ಪ್ರಸ್ತಾವನೆ
|| ಓಂ ಶ್ರೀ ಗಣೇಶಾಯ ನಮಃ ||
|| ಓಂ ಶ್ರೀ ಸಿಗಂದೂರು ಮಾತಾ ||
|| ಓಂ ಶ್ರೀ ಗುರುಭ್ಯೋ ನಮಃ ||
ಸಂಸಾರದ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ, ಉದ್ಯೋಗ, ಸಂಬಂಧ, ಸಂಪತ್ತು, ಸಂತಾನ, ಆರೋಗ್ಯ ಮುಂತಾದ ಕಾಮಿತಾರ್ಥಗಳ ಪ್ರಾಪ್ತಿ, ಎಲ್ಲಾ ಬಗೆಯ ಭೀತಿ ನಿವಾರಣೆ, ಮನೆ-ಮಾರು, ಹೊಲ-ತೋಟ ಮುಂತಾದವುಗಳ ರಕ್ಷಣೆ ಈ ಎಲ್ಲದಕ್ಕೂ ಕಾಲಾನುಸಾರ ಏಕೈಕ ಆಶ್ರಯ ಸ್ಥಾನವಾಗಿ ಸಿಗಂದೂರಿನ ದೇವಿ ಸಾನಿಧ್ಯ ಪ್ರಸಿದ್ಧವಾಗಿದೆ. ಕಾರಣೀಕವಾದ ಈ ಕ್ಷೇತ್ರಕ್ಕೆ ಅಸಂಖ್ಯಾತ ಭಕ್ತರು ಜಾತಿ-ಮತಗಳ ಅಂತರವಿಲ್ಲದೆ ಹರಕೆ ಹೊತ್ತು ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಶರಾವತಿ ಮುಳುಗಡೆ ಪ್ರದೇಶವಾಗಿ ದ್ವಿಪಾಂತರವೆನಿಸಿ ಸಾರಿಗೆ ಸೌಕರ್ಯವೂ ಸಾಕಷ್ಟಿಲ್ಲದ ಸಂದರ್ಭದಲ್ಲಿ ಈ ಹಳ್ಳಿಗಾಡಿಗೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದರು. ಹರಕೆ ಫಲಿಸಿ, ಅಭಯ ಹೊಂದಿ, ಪೂಜೆ ಕಾಣಿಕೆ ಮುಂತಾದ ಸೇವೆಗಳನ್ನು ಯಥಾಶಕ್ತಿ ನಿರ್ವಹಿಸುತ್ತಿದ್ದಾರೆ.
ಆದಿಶಕ್ತಿಯಾದ ಲೋಕಮಾತೆ ರಕ್ತಬೀಜಾಸುರನ ನಾಶಕ್ಕಾಗಿ ಚಾಮುಂಡೇಶ್ವರಿಯಾದುದು ಪುರಾಣ ಪುಣ್ಯ ಕಥೆ. ಇಂದಿಗೂ ಸಮಾಜಕಂಟಕರಾದ, ಸಮಾಜದಲ್ಲಿ ಕಂಟಕ ರೂಪರಾದ ರಕ್ತಬೀಜರ ಬಾಧೆಯನ್ನು ನಿವಾರಿಸಲು ಶ್ರೀದೇವಿಯು ಅಲ್ಲಲ್ಲಿ ನೆಲೆ ನಿಂತು, ದುಷ್ಟ ನಿಗ್ರಹ, ಶಿಷ್ಟಾನುಗ್ರಹ ಮಾಡುತ್ತಾಳೆ, ಶ್ರೀ ಸಿಗಂದೂರೇಶ್ವರಿಯ ದಿವ್ಯ ಸಾನಿಧ್ಯ ಇದಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ಎಲ್ಲರ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ.
