ಎರಡನೇ ಅಧ್ಯಾಯ

ಋಷಿಯೆಂದ ಹಿಂದೆ ಇಂದ್ರನು
ದೇವತೆಗಳಿಗೆ ರಾಜನಾದ
ಮಹಿಷಾಸುರನು ದೈತ್ಯರ ಪ್ರಭುವಾದ
ಆ ಸಮಯ ದೇವ-ದಾನವರಲ್ಲಿ
ಸಂಪೂರ್ಣ ನೂರು ವರ್ಷ ಯುದ್ಧವಾಯ್ತು || ೧ ||

ಮಹಾವೀರ್ಯ ಅಸುರರಿಂದ
ಸೋತಿತು ದೇವತೆಗಳ ಸೈನ್ಯ
ಸಕಲ ದೇವತೆಗಳನ್ನೂ ಗೆದ್ದು
ಅಸುರರ ಪ್ರಭು ಮಹಿಷಾಸುರನು
ಇಂದ್ರ ಪದವಿಯನ್ನು ಏರಿದನು || ೨ ||

ವಿಷ್ಣುವಿನ ನಾಭಿ ಕಮಲದಿಂದ
ಹುಟ್ಟಿದ ಬ್ರಹ್ಮನ ನಾಯಕತ್ವದಲ್ಲಿ
ಸೋತ ದೇವತೆಗಳೆಲ್ಲರು ಸೇರಿ
ಮಹಾವಿಷ್ಣು ಮತ್ತು ಮಹೇಶ್ವರನು
ಇಬ್ಬರೂ ಇರುವ ಸ್ಥಳಕ್ಕೆ ಹೋದರು || ೩ ||

ದೇವತೆಗಳು ಹರಿಹರರಲ್ಲಿ
ತಮ್ಮ ಕಷ್ಟವ ಹೇಳಿಕೊಂಡರು
ಮಹಿಷಾಸುರ ಮಾಡಿದ ಕೃತ್ಯವನ್ನು
ಅವನಿಂದಾದ ಅಪಜಯವನ್ನು
ವಿಸ್ತಾರವಾಗಿ ಹೇಳಿಕೊಂಡರು || ೪ ||

ಅಸುರರ ಪ್ರಭು ಮಹಿಷಾಸುರನು
ಸೂರ್ಯ ಇಂದ್ರ ಅಗ್ನಿ ವಾಯು
ಚಂದ್ರ ಯಮ ವರುಣ ಮತ್ತು ಇನ್ನುಳಿದ
ದೇವತೆಗಳೆಲ್ಲರ ಅಧಿಕಾರ ಕಸಿದು
ತಾನೇ ಅಧಿಪತಿಯಾಗಿರುವನು || ೫ ||

ದುರಾತ್ಮ ಮಹಿಷಾಸುರನಿಂದ
ದೇವತೆಗಳ ಗಣಗಳೆಲ್ಲವೂ
ಸ್ವರ್ಗ ಭೋಗದಿ ನಿರಾಕೃತರಾಗಿ
ಸಾಮಾನ್ಯ ಮಾನವರಂತೆಯೆ
ಸಂಚರಿಸುತಿರುವರು ಭೂಮಿಯಲ್ಲಿ || ೬ ||

ದೇವ ಶತ್ರು ಮಹಿಷಾಸುರನ
ದುಷ್ಕೃತ್ಯವನ್ನು ಹೇಳಿದೆವು ನಾವು
ಶರಣಾಗತರಾದೆವು ನಿಮಗೆ
ನೀವು ಆ ಮಹಿಷಾಸುರನನ್ನು
ವಧಿಸುವ ಉಪಾಯವ ಚಿಂತಿಸಿರಿ || ೭ ||

ದೇವತೆಗಳ ನುಡಿಯ ಕೇಳಿ
ಶಂಭುವು ಮತ್ತು ಮಧುಸೂದನನು
ಇಬ್ಬರೂ ಹುಬ್ಬನ್ನು ಗಂಟಿಕ್ಕಿದರು
ಭಯಂಕರವಾಗಿರುವಂತಹ
ಮುಖವುಳ್ಳವರಾಗಿ ಕೋಪಗೊಂಡರು || ೮ ||

ಮಿತಿ ಮೀರಿ ಉದ್ರೇಕಗೊಂಡು
ಕೋಪದಿಂದ ಪೂರ್ಣರಾದ
ಹರಿಹರ ಬ್ರಹ್ಮರ ಮುಖಗಳಿಂದ
ಅಲ್ಲಿ ಮಹತ್ತಾದ ತೇಜಸ್ಸುಗಳು
ಹೊರಗೆ ಹೊರಟು ಬಂದವು ಆಗ || ೯ ||

