ಒಂದನೇ ಅಧ್ಯಾಯ

ದೇವೀ ಮಹಾತ್ಮೆಯ ಅದ್ಭುತ ಚರಿತೆಯ
ಹೇಳಿದ ಸುಮೇಧ ಋಷಿ ಸುರಥಗೆ ಸಮಾಧಿಗೆ
ಹೇ ಜಗಜ್ಜನನೀ ನಿನ್ನ ಮಹಿಮೆಯ
ಪಠಣ ಮಾಡಿದರೆ ಪುಣ್ಯವು
ಶ್ರವಣ ಮಾಡಿದರೂ ಪುಣ್ಯವು || ಪ ||

ಮುನಿವರ ಮಾರ್ಕಂಡೇಯನು
ಕ್ರೌಷ್ಟುಕಿಗಳಿಗೆ ಹೇಳಿದನು
ಸೂರ್ಯದೇವನ ಪುತ್ರನಾಗಿರುವ
ಮಹಾಭಾಗ್ಯವಂತನು ಆದ
ಸಾವರ್ಣಿ ಮನುವಿನ ಕಥೆಯನ್ನು || ೧ ||

ಎಂಟನೆಯ ಮನು ಸಾವರ್ಣಿಯು
ಜಗದಂಬೆ ಮಹಾಮಾಯೆಯ
ಕೃಪಾಕಟಾಕ್ಷದ ಪ್ರಭಾವದಿಂದ
ಮನ್ವಂತರಾಧಿಪ ಪದವಿಗೆ
ಬಂದ ವಿವರವ ಹೇಳುವೆನು || ೨ ||

ಹಿಂದೆ ಸ್ವಾರೋಚಿಷವೆಂಬ
ಮನ್ವಂತರದಲ್ಲಿ ಚೈತ್ರರಾಜನ
ವಂಶದಲ್ಲಿ ಜನಿಸಿದ ಸುರಥನು
ಈ ಸಮಸ್ತ ಭೂಮಂಡಲಕ್ಕೆ
ಅವನೇ ಅಧಿಪತಿಯಾಗಿದ್ದನು || ೩ ||

ಸುರಥರಾಜನು ಧರ್ಮದಿ ಪ್ರಜೆಗಳ
ಮಕ್ಕಳಂತೆಯೇ ಪಾಲಿಸುತಿರಲು
ಸುರಥರಾಜನಿಗೆ ಶತ್ರುಗಳಾಗಿ
ಕೋಲಾ ವಿಧ್ವಂಸಿಗಳಾಗಿರುವ
ಕೆಲವು ರಾಜರು ಬಂದರು ಯುದ್ಧಕ್ಕೇ || ೪ ||

ಅತಿ ಪ್ರಬಲ ಸೈನ್ಯವ ಹೊಂದಿರುವ
ಸುರಥ ರಾಜನು ಯುದ್ಧ ಮಾಡಿದ
ಶತ್ರುಗಳ ಸೈನ್ಯವು ಕಡಿಮೆಯಿದ್ದರೂ
ಕೋಲಾ ವಿಧ್ವಂಸಿಗಳಿಂದಲೇ
ಯುದ್ಧದಲ್ಲಿ ಸೋತನು ಸುರಥರಾಜ || ೫ ||

ನಂತರ ಸುರಥ ರಾಜನು ತನ್ನ
ನಗರಕ್ಕೆ ಹಿಂತಿರುಗಿ ಬಂದು
ತನ್ನ ದೇಶಕ್ಕೆ ಅಧಿಪತಿಯಾದ
ಮಹಾಭಾಗನಾದ ಅವನನ್ನು
ಪ್ರಬಲ ಶತ್ರುಗಳು ಆಕ್ರಮಿಸಿದರು || ೬ ||

ಬಲಿಷ್ಠ ನೀಚ ಮಂತ್ರಿಗಳಿಂದ
ತನ್ನ ದೇಶವ ಯುದ್ಧದಿ ಸೋತು
ದುರ್ಬಲನಾದ ಸುರಥರಾಜನ
ಸೈನ್ಯ ಸಂಪತ್ತುಗಳೆಲ್ಲವೂ ಮತ್ತು
ಭಂಡಾರವೂ ಅಪಹರಿಸಲ್ಪಟ್ಟವು || ೭ ||

ಸುರಥ ರಾಜನು ಪ್ರಭುತ್ವವನ್ನು
ಎಲ್ಲೆಡೆಯಲ್ಲೂ ಕಳೆದುಕೊಂಡು
ಬೇಟೆಯನ್ನಾಡುವ ನೆಪದಿಂದ
ಏಕಾಕಿಯಾಗಿ ಕುದುರೆಯನ್ನೇರಿ
ಹೊರಟು ಹೋದನು ಗಹನ ವನದೊಳಗೆ || ೮ ||

ವನದಲ್ಲಿ ಶಾಂತವಾಗಿರುವ
ಮೃಗಗಳಿಂದ ಕೂಡಿರುವಂತ
ಮುನಿಪುತ್ರರಿಂದ ಶೋಭಿಸುತಿರುವ
ಸುಮೇಧ ಋಷಿಯ ಆಶ್ರಮವನ್ನು
ಕಂಡನು ಆಗ ಸುರಥರಾಜನು || ೯ ||

ಸುರಥ ರಾಜನು ಬರುವುದನ್ನು
ಕಂಡು ಸುಮೇಧ ಋಷಿ ಮುನಿಯು
ಗೌರವದಿ ರಾಜನನ್ನು ಸತ್ಕರಿಸಿದ
ಆಶ್ರಮದ ಬಳಿ ಸುರಥರಾಜನು
ಕೆಲವು ಕಾಲ ವಾಸ ಮಾಡಿದನು || ೧೦ ||

