ಹತ್ತನೆಯ ಅಧ್ಯಾಯ

ಹೇಳಿದನು ಸುಮೇಧ ಋಷಿಯು
ತನ್ನ ಪ್ರಾಣಕ್ಕೆ ಸಮನಾಗಿರುವ
ತಮ್ಮ ನಿಶುಂಭನು ಸತ್ತಿದ್ದು ನೋಡಿ
ಸೈನ್ಯದ ವಧೆಯನ್ನೂ ಕಂಡ ಶುಂಭನು
ಕೋಪಗೊಂಡು ಹೀಗೆ ಹೇಳಿದನು || ೧ ||

ಬಲದಿ ಮದಿಸಿದ ದುಷ್ಟ ದುರ್ಗೆಯೇ
ಈಗ ಗರ್ವವ ಹೊಂದಬೇಡ
ಅತ್ಯಂತ ಅಹಂಕಾರಿಯು ನೀನು
ಬ್ರಹ್ಮಾಣಿ ಮತ್ತು ಇತರರ ಬಲವನ್ನು
ಆಶ್ರಯಿಸಿ ಯುದ್ಧವನ್ನು ಮಾಡುತ್ತಿರುವೆ || ೨ ||

ದೇವಿಯೆಂದಳು ದುಷ್ಟ ರಕ್ಕಸನೇ
ಜಗತ್ತಲ್ಲಿರುವುದು ನಾನೊಬ್ಬಳೇ
ದ್ವಿತೀಯಳಾಗಿ ಯಾರಿರುವಳು
ನನ್ನ ಈ ಮಹಿಮಾ ಶಕ್ತಿಗಳೆಲ್ಲವೂ
ನನ್ನಲ್ಲಿಯೇ ಪ್ರವೇಶಿಸುವುದು ನೋಡು || ೩ ||

ನಂತರ ಬ್ರಹ್ಮಾಣಿ ಮುಂತಾದ
ಎಲ್ಲಾ ಶಕ್ತಿಯ ದೇವಿಯರೆಲ್ಲರು
ಜಗನ್ಮಾತೆಯಾಗಿರುವ ದೇವಿಯ
ಶರೀರವನ್ನು ಪ್ರವೇಶಿಸಿದರು
ಆಗ ಅಂಬಿಕೆಯೊಬ್ಬಳೇ ಉಳಿದಳು || ೪ ||

ನಂತರ ದೇವಿಯು ಹೇಳಿದಳು
ನನ್ನ ಮಹಿಮೆಯಿಂದ ಹಲವಾರು
ರೂಪದಿ ತೋರಿದೆ ಈಗ ಅವೆಲ್ಲವು
ನನ್ನಲ್ಲೇ ಅಡಗಿ ನಾನೊಬ್ಬಳೇ ಇರುವೆ
ಈಗ ಯುದ್ಧಕ್ಕೆ ಸ್ಥಿರನಾಗಿ ನಿಲ್ಲು || ೫ ||

ಹೇಳಿದನು ಸುಮೇಧ ಋಷಿಯು
ನಂತರ ಎಲ್ಲಾ ದೇವತೆಗಳು
ರಾಕ್ಷಸರೂ ನೋಡುತ್ತಿದ್ದಂತೇ
ದೇವಿಗೂ ಶುಂಭಾಸುರನಿಗೂ
ಭಯಂಕರ ಯುದ್ಧವು ಶುರುವಾಯ್ತು || ೬ ||

ಹರಿತವಾಗಿರುವ ಬಾಣಗಳ
ಸುರಿಮಳೆಗಳಿಂದ ಹಾಗೂ
ದಾರುಣವಾದ ಶಸ್ತ್ರಗಳಿಂದಲೂ
ನಡೆಯುತ್ತಿರುವ ಅವರಿಬ್ಬರ ಯುದ್ಧವು
ಸರ್ವಲೋಕವು ಭಯಪಡುವಂತಿತ್ತು || ೭ ||

