ್ಥಳ ಗೋಚರಿಸಿತು. ಅಲ್ಲಿಗೆ ಹೋಗಲು ಸುತ್ತಲೂ ನೀರಿರುವ ಕಾರಣ ದೋಣಿ ಹಾಗೂ ಉಕ್ಕಡದಲ್ಲಿ ಅಲ್ಲಿಗೆ ಹೋಗಿ ಶ್ರೀ ಸಿಗಂದೂರು ಚೌಡಮ್ಮನನ್ನು ಆರಾಧಿಸಿ ಬರುತ್ತಿದ್ದರು. ಆದರೆ ಮಳೆಗಾಲದಲ್ಲಿ ಪುನಃ ಜಲಮಯವಾಗಿ ಭಕ್ತರಿಗೆ ಶ್ರೀದೇವಿಯ ದರ್ಶನ ದೊರೆಯದೆ ನಿರಾಸೆಯಾಯಿತು. ಆದರೂ ಪ್ರತಿ ವರ್ಷದ ಮಕರ ಸಂಕ್ರಾಂತಿ ಹಾಗೂ ಶಿವರಾತ್ರಿ ಸಮಯದಲ್ಲಿ ದೋಣಿ ಹಾಗೂ ಉಕ್ಕಡದಲ್ಲಿ ಹೋಗಿ ಆರಾಧಿಸಿ ಬರುತ್ತಿದ್ದರು. ಹಲವು ವರ್ಷದ ನಂತರ ಪ್ರಥಮ ಭಕ್ತನ ವಂಶಸ್ಥರು ಹಾಗೂ ಆ ಭಾಗದ ಭಕ್ತರು ಒಟ್ಟಾಗಿ ಶ್ರೀದೇವಿಯನ್ನು ಸುವ್ಯವಸ್ಥಿತವಾಗಿ ಪ್ರತಿಷ್ಠಾಪಿಸಲು ತೀರ್ಮಾನಿಸಿ ಶ್ರೀದೇವಿಗೆ ಪೂಜೆ ಪುನಸ್ಕಾರಗಳನ್ನು ಮಾಡಿ ಶಿಲಾಮೂರ್ತಿಯನ್ನು ಆ ಸ್ಥಳದಿಂದ ಸ್ಥಳಾಂತರಿಸಲು ಪ್ರಯತ್ನಿಸಿ, ಶ್ರೀದೇವಿಯಲ್ಲಿ ಪ್ರಸಾದ ಕೇಳಿದರು. ಆದರೆ ಪ್ರಸಾದ ದೊರೆಯಲಿಲ್ಲ. ಪ್ರಯತ್ನ ಬಿಡದ ಭಕ್ತರು ಸತತವಾಗಿ ಮೂರು ದಿನಗಳ ಕಾಲ ನಿರಂತರವಾಗಿ ದೇವಿಯನ್ನು ಭಕ್ತಿಯಿಂದ ಆರಾಧಿಸಿ ಪ್ರಸಾದವನ್ನು ಪಡೆದು ಈಗಿರುವ ಸ್ಥಳದಲ್ಲಿ ಶ್ರೀ ಚೌಡೇಶ್ವರಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ನಿತ್ಯವೂ ಶ್ರೀ ಸಿಗಂದೂರಾಂಬೆಯ ಪೂಜೆಯನ್ನು ಕ್ರಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಥಮ ಭಕ್ತನ ವಂಶದವರು ದೇವಾಲಯದ ಉನ್ನತಿಗಾಗಿ ಶ್ರದ್ಧೆಯಿಂದ ಶ್ರಮಿಸಿ ದೇವಾಲಯದ ಕೆಲಸ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅರ್ಚಕರು ಬಂದ ಭಕ್ತರ ಸಂಕಷ್ಟಗಳನ್ನು ವಿಚಾರಿಸಿ ಅವರ ಇಷ್ಟಾರ್ಥ ಸಿದ್ಧಿಗಾಗಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ, ಅನುಗ್ರಹವನ್ನು ಪಡೆಯಲು ಯೋಗ್ಯ ಮಾರ್ಗದರ್ಶಕರಾಗಿದ್ದಾರೆ. ಶ್ರೀದೇವಿಯು ಭಕ್ತರ ಕಷ್ಟಗಳನ್ನು ದೂರ ಮಾಡಿ ಸುಖ-ಸಂತೋಷಗಳನ್ನು ದಯಪಾಲಿಸುತ್ತಿದ್ದಾಳೆ.
ಶ್ರೀದೇವಿಯಲ್ಲಿ ಹೊತ್ತಹರಕೆಯಿಂದಾಗಿ ಕಳ್ಳತನ, ಕಷ್ಟ-ನಷ್ಟಗಳು ದೂರವಾದ ಉದಾಹರಣೆ ಬಹಳಷ್ಟಿದೆ. ಹಾಗೂ ಶ್ರೀದೇವಿಯು ಅನೇಕ ಭಕ್ತರ ಕನಸಿನಲ್ಲಿ ಗೋಚರಿಸಿ ಮಾರ್ಗದರ್ಶನವನ್ನು ನೀಡುತ್ತಿದ್ದಾಳೆ. ಅನೇಕ ಪವಾಡಗಳೂ ನಡೆಯುತ್ತಲಿವೆ. ಶ್ರೀ ಸಿಗಂದೂರೇಶ್ವರಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡುವ ಆರಾಧ್ಯ ದೇವಿ ಎಂಬ ಹೆಸರಿನಿಂದ ಪ್ರಖ್ಯಾತಳಾಗಿದ್ದಾಳೆ.
ಶ್ರೀ ದೇವೀ ಮಹಾತ್ಮೆ
15 Songs