ಒಂಭತ್ತನೇ ಅಧ್ಯಾಯ
ರಾಜನೆಂದ ಭಗವಂತನೇ
ವಿಚಿತ್ರವಾದ ರಕ್ತಬೀಜನ
ಸಂಹಾರವನ್ನು ಅವಲಂಬಿಸಿದ
ಆ ದೇವಿಯ ಚರಿತ್ರೆಯ ಮಹಿಮೆಯು
ನಿಮ್ಮಿಂದ ನನಗೆ ವರ್ಣಿಸಲ್ಪಟ್ಟಿದೆ || ೧ ||
ರಕ್ತ ಬೀಜನ ವಧೆಯ ನಂತರ
ಅತ್ಯಂತ ಕೋಪ ಸ್ವಭಾವದ
ಶುಂಭ-ನಿಶುಂಭರ ಸಾಹಸವೇನು
ಕೇಳಲು ಇಚ್ಛಿಸಿರುವೆ ಎಂದನು
ಸುರಥರಾಜನು ಸುಮೇಧ ಮುನಿಗೆ || ೨ ||
ಹೇಳಿದನು ಸುಮೇಧ ಋಷಿಯು
ರಕ್ತಬೀಜನು ಸತ್ತ ಹಾಗೆಯೆ
ಯುದ್ಧದಲ್ಲಿ ಅನೇಕ ರಾಕ್ಷಸರು
ಸತ್ತ ನಂತರ ಶುಂಭ ನಿಶುಂಭರು
ಅತ್ಯಂತ ಕೋಪವನ್ನು ತಾಳಿದರು || ೩ ||
ಪ್ರತಿಕ್ಷಣವೂ ತನ್ನ ದೊಡ್ಡ ಸೈನ್ಯವು
ನಾಶವಾಗುವುದನ್ನು ಕಂಡು
ನಿಶುಂಭಾಸುರನು ಕೋಪಗೊಂಡು
ಮುಖ್ಯವಾದ ರಾಕ್ಷಸ ಸೈನ್ಯದೊಡನೆ
ದೇವಿಯ ಮೇಲೆ ಯುದ್ಧಕ್ಕೆ ಬಂದನು || ೪ ||
ನಿಶುಂಭನ ಮುಂದೆ ಮತ್ತು ಹಿಂದೆ
ಹಾಗೂ ಎರಡೂ ಪಾರ್ಶ್ವದಲ್ಲೂ
ಮಹಾರಾಕ್ಷಸರೆಲ್ಲ ಗುಂಪಾಗಿ
ಕೋಪಾವೇಶದಿ ಅವಡುಗಚ್ಛುತ
ದೇವಿಯನ್ನು ವಧಿಸಲು ಬಂದರು || ೫ ||
ಮಹಾಬಲಶಾಲಿ ಶುಂಭನು
ಸೈನ್ಯ ಸಹಿತ ಮಾತೃಗಣದೊಡನೆ
ಯುದ್ಧವ ಮಾಡಿ ಚಂಡಿಕಾಂಬೆಯ
ಸಂಹರಿಸುವೆನೆಂಬ ಸಂಕಲ್ಪದಿ
ಬಂದನು ಕೋಪಾವೇಶದಿಂದ || ೬ ||
ನಂತರ ಮಳೆಗರೆಯುತ್ತಿರುವ
ಮೋಡಗಳಂತೆ ಬಾಣಗಳ
ಸುರಿಮಳೆಯನ್ನೇ ಸುರಿಸುತ್ತಿರುವ
ಶುಂಭ ನಿಶುಂಭರಿಗೂ ದೇವಿಗೂ
ಅತ್ಯುಗ್ರವಾದ ಯುದ್ಧವು ಜರುಗಿತು || ೭ ||
ಅವರಿಬ್ಬರೂ ಪ್ರಯೋಗಿಸಿದ
ಬಾಣಗಳನ್ನು ಚಂಡಿಕೆಯು ತನ್ನ
ಬಾಣರಾಶಿಯಲಿ ಕತ್ತರಿಸಿದಳು
ಅಸುರರಾಜರ ಅಂಗಗಳಿಗೆ
ಶಸ್ತ್ರ ಸಮೂಹಗಳಿಂದ ಹೊಡೆದಳು || ೮ ||
