ಹನ್ನೊಂದನೆಯ ಅಧ್ಯಾಯ

ಹೇಳಿದನು ಸುಮೇಧ ಋಷಿಯು
ಮಹಾ ಅಸುರರ ರಾಜನಾದ
ಶುಂಭಾಸುರನು ಆ ಯುದ್ಧದಲ್ಲಿ
ದೇವಿಯಿಂದ ಹತನಾದಾಗ
ಇಂದ್ರಾದಿ ದೇವತೆಗಳೆಲ್ಲರೂ || ೧ ||

ತಮ್ಮಿಷ್ಟಾರ್ಥ ನೆರವೇರಿತೆಂದು
ಅರಳಿದ ಮುಖ ಕಮಲಗಳಿಂದ
ಸಮಸ್ತ ದಿಕ್ಕುಗಳನ್ನು ಬೆಳಗುತ್ತ
ಅಗ್ನಿಯನ್ನು ಮುಂದು ಮಾಡಿಕೊಂಡು
ಬಂದು ಕಾತ್ಯಾಯನಿಯ ಸ್ತುತಿಸಿದರು

ಹೇ ದೇವೀ ಶರಣಾಗತರ
ಪೀಡೆಯ ಪರಿಹರಿಸುವವಳೇ
ದೇವೀ ನಮಗೆ ಪ್ರಸನ್ನಳಾಗು
ಚರಾಚರ ಸಹಿತವಾಗಿರುವ
ಈ ಪ್ರಪಂಚಕ್ಕೆ ನೀನೇ ಜನನಿ || ೨ ||

ಹೇ ದೇವೀ ಪ್ರಸನ್ನಳಾಗು
ಚರಾಚರ ಜಗತ್ತಿಗೆ ಈಶ್ವರಿ
ದೇವೀ ವಿಶ್ವದ ನಿಯಾಮಕಳೇ
ವಿಶ್ವೇಶ್ವರಿಯೇ ಪ್ರಸನ್ನಳಾಗು
ಈ ಜಗತ್ತನ್ನು ಕಾಪಾಡು ದೇವೀ

ಅತಿಕ್ರಮಿಸಲಾಗದ ಶಕ್ತಳೇ
ಭೂಮಿ ರೂಪವ ಧರಿಸಿರುವೆ
ಸಮಸ್ತ ಜಗತ್ತಿಗೆ ಆಧಾರಳೇ
ಜಲರೂಪ ಧರಿಸಿಹ ನಿನ್ನಿಂದ
ಈ ವಿಶ್ವವು ತೃಪ್ತಿಯ ಹೊಂದುತ್ತಿದೆ || ೩ ||

ಅಪಾರ ವೀರ್ಯದಿಂದ ಕೂಡಿದ
ವಿಶ್ವಕ್ಕೆ ಬೀಜವಾದ ವಿಷ್ಣುವಿನ
ಅಂಶ ರೂಪವಾಗಿರುವಂತಹ
ಸರ್ವ ವ್ಯಾಪಕವಾಗಿಹ ನೀನು
ಮಾಯಾ ಶಕ್ತಿಯೂ ಆಗಿರುವೆ || ೪ ||

ದೇವೀ ನಿನ್ನ ಮಾಯಾರೂಪದಿ
ಸಮಸ್ತ ವಿಶ್ವವು ಮೋಹಗೊಂಡಿದೆ
ಈ ಭೂಮಂಡಲದಲ್ಲಿ ನೀನು
ಪ್ರಸನ್ನಳಾಗಿ ಅನುಗ್ರಹಿಸಿದರೆ
ನೀನೇ ಮುಕ್ತಿಯನ್ನು ಕರುಣಿಸುವೆ

