ಐದನೇ ಅಧ್ಯಾಯ

ಹೇಳಿದನು ಸುಮೇಧ ಋಷಿಯು
ಹಿಂದೆ ಶುಂಭ-ನಿಶುಂಭರೆಂಬ
ಅಸುರರು ಮದಬಲದಿಂದ ಇಂದ್ರನ
ಯಜ್ಞ ಭಾಗವ ಮತ್ತು ಮೂರ್ಲೋಕಗಳ
ಅಧಿಪತ್ಯವನ್ನು ಅಪಹರಿಸಿದರು || ೧ ||

ನಂತರ ಶುಂಭ-ನಿಶುಂಭರು
ಸೂರ್ಯ ಇಂದ್ರ ಮತ್ತು ಕುಬೇರನ
ಹಾಗೂ ಯಮ ವರುಣ ಎಂಬುವ
ಲೋಕಪಾಲಕರ ಅಧಿಕಾರದ
ಪದವಿಗಳನ್ನು ಆಕ್ರಮಿಸಿದರು || ೨ ||

ಶುಂಭ-ನಿಶುಂಭರು ವಾಯವಿನ
ಅಧಿಕಾರ ಮತ್ತು ವೈಭವವನ್ನು
ಮತ್ತು ಅಗ್ನಿದೇವನು ಪಡೆದಿರುವ
ಅಧಿಕಾರ ಗೌರವಗಳನ್ನು ಕೂಡ
ಬಲವಂತವಾಗಿ ಕಿತ್ತುಕೊಂಡರು || ೩ ||

ಶುಂಭ ನಿಶುಂಭ ಮಹಾಸುರರು
ದೇವತೆಗಳ ಅಧಿಕಾರವನ್ನು
ಆಕ್ರಮಿಸಿ ಆಳ ತೊಡಗಿದರು
ದೇವತೆಗಳು ಪರಾಜಿತರಾಗಿ
ರಾಜ್ಯದಿಂದ ಹೊರದೂಡಲ್ಪಟ್ಟರು || ೪ ||

ಹೀಗೆ ಆ ಮಹಾಸುರರಿಂದ
ಅಧಿಕಾರವನ್ನು ಕಳೆದುಕೊಂಡ
ದೇವತಾದಿಗಳೆಲ್ಲರೂ ಸೇರಿ
ಎಲ್ಲೂ ಪರಾಜಯ ಹೊಂದದಂತೆ
ಜಯ ಪ್ರಾಪ್ತಿಗೆ ದೇವಿಯ ಸ್ಮರಿಸಿದರು || ೫ ||

ಆಪತ್ತಿಗೆ ಗುರಿಯಾದಾಗ
ನಾವು ದೇವಿಯನ್ನು ಸ್ಮರಿಸಿದರೆ
ಮಹಾಸಂಕಟಗಳನು ಕ್ಷಣದಲ್ಲಿ
ನಾಶ ಮಾಡುವೆನೆಂದು ವರವನ್ನು
ನೀಡಿರುವಳು ಆ ಮಹಾದೇವಿ || ೬ ||

ದೇವಿಯ ವಚನವನ್ನು ನೆನೆದು
ಯೋಚಿಸಿ ದೇವತಾದಿಗಳೆಲ್ಲ
ಪರ್ವತ ರಾಜನ ಹಿಮಾಲಯ ಸೇರಿ
ವಿಷ್ಣು ಮಾಯಾ ಸ್ವರೂಪಳಾದ
ಮಹಾದೇವಿಯನ್ನು ಸ್ತುತಿಸಿದರು || ೭ ||

ದೇವತೆಗಳೆಲ್ಲರೂ ಹೇಳಿದರು
ಮಹಾ ದೇವಿಗೆ ನಮಿಸುವೆವು
ಶಿವೆಗೆ ಯಾವಾಗಲೂ ನಮಿಸುವೆವು
ಪ್ರಕೃತಿಗೆ ಭದ್ರೆಗೆ ನಮಿಸುವೆವು
ನಿಯತ ಚಿತ್ತರಾಗಿ ನಮಿಸುವೆವು || ೮ ||

ರೌದ್ರಳೇ ತ್ರಿಕಾಲತೀತಳೇ
ಭೂದೇವತೆಯೇ ಪಾರ್ವತಿಯೇ
ಜಗದಾಧಾರಳೇ ನಮಿಸುವೆವು
ಜಂತುವಿನ ಕೃತಿ ಸ್ವರೂಪಳಾದ
ದೇವಿಯೇ ನಿನ್ನ ನಾವು ನಮಿಸುವೆವು || ೯ ||

ಬೆಳದಿಂಗಳ ಚಂದ್ರಸ್ವರೂಪಳೇ
ಸಮಸ್ತ ಲೋಕಕ್ಕೂ ಸುಖಪ್ರದಳೇ
ಮಂಗಳಪ್ರದೆಯೇ ನಿನ್ನ ನಮಿಸುವೆವು
ಭಜಿಸುವವರಿಗೆ ಸಿದ್ಧಿ ಸಮೃದ್ಧಿಯೇ
ಕೂರ್ಮದೇವ ಶಕ್ತಿಯೇ ನಮಿಸುವೆವು || ೧೦ ||