ಭಕ್ತಿಯನ್ನು ಜನಸಾಮಾನ್ಯರು ನಿವೇದಿಸಿಕೊಳ್ಳುವುದು ಭಜನೆಗಳ ಮೂಲಕ, ಮಧುರ ಭಾವನೆಯನ್ನು ತನ್ಮಯತೆಯಿಂದ ಹಾಡುಗಳ ಮೂಲಕ ವ್ಯಕ್ತಪಡಿಸುವುದು ಎಲ್ಲರಿಗೂ ನಿಲುಕುವ ಸಂಪ್ರದಾಯ. ಭಕ್ತರು ಹಾಡುವುದಕ್ಕೆ ಅನುಕೂಲವಾದ ಭಕ್ತಿ ಗೀತೆಗಳನ್ನು ಶ್ರೀಮತಿ ವೈಜಯಂತಿಯವರು ಶ್ರೀದೇವಿಯ ಪ್ರೇರಣೆಯಾದಂತೆ ರಚಿಸಿ ಪ್ರಕಟಿಸಿದ್ದಾರೆ. ಸಂಗೀತ ವಿದ್ವಾನ್ ದಿವಂಗತ ಪ್ರಭಾಕರರಾಯರು ಕಲಿಸಿದ ಕೆಲವೇ ಪಾಠಗಳಿಂದ ರಾಗ ತಾಳಗಳ ಜೋಡಣೆ ಈ ಹಾಡುಗಳಿಗೆ ಆಗಿದೆ ಎಂದು ಅವರು ಕೃತಜ್ಞತೆಯಿಂದ ಹೇಳುತ್ತಾರೆ. ಈ ರಚನೆಗೆ ಶ್ರೀದೇವಿಯೇ ಸ್ಪೂರ್ತಿಯೆಂದೂ, ಇದೇ ಮೊದಲ ಬರಹವಾಗಿರುವ ತನಗೆ ಕವಿತಾ ರಚನೆಯ ಬಗ್ಗೆ ಏನೂ ತಿಳಿಯದೆಂದು ವಿನಯದಿಂದ ನಿವೇದಿಸಿಕೊಂಡಿದ್ದಾರೆ. ಈ ಕಿರು ಹೊತ್ತಿಗೆಯನ್ನು ಮುದ್ರಿಸಿ ಪ್ರಕಟಿಸುವುದೂ, ಶ್ರೀದೇವಿಯ ಸೇವೆ. ಅದನ್ನು ಶ್ರೀದೇವಿಯೇ ಮಾಡಿಸಿದ್ದಾಳೆ ಎನ್ನುತ್ತಾರೆ.
ಸಾಹಿತ್ಯ ದೃಷ್ಟಿಯಿಂದ ಅಲ್ಲವಾದರೂ ಭಕ್ತಿಯ ಅಭಿವ್ಯಕ್ತಿಗೆ ಈ ಪದ್ಯಗಳು ನೆರವಾಗುವುದರಲ್ಲಿ ಸಂದೇಹವಿಲ್ಲ. ಈ ನಾಲ್ಕು ಮಾತುಗಳನ್ನು ಬರೆಯಲು ಅವಕಾಶವೊದಗಿಸಿದ ಶ್ರೀದೇವಿಗೆ ನಾನು ಒಂದು ಶ್ಲೋಕ ಪುಷ್ಪವನ್ನು ಸಮರ್ಪಿಸಿ ನಮಸ್ಕರಿಸುತ್ತೇನೆ.
ಸಿಗಂದೂರೇಶ್ವರೀ ದೇವಿ ಸರ್ವಕಷ್ಟನಿವಾರಿಣಿ |
ಭಕ್ತಾಭೀಷ್ಟಪ್ರದೇ ಪಾಹಿ ಚಾಮುಂಡೇಶ್ವರಿ ತೇ ನಮಃ
– ವಿದ್ವಾನ್ ಎನ್. ನಾರಾಯಣ ಮಧ್ಯಸ್ಥ
ಸಾಗರ
30-1-1996
ಶ್ರೀ ದೇವೀ ಮಹಾತ್ಮೆ
15 Songs