ನಿಶುಂಭನು ಹರಿತವಾಗಿರುವ
ಉಜ್ವಲ ಪ್ರಭೆಯಲಿ ಹೊಳೆವ ಖಡ್ಗವ
ಫಲಕಾಯುಧವನು ತೆಗೆದುಕೊಂಡು
ದೇವಿಯ ಉತ್ತಮವಾಹನವಾದ
ಸಿಂಹದ ತಲೆಯ ಮೇಲೆ ಹೊಡೆದನು || ೯ ||
ದೇವಿಯ ವಾಹನವ ಹೊಡೆದಾಗ
ದೇವಿಯು ಕ್ಷುರಪ್ರವೆಂಬಂತ
ಶಸ್ತ್ರದಿ ನಿಶುಂಭನ ಉತ್ತಮ ಖಡ್ಗವ
ಮತ್ತು ಅಷ್ಟ ಚಂದ್ರಾಕೃತಿಗಳಿರುವ
ಫಲಕಾಯುಧವನ್ನು ಕತ್ತರಿಸಿದಳು || ೧೦ ||
ತನ್ನ ಖಡ್ಗ ಮತ್ತು ಫಲಕಾಯುಧವು
ಕತ್ತರಿಸಲ್ಪಟ್ಟಾಗ ನಿಶುಂಭನು
ಶಕ್ತ್ಯಾಯುಧವನ್ನು ಪ್ರಯೋಗಿಸಿದನು
ದೇವಿಯು ಆ ಶಕ್ತ್ಯಾಯುಧವನ್ನು
ಚಕ್ರದಿಂದ ಎರಡಾಗಿ ಸೀಳಿದಳು || ೧೧ ||
ಶಕ್ತ್ಯಾಯುಧವು ತುಂಡಾದಾಗ
ಕೋಪಾವೇಶದಿ ನಿಶುಂಭನು
ಶೂಲಾಯುಧವ ತೆಗೆದುಕೊಂಡನು
ದೇವಿಯು ತನ್ನೆದುರು ಬಂದ ಶೂಲವ
ಮುಷ್ಟಿ ಪ್ರಹಾರದಿ ಪುಡಿ ಮಾಡಿದಳು || ೧೨ ||
ಅಸುರನು ಗದೆಯನ್ನು ಬೀಸುತ್ತ
ಚಂಡಿಕೆಯ ಮೇಲೆ ಎಸೆದನು
ಅವನು ಎಸೆದ ಗದೆಯೂ ಕೂಡ
ದೇವಿಯ ತ್ರಿಶೂಲದಿಂದಲೇ
ಕತ್ತರಿಸಲ್ಪಟ್ಟು ಸುಟ್ಟು ಬೂದಿಯಾಯ್ತು || ೧೩ ||
ನಂತರ ಕೈಯ್ಯಲ್ಲಿ ಕೊಡಲಿಯನ್ನು
ಹಿಡಿದು ಎದುರಿಸಿ ಬರುತ್ತಲಿದ್ದ
ದೈತ್ಯೋತ್ತಮನಾದ ನಿಶುಂಭನನ್ನು
ದೇವಿಯು ತನ್ನ ಬಾಣರಾಶಿಯಿಂದ
ಹೊಡೆದು ನೆಲಕ್ಕೆ ಬೀಳಿಸಿದಳು || ೧೪ ||
ಭಯಂಕರ ಪರಾಕ್ರಮವುಳ್ಳ
ತನ್ನ ಸಹೋದರ ನಿಶುಂಭನು
ಮೂರ್ಛೆ ಹೊಂದಿ ಭೂಮಿಗೆ ಬಿದ್ದಾಗ
ಶುಂಭನು ಅತ್ಯಂತ ಕೃದ್ಧನಾಗಿ
ಅಂಬಿಕೆಯನ್ನು ಕೊಲ್ಲಲು ಬಂದನು || ೧೫ ||
ಶುಂಭಾಸುರನು ರಥವನ್ನೇರಿ
ಶ್ರೇಷ್ಠವಾದ ಆಯುಧಗಳನು
ದೀರ್ಘವು ಮತ್ತು ನಿರುಪಮವಾದ