ರಾಜಾಧಿರಾಜರಲ್ಲಿರುವ
ಅಖಂಡೈಶ್ವರ್ಯ ಸ್ವರೂಪಳೇ
ಜಗಕೆ ಸುಖ ನೀಡುವ ಸರ್ವೇಶ್ವರನ
ಪತ್ನಿಯಾಗಿ ಶರ್ವಾಣಿಯಾಗಿರುವ
ಕಲ್ಯಾಣಿಯೇ ನಿನಗೆ ನಮಿಸುವೆವು || ೧೧ ||

ಕಷ್ಟ ಪರಿಹರಿಸುವ ದುರ್ಗಾದೇವೀ
ಸಾರ ರೂಪಳೇ ಸರ್ವಕಾರಿಣೀ
ವಿವೇಕ ಖ್ಯಾತಿಯೂ ಕೃಷ್ಣವರ್ಣಳೂ
ಧೂಮ್ರ ವರ್ಣಳೂ ಆದ ದೇವಿಗೆ
ಯಾವಾಗಲೂ ನಾವು ನಮಿಸುವೆವು || ೧೨ ||

ಅತ್ಯಂತ ಸೌಮ್ಯಳು ಆಗಿರುವ
ಹಾಗೆ ಅತ್ಯಂತ ರೌದ್ರಳು ಆದ
ದೇವಿಗೆ ಅನಂತ ಪ್ರಣಾಮಗಳು
ಜಗದಾಧಾರಳೇ ಕೃತಿ ರೂಪಳೇ
ದೇವೀ ನಿನಗೆ ನಾವು ನಮಿಸುವೆವು || ೧೩ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಇದ್ದು ವಿಷ್ಣು ಮಾಯೆಯೆಂಬ ಹೆಸರಲ್ಲಿ
ಕರೆಯಲ್ಪಡುವ ಮಹಾದೇವಿಗೆ
ನಾವು ಕಾಯಾ ವಾಚಾ ಮನಸಾ
ತ್ರಿಕರಣ ಪೂರ್ವಕ ನಮಿಸುವೆವು || ೧೪ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ವ್ಯವಹಾರಕ್ಕನುಕೂಲವಾಗಿ
ಮೂಲವಾದ ಶಕ್ತಿಯಾಗಿರುವ
ಚೇತನಾ ಎಂದು ಕರೆಯಲ್ಪಡುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೧೫ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಧರ್ಮಾನುಷ್ಠಾನಕ್ಕೆ ನಿಮಿತ್ತವಾದ
ನಿಶ್ಚಯ ರೂಪವಾಗಿರುವಂತಹ
ಬುದ್ಧಿಯ ರೂಪದಿಂದ ನೆಲೆಸಿರುವ
ದೇವಿಗೆ ಭಕ್ತಿಯಿಂದ ನಮಿಸುವೆವು || ೧೬ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಜಾಗೃತ ಸ್ವಪ್ನ ಸುಷುಪ್ತಿಗಳಲ್ಲಿ
ಸ್ವಪ್ನ ಸುಷುಪ್ತಿಗೆ ವಿಶ್ರಾಂತಿ ಕೊಡುವ
ನಿದ್ರಾರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೧೭ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಶೋಕ ಮೋಹ ಜರಾ ಮೃತ್ಯುವು
ಕ್ಷುತ್ ಪಿಪಾಸೆ ಷಡ್ವೂರ್ಮಿಗಳಲ್ಲಿ
ಒಂದಾಗಿಹ ಕ್ಷುಧೆಯ ರೂಪದಲ್ಲಿ
ನೆಲೆಸಿಹ ದೇವಿಗೆ ಮತ್ತೆ ನಮಿಸುವೆವು || ೧೮ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಸಮಸ್ತ ಪುರುಷಾರ್ಥ ಸಾಧಕದ
ವ್ಯವಹಾರ ನಡೆಸುವ ಸಲುವಾಗಿ
ಛಾಯಾ ರೂಪದಲ್ಲಿ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೧೯ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಆಯಾಯ ವ್ಯಕ್ತಿಗಳಲ್ಲಿರುವ
ಅಸಾಧಾರಣ ಕ್ರಿಯೆ ನಿರ್ವಹಿಸುವ
ಶಕ್ತಿ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೨೦ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಭವ ಬಂಧನದಲ್ಲಿ ಬಂಧಿಸಲು
ನಿಮಿತ್ತವಾದ ಅರಿಷಡ್ವರ್ಗಗಳಲ್ಲಿ
ಒಂದಾದ ತುಷ್ಣಾರೂಪದಿಂದ
ನೆಲೆಸಿಹ ದೇವಿಗೆ ಮತ್ತೆ ನಮಿಸುವೆವು || ೨೧ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಎಂಥಹ ಪ್ರಸಂಗದಲ್ಲಿಯೂ
ರೌದ್ರಾಕಾರದ ವಿಕಾರಹೊಂದದೆ
ಕ್ಷಮಾರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೨೨ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಎಲ್ಲ ವರ್ಗದಲ್ಲಿ ಪ್ರತ್ಯೇಕವಾಗಿ
ಅನೇಕ ವ್ಯಕ್ತಿಗಳಲ್ಲಿ ಇರುವಂತ
ಜಾತಿ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೨೩ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ನಾರಿಯರಿಗೆ ಭೂಷಣವೆಂದು
ಸಾಧು ಗುಣದಲ್ಲಿ ಗಣ್ಯ ಗುಣವೆಂದು