ಹಾಗೂ ಇಂದ್ರನೇ ಮುಂತಾದ
ದೇವತೆಗಳಿಂದ ಆಯಾಯ
ವ್ಯಕ್ತಿಗಳ ಅಸಾಧಾರಣವಾದ
ತೇಜಸ್ಸುಗಳು ಹೊರಗೆ ಬಂದು
ಒಟ್ಟಾಗಿ ಒಂದು ತೇಜಸ್ಸಾಯಿತು || ೧೦ ||

ಆಗ ಜ್ವಾಲೆಗಳ ಶ್ರೇಣಿಯಿಂದ
ದಿಗಂತರಗಳನ್ನು ವ್ಯಾಪಿಸಿ
ಜ್ವಲಿಸುತ್ತಿದ್ದ ಪರ್ವತದಂತಿರುವ
ಭಾರೀ ತೇಜಸ್ಸಿನ ರಾಶಿಯನ್ನು
ದೇವತೆಗಳೆಲ್ಲರೂ ನೋಡಿದರು || ೧೧ ||

ಹರಿ ಹರ ಬ್ರಹ್ಮರ ಮುಖದಿಂದ
ದೇವತೆಗಳ ಶರೀರದಿಂದ
ಹುಟ್ಟಿ ಒಟ್ಟಾಗಿ ತನ್ನ ಕಾಂತಿಯಿಂದ
ಮೂರ್ಲೋಕ ವ್ಯಾಪಿಸಿದ್ದ ತೇಜಸ್ಸು
ನಾರಿಯ ಆಕಾರವ ಹೊಂದಿತು || ೧೨ ||

ತೇಜರಾಶಿಯಲ್ಲಿ ಶಂಭುವಿನ
ತೇಜಸ್ಸು ನಾರಿಯ ಮುಖವಾಯ್ತು
ಯಮನ ತೇಜಸ್ಸು ಕೂದಲಾದವು
ವಿಷ್ಣು ಪರಮಾತ್ಮನ ತೇಜಸ್ಸಿಂದ
ನಾರಿಯ ಬಾಹುಗಳುಂಟಾದವು || ೧೩ ||

ಸೋಮದೇವತೆಯ ತೇಜಸ್ಸು
ಆ ನಾರಿಯ ಸ್ತನಗಳಾಯ್ತು
ಇಂದ್ರನ ತೇಜಸ್ಸಿಂದ ನಡುವಾಗಿ
ವರುಣನ ತೇಜಸ್ಸು ತೊಡೆ ಮೊಣಕಾಲು
ಭೂದೇವಿ ತೇಜಸ್ಸು ನಿತಂಬಗಳು || ೧೪ ||

ಬ್ರಹ್ಮನ ತೇಜಸ್ಸು ಪಾದಗಳು
ರವಿ ತೇಜಸ್ಸು ಪಾದಾಂಗುಲಿ
ವಸುಗಳ ತೇಜಸ್ಸು ಕೈಬೆರಳುಗಳು
ಮತ್ತು ಕುಬೇರನ ತೇಜಸ್ಸಿಂದ
ನಾರಿಯ ಮೂಗು ಉಂಟಾದವು || ೧೫ ||

ನಂತರ ಪ್ರಜಾಪತಿ ದೇವತೆಯ
ತೇಜಸ್ಸಿನಿಂದ ಆ ನಾರಿಯ
ದಂತಗಳುಂಟಾದವು ಹಾಗೂ
ಅಗ್ನಿ ದೇವತೆಯ ತೇಜಸ್ಸಿಂದ
ಮೂರು ಕಣ್ಣುಗಳೂ ಜನಿಸಿದವು || ೧೬ ||

ಸಂಧ್ಯಾ ಕಾಲದ ದೇವತೆಗಳ
ತೇಜಸ್ಸಿಂದ ಎರಡು ಹುಬ್ಬುಗಳು
ವಾಯು ತೇಜಸ್ಸಿಂದ ಕಿವಿಗಳು
ಇತರ ದೇವತೆಗಳ ತೇಜಸ್ಸುಗಳು
ಸೇರಿ ಆದಳು ಸರ್ವಮಂಗಳೆಯು || ೧೭ ||

ದೇವ ದೇವತಾದಿಗಳೆಲ್ಲರ
ತೇಜೋರಾಶಿಯಿಂದ ಹುಟ್ಟಿದ
ಆ ಮಹಾದೇವಿಯನ್ನು ನೋಡಿ
ಮಹಿಷಾಸುರನಿಂದ ಹಿಂಸೆಪಟ್ಟ
ದೇವತೆಗಳು ಸಂತಸಗೊಂಡರು || ೧೮ ||

ದೇವತೆಗಳು ಹರ್ಷಿತರಾಗಿ
ಜಯ ಶಾಲಿನಿಯಾದ ದೇವಿಗೆ
ಜಯ ಜಯವೆಂದು ಜಯವ ಘೋಷಿಸಿ
ನಂತರ ತಮ್ಮ ತಮ್ಮ ಆಯುಧಗಳನು
ಕೊಟ್ಟರೆಲ್ಲರೂ ಆ ಮಹಾದೇವಿಗೆ || ೧೯ ||

