ಎಂಟನೆಯ ಅಧ್ಯಾಯ
ಹೇಳಿದನು ಸುಮೇಧ ಋಷಿಯು
ದೇವಿಯೊಡನೆ ಯುದ್ಧ ಮಾಡಿದ
ಚಂಡಾಸುರನು ಮುಂಡಾಸುರನು
ಅವರಿಬ್ಬರೂ ಮರಣ ಹೊಂದಿದರು
ಬಹು ಭಾಗ ಸೈನ್ಯ ಕ್ಷಯಿಸಿ ಹೋಯಿತು || ೧ ||
ಪರಾಕ್ರಮಿ ಶುಂಭಾಸುರನು
ಕೋಪಾಧೀನ ಮನಸ್ಸಿನಿಂದ
ದೇವಿಯ ಎದುರು ಯುದ್ಧ ಮಾಡಲು
ಸಮಸ್ತ ಸೈನ್ಯವು ಸಿದ್ಧವಾಗುವಂತೆ
ಆಜ್ಞೆಯನ್ನು ಮಾಡಿದ ದೈತ್ಯರಿಗೆ || ೨ ||
ಈಗಲೆ ಸರ್ವ ಸೈನ್ಯ ಬಲಸಹಿತ
ಎಂಬತ್ತಾರು ದೈತ್ಯ ಪ್ರಧಾನರು
ಹಾಗೂ ಎಂಬತ್ನಾಲ್ಕು ಬಗೆಯ
ಕಂಬು ಎಂಬ ರಾಕ್ಷಸರು ಸೇರಿ
ಶಸ್ತ್ರವನ್ನು ಎತ್ತಿ ಸೈನ್ಯವು ಹೊರಡಲಿ || ೩ ||
ವೀರರಾಗಿರುವ ರಾಕ್ಷಸರ
ಐವತ್ತು ಕೋಟಿ ಪಡೆಗಳು ಮತ್ತು
ಧೂಮ್ರ ರಕ್ಕಸರ ನೂರು ಗುಂಪಿನ
ಯೋಧರೆಲ್ಲರೂ ಯುದ್ಧ ರಂಗಕ್ಕೆ
ನನ್ನಾಜ್ಞೆಯಂತೆ ಈಗಲೆ ಹೊರಡಲಿ || ೪ ||
ಕಾಲಕ ದೌರ್ಹೃದ ಮೌರ್ಯ ಮತ್ತು
ಕಾಲಕೇಯ ಎಂಬ ಹೆಸರಿನ
ಪ್ರಸಿದ್ಧ ವಂಶದ ಅಸುರರೆಲ್ಲರು
ಈಗಲೇ ನನ್ನಾಜ್ಞೆಯಂತೆಯೆ
ಯುದ್ಧಕ್ಕೆ ಸಿದ್ಧರಾಗಿ ಹೊರಡಲಿ || ೫ ||
ಭಯಂಕರ ಶಾಸನ ಮಾಡುವ
ಅಸುರ ರಾಜನಾದ ಶುಂಭನು
ಆಜ್ಞೆಯ ಮಾಡಿ ಸಹಸ್ರ ಸಂಖ್ಯೆಯ
ಅನೇಕ ಚತುರಂಗ ಸೈನ್ಯಗಳ
ಸಮೇತನಾಗಿ ಯುದ್ಧಕ್ಕೆ ಹೊರಟ || ೬ ||
ಚಂಡಿಕಾದೇವಿಯು ತನ್ನೆದುರು
ಬಂದ ಭಯಂಕರ ಸೈನ್ಯ ನೋಡಿ
ತನ್ನ ಧನುಸ್ಸಿನ ಠೇಂಕಾರಗಳ
ಶಬ್ದದಿಂದ ಭೂಮಿ ಆಕಾಶಗಳ
ಮಧ್ಯ ಭಾಗವನ್ನೆಲ್ಲ ತುಂಬಿಸಿದಳು || ೭ ||
ಅನಂತರ ಸುರಥ ರಾಜನೇ
ದೇವಿಯ ವಾಹನ ಸಿಂಹವು
ಮಹತ್ತಾದ ಘರ್ಜನೆಯ ಮಾಡಿತು
ಸಿಂಹನಾದವನ್ನು ದೇವಿಯು ತನ್ನ