ವರ್ಣಿಸುವ ಲಜ್ಜಾ ರೂಪದಿಂದ
ಇರುವ ದೇವಿಗೆ ಮತ್ತೆ ನಮಿಸುವೆವು || ೨೪ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಕಾಮಕ್ರೋಧ ಭಾವಗಳಡಗಿಸಿ
ಮನಕೆ ಆನಂದವಾಗುವಂತೆ
ಶಾಂತಿ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೨೫ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ದೈವ ಪುರುಷಾರ್ಥ ಸ್ವರ್ಗ ನರಕದ
ಸಾಧನಗಳಲಿ ಆಸ್ತಿಕತೆಯೆಂಬ
ಶ್ರದ್ಧೆಯ ರೂಪದಲ್ಲಿರುವ ದೇವಿಗೆ
ಅನನ್ಯ ಭಕ್ತಿಯಿಂದ ನಮಿಸುವೆವು || ೨೬ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಜಗದ ಒಂದೊಂದು ವ್ಯಕ್ತಿಯಲ್ಲೂ
ವ್ಯತ್ಯಾಸದಿ ಮನರಂಜಕವಾದ
ಕಾಂತಿ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೨೭ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಸಾಮ್ರಾಜ್ಯ ಐಶ್ವರ್ಯ ಜಯ ಮುಕ್ತಿ
ಮುಂತಾದ ಪರಿವಾರದಿ ಕೂಡಿ
ಲಕ್ಷ್ಮೀ ರೂಪದಿಂದ ನೆಲೆಸಿರುವ
ದೇವಿಗೆ ಭಕ್ತಿಯಿಂದ ನಮಿಸುವೆವು || ೨೮ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಧೈರ್ಯ ಸಂತೋಷ ಮತ್ತು ಸುಖದ
ರೂಪವಾಗಿ ಪ್ರಕಾಶಿಸುತಿರುವ
ಧೃತಿಯ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೨೯ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಉಪಯೋಗದ ಕೃಷಿ ವಾಣಿಜ್ಯ
ಮುಂತಾದ ಜೀವನೋಪಾಯದ
ವೃತ್ತಿ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೩೦ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಹಿಂದೆ ಅನುಭವಿಸಿದ ವಿಷಯದಿ
ಆಯಾಯ ಸಂಸ್ಕಾರಗಳಿಂದ
ಮತ್ತೆ ಜನಿಸುವ ಸ್ಮರಣ ರೂಪದಿಂದ
ನೆಲೆಸಿಹ ದೇವಿಗೆ ಮತ್ತೆ ನಮಿಸುವೆವು || ೩೧ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ದುಃಖದಲ್ಲಿ ಇರುವವರ ನೋಡಿ
ಅವರ ದುಃಖವ ನೀಗಿಸಲೆಂದು
ಉದಯಿಸುವ ದಯಾರೂಪದಿಂದ
ನೆಲೆಸಿಹ ದೇವಿಗೆ ಮತ್ತೆ ನಮಿಸುವೆವು || ೩೨ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಲೋಕ ವ್ಯವಹಾರ ನಡೆಸುವ
ನಿಯಮ ಪಾಲಿಸುವ ರಾಜನೀತಿ
ಮುಂತಾದ ನೀತಿ ರೂಪದಿಂದ
ನೆಲೆಸಿಹ ದೇವಿಗೆ ಮತ್ತೆ ನಮಿಸುವೆವು || ೩೩ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ತಮ್ಮ ಮನಸ್ಸಿಗೆ ಇಷ್ಟವಾಗಿರುವ
ವಿಷಯ ಸುಖದ ಉಪಭೋಗದಿಂದ
ಉಂಟಾಗುವ ತೃಪ್ತಿಯ ರೂಪದಿಂದ
ನೆಲೆಸಿಹ ದೇವಿಗೆ ಮತ್ತೆ ನಮಿಸುವೆವು || ೩೪ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಅವಯವಗಳು ಆಯಾ ಪ್ರಾಣಿಗೆ
ತಕ್ಕಂತೆ ತುಂಬಿಕೊಳ್ಳುವಿಕೆಯೆಂಬ
ಪುಷ್ಟಿ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೩೫ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಗರ್ಭಧಾರಣದಿಂದ ಪ್ರಸವಕ್ಕೆ
ಕಾರಣಳಾಗಿ ಮಾನ್ಯಳಾಗಿಹ
ಮಾತೃರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೩೬ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಒಂದನ್ನು ಮತ್ತೊಂದಾಗಿ ತಿಳಿದು
ಸರ್ವ ಅನರ್ಥಕ್ಕೆ ಕಾರಣವಾದ
ಭ್ರಾಂತಿಯ ರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೩೭ ||