ಹೇ ದೇವೀ ಸಮಸ್ತ ವಿದ್ಯೆಗಳು
ನಿನ್ನ ವಿವಿಧ ಅಂಶ ರೂಪಗಳು
ಸ್ತ್ರೀಯರೆಲ್ಲ ನಿನ್ನಂಶ ಸ್ವರೂಪರು
ಸಕಲ ಭುವನವು ನಿನ್ನೊಬ್ಬಳಿಂದ
ಪರಿಪೂರ್ಣವಾಗಿ ಇರುವುದು ದೇವೀ || ೫ ||

ಹೀಗೆಯೇ ಸಮಸ್ತ ವಸ್ತುಗಳು
ನಿನ್ನ ಅಂಶವೇ ಆಗಿರುವಾಗ
ಬೇರೊಂದು ಸ್ತುತಿಸಲು ಯಾವುದಿದೆ
ನೀನು ಪರಳು ಅಪರಳು ಎಂಬ
ಮಾತು ಹೇಗೆ ಸರಿಯಾಗುವುದು

ದೇವೀ ನೀನು ಸರ್ವಭೂತಳು
ಭುಕ್ತಿ ಮುಕ್ತಿಗಳ ನೀಡುವವಳು
ಪ್ರಕಾಶ ಸ್ವರೂಪಳೆಂದು ನೀನು
ಸ್ತುತಿಸಲ್ಪಡುವಾಗ ನಿನ್ನ ಸ್ತೋತ್ರಕ್ಕೆ
ಯೋಗ್ಯ ಪರಮೋಕ್ತಿ ಯಾವುದಿದೆ || ೬ ||

ಎಲ್ಲಾ ಜಂತುಗಳ ಹೃದಯದಲ್ಲಿ
ಬುದ್ಧಿ ರೂಪದಲ್ಲಿ ಇರುವವಳೇ
ಸ್ವರ್ಗ ಮೋಕ್ಷಗಳ ಧಾತೃವೇ ನೀನು
ನಾರಾಯಣನ ವಲ್ಲಭೆಯಾದ
ನಿನ್ನನ್ನು ನಾವು ನಮಸ್ಕರಿಸುವೆವು || ೭ ||

ಕಲಾ ಕಾಷ್ಠಾ ಮುಂತಾದ
ರೂಪದಿಂದ ಜಗತ್ತಲ್ಲಿ ನೀನು
ಪರಿಣಾಮವನ್ನುಂಟು ಮಾಡುವವಳೇ
ವಿಶ್ವವ ಸಂಹಾರಗೊಳಿಸುವ ಶಕ್ತಳೇ
ನಾರಾಯಣಿ ನಿನಗೆ ನಮಿಸುವೆವು || ೮ ||

ಸರ್ವ ಮಂಗಳಗಳ ಕರುಣಿಸುವ
ಶಿವೇ ಮಾಂಗಲ್ಯ ಸ್ವರೂಪಳೇ
ಸರ್ವಾಭೀಷ್ಟವ ಸಾಧಿಸುವವಳೇ
ಶರಣರ ವತ್ಸಲೆ ತ್ರಿನಯನೆ ಗೌರಿ
ನಾರಾಯಣಿ ನಿನಗೆ ನಮಿಸುವೆವು || ೯ ||

ಸೃಷ್ಟಿ ಸ್ಥಿತಿ ಸಂಹಾರಗಳನು
ಮಾಡಬಲ್ಲ ಶಕ್ತಿ ಸ್ವರೂಪಳೇ
ಸನಾತನಳೇ ತ್ರಿಗುಣಾಶ್ರಯಳೇ
ತ್ರಿಗುಣಮಯಳು ಆಗಿರುವವಳೇ
ನಾರಾಯಣಿ ನಿನಗೆ ನಮಿಸುವೆವು || ೧೦ ||

ಶರಣಾಗತರೂ ದೀನರೂ
ನೊಂದವರು ಮುಂತಾದವರ
ರಕ್ಷಣೆಯಲ್ಲಿ ನಿರತಳಾದವಳೇ
ಎಲ್ಲರ ಸಂಕಟ ನೀಗಿಸುವವಳೇ
ನಾರಾಯಣಿ ನಿನಗೆ ನಮಿಸುವೆವು || ೧೧ ||