ಘಂಟಾಧ್ವನಿಯಿಂದ ಹೆಚ್ಚಿಸಿದಳು || ೮ ||
ಧನುಸ್ಸಿನ ಹೆದೆಯ ಠೇಂಕಾರ
ಸಿಂಹದ ಘರ್ಜನೆ ಘಂಟಾನಾದ
ಎಲ್ಲಾ ದಿಕ್ಕಿಗೂ ತುಂಬಿದ ಕಾಳಿಯು
ದೊಡ್ಡದಾಗಿ ಬಾಯಿಯನ್ನು ತೆರೆದು
ಭಯಂಕರ ಧ್ವನಿಯ ಮಾಡಿದಳು || ೯ ||
ಆ ಧ್ವನಿಯನ್ನು ಕೇಳಿಸಿಕೊಂಡ
ದೈತ್ಯ ಸೈನ್ಯಗಳೆಲ್ಲಾ ರೊಚ್ಚಿಗೆದ್ದು
ನಾಲ್ಕು ದಿಕ್ಕುಗಳಲ್ಲೂ ದೇವಿಯನ್ನು
ಮತ್ತು ಸಿಂಹವನ್ನು ಕಾಳಿಯನ್ನು
ಬಾಣವೃಷ್ಟಿ ಸುರಿಸಿ ಸುತ್ತುವರಿದವು || ೧೦ ||
ದೇವತೆಗಳ ಶತ್ರುಗಳಾದ
ಅಸುರರ ಸಂಹಾರಕ್ಕೂ ಮತ್ತು
ದೇವತೆಗಳ ಸಂಪತ್ಸಮೃದ್ಧಿಗೂ
ಅತ್ಯಂತ ಶಕ್ತಿ ದೇವತೆಗಳೆಲ್ಲಾ
ಬಂದು ಒಟ್ಟಾಗಿ ಸೇರಿಕೊಂಡರು || ೧೧ ||
ಬ್ರಹ್ಮ ವಿಷ್ಣು ಶಿವ ಸ್ಕಂದ ಇಂದ್ರ
ಇವರ ಅತ್ಯಂತ ವೀರ್ಯ ಬಲದ
ಶಕ್ತಿಗಳು ಅವರವರ ದೇಹದಿಂದ
ಹೊರಬಂದು ಆಯಾ ರೂಪದಿಂದ
ಚಂಡಿಕಾಂಬೆಯನ್ನು ಸೇರಿದವು || ೧೨ ||
ದೇವತೆಗಳಲ್ಲಿರುವಂತಹ
ರೂಪ ಭೂಷಣ ವಾಹನಗಳು
ಅವುಗಳ ಆಕಾರವನ್ನೆ ಹೊಂದಿ
ಆಯಾ ಶಕ್ತಿಯು ಅಸುರರೊಡನೆ
ಯುದ್ಧ ಮಾಡಲು ಬಂದು ಸೇರಿದವು || ೧೩ ||
ಹಂಸವಾಹನದಿಂದ ಕೂಡಿದ
ವಿಮಾನದಲ್ಲಿ ಕುಳಿತಿರುವವಳು
ಜಪಮಾಲೆ ಕಮಂಡಲುವ ಧರಿಸಿ
ಬಂದಿಹ ಬ್ರಹ್ಮದೇವನ ಶಕ್ತಿಯು
ಬ್ರಹ್ಮಾಣಿ ಎಂದು ಹೇಳಲ್ಪಡುವಳು || ೧೪ ||
ವೃಷಾರೂಢ ಮಾಹೇಶ್ವರಿಯು
ಶ್ರೇಷ್ಠ ತ್ರಿಶೂಲ ಧರಿಸಿದವಳು
ಬೃಹತ್ ಸರ್ಪಗಳ ಕಂಕಣವುಳ್ಳ
ಚಂದ್ರಕಲಾ ವಿಭೂಷಣಳಾಗಿ
ಬಂದು ಸೇರಿದಳು ಶಕ್ತಿ ದೇವಿಯು || ೧೫ ||
ಶಕ್ತ್ಯಾಯುಧವ ಕೈಯ್ಯಲ್ಲಿ ಧರಿಸಿದ
ನವಿಲು ವಾಹನವ ಹೊಂದಿರುವ
ಕುಮಾರ ಸ್ವಾಮಿಯ ರೂಪವನ್ನುಳ್ಳ