ಯಾವ ದೇವಿಯು ಎಲ್ಲ ಜೀವಿಯಲ್ಲಿ
ಕರ್ಮ ಜ್ಞಾನೇಂದ್ರಿಯಗಳ ಮತ್ತು
ಪಂಚಭೂತಗಳ ಅಧಿಷ್ಠಾತ್ರಿಯು
ಅಂತಹ ಸರ್ವವ್ಯಾಪಿನಿಯಾದ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೩೮ ||

ಜಗತ್ತಲ್ಲಿ ಚೈತನ್ಯ ರೂಪದಿಂದ
ಸಂಪೂರ್ಣ ಜಗತ್ತನ್ನು ವ್ಯಾಪಿಸಿ
ಎಲ್ಲಾ ಚರಾಚರ ಪ್ರಾಣಿಗಳಲ್ಲಿ
ಆತ್ಮರೂಪದಿಂದ ನೆಲೆಸಿರುವ
ದೇವಿಗೆ ಮತ್ತೆ ಮತ್ತೆ ನಮಿಸುವೆವು || ೩೯ ||

ಹಿಂದೆ ಬ್ರಹ್ಮಾದಿಗಳು ಸ್ತುತಿಸಿರುವ
ದೇವಿಯ ನಾವಿಂದು ಸ್ಮರಿಸಿದೆವು
ಎಲ್ಲ ವಿಪತ್ತುಗಳ ನಾಶ ಮಾಡುವ
ಈಶ್ವರಿಯನ್ನು ನಮಸ್ಕರಿಸಿದೆವು
ನಮಗೆ ಶುಭವನ್ನುಂಟು ಮಾಡಲಿ || ೪೦ ||

ಸೊಕ್ಕಿನ ದೈತ್ಯರ ಪೀಡನೆಯಿಂದ
ದೇವ ಲೋಕವ ತ್ಯಜಿಸಿ ನಾವು
ಭಕ್ತಿಯಿಂದ ದೇವಿಯ ಸ್ತುತಿಸಿದೆವು
ದೇವಿಯು ವಿಪತ್ತನ್ನು ನಾಶ ಮಾಡಿ
ನಮಗೆ ಮಂಗಳವನ್ನುಂಟು ಮಾಡಲಿ || ೪೧ ||

ಸುರಥಗೆ ಸುಮೇಧ ಮುನಿಯೆಂದ
ದೇವತೆಗಳೆಲ್ಲ ಸ್ತುತಿಸುವಾಗ
ಜಾಹ್ನವಿ ನದಿಯ ಜಲರಾಶಿಯಲ್ಲಿ
ಸ್ನಾನಕ್ಕಾಗಿ ಬಂದು ಪಾರ್ವತಿಯು
ದೇವತೆಗಳಿಗೆ ಕಾಣಿಸಿಕೊಂಡಳು || ೪೨ ||

ಸುಂದರವಾದ ಹುಬ್ಬುಗಳುಳ್ಳ
ಪಾರ್ವತಿಯು ದೇವತೆಗಳಿಗೆ
ಯಾರನ್ನು ಸ್ತುತಿಸುವಿರೆಂದಾಗ
ಆಕೆಯ ಶರೀರ ಕೋಶದಿಂದ
ಉದ್ಭವಿಸಿದ ಶಿವೆಯು ಹೀಗೆಂದಳು || ೪೩ ||

ದೈತ್ಯ ನಿಶುಂಭನಿಂದ ಯುದ್ಧದಲ್ಲಿ
ಈ ದೇವತೆಗಳೆಲ್ಲರು ಸೋತು
ಶುಂಭನಿಂದ ಹೊರದೂಡಲ್ಪಟ್ಟು
ದೇವಲೋಕದಿಂದ ಬಂದು ಇಲ್ಲಿ
ಈಗ ಸ್ತುತಿಸುತ್ತಿರುವುದು ನನ್ನನ್ನೇ || ೪೪ ||

ಪ್ರತ್ಯುತ್ತರ ನುಡಿದ ಜಗನ್ಮಾತೆಯು
ಪಾರ್ವತಿಯ ಶರೀರದಿಂದ
ಉದ್ಭವಿಸಿರಲು ಕೌಶಿಕೀಯೆಂಬ
ಯಥಾರ್ಥವಾದ ಹೆಸರಿನಿಂದ
ಸ್ತುತಿಸಲ್ಪಡುವಳು ಪ್ರಪಂಚದಲ್ಲಿ || ೪೫ ||