ರಾಜನು ತಾನು ಕಳೆದುಕೊಂಡ
ತನ್ನ ರಾಜ್ಯದ ಪರಿವಾರದಲ್ಲಿ
ಮಮಕಾರದ ಸಂಸ್ಕಾರದಿಂದ
ಸೆಳೆಯಲ್ಪಟ್ಟ ಮನಸ್ಸುಳ್ಳವನಾಗಿ
ದುಃಖದಿಂದ ಚಿಂತಿಸತೊಡಗಿದನು || ೧೧ ||

ಪೂರ್ವಿಕರು ಪಾಲಿಸಿದ ರಾಜ್ಯ
ನನ್ನಿಂದಲೇ ಕಳೆದು ಹೋಯಿತು
ದುಷ್ಟತನದ ಭೃತ್ಯ ಪರಿವಾರವು
ನಾನು ಬಿಟ್ಟು ಬಂದ ನನ್ನ ಪುರವನ್ನು
ಧರ್ಮದಿ ಪಾಲಿಸುವರೋ ಇಲ್ಲವೋ || ೧೨ ||

ಪ್ರಧಾನವಾಗಿ ಪೋಷಿಸಿರುವ
ಬಲಾಢ್ಯವಾದ ಪಟ್ಟದಾನೆಯು
ನನ್ನ ಶತ್ರುಗಳಿಗೆ ಅಧೀನವಾಗಿ
ಸುಖವಾದ ಉಪಚಾರಗಳನ್ನು
ಪಡೆಯುತ್ತಿರುವುದೋ ಇಲ್ಲವೋ || ೧೩ ||

ಧನ ಭೋಜನ ಉಪಚಾರವನ್ನು
ಹೊಂದಿ ನನ್ನಲಿ ಅಭಿಮಾನದಿಂದ
ವರ್ತಿಸುತ್ತಿದ್ದ ಸೇವಕರೆಲ್ಲ ಇಂದು
ನಿಶ್ಚಯವಾಗಿ ಬೇರೊಬ್ಬ ರಾಜರ
ಸೇವಾವೃತ್ತಿಯ ಮಾಡುವರಲ್ಲವೇ || ೧೪ ||

ನಾನು ಕಷ್ಟದಿಂದ ಕೂಡಿಟ್ಟಿರುವ
ಭಂಡಾರವು ನೀತಿಯಿಲ್ಲದೆ
ಸದಾ ದುಂದುವೆಚ್ಚವ ಮಾಡುವ
ಸ್ವಭಾವದ ಇಂದಿನ ಪ್ರಭುವಿನಿಂದ
ನಾಶವಾಗುವುದೆಂಬ ದುಃಖವು || ೧೫ ||

ಸುರಥ ರಾಜನು ಸತತವಾಗಿ
ಇನ್ನೂ ಹಲವು ವಿಷಯಗಳನ್ನು
ಚಿಂತಿಸುವಾಗ ಆ ಸಮಯದಲ್ಲಿ
ಮುನಿಯ ಆಶ್ರಮದ ಸಮೀಪದಲ್ಲಿ
ಒಬ್ಬ ವೈಶ್ಯನು ಇರುವುದ ನೋಡಿದನು || ೧೬ ||

ರಾಜನು ವೈಶ್ಯನನ್ನು ಪ್ರಶ್ನಿಸಿದನು
ನೀನ್ಯಾರಯ್ಯ ಇಲ್ಲೇಕೆ ಬಂದೆ
ದುಃಖ ಉಳ್ಳವನಂತಿರುವೆ ನೀನು
ವ್ಯಾಕುಲವಾದ ಅಂತಃಕರಣವು
ಉಳ್ಳವನಂತೆ ಕಾಣುವೆಯೇಕೆ || ೧೭ ||

ಸುರಥರಾಜನು ಆ ವೈಶ್ಯನಲ್ಲಿ
ಮಮತೆಯಿಂದ ಮಾತನ್ನಾಡಿದ
ರಾಜನ ಮಾತನ್ನು ಕೇಳಿ ವೈಶ್ಯನು
ವಿನಯದಿಂದ ಬಾಗಿದವನಾಗಿ
ರಾಜನಿಗೆ ಹೇಳಿದ ಪ್ರತ್ಯುತ್ತರವ || ೧೮ ||

ಸಮಾಧಿ ಎಂಬ ವೈಶ್ಯನು ನಾನು
ಶ್ರೀಮಂತ ಕುಲದಲ್ಲಿ ಜನಿಸಿದೆ
ನನ್ನ ಪತ್ನಿಯು ಹಾಗೂ ಪುತ್ರರೆಲ್ಲರೂ
ಧನದ ಆಸೆಯಿಂದ ದುಷ್ಟರಾಗಿ
ನನ್ನನ್ನು ಮನೆಯಿಂದ ಹೊರ ಹಾಕಿದರು || ೧೯ ||

ನನ್ನನ್ನು ಹೊರಗೆ ಹಾಕುವಾಗ
ನನ್ನ ಹಣವನ್ನು ಕಿತ್ತುಕೊಂಡರು
ಆಪ್ತರಾಗಿರುವ ಬಂಧುಗಳು
ಎಲ್ಲರೂ ನನ್ನನ್ನು ತ್ಯಜಿಸಿದರು
ದುಃಖಿತನಾಗಿ ವನವ ಸೇರಿದೆ || ೨೦ ||