ಅಂಬಿಕೆಯ ಕೌಮಾರೀ ಶಕ್ತಿಯು
ದೈತ್ಯರ ಎದುರು ಯುದ್ಧಕ್ಕೆ ಬಂದಳು || ೧೬ ||
ಗರುಡ ವಾಹನದಲ್ಲಿ ಕುಳಿತು
ಶಂಕ ಚಕ್ರ ಗದಾ ಶಾಂರ್ಙ್ಗಾ
ಮತ್ತು ಖಡ್ಗಗಳನ್ನೂ ಧರಿಸಿದವಳು
ಆಗಿರುವ ವೈಷ್ಣವೀ ಶಕ್ತಿಯು
ಬಂದಳು ದೈತ್ಯರ ನಾಶ ಮಾಡಲು || ೧೭ ||
ಯಜ್ಞ ರಕ್ಷಣೆಗೆ ನಿರುಪಮವಾದ
ವರಾಹ ರೂಪವ ಧರಿಸಿರುವ
ವಿಷ್ಣುವಿನಿಂದ ಆವಿರ್ಭವಿಸಿದಳು
ವರಾಹಮೂರ್ತಿ ಆಕೃತಿ ಧರಿಸಿ
ವಾರಾಹಿ ಶಕ್ತಿ ಯುದ್ಧಕ್ಕೆ ಬಂದಳು || ೧೮ ||
ನೃಸಿಂಹನ ರೂಪವ ಧರಿಸಿ
ತನ್ನ ಕೇಸರಗಳನು ಕೊಡವಿ
ನಕ್ಷತ್ರ ಸಮೂಹಗಳ ಚಿಮ್ಮಿಸುತ್ತ
ಆ ನಾರಸಿಂಹೀ ಶಕ್ತಿಯೂ
ಸಂಗ್ರಾಮ ಭೂಮಿಗೆ ಬಂದಳು || ೧೯ ||
ಇಂದ್ರನ ಮೂರ್ತಿಯಂತಿರುವ
ಸಾವಿರ ನೇತ್ರಗಳುಳ್ಳವಳು
ಕೈಯ್ಯಲ್ಲಿ ವಜ್ರಾಯುಧವನ್ನು ಧರಿಸಿ
ಐರಾವತ ಗಜವಾಹನವೇರಿ
ಐಂದ್ರೀ ಶಕ್ತಿಯು ಯುದ್ಧಕ್ಕೆ ಬಂದಳು || ೨೦ ||
ನಂತರ ದೇವ ಶಕ್ತಿಯರಿಂದ
ಪರಿವೃತನಾದ ಮಹೇಶ್ವರನು
ಚಂಡಿಕಾಂಬೆಯನ್ನು ಕುರಿತು
ನನ್ನಲ್ಲಿರುವ ಪ್ರೀತಿಯಿಂದ ಬೇಗ
ಎಲ್ಲ ಅಸುರರನ್ನೂ ವಧಿಸು ಎಂದನು || ೨೧ ||
ಆಗ ದೇವಿಯ ದೇಹದಿಂದ
ಅತ್ಯುಗ್ರಳೂ ಭಯಂಕರಳೂ
ಹಾಗೂ ನೂರಾರು ನರಿಗಳ
ನಾದದಿಂದ ಕೂಡಿರುವಂತಹ
ಚಂಡಿಕಾ ಶಕ್ತಿಯು ಹೊರಗೆ ಬಂದಳು || ೨೨ ||
ಅಪರಾಜಿತಳಾದ ದೇವಿಯು
ಧೂಮ್ರವರ್ಣದ ಜಟೆಗಳನ್ನುಳ್ಳ
ಶಿವನನ್ನು ಕುರಿತು ಹೇ ಭಗವಂತನೇ
ನೀನು ಶುಂಭ ನಿಶುಂಭರ ಬಳಿಗೆ
ದೂತನಾಗಿ ಹೋಗು ಎಂದಳು || ೨೩ ||
ಅತಿ ಗರ್ವದಿಂದ ಮೆರೆಯುತ್ತಿರುವ
ಶುಂಭ ನಿಶುಂಭರ ಕುರಿತು ಮತ್ತು