ಪಿನಾಕವನ್ನು ಧರಿಸಿಹ ಶಿವನು
ತನ್ನ ತ್ರಿಶೂಲದಿಂದ ಒಂದು
ತ್ರಿಶೂಲವ ಸೆಳೆದು ದೇವಿಗೆ ಕೊಟ್ಟ
ವಿಷ್ಣುವು ತನ್ನ ಚಕ್ರದಿಂದ ಸೆಳೆದು
ಚಕ್ರಾಯುಧವನ್ನು ಕೊಟ್ಟ ದೇವಿಗೆ || ೨೦ ||

ವರುಣನು ಕೊಟ್ಟನು ಶಂಖವನ್ನು
ಶಕ್ತ್ಯಾಯುಧವ ಅಗ್ನಿಯು ಕೊಟ್ಟನು
ವಾಯುದೇವನು ಬಿಲ್ಲು ಹಾಗೂ
ಬಾಣಗಳಿಂದ ತುಂಬಿರುವಂತಹ
ಎರಡು ಬತ್ತಳಿಕೆಗಳನ್ನು ಕೊಟ್ಟನು || ೨೧ ||

ಸಹಸ್ರ ನೇತ್ರ ಶೋಭಿತನಾದ
ಇಂದ್ರನು ತನ್ನ ವಜ್ರಾಯುಧದಿಂದ
ಮತ್ತೊಂದು ವಜ್ರಾಯುಧವನ್ನು ಕೊಟ್ಟು
ಮತ್ತು ಐರಾವತ ಆನೆಯಿಂದ
ಘಂಟೆಯನ್ನು ತೆಗೆದುಕೊಟ್ಟ ದೇವಿಗೆ || ೨೨ ||

ಯಮನು ತನ್ನ ಕಾಲದಂಡದಿಂದ
ದಂಡವನ್ನು ಕೊಟ್ಟನು ದೇವಿಗೆ
ಜಲಾಧಿಪತಿಯು ಪಾಶವ ಕೊಟ್ಟ
ಪ್ರಜಾಪತಿ ಕೊಟ್ಟ ಅಕ್ಷಮಾಲೆಯ
ಬ್ರಹ್ಮದೇವ ಕೊಟ್ಟನು ಕಮಂಡಲುವ || ೨೩ ||

ದಿನಾಧಿಪತಿ ರವಿಯು ದೇವಿಯ
ಸಮಸ್ತ ರೋಮ ಕೂಪಗಳಲ್ಲಿ
ತನ್ನ ರಶ್ಮಿಗಳನ್ನು ಅರ್ಪಿಸಿದನು
ಕಾಲನು ದೇವಿಗೆ ಖಡ್ಗವ ಕೊಟ್ಟು
ನಿರ್ಮಲವಾಗಿಹ ಚರ್ಮವನ್ನು ಕೊಟ್ಟ || ೨೪ ||

ಕ್ಷೀರ ಸಮುದ್ರಾಭಿಮಾನಿಯು
ತೇಜಸ್ಸಿನ ರೂಪದ ದೇವಿಗೆ
ನಿರ್ಮಲವಾಗಿಹ ಹಾರವ ಕೊಟ್ಟು
ನವೀನವಾಗಿ ಇರುವಂತಹ
ಉತ್ತಮವಾದ ವಸ್ತ್ರವನ್ನು ಕೊಟ್ಟ || ೨೫ ||

ದಿವ್ಯವಾಗಿಹ ಚೂಡಾಮಣಿ
ಕರ್ಣಕುಂಡಲಗಳು ಕಡಗಗಳು
ಶುಭ್ರವಾಗಿರುವಂತಹ ಅರ್ಧ ಚಂದ್ರ
ಎಲ್ಲ ಬಾಹುಗಳಲ್ಲಿ ಧರಿಸುವಂತ
ಕೇಯೂರಗಳನ್ನು ದೇವಿಗೆ ಕೊಟ್ಟ || ೨೬ ||

ಮಧುರ ನಾದದ ಕಾಲ್ಗೆಜ್ಜೆಗಳ
ಅತ್ಯುತ್ತಮವಾಗಿರುವಂತಹ
ಕಂಠಾಭರಗಣಳನ್ನು ಅರ್ಪಿಸಿ
ಎಲ್ಲ ಬೆರಳುಗಳಿಗೂ ಧರಿಸುವ
ರತ್ನದ ಉಂಗುರಗಳನ್ನೂ ಕೊಟ್ಟ || ೨೭ ||