ಈಗ ನಾನು ಅನಾಥನಾಗಿ
ಕಾಡಿಗೆ ಬಂದು ಸೇರಿದರೂ
ಪತ್ನಿ ಮತ್ತು ಪುತ್ರರ ಹಾಗೂ ಸ್ವಜನರ
ಯೋಗಕ್ಷೇಮದ ವಿಷಯವನ್ನು
ತಿಳಿಯಲಾಗದೆ ಇರುವೆನು ನಾನು || ೨೧ ||

ಸ್ವಜನರು ಕ್ಷೇಮವೋ ಇಲ್ಲವೋ
ನನ್ನ ಪುತ್ರರು ಈಗಲಾದರೂ
ಒಳ್ಳೆಯ ನಡತೆಯವರಾಗಿರುವರೋ
ಅಥವಾ ಕೆಟ್ಟ ನಡತೆಯಲ್ಲೇ
ಇರುವರೇನೋ ತಿಳಿಯದಾಗಿದೆ || ೨೨ ||

ರಾಜನು ಹೇಳಿದ ವೈಶ್ಯನಿಗೆ
ನಿನ್ನ ಪತ್ನಿಯು ಪುತ್ರರು ಐಶ್ವರ್ಯದಲ್ಲಿ
ಲೋಭಿಗಳಾಗಿ ನಿನ್ನ ಹೊರ ತಳ್ಳಿದರು
ಆದರೂ ಅವರಲ್ಲಿ ನಿನ್ನ ಮನವು
ಸ್ನೇಹದಿ ಬಂಧಿಸಲ್ಪಟ್ಟಿದೆಯೇಕೆ || ೨೩ ||

ವೈಶ್ಯ ಹೇಳಿದ ಈ ವಿಷಯದಲ್ಲಿ
ನೀವಾಡಿದ ಮಾತು ನಿಜವು
ಆದರೆ ನಾನು ಏನು ಮಾಡಲಿ
ದ್ರೋಹವನ್ನು ಮಾಡಿದ ಅವರಲ್ಲಿ
ಕಠಿಣತೆ ಹೊಂದಿಲ್ಲ ನನ್ನ ಮನವು || ೨೪ ||

ಮಕ್ಕಳು ಧನದ ಲೋಭಿಗಳಾಗಿ
ಪಿತೃ ಭಕ್ತಿಯನ್ನು ದೂರ ಮಾಡಿ
ಪತ್ನಿಯು ಕೂಡ ಸ್ನೇಹವ ತೊರೆದು
ನನ್ನನ್ನು ಅಲ್ಲಿಂದ ಹೊರ ದೂಡಿದರು
ಆದರೂ ಅವರಲ್ಲಿ ಅನುರಾಗವು || ೨೫ ||

ಪ್ರಜ್ಞಾಶಾಲಿಯಾದ ರಾಜನೆ
ಪ್ರೀತಿ ಮತ್ತು ದಯೆಯೂ ಇಲ್ಲದ
ಗುಣಹೀನರಾದ ಬಂಧುಗಳಲ್ಲೂ
ಮಮತೆಯಿರುವುದು ನನ್ನ ಮನದಲ್ಲಿ
ಹೀಗೇಕೆಂದು ತಿಳಿಯಲಾರೆನು || ೨೬ ||

ಪತ್ನಿ ಮತ್ತು ಪುತ್ರರ ಚಿಂತೆಯಾಗಿ
ಆಂತಕವಾಗಿದೆ ಮನದಲ್ಲಿ
ಪ್ರೀತಿಯಿಲ್ಲದ ಬಂಧುಗಳ ಕುರಿತು
ನನ್ನ ಮನವೇಕೋ ನಿಷ್ಠುರತೆಯನ್ನು
ಹೊಂದುತ್ತಿಲ್ಲವಲ್ಲ ಏನು ಮಾಡಲಿ || ೨೭ ||

ಮುನಿವರ ಮಾರ್ಕಂಡೇಯನು
ಕ್ರೌಷ್ಟುಕಿ ಮುನಿಗೆ ಹೇಳಿದನು
ಸುರಥ ರಾಜನು ಮತ್ತು ವೈಶ್ಯನೂ
ಹೊರಟು ಬಂದರು ಜೊತೆಯಾಗಿ
ಸುಮೇಧ ಮುನಿವರ್ಯರ ಬಳಿಗೆ || ೨೮ ||

ರಾಜನು ವೈಶ್ಯನು ಮುನಿಯೊಡನೆ
ಸಂಪ್ರದಾಯಗಳಿಗೆ ತಕ್ಕಂತೆ
ತಮ್ಮ ಯೋಗ್ಯತೆಗನುರೂಪವಾಗಿ
ಸುಮೇಧ ಮುನಿವರ್ಯರೊಂದಿಗೆ
ಸಂಭಾಷಣೆಯನ್ನು ನಡೆಸಿದರು || ೨೯ ||

ಮುನಿಗೆ ಹೇಳಿದ ಸುರಥರಾಜ
ಭಗವಂತನೇ ನನ್ನ ಮನಸ್ಸಿನಲ್ಲಿ
ಸ್ಥೈರ್ಯವನ್ನು ಉಂಟು ಮಾಡದೆ
ದುಃಖವನ್ನು ಕೊಡುತಿರುವ ವಿಷಯವ
ಕೇಳುವೆನು ದಯೆ ತೋರಿ ಹೇಳಿರಿ || ೩೦ ||

ಮುನಿಶ್ರೇಷ್ಠನೇ ನಾನು ಜಗತ್ತಿನ
ಜ್ಞಾನವುಳ್ಳವನಾಗಿದ್ದರೂ
ರಾಜ್ಯವನ್ನು ಕಳೆದುಕೊಂಡಿರುವ
ಎಲ್ಲಾ ರಾಜ್ಯಾಂಗಗಳಲ್ಲಿಯೂ
ಅಜ್ಞಾನಿಗಿರುವ ಮಮತೆಯಿದೆ ಏಕೆ || ೩೧ ||

