ನಾಲ್ಕನೆಯ ಅಧ್ಯಾಯ

ಹೇಳಿದನು ಸುಮೇಧ ಋಷಿಯು
ಮಹಿಷನ ವಧೆಯಾದ ಮೇಲೆ
ಇಂದ್ರಾದಿ ದೇವತೆಗಳೆಲ್ಲರೂ
ಭಕ್ತಿಯಿಂದ ಚಂಡಿಕಾಂಬೆಯ
ಸ್ತೋತ್ರವನ್ನು ಮಾಡತೊಡಗಿದರು || ೧ ||

ಶಕ್ತಿಯುತ ದುರಾತ್ಮ ಮಹಿಷನನ್ನು
ಸೈನ್ಯವನ್ನೂ ವಧಿಸಿದ ದೇವಿಗೆ
ಇಂದ್ರಾದಿ ದೇವತೆಗಳು ಬಾಗಿ
ನಮಿಸಿ ಹರ್ಷದಿ ರೋಮಾಂಚನದಿ
ಚಾರುದೇಹದಿ ಸ್ತುತಿ ಮಾಡಿದರು || ೨ ||

ಸಮಸ್ತ ದೇವತಾದಿಗಳ
ಗುಂಪಿನ ಶಕ್ತಿಯ ಸಮೂಹದ
ಸಮಷ್ಟಿ ಮೂರ್ತಿಯಾಗಿರುವಂತಹ
ಮಹಾದೇವಿಯ ಆತ್ಮಶಕ್ತಿಯು
ಜಗತ್ತನ್ನೆಲ್ಲಾ ವ್ಯಾಪಿಸಿರುವುದು

ಸಕಲ ದೇವತೆಗಳಿಂದಲೂ
ಹಾಗೂ ಮಹರ್ಷಿಗಳಿಂದಲೂ
ಪೂಜ್ಯಳಾಗಿರುವ ಅಂಬಿಕೆಯನ್ನು
ಭಕ್ತಿಯಿಂದ ನಮಸ್ಕರಿಸುವೆವು
ಅಂಬಿಕೆ ಶುಭವನ್ನುಂಟು ಮಾಡಲಿ || ೩ ||

ಮಾತೆ ಚಂಡಿಕಾ ದೇವಿಯ
ನಿರುಪಮವಾಗಿರುವಂತಹ
ಪ್ರಭಾವವಾಗಲಿ ಬಲವಾಗಲಿ
ಭಗವಂತ ವಿಷ್ಣು ಬ್ರಹ್ಮ ಶಿವರೆಂಬ
ತ್ರಿಮೂರ್ತಿಗಳೂ ವರ್ಣಿಸಲಾರರು

ಮಹಾದೇವಿಯು ಆಗಿರುವ
ಅಂತಹ ಚಂಡಿಕಾದೇವಿಯು
ಸಮಸ್ತ ಪ್ರಪಂಚವ ಕಾಪಾಡಲು
ಮತ್ತು ಅಶುಭದಿಂದಾಗುವ ಭಯವ
ನೀಗಿಸಲು ಸಂಕಲ್ಪವ ಮಾಡಲಿ || ೪ ||

ದೇವೀ ನೀನು ಪುಣ್ಯವಂತರ
ಮನೆಗಳಲ್ಲಿ ಲಕ್ಷ್ಮೀ ಸ್ವರೂಪಳು
ಪಾಪಿಗಳ ಮನೆಯಲ್ಲಿ ಅಲಕ್ಷ್ಮಿಯು
ಮತ್ತು ಸುಸಂಸ್ಕೃತರ ಹೃದಯದಲ್ಲಿ
ಸುಬುದ್ಧಿಯ ರೂಪದಲ್ಲಿ ನೀನಿರುವೆ