ಹಂಸಯುಕ್ತ ವಿಮಾನದಲಿ ಕುಳಿತು
ಕಮಂಡಲುವಿನ ದರ್ಭೋದಕವ
ಪ್ರೋಕ್ಷಿಸಿ ಶತ್ರುನಾಶ ಮಾಡಿದವಳೇ
ಬ್ರಹ್ಮಾಣಿಯ ರೂಪ ಧರಿಸಿದವಳೇ
ನಾರಾಯಣಿ ನಿನಗೆ ನಮಿಸುವೆವು || ೧೨ ||

ತ್ರಿಶೂಲಾಯುಧ ಚಂದ್ರಕಲೆ
ನಾಗಾಭರಣಗಳನ್ನು ಧರಿಸಿ
ಮಹಾವೃಷಭ ವಾಹನವನ್ನೇರಿ
ಮಾಹೇಶ್ವರಿ ರೂಪದಲ್ಲಿರುವ
ನಾರಾಯಣಿ ನಿನಗೆ ನಮಿಸುವೆವು || ೧೩ ||

ನವಿಲು ಕುಕ್ಕುಟದಿಂದ ಕೂಡಿ
ಮಹಾ ಶಕ್ತ್ಯಾಯುಧವ ಧರಿಸಿದ
ಕೌಮಾರೀ ರೂಪದಲ್ಲಿರುವವಳೇ
ನಿಷ್ಕಳಂಕಳಾಗಿ ಇರುವವಳೇ
ನಾರಾಯಣಿ ನಿನಗೆ ನಮಿಸುವೆವು || ೧೪ ||

ಶಂಖ ಚಕ್ರ ಗದಾ ಶಾಂರ್ಙ್ಗಾ
ಮುಂತಾದ ಪರಮಾಯುಧವ
ಧರಿಸಿದ ವೈಷ್ಣವೀ ಶಕ್ತಿರೂಪಳೇ
ಮಹಾಲಕ್ಷ್ಮಿಯೇ ಪ್ರಸನ್ನಳಾಗು
ನಾರಾಯಣಿ ನಿನಗೆ ನಮಿಸುವೆವು || ೧೫ ||

ಮಹಾಚಕ್ರಾಯುಧವ ಹಿಡಿದು
ವರಾಹ ರೂಪದಿ ಭೂಮಿಯನ್ನು
ಕೋರೆದಾಡೆಯಲ್ಲಿ ಮೇಲಕ್ಕೆತ್ತಿದ
ಶಕ್ತಿ ಸ್ವರೂಪಳೇ ಮಂಗಳಕರಳೇ
ನಾರಾಯಣಿ ನಿನಗೆ ನಮಿಸುವೆವು || ೧೬ ||

ಉಗ್ರ ನೃಸಿಂಹ ರೂಪದಿಂದ
ರಾಕ್ಷಸರನ್ನು ಸಂಹರಿಸಲು
ಉದ್ಯುಕ್ತಳಾದ ಶಕ್ತಿ ಸ್ವರೂಪಳೇ
ತ್ರಿಲೋಕ ಸಂರಕ್ಷಣ ನಿರತಳೇ
ನಾರಾಯಣಿ ನಿನಗೆ ನಮಿಸುವೆವು || ೧೭ ||

ಕಿರೀಟ ಮಹಾ ವಜ್ರಾಯುಧವ
ಇಂದ್ರಾಣೀ ರೂಪದಿ ಧರಿಸಿ
ಸಹಸ್ರ ಕಣ್ಣುಗಳಿಂದ ಪ್ರಜ್ವಲಿಸುತ್ತ
ವೃತ್ರಾಸುರನ ಪ್ರಾಣವನ್ನು ತೆಗೆದ
ನಾರಾಯಣಿ ನಿನಗೆ ನಮಿಸುವೆವು || ೧೮ ||

