ಹನ್ನೆರಡನೆ ಅಧ್ಯಾಯ

ಮಹಾದೇವಿಯು ಹೇಳಿದಳು
ಯಾವನು ಭಕ್ತಿ ಶ್ರದ್ಧೆಗಳಿಂದ
ಈ ಸ್ತೋತ್ರಗಳಿಂದ ನಿತ್ಯ ನನ್ನನ್ನು
ಸ್ತುತಿಸಿದರೆ ಅವನ ಪೀಡೆಗಳನ್ನು
ನಿಸ್ಸಂಶಯದಿ ನಾಶ ಮಾಡುವೆನು || ೧ ||

ಹಾಗೆಯೇ ಮಧು ಕೈಟಭರನ್ನು
ನಾಶ ಮಾಡಿರುವ ವಿಷಯವನ್ನು
ಮಹಿಷಾಸುರನ ಸಂಹಾರವನ್ನು
ಶುಂಭ ನಿಶುಂಭರ ವಧೆಯು ಸೇರಿ
ಮೂರು ಚರಿತ್ರೆ ಹೇಳಿ ಸ್ತುತಿಸಲಿ || ೨ ||

ಮಾನವರು ಭಕ್ತಿ ಶ್ರದ್ಧೆಯಿಂದ
ಹಾಗೂ ಏಕಾಗ್ರತೆಯಿಂದ
ಅಷ್ಟಮಿ ನವಮಿ ಚತುರ್ದಶಿಗಳಲ್ಲಿ
ಸರ್ವೋತ್ತಮವಾಗಿರುವಂತಹ
ನನ್ನ ಮಹಾತ್ಮೆಯ ಸ್ತುತಿಸಬೇಕು || ೩ ||

ಹಾಗೆ ಸ್ತುತಿಸಿದ ಮಾನವರಿಗೆ
ದುಷ್ಕೃತದಿಂದಾಗಿ ಬರಲಿರುವ
ಆಪತ್ತುಗಳು ಸಂಭವಿಸುವುದಿಲ್ಲ
ದಾರಿದ್ರ್ಯ ದುಃಖವುಂಟಾಗುವುದಿಲ್ಲ
ಬಂಧು ಮಿತ್ರರ ವಿಯೋಗವೂ ಇಲ್ಲ || ೪ ||

ನನ್ನ ಮಹಾತ್ಮೆಯನ್ನು ಕೇಳಿದ
ಮಾನವರಿಗೆ ಶತ್ರು ಭಯವಿಲ್ಲ
ರಾಜ ಭಯ ಮತ್ತು ಶಸ್ತ್ರದ ಬೆಂಕಿಯ
ಹಾಗೂ ಜಲ ಪ್ರವಾಹಗಳಿಂದ
ಎಂದೆಂದೂ ಭಯವಾಗುವುದಿಲ್ಲ || ೫ ||

ಆದ್ದರಿಂದ ಮಾನವರೆಲ್ಲರು
ನನ್ನ ಚರಿತ್ರೆಯ ಮಹಾತ್ಮೆಯನ್ನು
ಏಕಾಗ್ರ ಚಿತ್ತದಿಂದ ಪಠಿಸಲಿ
ಮತ್ತು ಶ್ರದ್ಧೆ ಭಕ್ತಿಯಿಂದ ಕೇಳಲಿ
ಪರಮ ಕಲ್ಯಾಣಕರವಾಗುವುದು || ೬ ||

ಮಹಾಮಾರಿಯಿಂದಾಗುವ
ಎಲ್ಲ ಉಪದ್ರವ ನಿವಾರಿಸುವುದು
ಮತ್ತು ಆಧ್ಯಾತ್ಮಿಕಾದಿ ಮೂರು
ವಿಧವಾಗಿರುವ ಉತ್ಪಾತಗಳನ್ನು
ನನ್ನ ಮಹಾತ್ಮೆಯು ಶಮನ ಮಾಡುವುದು || ೭ ||

ನನ್ನ ಮಂದಿರದಲ್ಲಿ ನಿತ್ಯವೂ
ನನ್ನ ಮಹಾತ್ಮೆಯ ಪಠಿಸಿದರೆ
ಆ ಮಂದಿರವ ನಾನೆಂದಿಗೂ
ಬಿಡದೆಯೇ ಸರ್ವಕಾಲದಲ್ಲಿಯೂ
ನನ್ನ ಸಾನ್ನಿಧ್ಯ ಸ್ಥಿರವಾಗಿರುವುದು || ೮ ||