ರಾಕ್ಷಸನ ಮೇಲೆ ಅಂಬಿಕೆಯು
ನೂರಾರು ದಿವ್ಯಾಸ್ತ್ರಗಳನ್ನು
ಪ್ರಯೋಗಿಸಿದಾಗ ಅವುಗಳನ್ನೆಲ್ಲ
ದೈತ್ಯೇಂದ್ರನಾಗಿರುವ ಶುಂಭನು
ಪ್ರತ್ಯಸ್ತ್ರಗಳಿಂದ ಭಂಗಗೊಳಿಸಿದ || ೮ ||

ಆನಂತರ ಶುಂಭಾಸುರನು
ದಿವ್ಯಾಸ್ತ್ರ ಪ್ರಯೋಗಿಸಿದಾಗ
ಪರಮೇಶ್ವರಿಯು ಲೀಲೆಯಿಂದ
ಉಗ್ರವಾದ ಹುಂಕಾರ ಉಚ್ಚರಿಸಿ
ದಿವ್ಯಾಸ್ತ್ರವನ್ನು ನಾಶ ಮಾಡಿದಳು || ೯ ||

ಆ ರಾಕ್ಷಸ ಶುಂಭಾಸುರನು
ನೂರಾರು ಬಾಣಗಳಿಂದ
ದೇವಿಯನ್ನೇ ಮುಚ್ಚಿ ಹಾಕಿದನು
ಕೋಪದಿ ದೇವಿಯು ಬಾಣಗಳಿಂದ
ಅವನ ಧನುಸ್ಸನ್ನು ಕತ್ತರಿಸಿದಳು || ೧೦ ||

ತನ್ನ ಧನುಸ್ಸು ಕತ್ತರಿಸಲ್ಪಡಲು
ದೈತ್ಯರಾಜನು ಶಕ್ತ್ಯಾಯುಧವನ್ನು
ಕೈಯ್ಯಲ್ಲೆತ್ತಿ ಕೊಂಡಾಗ ದೇವಿಯು
ತನ್ನ ಚಕ್ರಾಯುಧದಿಂದ ಅವನ
ಶಕ್ತ್ಯಾಯುಧವನ್ನು ಕತ್ತರಿಸಿದಳು || ೧೧ ||

ದೈತ್ಯರಧಿಪತಿ ಶುಂಭಾಸುರನು
ನಂತರ ಖಡ್ಗವ ತೆಗೆದುಕೊಂಡನು
ನೂರು ಚಂದ್ರರ ಚಿತ್ರಗಳಿಂದ
ಹೊಳೆಯುತ್ತಿರುವ ಫಲಕಾಯುಧವ
ಹಿಡಿದು ನುಗ್ಗಿದ ದೇವಿಯ ಬಳಿಗೆ || ೧೨ ||

ಅವನು ಬರುವಾಗ ಚಂಡಿಕೆಯು
ಶೀಘ್ರವಾಗಿ ತನ್ನ ಧನುಸ್ಸಿನಲ್ಲಿ
ಹರಿತ ಬಾಣಗಳನ್ನಿಟ್ಟು ಪ್ರಯೋಗಿಸಿ
ರವಿಕಿರಣದಂತ ಫಲಕಾಯುಧವ
ಮತ್ತು ಅವನ ಖಡ್ಗವ ಕತ್ತರಿಸಿದಳು || ೧೩ ||

ಮತ್ತು ಶುಂಭಾಸುರನ ಮೇಲೆ
ದೇವಿಯು ಬಾಣವೃಷ್ಟಿ ಸುರಿಸಿ
ಅವನೇರಿದ ರಥದ ಕುದುರೆಗಳನ್ನು
ಸಾರಥಿಯನ್ನು ಧ್ವಂಸ ಮಾಡಿ
ರಥವನ್ನು ಕೂಡ ಪುಡಿ ಮಾಡಿದಳು || ೧೪ ||