ಪಾರ್ವತಿಯ ಶರೀರದಿಂದ
ಆಕೆಯು ಹೊರಟು ಬಂದಾಗ
ಪಾರ್ವತಿಯು ಕಪ್ಪು ಬಣ್ಣವ ಹೊಂದಿ
ಕಾಲಿಕಾ ಎಂದು ಪ್ರಸಿದ್ಧಳಾಗಿ
ಹಿಮಾಚಲ ಗಿರಿಯಲ್ಲಿ ನೆಲೆಸಿದಳು || ೪೬ ||

ಅತ್ಯಂತ ಮನೋಹರವಾದ
ರೂಪ ಧರಿಸಿಹ ಅಂಬಿಕೆಯನ್ನು
ಅಸುರರಾದ ಶುಂಭ-ನಿಶುಂಭರ
ಭೃತ್ಯರಾದ ಚಂಡ ಮುಂಡರೆಂಬ
ಇಬ್ಬರೂ ಅಸುರರು ನೋಡಿದರು || ೪೭ ||

ವಿಜ್ಞಾಪಿಸಿದರು ಶುಂಭನಿಗೆ
ಮಹಾರಾಜಾ ಸೌಂದರ್ಯದ
ಕಾಂತಿಯಿಂದ ಹಿಮಾಚಲವನ್ನು
ಬೆಳಗುವಂತಹ ನಾರಿಯೊಬ್ಬಳು
ಇರುವಳೆಂದರು ಚಂಡ ಮುಂಡರು || ೪೮ ||

ರಾಜನೇ ಈ ಲೋಕದಲ್ಲಿ
ಅಂತಹ ಸರ್ವೋತ್ತಮ ರೂಪವ
ಯಾರೂ ಎಲ್ಲೂ ನೋಡಿರುವುದಿಲ್ಲ
ಆ ದೇವಿಯು ಯಾರೆಂದು ತಿಳಿದು
ವಶಪಡಿಸಿಕೊಳ್ಳಬೇಕು ಅವಳನ್ನು || ೪೯ ||

ಅತ್ಯಂತ ಸುಂದರವಾಗಿರುವ
ಅವಯವಗಳುಳ್ಳ ಸ್ತ್ರೀರತ್ನವು
ತನ್ನ ಕಾಂತಿಯಿಂದ ಎಲ್ಲ ದಿಕ್ಕುಗಳ
ಬೆಳಗುತ್ತ ನೆಲೆಸಿರುವ ಅವಳನ್ನು
ದೈತ್ಯ ರಾಜನೆ ನೀನು ನೋಡಬೇಕು || ೫೦ ||

ಪ್ರಭುವೇ ಮೂರ್ಲೋಕಗಳಲ್ಲೂ
ಯಾವ್ಯಾವ ರತ್ನಗಳು ಮಣಿಗಳು
ಆನೆ ಕುದುರೆಗಳು ಇತ್ಯಾದಿಗಳು
ಏನೇನಿದ್ದವೋ ಅವೆಲ್ಲವು ಈಗ
ರಾರಾಜಿಸುತ್ತಿದೆ ನಿನ್ನ ಮನೆಯಲ್ಲಿ || ೫೧ ||

ದೇವರಾಜ ಇಂದ್ರನಿಂದ
ಐರಾವತವೆಂಬ ಗಜರತ್ನವು
ಉಚ್ಚೈಶ್ರವಾ ಎಂಬ ಕುದುರೆಯೂ
ಹಾಗೆಯೇ ಪಾರಿಜಾತ ವೃಕ್ಷವೂ
ಇವೆಲ್ಲವೂ ನಿನ್ನಿಂದ ತರಲ್ಪಟ್ಟವು || ೫೨ ||

ಬ್ರಹ್ಮದೇವನ ಬಳಿ ಇದ್ದಂತಹ
ಹಂಸಗಳಿಂದ ಯುಕ್ತವಾದ
ಅದ್ಭುತವಾಗಿಹ ವಿಮಾನ ರತ್ನವು
ನಿನ್ನಿಂದಲೇ ಇಲ್ಲಿಗೆ ತರಲ್ಪಟ್ಟು
ನಿನ್ನಂಗಳದಲ್ಲೇ ನಿಂತಿಹುದು || ೫೩ ||

ಮಹಾಪದ್ಮವೆಂಬ ನಿಧಿಯನ್ನು
ಕುಬೇರನಿಂದ ಕಿತ್ತು ತಂದೆ
ಸಮುದ್ರರಾಜನು ಬಾಡದೆ ಇರುವ
ಕಮಲಗಳಿಂದ ಮಾಡಿರುವಂತ
ಕಿಂಜಲ್ಕಿನೀ ಮಾಲೆಯ ಕೊಟ್ಟಿರುವನು || ೫೪ ||