ಬಲಿದಾನ ಪೂಜೆಯ ಸಮಯ
ಪುಷ್ಪಾದಿ ಉಪಚಾರವನ್ನರ್ಪಿಸಿ
ಅಗ್ನಿಕಾರ್ಯದ ಮಹೋತ್ಸವದಲ್ಲಿ
ನನ್ನ ಸಮಸ್ತ ಚರಿತ್ರೆಯನ್ನು ಪಠಿಸಿ
ಹಾಗೂ ಶ್ರವಣವನ್ನೂ ಮಾಡಿ || ೯ ||

ಹೋಮ ಅರ್ಚನಗಳ ಕ್ರಮವನ್ನು
ತಿಳಿದ ಅಥವಾ ತಿಳಿಯದಿರುವ
ಭಕ್ತನು ಮಾಡುವ ಬಲಿಪೂಜೆಯನ್ನು
ಹಾಗೂ ಹೋಮಗಳನ್ನು ನಾನು
ಪ್ರೀತಿಯಿಂದ ಸ್ವೀಕರಿಸುವೆನು || ೧೦ ||

ಪ್ರತಿ ವರ್ಷವೂ ಶರತ್ಕಾಲದಲ್ಲಿ
ವಿಶೇಷ ಮಹಾಪೂಜೆಯನ್ನು
ಮಾಡಿ ವರ್ಷೋತ್ಸವ ಆಚರಿಸಿ
ಚರಿತ್ರ ತ್ರಯದಿಂದ ಕೂಡಿರುವ
ನನ್ನ ಮಹಾತ್ಮೆಯನ್ನು ಶ್ರವಣ ಮಾಡಿ || ೧೧ ||

ನನ್ನ ಮಹಾತ್ಮೆಯನ್ನು ಭಕ್ತಿಯಿಂದ
ಶ್ರವಣವ ಮಾಡಿದ ಮಾನವನು
ನನ್ನ ಅನುಗ್ರಹದಿಂದ ಕಷ್ಟವಿಲ್ಲದೆ
ಧನ ಧಾನ್ಯ ಪುತ್ರಾದಿ ಸೌಖ್ಯಗಳನ್ನು
ಹೊಂದುವುದರಲ್ಲಿ ಸಂಶಯವಿಲ್ಲ || ೧೨ ||

ಮಾನವನು ನನ್ನ ಮಹಾತ್ಮೆಯನ್ನು
ಮತ್ತು ಮಂಗಳಕರಗಳಾದ
ನಾನಾವತಾರದ ವಿಷಯವನ್ನು
ಯುದ್ಧದ ನನ್ನ ಪರಾಕ್ರಮಗಳನ್ನು
ಕೇಳಿದವನು ನಿರ್ಭಯನಾಗುವನು || ೧೩ ||

ನನ್ನ ಮಹಾತ್ಮೆಯನ್ನು ಕೇಳುವ
ಮಾನವರ ಶತ್ರು ನಾಶವಾಗಿ
ಅವರಿಗೆ ಕಲ್ಯಾಣವುಂಟಾಗುವುದು
ಹಾಗೆಯೇ ಅವರ ವಂಶವೇ
ಸುಖ ಸಂತೋಷವನ್ನು ಹೊಂದುವುದು || ೧೪ ||

ಶಾಂತಿ ಕರ್ಮಗಳ ಸಮಯದಲ್ಲಿ
ಮತ್ತು ಕೆಟ್ಟ ಸ್ವಪ್ನಗಳು ಕಂಡಲ್ಲಿ
ಉಗ್ರವಾದ ಗ್ರಹಗತಿಯಿಂದಾಗುವ
ಪೀಡಾ ಪರಿಹಾರ ಕರ್ಮಗಳಲ್ಲಿ
ನನ್ನ ಮಹಾತ್ಮೆಯನ್ನು ಕೇಳಬೇಕು || ೧೫ ||