ಸಜ್ಜನರಲ್ಲಿ ಶ್ರದ್ಧಾರೂಪಳು
ಸತ್ಕುಲ ಪ್ರಸೂತರಾದವರಲ್ಲಿ
ಲಜ್ಜಾಸ್ವರೂಪಳಾಗಿರುವೆ ನೀನು
ನಿನ್ನನ್ನು ನಾವು ನಮಸ್ಕರಿಸುವೆವು
ಹೇ ದೇವೀ ವಿಶ್ವವನ್ನು ಕಾಪಾಡು || ೫ ||

ಹೇ ಮಾತೆಯೇ ಮಹಾದೇವೀ
ಅಸುರರ ದೇವತೆಗಳ ಮತ್ತು
ಶಕ್ತಿಗಣ ಮುಂತಾದ ವ್ಯಕ್ತಿಗಳಲ್ಲಿ
ಅತ್ಯದ್ಭುತವನ್ನುಂಟು ಮಾಡುವ
ನಿನ್ನಯ ಮಹಿಮೆಯ ಚರಿತ್ರೆಗಳನ್ನು

ಮನಸ್ಸಿನಿಂದ ಚಿಂತಿಸಲಾಗದ
ಅತಿ ವೀರ್ಯದಿಂದ ಕೂಡಿರುವ
ಅಸುರರನ್ನು ಸಂಹಾರ ಮಾಡಿದ
ಯುದ್ಧ ರಂಗದಲ್ಲಿ ಕಾಣಿಸಿದ ನಿನ್ನ
ಸ್ವರೂಪವನ್ನು ಹೇಗೆ ವರ್ಣಿಸುವುದು || ೬ ||

ಸತ್ತ್ವ ರಜಸ್ಸು ತಮಸ್ಸುಗಳೆಂಬ
ಗುಣತ್ರಯದ ಉಪಾಧಿಯಿಂದ
ಸ್ವೀಕರಿಸಿದ ಮೂರ್ತಿತ್ರಯದಿಂದ
ಸೃಷ್ಟಿ ಸ್ಥಿತಿ ಸಂಹಾರ ಮಾಡುವ
ನೀನು ಜಗತ್ತಿಗೆ ಕಾರಣ ದೇವೀ

ಹರಿ ಹರ ಬ್ರಹ್ಮರು ನಿನ್ನ ಅರಿಯರು
ಸರ್ವಾಶ್ರಯಳು ಪ್ರಕೃತಿ ಸ್ವರೂಪಿ
ವಾಙ್ಮಾನಸಗಳಿಗೆ ಅಗೋಚರಳು
ಪರಬ್ರಹ್ಮ ಸ್ವರೂಪಿಣಿಯಾಗಿರುವೆ
ಸಕಲ ಪ್ರಪಂಚವು ನಿನ್ನ ಅಂಶವು || ೭ ||

ದೇವತೆಗಳು ಸ್ವಾಹಾದೇವಿಯ
ಶಬ್ದ ಕೀರ್ತನದಿ ಯಜ್ಞಗಳಲ್ಲಿ
ಸಿಗುತಲಿರುವ ಹವಿಸ್ಸು ಭುಂಜಿಸಿ
ಅವರು ತೃಪ್ತಿಯನ್ನು ಹೊಂದುವಂತ
ಸ್ವಾಹಾದೇವೀ ನೀನಾಗಿರುವೆ

ಪಿತೃಗಳಿಗೆ ಶಾದ್ಧಾನ್ನ ಕೊಡಲು
ಉಚ್ಚರಿಸುವ ಸ್ವಧಾ ಶಬ್ದದಿಂದ
ಬೋಧಿಸಲ್ಪಟ್ಟ ಪಿತೃ ದೇವತೆಗಳು
ತೃಪ್ತಿಯ ಪಡಲು ಕಾರಣಳಾದ
ಸ್ವಧಾ ದೇವಿಯೂ ನೀನಾಗಿರುವೆ || ೮ ||

ದೃಢ ನಿಗ್ರಹದ ಇಂದ್ರಿಯವುಳ್ಳ
ತತ್ತ್ವ ಸಾರವನ್ನರಿತಿರುವವರು
ರಾಗ ದ್ವೇಷಗಳನ್ನು ತ್ಯಜಿಸಿರುವ
ಸಕಲ ದೋಷ ಶೂನ್ಯರಾಗಿರುವ
ಮೋಕ್ಷಾರ್ಥಿಗಳಾದ ಮುನಿವರರು