ಸತ್ತು ಬಿದ್ದಿರುವ ಕುದುರೆಗಳನ್ನು
ಭಂಗಗೊಂಡ ಆಯುಧಗಳನು
ರಥ ಮತ್ತು ಸಾರಥಿಯ ನಾಶ ಕಂಡು
ಶುಂಭನು ಅಂಬಿಕೆಯ ಕೊಲ್ಲಲೆಂದು
ಘೋರ ಮುದ್ಗರವ ತೆಗೆದುಕೊಂಡನು || ೧೫ ||

ಅವನು ಮುನ್ನುಗ್ಗಿ ಬರುವಷ್ಟರಲ್ಲಿ
ಹರಿತವಾದ ಬಾಣಗಳಿಂದ
ದೇವಿಯು ಮುದ್ಗರವ ಕತ್ತರಿಸಿದಳು
ಹಾಗಾದರೂ ಅವನು ಮುಷ್ಟಿಯೆತ್ತಿ
ವೇಗದಿ ನುಗ್ಗಿದ ದೇವಿಯ ಬಳಿಗೆ || ೧೬ ||

ದೈತ್ಯೋತ್ತಮನಾಗಿರುವಂತ
ಆ ಶುಂಭಾಸುರನು ದೇವಿಯ
ಹೃದಯಕ್ಕೆ ಮುಷ್ಟಿಯಿಂದ ಗುದ್ದಿದನು
ಆ ಕ್ಷಣ ದೇವಿಯು ತನ್ನ ಕೈಯ್ಯಿಂದ
ದೈತ್ಯನ ಎದೆಗೆ ಬಲವಾಗಿ ಹೊಡೆದಳು || ೧೭ ||

ದೈತ್ಯರಾಜ ಶುಂಭಾಸುರನು
ದೇವಿಯಿಂದ ಹೊಡೆಸಿಕೊಂಡು
ಆ ಸಮಯದಲ್ಲಿ ನೆಲಕ್ಕೆ ಉರುಳಿದ
ಅನಿರೀಕ್ಷಿತವಾದ ಬಲದಿಂದ
ಮತ್ತೆ ಎದ್ದು ಬಂದ ವೇಗವಾಗಿ || ೧೮ ||

ಶುಂಭನು ದೇವಿಯನ್ನೆತ್ತಿಕೊಂಡು
ನೆಗೆದು ಆಕಾಶವನ್ನೇರಿದನು
ಆಕಾಶದಲ್ಲಿ ಚಂಡಿಕಾಂಬೆಗೆ
ನಿಲ್ಲಲು ಆಧಾರವಿಲ್ಲದಿದ್ದರೂ
ಅವನೊಡನೆ ಯುದ್ಧವನ್ನು ಮಾಡಿದಳು || ೧೯ ||

ಆಕಾಶದಲ್ಲಿ ಚಂಡಿಕೆಯೂ
ದೈತ್ಯನಾದ ಶುಂಭನು ಪರಸ್ಪರ
ಅಪೂರ್ವವಾದ ಯುದ್ಧ ಮಾಡಿದರು
ಯುದ್ಧವು ಸಿದ್ಧರಿಗೆ ಮಹರ್ಷಿಗಳಿಗೆ
ವಿಸ್ಮಯವನ್ನುಂಟು ಮಾಡುವಂತಿತ್ತು || ೨೦ ||

ಜಗನ್ಮಾತೆಯಾದ ಅಂಬಿಕೆಯು
ಅಸುರನೊಂದಿಗೆ ಬಹುಕಾಲ
ಯುದ್ಧವನ್ನು ಮಾಡಿ ಆನಂತರ
ಅಸುರನನ್ನು ಹಿಡಿದು ಮೇಲಕ್ಕೆ ಎತ್ತಿ
ಗಿರಗಿರನೆ ಸುತ್ತಿಸಿ ನೆಲಕ್ಕೆಸೆದಳು || ೨೧ ||

ದುರಾತ್ಮನಾದ ಶುಂಭನನ್ನು
ದೇವಿಯು ನೆಲಕ್ಕೆ ಎಸೆದಾಗ
ನೆಲದಿಂದ ಎದ್ದು ಕೈಯ್ಯ ಮುಷ್ಟಿಯೆತ್ತಿ
ಚಂಡಿಕೆಯನ್ನು ಕೊಲ್ಲುವ ಇಚ್ಛೆಯಲಿ
ವೇಗವಾಗಿ ಓಡಿ ಬಂದನು || ೨೨ ||