ಮಹಾತ್ಮೆಯನ್ನು ಕೇಳುವವರಿಗೆ
ಉಪದ್ರವಗಳು ನಾಶವಾಗಿ
ಗ್ರಹ ಪೀಡೆಗಳು ಶಮನವಾಗುವುದು
ಮಾನವರು ಕಂಡ ದುಸ್ವಪ್ನಗಳಿಗೂ
ಸುಸ್ವಪ್ನದ ಫಲವುಂಟಾಗುವುದು || ೧೬ ||

ಬಾಲಗ್ರಹ ಪೀಡಿತರಾದ
ಮಕ್ಕಳಿಗೆ ಶಾಂತಿಯಾಗುವುದು
ಒಂದು ಕೆಲಸದಲ್ಲಿ ಮೈತ್ರಿಯು ಇರುವ
ಗುಂಪಿನಲ್ಲಿ ಒಡಕು ಉಂಟಾದರೆ
ಮತ್ತೆ ಮೈತ್ರಿಯನ್ನು ಉಂಟು ಮಾಡುವುದು || ೧೭ ||

ದುಷ್ಟ ಕಾರ್ಯದಲ್ಲಿ ತೊಡಗಿರುವ
ಜನರ ಬಲವನ್ನು ಕುಗ್ಗಿಸುವುದು
ದುಷ್ಟ ಭೂತ ಮತ್ತು ಪ್ರೇತಗಳನು
ಪಿಶಾಚಿಗಳನ್ನು ನನ್ನ ಮಹಾತ್ಮೆಯ
ಪಠಣವೇ ನಾಶಗೊಳಿಸುವುದು || ೧೮ ||

ನನ್ನ ಮಹಾತ್ಮೆಯ ಕೀರ್ತನವು
ನನ್ನ ಸನ್ನಿಧಿಯನ್ನುಂಟು ಮಾಡುವುದು
ಪಶು ಬಲಿ ಅರ್ಪಣೆ ಹೂವು ಅರ್ಘ್ಯವು
ಗಂಧ ದ್ರವ್ಯ ಧೂಪ ಮತ್ತು ದೀಪವು
ಮುಂತಾದ ಅತ್ಯುತ್ತಮ ವಸ್ತುಗಳು || ೧೯ ||

ಗಂಗಾ ಜಲಾದಿ ದ್ರವ್ಯಗಳು
ಹೋಮ ಮತ್ತು ಬ್ರಾಹ್ಮಣ ಭೋಜನ
ಹಗಲು ರಾತ್ರಿ ಸೇವಾರೂಪದಿ
ಅರ್ಪಿಸುವ ನೃತ್ಯ ಗೀತಾದಿಗಳು
ಇವೆಲ್ಲವೂ ನನಗೆ ತೃಪ್ತಿಯಾಗುವುದು || ೨೦ ||

ವಿಧವಿಧ ವಸ್ತ್ರಾಲಂಕಾರದ
ಪೂಜೆ ಮತ್ತು ಭೋಗ ಸಮರ್ಪಣ
ದಾನ ಕರ್ಮದಿಂದಾಗುವ ಪ್ರೀತಿಯು
ಒಂದೇ ಬಾರಿ ಈ ಮಹಾತ್ಮೆಯ
ಪಠಣ ಮತ್ತು ಶ್ರವಣದಿ ಆಗುವುದು || ೨೧ ||

ನನ್ನ ಈ ಚರಿತ್ರೆಯ ಶ್ರವಣವು
ಪಾಪಗಳನ್ನು ದೂರ ಮಾಡುವುದು
ಮತ್ತು ಆರೋಗ್ಯವನ್ನು ನೀಡುವುದು
ಚರಿತ್ರೆಯನ್ನು ಕೀರ್ತನೆ ಮಾಡಿದರೆ
ಭೂತಗಳಿಂದ ರಕ್ಷೆಯ ನೀಡುವುದು || ೨೨ ||

ಮತ್ತು ಯುದ್ಧ ಪ್ರಸಂಗಗಳಲ್ಲಿ
ದುಷ್ಟ ದೈತ್ಯರನ್ನು ಸಂಹರಿಸುವ
ಈ ಚರಿತ್ರೆಯ ಭಾಗದ ಶ್ರವಣವು
ಮಾನವನಿಗೆ ವೈರಿಗಳಿಂದಾದ
ಭಯವನ್ನು ಪರಿಹಾರ ಮಾಡುವುದು || ೨೩ ||