ಮುಕ್ತಿಗಾಗಿ ಕ್ಲೇಶಕರವಾದ
ಉಪವಾಸಾದಿ ಮಹಾ ವ್ರತಗಳ
ಸರ್ವೋತ್ತಮ ಬ್ರಹ್ಮ ವಿದ್ಯೆ ಪಠಣವ
ಮಾಡುವವರಿಗೆ ಸಿದ್ಧಿಯನ್ನು ಕೊಡುವ
ಬ್ರಹ್ಮ ವಿದ್ಯಾ ಸ್ವರೂಪಳಾಗಿರುವೆ || ೯ ||

ದೇವೀ ಓಂಕಾರ ರಮ್ಯವಾದ
ಪದಪಾಠಗಳಿಂದ ಕೂಡಿದ
ನಿರ್ಮಲವಾದ ಋಗ್ವೇದ ಹಾಗೂ
ಯಜುರ್ವೇದ ಸಾಮವೇದಗಳಿಗೆ
ಶಬ್ದ ಸ್ವರೂಪದ ನಿಧಿಯಾಗಿರುವೆ

ಜಗತ್ತಿನ ಪೀಡೆಯ ಪರಿಹರಿಸಿ
ಯೋಗಕ್ಷೇಮಕ್ಕೆ ಬೇಕಾದ
ಲೌಕಿಕ ಶಾಸ್ತ್ರಗಳೆಲ್ಲವು ನೀನೇ
ಪೂಜ್ಯಳಾದ ಪ್ರಕಾಶ ಸ್ವರೂಪಿ
ವೇದಮಾತೆಯೂ ನೀನಾಗಿರುವೆ || ೧೦ ||

ಹೇ ದೇವೀ ಸಕಲ ಶಾಸ್ತ್ರಗಳ
ಸಾರವನ್ನು ತಿಳಿಯುವಂತಹ
ಆ ಮೇಧಾಶಕ್ತಿಯು ನೀನೇ
ದುರ್ಗಮ ಭವಸಾಗರ ದಾಟಿಸುವ
ನೌಕೆಯಂತಿಹ ದುರ್ಗಾದೇವಿಯು ನೀನೇ

ಮಧು ಕೈಟಭರನ್ನು ವಧಿಸಿರುವ
ಮಹಾ ವಿಷ್ಣುವಿನ ಹೃದಯದಲ್ಲಿ
ವಾಸಿಸಿರುವ ಮಹಾಲಕ್ಷ್ಮಿ ನೀನೇ
ಚಂದ್ರಶೇಖರ ಶಿವನೊಂದಿಗೆ
ಪ್ರತಿಷ್ಠಿತಳಾದ ಗೌರಿಯು ನೀನೇ || ೧೧ ||

ಮಂದಹಾಸಯುಕ್ತ ನಿರ್ಮಲವು
ಪೂರ್ಣಚಂದ್ರನ ಬಿಂಬದಂತ
ಉತ್ತಮ ಸ್ವರ್ಣಕಾಂತಿಯ ನಿನ್ನ ಮುಖವ
ನೋಡಿದರೂ ಮಹಿಷಾಸುರನು
ನಿನ್ನನು ಪ್ರಹರಿಸಿರುವುದು ಆಶ್ವರ್ಯವು || ೧೨ ||

ಮಹಾದೇವೀ ಕೋಪದಿಂದ
ನೀನು ಗಂಟಿಕ್ಕಿದ ಹುಬ್ಬುಗಳ
ವಕ್ರತೆಯಿಂದ ಭಯಂಕರವು ಮತ್ತು
ಉದಯಿಸುತ್ತಿರುವ ಚಂದ್ರನಂತೆ
ತೇಜೋಮಯವುಳ್ಳವಳಾಗಿರುವೆ

