ಮೂರನೆಯ ಅಧ್ಯಾಯ

ಋಷಿಯೆಂದ ಚಿಕ್ಷುರನೆಂಬುವ
ಸೇನಾಪತಿ ಮಹಾಸುರನು
ತನ್ನ ಸೈನ್ಯ ನಾಶವಾಗುವುದನ್ನು
ಕಂಡು ಕೋಪದಿಂದ ತಾನೇ
ದೇವಿಯೊಡನೆ ಯುದ್ಧಕ್ಕೆ ಬಂದನು || ೧ ||

ಮೇರುಗಿರಿ ಶಿಖರದ ಮೇಲೆ
ಮೇಘವು ಧಾರಾಕಾರದ
ಮಳೆಯ ಸುರಿಸುವಂತೆ ಚಿಕ್ಷುರನು
ಆ ಯುದ್ಧದಲ್ಲಿ ದೇವಿಯ ಮೇಲೆ
ಬಾಣಗಳ ಮಳೆಯನ್ನೇ ಸುರಿಸಿದನು || ೨ ||

ದೇವಿಯು ಅನಾಯಾಸವಾಗಿ
ಚಿಕ್ಷುರ ಬಿಟ್ಟ ಬಾಣರಾಶಿಯನ್ನು
ಕತ್ತರಿಸಿ ಪ್ರತಿ ಬಾಣಗಳಿಂದ
ಅವನ ಕುದುರೆಗಳ ಮತ್ತು ರಥದ
ಸಾರಥಿಯನ್ನು ಸಂಹರಿಸಿದಳು || ೩ ||

ದೇವಿಯು ಕ್ಷಣದಲ್ಲಿ ಧನುಸ್ಸನ್ನು
ಅತ್ಯುನ್ನತವಾಗಿರುವ ಧ್ವಜವನ್ನು
ಬಾಣ ಪ್ರಯೋಗಿಸಿ ಕತ್ತರಿಸಿದಳು
ಆ ರಾಕ್ಷಸನನ್ನು ಗಾತ್ರದಲ್ಲಿ
ಬಾಣಗಳಿಂದ ಪ್ರಹರಿಸಿದಳು || ೪ ||

ಭಿನ್ನ ರಥ ಮತ್ತು ಮುರಿದ ಧನುಸ್ಸುಳ್ಳ
ಹತವಾಗಿರುವ ಕುದುರೆಗಳುಳ್ಳ
ಸತ್ತ ಸಾರಥಿಯುಳ್ಳ ಆ ರಾಕ್ಷಸನು
ಖಡ್ಗ ಮತ್ತು ಚರ್ಮಗಳನ್ನು ಧರಿಸಿ
ದೇವಿಯ ಕಡೆಗೆ ಓಡಿ ಬಂದನು || ೫ ||

ತೀಕ್ಷ್ಣವಾದ ಖಡ್ಗವನ್ನು ಹಿಡಿದು
ವೇಗವಾಗಿ ಬಂದ ಚಿಕ್ಷುರನು
ದೇವಿಯ ವಾಹನವಾಗಿರುವ
ಸಿಂಹದ ತಲೆಯ ಮೇಲೆ ಪ್ರಹರಿಸಿ
ದೇವಿಯ ಎಡ ಭುಜಕೆ ಪ್ರಹರಿಸಿದ || ೬ ||

ರಾಜ ಪುತ್ರನಾದ ಸುರಥನೇ
ದೇವಿಯ ಭುಜಕೆ ತಾಗಿರುವ
ಚಿಕ್ಷುರನ ಖಡ್ಗವು ಪುಡಿಯಾಯಿತು
ಚಿಕ್ಷುರ ಕೋಪದಿ ಕೆಂಗಣ್ಣಿನಿಂದ
ನೋಡುತ ಶೂಲವ ತೆಗೆದುಕೊಂಡ || ೭ ||