ಈ ವೈಶ್ಯನ ಪತ್ನಿ ಮತ್ತು ಪುತ್ರರು
ಹಾಗೂ ಸ್ವಜನರು ಸೇವಕರು
ಅವಮಾನಿಸಿ ತ್ಯಜಿಸಿದರೂ ಕೂಡ
ಪತ್ನಿ ಮತ್ತು ಪುತ್ರರಲ್ಲಿ ಸ್ವಜನರಲ್ಲಿ
ವಿಶೇಷ ಪ್ರೀತಿ ಇರುವುದು ಏಕೆ || ೩೨ ||

ಈ ವೈಶ್ಯನು ಇವನಂತೆ ನಾನು
ಅತ್ಯಂತ ದುಃಖಕ್ಕೆ ಸಿಲುಕಿದೆವು
ವಿಷಯ ದೋಷಗಳ ಅರಿತಿದ್ದರೂ
ನನ್ನದು ಎಂಬ ಭಾವನೆಯಿಂದ
ಆಕರ್ಷಿತ ಮನವುಳ್ಳವರಾದೆವು || ೩೩ ||

ಮಹಾಭಾಗನೆ ಜ್ಞಾನಿಗಳಾದ
ನಮ್ಮಿಬ್ಬರಿಗುಂಟಾದ ಮೋಹವು
ಯಾವುದರಿಂದ ಆಗಿರುವುದು
ಮಮತೆಯಿಡಬೇಕೇ ಬೇಡವೆ ಎಂಬ
ವಿವೇಕವಿಲ್ಲದೆ ಮೂಢರಾದೆವು || ೩೪ ||

ಋಷಿಯು ಹೇಳಿದ ರಾಜನಿಗೆ
ಜಂತುಗಳಿಗೆಲ್ಲಾ ಇಂದ್ರಿಯಕ್ಕೆ
ಗೋಚರವಾದ ವಿಷಯಗಳಲ್ಲಿ
ಜ್ಞಾನವಿದೆ ಆದರೆ ವಿಷಯಗಳು
ನಾನಾ ವಿಧದಿ ಗೋಚರಿಸುವುದು || ೩೫ ||

ವಿಷಯ ಜ್ಞಾನದ ಗಮನದಲ್ಲಿ
ಕೆಲವು ಪ್ರಾಣಿ ಹಗಲು ಕುರುಡು
ಮತ್ತೆ ಕೆಲವು ಪ್ರಾಣಿ ರಾತ್ರಿ ಕುರುಡು
ಕೆಲವು ಪ್ರಾಣಿಗೆ ಹಗಲೂ ರಾತ್ರಿ
ಸಮಾನವಾದ ಜ್ಞಾನವಿರುವುದು || ೩೬ ||

ಮಾನವರು ಜ್ಞಾನಸಂಪನ್ನರು
ಅವರು ಮಾತ್ರ ಎನ್ನಲಾಗದು
ಪಶು ಪಕ್ಷಿಗಳು ಹಾಗೂ ಮೃಗಗಳು
ಮುಂತಾದ ಎಲ್ಲಾ ಜಂತುಗಳು
ಜ್ಞಾನ ಸಂಪನ್ನವಾಗಿ ಇರುವುದು || ೩೭ ||

ಭೋಗ್ಯ ವಿಷಯದಲ್ಲಿ ಜ್ಞಾನವು
ಪಶು ಪಕ್ಷಿ ಮಾನವರಿಗೆ ತುಲ್ಯವು
ಮಾನವಗೆ ಶಾಸ್ತ್ರಾಭ್ಯಾಸದಿಂದ
ಆಗುವಂತ ವಿವೇಕ ಜ್ಞಾನವು
ಪಶುಪಕ್ಷಿಗಳಲ್ಲಿ ಇರುವುದಿಲ್ಲ || ೩೮ ||

ತಮಗೆ ಹಸಿವು ಬಾಧಿಸುತ್ತಿದ್ದರೂ
ಇಂಗಿಸಿಕೊಳ್ಳುವ ಜ್ಞಾನವಿದ್ದರೂ
ತಾವು ತಂದ ಧಾನ್ಯ ಕಣಗಳನ್ನು
ಮರಿಗಳ ಕೊಕ್ಕಿಗೆ ಮಮತೆಯಿಂದ
ಹಾಕುತ್ತಿರುವ ಹಕ್ಕಿಗಳ ನೋಡು || ೩೯ ||

ಪ್ರತ್ಯುಪಕಾರ ಮಾಡುವರೆಂಬ
ಲೋಭದಿ ಮಕ್ಕಳಲ್ಲಿ ಮಾನವರು
ಅಭಿಲಾಷೆಯುಳ್ಳವರಾಗುವರು
ತಮ್ಮ ಮರಿಗಳನ್ನು ಪ್ರೀತಿಸುತಿರುವ
ಈ ಹಕ್ಕಿಗಳನ್ನು ನೋಡುತ್ತಿಲ್ಲವೇ || ೪೦ ||

ಹಾಗಿದ್ದರೂ ಸಂಸಾರದ
ಸ್ಥಿತಿಯನ್ನುಂಟು ಮಾಡುತ್ತಿರುವ
ಮಹಾಮಾಯೆಯ ಪ್ರಭಾವದಿಂದ
ಮಮತೆಯೆಂಬುವ ಸುಳಿಯಲ್ಲಿರುವ
ಮೋಹವೆಂಬ ಹಳ್ಳದಲ್ಲಿ ಬಿದ್ದಿರುವರು || ೪೧ ||