ತೇಜೋಮಯವಾದಂತಹ ನಿನ್ನ
ಮುಖವ ನೋಡಿ ಮಹಿಷಾಸುರನು
ಪ್ರಾಣ ಬಿಡದೆ ಇರುವುದು ವಿಚಿತ್ರವು
ಏಕೆಂದರೆ ಕೋಪಗೊಂಡ ಯಮನನ್ನು
ನೋಡಿದವರ್ಯಾರು ಬದುಕಬಲ್ಲರು || ೧೩ ||

ಹೇ ದೇವೀ ಪ್ರಸನ್ನಳಾಗು
ಪರಮ ಸ್ವರೂಪಳಾದ ನೀನು
ಕೋಪದಿ ದುಷ್ಟರ ವಂಶ ವಧಿಸಿದೆ
ಮಹಿಷಾಸುರನ ಅಪಾರವಾದ
ಸೈನ್ಯವೂ ನಿನ್ನಿಂದ ನಾಶವಾಗಿದೆ || ೧೪ ||

ದೇವೀ ನೀನು ಪ್ರಸನ್ನಳಾದರೆ
ಎಲ್ಲ ದೇಶಗಳಲ್ಲೂ ಗೌರವವು
ಐಶ್ವರ್ಯ ಯಶಸ್ಸುಗಳು ದೊರಕುವುದು
ಮಡದಿ ಮಕ್ಕಳು ಸೇವಕರೊಂದಿಗೆ
ಬಾಳುತ್ತ ಅವರು ಧನ್ಯರಾಗುವರು || ೧೫ ||

ದೇವೀ ನಿನ್ನ ಅನುಗ್ರಹದಿಂದ
ಪುಣ್ಯಾತ್ಮನು ಧಾರ್ಮಿಕ ಕರ್ಮಗಳ
ನಿರಂತರ ಮಾಡಿ ಸ್ವರ್ಗ ಪಡೆವನು
ಸತ್ಕರ್ಮಗಳನ್ನು ಮಾಡಿಸಿ ನೀನು
ಮೂರ್ಲೋಕಗಳಿಗೂ ಫಲ ನೀಡುವೆ || ೧೬ ||

ದುರ್ಗಾದೇವೀ ಕಷ್ಟದ ಸಮಯ
ನಿನ್ನ ಸ್ಮರಿಸುವ ಜಂತುಗಳಿಗೆ
ಕಷ್ಟವ ಭೀತಿಯ ನಿವಾರಿಸುವೆ
ಸುಖದ ಸಮಯ ನಿನ್ನ ಸ್ಮರಿಸಿದರೆ
ಶ್ರೇಯಸ್ಕರ ವಿವೇಕವ ಕೊಡುವೆ

ದೇವೀ ನೀನು ದಾರಿದ್ರ್ಯವನ್ನು
ದುಃಖವನ್ನು ಭಯವನ್ನು ಪರಿಹರಿಸಿ
ಯಾವಾಗಲೂ ಎಲ್ಲಾ ಸಹಾಯವ
ಮಾಡುವ ದಯಾಪೂರಿತೆ ನೀನು
ನೀನಲ್ಲದೆ ಮತ್ಯಾರು ಇರುವರು || ೧೭ ||

ಹೇ ದೇವೀ ಲೋಕ ಕಂಟಕರು
ಹತರಾದದ್ದು ಜಗತ್ತಿಗೆ ಸುಖವು
ಮಹಿಷಾಸುರನು ಮುಂತಾದವರು
ಚಿರಕಾಲ ನರಕದಲ್ಲಿ ನರಳುವ
ಪಾಪಕರ್ಮಗಳನ್ನು ಮಾಡಿದ್ದರು

ಆದರೂ ಅಂತಹ ದುಷ್ಟರೆಲ್ಲಾ
ಸಂಗ್ರಾಮದಲ್ಲಿ ಮರಣ ಹೊಂದಿ
ಸ್ವರ್ಗ ಸುಖವನ್ನು ಹೊಂದಲಿ ಎಂದು
ಶತ್ರುಗಳನ್ನು ಸಂಹರಿಸುವೆ ನೀನು
ಶತ್ರುಗಳಿಗೂ ಸಹಾಯ ಮಾಡುವೆ || ೧೮ ||