ವಿಶ್ವಕರ್ಮನು ಥಳಥಳಿಸುವಂತ
ನಿರ್ಮಲವಾಗಿಹ ಕೊಡಲಿಯನ್ನು
ಅನೇಕ ವಿಧವಾದ ಅಸ್ತ್ರಗಳನ್ನು
ಹಾಗೆಯೇ ಅಭೇದ್ಯವಾಗಿರುವ
ಕಂಚುಕವನ್ನೂ ದೇವಿಗೆ ಕೊಟ್ಟ || ೨೮ ||

ಸಮುದ್ರ ದೇವತೆಯು ದೇವಿಗೆ
ಶಿರಸ್ಸು ಮತ್ತು ಎದೆಗೆ ಧರಿಸುವ
ಬಾಡದ ಪದ್ಮ ಮಾಲೆಯ ಕೊಟ್ಟು
ಮತ್ತು ಅತಿ ಸುಂದರವಾಗಿರುವ
ಲೀಲಾ ಕಮಲವನ್ನೂ ಅರ್ಪಿಸಿದ || ೨೯ ||

ವಾಹನವಾಗಿ ಸಿಂಹವ ಕೊಟ್ಟು
ವಿವಿಧ ರತ್ನವ ಕೊಟ್ಟ ಹಿಮವಂತ
ಧನಾಧಿಪತಿಯಾದ ಕುಬೇರನು
ಎಂದಿಗೂ ಬರಿದಾಗದೆ ಇರುವ
ಸುರಾಪಾತ್ರೆಯನ್ನು ದೇವಿಗೆ ಕೊಟ್ಟ || ೩೦ ||

ಈ ಪೃಥಿವಿಯನ್ನು ಧರಿಸಿರುವ
ನಾಗಾಧಿಪತಿಯಾಗಿರುವ
ಶೇಷನು ಮಹಾಮಣಿಗಳಿಂದ
ಅಲಂಕೃತವಾಗಿರುವಂತಹ
ನಾಗಹಾರವನ್ನು ಅರ್ಪಿಸಿದ || ೩೧ ||

ಇತರ ದೇವತೆಗಳಿಂದಲೂ
ಆಯುಧ ಭೂಷಣಗಳನ್ನೊಪ್ಪಿಸಿ
ಗೌರವಿಸಲ್ಪಟ್ಟ ಮಹಾದೇವಿಯು
ಅಟ್ಟಹಾಸ ಮಾಡುತ್ತ ಹಾಗೆಯೇ
ಮತ್ತೆ ಮತ್ತೆ ಗಟ್ಟಿಯಾಗಿ ಘರ್ಜಿಸಿದಳು || ೩೨ ||

ಆ ದೇವಿಯ ಘೋರಘರ್ಜನೆಯು
ಆಕಾಶವು ಸಂಪೂರ್ಣ ತುಂಬಿ
ಆಕಾಶದಲ್ಲಿ ಹಿಡಿಯಲಾರದ
ಆ ಘರ್ಜನೆಯಿಂದಾದ ಧ್ವನಿಯಿಂದ
ದೊಡ್ಡ ಪ್ರತಿಧ್ವನಿಯು ಉಂಟಾಯಿತು || ೩೩ ||

ಎಲ್ಲ ಲೋಕವು ಕ್ಷೋಭೆಗೊಂಡವು
ಸಮುದ್ರಗಳೆಲ್ಲ ಉಕ್ಕಿ ಹರಿದವು
ಚಲಿಸಿತು ಸಮಸ್ತ ಭೂಮಂಡಲವು
ಸಕಲ ಪರ್ವತಗಳೂ ಕೂಡಾ
ಆ ಧ್ವನಿಯಿಂದ ಅಲ್ಲಾಡಿದವು || ೩೪ ||

ಸಿಂಹವಾಹಿನಿಯನ್ನು ನೋಡಿ
ದೇವತೆಗಳು ಸಂತಸದಿಂದ
ದೇವಿಗೆ ಜಯಕಾರ ಮಾಡಿದರು
ಋಷಿಗಳು ಭಕ್ತಿಯಿಂದ ನಮ್ರರಾಗಿ
ದೇವಿಗೆ ನಮಿಸಿ ಸ್ತುತಿ ಮಾಡಿದರು || ೩೫ ||

ದೇವತೆಗಳ ಶತ್ರು ರಾಕ್ಷಸರು
ಕ್ಷೋಭೆಗೊಂಡ ತ್ರೈಲೋಕ್ಯ ಕಂಡು
ಸನ್ನಾಹಗೊಂಡು ಎಲ್ಲ ಸೈನ್ಯ ಸಹಿತ
ರಭಸದಿಂದ ಆಯುಧಗಳನ್ನು
ಮೇಲಕ್ಕೆ ಎತ್ತುತ್ತ ಎದ್ದರೆಲ್ಲ ಯುದ್ಧಕ್ಕೆ || ೩೬ ||