ಈ ವಿಷಯದಲ್ಲಿ ವಿಸ್ಮಯವಿಲ್ಲ
ಜಗತ್ಪತಿಯ ಯೋಗನಿದ್ರೆಯಿದು
ಶ್ರೀಹರಿಯ ಮಹಾಮಾಯೆಯಿದು
ಆದುದರಿಂದ ಈ ಜಗತ್ತನ್ನೆಲ್ಲಾ
ಮಾಯೆಯಿಂದ ಮೋಹಗೊಳಿಸಿದೆ || ೪೨ ||

ಪ್ರಭಾವದಿಂದ ಕೂಡಿರುವ
ದೇವಿಯು ಭಗವತಿಯೂ ಆದ
ಮಹಾಮಾಯೆಯು ಜ್ಞಾನವಂತರ
ಮನವನು ಬಲತ್ಕಾರದಿಂದ ಸೆಳೆದು
ಮೋಹಾವಸ್ಥೆಗೆ ಸಿಲುಕಿಸುವಳು || ೪೩ ||

ಚರಾಚರ ಪ್ರಾಣಿ ವರ್ಗವಿರುವ
ಜಗವು ಮಹಾಮಾಯೆಯ ಸೃಷ್ಟಿಯು
ಮಹಾಮಾಯೆಯು ಪ್ರಸನ್ನಳಾದರೆ
ಮಾನವರಿಗೆ ವರಗಳನ್ನು ಮತ್ತು
ಮುಕ್ತಿಯನ್ನು ಕೂಡಾ ಕರುಣಿಸುವಳು || ೪೪ ||

ಮುಕ್ತಿಗೆ ಕಾರಣವಾಗಿರುವ
ಹಾಗೂ ಸನಾತನವಾದ
ಪರಮ ಜ್ಞಾನವೂ ಅವಳೇ ಆಗಿ
ಸಂಸಾರ ಬಂಧನಕ್ಕೆ ಕಾರಣಳು
ಅವಳೇ ಸರ್ವೇಶ್ವರಿಯಾಗಿಹಳು || ೪೫ ||

ರಾಜನೆಂದ ಸುಮೇಧ ಮುನಿಯೆ
ನೀವು ಮಹಾಮಾಯೆ ಎನ್ನುವಿರಿ
ಪರಮ ಶಕ್ತಿಯೆಂದೂ ಹೇಳುವಿರಿ
ಆ ದೇವಿಯಾರು ಎಲ್ಲಿ ಹುಟ್ಟಿದಳು
ಮಾಡಿದ ಕಾರ್ಯಗಳೇನು ಹೇಳಿ || ೪೬ ||

ಬ್ರಹ್ಮವಿದರಲ್ಲಿ ಶ್ರೇಷ್ಠ ಮುನಿಯೇ
ಆ ಮಹಾಮಾಯಾ ದೇವಿಯು
ಎಂತೆಂತಹ ಪ್ರಭಾವ ಉಳ್ಳವಳು
ಯಾವ ಸ್ವರೂಪದಲ್ಲಿರುವವಳು
ನಿಮ್ಮಿಂದ ಕೇಳಲು ಬಯಸುವೆನು || ೪೭ ||

ಋಷಿಯೆಂದ ಮಹಾಮಾಯೆಯು
ವಿಶ್ವರೂಪಿಣಿಯಾದ ನಿತ್ಯಳು
ಅವಳಿಂದ ಈ ವಿಶ್ವ ಆವರಿಸಿದೆ
ಹಾಗೆ ನಿತ್ಯಳಾಗಿದ್ದರೂ ಅವಳ
ಬಹು ವಿಧವಾದ ಉತ್ಪತ್ತಿಯ ಕೇಳು || ೪೮ ||

ಆದಿಶಕ್ತಿಯು ದೇವತೆಗಳ
ಕಾರ್ಯಸಿದ್ಧಿಗೆ ಆ ಸಮಯದಲ್ಲಿ
ಆವಿರ್ಭಾವವನ್ನು ಹೊಂದಿದಾಗ
ನಿತ್ಯಳಾಗಿದ್ದರೂ ಪರಾಶಕ್ತಿಯು
ಉತ್ಪನ್ನಳು ಎನ್ನುವರು ಲೋಕದಲ್ಲಿ || ೪೯ ||

ಕಲ್ಪಾಂತ್ಯದಲ್ಲಿ ಪ್ರಪಂಚದ
ಎಲ್ಲೆಡೆ ಜಲಮಯವಾದಾಗ
ಜಗದೊಡೆಯ ವಿಷ್ಣು ತನ್ನ ಶಯನವಾದ
ಆದಿಶೇಷನನ್ನು ಹಾಸಿಕೊಂಡು
ಯೋಗ ನಿದ್ರೆಯನ್ನು ಹೊಂದಿದನು || ೫೦ ||

ಆ ಸಮಯದಲ್ಲಿ ವಿಷ್ಣುವಿನ
ಕಿವಿಗಳ ಮಲದಿಂದ ಜನಿಸಿ
ಮಧು ಕೈಟಭರು ಎಂಬ ಖ್ಯಾತಿಯ
ಘೋರರಾದ ರಾಕ್ಷಸರಿಬ್ಬರು
ಬ್ರಹ್ಮನ ಕೊಲ್ಲಲು ಉದ್ಯುಕ್ತರಾದರು || ೫೧ ||