ನಿನ್ನ ದೃಷ್ಟಿಯಿಂದ ಶತ್ರುಗಳನ್ನು
ಭಸ್ಮ ಮಾಡದೆ ನಿನ್ನ ಶಸ್ತ್ರದಿಂದ
ಪವಿತ್ರರಾಗಿ ಆ ಶತ್ರುಗಳೆಲ್ಲಾ
ಪುಣ್ಯಲೋಕವನ್ನು ಸೇರಲಿ ಎಂಬ
ನಿನ್ನ ಕೃಪಾ ಬುದ್ಧಿಯು ಸಾಧುವಾದುದು || ೧೯ ||

ದೇವೀ ನಿನ್ನ ಖಡ್ಗದ ಪ್ರಭೆಯಿಂದ
ಶೂಲಾಗ್ರದ ಕಾಂತಿಯಿಂದ
ದೈತ್ಯರ ಕಣ್ಣು ಕುರುಡಾಗದೆ ಇರಲು
ಅಮೃತ ಕಿರಣ ರಂಜಿತವಾಗಿಹ
ನಿನ್ನ ವದನ ನೋಡಿರುವುದೆ ಕಾರಣ || ೨೦ ||

ಹೇ ದೇವೀ ನಿನ್ನ ಸ್ವಭಾವವು
ದುಷ್ಟ ಮದಾಂಧರ ಶಮನವು
ರೂಪವು ಅವಿಚಿಂತ್ಯವು ಅಸದೃಶವು
ದೇವತೆಗಳನು ಗೆದ್ದ ರಾಕ್ಷಸರ
ನಿಗ್ರಹ ಶಕ್ತಿಯು ವೈರಿಗಳಲ್ಲೂ ದಯೆಯು || ೨೧ ||

ನಿನ್ನ ಪರಾಕ್ರಮ ಶತ್ರುಗಳಿಗೆ
ಭಯವಾಗುವುದು ಹಾಗೆಯೆ ನಿನ್ನ
ಮನೋಹರ ಸೌಂದರ್ಯ ಮತ್ತೆಲ್ಲಿಹುದು
ಕೃಪಾ ಚಿತ್ತವ ಸಮರ ನಿಷ್ಠುರತೆಯ
ಮೂರ್ಲೋಕದಲ್ಲು ನಿನ್ನಲ್ಲೆ ಕಾಣುವೆವು || ೨೨ ||

ದೇವೀ ನೀನು ಶತ್ರುಗಳ ವಧಿಸಿ
ಸಮಸ್ತ ತ್ರೈಲೋಕ್ಯ ಸಂರಕ್ಷಿಸಿದೆ
ನಿನ್ನ ಶಸ್ತ್ರದಿಂದ ದುಷ್ಟರಿಗೂ ಸ್ವರ್ಗವು
ರಕ್ಕಸರ ಕೊಂದು ಭಯ ನಿವಾರಿಸಿದ
ನಿನ್ನನ್ನು ನಾವು ನಮಸ್ಕರಿಸುವೆವು || ೨೩ ||

ದೇವೀ ನಿನ್ನ ಶೂಲದಿಂದ
ಯಾವಾಗಲೂ ನಮ್ಮನ್ನು ರಕ್ಷಿಸು
ಅಂಬಿಕೆಯೇ ಖಡ್ಗದಿಂದ ಪಾಲಿಸು
ಘಂಟಾಧ್ವನಿಯಿಂದ ಕಾಪಾಡು
ಬಿಲ್ಲಿನ ಹೆದೆಯಿಂದ ಸಂರಕ್ಷಿಸು || ೨೪ ||

ಹೇ ಚಂಡಿಕೆ ಸರ್ವೇಶ್ವರಿ ನಿನ್ನ
ಶೂಲಾಯುಧವ ತಿರುಗಿಸುತ್ತ
ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ
ಹಾಗೆ ಉತ್ತರ ದಕ್ಷಿಣ ದಿಕ್ಕುಗಳಲ್ಲೂ
ನೀನೇ ನಮ್ಮನ್ನು ರಕ್ಷಣೆ ಮಾಡು || ೨೫ ||