ಯುದ್ಧಕ್ಕಾಗಿ ಸಿದ್ಧವಾಗಿ ನಿಂತಿರುವ
ಅಲ್ಲಿರುವ ಎಲ್ಲಾ ದಾನವರಿಗೂ
ನನ್ನ ಈ ಸಂದೇಶವನ್ನು ಹೇಳು || ೨೪ ||
ತ್ರೈಲೋಕ್ಯವ ಇಂದ್ರನು ಪಡೆಯಲಿ
ದೇವತೆಗಳೆಲ್ಲಾ ಎಂದಿನಂತೆ
ತಮ್ಮ ಹವಿರ್ಭಾಗಗಳ ಭುಂಜಿಸಲಿ
ನಿಮಗೆಲ್ಲ ಬದುಕುವ ಇಚ್ಛೆಯಿದ್ದರೆ
ಪಾತಾಳಕ್ಕೆ ಹೋಗಿ ಸೇರಿಕೊಳ್ಳಿ || ೨೫ ||
ನೀವೆಲ್ಲ ಶಕ್ತಿ ಸಾಮರ್ಥ್ಯಗಳ
ಅಹಂಕಾರದಿಂದ ಯುದ್ಧವನ್ನೇ
ಅಪೇಕ್ಷಿಸಿದರೆ ಕೂಡಲೇ ಬನ್ನಿರಿ
ನಿಮ್ಮೆಲ್ಲರ ರಕ್ತಮಾಂಸಗಳಿಂದ
ನನ್ನ ನರಿಗಳು ತೃಪ್ತಿ ಹೊಂದಲಿ || ೨೬ ||
ಚಂಡಿಕಾಂಬಾ ದೇವಿಯಿಂದ
ಸ್ವತಃ ಶಿವನೇ ದೂತನಾಗಿ
ನಿಯೋಜಿಸಲ್ಪಟ್ಟ ಕಾರಣದಿಂದ
ಆ ದೇವಿಯು ಸಮಸ್ತ ಲೋಕದಲ್ಲಿ
ಶಿವದೂತಿಯೆಂದು ಪ್ರಸಿದ್ಧಳಾದಳು || ೨೭ ||
ಚಂಡಿಕಾಂಬಾ ದೇವಿಯು
ಹೇಳಿದ ಸಂದೇಶ ವಾಣಿಯ
ಈಶ್ವರನಿಂದ ಕೇಳಿಸಿಕೊಂಡು
ಮಹಾಸುರರೆಲ್ಲಾ ಕೋಪಗೊಂಡು
ಕಾತ್ಯಾಯನಿ ಇದ್ದಲ್ಲಿಗೆ ಹೋದರು || ೨೮ ||
ಅನಂತರ ದೇವ ಶತ್ರುಗಳು
ಅತ್ಯಂತ ಕೋಪವುಳ್ಳವರಾಗಿ
ತಾವೇ ಮೊದಲು ದೇವಿಯ ಮೇಲೆ
ಬಾಣ ಶಕ್ತ್ಯಾಯುಧ ಋಷ್ಟಿ ಮುಂತಾದ
ಶಸ್ತ್ರಗಳ ಮಳೆಯನ್ನೇ ಸುರಿಸಿದರು || ೨೯ ||
ಅಸುರರು ಬಿಟ್ಟ ಬಾಣ ಶೂಲ
ಶಕ್ತಿ ಪರಶು ಶಸ್ತ್ರಾಸ್ತ್ರಗಳನ್ನು
ಚಂಡಿಕಾದೇವಿಯು ಲೀಲೆಯಿಂದ
ಹೆದೆಯೇರಿಸಿದ ತನ್ನ ಧನುಸ್ಸಿನಿಂದ
ಬಾಣವೃಷ್ಟಿ ಸುರಿಸಿ ಕತ್ತರಿಸಿದಳು || ೩೦ ||
ಚಂಡಿಕಾಂಬಾದೇವಿಯ
ಮುಂಬಾಗ ಕಾಳಿ ದೇವಿಯು
ಶತ್ರುಗಳನ್ನು ಶೂಲದಿಂದ ಸೀಳಿ
ಖಟ್ವಾಂಗದಿಂದ ಬಡಿದುರುಳಿಸಿ
ರಣರಂಗದಲ್ಲಿ ಸಂಚರಿಸಿದಳು || ೩೧ ||
ಈ ಸಮಯದಲ್ಲಿ ಬ್ರಹ್ಮಾಣಿಯು