ವಿಷ್ಣುವಿನ ನಾಭಿ ಕಮಲದಲ್ಲಿ
ಇರುವ ಬ್ರಹ್ಮನ ವಧಿಸಲೆಂದು
ಬಂದರು ಅಸುರರು ಬ್ರಹ್ಮನೆದುರು
ಆಗ ವಿಷ್ಣುವನ್ನು ನೋಡಿದ ಬ್ರಹ್ಮ
ಯೋಗ ನಿದ್ರೆನಿರತ ಜನಾರ್ದನನ || ೫೨ ||

ಮಹಾವಿಷ್ಣುವನ್ನು ಎಚ್ಚರಿಸಲು
ವಿಷ್ಣು ಪರಮಾತ್ಮನ ಕಣ್ಣುಗಳಲ್ಲಿ
ವಾಸವಾಗಿಹ ಯೋಗನಿದ್ರೆಯನ್ನು
ಏಕಾಗ್ರತೆ ಹೊಂದಿದ ಚಿತ್ತದಲಿ
ಬ್ರಹ್ಮನು ಸ್ತೋತ್ರವನ್ನು ಮಾಡಿದನು || ೫೩ ||

ಸೃಷ್ಟಿ ಸ್ಥಿತಿ ಲಯಕೆ ಕಾರಣಳು
ವಿಶ್ವೇಶ್ವರಿಯು ವಿಶ್ವಾಧಾರಳು
ನಿರುಪಮ ತೇಜೋರೂಪನಾದ
ವಿಷ್ಣುವಿನ ಭಗವತಿಯಾಗಿರುವ
ಯೋಗ ನಿದ್ರೆಯನ್ನು ಸ್ತುತಿಸಿದ ಬ್ರಹ್ಮ || ೫೪ ||

ಶಾಶ್ವತಳೇ ದೇವತೆಗಳಿಗೆ
ಹವಿಸ್ಸನ್ನು ತಲುಪಿಸುವಂತಹ
ಸ್ವಾಹಾ ಮಂತ್ರ ಸ್ವರೂಪಳು ನೀನು
ಪಿತೃಗಳ ಕವ್ಯವನ್ನು ತಲುಪಿಸುವ
ಸ್ವಧಾ ಸ್ವರೂಪಳೂ ನೀನೇ || ೫೫ ||

ವಷಟ್ ಮಂತ್ರದ ಸ್ವರೂಪಳೇ
ಅಮೃತ ಪಾನ ಮಾಡುವ ದೇವೀ
ಉದಾತ್ತ ಅನುದಾತ್ತ ಸ್ವರಿತವೆಂಬ
ಮೂರು ಬಗೆಯ ಮಾತ್ರಾ ಸ್ವರೂಪದ
ವರ್ಣಮಾಲೆಯು ಆಗಿರುವವಳೇ

ಅರ್ಧ ಮಾತ್ರಾ ರೂಪಿಣಿ ನಿತ್ಯಳೇ
ವಿಶೇಷವಾಗಿ ಉಚ್ಚರಿಸಲು
ಆಗದ ನೀನೇ ಸಂಧ್ಯಾ ದೇವೀ
ಸಾವಿತ್ರೀ ಮಂತ್ರ ಸ್ವರೂಪಳು
ಸರ್ವೋತ್ತಮಳಾದ ವೇದಮಾತೆಯು || ೫೬ ||

ಹೇ ದೇವೀ ವಿಶ್ವವು ನಿನ್ನಿಂದ
ಧರಿಸಲ್ಪಟ್ಟು ಸೃಜಿಸಲ್ಪಡುವುದು
ನಿನ್ನಿಂದಲೇ ಪಾಲಿಸಲ್ಪಡುವುದು
ಯಾವಾಗಲೂ ಪ್ರಳಯ ಕಾಲದಲ್ಲಿ
ನೀನೇ ಇದನ್ನು ಸಂಹರಿಸುವೆ || ೫೭ ||

ವಿಶ್ವರೂಪಿಣೀ ಮಹಾದೇವೀ
ಜಗದ ಸೃಷ್ಟಿಯ ಶಕ್ತಿ ರೂಪಿಣೀ
ಪಾಲನಾ ಶಕ್ತಿ ಸ್ವರೂಪಿಣಿಯೇ
ಹಾಗೆ ಸಂಹಾರ ಸಮಯದಲ್ಲಿ
ಸಂಹಾರ ಶಕ್ತಿ ಸ್ವರೂಪಳಾಗುವೆ || ೫೮ ||

ಯೋಗ ನಿದ್ರಾ ದೇವಿಯೆ ನೀನು
ಮಹಾ ವಿದ್ಯೆಯು ಮಹಾಮಾಯೆಯು
ಮಹಾ ಮೇಧಾ ಶಕ್ತಿಯು ನೀನೇ
ಸ್ಮರಣ ಶಕ್ತಿಯು ಮೋಹ ಸ್ವರೂಪಿಯು
ಮಹಾದೇವಿ ಮತ್ತು ಮಹೇಶ್ವರಿಯು || ೫೯ ||

ಹುಟ್ಟುವ ಸಮಸ್ತ ವಸ್ತುಗಳಿಗೆಲ್ಲಾ
ನೀನೇ ಮೂಲ ಕಾರಣಳು
ತ್ರಿಗುಣಗಳ ಪ್ರಕಟಿಸುವವಳು
ಕಾಲರಾತ್ರಿಯು ಮಹಾರಾತ್ರಿಯು
ದಾರುಣವಾದ ಮೋಹರಾತ್ರಿಯೂ || ೬೦ ||