ವರುಣ ದೇವನಿಗೆ ಸೇರಿದ್ದ
ಕಾಂಚನವನ್ನು ಸ್ರವಿಸಬಲ್ಲ
ಈ ಛತ್ರಿಯೂ ನಿನ್ನಲ್ಲೆ ಇರುವುದು
ಹಾಗೆಯೇ ಈ ಶ್ರೇಷ್ಠ ರಥವು
ಹಿಂದೆ ಪ್ರಜಾಪತಿಯದಾಗಿತ್ತು || ೫೫ ||

ಮರಣವನ್ನು ಉಂಟು ಮಾಡಬಲ್ಲ
ಪ್ರಸಿದ್ಧವಾಗಿರುವ ಪಾಶವನ್ನು
ಮೃತ್ಯುವಿನಿಂದ ಅಪಹರಿಸಿದೆ ನೀನು
ಜಲದ ರಾಜನ ಪಾಶಾಯುಧಗಳು
ನಿನ್ನ ತಮ್ಮ ನಿಶುಂಭನ ಕೈಯ್ಯಲ್ಲಿವೆ || ೫೬ ||

ಸಮುದ್ರದೊಳಗೆ ಸಿಗುವಂತಹ
ವಿವಿಧ ಜಾತಿಯ ರತ್ನಗಳೆಲ್ಲವೂ
ನಿಶುಂಭನ ಅಧೀನವಾಗಿವೆ
ನಿನಗೆ ಅಗ್ನಿ ದೇವನು ವಸ್ತ್ರಯುಗ್ಮವ
ಅಗ್ನಿಯಲ್ಲಿ ಶುಚಿ ಮಾಡಿ ಕೊಟ್ಟಿರುವನು || ೫೭ ||

ಎಲೈ ದೈತ್ಯರಾಜನೇ ನೀನು
ಎಲ್ಲ ಕಡೆಗಳಿಂದಲೂ ಹೀಗೆ
ರತ್ನ ವಸ್ತುಗಳನ್ನು ತಂದಿಟ್ಟಿರುವೆ
ಸ್ತ್ರೀರತ್ನಳಾದ ಈ ಕಲ್ಯಾಣಿಯನ್ನು
ಇನ್ನೂ ನೀನೇಕೆ ಹಿಡಿದು ತರಲಿಲ್ಲ || ೫೮ ||

ಸುಮೇಧ ಋಷಿಯು ಹೇಳಿದನು
ಚಂಡ ಮುಂಡರ ಮಾತು ಕೇಳಿ
ಶುಂಭನು ದೇವಿಯ ಬಳಿಗೆ ಕಳುಹಲು
ದೂತನನ್ನಾಗಿ ಸುಗ್ರೀವನೆಂಬ
ಮಹಾಸುರನನ್ನು ಕರೆಸಿ ಹೀಗೆಂದ || ೫೯ ||

ಸುಗ್ರೀವನೇ ನನ್ನಪ್ಪಣೆಯಂತೆ
ಅವಳಿರುವಲ್ಲಿಗೆ ನೀನು ಹೋಗಿ
ನಾನು ಹೇಳಿದ ಮಾತುಗಳನ್ನಾಡಿ
ಪ್ರೀತಿಯಿಂದ ನಾರಿಯು ನನ್ನ ಬಳಿಗೆ
ಬೇಗ ಬರುವಂತೆ ಮಾಡು ನೀನು || ೬೦ ||

ಅತ್ಯಂತ ಸುಂದರವಾಗಿರುವ
ಪರ್ವತ ಪ್ರದೇಶದಲ್ಲಿ ನೆಲೆಸಿದ
ದೇವಿಯ ಬಳಿಗೆ ದೂತ ಸುಗ್ರೀವನು
ಹೋಗಿ ದೇವಿಯಲ್ಲಿ ಮಧುರವಾದ
ಮಾತುಗಳಿಂದ ಹೀಗೆಂದನು || ೬೧ ||

ದೂತನು ಹೇಳಿದ ದೇವಿಗೆ
ದೈತ್ಯೇಶ್ವರ ಶುಂಭಾಸುರನು
ಮೂರ್ಲೋಕಗಳಿಗೂ ಪರಮೇಶ್ವರನು
ನಿನ್ನ ಬಳಿಗೆ ಬಂದಿರುವ ನಾನು
ಅವನೇ ಕಳುಹಿಸಿದ ದೂತನು || ೬೨ ||

ಯಾವನಾಜ್ಞೆಯನ್ನು ತಡೆಯಿಲ್ಲದೆ
ದೇವತೆಗಳೆಲ್ಲ ಪಾಲಿಸುವರೋ
ಅಂತಹ ಸಮಸ್ತ ದೈತ್ಯಾರಿಗಳನ್ನು
ಗೆದ್ದಿರುವಂತಹ ಶುಂಭಾಸುರನು
ಹೇಳಿ ಕಳಿಸಿದ ಸಂದೇಶ ಕೇಳು || ೬೩ ||