ನಂತರ ಆ ಮಹಾಸುರನು
ಆಗಸದಿಂದ ರವಿ ಬಿಂಬವ
ಕಿತ್ತೆಸೆಯುತ್ತಿದ್ದಾನೋ ಎಂಬಂತೆ
ತೇಜಸ್ಸಿಂದ ಜ್ವಲಿಸುವ ಶೂಲವ
ಭದ್ರಕಾಳಿಯ ಕಡೆಗೆ ಎಸೆದನು || ೮ ||

ತನ್ನ ಬಳಿ ಬರುತಿರುವ ಶೂಲವ
ನೋಡಿ ದೇವಿಯು ಪ್ರತಿಯಾಗಿ
ಶೂಲವ ಬಿಟ್ಟಾಗ ಮಹಾಸುರನು
ಮತ್ತು ಅವನ ಶೂಲವು ನೂರಾರು
ತುಂಡುಗಳಾಗಿ ಬೀಳುವಂತಾಯ್ತು || ೯ ||

ಮಹಿಷಾಸುರನ ಸೇನಾನಿ
ಮಹಾವೀರ್ಯ ಸಂಪನ್ನನಾದ
ಚಿಕ್ಷುರ ಹತನಾಗಿ ಚಾಮರನೆಂಬ
ದೇವಕಂಟಕನು ಆನೆಯ ಮೇಲೆ
ಕುಳಿತುಕೊಂಡು ಯುದ್ಧಕ್ಕೆ ಬಂದನು || ೧೦ ||

ಅಂಬಿಕೆ ಮೇಲೆ ಶಕ್ತ್ಯಾಯುಧವ
ಚಾಮರಾಸುರನು ಬಿಟ್ಟಾಗ
ಅಂಬಿಕೆಯು ಹುಂಕಾರದಿಂದ
ಅಪ್ಪಳಿಸಿ ಪ್ರಭೆಯು ಕುಂದುವಂತೆ
ಮಾಡಿ ಭೂಮಿಯಲ್ಲಿ ಕೆಡವಿದಳು || ೧೧ ||

ತನ್ನ ಶಕ್ತ್ಯಾಯುಧವು ಭಗ್ನವಾಗಿ
ಬಿದ್ದಿದ್ದನ್ನು ಕಂಡು ಚಾಮರನು
ಕೋಪದಿಂದ ಶೂಲವನ್ನೆಸೆದ
ತಕ್ಷಣ ದೇವಿಯು ಆ ಶೂಲವನ್ನು
ಬಾಣಗಳಿಂದ ಕತ್ತರಿಸಿದಳು || ೧೨ ||

ನಂತರ ಚಂಡಿಕಾ ದೇವಿಯ
ವಾಹನ ಸಿಂಹವು ಮೇಲ್ನೆಗೆದು
ಆನೆಯ ಕುಂಭಸ್ಥಳದ ಮಧ್ಯ ನಿಂತು
ದೇವ ಶತ್ರುವಾದ ಚಾಮರನೊಡನೆ
ಬಾಹು ಯುದ್ಧವನ್ನು ಮಾಡತೊಡಗಿತು || ೧೩ ||

ಬಾಹು ಯುದ್ಧವ ಮಾಡುತ್ತಿರುವ
ಸಿಂಹವೂ ಚಾಮರಾಸುರನೂ
ಆನೆಯಿಂದಿಳಿದು ಕ್ರೋಧದಿಂದ
ಅತಿ ಭಯಂಕರ ಪ್ರಹಾರಗಳನ್ನು
ಕೊಡುತ್ತ ಯುದ್ಧದಲ್ಲಿ ಕಾದಾಡಿದರು || ೧೪ ||

ಸಿಂಹವು ಆಕಾಶಕ್ಕೆ ನೆಗೆದು
ಅಲ್ಲಿಂದ ರಾಕ್ಷಸನ ಮೇಲೆ
ಎರಗಿ ಬಿದ್ದು ಕೈಯ್ಯ ಹೊಡೆತದಿಂದ
ಆ ಚಾಮರಾಸುರನ ತಲೆಯನ್ನು
ಮುರಿದು ಬೇರೆ ಮಾಡಿ ಹಾಕಿತು || ೧೫ ||