ಶಿವದೂತಿಯ ರೂಪದಿಂದ
ದೈತ್ಯರ ಸೈನ್ಯವ ಮರ್ದಿಸಿದವಳೇ
ಮಹಾಬಲಿಷ್ಠಳೇ ಘೋರ ರೂಪಿಣೀ
ಮಹಾಘರ್ಜನೆಯ ಮಾಡುವವಳೇ
ನಾರಾಯಣಿ ನಿನಗೆ ನಮಿಸುವೆವು || ೧೯ ||

ಕೋರೆ ಹಲ್ಲುಗಳ ಉಗ್ರಮುಖದ
ರುಂಡಮಾಲಿಕೆಯ ಭೂಷಣಳೇ
ಚಾಮುಂಡಾಂಬಿಕಾ ದೇವಿಯೇ
ಚಂಡಮುಂಡರ ಸಂಹಾರಿಣಿಯೇ
ನಾರಾಯಣಿ ನಿನಗೆ ನಮಿಸುವೆವು || ೨೦ ||

ಭೋಗ ಸಾಧನವಾಗಿರುವ
ಐಶ್ವರ್ಯಳೇ ಲಜ್ಜಾ ಸ್ವರೂಪಳೇ
ಮಹಾವಿದ್ಯಾ ಜ್ಞಾನ ಸ್ವರೂಪಳೇ
ಶ್ರದ್ಧಾರೂಪಳೇ ಪುಷ್ಟಿರೂಪಳೇ
ನಾರಾಯಣಿ ನಿನಗೆ ನಮಿಸುವೆವು || ೨೧ ||

ಸ್ವಧಾ ಮಂತ್ರ ಸ್ವರೂಪಿಣಿಯೇ
ನಿತ್ಯಳೇ ಮಹಾಪ್ರಳಯ ಕಾಲದ
ಮಹಾರಾತ್ರಿ ಸ್ವರೂಪಳಾದ
ಮಹಾಮಾಯಾ ರೂಪಿಣಿಯೇ
ನಾರಾಯಣಿ ನಿನಗೆ ನಮಿಸುವೆವು

ದೇವೀ ಮೇಧಾ ಸ್ವರೂಪಳೇ
ಸರಸ್ವತಿ ಸ್ವರೂಪಳು ನೀನು
ಸತ್ತ್ವಾದಿ ಗುಣತ್ರಯಯುಕ್ತಳಾದ
ಈಶ್ವರಾತ್ಮಕಳೇ ಪ್ರಸನ್ನಳಾಗು
ನಾರಾಯಣಿ ನಿನಗೆ ನಮಿಸುವೆವು || ೨೨ ||

ಎಲ್ಲೆಲ್ಲೂ ಹಸ್ತ ಪಾದಾಗ್ರಳೇ
ಸರ್ವ ದಿಕ್ಕಲ್ಲೂ ಶಿರ ನಯನ ವದನ
ಎಲ್ಲೆಡೆಗಳಲ್ಲೂ ಶ್ರವಣ ಘ್ರಾಣ
ಇಂದ್ರಿಯಗಳುಳ್ಳವಳಾಗಿರುವ
ನಾರಾಯಣಿ ನಿನಗೆ ನಮಿಸುವೆವು || ೨೩ ||
ಸರ್ವ ಸ್ವರೂಪ ಹೊಂದಿದವಳೇ

ದೇವೀ ವಿಶ್ವದ ಈಶ್ವರಿಯೇ
ಸರ್ವ ಶಕ್ತಿಗಳಿಂದ ಪರಿಪೂರ್ಣಳೇ
ನಮ್ಮನ್ನು ಭಯಗಳಿಂದ ಕಾಪಾಡು
ದುರ್ಗಾದೇವಿ ನಿನಗೆ ನಮಿಸುವೆವು || ೨೪ ||