ತಾನು ಓಡಾಡಿದ ಸ್ಥಳದಲ್ಲಿ
ಕಮಂಡಲುವಿನ ನೀರನ್ನು ಎರಚಿ
ಶತ್ರುಗಳ ವೀರ್ಯ ತೇಜಸ್ಸುಗಳು
ಹತವಾಗುವಂತೆ ಮಾಡಿದಳು || ೩೨ ||
ಮಾಹೇಶ್ವರಿಯು ತ್ರಿಶೂಲದಿಂದ
ವೈಷ್ಣವೀ ಶಕ್ತಿಯು ಚಕ್ರದಿಂದ
ಮತ್ತು ಅತ್ಯಂತ ಕೋಪಯುಕ್ತಳಾದ
ಕೌಮಾರಿಯು ಶಕ್ತ್ಯಾಯುಧದಿಂದ
ಅನೇಕ ದೈತ್ಯರ ಸಂಹರಿಸಿದರು || ೩೩ ||
ಇಂದ್ರಾಣಿಯ ವಜ್ರಾಯುಧದ
ಪೆಟ್ಟಿನಿಂದ ದೈತ್ಯದಾನವರು
ನೂರಾರು ಸಂಖ್ಯೆಯಲ್ಲಿ ಸೀಳಲ್ಪಟ್ಟು
ರಕ್ತ ಪ್ರವಾಹವನ್ನೇ ಹರಿಯಿಸುತ್ತ
ಭೂಮಿಯಲ್ಲಿ ಉರುಳಿ ಬಿದ್ದಿದ್ದರು || ೩೪ ||
ಕೆಲವರು ವಾರಾಹಿ ಮೂತಿಯ
ತಿವಿತದಿಂದ ನಾಶವಾದರು
ಕೋರೆದಾಡೆಗಳಿಂದ ಚುಚ್ಚಲ್ಪಟ್ಟು
ಮತ್ತು ಚಕ್ರಾಯುಧದಿ ಸೀಳಲ್ಪಟ್ಟು
ಕೆಳಗೆ ಬಿದ್ದರು ಹಲವು ದಾನವರು || ೩೫ ||
ನಾರಸಿಂಹಿಯು ಉಗುರುಗಳಿಂದ
ಸೀಳುತ್ತ ಮಹಾಸುರರ ತಿನ್ನುತ
ಹಾಗೆ ತನ್ನ ಸಿಂಹನಾದದಿಂದ
ದಿಗಂತರಗಳನ್ನು ತುಂಬಿಸುತ್ತ
ಯುದ್ಧ ಭೂಮಿಯಲ್ಲಿ ಸಂಚರಿಸಿದಳು || ೩೬ ||
ಶಿವದೂತಿಯು ಮಾಡಿರುವಂತ
ಪ್ರಚಂಡವಾದ ಅಟ್ಟಹಾಸದ
ಪ್ರಭಾವದಿಂದ ಅನೇಕ ಅಸುರರು
ಭಯಭೀತರಾಗಿ ಭೂಮಿಗೆ ಬಿದ್ದರು
ಅವರನ್ನು ತಿಂದಳು ಶಿವದೂತಿಯು || ೩೭ ||
ಕೋಪಗೊಂಡ ಮಾತೃಗಣವು
ವಿವಿಧವಾದ ಉಪಾಯದಿಂದ
ಮಹಾಸುರರನ್ನೆಲ್ಲ ಮರ್ಧಿಸುವುದನ್ನು
ನೋಡಿ ಕೆಲವು ಸೈನಿಕರು ಓಡಿದರು
ಕೆಲವರು ದಿಕ್ಕು ತಪ್ಪಿ ನಾಶವಾದರು || ೩೮ ||
ಮಾತೃಗಣಗಳ ಪೀಡನೆಗೆ
ಓಡುತಲಿರುವ ದೈತ್ಯರ ಕಂಡು
ರಕ್ತಬೀಜನೆಂಬ ಮಹಾಸುರನು
ಕೋಪಾವೇಶ ಭರಿತನಾಗಿ
ಯುದ್ಧ ಮಾಡಲು ಮುಂದೆ ಬಂದನು || ೩೯ ||