ಮೂರ್ಲೋಕಗಳು ನನ್ನದಾಗಿವೆ
ದೇವತೆಗಳು ವಶದಲ್ಲಿರುವರು
ಅಲ್ಲಲ್ಲಿ ನಡೆಯುವ ಎಲ್ಲ ಯಜ್ಞದಲ್ಲಿ
ಅರ್ಪಿಸುವ ಹವಿರ್ಭಾಗಗಳನ್ನೆಲ್ಲಾ
ಬೇರೆ ಬೇರೆಯಾಗಿ ಭುಂಜಿಸುವೆನು || ೬೪ ||

ಮೂರ್ಲೋಕಗಳಲ್ಲೂ ಇದ್ದಂತಹ
ಅತ್ಯಂತ ಶ್ರೇಷ್ಠವಾಗಿರುವ
ರತ್ನಗಳೆಲ್ಲವೂ ನನ್ನ ವಶದಲ್ಲಿವೆ
ದೇವೇಂದ್ರನ ವಾಹನವಾದ
ಗಜರತ್ನವನ್ನೂ ಅಪಹರಿಸಿಟ್ಟಿರುವೆ || ೬೫ ||

ಕ್ಷೀರ ಸಮುದ್ರ ಮಥನದಲ್ಲಿ
ಹುಟ್ಟಿರುವ ಉಚ್ಚೈಶ್ರವ ಎಂಬ
ನಾಮಾಂಕಿತವಾದ ಅಶ್ವರತ್ನವ
ಪ್ರಣಾಮಪೂರ್ವಕವಾಗಿ ನನಗೆ
ದೇವತೆಗಳೆಲ್ಲ ಸಮರ್ಪಿಸಿರುವರು || ೬೬ ||

ಮಂಗಳಾಂಗಿಯೇ ಈಗ
ದೇವತಾದಿಗಳಲ್ಲೂ ಹಾಗೂ
ಗಂಧರ್ವರಲ್ಲು ಮತ್ತು ಪನ್ನಗರಲ್ಲೂ
ಇದ್ದಂತ ಅಮೂಲ್ಯವಾಗಿರುವ
ವಸ್ತುಗಳೆಲ್ಲವೂ ನನ್ನ ವಶದಲ್ಲಿದೆ || ೬೭ ||

ದೇವೀ ಈ ಲೋಕದಲ್ಲಿ ನೀನು
ಸ್ತ್ರೀರತ್ನಳೆಂದು ತಿಳಿದಿರುವೆವು
ನಾವು ಅತ್ಯುತ್ತಮವಾಗಿರುವುದನ್ನೇ
ಭೋಗಿಸತಕ್ಕವರಾದ್ದರಿಂದ
ಅಂಥ ನೀನು ನಮ್ಮನ್ನು ಸೇರಬೇಕು || ೬೮ ||

ಚಂಚಲವಾದ ಕಡೆಗಣ್ಣವಳೇ
ರತ್ನರೂಪಳಾಗಿರುವ ನೀನು
ರತ್ನಭೋಗಕ್ಕೆ ಅರ್ಹನಾದ ನನ್ನ
ಅಥವಾ ವಿಕ್ರಮದಿ ಖ್ಯಾತಿ ಪಡೆದ
ನನ್ನ ತಮ್ಮ ನಿಶುಂಭನನ್ನು ಸೇವಿಸು || ೬೯ ||

ನಾರಿಮಣಿಯೇ ನೀನು ನನ್ನನ್ನು
ಸ್ವೀಕರಿಸಿ ಸೇರುವುದರಿಂದ
ಅತುಲವಾದ ಐಶ್ವರ್ಯ ಹೊಂದುವೆ
ಬುದ್ಧಿಪೂರ್ವಕ ಸಮಾಲೋಚಿಸಿ
ದೈತ್ಯರಾಜನಾದ ನನ್ನ ಪರಿಗ್ರಹಿಸು || ೭೦ ||

ಸುಮೇಧ ಹೇಳಿದ ಜಗತ್ತನ್ನು
ಧರಿಸಿದ ದುರ್ಗೆಯು ಭಗವತಿಯೂ
ಭದ್ರಕಾಳಿಯೂ ಆದ ದೇವಿಯು
ಈ ಮಾತು ಕೇಳಿ ಒಳಗೆ ನಗುತ್ತ
ಮೇಲೆ ಗಾಂಭೀರ್ಯ ತಾಳಿದಳು || ೭೧ ||

ದೂತನೆ ಶುಂಭನ ವಿಷಯದಲ್ಲಿ
ಸುಳ್ಳುನುಡಿಯದೆ ನಿಜವನ್ನೇ ನುಡಿದೆ
ಶುಂಭಾಸುರನು ತ್ರಿಲೋಕಗಳಿಗೆ
ಅಧಿಪತಿಯಾಗಿರುವುದು ನಿಜವು
ನಿಶುಂಭನೂ ಅಂಥವನೆ ಇರುವನು || ೭೨ ||