ಹೇ ಮಹಾದೇವಿಯೆ ನೀನು
ಶೋಭಿಸುತಿರುವ ತ್ರಿಲೋಚನೆಯೇ
ಸೌಮ್ಯವಾಗಿರುವ ನಿನ್ನ ವದನವು
ಸರ್ವ ಭಯದಿಂದ ನಮ್ಮನ್ನು ರಕ್ಷಿಸಲಿ
ಕಾತ್ಯಾಯನಿ ನಿನಗೆ ನಮಿಸುವೆವು || ೨೫ ||

ಭಯಂಕರ ಜ್ವಾಲೆಗಳಿಂದ
ಅತ್ಯುಗ್ರದಿಂದ ನಿಶ್ಶೇಷವಾಗಿ
ಅಸುರರ ವಧಿಸುವ ನಿನ್ನ ತ್ರಿಶೂಲವು
ನಮ್ಮನ್ನು ಭಯದಿಂದ ಕಾಪಾಡಲಿ
ಭದ್ರಕಾಳಿಯೇ ನಿನಗೆ ನಮಿಸುವೆವು || ೨೬ ||

ಹೇ ದೇವೀ ನಿನ್ನ ಘಂಟೆಯು
ಶಬ್ದದಿಂದ ಜಗತ್ತನ್ನು ತುಂಬಿಸಿ
ದೈತ್ಯರ ತೇಜಸ್ಸನ್ನು ಅಡಗಿಸುವುದು
ನಿನ್ನ ಘಂಟೆಯು ನಮ್ಮನ್ನು ಪಾಪಗಳಿಂದ
ರಕ್ಷಿಸಲಿ ತಾಯಿಯು ಮಕ್ಕಳ ರಕ್ಷಿಸುವಂತೆ || ೨೭ ||

ಹೇ ಚಂಡಿಕಾಂಬಿಕೆ ನಿನಗೆ
ನಾವು ಬಾಗಿ ನಮಸ್ಕರಿಸಿದೆವು
ಅಸುರರ ರಕ್ತದಿ ಕೊಬ್ಬಿನ ಕೆಸರಲಿ
ಲೇಪಿತವಾಗಿ ಉಜ್ವಲವಾದ
ನಿನ್ನ ಖಡ್ಗವು ನಮಗೆ ಶುಭವ ತರಲಿ || ೨೮ ||

ದೇವೀ ನೀನು ಸಂತುಷ್ಟಳಾದರೆ
ಸಕಲ ರೋಗ ವಿಪತ್ತು ನಶಿಸಿ
ಸಕಲಾಭೀಷ್ಟಗಳು ದೊರಕುವುದು
ನಿನ್ನ ಆಶ್ರಯವನ್ನು ಪಡೆದವರು
ಪರರಿಗೆ ಆಶ್ರಯ ನೀಡುವರು || ೨೯ ||

ದೇವೀ ನೀನು ವಿವಿಧ ರೂಪದಿ
ಆತ್ಮರೂಪವನ್ನು ಪ್ರಕಟಿಸುತ್ತ
ಧರ್ಮದ್ವೇಷಿಸುವ ಮಹಾಸುರರ
ವಿನಾಶವನ್ನು ಮಾಡಿದಂತೆಯೇ
ಯಾರು ಮಾಡಬಲ್ಲರು ಅಂಬಿಕೆ || ೩೦ ||

ವಿವೇಕ ಉಜ್ವಲಿಸುವ ಶಾಸ್ತ್ರವು
ವೇದ ವಿದ್ಯೆಯು ನಿನ್ನನ್ನೇ ವರ್ಣಿಸಿದೆ
ಮಹಾಂಧಕಾರದ ಮಮತ್ವದ
ಸಂಸಾರದ ಹಳ್ಳದಲ್ಲಿ ವಿಶ್ವವನ್ನು
ಸುತ್ತಿಸುವ ಮಾಯೆಯು ನೀನಲ್ಲವೇ || ೩೧ ||