ಇದೇನೆಂದು ಮಹಿಷಾಸುರನು
ಕೋಪಾವೇಶದಿ ಘರ್ಜಿಸುತ್ತ
ಸಮಸ್ತ ಸೈನ್ಯವನ್ನು ಕೂಡಿಕೊಂಡು
ಶಬ್ದವು ಕೇಳಿ ಬಂದ ದಿಕ್ಕಿಗೆ
ರಭಸದಿಂದ ಓಡುತ ಬಂದನು || ೩೭ ||

ಪಾದಗಳಿಂದ ನೆಲ ತಗ್ಗಿಸಿದ
ಕಿರೀಟಾಗ್ರದಿ ಆಗಸಕೆರೆದ
ತನ್ನ ಪ್ರಭೆಯಿಂದ ಮೂರ್ಲೋಕವನ್ನು
ವ್ಯಾಪಿಸಿರುವಂತಹ ದೇವಿಯನ್ನು
ಅಲ್ಲಿ ಕಂಡನು ಮಹಿಷಾಸುರನು || ೩೮ ||

ಬಿಲ್ಲ ಹೆದೆಯೇರಿಸಿ ಹುರಿಯೆಳೆದ
ಠೇಂಕಾರದ ಶಬ್ದದಿಂದ
ಪಾತಾಳ ಲೋಕವ ಕ್ಷೋಭೆಗೊಳಿಸಿ
ಸಹಸ್ರ ಭುಜಗಳಿಂದ ಎಲ್ಲ ದಿಕ್ಕುಗಳ
ಆವರಿಸಿದ ದೇವಿಯ ಕಂಡನು || ೩೯ ||

ದೇವತೆಗಳ ಶತ್ರು ಅಸುರರು
ಯುದ್ಧ ಮಾಡಿದರು ದೇವಿಯೊಡನೆ
ನಾನಾ ವಿಧವಾಗಿ ಪ್ರಯೋಗಿಸಿದ
ಶಸ್ತ್ರಾಸ್ತ್ರಗಳ ತೇಜೋಜ್ವಾಲೆಯು
ದಿಗಂತರಗಳನ್ನು ಬೆಳಗಿಸಿದವು || ೪೦ ||

ಮಹಿಷಾಸುರನ ಸೇನಾನಿಯಾದ
ಚಿಕ್ಷುರನೆಂಬುವ ಮಹಾಸುರನು
ಚಾಮರನೆಂಬ ಮತ್ತೊಬ್ಬ ಅಸುರನು
ಚತುರಂಗ ಬಲದಿಂದ ಕೂಡಿ
ಇಬ್ಬರೂ ಯುದ್ಧವನ್ನು ಮಾಡಿದರು || ೪೧ ||

ಉದಗ್ರನೆಂಬ ಮಹಾಸುರನು
ಅರವತ್ತು ಸಹಸ್ರ ಸೈನ್ಯದೊಡನೆ
ಮಹಾಹನು ಎಂಬ ಮತ್ತೊಬ್ಬ ಅಸುರನು
ಒಂದು ಕೋಟಿ ರಥಸೈನ್ಯದೊಡನೆ
ಅಲ್ಲಿಗೆ ಬಂದು ಯುದ್ಧ ಮಾಡಿದರು || ೪೨ ||

ಅಸಿಲೋಮನೆಂಬ ರಾಕ್ಷಸನು
ಐದು ಕೋಟಿ ರಥ ಸೈನ್ಯದೊಡನೆ
ಭಾಷ್ಕಲನೆಂಬುವ ರಾಕ್ಷಸನು
ಅರವತ್ತು ಲಕ್ಷದ ರಥಸೈನ್ಯದೊಡನೆ
ಅಲ್ಲಿ ಬಂದು ಯುದ್ಧವನ್ನು ಮಾಡಿದರು || ೪೩ ||

ಉಗ್ರ ದರ್ಶನ ಎಂಬುವ ದೈತ್ಯನು
ಅನೇಕ ಸಾವಿರ ಸಂಖ್ಯೆಯ
ಆನೆ ಕುದುರೆಗಳ ಸೈನ್ಯದೊಡನೆ
ಒಂದು ಕೋಟಿ ರಥ ಸೈನ್ಯದಿಂದಲೂ
ಕೂಡಿ ಬಂದು ಯುದ್ಧವನ್ನು ಮಾಡಿದನು || ೪೪ ||

ಬಿಡಾಲ ಎಂಬುವ ಹೆಸರುಳ್ಳ
ಮಹಾದೈತ್ಯನಾದ ಅಸುರನು
ಐದು ಲಕ್ಷ ಸಂಖ್ಯೆಯ ರಥ ಸೈನ್ಯದ
ಪರಿವಾರ ಸಹಿತನಾಗಿ ಬಂದು
ಆ ಯುದ್ಧದಲ್ಲಿ ಹೋರಾಡಿದನು || ೪೫ ||