ರಣರಂಗದಲ್ಲಿ ಉದಗ್ರನೆಂಬ
ರಾಕ್ಷಸನು ಆ ದೇವಿಯಿಂದ
ಕಲ್ಲು ಮರಗಳಿಂದಲೆ ಹತನಾದ
ಕರಾಲನೆಂಬುವನನ್ನು ದೇವಿಯು
ಹಲ್ಲು ಮುಷ್ಟಿಯ ಪ್ರಹರಿಸಿ ಕೆಡವಿದಳು || ೧೬ ||

ಕೋಪದಿ ದೇವಿಯು ಉದ್ಧತನನ್ನು
ಗದಾ ಪ್ರಹಾರದಿ ಪುಡಿ ಮಾಡಿ
ಭಿಂದಿ ಪಾಲದಿ ಬಾಷ್ಕಲನ ಕೊಂದು
ತಾಮ್ರ ಮತ್ತು ಅಂಧಕ ಇಬ್ಬರನ್ನೂ
ತನ್ನ ಬಾಣಗಳಿಂದ ವಧಿಸಿದಳು || ೧೭ ||

ತ್ರಿನೇತ್ರದಿಂದ ಶೋಭಿಸುವ
ಸರ್ವೇಶ್ವರಿ ಪರಮೇಶ್ವರಿಯು
ಉಗ್ರಾಸ್ಯ ಉಗ್ರವೀರ್ಯ ಮಹಾಹನು
ಎಂಬ ಬಲಿಷ್ಠರಾದ ಅಸುರರನ್ನು
ತ್ರಿಶೂಲಾಯುಧದಿಂದ ಕೊಂದಳು || ೧೮ ||

ದೇವಿಯು ಕತ್ತಿಯಿಂದ ಬಿಡಾಲನ
ರುಂಡ ಮುಂಡವ ಬೇರ್ಪಡಿಸಿದಳು
ದುರ್ಧರ ದುರ್ಮುಖರೆಂಬ ರಕ್ಕಸರನ್ನು
ದೇವಿಯು ತನ್ನ ಬಾಣಗಳಿಂದ
ಮೃತ್ಯುವಿನ ಲೋಕಕ್ಕೆ ಕಳುಹಿದಳು || ೧೯ ||

ಕಾಲರಾತ್ರಿಯ ಸ್ವರೂಪಿಣಿ
ದೇವಿಯು ಕಾಲನೆಂಬುವನನ್ನು
ಕಾಲದಂಡದಿಂದ ವಧಿಸಿದಳು
ಭಯಂಕರ ಖಡ್ಗ ಪ್ರಹಾರದಿಂದ
ಕೊಂದಳು ಅಸುರ ಉಗ್ರದರ್ಶನನ || ೨೦ ||

ಸಿಂಹ ಮತ್ತು ಶಕ್ತಿಗಣದವರ
ಜಯಘೋಷದಿ ರಣರಂಗದಲ್ಲಿ
ಯುದ್ಧ ಮಹೋತ್ಸವ ನಡೆಯುತ್ತಿರಲು
ಅಸಿಲೋಮನೆಂಬ ರಾಕ್ಷಸನನ್ನು
ದೇವಿಯು ಕತ್ತಿಯಿಂದ ಕತ್ತರಿಸಿದಳು || ೨೧ ||

ತನ್ನ ಸೈನ್ಯ ಕಡಿಮೆಯಾಗಿದ್ದನ್ನು
ಮನಗಂಡು ಮಹಿಷಾಸುರನು
ತನ್ನ ಮಹಿಷ ರೂಪದಿಂದ ಬಂದು
ದೇವಿಯ ಪರಿವಾರದಲ್ಲಿರುವ
ಶಕ್ತಿಗಣಗಳನ್ನೆಲ್ಲಾ ಬೆದರಿಸಿದ || ೨೨ ||