ರಕ್ತಬೀಜನ ಶರೀರದಿಂದ
ಭೂಮಿಯಲ್ಲಿ ರಕ್ತದ ಹನಿಯೊಂದು
ಬಿದ್ದರೆ ಆ ಭೂಮಿಯ ಜಾಗದಲ್ಲಿ
ಅನವಷ್ಟೇ ಬಲಶಾಲಿಯಾಗಿರುವ
ಮಹಾಸುರನೊಬ್ಬನು ಮೇಲೇಳುವನು || ೪೦ ||
ಇಂದ್ರನ ಶಕ್ತಿ ಐಂದ್ರಿಯೊಡನೆ
ರಕ್ತಬೀಜ ಮಹಾ ಅಸುರನು
ಗದೆಯನ್ನು ಧರಿಸಿ ಯುದ್ಧ ಮಾಡಿದನು
ಐಂದ್ರಿಶಕ್ತಿಯು ವಜ್ರಾಯುಧದಿಂದ
ರಕ್ತಬೀಜನನ್ನು ಪ್ರಹರಿಸಿದಳು || ೪೧ ||
ವಜ್ರಾಯುಧದಿಂದ ಹೊಡೆಯಲ್ಪಟ್ಟ
ರಕ್ತಬೀಜನ ದೇಹದಿಂದ
ತುಂಬಾ ರಕ್ತವು ಕೆಳಗೆ ಸುರಿಯಿತು
ಅವನದೇ ರೂಪ ಪರಾಕ್ರಮಗಳ
ಅನೇಕ ಯೋಧರು ಎದ್ದು ಬಂದರು || ೪೨ ||
ರಕ್ತ ಬೀಜನ ದೇಹದಿಂದ
ಕೆಳಗೆ ಎಷ್ಟು ರಕ್ತದ ಹನಿಗಳು
ಬಿದ್ದವೋ ಅಷ್ಟೇ ಸಂಖ್ಯೆಯ ರಕ್ಕಸರು
ಅವನಷ್ಟೇ ವೀರ್ಯ ಬಲ ಹಾಗೂ
ಪರಾಕ್ರಮಗಳುಳ್ಳವರು ಹುಟ್ಟಿದರು || ೪೩ ||
ರಕ್ತದ ಹನಿಗಳಿಂದ ಹುಟ್ಟಿದ
ರಕ್ಕಸರು ಮಾತೃಗಣಗಳೊಡನೆ
ಯುದ್ಧದಲ್ಲಿ ಶಸ್ತ್ರಪ್ರಹಾರಗಳಿಂದ
ಅತ್ಯಂತ ಭಯಂಕರವಾಗುವಂತೆ
ಘೋರವಾಗಿ ಯುದ್ಧವ ಮಾಡಿದರು || ೪೪ ||
ರಕ್ತಬೀಜನ ತಲೆಗೆ ಐಂದ್ರಿಯು
ವಜ್ರಾಯುಧದಿಂದ ಮತ್ತೆ ಹೊಡೆದಾಗ
ಅಧಿಕವಾಗಿ ರಕ್ತವು ಸುರಿಯಿತು
ಅದರಿಂದ ಸಾವಿರಾರು ಮಂದಿ
ರಾಕ್ಷಸರು ಮತ್ತೆ ಜನಿಸಿದರು || ೪೫ ||
ಆಗ ಸಮರಾಂಗಣದಲ್ಲಿ
ವೈಷ್ಣವಿಯು ಚಕ್ರಾಯುಧದಿಂದ
ಹೊಡೆದಳು ರಕ್ತ ಬೀಜಾಸುರನನ್ನು
ಹಾಗೂ ಐಂದ್ರಿಯೂ ಅವನನ್ನು
ಗದಾಯುಧದಿಂದ ಪ್ರಹರಿಸಿದಳು || ೪೬ ||
ವೈಷ್ಣವಿಯ ಚಕ್ರಾಯುಧದಿಂದ
ಗಾಯಗೊಂಡ ರಕ್ತ ಬೀಜನ
ರಕ್ತವು ಸುರಿದು ಮತ್ತೆ ಸಾವಿರಾರು
ಅವನಷ್ಟೆ ಶಕ್ತಿಯ ಮಹಾಸುರರಿಂದ