ತೊಂದರೆ ಕೊಡುವ ರಾಕ್ಷಸರು
ದುಷ್ಟ ಸೈನಿಕರು ಮತ್ತು ಶತ್ರುಗಳು
ಉಗ್ರ ವಿಷ ಸರ್ಪಗಳು ಮತ್ತು ಕಾಡ್ಗಿಚ್ಚು
ಸಮುದ್ರ ಮೊದಲಾದವು ಇರುವಲ್ಲೆಲ್ಲಾ
ನೀನೇ ನಿಂತು ವಿಶ್ವವ ಪಾಲಿಸುವೆ || ೩೨ ||

ವಿಶ್ವೇಶ್ವರಿಯೇ ವಿಶ್ವಪಾಲಿಸುವೆ
ವಿಶ್ವಾತ್ಮಳಾಗಿ ವಿಶ್ವ ಧರಿಸಿದೆ
ವಿಶ್ವದ ಒಡೆಯರು ನಿನ್ನ ನಮಿಸುವರು
ನಿನ್ನಲ್ಲಿ ಭಕ್ತಿಯಿಂದ ನಮ್ರರಾದವರು
ಜಗತ್ತಿಗೆ ಆಶ್ರಯರಾಗುವರು || ೩೩ ||

ಹೇ ದೇವೀ ಪ್ರಸನ್ನಳಾಗು
ದೈತ್ಯರ ವಧಿಸಿ ನಮ್ಮನ್ನು ರಕ್ಷಿಸಿದೆ
ಶತ್ರು ಭಯದಿಂದ ಅನವರತ ರಕ್ಷಿಸು
ವಿಶ್ವದ ಪಾಪವ ಮತ್ತು ಉತ್ಪಾತದ
ಮಹಾ ಉಪದ್ರವಗಳ ನಾಶ ಮಾಡು || ೩೪ ||

ವಿಶ್ವ ಸಂಕಷ್ಟ ಪರಿಹಾರಿಣಿಯೇ
ದೇವೀ ನೀನು ಪ್ರಸನ್ನಳಾಗು
ತ್ರಿಜಗವಾಸಿಗಳ ಪೂಜ್ಯಳೇ ನಿನ್ನ
ನಮಿಸುತ್ತಿರುವ ನಮಗೆ ಅನುಗ್ರಹಿಸು
ಲೋಕಕಲ್ಯಾಣದ ವರ ನೀಡು || ೩೫ ||

ದೇವಿಯೆಂದಳು ದೇವತೆಗಳೇ
ನಾನು ಸುಪ್ರೀತಳಾಗಿರುವೆ
ಜಗತ್ತಿಗೆ ಉಪಕಾರವಾಗುವ
ಯಾವ ವರವನ್ನಾದರೂ ಕೇಳಿ
ನಿಮ್ಮ ಮನದಿಚ್ಛೆಯಂತೆ ಕೊಡುವೆನು || ೩೬ ||

ದೇವತೆಗಳೆಂದರು ದೇವಿಗೆ
ತ್ರಿಲೋಕೇಶ್ವರಿಯೇ ಈಗ ನೀನು
ಮಾಡಿದಂತೆಯೇ ಯಾವಾಗಲೂ
ನಮ್ಮ ವೈರಿಗಳನ್ನು ನಾಶ ಮಾಡು
ಸಕಲ ಬಾಧೆಗಳನ್ನು ಪರಿಹರಿಸು || ೩೭ ||

ಆಗ ದೇವಿಯು ಹೇಳಿದಳು
ಇಪ್ಪತ್ತೆಂಟನೆಯ ಯುಗದಲ್ಲಿ
ವೈವಸ್ವತ ಮನ್ವಂತರದಲ್ಲಿ ಮತ್ತೆ
ಶುಂಭ ನಿಶುಂಭರೆಂಬ ಮತ್ತಿಬ್ಬರು
ಮಹಾರಾಕ್ಷಸರು ಜನಿಸುವರು || ೩೮ ||