ಕಾಲ ಎಂದು ಕರೆಯಲ್ಪಡುವ
ಅಸುರನು ಐದು ಲಕ್ಷ ಸಂಖ್ಯೆಯ
ರಥ ಪರಿವಾರಗಳು ಹಾಗೂ
ಆನೆ ಕುದುರೆ ಕಾಲಾಳುಗಳ
ಸೈನ್ಯ ಸಮೇತನಾಗಿ ಯುದ್ಧ ಮಾಡಿದ || ೪೬ ||

ಕೆಲವು ಮಂದಿ ಮಹಾಸುರರು
ಹತ್ತು ಹತ್ತು ಸಾವಿರ ಸಂಖ್ಯೆಯ
ರಥ ಗಜ ಹಾಗೂ ಅಶ್ವ ಸೈನ್ಯಗಳ
ಸಮೇತರಾಗಿ ಯುದ್ಧಕ್ಕೆ ಬಂದು
ದೇವಿಯೊಡನೆ ಕಾದಾಡಿದರು || ೪೭ ||

ಮಹಿಷಾಸುರನು ಸಹಸ್ರಾರು
ಕೋಟಿ ಕೋಟಿ ಸಂಖ್ಯೆಯಷ್ಟು
ರಥ ಗಜ ಅಶ್ವ ಸೈನ್ಯದೊಡಗೂಡಿ
ಅನೇಕ ಪದಾತಿ ಸೈನ್ಯದಿಂದಲೂ
ಕೂಡಿದವನಾಗಿ ಯುದ್ಧ ಮಾಡಿದ || ೪೮ ||

ಆ ಯುದ್ಧದಲ್ಲಿ ರಾಕ್ಷಸರೆಲ್ಲ
ತೋಮರ ಭಿಂದಿಪಾಲ ಶಕ್ತಿ
ಮುಸಲ ಖಡ್ಗ ಪರಶು ಪಟ್ಟಿಶವೆಂಬ
ವಿವಿಧವಾದ ಆಯುಧಗಳಿಂದ
ದೇವಿಯೊಡನೆ ಹೋರಾಡಿದರು || ೪೯ ||

ಶಕ್ತ್ಯಾಯುಧವ ಪಾಶಾಯುಧವ
ಪ್ರಯೋಗಿಸಿದರು ಆ ಯುದ್ಧದಲ್ಲಿ
ಕೆಲವರು ಖಡ್ಗ ಪ್ರಹಾರಗಳಿಂದ
ಆ ದೇವಿಯನ್ನು ಸಂಹರಿಸಲು
ಯತ್ನಿಸುತ್ತ ಯುದ್ಧವನ್ನು ಮಾಡಿದರು || ೫೦ ||

ಚಂಡಿಕಾದೇವಿಯು ಆಗ
ಬಂದ ರಾಕ್ಷಸರೆಲ್ಲರ ಮೇಲೆ
ತನ್ನ ಶಸ್ತ್ರಾಸ್ತ್ರಗಳ ಪ್ರಯೋಗಿಸುತ್ತ
ಅವರಿಂದ ಬಂದ ಶಸ್ತ್ರಾಸ್ತ್ರಗಳ
ಲೀಲಾಜಾಲದಿ ಕತ್ತರಿಸಿದಳು || ೫೧ ||

ಸರ್ವೇಶ್ವರಿಯಾದ ದೇವಿಯು
ಆಯಾಸವಿಲ್ಲದ ಮುಖದಿಂದ
ದೇವತೆಗಳಿಂದ ಋಷಿಗಳಿಂದ
ಸ್ತುತಿಸಲ್ಪಡುತ್ತಲೇ ರಾಕ್ಷಸರ
ದೇಹಗಳಲ್ಲಿ ಶಸ್ತ್ರಾಸ್ತ್ರ ಸುರಿಸಿದಳು || ೫೨ ||

ದೇವಿಯ ವಾಹನವಾಗಿರುವ
ಸಿಂಹವು ಕೋಪಗೊಂಡು ತನ್ನ
ಜಟೆಯ ಕೊಡವುತ್ತ ಅಸುರ ಸೈನ್ಯಗಳ
ಮಧ್ಯದಲ್ಲಿ ಸಂಚರಿಸಲು ತೊಡಗಿತು
ಕಾಡನ್ನು ಆವರಿಸುವ ಬೆಂಕಿಯಂತೆ || ೫೩ ||

ರಣರಂಗದಲ್ಲಿ ಯುದ್ಧದಲ್ಲಿದ್ದ
ಅಂಬಿಕೆ ನಿಟ್ಟುಸಿರು ಬಿಟ್ಟಾಗ
ಆ ಉಸಿರು ಕ್ಷಣದಲ್ಲಿ ಶತ ಸಹಸ್ರದ
ಅಧಿಕ ಸಂಖ್ಯೆಗಳಲ್ಲಿ ದೇವಿಯ
ಪರಿವಾರದ ಗಣಗಳಾದವು || ೫೪ ||

