ಆರನೆಯ ಅಧ್ಯಾಯ
ಋಷಿಯೆಂದ ದೂತ ಸುಗ್ರೀವನು
ದೇವಿಯ ಮಾತುಗಳನ್ನು ಕೇಳಿ
ಕುಪಿತನಾಗಿ ಆವೇಶದಿಂದ
ಹೊರಟು ದೈತ್ಯರಾಜನ ಬಳಿ ಬಂದು
ವಿಸ್ತಾರವಾಗಿ ನಿವೇದಿಸಿದನು || ೧ ||
ದೈತ್ಯರಾಜ ಶುಂಭಾಸುರನು
ದೂತ ಹೇಳಿದ ಮಾತು ಕೇಳಿ
ಕೋಪದಿಂದ ಆವೇಶಗೊಂಡು
ದೈತ್ಯ ಗಣಗಳಿಗೆ ಪ್ರಭುವಾಗಿರುವ
ಧೂಮ್ರಲೋಚನನಿಗೆ ಹೇಳಿದನು || ೨ ||
ಧೂಮ್ರಲೋಚನನೇ ನೀನು
ನಿನ್ನ ಸೈನ್ಯದೊಡನೆ ಅಲ್ಲಿಗೆ ಹೋಗಿ
ದುಷ್ಟಳಾದ ಅವಳನ್ನು ಮುಡಿ ಹಿಡಿದು
ಎಳೆದುಕೊಂಡು ಅಳುವಂತೆ ಮಾಡಿ
ಕರೆದುಕೊಂಡು ಬಾ ಇಲ್ಲಿಗೆ ಬೇಗ || ೩ ||
ಬಲವಂತದಿ ಆಕೆಯನ್ನೆಳೆದು
ತರುವಾಗ ಯಾವನಾದರೂ
ಅವಳ ರಕ್ಷಣೆಗೆ ಎದ್ದು ಬಂದರೆ
ಅಮರ ಯಕ್ಷ ಗಂಧರ್ವನಾದರೂ
ಅವನನ್ನು ಅಲ್ಲಿಯೇ ವಧಿಸಬೇಕು || ೪ ||
ಋಷಿಯೆಂದನು ಅವನ ಆಜ್ಞೆಯ
ಪಡೆದ ದೈತ್ಯ ಧೂಮ್ರಲೋಚನನು
ಅರವತ್ತು ಸಾವಿರ ರಾಕ್ಷಸರ
ಸೈನ್ಯಗಳ ಸಮೇತ ಶೀಘ್ರವಾಗಿ
ಹೊರಟು ದೇವಿಯ ಬಳಿಗೆ ಹೋದನು || ೫ ||
ಹಿಮಾಚಲದಲ್ಲಿ ನೆಲೆಸಿರುವ
ಆ ದೇವಿಯನ್ನು ಕಂಡು ಅವನು
ನೀನು ಶುಂಭ-ನಿಶುಂಭಾಸುರರ
ಬಳಿಗೆ ಈಗಲೇ ಹೋಗೆಂದು
ಗಟ್ಟಿಯಾಗಿ ಘರ್ಜಿಸಿ ಹೇಳಿದನು || ೬ ||
ನೀನು ನನ್ನ ಸ್ವಾಮಿಯ ಬಳಿಗೆ
ಪ್ರೇಮದಿಂದ ಹೋಗದಿದ್ದರೆ
ಈಗಲೆ ನಿನ್ನ ಕೂದಲನ್ನು ಹಿಡಿದು
ನಿನ್ನನ್ನು ಅಳುವಂತೆ ಮಾಡಿ ನಾನು
ಬಲವಂತದಿಂದ ಎಳೆದೊಯ್ಯುವೆನು || ೭ ||
ದೇವಿಯೆಂದಳು ದೈತ್ಯ ರಾಜನು
ಕಳುಹಲ್ಪಟ್ಟ ನೀನು ಬಲಿಷ್ಠನು
ಸೈನ್ಯ ಸಹಿತ ಬಂದಿರುವ ನೀನು
ಬಲವಂತದಿಂದ ಎಳೆದೊಯ್ದರೆ
ನಿನಗೆ ನಾನೇನು ಮಾಡಬಲ್ಲೆನು || ೮ ||
ಋಷಿಯೆಂದ ದೇವಿಯ ನುಡಿಯ
ಕೇಳಿದ ಧೂಮ್ರಲೋಚನನು
ದೇವಿಯ ಮೇಲೆ ಎರಗಲು ಹೋದನು
ಆಗ ಅಂಬಿಕೆ ಹುಂಕಾರದಿಂದ
ಆ ಅಸುರನನ್ನು ಭಸ್ಮ ಮಾಡಿದಳು || ೯ ||
ಕೋಪದಿಂದ ಮೇಲೆ ಧುಮುಕಿದ
ರಾಕ್ಷಸರ ಮಹಾಸೈನ್ಯವನ್ನು
ಅಂಬಿಕೆಯು ತೀಕ್ಷ್ಣ ಬಾಣಗಳ
ಮತ್ತು ಶಕ್ತಿ ಪರಶು ಮುಂತಾದ
ವಿವಿಧ ಆಯುಧಗಳಿಂದ ಮುಚ್ಚಿದಳು || ೧೦ ||
ದೇವಿಯ ವಾಹನ ಸಿಂಹವು