ದೈತ್ಯ ಗಣದ ಅಧಿಪತಿಯಾದ
ಶುಂಭಾಸುರನು ವೇಗದಿಂದ
ತನ್ನನು ವಧಿಸಲು ನುಗ್ಗಿ ಬರುವಾಗ
ದೇವಿಯು ಶೂಲದಿ ಅವನೆದೆಗೆ
ಚುಚ್ಚಿ ಅವನನ್ನು ನೆಲದಲ್ಲಿ ಕೆಡವಿದಳು || ೨೩ ||

ದೇವಿಯ ಶೂಲಾಗ್ರದಿಂದ
ತಿವಿಯಲ್ಪಟ್ಟು ಗತ ಪ್ರಾಣನಾಗಿ
ಸಮುದ್ರ ದ್ವೀಪ ಪರ್ವತ ಕೂಡಿದ
ಭೂಮಂಡಲವನ್ನೇ ನಡುಗಿಸುತ್ತ
ನೆಲದಲ್ಲಿ ಬಿದ್ದನು ಶುಂಭಾಸುರನು || ೨೪ ||

ದುರಾತ್ಮನಾಗಿದ್ದ ಶುಂಭನು
ಮರಣವನ್ನು ಹೊಂದಿದ ಯುದ್ಧದಲ್ಲಿ
ಆಗ ಸಮಸ್ತವೂ ಶಾಂತವಾಯಿತು
ಜಗತ್ತು ಅತ್ಯಂತ ಸ್ವಸ್ಥತೆ ಹೊಂದಿತು
ಆಕಾಶವೂ ನಿರ್ಮಲವಾಯಿತು || ೨೫ ||

ಉಲ್ಕಾ ಸಹಿತವಾದ ವಿಪತ್ತನ್ನು
ಸೂಚಿಸುವ ಮೋಡಗಳೆಲ್ಲವೂ
ಶುಂಭನು ಸತ್ತಾಗ ಅಡಗಿದವು
ಉಕ್ಕಿ ಬಂದಿದ್ದ ನದಿಗಳು ಕೂಡ
ತಮ್ಮ ಮಾರ್ಗದಲ್ಲಿ ಹರಿಯ ತೊಡಗಿದವು || ೨೬ ||

ಆ ಶುಂಭನು ಸತ್ತ ನಂತರ
ದೇವತಾದಿಗಳು ಗಣಗಳು
ಹರ್ಷದಿಂದ ಮನದುಂಬಿಕೊಂಡರು
ಸಂತುಷ್ಟರಾದ ಗಂಧರ್ವರೆಲ್ಲ
ಮಧುರವಾಗಿ ಗಾಯನ ಮಾಡಿದರು || ೨೭ ||

ಹಾಗೆಯೇ ಕೆಲವು ಗಂಧರ್ವರು
ವಾದ್ಯಗಳಿಂದ ಧ್ವನಿಗೈದರು
ಅಪ್ಸರೆಯರು ನರ್ತನ ಮಾಡಿದರು
ಗಾಳಿಯು ಬೀಸಿತು ಪುಣ್ಯಕರವಾಗಿ
ಸೂರ್ಯನು ಹೆಚ್ಚು ಪ್ರಕಾಶದಿ ಬೆಳಗಿದ || ೨೮ ||

ಆ ಶುಂಭನ ಉಪದ್ರವದಿಂದ
ನಿಂತಿದ್ದ ಯಜ್ಞಾದಿ ಕರ್ಮಗಳು
ಪುನಃ ನಡೆಯುವಂತೆ ಆದಾಗ
ಅಗ್ನಿಗಳು ಪ್ರಸನ್ನವಾಗಿ ಜ್ವಲಿಸಿದವು
ವಿಪತ್ಸೂಚಕ ಶಬ್ದಗಳಡಗಿದವು || ೨೯ ||