ರಣರಂಗವೆಲ್ಲಾ ವ್ಯಾಪಿಸಲ್ಪಟ್ಟಿತು || ೪೭ ||
ನಂತರ ಕೌಮಾರಿಯು ಅವನನ್ನು
ಹೊಡೆದಳು ಶಕ್ತ್ಯಾಯುಧದಿಂದ
ಹಾಗೆ ವಾರಾಹಿಯು ಕತ್ತಿಯಿಂದ
ಮಾಹೇಶ್ವರಿಯು ತ್ರಿಶೂಲದಿಂದ
ಹೊಡೆದರು ರಕ್ತಬೀಜಾಸುರನನ್ನು || ೪೮ ||
ಎಲ್ಲಾ ಮಾತೃದೇವತೆಗಳಿಂದ
ಎದುರಿಸಲ್ಪಟ್ಟು ರಕ್ತಬೀಜನು
ಕೋಪಗೊಂಡು ಆವೇಶದಿಂದ
ಎಲ್ಲಾ ಮಾತೃದೇವತೆಗಳನ್ನು
ಗದಾಯುಧದಿಂದ ಪ್ರಹರಿಸಿದನು || ೪೯ ||
ಶಕ್ತಿ ಶೂಲ ಶಸ್ತ್ರಾಸ್ತ್ರಗಳಿಂದ
ಬಹು ವಿಧವಾಗಿ ಹೊಡೆಯಲ್ಪಟ್ಟ
ರಕ್ತಬೀಜಾಸುರನ ದೇಹದಿಂದ
ರಕ್ತ ಪ್ರವಾಹವು ನೆಲದಲ್ಲಿ ಹರಿದು
ಅನೇಕ ಬಲಿಷ್ಠ ಅಸುರರು ಹುಟ್ಟಿದರು || ೫೦ ||
ರಕ್ತ ಬೀಜನ ರಕ್ತದಿ ಹುಟ್ಟಿದ
ಸಂಖ್ಯಾತೀತ ರಾಕ್ಷಸರಿಂದ
ಜಗತ್ತೆಲ್ಲವೂ ತುಂಬಿ ಹೋಯಿತು
ಆಗ ದೇವತಾದಿಗಳೆಲ್ಲರೂ
ಅತ್ಯಂತ ಭಯವನ್ನು ಹೊಂದಿದರು || ೫೧ ||
ಗಾಬರಿಗೊಂಡು ದುಃಖಿತರಾದ
ದೇವತಾದಿಗಳನ್ನು ನೋಡಿ
ಚಂಡಿಕಾಂಬೆಯು ಜಾಗ್ರತೆಯಿಂದ
ಕಾಳಿಯ ಕುರಿತು ಹೇ ಚಾಮುಂಡಿ
ನಿನ್ನ ಬಾಯಿಯನ್ನು ವಿಸ್ತರಿಸೆಂದಳು || ೫೨ ||
ನನ್ನ ಶಸ್ತ್ರ ಪ್ರಹಾರಗಳಿಂದ
ರಕ್ತ ಬೀಜನಿಂದ ಹೊರಹೊಮ್ಮಿದ
ರಕ್ತವನ್ನು ಹುಟ್ಟುವ ಮಹಾಸುರರನ್ನೂ
ನೀನು ನಿನ್ನ ವೇಗಶಾಲಿಯಾದ
ಬಾಯಿಯಿಂದ ಹೀರಿ ನುಂಗಿಬಿಡು || ೫೩ ||
ಮತ್ತು ಆ ರಕ್ತಬೀಜಾಸುರನ
ರಕ್ತ ಪ್ರವಾಹದಿಂದ ಹುಟ್ಟಿದ
ಅವನಷ್ಟೇ ಬಲಪರಾಕ್ರಮಗಳ
ಮಹಾಸುರರನ್ನು ನೀನು ತಿನ್ನುತ್ತ
ರಣರಂಗದಲ್ಲೆಲ್ಲಾ ಸಂಚರಿಸು || ೫೪ ||
ಹೀಗೆ ರಕ್ತವ ಕಳೆದುಕೊಂಡು
ಅಸುರನು ನಾಶವಾಗುವನು