ನಂದಗೋಪನ ಗೃಹದಲ್ಲಿ
ಯಶೋದೆ ಗರ್ಭದಿ ಜನಿಸಿ ನಾನು
ವಿಂಧ್ಯಾಚಲದಲ್ಲಿ ವಾಸಿಸುತ್ತ
ಆನಂತರ ಅವರಿಬ್ಬರನ್ನೂ
ನಾನೇ ನಾಶವ ಮಾಡುವೆನು || ೩೯ ||

ಮತ್ತು ಅತಿ ಭಯಂಕರವಾದ
ರೂಪದಿ ಭೂಮಂಡಲದಲ್ಲಿ
ಮತ್ತೊಮ್ಮೆ ನಾನು ಅವತರಿಸಿ ಬಂದು
ಸಾಧು ದ್ವೇಷಿ ವಿಪ್ರಚಿತ್ತಿಯೆಂಬುವ
ದಾನವನ ಪುತ್ರರನ್ನು ವಧಿಸುವೆನು || ೪೦ ||

ಉಗ್ರರಾಗಿರುವಂತ ವೈಪ್ರಚಿತ್ತ
ಮಹಾರಾಕ್ಷಸರನ್ನು ನಾನು
ಭಕ್ಷಿಸುತಿರುವಾಗ ನನ್ನ ಹಲ್ಲುಗಳು
ದಾಳಿಂಬೆಯ ಕುಸುಮಗಳಂತೆ
ಕೆಂಪು ವರ್ಣವನ್ನು ತಳೆಯುವುದು || ೪೧ ||

ಸ್ವರ್ಗದಲ್ಲಿ ದೇವತಾದಿಗಳು
ಮರ್ತ್ಯ ಲೋಕದಲ್ಲಿ ಮಾನವರು
ಭಕ್ತಿಯಿಂದ ನನ್ನನ್ನು ಸ್ತುತಿಸುವಾಗ
ರಕ್ತದಂತಿಕಾ ಎಂಬ ಹೆಸರಲ್ಲಿ
ನಿತ್ಯವೂ ನನ್ನನ್ನು ಕೀರ್ತಿಸುವರು || ೪೨ ||

ಮತ್ತೊಮ್ಮೆ ಒಂದು ನೂರು ವರ್ಷಗಳು
ಅನಾವೃಷ್ಟಿಯಿಂದ ಭೂಮಿಯಲ್ಲಿ
ನೀರೇ ಇಲ್ಲದಂತಾದಾಗ
ಮುನಿಜನರಿಂದ ಸ್ತುತಿಸಲ್ಪಟ್ಟು
ಅಯೋನಿಜೆಯಾಗಿ ಹುಟ್ಟುವೆ ನಾನು || ೪೩ ||

ನಂತರ ನಾನು ಮುನಿಜನರನ್ನು
ಸಂಜೀವನಗೊಳಿಸಲೆಂದು
ನೂರು ಕಣ್ಣುಗಳಲ್ಲ್ಲಿ ನೋಡುವುದರಿಂದ
ಶತಾಕ್ಷೀ ಎಂಬುವ ಹೆಸರಲ್ಲಿ
ಮಾನವರು ನನ್ನನ್ನು ಕೀರ್ತಿಸುವರು || ೪೪ ||

ಮತ್ತೆ ಮಳೆಯು ಬರುವವರೆಗೂ
ನನ್ನ ಶರೀರದಿಂದ ಹುಟ್ಟಿದ
ಪ್ರಾಣಧಾರಣೆಗೆ ಸಾಧನವಾದ
ಸೊಪ್ಪು ಕಾಯಿಪಲ್ಲೆಗಳಿಂದಲೇ
ಎಲ್ಲ ಲೋಕ ಜೀವಗಳ ರಕ್ಷಿಸುವೆ || ೪೫ ||