ತನ್ನ ಎಂಟು ಬಾಹುಗಳಲ್ಲಿರಿಸಿ
ಆಕಾಶ ವ್ಯಾಪಿಸಿ ಪ್ರಕಾಶಿಸಿದ || ೧೬ ||
ಆಗ ದೇವಿಯು ತನ್ನೆದುರಲ್ಲಿ
ಬರುತ್ತಲಿರುವ ಶುಂಭನ ನೋಡಿ
ಗಟ್ಟಿಯಾಗಿ ಶಂಖವ ಊದಿದಳು
ಬಿಲ್ಲಿನ ಹುರಿಯೆಳೆದು ಸಹಿಸಲಾಗದ
ಠೇಂಕಾರ ಶಬ್ದವ ಮಾಡಿದಳು || ೧೭ ||
ಆನಂತರ ದೇವಿಯು ಎಲ್ಲಾ
ದೈತ್ಯ ದಾನವರ ಸೈನ್ಯಗಳನ್ನು
ನಿಸ್ತೇಜವನ್ನಾಗಿ ಮಾಡಬಲ್ಲ
ತನ್ನ ಘಂಟಾಶಬ್ದದಿಂದಲೇ
ದಿಕ್ಕು ಮೂಲೆಗಳನ್ನು ತುಂಬಿಸಿದಳು || ೧೮ ||
ದೇವಿಯ ವಾಹನ ಸಿಂಹವು
ಆನೆಗಳ ಮಹಾಮದವನ್ನು
ಇಳಿಸುವ ಮಹಾಘರ್ಜನೆಯಿಂದ
ಆಕಾಶವನ್ನು ದಶದಿಕ್ಕುಗಳನು
ಶಬ್ದಮಯವನ್ನಾಗಿ ಮಾಡಿತು || ೧೯ ||
ಕಾಳಿದೇವಿಯು ಆಕಾಶಕ್ಕೆ
ನೆಗೆದು ಎರಡೂ ಕೈಗಳಿಂದ
ಜೋರಾಗಿ ಹೊಡೆದಳು ಭೂಮಿಯನ್ನು
ಅದರಿಂದುಂಟಾದ ಶಬ್ದದಿಂದ
ಹಿಂದಿನ ಶಬ್ದಗಳು ಅಡಗಿದವು || ೨೦ ||
ಶಿವದೂತಿಯು ಮಿತಿಮೀರಿದ
ಅಟ್ಟಹಾಸವನ್ನು ಮಾಡಿದಳು
ಆ ಶಬ್ದಗಳಿಂದ ರಾಕ್ಷಸರೆಲ್ಲ
ಭಯಗೊಂಡು ನಡುಗಿ ಹೋದರು
ಶುಂಭನು ಅತ್ಯಂತ ಕೋಪಗೊಂಡ || ೨೧ ||
ಅಂಬಿಕೆಯು ಆ ಅಸುರನಿಗೆ
ಎಲೈದುರಾತ್ಮನೆ ನಿಲ್ಲು ಎಂದು
ಘರ್ಜಿಸಿದಾಗ ಆಕಾಶದಲ್ಲಿ
ನಿಂತಿರುವ ದೇವತೆಗಳೆಲ್ಲಾ
ದೇವಿಗೆ ಜಯಘೋಷ ಮಾಡಿದರು || ೨೨ ||
ಶುಂಭನು ಭಯಂಕರ ಜ್ವಾಲೆಯ
ಶಕ್ತ್ಯಾಯುಧ ಪ್ರಯೋಗಿಸಿದಾಗ
ಬೆಂಕಿಯ ಬೆಟ್ಟದಂತೆ ತೋರುತ್ತ
ಬರುತ್ತಿದ್ದಾಗ ಅದನ್ನು ದೇವಿಯು
ಮಹೋಲ್ಕಾಯುಧದಿ ನಿವಾರಿಸಿದಳು || ೨೩ ||
ರಾಜನೇ ಶುಂಭನ ಸಿಂಹನಾದ
ಮೂರ್ಲೋಕದ ಮಧ್ಯಭಾಗವೆಲ್ಲ
ತುಂಬಿದರೂ ದೇವಿಯು ಮಾಡಿದ