ನನ್ನ ಮಹಾತ್ಮೆಯಲ್ಲಿರುವಂತ
ನೀವು ಮಾಡಿದ ಸ್ತೋತ್ರಗಳು
ಬ್ರಹ್ಮರ್ಷಿಗಳು ಮತ್ತು ಬ್ರಹ್ಮದೇವನು
ಮಾಡಿರುವಂತಹ ಸ್ತೋತ್ರಗಳನ್ನು
ಪಠಿಸಿದರೆ ಶುಭಮತಿಯ ಕೊಡುವುದು || ೨೪ ||

ಕಾಡು ಮತ್ತು ಬೆಂಗಾಡಿನಲ್ಲಿ
ಕಾಡ್ಗಿಚ್ಚು ಆವರಿಸಿದಾಗ
ಕಳ್ಳಕಾರರು ಸುತ್ತುವರಿದಾಗ
ಶತ್ರುಗಳು ಹಿಡಿದಂತ ಸಮಯದಲ್ಲಿ
ನನ್ನ ಕೀರ್ತನವು ಪರಿಹರಿಸುವುದು || ೨೫ ||

ಕಾಡಿನಲ್ಲಿ ಸಿಂಹ ಹುಲಿ ಮತ್ತು
ಕಾಡಾನೆ ಬೆನ್ನಟ್ಟಿ ಬಂದರೆ
ರಾಜನು ಕೋಪದಿ ಬಂಧನವನ್ನು
ಅಥವಾ ಮರಣವನ್ನು ವಿಧಿಸಿದರೆ
ನನ್ನ ಕೀರ್ತನವು ಅಭಯ ಕೊಡುವುದು || ೨೬ ||

ಹಡಗಿನಲ್ಲಿ ಪ್ರಯಾಣಿಸುವಾಗ
ಬಿರುಗಾಳಿಗೆ ಮುಳುಗುತ್ತಿರಲು
ಘೋರವಾದ ಯುದ್ಧದಲ್ಲಿ ಶಸ್ತ್ರಗಳು
ಬೀಳುವಾಗ ನನ್ನ ಕೀರ್ತನವು
ವಿಪತ್ತನ್ನೆಲ್ಲ ದೂರ ಮಾಡುವುದು || ೨೭ ||

ಭಯಂಕರವಾಗಿರುವ ಎಲ್ಲ್ಲಾ
ಬಾಧೆಗಳಲ್ಲಿ ಸಿಲುಕಿರುವವರು
ಅತಿ ನೋವು ಸಂಕಟವಾದಾಗ
ನನ್ನ ಚರಿತ್ರೆಯನ್ನು ಸ್ಮರಿಸುವವರು
ಸಂಕಟದಿಂದ ಮುಕ್ತರಾಗುವರು || ೨೮ ||

ನನ್ನ ಮಹಾತ್ಮೆಯ ಚರಿತ್ರೆಯನ್ನು
ಸ್ಮರಣೆಯ ಮಾಡುತ್ತಿರುವಾಗ
ಸಿಂಹಾದಿ ಕ್ರೂರ ಜಂತುಗಳು
ಕಳ್ಳರು ಶತ್ರುಗಳು ನನ್ನ ಪ್ರಭಾವದಿ
ದೂರದಿಂದಲೆ ಓಡಿ ಹೋಗುವರು || ೨೯ ||

ಹೇಳಿದನು ಸುಮೇಧ ಋಷಿಯು
ಪ್ರಚಂಡ ಪರಾಕ್ರಮಶಾಲಿಯು
ಆದ ಚಂಡಿಕಾ ಭಗವತಿಯು
ದೇವತೆಗಳು ನೋಡುತ್ತಿದ್ದಂತೆ
ಅಲ್ಲಿಯೇ ಅಂತರ್ಧಾನಳಾದಳು || ೩೦ ||

ಶತ್ರುಗಳು ನಾಶವಾದ್ದರಿಂದ
ದೇವತೆಗಳು ನಿಶ್ಚಿಂತರಾಗಿ
ತಮ್ಮ ಪದವಿಗಳನ್ನು ವಹಿಸಿಕೊಂಡು
ಮೊದಲಿನಂತೆಯೇ ಯಜ್ಞ ಯಾಗಗಳಲ್ಲಿ
ತಮ್ಮ ಭಾಗದ ಹವಿಸ್ಸನ್ನು ಪಡೆದರು || ೩೧ ||