ಗಣಗಳು ದೇವಿಯ ಶಕ್ತಿಯಿಂದ
ಬಲಗೊಂಡು ಭಿಂದಿಪಾಲ ಕತ್ತಿ
ಪರಶು ಪಟ್ಟಿಶ ಆಯುಧಗಳಿಂದ
ಅಲ್ಲಿ ಬಂದ ಅಸುರಗಣಗಳನ್ನು
ನಾಶಗೊಳಿಸುತ್ತ ಯುದ್ಧ ಮಾಡಿದರು || ೫೫ ||

ಯುದ್ಧವೆಂಬ ಮಹೋತ್ಸವದಲ್ಲಿ
ಗಣದೇವತೆಗಳಲಿ ಕೆಲವರು
ನಗಾರಿಗಳನ್ನು ಶಂಖಗಳನ್ನು
ಮತ್ತು ಕೆಲವು ಗಣದೇವತೆಗಳು
ಮೃದಂಗ ವಾದ್ಯಗಳ ಧ್ವನಿಗೈದರು || ೫೬ ||

ನಂತರ ಚಂಡಿಕಾ ದೇವಿಯು
ತ್ರಿಶೂಲ ಗದೆ ಮತ್ತು ಖಡ್ಗದಿಂದ
ಮತ್ತು ಬಾಣಗಳ ಸುರಿಮಳೆಯಿಂದ
ಇತರ ಆಯುಧಗಳಿಂದ ನೂರಾರು
ಮಹಾಸುರರನ್ನು ವಧೆ ಮಾಡಿದಳು || ೫೭ ||

ದೇವಿಯು ಕೆಲವು ಅಸುರರನ್ನು
ತನ್ನ ಘಂಟಾನಾದದಿಂದ
ಮೂರ್ಛೆಯಗೊಳಿಸಿ ಬೀಳಿಸಿದಳು
ಕೆಲವು ಅಸುರರನ್ನು ಪಾಶದಿಂದ ಕಟ್ಟಿ
ಭೂಮಿಯಲ್ಲೆಲ್ಲಾ ಎಳೆದಾಡಿದಳು || ೫೮ ||

ತೀಕ್ಷ್ಣವಾಗಿರುವಂತ ಖಡ್ಗದ
ಪ್ರಹಾರಗಳಿಂದ ಕೆಲವರು
ಎರಡು ತುಂಡಾಗಿ ಮಾಡಲ್ಪಟ್ಟರು
ಕೆಲವರು ಗದಾ ಪ್ರಹಾರದಿಂದ
ಹಿಂಸೆ ಪಡುತ್ತಲೇ ಬಿದ್ದು ಸತ್ತರು || ೫೯ ||

ಕೆಲವು ಅಸುರರು ದೇವಿಯ
ಮುಸಲಾಯುಧದಿಂದ ಮತ್ತೆ ಮತ್ತೆ
ಹೊಡೆಯಲ್ಪಟ್ಟು ರಕ್ತವನ್ನು ಕಾರಿದರು
ಕೆಲವರು ಶೂಲಾಯುಧದಿಂದ
ಎದೆಗೆ ಚುಚ್ಚಲ್ಪಟ್ಟು ಬಿದ್ದರು ನೆಲದಲ್ಲಿ || ೬೦ ||

ನಿರಂತರವಾಗಿ ದೇವಿಯು
ಅಖಂಡವಾಗಿ ಪ್ರಯೋಗಿಸಿದ
ಬಾಣಗಳಿಂದ ಕತ್ತರಿಸಲ್ಪಟ್ಟು
ಬೆಟ್ಟದಾಕಾರದ ರಾಕ್ಷಸರೆಲ್ಲ
ತಮ್ಮ ಪ್ರಾಣಗಳನ್ನು ತ್ಯಜಿಸಿದರು || ೬೧ ||

ಯುದ್ಧದಲ್ಲಿ ಕೆಲವು ರಾಕ್ಷಸರ
ಬಾಹುಗಳು ಕತ್ತರಿಸಲ್ಪಟ್ಟವು
ಕೆಲವರ ಕತ್ತುಗಳು ತುಂಡಾಗಿ
ತಲೆಗಳು ಕೆಳಗೆ ಬೀಳಲ್ಪಟ್ಟವು
ಕೆಲವರ ನಡುವು ಸೀಳಲ್ಪಟ್ಟಿತು || ೬೨ ||

ಕೆಲವು ಮಹಾಸುರರ ಕಾಲುಗಳು
ಕತ್ತರಿಸಲ್ಪಟ್ಟು ಕೆಳಗೆ ಬಿದ್ದರು
ಕೆಲವರು ಒಂದೇ ಕಾಲು ಒಂದೇ ಕಣ್ಣು
ಒಂದೇ ಬಾಹು ಉಳ್ಳವರಾದರು
ಕೆಲವರು ಎರಡಾಗಿ ಸೀಳಲ್ಪಟ್ಟರು || ೬೩ ||