ಮಹಿಷರೂಪದಿ ಶಕ್ತಿಗಣಗಳ
ತಂಡಕ್ಕೆ ತಿವಿಯುತ್ತ ನುಗ್ಗಿದನು
ಕಾಲು ಬಾಲದ ಪ್ರಹಾರದಿಂದ
ಮತ್ತು ಕೊಂಬುಗಳಿಂದ ತಿವಿಯುತ್ತ
ಘಾಸಿ ಮಾಡಿದನು ಗಣಗಳಿಗೆಲ್ಲ || ೨೩ ||

ಮಹಿಷನು ಅತಿ ವೇಗದಿಂದ
ಗಣಗಳೆಡೆ ನುಗ್ಗಿ ಘರ್ಜನೆ ಮಾಡಿ
ಕೆಲವರನ್ನೆತ್ತಿ ಸುತ್ತಿಸಿ ಬೀಳಿಸಿದ
ತನ್ನ ಉಸಿರಿನ ಗಾಳಿಯಿಂದಲೂ
ಕೆಲವರನ್ನು ನೆಲಕ್ಕೆ ಉರುಳಿಸಿದ || ೨೪ ||

ಪ್ರಮಥ ಗಣಗಳ ಸೈನ್ಯವನ್ನೆಲ್ಲ
ನೆಲಕ್ಕುರುಳಿಸಿ ಮಹಿಷಾಸುರನು
ಮಹಾದೇವಿಯ ವಾಹನ ಸಿಂಹವ
ಕೊಲ್ಲಲು ಮುನ್ನುಗ್ಗಿದಾಗ ಅಂಬಿಕೆಯು
ಅವನ ಮೇಲೆ ಕೋಪಗೊಂಡಳು || ೨೫ ||

ಮಹಾವೀರ್ಯಶಾಲಿ ಮಹಿಷನು
ಕೋಪಾವೇಶದಿ ಭೂಮಿಯನ್ನು
ಗೊರಸುಗಳಿಂದ ಪುಡಿ ಮಾಡುತ್ತ
ಕೊಂಬುಗಳಿಂದ ಎತ್ತರವಾದ
ಪರ್ವತಗಳ ಎಸೆದು ಘರ್ಜಿಸಿದನು || ೨೬ ||

ಮಹಿಷನ ಅತಿ ವೇಗದಿಂದ
ಪ್ರಚಂಡವಾದ ಸುತ್ತುವಿಕೆಯಿಂದ
ಧೂಳೆದ್ದು ಭೂಮಿಯು ಶಿಥಿಲವಾಯ್ತು
ಅವನ ಬಾಲದಿಂದ ಅಪ್ಪಳಿಸಲ್ಪಟ್ಟ
ಸಮುದ್ರವು ಎಲ್ಲೆಡೆ ಉಕ್ಕಿ ಹರಿಯಿತು || ೨೭ ||

ಅವನು ಕೊಡವಿದ ಕೊಂಬುಗಳಿಂದ
ಮೋಡಗಳು ತುಂಡು ತುಂಡಾದವು
ಶ್ವಾಸವಾಯುವಿನಿಂದ ಎತ್ತಲ್ಪಟ್ಟ
ಬೆಟ್ಟಗಳು ನೂರಾರು ತುಂಡುಗಳಾಗಿ
ಆಕಾಶಕ್ಕೇರಿ ಕೆಳಗೆ ಬಿದ್ದವು || ೨೮ ||

ಕೋಪಾವೇಶದಿ ತನ್ನೆದುರು
ಬರುತ್ತಿದ್ದ ಮಹಿಷಾಸುರನನ್ನು
ನೋಡಿದ ಚಂಡಿಕಾಂಬೆಯು
ಆ ಅಸುರನ ವಧಿಸಲು ನಿಶ್ಚಯಿಸಿ
ಉಗ್ರವಾದ ಕೋಪವ ತಾಳಿದಳು || ೨೯ ||

ದೇವಿಯು ಪಾಶವನ್ನು ಬೀಸಿ
ಮಹಾಸುರನನ್ನು ಬಂಧಿಸಿದಳು
ಆಗ ಮಹಾಯುದ್ಧರಂಗದಲ್ಲಿ
ಹೀಗೆ ಬಂಧಿತನಾದ ಅವನು
ತನ್ನ ಮಹಿಷ ರೂಪವ ತ್ಯಜಿಸಿದನು || ೩೦ ||

