ಹದಿಮೂರನೆಯ ಅಧ್ಯಾಯ

ಸುಮೇಧನೆಂದ ಎಲೈ ರಾಜನೇ
ಉತ್ತಮವಾದ ದೇವೀ ಮಹಾತ್ಮೆಯು
ನನ್ನಿಂದ ನಿನಗೆ ಹೇಳಲ್ಪಟ್ಟಿದೆ
ಈ ಜಗತ್ತನ್ನು ಧರಿಸಲ್ಪಟ್ಟಿರುವ
ದೇವಿಯು ಇಂಥ ಮಹಿಮೆಯುಳ್ಳವಳು || ೧ ||

ಭಗವಂತನಾದ ವಿಷ್ಣುವಿನ
ಮಾಯೆಯಿಂದ ವರ್ಣಿಸಲ್ಪಡುವ
ಮಹಾದೇವಿಯು ಉಪನಿಷತ್ತಿನ
ರೂಪದಿಂದ ತತ್ತ್ವ ವಿವೇಕದ
ಜ್ಞಾನವನ್ನು ಅನುಗ್ರಹಿಸುವಳು || ೨ ||

ರಾಜನೇ ನೀನು ಮತ್ತು ವೈಶ್ಯನು
ಮಾಯೆಯ ಮೋಹದಲ್ಲಿರುವಿರಿ
ವಿವೇಕಿ ಜನರೂ ಮಾಯೆಯಿಂದ
ಮೋಹಪಟ್ಟರು ಪಡುತಲಿರುವರು
ಇನ್ನು ಮುಂದೆಯೂ ಮೋಹ ಪಡುವರು || ೩ ||

ಸುರಥ ಮಹಾರಾಜನೇ ನೀನು
ಪರಮೇಶ್ವರಿಯ ಶರಣು ಹೊಂದು
ಆರಾಧಿಸಲ್ಪಟ್ಟ ಆ ದೇವಿಯು
ಮಾನವರಿಗೆ ಸುಖ ಭೋಗಗಳನ್ನು
ಸ್ವರ್ಗವನ್ನು ಮೋಕ್ಷವನ್ನು ಕೊಡುವಳು || ೪ ||

ಹೇಳಿದನು ಮಾರ್ಕಂಡೇಯ
ರಾಜನು ಮುನಿಯ ಮಾತು ಕೇಳಿ
ಮಹಾತ್ಮನು ಆಗಿರುವಂತಹ
ಕಠಿಣ ತಪಶ್ಚರ್ಯೆಯುಳ್ಳವನಾದ
ಋಷಿಯ ಪಾದಕ್ಕೆ ನಮಸ್ಕರಿಸಿದನು || ೫ ||

ರಾಜ್ಯದ ಅಪಹರಣದಿಂದ
ಅತಿಯಾದ ಮಮತ್ವದಿಂದ
ದುಃಖಿತನಾಗಿದ್ದ ಸುರಥ ರಾಜನು
ತಪಸ್ಸನ್ನು ಮಾಡಲು ತೆರಳಿದನು
ಆ ವೈಶ್ಯನೂ ತಪಸ್ಸಿಗೆ ಹೋದನು || ೬ ||

ಸುರಥ ರಾಜನು ಮತ್ತು ವೈಶ್ಯನು
ನದಿಯ ದಡದಲ್ಲಿ ಕುಳಿತುಕೊಂಡು
ಜಗನ್ಮಾತೆಯ ಸಾಕ್ಷಾತ್ಕಾರಕ್ಕೆ
ಉತ್ತಮವಾದ ದೇವೀ ಸೂಕ್ತವ
ಜಪಿಸುತ್ತ ತಪಸ್ಸನ್ನು ಮಾಡಿದರು || ೭ ||

ಇಬ್ಬರೂ ನದಿ ದಂಡೆಯ ಮಣ್ಣಲ್ಲಿ
ದೇವಿಯ ಮೂರ್ತಿಯನ್ನು ರಚಿಸಿ
ಮಿತ ಆಹಾರದಿ ಏಕಾಗ್ರ ಚಿತ್ತದಿ
ಹೂವು ಧೂಪ ದೀಪ ತರ್ಪಣದಿ
ದೇವಿಯ ಪೂಜೆಯನ್ನು ಮಾಡಿದರು || ೮ ||

ಇಬ್ಬರೂ ನಿರಾಹಾರದಿಂದ
ವಿಷಯ ವರ್ಜಿಸಿ ಸ್ಥಿರತೆಯಿಂದ
ದೇವಿಯನ್ನೇ ಆರಾಧಿಸುತ್ತ
ತಮ್ಮ ದೇಹದ ರಕ್ತವ ಪ್ರೋಕ್ಷಿಸಿ
ಬಲಿಯನ್ನು ದೇವಿಗೆ ಸಮರ್ಪಿಸಿದರು || ೯ ||

ಹೀಗೆ ಜಿತೇಂದ್ರಿಯರಾಗಿ
ದೇವಿಯನ್ನೇ ಆರಾಧಿಸುತ್ತ
ಮೂರು ವರ್ಷ ಕಳೆದು ಅವರ ಭಕ್ತಿಗೆ
ಜಗನ್ಮಾತೆ ಚಂಡಿಕೆ ಪ್ರಸನ್ನಳಾಗಿ
ಪ್ರತ್ಯಕ್ಷಳಾಗಿ ಹೀಗೆ ಹೇಳಿದಳು || ೧೦ ||