ದೇವಿಯಿಂದ ಕತ್ತರಿಸಲ್ಪಟ್ಟು
ತಲೆಯು ಉರುಳಿ ನೆಲಕ್ಕೆ ಬಿದ್ದರೂ
ಮತ್ತೆ ಮೇಲೆದ್ದ ಕೆಲವು ಕಬಂಧಗಳು
ಉತ್ತಮವಾದ ಆಯುಧಗಳಿಂದ
ದೇವಿಯೊಡನೆ ಯುದ್ಧ ಮಾಡಿದವು || ೬೪ ||

ರಾಕ್ಷಸರ ತಲೆ ಕತ್ತರಿಸಲ್ಪಟ್ಟು
ಕಬಂಧಗಳಾಗಿ ಖಡ್ಗ ಋಷ್ಟಿ
ಮತ್ತು ಶಕ್ತ್ಯಾಯುಧಗಳನ್ನು ಧರಿಸಿ
ತೂರ್ಯಾದಿ ವಾದ್ಯಗಳ ಲಯಕೆ
ರಸಾವೇಷದಿ ಕುಣಿದಾಡಿದವು || ೬೫ ||

ಮಹಾಸುರರಾಗಿರುವ ಕೆಲವರು
ರಕ್ತ ಪ್ರವಾಹದಲ್ಲಿ ಮುಳುಗೆದ್ದು
ರೋಮಾಂಚಕಾರಿ ಯುದ್ಧದಲ್ಲಿ
ದೇವಿಗೆ ನಿಲ್ಲು ಯುದ್ಧವನ್ನು ಮಾಡು
ಎಂದು ಎದುರಿಸಿ ಹೋರಾಡಿದರು || ೬೬ ||

ಮಹಾಯುದ್ಧವು ನಡೆದ ಸ್ಥಳದಲ್ಲಿ
ಕೆಳಗೆ ಬಿದ್ದ ಆನೆ ಕುದುರೆಗಳು
ರಥ ಮತ್ತು ಅಸುರರ ರಾಶಿಗಳಿಂದ
ಯುದ್ಧ ಭೂಮಿಯಲ್ಲಿ ವೀರರೆಲ್ಲಾ
ನಡೆಯಲಾಗದ ಹಾಗಾಯಿತು || ೬೭ ||

ಅಸುರರ ಸೈನ್ಯದ ಆನೆ ಕುದುರೆ
ರಾಕ್ಷಸ ಶ್ರೇಣಿಯ ಮಧ್ಯದಲ್ಲಿ
ಯುದ್ಧವು ನಡೆಯುತ್ತಿರುವಾಗ ಅಲ್ಲಿ
ರಕ್ತ ಪ್ರವಾಹದಿಂದ ಕೂಡಿದ
ಮಹಾ ನದಿಗಳು ಹುಟ್ಟಿ ಹರಿದವು || ೬೮ ||

ಚಂಡಿಕಾ ದೇವಿಯು ಅಸುರರ
ಅಗಾಧವಾಗಿರುವ ಸೈನ್ಯವನ್ನು
ಅಗ್ನಿಯು ಹುಲ್ಲು ಸೌದೆ ರಾಶಿಗಳನ್ನು
ಸುಟ್ಟು ನಾಶವನ್ನು ಮಾಡುವಂತೆ
ಕ್ಷಣ ಮಾತ್ರದಲ್ಲಿ ನಾಶ ಮಾಡಿದಳು || ೬೯ ||

ದೇವಿಯ ವಾಹನ ಸಿಂಹವು
ಕೇಸರವನ್ನು ಕೊಡವಿಕೊಳ್ಳುತ
ಮಹಾಘರ್ಜನೆಯನ್ನುಂಟು ಮಾಡುತ
ರಾಕ್ಷಸರ ದೇಹದಲ್ಲಿ ಪ್ರಾಣವನ್ನು
ಹುಡುಕುವಂತೆ ಸಂಹರಿಸುತ್ತಿತ್ತು || ೭೦ ||

ದೇವಿಯ ಗಣಗಳು ಅಸುರರಲ್ಲಿ
ಯುದ್ಧ ಮಾಡಿದರು ಅದ್ಭುತವಾಗಿ
ದೇವತೆಗಳೆಲ್ಲ ಸಂತುಷ್ಟರಾಗಿ
ಅಂತರಿಕ್ಷದಿಂದ ಹೂಮಳೆ ಸುರಿಸಿ
ಭಕ್ತಿಯಿಂದ ದೇವಿಯ ಸ್ತುತಿಸಿದರು || ೭೧ ||