ಆದರೆ ನಾನು ಈ ವಿಷಯಕ್ಕೆ
ಮಾಡಿರುವಂಥ ಪ್ರತಿಜ್ಞೆಯನ್ನು
ಹೇಗೆ ಸುಳ್ಳಾಗುವಂತೆ ಮಾಡಲಿ
ಹಿಂದೆ ಅಲ್ಪ ಬುದ್ಧಿಯಿಂದ ನಾನು
ಮಾಡಿದಂಥ ಪ್ರತಿಜ್ಞೆಯನ್ನು ಕೇಳು || ೭೩ ||

ಯಾವನು ಆದರೂ ನನ್ನನ್ನು
ಸಂಗ್ರಾಮದಲ್ಲಿ ಜಯಿಸುವವನು
ನನ್ನ ದರ್ಪವನ್ನು ಅಡಗಿಸುವವನು
ನನಗೆ ಸರಿಯಾದ ಪ್ರತಿಬಲವುಳ್ಳ
ಪುರುಷನೆ ನನ್ನ ಪತಿಯಾಗುವನು || ೭೪ ||

ಆದ್ದರಿಂದ ಶುಂಭನಾಗಲಿ
ಮಹಾಬಲದ ನಿಶುಂಭನಾಗಲಿ
ಇಲ್ಲಿ ಬಂದು ಯುದ್ಧದಲ್ಲಿ ನನ್ನನ್ನು ಗೆದ್ದು
ಶೀಘ್ರವಾಗಿ ನನ್ನ ಪಾಣಿಗ್ರಹಣವ
ಮಾಡಿಕೊಳ್ಳಲಿ ವಿಳಂಬವೇಕೆ || ೭೫ ||

ದೂತನು ಹೇಳಿದ ದೇವಿಗೆ
ದುರಹಂಕಾರವುಳ್ಳ ನೀನು
ನನ್ನ ಎದುರಲ್ಲಿ ಹೀಗೆನ್ನ ಬೇಡ
ಶುಂಭ ನಿಶುಂಭರೆದುರು ನಿಲ್ಲಬಲ್ಲ
ಪುರುಷನ್ಯಾರಿಹನು ಮೂರ್ಲೋಕದಲ್ಲಿ || ೭೬ ||

ದೇವತೆಗಳೆಲ್ಲಾ ಸೇರಿದರೂ
ಯುದ್ಧದಲ್ಲಿ ಆ ಶುಂಭನ ಕಡೆಯ
ಇತರ ದೈತ್ಯರೆದುರು ನಿಲ್ಲಲಾರರು
ದೇವೀ ಇನ್ನು ಏಕಾಕಿನಿಯೂ
ಸ್ತ್ರೀಯೂ ಆದ ನಿನ್ನ ಪಾಡೇನು || ೭೭ ||

ಶುಂಭಾದಿಗಳೊಡನೆ ಯುದ್ಧದಲ್ಲಿ
ಇಂದ್ರಾದಿ ದೇವತೆಗಳೆಲ್ಲಾ
ನಿಲ್ಲಲಾರದವರಾಗಿ ಹೋದರು
ಅಂತವರ ಸಮ್ಮುಖದಲ್ಲಿ ಯುದ್ಧಕ್ಕೆ
ಸ್ತ್ರೀಯಾಗಿರುವ ನೀನು ನಿಲ್ಲುವೆಯಾ || ೭೮ ||

ನೀನು ನನ್ನ ಮಾತನ್ನು ಕೇಳು
ಶುಂಭ-ನಿಶುಂಭರ ಬಳಿ ಸೇರು
ನಿನ್ನ ಮುಡಿಯ ಹಿಡಿದೆಳೆಸಿಕೊಳ್ಳುತ
ಗೌರವವನ್ನು ಕಳೆದುಕೊಂಡು ನೀನು
ಅಲ್ಲಿಗೆ ಹೋಗುವಂತಾಗದಿರಲಿ || ೭೯ ||

ದೇವಿಯೆಂದಳು ದೂತನಿಗೆ
ನಿನ್ನ ಮಾತನ್ನು ಒಪ್ಪುವೆ ನಾನು
ಶುಂಭ ನಿಶುಂಭರಿಬ್ಬರೂ ಬಲಿಷ್ಠರು
ಹಿಂದೆ ಏನನ್ನೂ ಯೋಚಿಸದೆ
ನಾನು ಪ್ರತಿಜ್ಞೆಯ ಕೈಗೊಂಡಿರುವೆ || ೮೦ ||

ದೂತನಾಗಿ ಬಂದ ನಿನ್ನನ್ನು
ಆಧರಿಸಿ ನಾನು ಹೇಳಿರುವೆ
ನೀನು ಹೋಗಿ ಅಸುರ ರಾಜನಿಗೆ
ನಾನು ಹೇಳಿರುವುದನ್ನೇ ಹೇಳು
ಆತನು ಯುಕ್ತವೆನಿಸಿದ್ದನ್ನು ಮಾಡಲಿ || ೮೧ ||