ಕೋಪದಿ ತನ್ನ ಕೇಸರಗಳನು
ಕೊಡವಿಕೊಂಡು ಭಯಂಕರವಾಗಿ
ಘರ್ಜನೆಯನ್ನು ಮಾಡುತ್ತ ಹೊರಟು
ಅಸುರ ಸೈನ್ಯದ ಮೇಲೆ ಧುಮುಕಿತು || ೧೧ ||
ಸಿಂಹವು ದೈತ್ಯರ ಕೆಲವರನ್ನು
ತನ್ನ ಮುಂಗಾಲಿನಿಂದ ಹೊಡೆದು
ಕೆಲವರನ್ನು ಬಾಯಿಯಿಂದ ಅಗೆದು
ಹಿಂಗಾಲಿನಿಂದ ಕೆಲವು ಮಹಾಸುರರ
ಆಕ್ರಮಿಸಿ ಅಲ್ಲೇ ಕೊಂದು ಹಾಕಿತು || ೧೨ ||
ನಂತರ ಆ ಸಿಂಹವು ಅಲ್ಲಿ
ಅನೇಕ ರಾಕ್ಷಸರ ಹೊಟ್ಟೆಯನ್ನು
ಉಗುರುಗಳಿಂದ ಬಗೆದು ಹಾಕಿತು
ಕೆಲವರನ್ನು ಮುಂಗಾಲಿನಿಂದ
ಹೊಡೆದು ತಲೆಗಳ ಬೇರ್ಪಡಿಸಿತು || ೧೩ ||
ಸಿಂಹವು ಕೆಲವು ರಾಕ್ಷಸರ
ಬಾಹು ಮತ್ತು ಶಿರಸ್ಸು ಬೇರ್ಪಡಿಸಿ
ಕೇಸರಗಳನು ಕೊಡವಿಕೊಳ್ಳುತ
ಹಾಗೆ ಕೆಲವು ಅಸುರರ ಹೊಟ್ಟೆಯನ್ನು
ಬಗೆದು ರಕ್ತವ ಹೀರಿ ಕುಡಿಯಿತು || ೧೪ ||
ಅತ್ಯಂತ ಮಹಾತ್ಮವಾಗಿರುವ
ದೇವಿಯ ವಾಹನ ಸಿಂಹವು
ಅತಿಯಾದ ಕೋಪಾವೇಶದಿಂದ
ಕ್ಷಣ ಮಾತ್ರದಲ್ಲಿ ಆ ರಾಕ್ಷಸರ
ಸೈನ್ಯವನ್ನೆಲ್ಲಾ ನಾಶಗೊಳಿಸಿತು || ೧೫ ||
ದೈತ್ಯನಾದ ಧೂಮ್ರಲೋಚನನು
ದೇವಿಯಿಂದ ಹತನಾದುದನ್ನು
ಮತ್ತು ದೇವಿಯ ಸಿಂಹವು ಅಸುರರ
ಸೈನ್ಯವ ನಾಶಗೊಳಿಸಿದೆಯೆಂದು
ತಿಳಿದನು ದೈತ್ಯ ಶುಂಭಾಸುರನು || ೧೬ ||
ದೈತ್ಯರ ಅಧಿಪತಿಯಾಗಿರುವ
ಶುಂಭಾಸುರನು ಕೋಪಗೊಂಡು
ನಡುಗುವ ತುಟಿಗಳಿಂದ ಕೂಡಿ
ಚಂಡ ಮುಂಡರೆಂಬ ಮಹಾಸುರರ
ಕರೆದು ಹೀಗೆ ಆಜ್ಞಾಪಿಸಿದನು || ೧೭ ||
ಚಂಡಾಸುರನೆ ಮುಂಡಾಸುರನೆ
ಸಮಸ್ತ ಸೈನ್ಯವ ಕೂಡಿಕೊಂಡು
ನೀವು ಈಗಲೇ ಅಲ್ಲಿಗೆ ಹೋಗಿ
ಅಲ್ಲಿಂದ ಅವಳನ್ನು ಶೀಘ್ರವಾಗಿ
ಇಲ್ಲಿಗೆ ಕರೆದುಕೊಂಡು ಬರಬೇಕು || ೧೮ ||
ಆಕೆಯ ಕೂದಲನ್ನು ಹಿಡಿದು
ಅಥವಾ ಬಂಧಿಸಿ ಎಳೆದು ತನ್ನಿ
ಎಳೆದು ತರಲು ಸಂಶಯವಾದರೆ
ಅಸುರರೆಲ್ಲರು ಆಯುಧಗಳಿಂದ
ಯುದ್ಧವನ್ನು ಮಾಡಿ ವಶಪಡಿಸಿಕೊಳ್ಳಿ || ೧೯ ||
ದುಷ್ಟಳಾಗಿರುವ ಅಂಗನೆಯನ್ನು
ಹೊಡೆದು ಬಡಿದು ವಶಪಡಿಸಿಕೊಳ್ಳಿ
ಆ ಸಿಂಹವನ್ನು ವಧೆ ಮಾಡಿರಿ
ಆನಂತರ ಆ ಅಂಬಿಕೆಯನ್ನು
ಹಿಡಿದು ಕಟ್ಟಿ ತನ್ನಿ ಇಲ್ಲಿಗೆ ಬೇಗ || ೨೦ ||
ಗೀತೆ ಗೊಂಚಲು
32 Songs