ನಂತರ ಅಸುರ ಸಿಂಹವಾದ
ಸಿಂಹದ ಶಿರವನ್ನು ಅಂಬಿಕೆಯು
ಕತ್ತರಿಸುವಷ್ಟರಲ್ಲಿ ಮತ್ತೆ ಅಸುರನು
ಸಿಂಹದ ರೂಪ ಬಿಟ್ಟು ಖಡ್ಗ ಹಿಡಿದ
ಪುರುಷನಂತೆ ಕಾಣಿಸಿಕೊಂಡ || ೩೧ ||

ಕೂಡಲೆ ದೇವಿಯು ಪುರುಷನನ್ನು
ಅವನ ಖಡ್ಗ ಚರ್ಮಗಳೊಂದಿಗೆ
ಬಾಣಗಳಿಂದ ಕತ್ತರಿಸಿದಳು
ಆಗ ಅವನು ಪುರುಷ ರೂಪ ಬಿಟ್ಟು
ಆ ಕ್ಷಣದಲ್ಲೆ ದೊಡ್ಡ ಆನೆಯಾದ || ೩೨ ||

ಆನೆಯ ರೂಪವ ಧರಿಸಿರುವ
ಅಸುರನು ತನ್ನ ಸೊಂಡಿಲಿನಿಂದ
ಮಹಾಸಿಂಹವ ಎಳೆಯುತ ಘೀಳಿಟ್ಟ
ಸಿಂಹವನ್ನೆಳೆಯುತ್ತಿದ್ದ ಸೊಂಡಿಲನ್ನು
ದೇವಿಯು ಖಡ್ಗದಿಂದ ಕತ್ತರಿಸಿದಳು || ೩೩ ||

ನಂತರ ಮಹಾರಾಕ್ಷಸನು
ಪುನಃ ಮಹಿಷ ಶರೀರವನ್ನೇ
ಆಶ್ರಯಿಸಿ ಮೊದಲಿನಂತೆಯೇ
ಚರಾಚರದಿಂದ ಕೂಡಿರುವ
ಮೂರ್ಲೋಕಗಳ ಕ್ಷೋಭೆಗೊಳಿಸಿದ || ೩೪ ||

ಜಗತ್ತಿಗೆ ಮಾತೆಯಾಗಿರುವ
ಚಂಡಿಕಾದೇವಿಯು ಆಗ
ಕೋಪಗೊಂಡು ಮಧುಪಾನ ಕುಡಿದು
ಕೆಂಗಣ್ಣುಳ್ಳವಳಾಗಿ ಮತ್ತೆ ಮತ್ತೆ
ಕುಡಿಯುತ್ತ ಅಟ್ಟಹಾಸ ಮಾಡಿದಳು || ೩೫ ||

ಬಲದಿಂದ ಮತ್ತು ವೀರ್ಯದಿಂದ
ಮದವೇರಿ ಕೊಬ್ಬಿರುವಂತಹ
ಆ ರಾಕ್ಷಸನೂ ಘರ್ಜನೆ ಮಾಡಿದ
ಕೊಂಬುಗಳಿಂದ ಪರ್ವತಗಳನ್ನೆತ್ತಿ
ಚಂಡಿಕಾದೇವಿಯ ಮೇಲೆಸೆದ || ೩೬ ||

ಅವನು ಎಸೆದ ಪರ್ವತಗಳನು
ಬಾಣವೃಷ್ಟಿಯಿಂದ ಪುಡಿ ಮಾಡಿ
ಮದದಿಂದ ಕೆಂಪಾದ ಮುಖವುಳ್ಳ
ಮತ್ತು ತೊದಲಿನ ಮಾತುಳ್ಳವಳಾಗಿ
ಅವನನ್ನು ಕುರಿತು ಹೀಗೆಂದಳು || ೩೭ ||