ಹುಟ್ಟಿರುವ ಉಗ್ರ ರಾಕ್ಷಸರನ್ನೆಲ್ಲಾ
ನೀನೇ ತಿಂದು ನಾಶವ ಮಾಡು
ಇನ್ನು ಇಂಥ ರಾಕ್ಷಸರು ಹುಟ್ಟುವುದಿಲ್ಲ || ೫೫ ||
ಋಷಿಯೆಂದ ಕಾಳಿಗೆ ಹೇಳಿ
ದೇವಿಯು ತನ್ನ ಶೂಲದಿಂದ
ಹೊಡೆದಳು ರಕ್ತ ಬೀಜಾಸುರನನ್ನು
ಆಗ ಸುರಿದ ರಕ್ತವನ್ನು ಕಾಳಿಯು
ಬಾಯಿಯಿಂದ ಪಾನ ಮಾಡಿದಳು || ೫೬ ||
ನಂತರ ರಕ್ತಬೀಜಾಸುರನು
ಯುದ್ಧವನ್ನು ಮಾಡುತ್ತ ಗದೆಯಿಂದ
ಹೊಡೆದನು ಚಂಡಿಕಾ ದೇವಿಯನ್ನು
ಆ ಗದಾ ಪ್ರಹಾರವು ದೇವಿಗೆ
ಸ್ವಲ್ಪವೂ ನೋವನ್ನುಂಟು ಮಾಡಲಿಲ್ಲ || ೫೭ ||
ದೇವಿಯಿಂದ ಪ್ರಹರಿಸಲ್ಪಟ್ಟ
ರಕ್ತಬೀಜನ ದೇಹದಿಂದ
ಬಹಳ ರಕ್ತವು ಸುರಿಯುತ್ತಿರುವಾಗ
ಕೆಳಗೆ ಬೀಳದಂತೆ ಚಾಮುಂಡಿಯು
ತನ್ನ ಬಾಯಿಯಿಂದ ಹೀರಿಕೊಂಡಳು || ೫೮ ||
ಅಸುರನ ರಕ್ತಸ್ರಾವದಿಂದ
ಚಾಮುಂಡಿಯ ಬಾಯಿಯಲ್ಲೇ
ಹುಟ್ಟುತ್ತಿರುವ ಮಹಾಸುರರನ್ನೆಲ್ಲಾ
ತಿನ್ನುತ್ತಲೇ ಇದ್ದಳು ಚಾಮುಂಡಿಯು
ಹಾಗೆ ರಕ್ತವನ್ನೂ ಕುಡಿಯುತ್ತಿದ್ದಳು || ೫೯ ||
ಚಂಡಿಕಾ ದೇವಿಯು ತನ್ನ
ಶೂಲ ಚಕ್ರ ಬಾಣಗಳಿಂದ
ಕತ್ತಿ ಋಷ್ಟಿ ವಿವಿಧ ಆಯುಧದಿಂದ
ಹೊಡೆಯುತ್ತಿದ್ದಳು ರಕ್ತ ಬೀಜನನ್ನು
ರಕ್ತ ಹೀರುತ್ತಿದ್ದಳು ಚಾಮುಂಡಿಯು || ೬೦ ||
ಸುರಥನೇ ಅನೇಕ ಶಸ್ತ್ರಗಳ
ಸಮೂಹಗಳಿಂದ ಹೊಡೆಯಲ್ಪಟ್ಟ
ರಕ್ತಬೀಜನಾಗಿರುವಂತಹ
ಮಹಾಸುರನು ರಕ್ತಹೀನನಾಗಿ
ಭೂತಳದ ಮೇಲೆ ಬಿದ್ದು ಸತ್ತನು || ೬೧ ||
ಸುರಥ ರಾಜನೇ ನಂತರ
ದೇವತೆಗಳೆಲ್ಲ ಹರ್ಷಗೊಂಡರು
ಅವರ ಶಕ್ತಿಗಳಿಂದ ಉದ್ಭವಿಸಿದ್ದ
ಮಾತೃಗಣದ ದೇವಿಯರೆಲ್ಲರೂ
ರಕ್ತದ ಮದದಿಂದ ಕುಣಿದಾಡಿದರು || ೬೨ ||
ಗೀತೆ ಗೊಂಚಲು
32 Songs