ಅನಾವೃಷ್ಟಿಯಿಂದ ಲೋಕದ
ಪ್ರಾಣಾಪಾಯ ನಿವಾರಿಸಿದ
ನಿಮಿತ್ತವಾಗಿ ಭೂಲೋಕದಲ್ಲಿ
ನಾನು ಶಾಕಂಬರೀ ಎಂಬುವ
ನಾಮದಿಂದ ಪ್ರಖ್ಯಾತಿ ಹೊಂದುವೆ || ೪೬ ||

ದುರ್ಗಮನೆಂಬ ಉಗ್ರ ರಾಕ್ಷಸನ
ಲೋಕ ರಕ್ಷಣೆಗಾಗಿ ವಧಿಸುವೆ
ಆ ದುರ್ಗಮನನ್ನು ವಧಿಸಿದ್ದರಿಂದ
ನನಗೆ ದುರ್ಗಾ ಎಂಬುವ ಹೆಸರು
ಲೋಕದಲ್ಲಿ ವಿಖ್ಯಾತಿ ಹೊಂದುವುದು || ೪೭ ||

ಮತ್ತೊಂದು ಸಮಯದಲ್ಲಿ ನಾನು
ಹಿಮಾಚಲದಲ್ಲಿ ಮಹರ್ಷಿಗಳ
ರಕ್ಷಿಸಲು ಬಹು ಭಯಂಕರವಾದ
ರೂಪವನ್ನು ಧರಿಸಿದವಳಾಗಿ
ಪೀಡಕ ರಾಕ್ಷಸರನ್ನು ವಧಿಸುವೆ || ೪೮ ||

ಆಗ ಸಮಸ್ತ ಮುನಿಜನರೆಲ್ಲ
ಭಕ್ತಿಯಿಂದ ದೇಹವ ಬಾಗಿಸಿ
ನಮಸ್ಕರಿಸಿ ನನ್ನನ್ನು ಸ್ತುತಿಸುವರು
ಆಗ ಭೀಮಾದೇವಿಯೆಂದು
ನನ್ನ ಹೆಸರು ಪ್ರಸಿದ್ಧವಾಗುವುದು || ೪೯ ||

ಮುಂದೆ ಅರುಣನೆಂಬ ಹೆಸರಿನ
ಮಹಾರಾಕ್ಷಸನು ತ್ರಿಲೋಕಕ್ಕೆ
ಮಹಾ ಉಪದ್ರವ ಮಾಡುವಾಗ
ಸಂಖ್ಯಾತೀತ ಭ್ರಮರಗಳ
ರೂಪವನ್ನು ನಾನು ಧರಿಸುವೆನು || ೫೦ ||

ತ್ರಿಲೋಕಗಳ ಹಿತಕ್ಕಾಗಿ
ಭ್ರಮರ ರೂಪದಿಂದ ನಾನು
ದುಷ್ಟ ಅರುಣಾಸುರನ ವಧಿಸುವೆ
ಆಗ ಎಲ್ಲೆಡೆಗಳಲ್ಲೂ ನನ್ನನ್ನು
ಭ್ರಾಮರೀ ಎಂದು ಸ್ತುತಿಸುವರು || ೫೧ ||

ಹೀಗೆ ಯಾವ್ಯಾವ ಕಾಲದಲ್ಲಿ
ದಾನವರಿಂದ ಪೀಡೆಗಳು
ಉಂಟಾದಾಗ ವಿವಿಧ ರೂಪದಿ
ಅವತರಿಸಿ ನಾನು ಶತ್ರುಗಳನ್ನು
ಸಂಹರಿಸಿ ತ್ರಿಲೋಕವ ರಕ್ಷಿಸುವೆ || ೫೨ ||