ಭಯಂಕರ ಸಿಡಿಲಿನ ಧ್ವನಿಯಿಂದ
ಶುಂಭನ ಸಿಂಹನಾದ ಅಡಗಿತು || ೨೪ ||
ದೇವಿಯು ಮತ್ತು ಶುಂಭಾಸುರನು
ಒಬ್ಬರಿಗೊಬ್ಬರು ಬಾಣಗಳನ್ನು
ಪ್ರಯೋಗಿಸುತ್ತ ಕತ್ತರಿಸುತ್ತ ಇಬ್ಬರೂ
ಉಗ್ರಬಾಣದಿಂದ ಸಹಸ್ರ ಸಂಖ್ಯೆಯ
ಪ್ರತಿ ಬಾಣಗಳನ್ನು ಕತ್ತರಿಸಿದರು || ೨೫ ||
ನಂತರ ಚಂಡಿಕಾ ದೇವಿಯು
ಕೋಪದಿ ಶೂಲಾಯುಧದಿಂದ
ಹೊಡೆದಳು ಆಗ ರಾಕ್ಷಸನನ್ನು
ಹೀಗೆ ಹೊಡೆಯಲ್ಪಟ್ಟ ರಾಕ್ಷಸನು
ಮೂರ್ಛಿತನಾಗಿ ನೆಲದಲ್ಲಿ ಬಿದ್ದನು || ೨೬ ||
ಅಷ್ಟರಲ್ಲಿ ನಿಶುಂಭಾಸುರನು
ಪ್ರಜ್ಞೆಯ ಹೊಂದಿ ಬಿಲ್ಲನ್ನು ಧರಿಸಿ
ತನ್ನ ಬಾಣಗಳಿಂದ ದೇವಿಯನ್ನು
ಹಾಗೂ ಕಾಳೀದೇವಿಯನ್ನೂ
ಮತ್ತು ಸಿಂಹವನ್ನು ಕೂಡ ಹೊಡೆದನು || ೨೭ ||
ದಾನವರ ಪ್ರಭು ದಿತಿ ವಂಶಜ
ನಿಶುಂಭಾಸುರನು ಮಾಯೆಯಿಂದ
ಹತ್ತು ಸಹಸ್ರ ತೋಳುಳ್ಳವನಾಗಿ
ಹತ್ತು ಸಹಸ್ರ ಚಕ್ರಾಯುಧದಿಂದ
ಚಂಡಿಕಾದೇವಿಯ ಆವರಿಸಿದ || ೨೮ ||
ಅತಿಯಾದ ಸಂಕಷ್ಟಗಳನ್ನು
ಪರಿಹರಿಸುವ ದುರ್ಗಾಭಗವತಿಯು
ಕೋಪಗೊಂಡು ಬಾಣಗಳಿಂದ
ನಿಶುಂಭನ ಚಕ್ರಾಯುಧಗಳನ್ನು
ಮತ್ತು ಬಾಣಗಳನ್ನು ಕತ್ತರಿಸಿದಳು || ೨೯ ||
ನಂತರ ನಿಶುಂಭಾಸುರನು
ದೈತ್ಯರ ಸೈನ್ಯದಿಂದೊಡಗೂಡಿ
ಗದೆಯ ತೆಗೆದುಕೊಂಡು ದೇವಿಯನ್ನು
ಕೊಲ್ಲಬೇಕೆಂದು ವೇಗದಿಂದ
ಚಂಡಿಕಾಂಬೆಯ ಮುಂದೆ ಬಂದ || ೩೦ ||
ಚಂಡಿಕಾದೇವಿಯ ಬಳಿಗೆ
ನಿಶುಂಭನು ಬರುತ್ತಲಿರುವಾಗ
ದೇವಿಯು ತನ್ನ ಹರಿತ ಖಡ್ಗದಿಂದ
ಅವನ ಗದೆಯನ್ನು ಕತ್ತರಿಸಿದಳು
ಆಗ ಅವನು ಶೂಲವನ್ನು ತೆಗೆದುಕೊಂಡ || ೩೧ ||
ದೇವತೆಗಳನ್ನು ಪೀಡಿಸುವ
ನಿಶುಂಭನು ಶೂಲವ ಹಿಡಿದು