ಹೇ ದೇವೀ ತ್ರಿಲೋಕಗಳಲ್ಲಿ
ವಿರಾಜಿಸುತ್ತ ಸಂಚರಿಸುವ
ನಿನ್ನ ಸೌಮ್ಯ ರೂಪಗಳಿಂದಲೂ
ಮತ್ತು ಘೋರ ರೂಪಗಳಿಂದಲೂ
ನೀನು ನಮ್ಮನ್ನು ಜಗತ್ತನ್ನೂ ರಕ್ಷಿಸು || ೨೬ ||

ಹೇ ದೇವೀ ಅಂಬಿಕೆ ನಿನ್ನ
ಕರಪಲ್ಲವಗಳ ಸಂಗ ಹೊಂದಿ
ಶೋಭಿಸುತಿರುವ ಖಡ್ಗ ಶೂಲ ಮತ್ತು
ಗದೆ ಮುಂತಾದ ಅಸ್ತ್ರಗಳಿಂದಲೂ
ಎಲ್ಲೆಡೆಗಳಲ್ಲೂ ನಮ್ಮನ್ನು ರಕ್ಷಿಸು || ೨೭ ||

ಹೇಳಿದನು ಸುಮೇಧ ಋಷಿಯು
ದೇವತೆಗಳು ಸ್ತುತಿಸಿದ ಮೇಲೆ
ನಂದನವನದ ದಿವ್ಯ ಕುಸುಮಗಳ
ತಂದು ಅರ್ಚಿಸಿ ಸುಗಂಧ ಲೇಪಿಸಿ
ಜಗದ್ಧಾತ್ರಿ ದೇವಿಯ ಪೂಜಿಸಿದರು || ೨೮ ||

ದೇವಿಯನ್ನು ದೇವತಾದಿಗಳು
ಉತ್ತಮವಾದ ಧೂಪಗಳಿಂದ
ಭಕ್ತಿಯಿಂದ ಪೂಜಿಸಿ ನಮಿಸಿದಾಗ
ದೇವಿಯು ಪ್ರಸನ್ನ ವದನಳಾಗಿ
ದೇವತೆಗಳಿಗೆ ಹೀಗೆಂದಳು || ೨೯ ||

ದೇವಿಯೆಂದಳು ದೇವತೆಗಳೇ
ನಿಮ್ಮ ಅಭೀಷ್ಟದ ವರವ ಕೇಳಿ
ನಿಮ್ಮ ಸ್ತವಗಳಿಂದ ಪೂಜಿತಳಾದ
ನಾನು ನಿಮ್ಮ ಅಭೀಷ್ಟದ ವರವನ್ನು
ಅತ್ಯಂತ ಪ್ರೀತಿಯಿಂದ ಕೊಡುವೆನು || ೩೦ ||

ದುಷ್ಟ ರಾಕ್ಷಸರ ಮರ್ಧನ ಬಿಟ್ಟು
ನಿಮಗೆ ಅಸಾಧ್ಯವಾದ ಕರ್ತವ್ಯವು
ಇನ್ನೇನಿದೆಯೋ ತಿಳಿದಿಲ್ಲವೆಂದ
ದೇವಿಯ ನುಡಿಗೆ ದೇವತೆಗಳು
ನಿವೇದಿಸಿದರು ಪ್ರತ್ಯುತ್ತರವನ್ನು || ೩೧ ||

ಭಗವತಿಯಾಗಿರುವ ನೀನು
ನಮ್ಮಿಷ್ಟವನ್ನು ಅನುಗ್ರಹಿಸಿರುವೆ
ದೇವಲೋಕದಿಂದ ನಮ್ಮೆಲ್ಲರನ್ನು
ಹೊರಗಟ್ಟಿದ ಮಹಿಷಾಸುರನನ್ನು
ನಮ್ಮಿಚ್ಛೆಯಂತೆ ವಧಿಸಿದೆ ನೀನು || ೩೨ ||