ಜಗತ್ತನ್ನೇ ನಾಶ ಮಾಡುತ್ತಿದ್ದ
ಅತ್ಯುಗ್ರ ಪರಾಕ್ರಮಿಗಳಾದ
ಶುಂಭ ನಿಶುಂಭರು ದೇವಿಯಿಂದ
ಹತರಾದ ಮೇಲೆ ಉಳಿದ ದೈತ್ಯರು
ಪಾತಾಳವನ್ನು ಸೇರಿದರು || ೩೨ ||

ಋಷಿಯೆಂದ ಸುರಥ ರಾಜನಿಗೆ
ಷಡ್ಗುಣೈಶ್ವರ್ಯಗಳ ದೇವಿಯು
ನಿತ್ಯಳಾಗಿದ್ದರೂ ಆಯಾಯ
ನಿಮಿತ್ತಗಳಿಂದ ಮತ್ತೆ ಅವತರಿಸಿ
ಜಗತ್ತನ್ನು ಪಾಲನೆ ಮಾಡುವಳು || ೩೩ ||

ಅವಳಿಂದ ವಿಶ್ವ ಮೋಹದಲ್ಲಿದೆ
ಅವಳೇ ವಿಶ್ವವ ಸೃಜಿಸುವಳು
ಬೇಡಿದರೆ ತತ್ತ್ವಜ್ಞಾನ ಕೊಡುವಳು
ಆ ದೇವಿಯು ಸಂತುಷ್ಟಳಾದರೆ
ಸಂಪತ್ತಿನ ಸಮೃದ್ಧಿ ನೀಡುವಳು || ೩೪ ||

ಎಲೈ ಸುರಥ ಮಹಾರಾಜನೇ
ಮಹಾ ಪ್ರಳಯ ಕಾಲದಲ್ಲಿ
ಮಹಾಮಾರಿಯ ಸ್ವರೂಪಳಾದ
ಮಹಾ ಕಾಳೀ ದೇವಿಯಿಂದ
ಬ್ರಹ್ಮಾಂಡವು ವ್ಯಾಪಿಸಲ್ಪಟ್ಟಿದೆ || ೩೫ ||

ನಿತ್ಯಳೇ ಪ್ರಳಯ ಕಾಲದಲ್ಲಿ
ಮಹಾಮಾರಿಯು ಆಗುವಳು
ಸೃಷ್ಟಿ ಕಾಲದಲ್ಲಿ ಸೃಷ್ಟಿ ಶಕ್ತಿಯಾಗಿ
ಸ್ಥಿತಿ ಕಾಲದಲ್ಲಿ ಸತ್ತ್ವ ಗುಣದಿಂದ
ಅವಳೇ ರಕ್ಷಣೆಯನ್ನು ಮಾಡುವಳು || ೩೬ ||

ತನ್ನ ಸನ್ನಿಧಿ ಇರುವ ಕಾಲದಲ್ಲಿ
ಮಾನವರಿಗೆ ಲಕ್ಷ್ಮೀ ರೂಪದಿ
ಸಮೃದ್ಧಿಯನ್ನು ಉಂಟು ಮಾಡುವಳು
ತನ್ನ ಸನ್ನಿಧಿ ಇಲ್ಲದ ಕಾಲದಲ್ಲಿ
ಅಲಕ್ಷ್ಮಿಯಾಗಿ ವಿನಾಶ ಮಾಡುವಳು || ೩೭ ||

ಮಹಾದೇವಿಯನ್ನು ಸ್ತುತಿಸುತ್ತ
ಪುಷ್ಪ ಗಂಧ ಧೂಪ ಮುಂತಾದ
ಉಪಚಾರಗಳಿಂದ ಅರ್ಚಿಸಿದರೆ
ಐಶ್ವರ್ಯ ಪುತ್ರಸಂತತಿ ಧರ್ಮಬುದ್ಧಿ
ಮತ್ತು ಶುಭಗತಿಯನ್ನೂ ಕೊಡುವಳು || ೩೮ ||