ಮೂಢನೇ ನಾನು ಮಧುಪಾನವ
ಮಾಡುವೆನು ಆಗ ಘರ್ಜಿಸುತ್ತಿರು
ನನ್ನಿಂದ ನೀನಿಲ್ಲೇ ಹತನಾಗುವೆ
ದೇವತಾದಿಗಳೆಲ್ಲಾ ಕೂಡಲೆ
ಆನಂದದಿಂದ ಘರ್ಜಿಸುವರು || ೩೮ ||

ಋಷಿಯೆಂದನು ಆ ದೇವಿಯು
ಮೇಲೆ ಹಾರಿ ಮಹಾಸುರನನ್ನು
ಬೀಳಿಸಿ ಪಾದಗಳಿಂದ ಮೆಟ್ಟಿ
ತುಳಿದು ನಿಂತು ಅವನ ಕಂಠಕ್ಕೆ
ಶೂಲಾಯುಧದಿಂದ ಚುಚ್ಚಿದಳು || ೩೯ ||

ಮಹಾದೇವಿಯ ಪಾದದಿಂದ
ಮೆಟ್ಟಲ್ಪಟ್ಟು ತನ್ನ ಮಹಿಷ ರೂಪದ
ಮುಖದಿಂದ ಹೊರಗೆ ಅರ್ಧಮಾತ್ರ
ಹೊರಟು ಬಂದಿರುವಾಗ ಅಲ್ಲಿಯೆ
ದೇವಿಯ ಪರಾಕ್ರಮಕ್ಕೊಳಗಾದ || ೪೦ ||

ಹಾಗೆ ಮಹಿಷಾಕಾರದಿಂದ
ಅರ್ಧ ಮಾತ್ರ ಹೊರಟು ಅಲ್ಲಿಯೇ
ಯುದ್ಧ ಮಾಡುತ್ತಿರುವ ಮಹಾಸುರನ
ತಲೆಯನ್ನು ತನ್ನ ದೊಡ್ಡ ಕತ್ತಿಯಿಂದ
ಕಡಿದು ಬೀಳಿಸಿದಳು ದೇವಿಯು || ೪೧ ||

ಮಹಿಷನು ಸೈನ್ಯ ಹಾಗೂ ಮಿತ್ರರ
ಪರಿವಾರ ಸಹಿತ ಮದದಿಂದ
ಮೂರ್ಲೋಕವನ್ನೂ ಕ್ಷೋಭೆಗೊಳಿಸಿ
ಕೊನೆಗೆ ಅವನು ಈ ರೀತಿಯಾಗಿ
ಮಹಾದೇವಿಯಿಂದ ವಧಿಸಲ್ಪಟ್ಟ || ೪೨ ||

ಮಹಾಭಯಂಕರನಾಗಿರುವ
ಮಹಿಷಾಸುರನ ವಧೆಯಾಗಿ
ದೇವತಾದಿಗಳು ಮತ್ತು ಗಣಗಳು
ಮೂರ್ಲೋಕದಲ್ಲಿರುವ ಸಮಸ್ತರು
ಜಯವ ಘೋಷಿಸಿದರು ದೇವಿಗೆ || ೪೩ ||

ಶಕ್ತಿದೇವಿಯ ಪ್ರತಾಪದಿಂದ
ಹಾಹಾಕಾರವ ಮಾಡುತ್ತ
ರಾಕ್ಷಸರ ಸೈನ್ಯ ನಾಶವಾಯಿತು
ಆಗ ಸಮಸ್ತ ದೇವಗಣಗಳು
ಅತ್ಯಂತ ಆನಂದ ಹೊಂದಿದರು || ೪೪ ||

ಹರ್ಷದಿಂದ ದೇವತೆಗಳೆಲ್ಲ
ದಿವ್ಯ ಮಹರ್ಷಿಗಳಿಂದ ಕೂಡಿ
ಮಹಾದೇವಿಯನ್ನು ಸ್ತುತಿಸಿದರು
ಗಂಧರ್ವರಾಜರು ಗಾನ ಮಾಡಿ
ಅಪ್ಸರೆಯರು ನರ್ತನ ಮಾಡಿದರು || ೪೫ ||