ಮಹೇಶ್ವರಿಯೇ ಕೇಳಿಕೊಳ್ಳುವೆವು
ನೀನು ವರವ ಕೊಡುವೆಯಾದರೆ
ಪರಿಹರಿಸಿ ಕೊಳ್ಳಲಾಗದ ಕಷ್ಟದಲ್ಲಿ
ನಿನ್ನ ಸ್ಮರಿಸಿದಾಗ ನೀನು ಬಂದು
ನಮ್ಮ ಕಷ್ಟಗಳನ್ನೆಲ್ಲಾ ಪರಿಹರಿಸು || ೩೩ ||

ಹೇ ದೇವೀ ಅಮಲಾನನೇ
ಈ ಪವಿತ್ರ ಸ್ತೋತ್ರಗಳಿಂದ
ನಿನ್ನ ಸ್ತುತಿಸುವವಗೆ ಸಂಪತ್ತನ್ನು
ಸಮೃದ್ಧಿಯನ್ನು ಮತ್ತು ಪತ್ನಿ ಪುತ್ರರನ್ನು
ಮುಂತಾದ ವಿಭವವ ಅನುಗ್ರಹಿಸು || ೩೪ ||

ಜಗದಾಂಬಿಕೆಯೇ ನಮಗೆಲ್ಲ್ಲಾ
ಅನುಗ್ರಹ ತೋರಿರುವ ನೀನು
ನಮ್ಮ ಮನವಿಯಂತೆ ಈ ಸ್ತೋತ್ರವ
ಸ್ತುತಿಸಿದ ಮಾನವಗೆ ಐಶ್ವರ್ಯದ
ಸಮೃದ್ಧಿಗಳಿಗೆ ಕಾರಣಳಾಗು || ೩೫ ||

ಸುರಥಗೆ ಸುಮೇಧ ಮುನಿಯೆಂದ
ದೇವತೆಗಳು ಜಗಕೆ ತಮ್ಮ ಹಿತಕೆ
ಪ್ರಾರ್ಥಿಸಿದಾಗ ಭದ್ರಕಾಳಿಯು
ಪ್ರಸನ್ನಳಾಗಿ ಹಾಗೆ ಆಗಲೆಂದು
ವರವನ್ನು ಕೊಟ್ಟು ಅದೃಶ್ಯಳಾದಳು || ೩೬ ||

ಸುರಥ ರಾಜನೇ ಆ ದೇವಿಯು
ಹಿಂದೆ ಮೂರೂ ಜಗತ್ತುಗಳಿಗೆ
ಹಿತವನ್ನು ಮಾಡುವ ಸಲುವಾಗಿ
ದೇವ ಶರೀರಗಳ ತೇಜಸ್ಸಿಂದ
ಉತ್ಪನ್ನಳಾದಳೆಂದು ಹೇಳಿರುವೆ || ೩೭ ||

ಮಹಾದೇವಿಯು ದುಷ್ಟ ದೈತ್ಯರನ್ನು
ಮತ್ತು ಶುಂಭ ನಿಶುಂಭರೆಂಬ
ಪ್ರಧಾನ ರಾಕ್ಷಸರನ್ನು ವಧಿಸಲು
ಗೌರಿಯ ದೇಹದಿ ಆವಿರ್ಭವಿಸಿದ
ಆ ಚರಿತ್ರೆಯನ್ನು ಹೇಳುವೆ ನಾನು || ೩೮ ||

ಮಹಾದೇವಿಯು ಲೋಕಗಳ
ರಕ್ಷಣೆ ಮಾಡುವ ಸಲುವಾಗಿ
ದೇವತೆಗಳ ಉಪಕಾರಕ್ಕಾಗಿ
ಆವಿರ್ಭವಿಸಿದ ಆ ಚರಿತ್ರೆಯನ್ನು
ಅದು ನಡೆದಂತೆ ಹೇಳುವೆ ನಾನು || ೩೯ ||