ಸಂಪತ್ ಸ್ವರೂಪಿ ಈಶ್ವರಿಯೇ
ಹ್ರೀಂಕಾರದ ಅವಯವವಾದ
ಪ್ರಾಣ ವಾಚಕ ಹ್ರೀಕಾರ ರೂಪಿ
ನಿಶ್ಚಯಾತ್ಮಿಕವಾದ ಬುದ್ಧಿ ನೀನೇ
ಮತ್ತು ಲಜ್ಜಾ ಸ್ವರೂಪಳಾಗಿರುವೆ || ೬೧ ||

ಚೈತನ್ಯ ರೂಪಿ ಪುಷ್ಟಿಯು ನೀನೇ
ಮಮತಾರೂಪಿ ತುಷ್ಟಿಯು ನೀನೇ
ಎಲ್ಲಾ ವಿಷಯದ ಸಮಸ್ಯೆಗಳಿಗೆ
ಪರಿಹಾರರೂಪಿ ಶಾಂತಿಯು ನೀನೇ
ಸಹನೆಯ ಸ್ವರೂಪಳೂ ಆಗಿರುವೆ

ಖಡ್ಗ ಶೂಲ ಗದೆ ಚಕ್ರ ಶಂಖ
ಬಿಲ್ಲು ಬಾಣ ಭುಶುಂಡಿ ಪರಿಘ
ಮುಂತಾದ ವಿವಿಧ ಆಯುಧಗಳ
ಧರಿಸಿಕೊಂಡಿರುವವಳು ನೀನು
ಘೋರ ಸ್ವರೂಪಳೂ ಆಗಿರುವೆ || ೬೨ ||

ನಿನ್ನ ಅನುಗ್ರಹಕೆ ಯೋಗ್ಯರಾದ
ವ್ಯಕ್ತಿಗಳಿಗೆಲ್ಲ ನೀನು ಸೌಮ್ಯಳು
ಲೋಕದ ಸಮಸ್ತ ವಸ್ತುಗಳಿಗಿಂತ
ಅಧಿಕವಾಗಿ ಸೌಮ್ಯ ಸ್ವರೂಪಳು
ಅತ್ಯಂತ ಸೌಂದರ್ಯವುಳ್ಳವಳು || ೬೩ ||

ಉತ್ತಮ ವಸ್ತುಗಳ ಮೀರಿಸಿರುವ
ಅತ್ಯುತ್ತಮಳು ನೀನಾಗಿರುವೆ
ದೇವೀ ನೀನೇ ಸರ್ವೋತ್ತಮಳು
ನೀನೇ ಪರಮ ಶ್ರೇಷ್ಠಳಾದ
ಪರಮೇಶ್ವರಿಯೂ ಆಗಿರುವೆ

ಚೇತನ ಅಥವಾ ಜಡವಾದ
ವಸ್ತು ಎಲ್ಲಿದ್ದರೂ ಆ ವಸ್ತುಗಳ
ಅಸಾಧಾರಣ ಶಕ್ತಿಯು ನೀನೇ
ಸರ್ವ ಶಕ್ತಿ ಸ್ವರೂಪಿ ಅಖಿಲಾತ್ಮಳೇ
ನಿನ್ನನ್ನು ಹೇಗೆ ಸ್ತುತಿಸಲಿ ನಾನು || ೬೪ ||

ಜಗವ ಸೃಷ್ಟಿಸಿ ಪಾಲಿಸಿ ಜಗವ
ಕೊನೆಗೆ ತನ್ನಲಿ ಅಡಗಿಸಿಕೊಳ್ಳುವ
ವಿಷ್ಣು ನಿನ್ನಿಂದ ನಿದ್ರಾವಶನಾದ
ಪ್ರಭಾವತಿಯಾಗಿರುವ ನಿನ್ನನ್ನು
ಸ್ತುತಿ ಮಾಡಲು ಶಕ್ತನು ಯಾರಿಹನು || ೬೫ ||

ಬ್ರಹ್ಮನಾದ ನನಗೆ ವಿಷ್ಣುವಿಗೆ
ಮತ್ತು ರುದ್ರನಿಗೆ ದೇಹ ಧರಿಸುವ
ಹಾಗೆ ನೀನೇ ಮಾಡಿಸಿರುವೆ
ಆ ಕಾರಣದಿಂದಲೇ ನಿನ್ನನ್ನು
ಸ್ತುತಿಸಲು ಸಮರ್ಥನಾರಿರುವನು || ೬೬ ||

ಯೋಗ ನಿದ್ರಾದೇವಿಯೆ ನೀನು
ನಿನ್ನಯ ಉದಾರ ಪ್ರಭಾವದ
ವಿಶೇಷಗಳಿಂದ ಸ್ತುತಿಸಲ್ಪಟ್ಟೆ
ಜಯಿಸಲಾಗದ ಮಧು ಕೈಟಭರೆಂಬ
ಈ ಅಸುರರನ್ನು ಮೋಹಗೊಳಿಸು || ೬೭ ||

ಜಗತ್ತಿಗೆ ಸ್ವಾಮಿಯಾಗಿರುವ
ವಿಷ್ಣು ಪರಮಾತ್ಮಗೆ ಪ್ರಬೋಧಿಸು
ಮಧು ಕೈಟಭರೆಂಬ ಅಸುರರನ್ನು
ನಾಶ ಮಾಡುವಂತ ಬೋಧವು
ಉದಯಿಸುವಂತೆ ಮಾಡು ದೇವೀ || ೬೮ ||

ತಮೋಗುಣದ ಪ್ರಾಧಾನ್ಯದಿಂದ
ಕೂಡಿದ ಯೋಗ ನಿದ್ರಾದೇವಿಯು
ಮಧು ಕೈಟಭರ ವಧಿಸಲು ವಿಷ್ಣುವನ್ನು
ಎಚ್ಚರಗೊಳಿಸುವ ಸಲುವಾಗಿ
ಬ್ರಹ್ಮದೇವನಿಂದ ಸ್ತುತಿಸಲ್ಪಟ್ಟಳು || ೬೯ ||