ಬರುತ್ತಿರುವಾಗ ಚಂಡಿಕಾಂಬೆಯು
ವೇಗಯುಕ್ತವಾದ ಶೂಲದಿಂದ
ಆ ಅಸುರನ ಹೃದಯಕ್ಕೆ ಇರಿದಳು || ೩೨ ||
ಶೂಲದಿಂದ ಇರಿಯಲ್ಪಟ್ಟಿರುವ
ಆ ಅಸುರನ ಹೃದಯದಿಂದ
ಮಹಾಬಲಿಷ್ಠನು ಪರಾಕ್ರಮಿಯು
ಆಗಿರುವ ಮತ್ತೊಬ್ಬ ಪುರುಷನು
ನಿಲ್ಲೆಂದು ಕೂಗುತ್ತ ಹೊರಬಂದನು || ೩೩ ||
ಆ ಪುರುಷನು ಹೃದಯದಿಂದ
ಹೊರಗೆ ಬಂದಾಗ ದೇವಿಯು
ನಗುತ್ತ ತನ್ನ ಖಡ್ಗಾಯುಧದಿಂದ
ಅವನ ತಲೆಯನ್ನು ಕತ್ತರಿಸಿದಳು
ಆಗ ಅವನು ಬಿದ್ದನು ನೆಲದಲ್ಲಿ || ೩೪ ||
ದೇವಿಯ ವಾಹನ ಸಿಂಹವು
ತನ್ನ ಕೋರೆದಾಡೆಗಳಿಂದ
ಕತ್ತು ಕಡಿದು ತಿಂದಿತು ರಾಕ್ಷಸರ
ಕಾಳಿ ದೇವಿಯು ಕೆಲವರ ತಿಂದಳು
ಶಿವದೂತಿಯು ಕೆಲವರ ನುಂಗಿದಳು || ೩೫ ||
ನಂತರ ಕೌಮಾರೀ ಶಕ್ತಿಯ
ಶಕ್ತ್ಯಾಯುಧದ ಹೊಡೆತದಿಂದ
ಸತ್ತರು ಕೆಲವು ಮಹಾರಾಕ್ಷಸರು
ಬ್ರಹ್ಮಾಣಿಯ ಮಂತ್ರದ ಜಲದಿಂದ
ಇನ್ನೂ ಕೆಲವರು ನಾಶವಾದರು || ೩೬ ||
ಮಾಹೇಶ್ವರಿಯ ತ್ರಿಶೂಲದಿಂದ
ಹಲವರು ತುಂಡಾಗಿ ಬಿದ್ದರು
ವಾರಾಹಿ ದೇವಿಯ ಮೂತಿಯಿಂದ
ತಿವಿಯಲ್ಪಟ್ಟ ಕೆಲವು ರಾಕ್ಷಸರು
ಪುಡಿಯಾಗಿ ಭೂಮಿಯಲ್ಲಿ ಬಿದ್ದರು || ೩೭ ||
ನಂತರ ಕೆಲವು ದಾನವರು
ವೈಷ್ಣವಿಯ ಚಕ್ರಾಯುಧದಿಂದ
ತುಂಡುತುಂಡಾಗಿ ಮಾಡಲ್ಪಟ್ಟರು
ಐಂದ್ರಿಯ ಕೈಯ್ಯಿಂದ ಪ್ರಯೋಗಿಸಿದ
ವಜ್ರಾಯುಧದಿಂದ ಸತ್ತರು ಕೆಲವರು || ೩೮ ||
ಕೆಲವು ರಾಕ್ಷಸರು ಅಲ್ಲೆ ಸತ್ತರು
ಕೆಲವರು ರಣರಂಗದಿಂದ
ಓಡಿ ಹೋಗಿ ಕಣ್ಮರೆಯಾದರು
ಕಾಳೀ ಶಿವದೂತಿ ಮತ್ತು ಸಿಂಹ
ಇವರಿಂದ ಕೆಲವರು ತಿನ್ನಲ್ಪಟ್ಟರು || ೩೯ ||
ಗೀತೆ ಗೊಂಚಲು
32 Songs