ಎಲೈ ರಾಜನೇ ಮತ್ತು ವೈಶ್ಯನೇ
ವಂಶಕ್ಕೆ ಆನಂದಗೊಳಿಸುವ
ಯಾವ ಇಷ್ಟಾರ್ಥ ಪ್ರಾರ್ಥಿಸುವಿರೋ
ಅದನ್ನು ಸಂತುಷ್ಟಳಾದ ನಾನು
ಅನುಗ್ರಹಿಸುವೆನು ಪಡೆಯಿರಿ ನೀವು || ೧೧ ||

ಹೇಳಿದನು ಮಾರ್ಕಂಡೇಯ
ರಾಜನು ಮುಂದಿನ ಜನ್ಮದಲ್ಲಿ
ಭ್ರಂಶವಾಗದ ಮನು ಪದವಿಯನ್ನು
ಕೈ ಬಿಟ್ಟ ರಾಜ್ಯವನ್ನು ತನ್ನ ಶಕ್ತಿಯಿಂದ
ಜಯಿಸಿ ಪಡೆಯಲು ಪ್ರಾರ್ಥಿಸಿದನು || ೧೨ ||

ಪ್ರಜ್ಞಾ ಸಂಪನ್ನ ಆ ವೈಶ್ಯನು
ವೈರಾಗ್ಯಯುಕ್ತ ಮನಸ್ಸಿನಿಂದ
ನಾನು ನನ್ನದೆಂಬ ಅಭಿಮಾನವ
ದೂರ ಮಾಡುವ ತತ್ತ್ವಜ್ಞಾನವು
ಉಂಟಾಗುವಂತೆ ಬೇಡಿದನು || ೧೩ ||

ದೇವಿಯೆಂದಳು ರಾಜನಿಗೆ
ನೀನು ಕೆಲವು ದಿನಗಳಲ್ಲಿ ನಿನ್ನ
ಶತ್ರುಗಳ ವಧಿಸಿ ರಾಜ್ಯ ಹೊಂದುವೆ
ಜಯಶಾಲಿಯಾಗಿರುವ ನಿನ್ನಲ್ಲಿ
ರಾಜ್ಯ ಲಕ್ಷ್ಮಿಯು ಸ್ಥಿರವಾಗಿರುವಳು || ೧೪ ||

ಮತ್ತು ನಿನ್ನ ಆಯುಷ್ಯವು ಮುಗಿದು
ನೀನು ಮರಣ ಹೊಂದಿದ ಮೇಲೆ
ಸೂರ್ಯ ದೇವನಿಂದ ಜನ್ಮ ಹೊಂದಿ
ಈ ಭೂಮಿಯಲ್ಲಿ ಸಾವರ್ಣಿಯೆಂಬ
ಮನುವಾಗಿ ಲೋಕವನ್ನು ರಕ್ಷಿಸುವೆ || ೧೫ ||

ದೇವಿ ಹೇಳಿದಳು ವೈಶ್ಯನೇ
ನಿನ್ನಿಚ್ಛೆಯ ವರವನ್ನು ಕೊಟ್ಟಿರುವೆ
ನಾನು ಕೊಟ್ಟ ವರ ಪ್ರಭಾವದಿಂದ
ಸಂಸಿದ್ಧಿಯ ಪಡೆಯಲು ಬೇಕಾದ
ಜ್ಞಾನವು ನಿನಗೆ ಉಂಟಾಗುವುದು || ೧೬ ||

ಮಹಾದೇವಿಯು ಸುರಥನಿಗೆ
ಮತ್ತು ವೈಶ್ಯನಿಗೆ ಅವರಿಷ್ಟದಂತೆ
ವರವನ್ನು ಕೊಟ್ಟಾಗ ಅವರಿಬ್ಬರೂ
ಭಕ್ತಿಯಿಂದ ಸ್ತುತಿಸುತ್ತಿರುವಾಗ
ಆ ಕ್ಷಣವೆ ಅಂತರ್ಧಾನಳಾದಳು || ೧೭ ||

ಕ್ಷತ್ರಿಯೋತ್ತಮ ಸುರಥ ರಾಜನು
ದೇವಿಯಿಂದ ವರವನ್ನು ಹೊಂದಿ
ರಾಜ್ಯ ಪಡೆದು ಮರಣಾನಂತರ
ಸೂರ್ಯದೇವನಿಂದ ಜನ್ಮವೆತ್ತಿ
ಸಾವರ್ಣಿಯೆಂಬ ಮನುವಾಗುವನು || ೧೮ ||

ಶ್ರೀದೇವೀ ಮಹಾತ್ಮೆಯ ಚರಿತ್ರೆಯನ್ನು ಶ್ರದ್ಧಾಭಕ್ತಿಯಿಂದ
ಪಠಣವನ್ನು ಹಾಗೂ ಶ್ರವಣವನ್ನು ಮಾಡಿದರೆ
ಜನ್ಮಾಂತರದ ಪಾಪಕರ್ಮದಿಂದ ಮುಕ್ತರಾಗಿ ಪುಣ್ಯವನ್ನು ಪಡೆಯುವರು.