ನಿದ್ರಾದೇವಿಯು ವಿಷ್ಣುವಿನ
ಕಣ್ಣು ಬಾಯಿ ಮೂಗು ಬಾಹುಗಳು
ಹೃದಯ ಎದೆ ಭಾಗದಿಂದ ಹೊರಟು
ಅವ್ಯಕ್ತ ತತ್ತ್ವದಿಂದ ಜನಿಸಿರುವ
ಬ್ರಹ್ಮದೇವನಿಗೆ ದರ್ಶನವಿತ್ತಳು || ೭೦ ||

ದುಷ್ಟರ ಮರ್ದನ ಜಗನ್ನಾಥ ವಿಷ್ಣು
ಯೋಗ ನಿದ್ರೆಯಿಂದ ಬಿಡಲ್ಪಟ್ಟು
ಏಕ ಸಮುದ್ರದಲ್ಲಿ ಇರುವಂತಹ
ಶೇಷ ಶಯನದಿಂದ ಎದ್ದನು
ಮಧು ಕೈಟಭ ಅಸುರರ ಕಂಡನು || ೭೧ ||

ಅತ್ಯಂತ ವೀರ ಪರಾಕ್ರಮದಿ
ಕೋಪಗೊಂಡು ಕೆಂಗಣ್ಣಿನಿಂದ
ಬ್ರಹ್ಮನ ಕೊಲ್ಲಲು ಉದ್ಯುಕ್ತರಾದ
ಆ ಮಧು ಕೈಟಭ ದುರಾತ್ಮರನ್ನು
ವಿಷ್ಣು ಪರಮಾತ್ಮನು ನೋಡಿದನು || ೭೨ ||

ವಿಭುವಾದ ಭಗವಂತ ಹರಿಯು
ಎದ್ದು ಬಂದು ತನ್ನ ಬಾಹುಗಳನ್ನೇ
ಆಯುಧದಂತೆ ಉಪಯೋಗಿಸುತ್ತ
ಐದುಸಾವಿರ ವರ್ಷಗಳವರೆಗೆ
ಅವರೊಡನೆ ಯುದ್ಧವನ್ನು ಮಾಡಿದನು || ೭೩ ||

ಅತಿ ಬಲದಿಂದ ಕೊಬ್ಬಿರುವಂತ
ಅಹಂಕಾರದ ಮಧು ಕೈಟಭರು
ಮಹಾಮಾಯೆಯ ಮೋಹಕ್ಕೊಳಪಟ್ಟು
ನಮ್ಮಿಂದ ನೀನು ವರ ಪಡೆದುಕೋ
ಎಂದು ಕೇಶವನಿಗೆ ಹೇಳಿದರು || ೭೪ ||

ವಿಷ್ಣು ಪರಮಾತ್ಮನು ಹೇಳಿದನು
ನನ್ನಲ್ಲಿ ಸಂತುಷ್ಟರಾದ ನೀವು
ನನ್ನಿಂದಲೇ ಮರಣಹೊಂದಿರಿ
ಬೇರೆ ವರ ಬೇಕಾಗುವುದಿಲ್ಲ
ಇದಿಷ್ಟೆ ನನಗೆ ಬೇಕಾದ ವರವು || ೭೫ ||

ಋಷಿಯು ಹೇಳಿದ ಮಾಯೆಯಿಂದ
ವಂಚಿಸಲ್ಪಟ್ಟ ಮಧು ಕೈಟಭರು
ಜಲಮಯವಾದ ಜಗತ್ತನ್ನು ನೋಡಿ
ಸರ್ವೈಶ್ವರ್ಯ ಸಂಪನ್ನನಾಗಿರುವ
ಮಹಾವಿಷ್ಣುವಿಗೆ ಹೇಳಿದರು || ೭೬ ||

ನಿನ್ನ ಯುದ್ಧದ ನಿಪುಣತೆಯಿಂದ
ಪ್ರೀತರಾದ ನಮ್ಮಿಬ್ಬರಿಗೂ
ಶ್ಲಾಘನಾರ್ಹವಾದ ಮೃತ್ಯುವಾಗು
ನೀರೇ ಇಲ್ಲದ ಪ್ರದೇಶದ
ಆವರಣದಲ್ಲಿ ನಮ್ಮನ್ನು ವಧಿಸು || ೭೭ ||

ಸುಮೇಧ ಋಷಿಯು ಹೇಳಿದನು
ಶಂಖ ಚಕ್ರ ಗದೆ ಧರಿಸಿರುವ
ಭಗವಂತನು ಹಾಗೆ ಆಗಲೆಂದು
ತನ್ನ ತೊಡೆಯ ಮೇಲೆ ಅವರ ಶಿರಸ್ಸನ್ನಿಟ್ಟು
ಚಕ್ರಾಯುಧದಿಂದ ಕತ್ತರಿಸಿದನು || ೭೮ ||

ಸ್ವಯಂ ಬ್ರಹ್ಮನಿಂದ ಸ್ತುತಿಸಲ್ಪಟ್ಟು
ಮಹಾಮಾಯೆ ಉತ್ಪನ್ನಳಾದಳು
ಹೀಗೆ ಉತ್ಪನ್ನಳಾಗಿರುವಂತಹ
ಈ ದೇವಿಯ ಮಹಿಮೆಯ ವರ್ಣಿಸುವೆ
ನೀನು ಕೇಳೆಂದ ಸುಮೇಧ ಋಷಿ || ೭೯ ||